ಮರುಜನ್ಮ

Spread the love
Share Button

ಊರಾಚೆಯ ಒಂದು ನಾಲೆ. ಚಿಕ್ಕಂದಿನಲ್ಲಿ ಈಜು ಬೀಳುತ್ತಿದ್ದ, ಬಟ್ಟೆ ತೊಳೆಯೊ, ಕೆಲವರ ಎಮ್ಮೆ ತೊಳೆಯೋ.. ಹೀಗೆ ಊರ ಎಲ್ಲಾ ಕೊಳೆಗಳ ತೊಳೆಯೋ ಪವಿತ್ರ ಸ್ಥಳವದು ! ಸಂಜೆಯ ಹೊತ್ತಾಗಿದ್ದರಂದ ಬಟ್ಟೆ ತೊಳೆವ ಹೆಂಗಸರು, ಈಜು ಬೀಳೋ ಮಕ್ಕಳೂ,ಎಮ್ಮೆ ತೊಳೆಯೋ ರೈತರೂ
ಮನೆ ಸೇರಿದ್ದರೆಂದು ಕಾಣುತ್ತೆ. ನಾಲೆಯ ದಡದಲ್ಲಿ ಕೂತಿದ್ದ ಈತನನ್ನು, ನಾಲೆಯಲ್ಲಿ ಪ್ರತಿಬಿಂಬಿಸುತ್ತಿದ್ದ ಕೇಸರಿ ರವಿಯನ್ನುಳಿದು ಇನ್ಯಾರೂ ಇರಲಿಲ್ಲ. ಆಗಾಗ ಬಂದು ನೇಪಥ್ಯದಲ್ಲಿ ಮರೆಯಾಗುತ್ತಿದ್ದ ಹಕ್ಕಿಗಳ ಸಾಲುಗಳು ಹಾರೋ ಹಕ್ಕಿಯಂತೆ ಸ್ವಚ್ಚಂದವಾಗಿದ್ದ ಹಿಂದಿನ ದಿನಗಳನ್ನು ನೆನಪಿಸುತ್ತಿದ್ದವು. ಒಮ್ಮೆ ಆನೆಯಾಗಿ, ಇನ್ನೊಮ್ಮೆ ಪರ್ವತವಾಗಿ , ಮಗದೊಮ್ಮೆ ಹೆಣ್ಣಾಗಿ , ಮತ್ತೊಮ್ಮೆ ಮರವಾಗಿ..ಹೀಗೆ ಪ್ರತೀ ಬಾರಿ ನೋಡಿದಾಗಲೂ ಒಂದೊಂದು ಆಕಾರವಾಗಿ ಕಾಣುತ್ತಿದ್ದ ಮೋಡಗಳು ಜೀವನದ ಪ್ರತಿರೂಪದಂತೆ. ಎದುರಿನವರು, ಅವರ ಮನಸ್ಥಿತಿ ನಾವು ಭಾವಿಸಿದಂತೆಯೇ ಬೇರೆ ಬೇರೆ ಆಕಾರದಲ್ಲಿ ಕಾಣುವುದರ ರೂಪಕದಂತೆ ಕಾಣುತ್ತಿತ್ತು.
.
ನಾಲೆಯಲ್ಲಿ ಹರಿ ಹರಿದು ಮುಂದೆ ಸಾಗುತ್ತಿದ್ದ ನೀರಿನಂತೆ ತನ್ನ ಜೀವನದಲ್ಲಿ ಮುಂದೆ ಸಾಗಿ ದೂರಾದವರು, ತಾನು ಹಿಂದೆ ಬಿಟ್ಟು ಮುಂದೆ ಸಾಗಬೇಕಾದವರು ನೆನಪಾಗತೊಡಗಿದರು. ಶುರುವಿನಲ್ಲಿ ಶೀತಲತೆಯನ್ನಿತ್ತ ಸ್ನೇಹ, ಪ್ರೀತಿ, ಸಂಬಂಧಗಳೇ ದೂರಾಗುವಾಗ ಸುಡುವ ಬೆಂಕಿಯಂತೆ ಬದಲಾದ್ದು ವಿಪರ್ಯಾಸವೆನಿಸುತ್ತಿತ್ತು. ನೀನೇ ಬೆಂಕಿಗೆ ಕೈ ಹಾಕಿದರೂ , ಬೆಂಕಿಯೇ ಬಂದು ನಿನ್ನ ಕೈಸೋಕಿದರೂ ಸುಡುವುದು ನಿನ್ನ ಕೈಯೇ ಮಗನೇ ಎಂದು ಅಪ್ಪ ಹೇಳುತ್ತಿದ್ದ ಮಾತು ನೆನಪಾಯ್ತು.  ಜೀವನದ ದಾರಿಯಲ್ಲಿ ಎದುರಾಗಿ ಮೆತ್ತಗೆ ಮಾತನಾಡಿದವರನ್ನೆಲ್ಲಾ ಆಪ್ತರು, ಸ್ನೇಹಿತರು, ಪ್ರಿಯತಮೆ ಅಂದುಕೊಳ್ಳುತ್ತಾ ಸಾಗಿದರೆ ಬದುಕೇ ದುಸ್ತರವಾಗುತ್ತೆ, ಆ ಕಡೆಯಿಂದಲೋ ನಿನ್ನ ಕಡೆಯಿಂದಲೋ ಅರಳಿದ ಸ್ನೇಹಪುಷ್ಪವನ್ನು ಮೆಟ್ಟಿ ಅವರು ಆಚೆ ನಡೆದುಹೋಗುವಾಗ ಅಸದಳ ನೋವಾಗುತ್ತೆ. ನೀನು ಹೂವಂದುಕೊಂಡಿದ್ದೇ ಬಳ್ಳಿ, ಹಗ್ಗ, ಹಾವುಗಳಾಗಿ ನಿನ್ನ ಪ್ರತೀ ಹೆಜ್ಜೆಗೂ ತೊಡರುಗಾಲಾಗಿ ಒಂದು ಹೆಜ್ಜೆಯೂ ಮುಂದಡಿಯಿಡಲಾರದಂತಾಗುತ್ತೆ. ಆಪ್ತರೆಂದುಕೊಳ್ಳುವವರು ಅರೆಕ್ಷಣ ದೂರವಾದರೂ ಮರೆತೇಬಿಡುವುದು ಸಾಮಾನ್ಯವಾಗಿರೋ ಈ ಜಗದಲ್ಲಿ ನೀನು ಪ್ರೀತಿಸುವವರಿಗಿಂತ ನಿನ್ನ ಪ್ರೀತಿಸುವವರಿಗೆ ಬದುಕೋ ಮನುಜನೆಂಬ ತತ್ವಜ್ನಾನಿಯ ಮಾತುಗಳು ನೆನಪಾಗುತ್ತಿದ್ದವು.

 

ಪಡುವಣದಲ್ಲಿ ಬೆಟ್ಟಗಳ ಮರೆಗೆ ಜಾರುತ್ತಿದ್ದ ಸೂರ್ಯನಂತೆಯೇ ಈತನೂ ನೆನಪುಗಳ ಸಾಗರದಲ್ಲಿ ಮುಳುಗುತ್ತಿದ್ದ.ಹೌದು. ಇದೇ ಹಳ್ಳಿ. ಇದೇ ನಾಲೆಯ ಬಳಿ ಕಂಡಿದ್ದವಳು. ಯಾವುದೋ ಫೋನಿಗೆಂದು ನಾಲೆಯ ಬಳಿ ಬೈಕ್ ನಿಲ್ಲಿಸಿ ಮಾತಾಡುತ್ತಿದ್ದಾಗ ಅಚಾನಕ್ಕಾಗಿ ಕಣ್ಣಿಗೆ ಬಿದ್ದವಳವಳು.ಸ್ನೇಹಿತೆಯರ ಜೊತೆಗೆ ಕಿಲ ಕಿಲ ನಗುತ್ತಾ ಬಟ್ಟೆಯ ರಾಶಿ ಹೊತ್ತು ನಾಲೆಯ ಬಳಿ ಬರುತ್ತಿದ್ದಳು. ಬೆಳಗಿನ ಒಂಭತ್ತಾಗಿರಬಹುದೇನೋ. ಸೂರ್ಯನೂ ಹಸಿದು ತಿಂಡಿ ತಿನ್ನಲು ಹೋಗಿದ್ದಾನೋ ಎನ್ನುವಂತೆ ಮೋಡಗಳ ಮರೆಯಲ್ಲಿ ಮರೆಯಾಗಿದ್ದ , ನಾಲೆಯ ಪಕ್ಕವಿರೋ ಮರಗಳಿಂದಲೋ ಅಥವಾ ನಾಲೆಯ ಮೇಲೆ ಬೀಸಿ ಬರುತ್ತಿರೋ ಗಾಳಿಯಿಂದಲೋ ಸುತ್ತಲಿನ ವಾತಾವರಣ ತಂಪಾಗಿತ್ತು. ಆಕೆಯ ಕಿಲ ಕಿಲ ನಗು , ಒಂದು ಓರೆ ನೋಟ ಇವನನ್ನು ಮೋಡಿ ಮಾಡಿ ಬಿಟ್ಟಿತ್ತು. ಫೋನಲ್ಲಿ ಏನು ಮಾತಾಡಿದನೋ ಬಿಟ್ಟನೋ ಗೊತ್ತಿಲ್ಲ. ಅವಳನ್ನೇ ನೋಡುತ್ತಾ ನಿಂತು ಬಿಟ್ಟಿದ್ದ. ಎದುರಿಗಿಂದ ಒರುತ್ತಿದ್ದ ಲಾರಿಯ ಹಾರ್ನಿನಿಂದಲೇ ಎಚ್ಚರವಾಗಿದ್ದನಿವನು. ಸಡನ್ನಾಗಿ ವೇಗವಾಗಿ ಬಂದ ಆ ಲಾರಿಗೆ ಎದುರಿಗೆ ಒಂದು ದನ ಅಡ್ಡ ಬಂದಿತ್ತು. ಆ ದನ ತಪ್ಪಿಸೋಕೆ ಹೋದ ಲಾರಿ ಬಲಬದಿಯಲ್ಲಿದ್ದ ಹುಡುಗಿಯತ್ತ ತಿರುಗಿತ್ತು. ಆಕೆಗೆ ಲಾರಿ ತಗುಲಿತೋ ಅವಳೇ ಹಾರಿದಳೋ ಗೊತ್ತಿಲ್ಲ. ಅವಳಂತೂ ನಾಲೆಗೆ ಬಿದ್ದಿದ್ದಳು. ಅವಳೇನಾದಳೂ ಅಂತ ರಸ್ತೆಯ ಬಲಬದಿಗೆ ಓಡಿದ ಇವನಿಗೆ ಹಿಂದಿನಿಂದ ಬಂದ ಕಾರು ಗುದ್ದಿ
ಇವನೂ ನಾಲೆಗೆ ಬಿದ್ದಿದ್ದ.

 

ಆ ಘಟನೆಯಾಗಿ ಎಷ್ಟು ಹೊತ್ತಯ್ತೋ, ದಿನಗಳಾದವೋ ಗೊತ್ತಿಲ್ಲ. ಕಣ್ಣು ತೆರೆದಾಗ ಯಾವುದೋ  ಬೆಡ್ಡಿನ ಮೇಲಿದ್ದ ಆಸ್ಪತ್ರೆಯಲ್ಲಿದ್ದ. ಅಕ್ಕಪಕ್ಕದವರನ್ನು ವಿಚಾರಿಸೋವಾಗ ಅದೊಂದು  ಸರ್ಕಾರಿ ಆಸ್ಪತ್ರೆ ಅಂತ ಗೊತ್ತಾಯ್ತು. ಯಾರೋ ಪುಣ್ಯಾತ್ಮರೊಬ್ಬರು ಇವನನ್ನು  ಆಸ್ಪತ್ರೆಗೆ ಸೇರಿಸಿದ್ದರಂತೆ. ಪ್ರಜ್ನೆ ಬಂದ ಮೇಲೆ ತನ್ನ ಅವಸ್ಥೆಯನ್ನೊಮ್ಮೆ ನೋಡಿಕೊಂಡು ಇದು ತಾನೇನಾ ಅಂದುಕೊಂಡ. ಬಲ ಪಾರ್ಶ್ವದಲ್ಲಿ ಕಾರು ಗುದ್ದಿ ಬಲಗಾಲಲ್ಲೆಲ್ಲಾ ಗಾಯಗಳಾಗಿದ್ರೂ  ಮುರಿದಿರಲಿಲ್ಲ. ಕೈಮುರಿದು ಅದಕ್ಕೊಂದು ಪ್ಲಾಸ್ಟರ್ ಹಾಕಿದ್ದರು. ಬಹುಷಃ ತನಗೆ ಗುದ್ದೋ ಮೊದಲು ಚೆನ್ನಾಗಿ ಬ್ರೇಕ್ ಹಾಕಿದ್ದ್ದ ಅನಿಸತ್ತೆ ಕಾರಿನವನು. ಇಲ್ಲಾಂದ್ರೆ ಉಳಿಯೋದೇ ಕಷ್ಟವಿತ್ತೇನೋ ಅಂದುಕೊಂಡನವನು. ಫೋನ್ ಫೋನು ಅಂತ ತಡಕುತ್ತಿದ್ದ ಅವನನ್ನು ನೋಡಿ ನರ್ಸೊಬ್ಬಳು ಪಕ್ಕದಲ್ಲಿದ್ದ ಚೀಲವೊಂದನ್ನು ತೋರಿಸಿದ್ಲು.  ಅದರಲ್ಲಿ ಅವನನ್ನು ಆಸ್ಪತ್ರೆ ಬಟ್ಟೆಗೆ ಬದಲಾಯಿಸೋ ಮೊದ್ಲು ಅವ್ನು ಹಾಕಿಕೊಂಡಿದ್ದ ಬಟ್ಟೆಯನ್ನಿಟ್ಟಿದ್ರು.

ಕೊನೆಗೂ ಫೋನನ್ನು ಹುಡುಕಿ ತನ್ನಆಪ್ತರಂದುಕೊಂಡೋರಿಗೆ  ಫೋನ್ ಮಾಡಿ ಸಹಾಯ ಕೇಳೋಣ ಅಂದ್ಕೊಂಡ. ಆದ್ರೆ ಕೆಲವರು ಅನುಕಂಪ ವ್ಯಕ್ತಪಡಿಸಿದ್ರೆ, ಕೆಲವರು ಅಯ್ಯೋ ಹೌದಾ.. ಛೇ,,, ನಾನೀಗ ಇಂಪಾರ್ಟಂಟ್  ಕೆಲ್ಸದಲ್ಲಿದ್ದೇನೆ. ಮುಗಿದ ಮೇಲೆ ಫೋನ್ ಮಾಡ್ತೇನೇ ಅಂತ ಇಟ್ಟರು.. ಕೆಲವರು ಇವನು ಪರಿಸ್ಥಿತಿ ತಿಳಿಸಿ ಸಹಾಯ ಕೇಳೋ ಮೊದ್ಲೇ ಹಲೋ ಹಲೋ.. ಕೇಳಿಸ್ತಿಲ್ಲ ಅಂತ ಜಾರಿಕೊಂಡ್ರು. ಕೊನೆಗೂ ಯಾರೋ ಸ್ನೇಹಿತನ ಸಹಾಯದಿಂದ, ಆಸ್ಪತ್ರೆಗೆ ಸೇರಿಸಿದ ದಯಾಳುವೊಬ್ಬರ ದಯೆಯಿಂದ ಈತ ಬದುಕುಳಿದಿದ್ದ. ಆ ಊರಿಂದ ಹೊರಬರುವಾಗ ಸೂರ್ಯಾಸ್ತವಾಗುತ್ತಿತ್ತು.. ಅದೇ ನಾಲೆಯ ಬಳಿ ನಿಂತು ತನ್ನನ್ನು ಸಾವಿನ ಬಳಿಗೆ ಕರೆದೊಯ್ದುರೂ ಮತ್ತೆ ಬದುಕಿಸಿದ ಸೂರ್ಯದೇವನಿಗೊಂದು ವಂದನೆ ತಿಳಿಸಿದ. ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಮತ್ತೆ ಕಿಲ ಕಿಲ. ಯಾರೋ ನಾಲೆಯ ಕಡೆಯಿಂದ ಬಟ್ಟೆ ಹೊತ್ತು ವಾಪಾಸ್ಸಾಗುತ್ತಿದ್ದರು.

-ಪ್ರಶಸ್ತಿ ಪಿ.

2 Responses

  1. jayashree says:

    Nice. I especially liked the first half, wherein there is beauty of thought and expression.

  2. Jennifer Shawn says:

    Very nice writing! We expect more such articles from you 🙂

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: