ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 20

Share Button

ಜಲಪಾತದ ಜಗುಲಿಯಲ್ಲಿ..

ತಾಳಮದ್ದಳೆಯ ಹವ್ಯಾಸಿ ಕಲಾ ತಂಡದವರ ಕಾರ್ಯಕ್ರಮವು ನಮ್ಮ ಪ್ರವಾಸದ ವಿಶೇಷತೆಗಳಲ್ಲೊಂದು. ಶರಸೇತು ಬಂಧನನದ ಯಶಸ್ವೀ ಪ್ರಯೋಗದ ಬಳಿಕ  ಅದರ ಮುಂದಿನ ಭಾಗವಾಗಿ, ಅರ್ಜುನ ಸನ್ಯಾಸವನ್ನು ಪ್ರಸ್ತುತ ಪಡಿಸಲು ಯೋಜನೆ ರೂಪಿಸುತ್ತಿದ್ದರು..ಹಿರಿಯರಾದ ಕೇಶವಣ್ಣನವರು ಹಾಗೂಗೋಪಾಲಣ್ಣನವರು. ಪಾತ್ರವರ್ಗಕ್ಕೆ, ಇಚ್ಛೆ ಉಳ್ಳವರಿಗಾಗಿ ವಿಚಾರಿಸುವಾಗ ನನಗೆ ತಿಳಿಯಿತು. ನಾವು ದಕ್ಷಿಣ ಕನ್ನಡದ ಜನರು ಸಹಜವಾಗಿ ಯಕ್ಷಗಾನ ಪ್ರಿಯರು. ಮನದ ಮೂಲೆಯಲ್ಲಿದ್ದ ಭಾಗವಹಿಸುವ ಆಸೆಯೊಂದು ಎಚ್ಚೆತ್ತಿತು. ನನಗೆ ನೋಡಿ ಗೊತ್ತೇ ಹೊರತು ಭಾಗವಹಿಸಿ ಗೊತ್ತಿಲ್ಲ.  ಆದರೂ ಇದು ಸಾರ್ವಜನಿಕ ಕಾರ್ಯಕ್ರಮವಲ್ಲವಾದ್ದರಿಂದ ಧೈರ್ಯವಾಗಿ ತಾಳಮದ್ದಳೆಯಲ್ಲಿ ಭಾಗವಹಿಸಲು ಉತ್ಸಾಹದಿಂದಲೇ ಒಪ್ಪಿಕೊಂಡೆ.

ಕಾರ್ಯಕ್ರಮದ ಕಥಾಪ್ರಸಂಗದಲ್ಲಿ ಶ್ರೀ ಕೃಷ್ಣ, ಬಲರಾಮರ ತಂಗಿ ಸುಭದ್ರೆ ಪಾತ್ರ. ಶ್ರೀ ಕೃಷ್ಣನ ಮಡದಿ ಸತ್ಯಭಾಮಳ ಪಾತ್ರವನ್ನು ವನಿತಕ್ಕ ಮಾಡುವವರಿದ್ದರು. ಅವರೂ ನನ್ನಂತೆ ಮೊದಲನೇ ಸಲ ಭಾಗವಹಿಸುವವರಾದರೂ ಕುಟುಂಬದಲ್ಲಿ ಯಕ್ಷಗಾನದ ಹಿನ್ನೆಲೆಯಿರುವವರು; ಚೆನ್ನಾಗಿ ಮಾಡುವರೆಂಬ ನಂಬಿಕೆ ನನ್ನದು. ಆದರೆ ನನ್ನ ಸ್ಥಿತಿ ದೇವರಿಗೇ ಪ್ರೀತಿ! ಒಂದಕ್ಷರವೂ ಗೊತ್ತಿಲ್ಲದೆ ಅಲ್ಲಿ ಏನು ಹೇಳಲಿ?? ಒಪ್ಪಿಗೆ ಕೊಟ್ಟಾಗಿತ್ತು. ನನ್ನ ಕಷ್ಟವನ್ನು ಕೇಶವಣ್ಣನವರಿಗೆ ಹೇಳಿದಾಗ ಅವರೇನೋ ಧೈರ್ಯ ತುಂಬಿದರು, ಆದರೆ ನನ್ನೆದೆ ಢವಗುಟ್ಟುತ್ತಿತ್ತು, ಆಭಾಸವಾಗಬಾರದಲ್ಲ! ಮರುದಿನ ರಾತ್ರಿಯೇ ಕಾರ್ಯಕ್ರಮ. ರಾತ್ರಿ ಊಟವಾದ ಮೇಲೆ ಕೇಶವಣ್ಣನವರ ಬಳಿ ಕ್ಲಾಸ್ ತೆಗೆದುಕೊಂಡು, ನನ್ನ ಮಾತುಗಳನ್ನು ಮನನ ಮಾಡಿಕೊಳ್ಳಲು ಬರೆದುಕೊಂಡು, ಅವರ ಪ್ರೋತ್ಸಾಹದ ಮಾತುಗಳನ್ನೂ ತುಂಬಿಕೊಂಡಾಗ ಮನಸ್ಸು ಸ್ವಲ್ಪ ನಿರಾಳವೆನಿಸಿತು. ಅವರ ಪಾತ್ರ, ನನ್ನ ಅಣ್ಣ ಬಲರಾಮನದಾಗಿತ್ತು. ಅಲ್ಲದೆ ಅವರೊಡನೆಯೇ ಸಂಭಾಷಣೆ ಇದ್ದುದು  ನನಗೆ ಧೈರ್ಯ ತುಂಬಲು ಕಾರಣವಾಯ್ತ ಎನ್ನಬಹುದೇನೋ.. ಮಲಗಿದಾಗಲೂ ಇದೇ ಯೋಚನೆ.

ಮರುದಿನ ಮೇ ತಿಂಗಳ 14, ನಮ್ಮ ಸೂಪರ್ ಪ್ರವಾಸದ 7ನೇ ದಿನ! ಇಷ್ಟು ಜನ ಜೊತೆಯಾಗಿ ಏಳು ದಿನಗಳು ಕಳೆದುದೇ ಗೊತ್ತಾಗಲಿಲ್ಲ! ಬೆಳಗಿನ ಮಸಾಲೆ ದೋಸೆ ಸವಿ ಇನ್ನೂ ನಾಲಿಗೆ ಮೇಲಿರುವಂತೆಯೇ ಸಂದೇಶ ತಲಪಿತು..ಒಂಭತ್ತು ಗಂಟೆಗೆ ತಯಾರಾಗಲು. ಸರಿಯಾದ ಸಮಯಕ್ಕೆ ನಮ್ಮೆಲ್ಲರ ವಾಹನಗಳು ನಮ್ಮ ಹೋಟೆಲ್ ಸಿಕ್ಕಿಂ ರೆಸ್ಟೋರೆಂಟ್ ನಿಂದ ಹೊರಟು ಅಗಲ ಕಿರಿದಾದ ತಿರುವಿನ ರಸ್ತೆಯಲ್ಲಿ ಸಾಗಿದವು.. ದಿನದ ಮೊದಲ ತಾಣ, ಬಂಝಕ್ರಿ(Banjhakri) ಜಲಪಾತ ಪಾರ್ಕ್ ಗೆ ತಲಪಿದಾಗ ಗಂಟೆ ಹತ್ತು. ದಟ್ಟ ಹಸಿರು ಮರಗಳು..ಬದಿಯಲ್ಲಿರುವ ಎತ್ತರದ ಬೆಟ್ಟದಿಂದ ಇಳಿದು ರಸ್ತೆಯ ಮೇಲೆಯೇ ಅಡ್ಡಲಾಗಿ ಹರಿಯುತ್ತಿರುವ ಶುಭ್ರವಾದ ನೀರು, ಎದುರಿಗೇ ಚಂದದ ಕಮಾನು..ನೋಡುತ್ತಿದ್ದಂತೆಯೇ ಅದರೊಳಗೇನಿದೆಯೋ ಎಂದು  ಕುತೂಹಲವುಂಟಾಯಿತು. ಒಳಗಡೆ ಕಾರ್ ಪಾರ್ಕಿಂಗ್ ದಾಟುತ್ತಿದ್ದಂತೆಯೇ, ನಮ್ಮನ್ನೆಲ್ಲಾ ಬಾಲಣ್ಣನವರು ಪಕ್ಕಕ್ಕೆ ಕರೆದು ನಿಲ್ಲಿಸಿ, ಎಲ್ಲರೂ ಅವರವರ ಇಷ್ಟದಂತೆ ಪಾರ್ಕಿನೊಳಗೆ ಅಡ್ಡಾಡಿ ಹನ್ನೆರಡು ಗಂಟೆ ಹೊತ್ತಿಗೆ ಕಮಾನಿನ ಬಳಿ ಸೇರಲು ವಿನಂತಿಸಿಕೊಂಡರು.

ಸರಿ, ನಮ್ಮ ಗುಂಪು ಚದುರಿ ಹೋಯಿತು. ಕೆಲವರು ಜೊತೆಯಾಗಿ, ಇನ್ನು ಕೆಲವರು ಒಬ್ಬಂಟಿಯಾಗಿಯೇ ಪಾರ್ಕ್ ನ  ಸೌಂದರ್ಯವನ್ನು ಆಸ್ವಾದಿಸಲು ಹೊರಟೆವು. ಮೆಟ್ಟಲಲ್ಲಿ ಮೇಲೇರಿ ಹೋಗುತ್ತಿದ್ದಂತೆ ಎಡಭಾಗದಲ್ಲಿ ಬಹಳ ಸುಂದರವಾದ, ದೊಡ್ಡ ಕೊಳದಲ್ಲಿ, ಬಣ್ಣ ಬಣ್ಣದ ದೋಣಿಗಳಲ್ಲಿ ವಿಹರಿಸುವುದು ಕಾಣಿಸಿತು. ಮತ್ತೂ ಮೇಲೇರುತ್ತಿದ್ದಂತೆಯೇ, ಎದುರುಗಡೆಯೇ ತುಂಬಿ ಹರಿದು ಧುಮ್ಮಿಕ್ಕುವ ಪುಟ್ಟ ಜಲಪಾತದ ಸುಂದರ ದೃಶ್ಯ ಮನಸೆಳೆಯಿತು.


ಜಲಪಾತದ ನೀರು ಕೆಳಕ್ಕೆ ಹರಿದು, ಕಾಲುವೆಯಾಗಿ ಆಳಕ್ಕಿಳಿದು ಜುಳು ಜುಳು ನಾದದೊಂದಿಗೆ ಕಲ್ಲು ತುಂಬಿದ ಕಣಿವೆಯಲ್ಲಿ ಬಳುಕುತ್ತಾ ಸಾಗುವ ದೃಶ್ಯ ರಮಣೀಯ! ಆ ಆಳದ ಕಣಿವೆಗೆ ಅಡ್ಡಲಾಗಿ ಹಾಕಿದ್ದ ಹಗ್ಗದ ಸೇತುವೆಯು ಸಾಹಸಿಗರಿಗೆ ಸವಾಲಿನಂತಿತ್ತು. ಶುಲ್ಕ ತೆತ್ತು ಅದರಲ್ಲಿ ನಡೆಯುವ ಅವಕಾಶವಿತ್ತು; ಜೊತೆಗೇ ರಕ್ಷಣಾ ಸಿಬಂದಿಯವರೂ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತೋಟದೊಳಗೆ ನಡೆದಾಡಲು ಚಂದದ ಕಾಲುದಾರಿ, ಇಕ್ಕೆಲ ಗಿಡಗಳಲ್ಲಿ ನಗುವ  ಬಣ್ಣ ಬಣ್ಣದ ಹೂಗಳು, ಅಲ್ಲಲ್ಲಿ ನಿಲ್ಲಿಸಿದ್ದ ಹಳ್ಳಿಗಾಡು ಜನರ ವಿವಿಧ ಆಕೃತಿಗಳು..ಏಣಿ ಮೇಲೇರಿ ಹೋಗಿ, ಅಟ್ಟಣಿಗೆಯಿಂದ ಪ್ರಕೃತಿ ಸೌಂದರ್ಯ ವೀಕ್ಷಣೆಗೆ ಅನುಕೂಲತೆ.. ಹೀಗೆ ಎಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿದ್ದು ಯಾರಿಗೂ ಸಮಯ ಸರಿದುದೇ ತಿಳಿಯಲಿಲ್ಲ! ಹನ್ನೆರಡು ಗಂಟೆ ಹೊತ್ತಿಗೆ ಎಲ್ಲರೂ ಕಮಾನಿನ ಬಳಿ ಸೇರಿ, ಅಲ್ಲೇ ತಯಾರಾಗಿ ನಿಂತಿದ್ದ ನಮ್ಮ ನಮ್ಮ ಟ್ಯಾಕ್ಸಿಗಳಿಗೆ ಏರಿದಾಗ ಅಲ್ಲಿಂದ ಹೊರಡುವ ಮನಸ್ಸೇ ಇರಲಿಲ್ಲ ಯಾರಿಗೂ.. ಮುಂದಕ್ಕೆ ಚಂದದ ಹೂದೋಟ ನೋಡುವ ತವಕದಲ್ಲಿ ಕಾರುಗಳು ಚಲಿಸಿದುವು..ನಮ್ಮ ಮನದ ಜೊತೆಗೇ.‌.

(ಮುಂದುವರಿಯುವುದು..)

ಹಿಂದಿನ ಪುಟ ಇಲ್ಲಿದೆ  :ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 19

-ಶಂಕರಿ ಶರ್ಮ, ಪುತ್ತೂರು.

4 Responses

  1. ಜಯಲಕ್ಷ್ಮಿ ಪಿ ರಾವ್ says:

    ಚೆನ್ನಾಗಿದೆ.

  2. ನಯನ ಬಜಕೂಡ್ಲು says:

    ಪ್ರವಾಸ ಯಾವ ರೀತಿ, ಬೇರೆ ಬೇರೆ ಅಭಿರುಚಿ ಹೊಂದಿದ ಸ್ನೇಹಿತರೊಡನೆ ಕಲೆತು, ಹೊಸ ವಿಷಯಗಳನ್ನು ಕಲಿಯಲು ಪ್ರೇರೇಪಿಸುತ್ತದೆ ಅನ್ನುವುದನ್ನು ಈ ಕಥನ ಮನವರಿಕೆ ಮಾಡಿ ಕೊಡುತ್ತದೆ. ಪ್ರಕೃತಿಯ ವರ್ಣನೆ ಹಿತವಾಗಿದೆ.

    • Shankari Sharma says:

      ನಿಮ್ಮ ಸದಭಿಪ್ರಾಯಕ್ಕೆ ಧನ್ಯವಾದಗಳು ನಯನ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: