ಹಪ್ಪಳ ತಯಾರಿ ಎಂಬ Queuing Theory!

Share Button

 

Hemamala. B, DGM, Kluber Lubrication (I) Pvt.Ltd. Mysore

ನಾವೆಲ್ಲಾ ಚಿಕ್ಕವರಿದ್ದಾಗ , ಬೇಸಗೆ ರಜೆಯಲ್ಲಿ, ಆಗ ಬೆಳೆಯುವ ಹಲಸಿನಕಾಯಿ ಹಪ್ಪಳ ಮಾಡಲು ಮನೆಯ ಹಿರಿಯರ ಜತೆಗೆ ಎಡತಾಕುತ್ತಿದ್ದೆವು. ಈಗಿನಂತೆ ಬೇಸಗೆ ಶಿಬಿರದ ಕಲ್ಪನೆಯೇ ಇಲ್ಲದ ಕಾಲವದು. ಹಾಗಾಗಿ ಹಪ್ಪಳ ತಯಾರಿ ನಮ್ಮ ದಿನವನ್ನು ಸಂಪನ್ನಗೊಳಿಸುತ್ತಿತ್ತು. ಹಲಸಿನ ಕಾಯಿಯ ಹಪ್ಪಳ ಮಾಡುವುದು ಒಂದು ರೀತಿಯ ‘ಲಾರ್ಜ್ ಸ್ಕೇಲ್ ಪ್ರಾಜೆಕ್ಟ್’. ಹಲಸಿನ ಕಾಯಿಗಳನ್ನು ಕೀಳಿಸಿ, ಸೊಳೆಗಳನ್ನು ಬಿಡಿಸಿ, ಬೀಜ ಬೇರ್ಪಡಿಸಿ ನೀರಿನಲ್ಲಿ ಅಥವಾ ಬಿದಿರಿನ ಬುಟ್ಟಿಯಲ್ಲಿ ಹಾಕಿಡುವುದು ಮೊದಲ ಹಂತ. ಸೊಳೆಗಳನ್ನು ಉಗಿಯಲ್ಲಿ ಬೇಯಿಸಿ, ಒನಕೆಯಿಂದ ಕುಟ್ಟಿ ಹದಮಾಡಿ, ಉಪ್ಪು ಹಾಕಿ ಹಿಟ್ಟನ್ನು ತಯಾರಿಸುವುದು ಎರಡನೆಯ ಹಂತ. ಕುರುಕಲು ತಿಂಡಿಯಂತೆ ತಿನ್ನಲು ಬಳಸಲು ಸಪ್ಪೆ ಹಪ್ಪಳ, ಊಟಕ್ಕೆ ನೆಂಚಿಕೊಳ್ಳಲು ಖಾರದ ಹಪ್ಪಳ ತಯಾರಿಸುವುದಾದರೆ ಇಂಗು, ಜೀರಿಗೆ, ಮೆಣಸಿನಪುಡಿ…ಇತ್ಯಾದಿ ಬೇಕಿದ್ದ ಮಸಾಲೆ ಸೇರಿಸುವುದು ವಾಡಿಕೆ.

ಹದವಾದ ಹಿಟ್ಟನ್ನು ಉಂಡೆ ಮಾಡಿ, ಪ್ಲಾಸ್ಟಿಕ್ ಶೀಟ್ ಗಳ ಮಧ್ಯೆ ಇರಿಸಿ, ಮರದ ಮಣೆಯಲ್ಲೋ, ಪಾಪಡ್/ರೋಟಿ ಮೇಕರ್ ನಲ್ಲೋ ಒತ್ತಿ, ಶುಭ್ರ ಚಾಪೆಯ ಮೇಲೆ ಅಥವಾ   ಬಟ್ಟೆಯ ಮೇಲೆ ಹಾಕಿ ಬಿಸಿಲಿನಲ್ಲಿ ಒಣಗಿಸಿಟ್ಟರೆ ಹಪ್ಪಳ ರೆಡಿ. ಈ ಹಂತಗಳು  ಸರದಿಯಲ್ಲಿ ಮುಂದುವರಿಯುತ್ತಾ ಹೋಗಬೇಕು. ಚೆನ್ನಾಗಿ ಒಣಗಿದ ಹಪ್ಪಳಗಳನ್ನು 20-25 ರ ಕಟ್ಟುಗಳನ್ನಾಗಿ ಮಾಡಿ ಶೇಖರಿಸುವರು. ಸಾಯಂಕಾಲದ ತಿಂಡಿಯಾಗಿ ಅಥವಾ ಮನೆಗೆ ಯಾರಾದರೂ  ಬಂದಾಗ ಸ್ವಲ್ಪ ಹಪ್ಪಳವನ್ನು ಎಣ್ಣೆಯಲ್ಲಿ ಕರಿದರಾಯಿತು. ಮಳೆಗಾಲಕ್ಕೆಂದು ಶೇಖರಿಸಿದರೂ ಸೈ.

ಹಪ್ಪಳ ತಯಾರಿಯ ಯಾವುದೇ ಹಂತದಲ್ಲಿ ವಿಳಂಬವಾದಾರೆ ಅದು ಒಟ್ಟಾರೆ ಉತ್ಪಾದಕತೆಯನ್ನು (Productivity)  ಕಡಿಮೆ ಮಾಡುತ್ತದೆ ಹಾಗೂ ಯಾವುದೋ ಒಂದು ಹಂತದಲ್ಲಿ ಅವಶ್ಯ ವಸ್ತುಗಳ ಅಲಭ್ಯತೆ (stock out) ಅಥವಾ ಅತಿಲಭ್ಯತೆ (excess inventory) ಆಗುತ್ತದೆ. ಇದರ ಇನ್ನೊಂದು ವಿಶೇಷವೇನೆಂದರೆ,ಚಿಕ್ಕ ಮಕ್ಕಳಿಗೂ ಹಪ್ಪಳ ತಯಾರಿಯಲ್ಲಿ ಯುಕ್ತವಾದ ಕೆಲಸನ್ನು ವಹಿಸಲಾಗುತ್ತದೆ. ಉದಾ: ಹಪ್ಪಳವನ್ನು ಚಾಪೆಗೆ ಹಚ್ಚಿ  ಪ್ಲಾಸ್ಟಿಕ್ ಅನ್ನು ತಂದುಕೊಡುವುದು.ಒಟ್ಟಿನಲ್ಲಿ, ಇದೊಂದು ಉತ್ತಮ  ತಂಡ ಸ್ಫೂರ್ತಿ ಮತ್ತು ಸಂಪನ್ಮೂಲಗಳ ಸದ್ಬಳಕೆಗೆ (Team Spirit and Effective Resource Utilization) ಉದಾಹರಣೆ. 

Operations Research  ಎಂಬ ವಿಭಾಗದ ಅಧ್ಯಯನದಲ್ಲಿ ಬರುವ  Queuing Model Theory ಪ್ರತಿಪಾದಿಸುವುದು ಕೂಡಾ ಇದೇ ತತ್ವವನ್ನು! ಯಾವುದೇ ಹಂತದಲ್ಲಿ ‘ಕ್ಯೂನಲ್ಲಿ’ ವಿಳಂಬವಾಯಿತೆಂದರೆ, ಪ್ರಸ್ತುತ ವಿಧಾನವನ್ನು ಗಮನಿಸಿಬೇಕೆಂದು ಅರ್ಥ. ಅದು ವಿಧಾನದಲ್ಲಿನ ತೊಂದರೆ, ತಾಂತ್ರಿಕ ದೋಷ, ಕಳಪೆ ವಿನ್ಯಾಸ, ತರಬೇತಿಯ ಕೊರತೆ..ಇತ್ಯಾದಿ ಯಾವುದೋ ಒಂದು ನ್ಯೂನತೆಯನ್ನು ಸೂಚಿಸುತ್ತದೆ. ಇದನ್ನು ಗುರುತಿಸಿ ತಕ್ಕಂತ ಕ್ರಮ ಕೈಗೊಂಡು ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ನಷ್ಟವನ್ನು ತಪ್ಪಿಸುವುದು ಮ್ಯಾನೇಜರ್ ನ ಜಾಣತನಕ್ಕೆ ಸವಾಲು. ವಿಷಯಾಂತರ ಮಾಡಿ ‘ಕೊರೆದದ್ದಕ್ಕೆ’ ಕ್ಷಮಿಸಿ!

ಎಲ್ಲಿಯ ಹಪ್ಪಳ ತಯಾರಿ..ಎಲ್ಲಿಯ ಥಿಯರಿ! ಆದರೆ ಇವಕ್ಕೆ ಹೋಲಿಕೆಯಿದೆ!

ಇನ್ನು ಹಪ್ಪಳ ತಿನ್ನುವ ಶೈಲಿಯಲ್ಲಿ ವಿಭಿನ್ನತೆ ಇದೆ. ನನ್ನ ಅಜ್ಜನವರು, ಕೆಂಡದಲ್ಲಿ ಸುಟ್ಟ ಹಪ್ಪಳಕ್ಕೆ ತೆಂಗಿನಕಾಯಿಯ ಹೋಳುಗಳನ್ನು ಸೇರಿಸಿ, ನಮಗೂ ಕೊಟ್ಟು, ತಿನ್ನುತ್ತಿದ್ದುದು ನೆನಪಿದೆ. ಇನ್ನು ಕೆಲವರು, ಸುಟ್ಟ ಹಪ್ಪಳಕ್ಕೆ ತೆಂಗಿನೆಣ್ಣೆ ಸವರಿ ತಿನ್ನುವರು.  ಕೆಲವರಿಗೆ ಎಣ್ಣೆಯಲ್ಲಿ ಕರಿದ ಹಪ್ಪಳವೇ ಬೇಕು. ಹಪ್ಪಳ ತಿನ್ನುವ ಕರುಮ್-ಕುರುಮ್ ಸದ್ದಿನ ಜತೆಗೆ ವಿಮರ್ಶೆಯೂ ಧಾರಾಳವಾಗಿ ನಡೆಯುತ್ತದೆ. “ಹಪ್ಪಳ ತುಂಬಾ ಗರಿಗರಿಯಾಗಿದೆ…ಆ ಮರದ ಹಲಸಿನಕಾಯಿಯ ಹಪ್ಪಳ ತುಂಬಾ ರುಚಿ….ಇದು ದಪ್ಪ ಜಾಸ್ತಿಯಾಯಿತು..ಹಲಸಿನ ಕಾಯಿ ಸ್ವಲ್ಪ ಸಿಹಿಯಾಗಲು ಶುರುವಾಗಿತ್ತು…” .ಇತ್ಯಾದಿ.

ಇನ್ನು ಮನೆಗೆ ಬಂದ ನೆಂಟರು ಹೊರಡುವಾಗ ಒಂದೆರಡು ಹಪ್ಪಳ ಕಟ್ಟುಗಳನ್ನು ಅವರಿಗೆ ಕೊಡುವುದರಲ್ಲಿ ಮನೆಯ ಗೃಹಿಣಿಗೆ ಬಲು ಸಂತೋಷ.ಇನ್ನು ಹಪ್ಪಳ ಪಡೆದುಕೊಳ್ಳುವವರು “ಅಯ್ಯೋ ಇದೆಲ್ಲಾ ಏನಕ್ಕೆ.. ಬೇಡಾಗಿತ್ತು… ಸ್ಸಲ್ಫ ಹಪ್ಪಳ ಮಾಡಿದ್ವೇವೆ…ಈ ಬಾರಿ ನಮ್ಮ ತೋಟದಲ್ಲಿ ಹಲಸಿನಕಾಯಿ  ಬೆಳೆಯುವಷ್ಟರಲ್ಲಿ ಮಳೆ ಬಂತು, ಇನ್ನು ಹಪ್ಪಳ ಮಾಡಲಾಗದು….” ಹೀಗೆ ‘ಬೇಡ ಬೇಡ’ ಎನ್ನುತ್ತಲೇ ತಮ್ಮ ಬ್ಯಾಗ್ ಗೆ ಇಳಿಸುತ್ತಾರೆ. ತಮ್ಮ ಮನೆಗೆ ಹೋದ ಮೇಲೆಇದು ಅಜ್ಜಿ ಕೊಟ್ಟ ಹಪ್ಪಳ…ಇದು ಚಿಕ್ಕಮ್ಮನ ಮನೆಯ ಹಪ್ಪಳ….ಇದು ಅತ್ತೆ ಮನೆಯ ಹಪ್ಪಳ ‘ ಎಂದು ವಿವರಿಸುತ್ತಾರೆ. ಹೀಗೆ ಹಪ್ಪಳ ತನ್ನ ರುಚಿಯ ಜತೆಗೆ ಬಾಂಧವ್ಯವನ್ನೂ ತಳಕು ಹಾಕಿಕೊಳ್ಳುತ್ತದೆ.

ಇವೆಲ್ಲಾ, ವೈಭವ, ಸಡಗರ ಹಳ್ಳಿಗಳಲ್ಲಿ ವಾಸವಾಗಿರುವವರಿಗೆ ಮಾತ್ರ ಸೀಮಿತವಾಗುತ್ತಿದೆ. ಇನ್ನು ನಗರಗಳಲ್ಲಿ ಪ್ಯಾಕೆಟ್ ನಲ್ಲಿ ಸಿಗುವ ರೆಡಿಮೇಡ್ ಹಪ್ಪಳ   ಖರೀದಿಸಿವುದೊಂದೇ ದಾರಿ.  ಹಲಸಿನ ಕಾಯಿಯೂ ಇಲ್ಲ, ಇದ್ದರೂ ಹಪ್ಪಳ ತಯಾರಿಸುವ ಹುಮ್ಮಸ್ಸು, ತಾಳ್ಮೆ ಬಹುಶ: ಯಾರಿಗೂ ಇರಲಾರದು.

 

– ಹೇಮಮಾಲಾ.ಬಿ.

(ಚಿತ್ರಕೃಪೆ:ಅಂತರ್ಜಾಲ)

6 Responses

  1. ಹೊರಗೆ ಜೋರಾಗಿಸುರಿಯುತ್ತಿರುವ ಮಳೆ ನೋಡುತ್ತಾ ಈಗಲೇ ಹಪ್ಪಳ ಸವಿಯುವಾಸೆಯಾಗುತ್ತಿದೆ .ಆದರೆ ಈವರ್ಷ ಮಳೆಗಾಲ ಈಗಲೇ ಸುರುವಾಯಿತೇ .ಹಪ್ಪಳ ಸವಿಯುವುದು ಕನಸಿನಮಾತೇ ಸರಿ .

  2. jayashree says:

    ವೆರಿ ನೈಸ್. ಹಪ್ಪಳ ತಯಾರಿಯೂ ಮಾರ್ಕೆಟಿಂಗ್ ಥಿಯರಿಯೂ

  3. Sangeeta Muraleedhar says:

    ಹಪ್ಪಳದ ತಯಾರಿಯ ಸಂಭ್ರಮವನ್ನು ತುಂಬಾ ಚೆನ್ನಾಗಿ ಅಕ್ಷರ ರೂಪಕ್ಕಿಳಿಸಿದ್ದೀರಾ. ಹಪ್ಪಳ ಮತ್ತು ಎಳೆ ತೆಂಗಿನ ಕಾಯಿಯ ಕಾಂಬಿನೇಷನ್ ನನ್ನ ತಂದೆಯವರಿಗೂ ಅಚ್ಚುಮೆಚ್ಚು. ಒಳ್ಳೆಯ ಬರಹ. “Queuing ಥಿಯರಿ” ಯ ಜೊತೆಯ ಹೋಲಿಕೆಯೂ ಸುಪರ್ಬ್!
    As an editor you have done nice editing work with featured images!
    – Sangeeta M

  4. swathibhat says:

    ಹಪ್ಪಳ ತಯಾರಿಯನ್ನು ಈ ಒಂದು ದೃಷ್ಟಿ ಕೋನದಿಂದ ಯಾವತ್ತೂ ಕಂಡಿರಲಿಲ್ಲ. ನಾವು ಮಾಡುವ ದೈನಂದಿನ ಚಟುವಟಿಕೆಗಳಲ್ಲೇ ನಮಗರಿಯದಂತೆಯೇ ಮ್ಯಾನೇಜ್ಮೆಂಟ್ ಥಿಯರಿಗಳು ಅಡಕವಾಗಿರುತ್ತವೆ ಎಂಬುದಕ್ಕೆ ಈ ಹಪ್ಪಳ ತಯಾರಿ ಎಂಬ ಲೇಖನವೇ ಸಾಕ್ಷಿ. ಮ್ಯಾನೇಜ್ಮೆಂಟ್ ಸ್ಕಿಲ್ಸ್ ಗಳಲ್ಲಿ ನಿಮ್ಮ ಎತ್ತಿದ ಕೈಗೆ ಈ ಲೇಖನವು ಕನ್ನಡಿ ಹಿಡಿದಂತಿದೆ.

Leave a Reply to jayashree Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: