ಚೀಲವಿಲ್ಲದೆ ಖರೀದಿ

Share Button

ಮಾರುಕಟ್ಟೆಯಲ್ಲಿ ಎರಡೂ ಕೈಯಲ್ಲಿ ಟೋಮೇಟೊ ತುಂಬಿದ ಪ್ಲಾಸ್ಟಿಕ್ ಚೀಲಗಳನ್ನು ಹಿಡಿದುಕೊಂಡು ಒಬ್ಬ ಆಸಾಮಿ, ಬಸ್ ಬಂದಾಗ ಹತ್ತಲು ಯತ್ನಿಸಿ ಸೋತ.ಅವನ ಸ್ಥಿತಿ ಪಾಪ ಸಂಪುಟ ಸೇರಲು ಯತ್ನಿಸಿ ವಿಫಲನಾಗುತ್ತಿರುವ ಅರ್ಹ ಅಥವಾ ಅನರ್ಹ ಶಾಸಕನಂತೆ ಇತ್ತು.ಯಾರೋ ಕನಿಕರದಿಂದ ಬಲವಂತವಾಗಿ ಅವನನ್ನು ಬಸ್ಸಿನೊಳಗೆ ದಬ್ಬಿದರು.

“ನೂಕಬೇಡಿ ಕೈಯಲ್ಲಿ ಟೊಮೇಟೋ ಇದೆ” ಅಂದ. ”ಏನೋ ಬಸ್ ಒಳಗೆ ಹೋಗಲಿ ಅಂತ ತಳ್ಳಿದರೆ ನನಗೇ ಕಚ್ಚಕ್ಕೆ ಬರ್ತೀಯಾ?” ಅಂತ ಉಪಕಾರಿಯೂ ರೇಗಿದ.ಹೋಗಲಿ ಒಳಗೆ ಬನ್ನಿ ಸ್ವಾಮಿ ಯಾಕೆ ಜಗಳ ?ಅಂತ ಒಬ್ಬ ಶಾಂತಿಪ್ರಿಯ ವಿನಂತಿಸಿದ.

ಕಂಡಕ್ಟರ್ ಬಂದು ಟಿಕೆಟ್ ತೊಗೊಳ್ಳಿ ಅಂದಾಗ ಟೊಮೇಟೋ ಅಸಾಮಿಗೆ ಕೈ ಬಿಡುವಿಲ್ಲದೆ ಅಸಹಾಯಕನಾಗಿ “ಕೊನೇ ಸ್ಟಾಪು ಒಂದು ಟಿಕೆಟ್ .ದುಡ್ಡು ಆಮೇಲೆ ಕೊಡ್ತೀನಿ” ಅಂದ.

“ಅವೆಲ್ಲ ,ಗೊತ್ತಿಲ್ಲ ಈಗಲೇ ದುಡ್ಡು ,ಈಗಲೇ ಟಿಕೆಟ್ “ಎಂದು ಕಂಡಕ್ಟರ್ ಮರ್ಚಂಟ್ ಆಫ್ ವೆನಿಸ್ ನಾಟಕದ ಶೈಲಾಕ್ ನಂತೆ ಅಬ್ಬರಿಸಿದ . ಆಗ ಒಬ್ಬ ಕರುಣಾಳು “ರೀ ,ಕಂಡಕ್ಟರ್ ,ಪಾಪ ಅವರ ಕೈ ಬಿಡುವಿಲ್ಲ,ಕೊಡ್ತಾರೆ ,ಬಿಡ್ರೀ’ಅಂದ.
“ಸರಿ,ಅವರಿಗೆ ಕೈ ಬಿಡುವಿಲ್ಲ.ನೀವು ಖಾಲಿ ನಿಂತಿದೀರ.ಟಿಕೆಟ್ ದುಡ್ಡು ನೀವೆ ಕೊಡಿ “ ಕಂಡಕ್ಟರ್ ಉವಾಚ.

“ಆಯ್ತು ರೀ ,ಕೊಡ್ತೀನಿ .ನಂಬಬೇಕು ಜನರನ್ನ “ ಅಂತ ಆ ಕರುಣಾಳು.ಕಾಸು ಕೊಟ್ಟ.
ಕಂಡಕ್ಟರ್ ಸರಿ,ಸರಿ ,ವಸೂಲು ಮಾಡೋದು ನಿಮ್ಮ ಹಣೇಬರಹ “ಅಂತ ಟಿಕೆಟ್ ಹರಿದು ಆ ಟೊಮೆಟೋ ಮಾಲೀಕನ ಜೇಬಿನಲ್ಲಿ ತುರುಕಿ ಮುಂದೆ ನಡೆದ. ಟೊಮೆಟೋ ಆಸಾಮಿ ಕೃತಜ್ಣತೆಯಿಂದ ಕಾಸು ಕೊಟ್ಟ ದಾತನಿಗೆ ವಂದಿಸಿದ.

“ಟೊಮೆಟೋ,ಎಷ್ಟೋ ಧಡಿಯಾ?”ಎಂದು ಅವನು ಕೇಳಿದ.

“ಏನು ಸ್ವಾಮಿ ,ಟಿಕೆಟ್ ಗೆ ದುಡ್ಡು ಕೊಟ್ಟೆ ಅಂತಾ ಹೀಗೆ ನನ್ನ ಶರೀರಾನ ತಮಾಷೆ ಮಾಡ್ತೀರಿ”ಅಂದ ಟೊಮೇಟೋ ಮಾಲೀಕ.

“ಅಯ್ಯೋ ,ರಾಯ್ರೆ , ನಿಮ್ಮನ್ಯಾರು ಹಂಗಿಸಿದ್ದು. ಧಡಿಯ ಅಂದ್ರೆ ಕಾಲು ಮಣ ,ಇವತ್ತಿನ ಲೆಕ್ಕದಲ್ಲಿ ಎರಡೂವರೆ ಕೆ ಜಿ “ಅಂತ ಸಮಜಾಯಿಷಿ ನೀಡಿದ ಆ ಬಡಪಾಯಿ.

“ತುಮಕೂರು ಕಡೆ ಅದನ್ನ ತೂಕ ಅಂತಾರೆ.” ತುಮಕೂರಿನಲ್ಲೂ ಸ್ವಲ್ಪ ದಿನ ಹಾಜರಿ ಹಾಕಿದ್ದ ಒಬ್ಬ ಸಮಾನಾರ್ಥ ನೀಡಿದ.
“ಹೌದು ,ಹೌದು.ನನಗೂ ಅದರ ಅನುಭವ ಆಗಿತ್ತು.ನಾನು ತುಮಕೂರಿಗೆ ಹೋದ ಹೊಸದರಲ್ಲಿ, ಅಲ್ಲಿನ ಪ್ರಸಿದ್ಧ ಸಿದ್ಧಿವಿನಾಯಕ ಮಾರ್ಕೆಟ್ ಗೆ ತರಕಾರಿ ಕೊಳ್ಳಲು ಹೋಗಿದ್ದೆ.ಒಳ್ಳೆ ಅವರೇಕಾಯಿ ಕಾಲ. ರಾಶಿ ಹಾಕಿದ ಅಂಗಡಿಗಳು .ಎಷ್ಟಪ್ಪ ಅಂತ ಕೇಳಿದಾಗ

‘ಐವತ್ತು ರೂಪಾಯಿ ತೂಕ’ ಅಂದ.

ನಾನು ಅಷ್ಟೊಂದಾ? ಬೆಂಗಳೂರಿನಲ್ಲೇ ನಲವತ್ತು ರೂಪಾಯಿ ಎಂದೆ. ಕೆ ಜಿಗೆ ಐವತ್ತು ರೂಪಾಯಿ ಎನ್ನುವ ಭ್ರಮೆಯಲ್ಲೇ ಇದ್ದೆ. ‘ಸಿಗುತ್ತಾ,ಎಷ್ಟು ತರ್ತೀರಾ  ತೊಗೊಂಡು ಬನ್ನಿ, ನಾನೇ ಎಲ್ಲಾ ಕೊಂಡುಕೋತೀನಿ’ ಎಂದು ರೇಗಿದ ಅಂಗಡಿಯಾತ’ ಅಷ್ಷರಲ್ಲಿ ಒಬ್ಬಾತ ಬಂದು ನನ್ನ ಕಿವಿಯಲ್ಲಿ ‘ಊರಿಗೆ ಹೊಸಬರಾ? ತೂಕ ಅಂದ್ರೆ ಇಲ್ಲಿ ಎರಡೂವರೆ ಕೆಜಿ ಅಂತ’ ಎಂದು ಉಸುರಿದ. ಮತ್ತೇನೂ ಚರ್ಚಿಸದೆ ನೂರು ರೂಪಾಯಿಗೆ ಅವರೇಕಾಯಿಗೆ ಕೊಂಡುಕೊಂಡೆ.” ಅಂತ ಒಬ್ಬ ತನ್ನ  ಸ್ವಾನುಭವ ನಿವೇದನೆ ಮಾಡಿದ.

ತೂಕ ,ಧಡಿಯ ಗಳ ವಿವರಣೆಗಳಿಂದ ಬಸ್ಸಿನೊಳಗಿನ ವಿವಾದ ಈಗ ತಣ್ಣಗಾಗುತ್ತಾ  ಬಂದಿತ್ತು ತೂಕವೋ ,ಧಡಿಯವೋ ಅಂತೂ ಎರಡೂ ಆ ಸಮೃದ್ಧ ಶರೀರದ ವ್ಯಕ್ತಿಗೇ ಅನ್ವಯಿಸುವಂತಿತ್ತು.

“ಏನು ಇಷ್ಟಕ್ಕೆ  ಇಪ್ಪತ್ತು ರೂಪಾಯಾ ? ಕೊಡಬಹುದು, ಕೊಡಬಹುದು,ಬಿಡಿ” ಒಬ್ಬ ದರದ ಬಗ್ಗೆ ತನ್ನ ಸಮ್ಮತಿ ನೀಡಿದ .

“ಸ್ವಲ್ಪ ಚೌಕಾಶಿಗೆ ಇಳಿದ್ರೆ ಇನ್ನೂ ಕಡಿಮೆಗೆ ಕೊಡ್ತಾರೆ ,ಮಾತಾಡಿ ಜಯಿಸಿಕೊಳ್ಳೋ ತಾಕತ್ತು ಇರಬೇಕು ಅಷ್ಟೆ”.ಎಂದು ತೂರಿಬಂದ ಮತ್ತೊಂದು ಮಾತು ಈ ಬಡಪಾಯಿಯ ಸಾಮರ್ಥ್ಯದ ಬಗ್ಗೆ  ವಿಮರ್ಶೆಯಂತಿತ್ತು.

“ಅಮೆರಿಕದಲ್ಲಿ ನೀವೇ ತೋಟಕ್ಕೆ ಹೋಗಿ ಬೇಕಾದಷ್ಟು ಟೊಮೇಟೋ ಕೊಯ್ದುಕೊಂಡು ,ಅದನ್ನು ತೂಕ ಹಾಕಿ , ಡಬ್ಬಕ್ಕೆ ತುಂಬಿ,ಮಶಿನ್ ನಲ್ಲಿ ತೋರಿಸಿದ ದುಡ್ಡನ್ನು ಕ್ಯಾಶಿಯರ್ ಗೆ ಕೊಟ್ಟು ತರಬಹುದು” ಇದ್ದಕ್ಕಿದ್ದಂತೆ ಈಗ ಟೊಮೇಟೋ ವಿದೇಶಕ್ಕೆ ಹಾರಿತು. ಹಾಗೆಂದವನನ್ನು “ನೀವು ಹೋಗಿದ್ರ ಅಮೆರಿಕಕ್ಕೆ ?’ಅಂತ ಒಬ್ಬ ಸಂದೇಹವಾದಿ ಪ್ರಶ್ನಿಸಿದ . “ಇಲ್ಲ ಹೋದವರು ಹೇಳಿದ್ದು”ಎಂದ  ವಿದೇಶಿ ವ್ಯಾಮೋಹಿ .

”ಇದಕ್ಕೆಲ್ಲಾ ಈಗ ಅಮೆರಿಕಕ್ಕೆ ಹೋಗಬೇಕಿಲ್ಲ.ಎಲ್ಲಾ ಮಾಹಿತಿ  ಗೂಗಲ್ ನಲ್ಲೇ  ಸಿಕ್ಕಿಬಿಡುತ್ತೆ “ ಅಂತ ಇಷ್ಟು ಹೊತ್ತು ಮೊಬೈಲ್ ನಲ್ಲಿ ಮುಳುಗಿದ್ದ ಒಬ್ಬ ತಂತ್ರಜ್ಞಾನ ಪಿಪಾಸು ತನ್ನ ವಿಚಾರ ಮಂಡಿಸಿದ.

‘ಓ…”ಹೌದೇ’?”ಹೌದು,ಹೌದು “,ಮುಂತಾದ ಉದ್ಗಾರಗಳು ವಿವಿಧ ಪ್ರಯಾಣಿಕರಿಂದ ಈಗ ಹೊರಹೊಮ್ಮಿತು.

ಇದ್ದಕ್ಕಿದ್ದಂತೆ ಈಗ ಟೊಮೇಟೋ ವಿಚಾರ ಪಾಕಶಾಲೆಯತ್ತ ಹೊರಳಿತು.  “ನೀವು ಏನೇ ಹೇಳಿ ಟೊಮೇಟೋ ಇಲ್ಲದಿದ್ದರೆ ಅಡುಗೆ ಮನೇಗೆ ಕಳೇನೇ ಇರಲ್ಲ.”ಒಬ್ಬ ಪಾಕಾಸಕ್ತ ತನ್ನ ವಾದ ಆರಂಭಿಸಿದ.
.
“ನಿಜ,ನಿಜ ಸಾರು ಗೊಜ್ಜು,ಕಲಸಿದನ್ನ ,ಪಲಾವ್,ಪಚಡಿ “ಏನು ಮಾಡಬೇಕಾದ್ರೂ ಟೋಮೇಟೋ ಇರಲೇಬೇಕು ನೋಡಿ.’ ಮತ್ತೊಬ್ಬ ವಾದ ಸಮರ್ಥನೆ ಮಾಡಿದ.
.
“ಆದರೆ,ಒಳ್ಳೆ ಸಾರು ಆಗಬೇಕು ಅಂದರೆ ನಾಟಿ ಹುಳಿ ಟೊಮೇಟೋ ತಗೋಬೇಕು.ನಮ್ಮ ಸಾರಕ್ಕಿ ಮಾರ್ಕೆಟ್ ನಲ್ಲಿ ಸಿಗುತ್ತೆ ನೋಡಿ ಅಂಥದ್ದು .ಈ ರಾಯರು ತೊಗೊಂಡಿರೋದು ಫಾರ್ಮ್ ಟೊಮೇಟೋ.ಇದರಿಂದ  ಮಾಡಿದ ಸಾರು ಚೆನ್ನಾಗಿರಲ್ಲ” ಅಂತ  ಒಬ್ಬ ತನ್ನ ಪಾಕಪರಿಣತಿಯನ್ನು ಪ್ರದರ್ಶಿಸುವುದರ ಜತೆಗೆ ಟೊಮೇಟೋ ಕೊಂಡ ಬಡಪಾಯಿಯ ಜ್ಞಾನವನ್ನೂ ಹರಾಜು ಹಾಕಿದ .
.
ಈ ಬಡಪಾಯಿ ಇಳಿಯಬೇಕಾದ ಕೊನೆಯ ಸ್ಟಾಪು  ಬರುವವರೆಗೆ ಎಲ್ಲರ ಖಾಲಿಮಾತುಗಳ ಒರಳುಕಲ್ಲಿಗೆ ಸಿಕ್ಕಿ ಚಟ್ನಿಯಾದ.ಜತೆಗೆ ಈ  ಗದ್ದಲದಲ್ಲಿ  ಟೊಮೇಟೋವನ್ನು ನಜ್ಜುಗುಜ್ಜಾಗದಂತೆ ಮನೆಗೊಯ್ದು, ಹೆಂಡತಿಯ ಬೈಗುಳವನ್ನೂ ತಪ್ಪಿಸಿಕೊಳ್ಳುವ ಗುರುತರ ಜವಾಬ್ದಾರಿಯೂ  ಅವನ ಮೇಲಿತ್ತು.

.
ಅಲ್ಲ ನೀವೇ ಹೇಳಿ .ತಪ್ಪು ಯಾರದು?ಮನೆಯಿಂದ  ಹೊರಟಾಗ  ಒಂದು  ಬ್ಯಾಗು ಮಡಚಿ ಜೇಬಲ್ಲಿಟ್ಟುಕೊಂಡು ಇಟ್ಟುಕೊಂಡಿದ್ದರೆ ಈ ಗತಿ ಬರುತ್ತಿತ್ತೆ? ಹೇಗೂ ಅನಂತಪುರದ ಬಟ್ಟೆ ಅಂಗಡಿಯವರು ನೀಡಿದ ತೆಲುಗು ಬರಹದ  ಸೆಣಬಿನ ಚೀಲವೋ, ಕುಂಭಕೋಣದ ಕಾಫಿ ಅಂಗಡಿಯವರು ನೀಡಿದ  ತಮಿಳು ಒಕ್ಕಣೆಯ ಬಟ್ಟೆ ಬ್ಯಾಗೋ  ಮನೆಯಲ್ಲಿ ಇದ್ದೇ ಇರುತ್ತದೆ.ಟೊಮೇಟೋ,ಹೀರೇಕಾಯಿ, ತೆಂಗಿನಕಾಯಿ ಅಷ್ಟೇ ಏಕೆ ಇಡೀ ಮಾರುಕಟ್ಟೆಯನ್ನೇ ತುಂಬಿಕೊಂಡು ಬಂದಿದ್ದರೂ  ಯಾರ ಕಣ್ಣಿಗೂ ಮತ್ತು ಮುಖ್ಯವಾಗಿ  ಬಾಯಿಗೆ ಬೀಳುತ್ತಿರಲಿಲ್ಲ ? ಅದೂ ಅಲ್ಲದೆ ನಿಮಗೆ ಪ್ಲಾಸ್ಟಿಕ್ ವಿರೋಧಿ:ಪರಿಸರವಾದಿ ಎಂಬ ಕೀರ್ತಿಯೂ ಲಭಿಸುತ್ತಿರಲಿಲ್ಲವೇ ?
.
ಅಷ್ಟಕ್ಕೂ ಸುಮ್ಮನೆ ಬಂತೆ ಗಾದೆ “ನಮ್ಮ ಚಿನ್ನಾನೇ ಸರಿಯಿಲ್ಲ,ಅಕ್ಕಸಾಲಿಯನ್ನೇಕೆ ದೂರಬೇಕು?”ಅಂತ ..
.

– ಕೆ.ಎನ್ . ಮಹಾಬಲ

2 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ ಸರ್ ಕಥೆ. ಒಂದು ಸಣ್ಣ ಕಥೆಯೊಳಗೆ ಅದೆಷ್ಟೊಂದು ಸಾಮಾನ್ಯ ವಿಚಾರಗಳಿವೆ. ಮುಖ್ಯವಾಗಿ ಪರಿಸರದ ಕುರಿತಾದ ಕಾಳಜಿ.

  2. Shankari Sharma says:

    ಸೊಗಸಾದ ಕತೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: