ಬಾಲ್ಯಕಾಲದ ದಿನಗಳು ಅಂದು ಮತ್ತು ಇಂದು
ಕಾಲೇಜ್ 3.30 ಗಂಟೆಗೆ ಮುಗಿಸಿ , 4.30 ಗೆ ಮನೆ ತಲುಪುತಿದ್ದೆ. ರಾತ್ರಿ ತನಕ ಹೇಗಾದರೂ ಮಾಡಿ ಸಮಯ ದೂಡಬೇಕೆಂದು ಆಲೋಚಿಸುತ್ತಿದ್ದಾಲೆ ಕಾಕತಾಳೀಯ ಎಂಬಂತೆ ಪಕ್ಕದ ಮನೆಯವರು ಹೇಳಿದ್ರು, ಒಬ್ಬಳು ಹುಡುಗಿ ಇದ್ದಾಳೆ ಅವಳಿಗೆ ಟ್ಯೂಷನ್ ಕೊಡ್ತೀಯಾ ಅಂದು ಕೇಳಿದ್ರು…. ನಂಗೂ ಆಗ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಹಾಗೆ ಅನಿಸಿತು. ಒಂದು ವರ್ಷ ಒಂದೇ ವಿದ್ಯಾರ್ಥಿಗೆ ಕಲಿಸಿದೆ. ನಂತರ ವಿಧ್ಯಾರ್ಥಿಗಳ ಸಂಖ್ಯೆ ಹೆಚ್ಚಾಯ್ತು… ಒಂದು ದಿವಸ ಮನೆಗೆ ಒಬ್ಬರು ಬಂದು ಕೇಳಿದ್ರು , ನೀವು ಟ್ಯೂಷನ್ ಕೊಡ್ತೀರಾ ಎಂದು? ನಾನ್ ಹೌದು ಎಂದು ಹೇಳಿ ಎಷ್ಟನೇ ತರಗತಿಯಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿ ಎಂದು ಕೇಳಿದೆ.ಆಗ ಅವರು ಹೇಳಿದ್ರು ಎಲ್ ಕೆಜಿ ಎಂದು. ಒಮ್ಮೆಲೇ ನಾನು ಆಶ್ಚರ್ಯದಲ್ಲಿ ಬೆಚ್ಚಿಬಿದ್ದೆ. ನಾನು ಅವರಲ್ಲಿ ಹೇಳಿದೆ ಯಾಕೆ ಈ ಚಿಕ್ಕ ವಯಸ್ಸಿನಲ್ಲಿ ಟುಷನ್ ಗೆ ಕಳಿಸ್ತಿರ ಎಂದು. ಅದಕ್ಕೆ ಅವರು ಹೇಳಿದ್ರು”ಮನೆಯಲ್ಲಿ ಅವಳು ನಮ್ಮ ಮಾತು ಕೇಳುದಿಲ್ಲ, ಯಾವಾಗ ನೋಡಿದ್ರೂ ಆಟ ಆಡ್ತಾ ಇರ್ತಾಳೆ”ಎಂದು. ಅದಕ್ಕೆ ನಾನು ಹೇಳಿದೆ ಈಗ ಆಟ ಆಡದೆ ಮತ್ತೆ ಯಾವಾಗ ಅವಳು ಆಟ ಆಡುವುದು, ಇದು ಮಕ್ಕಳಿಗೆ ಆಡುವ ಸಮಯ ಎಂದು ಹೇಳಿದೆ ತಡ, ಅವರು ಹೇಳಿದರು “ಎಂಥ ಆಟ, ಅವಳಿಗೆ ಎಷ್ಟು ಹೋಂ ವರ್ಕ್ ಉಂಟು, ಟೆಸ್ಟ್, ದಿಕ್ಟೇಶನ್, ಸ್ಟೋರಿ ಟೆಲ್ಲಿಂಗ್….. “ಹೀಗೆ ಉದ್ದಕ್ಕೆ ಲೀಸ್ಟ್ ಹೇಳಿದ್ರು. ನನಗೆ ಒಮ್ಮೆ ಅದು ಕೇಳಿ ಶಾಕ್ ಆಯ್ತು. ನಾನು ಅಂಗನವಾಡಿ ಮುಗಿಸಿ ನೇರ 1 ನೆ ತರಗತಿ ಸೇರಿದ್ದು. ಈ ಎಲ್ ಕೆಜಿ, ಯುಕೆಜಿ ಗೆ ನಾನು ಹೋಗ್ಲಿಲ್ಲ ಆದರಿಂದ ಅದರ ಈ ಕಷ್ಟ ನನಗೆ ಗೊತ್ತಿರಲಿಲ್ಲ. ಕೊನೆಗೂ ಅವರ ಮಾತಿಗೆ ಒಪ್ಪಿ ಅರ್ಧ ಗಂಟೆ ಟ್ಯೂಷನ್ ಕೊಡ್ಲಿಕೆ ಒಪ್ಪಿದೆ.
ಅಂದು ಎಲ್ಲ ನನ್ನ ಕೆಲಸ ಮುಗಿಸಿ ನಾನು ಅಮ್ಮನಲ್ಲಿ ಹೇಳಿದೆ ಈಗ ನನಗೆ ಆಗ್ತಾ ಉಂಟು ಯಾಕೆ ಇಷ್ಟು ಬೇಗ ದೊಡ್ಡದಾದೆ ಎಂದು. ಆ ಬಾಲ್ಯ ಕಾಲ ಎಷ್ಟು ಒಳ್ಳೆಯದು. ಶಾಲೆ ಮುಗಿಸಿ, ಯೂನಿಫಾರ್ಮ್ ಬದಲಿಸಿ , ತಿಂಡಿ ತಿಂದು ನೇರ ಮೈದಾನಕ್ಕೆ ನಮ್ಮೆಲ್ಲರ ಪ್ರಯಾಣ. ನಮ್ಮ ಒಂದು ದಿಂಡೆ ಇತು. ಮೈದಾನ ತಲುಪಿದ್ದೆ ತಡ ಮೊದಲಿಗೆ ಯಾವ ಆಟ ಆಡ ಬೇಕೆಂಬ ಚಿಂತೆ. ಕೆಲವೊಮ್ಮೆ ಶಾಲೆಯಲ್ಲಿ ಆಟ ಆಡಿ ಆ ಆಟ ಬೆಲ್ ಆದಾಗ ಅರ್ಧಕ್ಕೆ ನಿಂತಿರುತ್ತದೆ ಮತ್ತೆ ಅದೇ ಆಟವನ್ನು ಸಂಜೆ ಮೈದಾನದಲ್ಲಿ ಮುಂದುವರಿಸುವುದು. ಒಮ್ಮೆ ಆಟ ಯಾವುದೆಂದು ನಿರ್ಧರಿಸಿದ ಮೇಲೆ ಮತ್ತೆ ಆಟ ಆಡಲು ಶುರು. ಟೀಚರ್ ಆಟ, ಮನೆ ಆಟ, ಡಾಕ್ಟರ್ ಆಟ, ಆನೆ ಕಲ್ಲು, ಭೂತದ ಆಟ, ಅಂಡರ್ – ಓವರ್, ಚೆನ್ನೆ ಮಣೆ, ಕುಂಟೆಬಿಲ್ಲು ,ಲಗೋರಿ, ಕಣ್ಣ ಮುಚ್ಚಾಲೆ, ಗಾಳಿ ಪಟ, ಡೊಂಕದಲ್ಲಿ ಹಿಡಿಯುವ ಆಟ…ಹೀಗೆ ಆಟ ಆಡ್ತಾ ಇದ್ದೆವು. ಒಮ್ಮೆ ಆಡುವಾಗ ಒಂದು ಕಡೆ ಬಿದ್ದು ಗಾಯ ಆದರೆ ಆ ವಿಷಯ ಅಮ್ಮನಲ್ಲಿ ಹೇಳ್ತಿರಲಿಲ್ಲ , ಯಾಕೆಂದರೆ ಮತ್ತೆ ಗಾಯ ಕಡಿಮೆ ಆಗುವ ತನಕ ಅಮ್ಮ ಆಟ ಆಡಲು ಬಿಡುದಿಲ್ಲ.ಈ ವಿಷಯವನ್ನು ಎಷ್ಟೇ ಅಮ್ಮನಿಂದ ಅಡಗಿಸಲು ಪ್ರಯತ್ನಿಸುತ್ತಿದ್ದರು ರಾತ್ರಿ ಮಲಗುವ ಮುಂಚೆ ಅಮ್ಮನಿಗೆ ಗೊತ್ತಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಬೆಳಿಗ್ಗೆ ಇಂದ ಸಂಜೆ ತನಕ ಮಾಡಿದ ಎಲ್ಲ ರಂಪಾಟ ಕೆಲವೊಮ್ಮೆ ರಾತ್ರಿ ನಿದ್ದೆಯಲ್ಲಿ ಹೇಳುದುಂಟು, ಅಥವಾ ಗಾಯದ ನೋವು ಹೆಚ್ಚಿದ್ದರೆ ರಾತ್ರಿ ಮಲಗುವ ಹೊತ್ತಿಗೆ ಕೂಗುವಾಗ ಅಥವಾ ಗೆಳೆಯರು ಯಾರಾದರೂ ಒಬ್ಬರು ಬಂದು ನನ್ನ ಅಥವಾ ಅವರ ಅಮ್ಮನಲ್ಲಿ ಹೇಳುತ್ತಿದ್ದರು . ಹೀಗೆ ಅಮ್ಮನಿಗೆ ಬಿದ್ದ ವಿಷಯ ಗೊತ್ತಾಗುತ್ತಿತ್ತು.ಇನ್ನೂ ಬಿದ್ದ ಗಾಯ ಒಣಗಲು ಬರುತ್ತಿದ್ದಂತೆ ಇನ್ನೊಮ್ಮೆ ಬಿದ್ದು ಅದೇ ಗಾಯ ದ ಮೇಲೆ ತಾಗಿ ಗಾಯ ಜೋರು ಆಗುತಿತ್ತು. ಯಾರಾದರೂ ಒಮ್ಮೆ ಬಿದ್ದರೆ ಸಾಕು ಎಲ್ಲರೂ ಬಂದು ಗುಂಪು ಹಾಕುತ್ತಿದ್ದರು, ಮತ್ತೆ ನಾನು ಹೇಳುದು ಉಂಟು ಎಲ್ಲರಲ್ಲಿ “ಪ್ಲೀಸ್ ಯಾರು ಅಮ್ಮನಲ್ಲಿ ಹೇಳ್ಬೇಡಿ”ಎಂದು. ಎಲ್ಲರೂ ಗುಂಪಿನಲ್ಲಿ ಮನೆಗೆ ಬಂದಾಗಲೇ ಅಮ್ಮನಿಗೆ ವಿಷಯ ಗೊತ್ತಾಗುತ್ತದೆ. ಮತ್ತೆ ಅಮ್ಮ ಹೇಳುತ್ತಾರೆ “ಬಾ ಆಟ ಆಡಿ ಬಂದದಲ್ಲ ನಾನೇ ಸ್ನಾನ ಮಾಡಿಸುತ್ತೇನೆ”ಎಂದು ಆಗ ನಾನು ಇಲ್ಲ ಹೇಳಿದರೆ ಅಮ್ಮ ಕೇಳ್ತಾರೆ “ಯಾಕೆ ಆಡುವಾಗ ಎಲ್ಲಿ ಆದ್ರೂ ಬಿದ್ದಿಯಾ” ನಾನು ಏನು ಹೇಳಿದ್ರು ಅಮ್ಮನೇ ಸ್ನಾನ ಮಾಡಿಸುದು. ಆಗ ಅಮ್ಮ ಗಾಯ ನೋಡಿ ಹೇಳ್ತಾರೆ ಇನ್ನೂ ಗಾಯ ಕಡಿಮೆ ಆಗುವ ತನಕ ಆಟ ಆಡ್ಬೇಡ ಎಂದು.
ಅಮ್ಮ ಮನೆಯ ಹತ್ತಿರದ ಗೇರುಬೀಜ ಕಾರ್ಖಾನೆ ಅಲ್ಲಿ ಕೆಲಸಕ್ಕೆ ಹೋಗುತಿದ್ದರು. ಅಮ್ಮ ಕೆಲಸಕ್ಕೆ ಹೋಗುವುದರಿಂದ ನಾನು ಅಮ್ಮ ಆಟ ಕ್ಕೆ ಹೋಗಬೇಡ ಅಂದ್ರು ನಾನು ಹೋಗ್ತಿದ್ದೆ, ಹೋಗುವಾಗಲೇ ನಾನು ಪ್ಲಾನ್ ಹಾಕ್ತಿದ್ದೆ. ಅಮ್ಮ ಕೆಲಸದಿಂದ ಬರುವ ಸಮಯ ೬.೩೦ ಅದಕ್ಕಿಂತ ೫ ನಿಮಿಷ ಮೊದಲೇ ಮನೆಗೆ ಬರಬೇಕೆಂದು , ಕೈ ಗೆ ವಾಚ್ ಹಾಕಿ ಹೋಗುವುದು. ಆಟ ಆಡುವ ಮೋಜಿನಲ್ಲಿ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಮತ್ತೆ ದೂರದಿಂದ ಅಮ್ಮ ಬರುವುದನ್ನು ನೋಡಿ ಮೈದಾನದಿಂದ ಮನೆಗೆ ಓಡ್ತಿದ್ದೇ. ಏನೋ ನನ್ನ ಪುಣ್ಯ. ನನ್ನ ಮನೆಯಿಂದ ೫ ಹೆಜ್ಜೆ ಇಟ್ಟರೆ ಮೈದಾನ. ಅಮ್ಮನಿಗೆ ಮನೆಯಲ್ಲಿ ನನ್ನ ಚಪ್ಪಲಿ ನೋಡಿಯೇ ಗೊತ್ತಾಗುತ್ತಿತ್ತು ನಾನು ಮೈದಾನಕ್ಕೆ ಹೋದದ್ದು.
ಹೀಗೆ ನಾನು ಅಮ್ಮನಲ್ಲಿ ನನ್ನ ಬಾಲ್ಯ ಕಾಲದ ಕಥೆ ಯನ್ನು ಹೇಳುತ್ತಿದ್ದೆ. ಅಮ್ಮನಲ್ಲಿ ಹೇಳಿದೆ ಈಗಿನ ಮಕ್ಕಳಿಗೆ ಈ ಮೈದಾನದಲ್ಲಿ ಆಟ ಆಡಿಯೆ ಗೊತ್ತಿರ್ಲಿಕೆ ಇಲ್ಲ. ಶಾಲೆಗೆ ಹೋದ್ರೆ ಅಲ್ಲಿ ಲೆಕ್ಕಕ್ಕಿಂತ ಹೆಚ್ಚಿನ ಹೋಂ ವರ್ಕ್, ಟೆಸ್ಟ್ ಅಂತ ಹೇಳಿ , ಮನೆಯಲ್ಲಿರುವ ಪೋಷಕರಿಗೆ ಪರೀಕ್ಷೆ ಯಲ್ಲಿ ಕಡಿಮೆ ಅಂಕ ಬಂದರೆ ವಿದ್ಯಾರ್ಥಿಗಳ ಭವಿಷ್ಯ ಇಲ್ಲಿಗೆ ಮುಗಿದು ಹೋಯ್ತ ಎನ್ನುವ ಹಾಗೆ ಮಾಡಿ ಮಕ್ಕಳನ್ನು ಟುಷನ್ ಗೆ ಹಾಕಿ, ಜೀವನದಲ್ಲಿ ಆನಂದಿಸಿ,ಹೊಸ ಕನಸುಗಳನ್ನು ಚಿಗುರೋಡೆಸುವ ಈ ಸಮಯದಲ್ಲಿ , ಅವರ ಮನಸನ್ನು ಜೈಲಿನಲ್ಲಿ ಇರುವಂತೆ ಮಾಡಬೇಡಿ. ಶಿಕ್ಷಣಕ್ಕೆ ಆದ್ಯತೆ ಕೊಡಬೇಕು, ಆದರೆ ಅದು ಅವರಿಗೆ ಶಿಕ್ಷೆ ಅಂತೆ ಆಗಬಾರದು. ಒಂದು ವೇಳೆ ಶಿಕ್ಷೆ ಎಂದು ಅವರು ಎನಿಸಿದರೆ ಮತ್ತೆ ಅವರೆಂದೂ ಶಿಕ್ಷಣದ ಕಡೆ ಗಮನ ಕೊಡುವುದಿಲ್ಲ.
ನಾನು ಚಿಕ್ಕ ಮಕ್ಕಳಿಗೆ ಶಿಕ್ಷಣ ನೀಡಬೇಡಿ ಎಂದು ಹೇಳುತ್ತಿಲ್ಲ. ಶಿಕ್ಷಣವನ್ನು ಕೊಡಿ ಆದರೆ ದಿನದ ಎಲ್ಲಾ ಸಮಯದಲ್ಲಿ ಕಲಿಯುವ ಬಗ್ಗೆ ಹೇಳಬೇಡಿ. ಇದು ಅವರು ಕಲಿಕೆಯ ಆಸಕ್ತಿಯನ್ನು ಕಳೆದುಕೊಳ್ಳುವಂತೆ ಅವರಲ್ಲಿ ಮೂಡಿಸುತ್ತದೆ. ದಿನದಲ್ಲಿ ಸ್ವಲ್ಪ ಸಮಯ ಕಲಿಕೆಗೆ, ಸ್ವಲ್ಪ ಸಮಯ ಆಡಲು ಬಿಡಿ. ಆಗ ಅವರ ಮನಸ್ಸಿಗೂ ನೆಮ್ಮದಿ ಸಿಗುತ್ತದೆ.
-ವರ್ಷ ,ಪ್ರಥಮ ಎಂ. ಕಾಮ್
ಸರಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು
ಉತ್ತಮ ಸಂದೇಶದಿಂದ ಕೂಡಿದ ಬರಹ. ಇತ್ತೀಚಿನ ದಿನಗಳಲ್ಲಿ ಅಂಕಗಳೊಂದೇ ವಿದ್ಯಾರ್ಥಿಗಳ ಬುದ್ದಿವಂತಿಕೆ ಯನ್ನು ಅಳೆಯುವ ಸಾಧನ ಆಗಿರೋದು ನಿಜಕ್ಕೂ ನೋವಿನ ವಿಚಾರ. ಈ ಅಂಕಗಳನ್ನು ಗಳಿಸುವ ಹುಚ್ಚು ಆ ಮಕ್ಕಳ ಮುಗ್ಧತೆ, ಬಾಲ್ಯ, ಆಟ, ಹುಡುಗಾಟ ಎಲ್ಲವನ್ನು ನುಂಗಿದೆ.
ಎಲ್ಲಾ ಕಡೆಯಲ್ಲೂ ನಡೆಯುತ್ತಿರುವ ಮನೆ ಮನೆ ಕಥೆ ಇದು. ನನ್ನ ಬಳಿಗೆ ಬರುತ್ತಿರುವ ಎರಡನೇ ತರಗತಿಯ ಮಗುವಿನ ಮನೆಯವರದ್ದೂ ಇದೇ ಸಮಸ್ಯೆ. ಸದ್ಯಕ್ಕೆ ಜಾಸ್ತಿ ಯೋಚನೆ ಮಾಡದೆ ಮಗುವಿಗೆ ಆಡಲು ಬಿಡುವಂತೆ ಸೂಚಿಸಿದರೂ ಸಮಾಧಾನವಿಲ್ಲ.