ಬೊಗಸೆಬಿಂಬ

ಯತ್ರ ನಾರ್ಯಸ್ತು ಪೂಜ್ಯಂತೇ

Share Button

ಸೆಪ್ಟೆಂಬರ್- ಒಕ್ಟೋಬರ್ ಎಂದರೆ ದೇವತೆಗಳ ಮಾಸ. ವರ ಮಹಾಲಕ್ಷ್ಮಿ ವ್ರತದಿಂದ ಮೊದಲುಗೊಂಡು ಗೌರಿ ಹಬ್ಬ, ಆನಂತರದ ದಸರಾ, ನವ ದುರ್ಗೆಯರ ಆರಾಧನೆ ಎಂದೆಲ್ಲ ದೇವಿಯರನ್ನು ಆವಾಹಿಸಿ ಆರಾಧಿಸುವ ಜನಸ್ತೋಮ. ಚಂಡಿ, ಚಾಮುಂಡಿ, ಆದಿ ಶಕ್ತಿ, ಪರಾಶಕ್ತಿ ಎಂದೆಲ್ಲ ಭಕ್ತಿ ಭಾವದಿಂದ ಧನ್ಯರಾಗುತ್ತ, ದೇವಿ ಮಹಾತ್ಮೆಯ ದೇವಿಯ ಚೈತನ್ಯಕ್ಕೆ ತಲೆಬಾಗುತ್ತೇವೆ. ಪ್ರಾಯಶ: ಜಗತ್ತಿನ ಯಾವುದೇ ದೇಶಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಸ್ರೀ ಚೈತನ್ಯದ ಆರಾಧನೆ ಭಾರತದಲ್ಲಿಯೇ ಇರಬೇಕು.

ಈ ಎಲ್ಲ ಹಬ್ಬಗಳಲ್ಲಿನ ಸ್ತ್ರೀ ಶಕ್ತಿಯ ಆವಿರ್ಭಾವ ನಿಜ ಜೀವನದಲ್ಲಿ ಎಲ್ಲಿ ಮಾಯವಾಗಿದೆ ಎಂದು ಆಶ್ಚರ್ಯವಾಗುತ್ತದೆ. ಬೌದ್ಧಿಕ ಸ್ತರದಲ್ಲಿ, ರಾಜಕೀಯ ರಂಗದಲ್ಲಿ, ವೃತ್ತಿಪರ ಕೋರ್ಸುಗಳಲ್ಲಿ.. ಹೀಗೆ ಹತ್ತು ಹಲವು ರಂಗಗಳಲ್ಲಿ ಸಕ್ರಿಯರಾಗಿದ್ದರೂ ಹೆಣ್ಣಿನ ‘ದೇಹ’ವೇ ಆಕೆಯ ವಿರುದ್ಧ ಅಸ್ತ್ರವಾಗುವುದೊಂದು ಚೋದ್ಯ. ಈ ನಿಟ್ಟಿನಲ್ಲಿ ನಮ್ಮ ಸಂಪ್ರದಾಯಗಳ ಒಟ್ಟು ಆಶಯ ಹೆಣ್ಣಿನ ಜೈವಿಕತೆಯನ್ನು, ಫಲವಂತಿಕೆಯನ್ನು ಗೌರವಿಸುವುದೇ ಆಗಿದ್ದರೂ ಅದು ಹೆಣ್ಣನ್ನು ಮತಷ್ಟು ಮುಜುಗರಕ್ಕೊಳಪಡಿಸುವುದು ಸತ್ಯ.(ಮೈ ನೆರೆಯುವುದು, ಸೀಮಂತ, ಬಾಣಂತನ ಮೊದಲುಗೊಂಡು ಅನೆಕ ಸಂಪ್ರದಾಯಗಳು ಸ್ತ್ರೀಯ ಜೀವಂತಿಕೆಯ, ಜನ್ಮ ಕೊಡುವ ಶಕ್ತಿಯ ಸೆಲೆಬ್ರೇಶನ್ ಆಗಿರುವಂತೆಯೇ ಅವಳ ದೈಹಿಕತೆಯ ನೆನಪಿಸುವಿಕೆ ಕೂಡ ಹೌದೇನೋ ಎಂದು ನನಗೆ ಅನಿಸುವುದಿದೆ). ಇನ್ನು ದೇವ-ದೇವತೆಯರನ್ನು ಪುರೋಹಿತರು ಪೂಜಿಸುವ ವಿಧಾನವೇ ಬೇರೆ; ಹೆಣ್ಣು ಮಕ್ಕಳು ಗೌರಿ, ವರ ಮಹಾಲಕ್ಷ್ಮಿ ಎಂದು ಪೂಜಿಸುವ ವಿಧವೇ ಬೇರೆ. ”ಜೆಂಡರ್’ ಎಂಬ ಭಿನ್ನತೆ ಈಗೇನೂ ಇಲ್ಲಪ್ಪ. ಇದು ಇಪ್ಪತ್ತೊಂದನೆಯ ಶತಮಾನ” ಎಂದೆಲ್ಲ ಉದ್ಗರಿಸುವುದು ಈ ಸಂದರ್ಭದಲ್ಲಿ ಕಷ್ಟ ಸಾಧ್ಯ.

ಹತ್ತೊಂಬತ್ತು ವರ್ಷದ ತರುಣಿಯನ್ನು ಡ್ರಗ್ ಕೊಟ್ಟು ಪಾಳು ಬಾವಿಯಲ್ಲಿ ಅತ್ಯಾಚಾರಗೈಯುವ, ಬಸುರಿ ಮಗಳೆಂದು ಲೆಕ್ಕಿಸದೆ ಆಕೆಯ ದಲಿತ ಗಂಡನನ್ನು ಕೊಲ್ಲುವ.. ಎತ್ತ ಸಾಗುತ್ತಿದೆ ಈ ವಿಕೃತಿ? ಎಲ್ಲಿದೆ ಮನುಷ್ಯತ್ವ? ಇನ್ನು ದೈನಂದಿನ ಜೀವನದಲ್ಲಿ ಕೂಡ ಹೆಣ್ಣಿನ ಬಟ್ಟೆ ಬರೆ, ವೇಷಭೂಷಣಗಳು ಹೆಚ್ಚು ಕಡಿಮೆಯಾದರೆ (ವಾರ್ಡ್ ರೋಬ್ ಮಿಸ್ ಹ್ಯಾಪ್ ನಂತಹ) ದೊಡ್ಡ ಪ್ರಮಾದವೇ ಆಗಿಬಿಡುವ, ಕಂಪೆನಿಯೊಂದರ ದೊಡ್ಡ ಅಧಿಕಾರಿಣಿಯಾದರೂ ಮನೆ ನಿಭಾಯಿಸಲು ಬಾರದಿದ್ದರೆ ಆಕೆ ದಕ್ಷಳಲ್ಲವೆಂದು ತೀರ್ಮಾನಿಸಿ ಬಿಡುವ, ಹೆಣ್ಣು ಆದಿ ಶಕ್ತಿ ಎನ್ನುವ ಕಾನ್ಸೆಪ್ಟ್ ತೀರಾ ವಿಪರ್ಯಾಸ ಎನಿಸುವುದಿಲ್ಲವೇ? ಗ್ಲೋಬಲೈಸ್ಡ್ ಭಾರತದಲ್ಲಿನ ಔದ್ಯೋಗಿಕ ಒತ್ತಡಗಳು, ಕೌಟುಂಬಿಕ ಜೀವನದ ತಾಳ ಮೇಳ.. ಹೀಗೆ ಕೆಲವೊಮ್ಮೆ ಹೆಣ್ಣಿನ ಜೀವನ ಕತ್ತಿ ಮೇಲಿನ ನಡಿಗೆಯಂತೆ. ಕಾಳಿಯಂತೆ ಕತ್ತಿ ಹಿರಿಯುವುದಕ್ಕಿಂತ ಗೌರಿಯಂತೆ ಇದ್ದರೇ ಈ ಸಮಾಜದಲ್ಲಿ ಗೌರವದಿಂದ ಬದುಕಲು ಸಾಧ್ಯ.

ನಮ್ಮ ದೇಶದ ಹಬ್ಬ ಹರಿದಿನಗಳು, ಇನ್ನುಳಿದ ಸಂಪ್ರದಾಯಗಳಲ್ಲಿ ಹೆಣ್ಣಿಗಿರುವ ಮಹತ್ವವನ್ನು ಅಲ್ಲಗಳೆಯುವುದು ಈ ಲೇಖನದ ಉದ್ದೇಶ ಅಲ್ಲ. ಹಾಗೆ ನೋಡಿದರೆ ಅರ್ಧ ನಾರೀಶ್ವರದಂತಹ ಅತ್ಯುಚ್ಛ ಸಮಾನತೆ ಇರುವ ಧರ್ಮ ಇಲ್ಲಿದೆ. ಹಾಗಿದ್ದರೂ ಸ್ಕೂಲು, ಕಾಲೇಜುಗಳ ಕ್ಯಾಂಪಸ್ ನಲ್ಲಿರುವ ಸಮಾನತೆ, ಅವಕಾಶಗಳ ಹಂಚಿಕೆಯಲ್ಲಿನ ಧಾರಾಳತನ ನಿಜ ಜೀವನದಲ್ಲಿ ಇಲ್ಲ‌ಎಂದೇ ಹೇಳಬೇಕಾಗಿದೆ. ಇನ್ನು ನಮ್ಮ ಸಿನೆಮಾ, ಸೀರಿಯಲ್ ಮೊದಲುಗೊಂಡು ಹೆಣ್ಣನ್ನು, ತಾಯಿಯನ್ನು ದೇವತೆ ಎಂದು ಹಾಡಿ ಹೊಗಳುವ ಪರಂಪರೆಯೇ ನಮ್ಮಲ್ಲಿದೆ. ಹೆಣ್ಣಿನ ತ್ಯಾಗ, ಸಹನೆ, ಕೆಚ್ಚಿಗೆ ಇದು ಅನ್ವಯಿಸುವುದು ಹೌದಾದರೂ ನಿಜ ಜೀವನದ ಕೆಲವು ಘಟನೆಗಳನು ನೋಡುವಾಗ ಇದು ತುಂಬ ಅವಾಸ್ತವಿಕವಾದುದು. ಅಲ್ಲವೇ?

ದೇವರ ಹೆಸರಿನಲ್ಲಿ ‘ಕುಮಾರಿ’ಯರೆಂದು ಪೂಜಿಸಲ್ಪಡುವ ನೇಪಾಳದ ಹುಡುಗಿಯರು, ದೇವರ ಹೆಸರಿನಲ್ಲಿ ‘ಮುತ್ತು ಕಟ್ಟಿಸಿಕೊಳ್ಳುವ’ ಅಸಹಾಯಕರು, ತಮ್ಮ ದನಿಯನ್ನು ಕೇಳುವವರಿಲ್ಲದೆ ಮಾನಸಿಕ ತಲ್ಲಣಗಳಿಂದ ‘ಮೈ ಮೇಲೆ’ ಬರುವುದರಿಂದ ಪರಿಹಾ‌ರ ಕಂಡುಕೊಳ್ಳಲೆತ್ನಿಸುವವರು.. ಹೀಗೆ ಹೆಣ್ಣನ್ನು ದೈವತ್ವಕ್ಕೆ ಏರಿಸುವುದಕ್ಕೆ ಹಲವು ಆಯಾಮಗಳು.

ನಮ್ಮ ಪುರಾಣಗಳು, ಜನಪದಕತೆಗಳು , ಮಿಥ್ ಗಳು ಎಂದೆಲ್ಲ ಎಲ್ಲಾ ಕಡೆಯೂ ಸ್ತ್ರೀಯರ ಬಗ್ಗೆ ವಿವರಗಳು ಹೇರಳವಾಗಿದೆ, ಆದರೂ ಉರಿಯುತ್ತಿರುವ ಜ್ವಾಲೆಗೆ ತಾವಾಗಿ ಹಾರಿಕೊಳ್ಳುವ ಸತಿಯರು, ಕೆರೆಯಲ್ಲಿ ಹಾರವಾಗುವವರು, . ಈ ರೀತಿ ಒಂದು ರೀತಿಯ ತಳಮಳವನ್ನು ಹುಟ್ಟಿಸುವ ಕತೆಗಳವು. ಸ್ತ್ರೀಯರ ಕೆಚ್ಚು, ಹೋರಾಟಗಳೂ ಅವುಗಳಲ್ಲಿವೆ. ಹಾಗೆಂದು ದೈನಂದಿನ ಜೀವನಲ್ಲಿ ರೀತಿ ದೇವಿಯರಂತೆ ವರ್ತಿಸಿದರೆ ಅದೊಂದು ರೀತಿಯ ಉನ್ಮಾದವಾಗಬಹುದು. (ತ್ರಿಶೂಲದಿಂದ ಕೊಲ್ಲುವ, ರಕ್ತ ಕುಡಿಯುವ..) ಹೀಗೆಲ್ಲ. ಬಹುಶ: ಈ ಕತೆಗಳಲ್ಲಿ ಸ್ತ್ರೀಯ ಅಂತರ್ಗತ ಚೈತನ್ಯದ ಬಗ್ಗೆ, ಕೆಚ್ಚಿನ ಸಾಧ್ಯತೆಗಳ ಬಗ್ಗೆ, ತೀರಾ ಅನಿವಾರ್ಯವಾದಾಗ, ಶಿಕ್ಷಿಸುವ ದುರ್ಗೆಯಾಗಬೆಕಾದ ಅಗತ್ಯದ ಬಗ್ಗೆ ಪರೋಕ್ಷವಾಗಿ ಹೇಳುತ್ತಿರಬೇಕು. ಈ ಎಲ್ಲ ಕತೆಗಳು ನಮ್ಮ ಜೀವನದ ಭಾಗವೇ ಆಗಿದ್ದು ನಮ್ಮ ನಾಟಕಗಳಲ್ಲಿ,. ಟಿ ವಿ ಸೀರಿಯಲ್ ಗಳಲ್ಲಿ, ಸಿನೆಮಾಗಳಲ್ಲಿ, ಹೆಚ್ಚೇಕೆ ಕಾಲೇಜು ಮಕ್ಕಳು ಪ್ರದರ್ಶಿಸುವ ರೂಪಕಗಳಲ್ಲಿ ಕೂಡ ಅಡಕವಾಗಿರುದನ್ನು ಗಮನಿಸಬಹುದು.

ಹಾಗಿದ್ದಲ್ಲಿ ನಾವು ಪಾಲಿಸಬೇಕಾದ ಆದರ್ಶಗಳೇನು? ಪುರಾಣಗಳಲ್ಲಿನ ಕಥಾನಕಗಳನ್ನೇ ಅಥವಾ ನಿಜ ಜೀವನದ ರೋಲ್ ಮಾಡೆಲ್ ಗಳನ್ನೇ? ಇಷ್ಟಕ್ಕೂ ಸಚ್ಚಾರಿತ್ರ್ಯ, ಒಳ್ಳೆಯ ನಡತೆ, ಆದರ್ಶ ಇವುಗಳೆಂದರೆ ಯಾವುವು ಮತ್ತು ಆಯಾ ಕಾಲದ ಯುಗ ಧರ್ಮಕ್ಕೆ ಅನುಗುಣವಾಗಿ ಅವು ಬದಲಾಗುವವೇ? ಗ್ಲೋಬಲೈಸೇಶನ್ ನ ಪ್ರಚಂಡ ಪ್ರಭಾವಕ್ಕೆ ಗುರಿಯಾಗಿ ನಮ್ಮ ಆಸ್ತಿಕತೆ, ಮೌಲ್ಯಗಳನ್ನು ಮರು ನಿರೀಕ್ಷಣೆ ಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಬಹುಶ: ನಮ್ಮೊಳಗಿನ ಅಂತ:ಸಾಕ್ಷಿಗನುಗುಣವಾಗಿ ನಡೆದುಕೊಳ್ಳುವುದೇ ದೇವಿಯರ ಆದರ್ಶಗಳನ್ನು ಪಾಲಿಸಿದಂತೆ.

– ಜಯಶ್ರೀ ಬಿ. ಕದ್ರಿ.

3 Comments on “ಯತ್ರ ನಾರ್ಯಸ್ತು ಪೂಜ್ಯಂತೇ

  1. ಹೊಗಳಿ ಹೊನ್ನ ಶೂಲಕ್ಕೇರಿಸುವುದು ಅನ್ನುವ ಮಾತಿಲ್ಲಿ ಪ್ರಸ್ತುತ . ಹೆಣ್ಣಿಗೆ ಯಾವುದೇ ಅತಿ ರಂಜಿತ ಬಿರುದಿನ ಅವಶ್ಯಕತೆ ಇಲ್ಲ , ಅವಳನ್ನು ಅವಳ ಪಾಡಿಗೆ ಬದುಕಲು ಬಿಟ್ಟರೆ ಅದುವೇ ಮಹದುಪಕಾರ . ಚಂದದ ಬರಹ ಮೇಡಂ

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *