ಬೆಳಕಿನ ಹಬ್ಬದ ಹೊತ್ತಿನಲ್ಲಿ
ಅದೆಲ್ಲಿತ್ತೋ ಇಷ್ಟು ದಿನ ಗೊತ್ತಿಲ್ಲ,ಯಾವುದೋ ಮಾಯಕದಲ್ಲಿ ಸ್ವರ್ಗದಿಂದ ಧರೆಗಿಳಿದು ಬಂದಂತೆ ಬಣ್ಣ ಬಣ್ಣದ ಅಂಗಿ ತೊಟ್ಟಂತೆ ಬಾಸವಾಗುವ ಚಿಟ್ಟೆಗಳು. ಎಷ್ಟೊಂದು ಬಗೆಯ ಬಣ್ಣಗಳು?. ಗಾಡವಾಗಿ ರಾಚುವ ಹಳದಿ ಬಣ್ಣ,ಕಪ್ಪು ಮೈಗೆ ತಿಳಿನೀಲಿ ಬೊಟ್ಟಿನ ರೆಕ್ಕೆ,ಕಪ್ಪು ನೀಲಿ ಮಿಶ್ರಿತ ಬಣ್ಣ,ಅಪರೂಪದ ಗುಲಾಬಿ ಬಣ್ಣ,ಹೀಗೆ ಇನ್ನು ಅದೆಷ್ಟೋ ಕಲಾವಿದನ ಕುಂಚದಲ್ಲರಳಿದ ನವಿರು ಚಿತ್ರದಂತೆ. ಅವುಗಳಿಗೆ ಪೈಪೋಟಿಗಿಳಿದಂತೆ ಸಾಥ್ ನೀಡುತ್ತಿರುವ ಸಮವಸ್ತ್ರ ಧರಿಸಿದಂತೆ ಒಂದೇ ರಂಗಿನಲ್ಲಿ ಬಯಲ ತುಂಬಾ ಹಾರಾಡುವ ಕೆಂಪು ಉದ್ದ ಕಡ್ಡಿ ಆಕಾರದ ಕಪ್ಪು ರೆಕ್ಕೆಗಳಿರುವ ದುಂಬಿಗಳು. ಇನ್ನೇನು ಮಳೆ ಕಳೆದು ಸ್ವಲ್ಪ ಸ್ವಲ್ಪವೇ ಬಿಸಿಲು ಹಣಕಿ ಹಾಕುತ್ತಾ ಚಳಿಯ ಹವೆ ಹಿತವಾಗಿ ಬೀಸತೊಡಗಿದಾಗ ಈ ಚಿಟ್ಟೆ ದುಂಬಿಗಳು ಬಿಸಿಲಿಗೆ ಮೈ ಒಣಗಿಸಿಕೊಳ್ಳುತ್ತಾ ಚಳಿ ಕಾಯಿಸಲು ಬಂದಂತೆ ಹಾರತೊಡಗುತ್ತವೆ. ಚಿಟ್ಟೆ ದುಂಬಿಗಳೆಂದರೆ ಯಾರಿಗೆ ತಾನೇ ಪ್ರಿಯವಲ್ಲ?.ಅವರವರ ವಯೋಮಾನಕ್ಕನುಗುಣವಾಗಿ ಚಿಟ್ಟೆಯಂತೆ ಹಗುರವಾಗಿ ಹಾರಲು ಎಲ್ಲರೂ ಬಯಸುವವರೆ.
ಮೆಲ್ಲ ಮೆಲ್ಲನೆ ಬಯಲಿನಲ್ಲಿ ನರ್ತಿಸುತ್ತಾ ನಲಿಯುವ ಚಿಟ್ಟೆ ದುಂಬಿಗಳು ನೋಡಿದಾಕ್ಷಣ ದೀಪಾವಳಿ ಹಬ್ಬ ಬಂತೆಂದು ಮನಸು ಲೆಕ್ಕ ಹಾಕಿ ಬಿಡುತ್ತದೆ. ಎಳೆಯ ಮನಸುಗಳಿಗಂತೂ ಚಿಟ್ಟೆಯೆಂದರೆ ಅಗಾಧ ವಿಸ್ಮಯ. ಹಾಗಾಗಿ ಎಳವೆಯಲ್ಲಿ ಗಿಡದ ಮೇಲೆ ಹೂವೋ,ಚಿಟ್ಟೆಯೋ ಅಂತ ಗೊತ್ತಾಗದ ಹಾಗೆ ಕುಳಿತ್ತಿರುತ್ತಿದ್ದ ಚಿಟ್ಟೆ,ದುಂಬಿಗಳನ್ನು ಮೆಲ್ಲ ಮೆಲ್ಲನೆ ಕಳ್ಳ ಹೆಜ್ಜೆಯಿಟ್ಟು ಅಂಗೈಯೊಳಗೆ ಹಿಡಿದಿಟ್ಟು ಬಿಡುತ್ತಿದ್ದೆವು. ದುಂಬಿಗಳ ಬಾಲದಂತಹ ದೇಹದ ಕೊನೇಗೆ ದಾರ ಕಟ್ಟಿ ನಮ್ಮ ನಿಯತಿಯಂತೆ ಗಾಳಿ ಪಟದಂತೆ ಹಾರಿಸಿ ಸಂಭ್ರಮಿಸುತ್ತಿದ್ದೆವು. ದಾರ ಕಟ್ಟಿಸಿಕೊಂಡ ದುಂಬಿಗಳು ಮರುದಿನವೇ ಸತ್ತು ಬಿದ್ದಿರುವುದನ್ನು ನೋಡಿ ಹಿರಿಯರು ನಮ್ಮನ್ನು ತರಾಟೆಗೆ ತೆಗೆದುಕೊಂಡು ಇನ್ನು ಮುಂದೆ ಬಾಲಕ್ಕೆ ದಾರಕಟ್ಟದಂತೆ ಕಟ್ಟಾಜ್ಞೆ ಹೊರಡಿಸುತ್ತಿದ್ದರು. ಅವು ಭತ್ತದ ತೆನೆಗೆ ಹಾಲು ಕೊಡಲು ಬಂದಿರುವುದಾಗಿ,ಅವುಗಳನ್ನು ಕೊಂದರೆ ಪಾಪ ಸುತ್ತಿಕೊಂಡು ನಾವೆಲ್ಲಾ ಊಟ ಇಲ್ಲದೆ ಉಪವಾಸ ಬೀಳಬೇಕಾಗಬಹುದು ಎಂಬುದಾಗಿ ಗಾಬರಿ ಹುಟ್ಟಿಸಿಬಿಟ್ಟಿದ್ದರು. ಹಾಗಾಗಿ ದುಂಬಿ ಬರುವುದೆಂದರೆ ಬತ್ತದ ತೆನೆಗೆ ಹಾಲು ಕೊಡಲು ಬರುವುದು ಎಂದೇ ನಂಬಿದ್ದೆವು. ಪೀಚು ಪೀಚಾಗಿದ್ದ ತೆನೆಗಳೆಲ್ಲಾ ತುಂಬಿಕೊಳ್ಳುವುದ ಕಂಡು ದುಂಬಿಯ ಮಹಿಮೆಯೇ ಇದು ಸರಿ ಅಂತ ಬಲವಾಗಿ ನಂಬಿದ್ದೆವು. ಅದರಾಚೆಗೆ ನಮಗೆ ಏನು ತಿಳುವಳಿಕೆಯಿಲ್ಲದ್ದ ಕಾಲವದು. ಬಯಲ ತುಂಬಾ ಬತ್ತದ ಪೈರಿನ ಮೇಲೆಲ್ಲಾ ಕೂತು ಹಾರಿ,ಹಾರಿ ಕೂತು ಹೋಗುವ ದುಂಬಿಗಳ ಹಾಲು ಕೊಡುವ ಕಾಯಕಕ್ಕೆ ಇನಿತು ಭಂಗ ಬರದಂತೆ ನಾವು ಸದ್ದಿಲ್ಲದೆ ಸರಿದು ಹೋಗುತ್ತಿದ್ದೆವು. ಭತ್ತದ ತೆನೆಗೆ ಹಾಲು ಕುಡಿಸುವ ಕಲ್ಪನೆಯೇ ನಮ್ಮ ಮುಂದೆ ಒಂದು ಕತೆಯಂತೆ ತೆರೆದುಕೊಳ್ಳುತ್ತಿತ್ತು. ಅಷ್ಟರಲ್ಲಿ ತೆನೆ ತುಂಬಿ ಭತ್ತವಾಗಿ ಎಲ್ಲರ ಮನೆಯ ಅಟ್ಟದ ಕಡಿಕೆಯನ್ನು ಸೇರುತ್ತಿತ್ತು. ಪರಾಗ ಸ್ಪರ್ಷ ಕ್ರಿಯೆಗೆ ದುಂಬಿಗಳು ಬೇಕು ಅನ್ನುವುದನ್ನು ವೈಜ್ಞಾನಿಕವಾಗಿ ಹೇಳಿಕೊಟ್ಟಿದ್ದರೆ ಆ ವಯಸ್ಸಿಗೆ ಅದು ಅಷ್ಟಾಗಿ ನಾಟುತ್ತಿರಲಿಲ್ಲವೇನೋ.ಜೊತೆಗೆ ಚಿಟ್ಟೆಯಂತ ಬಣ್ಣ ಬಣ್ಣದ ನವಿರು ಕಲ್ಪನೆಗಳಿಗೆ ಎಡೆಯಾಗುತ್ತಿರಲಿಲ್ಲವೇನೋ. ಒಂದು ದುಂಬಿಯ ಬಾಲಕ್ಕೆ ದಾರ ಕಟ್ಟಿದರೆ ಅಷ್ಟೊಂದು ಅನಾಹುತ ಆಗಲಾರದು ಅಂತ ನಗಣ್ಯ ಮಾಡಿ ಬಿಡುತ್ತಿದ್ದೆವೋ ಏನೋ. ಅಂತೂ ಬಯಲ ತುಂಬಾ ಹಸಿರು ಪೈರಿನ ಗದ್ದೆ, ಕಚಗುಳಿಯಿಟ್ಟು ಸುಳಿದು ಹೋಗುವ ತಣ್ಣಗೆ ಗಾಳಿ, ಸಣ್ಣಗೆ ಗುನುಗುತ್ತಾ ರೆಕ್ಕೆ ಬೀಸುವ ದುಂಬಿ, ಚಿಟ್ಟೆ. ಹಾಲುಂಡು ಗಟ್ಟಿ ಕಾಳು ಆದದ್ದೇ ತಡ, ಸುದ್ದಿ ಸಿಕ್ಕವಂತೆ ಒಂದಷ್ಟು ಎತ್ತರದಲ್ಲಿ ರೆಕ್ಕೆ ಮಡಚದೆ ಹಾರಾಡುವ ಬಾನಾಡಿಗಳ ಗುಂಪು. ಒಂದಕ್ಕೊಂದು ಪೂರಕವಾಗಿ ಸಹಾಯಕ್ಕೆ ಒದಗಿ ಬರುವ ಅದೃಶ್ಯ ಕೈಗಳು ಅದೆಷ್ಟು?.
ಗದ್ದೆಯಲ್ಲಿ ಪೈರಿನ ತೆನೆಯಲ್ಲಿ ಹಾಲಕ್ಕಿ ಭತ್ತದ ಕಾಳು ಆಗುತ್ತಿದ್ದಂತೆ ಗದ್ದೆಗೆ ಮುಗಿ ಬೀಳುವ ಹಿಂಡು ಹಿಂಡು ಹಕ್ಕಿಗಳನ್ನು ಓಡಿಸಲು ಮಕ್ಕಳನ್ನು ನೇಮಿಸಿ ಬಿಡುತ್ತಿದ್ದರು. ಮಕ್ಕಳೇನೂ ನಿಯತ್ತಿನಲ್ಲಿ ಆ ಕೆಲಸ ಮಾಡುತ್ತಿರಲಿಲ್ಲ. ಅವರ ವಿಚಾರ ಬೇರೇನೇ ಇರುತ್ತಿತ್ತು. ಗುಂಪು ಗುಂಪು ಹಕ್ಕಿಗಳು ತೆನೆಯ ಮೇಲೆ ಕುಳಿತುಕೊಳ್ಳುತ್ತಿದ್ದಂತೆಯೇ ಕಲ್ಲಿನಿಂದಲೋ ಕ್ಯಾಟರ್ ಬಿಲ್ಲಿನಿಂದಲೋ ತಮ್ಮ ಗುರಿ ಪ್ರದರ್ಶಿಸಿದರ ಫಲವಾಗಿ ಒಂದೆರಡು ಹಕ್ಕಿಗಳು ಅನಾಯಾಸವಾಗಿ ದಕ್ಕಿ ಬಿಡುತ್ತಿದ್ದವು. ಅಂತೂ ಇಂತು ಯಾವುದೋ ಮಹಿಮೆಯಿಂದ ಯಾರ ತುತ್ತಿಗೂ ಅನ್ಯಾಯವಾಗುತ್ತಿರಲಿಲ್ಲ. ಅಷ್ಟೊತ್ತಿಗಾಗಲೇ ಬೆಳಕಿನ ಹಬ್ಬ ದೀಪಾವಳಿಯ ಆಗಮನಕ್ಕೆ ಸಡಗರದಿಂದ ಸಜ್ಜಾಗುತ್ತಿದ್ದೆವು. ಬೆಳಕಿನ ಹಬ್ಬದ ಸಂಭ್ರಮದಲ್ಲಿಎಲ್ಲವೂ ಬೆಳಕಿನ ಹೊನಲಿನಲ್ಲಿ ಮೀಯುತ್ತಿರುವಾಗ,ಕೊರೆವ ಚಳಿ ಜೋರಾಗಿ ಮತ್ತೆ ಬಿಸಿಲು ಕಾವೇರಿ,ಗಟ್ಟಿ ಕಾಳಿನ ಭತ್ತವೆಲ್ಲಾ ಅಟ್ಟದ ಕಡಿಕೆಯೊಳಗೆ ಬಂದು ಬಿದ್ದಾಗ,ಬಾನಾಡಿಗಳು ಯಾರ ಹೆದರಿಕೆಯೇ ಇಲ್ಲದೆ ಅತ್ತಿಂದಿತ್ತ ಹಾರಾಡುತ್ತಾ ಇಡೀ ಗದ್ದೆಯ ಬಯಲು ತಮ್ಮದೇ ಎಂಬಂತೆ ಭತ್ತದ ಕಾಳು ಹೆಕ್ಕುವುದರಲ್ಲಿಯೇ ನಿರತರಾಗಿ ಬಿಡುತ್ತಿದ್ದವು. ಬಿಳಿಯ ಕೊಕ್ಕರೆಗಳು ದೀಕ್ಷೆ ತೊಟ್ಟವರಂತೆ ಅಲ್ಲೇ ಬದಿಯಲ್ಲಿ ಏನನ್ನೋ ಧೇನಿಸುತ್ತಾ ಶತಪತ ಹಾಕಿಕೊಂಡಿರುತ್ತದೆ. ಸುತ್ತಣ ಗದ್ದೆ ಬಯಲುಗಳೆಲ್ಲಾ ಕಟಾವು ಮಾಡಿಕೊಂಡು ತುಸು ವಿಶ್ರಮಿಸುತ್ತಿರುವ ಹೊತ್ತಿಗೆ,ಪ್ರತಿಯೊಂದು ಕಟಾವು ಮಾಡಿದ ಗದ್ದೆಗಳಿಗೆ ಹಿಂಡು ಹಿಂಡು ಚೋರೆ ಹಕ್ಕಿ,ಗಿಳಿಗಳು ಮೊದಲೇ ಮಾತಾಡಿಕೊಂಡಿರುತ್ತಿದ್ದಂತೆ ನಿಗದಿತ ಸಮಯಕ್ಕೆ ಹಾರಿ ಬಂದು ಕಾಳು ಹೆಕ್ಕುತ್ತಾ ಉಭಯ ಕುಶಲೋಪರಿ ಮಾಡಿಕೊಂಡು,ಮತ್ತೆ ಮತ್ತೊಂದು ಗದ್ದೆ ಬಯಲಿಗೆ ತೆರಳಿ ಬಿಡುತ್ತಿದ್ದವು. ಆ ಸಮಯದಲ್ಲಿ ಗದ್ದೆಬಯಲುಗಳೆಲ್ಲಾ ಪಕ್ಷಿ ಸಂಕುಲದ ಸಮ್ಮಿಲನಕ್ಕೆ ವೇದಿಕೆಯಾಗುತ್ತಿದ್ದವು. ಒಂದೇ ಒಂದು ಹಕ್ಕಿಗಳು ಬಂಡಾಯವೆದ್ದದ್ದು,ಅಪಸ್ವರ ಎತ್ತಿದ್ದು ಕೇಳಿಸಲೇ ಇಲ್ಲ. ಸಮಪಾಲು ಸಮಬಾಳು ಅವರಿಗೆ ಯಾರು ಹೇಳಿಕೊಟ್ಟರೋ ಗೊತ್ತಿಲ್ಲ. ಹಕ್ಕಿ ಭಾಷೆಯಾದರು ತಿಳಿದಿರಬೇಕಿತ್ತು. ಆದರೆ ಕಪ್ಪು ಬಿಳಿ ರೆಕ್ಕೆಯ ಮೈನಾ ಹಕ್ಕಿ ಮಾತ್ರ ಯಾರ ಸಂಗಡವೂ ಬೆರೆಯದೆ,ಉದುರಿ ಬಿದ್ದ ಭತ್ತದ ಕಾಳುಗಳನ್ನೆಲ್ಲಾ ಇಡೀ ಪಕ್ಷಿ ಕುಲಕ್ಕೆ ಬಿಟ್ಟುಕೊಟ್ಟು ,ತಾನು ಮಾತ್ರ ಇದೇ ಸುಖವೆಂಬಂತೆ ಎಮ್ಮೆ,ದನದ ಮೈಯ ಉಣ್ಣಿ ಹೆಕ್ಕುತ್ತಾ ಅದರನ್ನು ಸ್ವಚ್ಚಗೊಳಿಸುವ ಕಾಯಕದಲ್ಲೇ ನಿರತವಾಗಿ ಬಿಡುತ್ತಿತ್ತು. ಯಾವ ತಕರಾರುಗಳು ಇಲ್ಲದೆ ತನ್ನ ಇಡೀ ಮೈಯನ್ನು ಮೈನ ಹಕ್ಕಿಗೆ ಬಿಟ್ಟು ಕೊಟ್ಟು ತನ್ನ ಪಾಡಿಗೆ ತಾನು ಇದೇ ಪರಮ ಸುಖವೆಂಬಂತೆ ದನ ಮೇಯುತ್ತಾ ಸಾಗುತ್ತಿತ್ತು. ಹೊಂದಾಣಿಕೆಯೆಂದರೆ ಇದೇ ಎಂಬ ರೂಪಕಕ್ಕೆ ಪ್ರತಿರೂಪದಂತೆ ಕಾಣುತ್ತಿತ್ತು.
ಇಲ್ಲಿ ಈಗ ಆಗೊಮ್ಮೆ ಈಗೊಮ್ಮೆ ಮೆಲ್ಲನೆ ಹನಿಯುವ ಮಳೆಯೂ ಕೂಡ ಕಡಿಮೆಯಾಗುತ್ತಾ ಬಂದಿದೆ. ಈ ಮಳೆಗಾಲದಲ್ಲಿಡೀ ಎಲ್ಲಿ ಹುಡುಕಿದರೂ ಒಂದೇ ಒಂದು ಮುಸುಕು ಹೊದ್ದು ಮಲಗಿದ ಕಂಬಳಿ ಹುಳ ಕಾಣಲೇ ಇಲ್ಲ. ಗೋಡೆಯ ಮೇಲೆ ಬಣ್ಣದ ರೆಕ್ಕೆಯ ಕನಸು ಹೊತ್ತು ಮಲಗಿ,ಕೋಶ ಪೊರೆ ಕಳಚಿ ಒಮ್ಮಿಂದೊಮ್ಮೆಗೆ ಪುತಪುತನೇ ತೆವಳುತ್ತಾ ಯಾವುದೋ ಗಹನ ಕಾರ್ಯಕ್ಕೆ ಹೊರಟಂತೆ ಭಾಸವಾಗುವ ಕರಿಯ ಕಂಬಳಿ ಹೊದ್ದ ಕಂಬಳಿ ಹುಳಗಳ ಹುಡುಕಿ ಹುಡುಕಿ ಕಣ್ಣು ಸುಸ್ತಾಗಿದೆ. ಬಣ್ಣದ ರೆಕ್ಕೆಯ ಕನಸೊಂದು ಹಾಗೆ ಸುಖಾ ಸುಮ್ಮನೆ ಮುರಿದು ಬಿತ್ತಾ? ಮನಸಿಗೆ ಏನೋ ಕಳವಳವಾಗತೊಡಗುತ್ತಿರುವಾಗಲೇ ಸಣ್ಣಗೆ ಬಿಸಿಲೇರಿ ಬೆಳಕಿನ ಹಬ್ಬ ಬಂತೆಂದು ಸೂಚನೆ ಕೊಡುತ್ತಿದೆ. ಎಲ್ಲೋ ಒಂದೆರಡು ಹಳದಿ ರೆಕ್ಕೆಯ ಚಿಟ್ಟೆಗಳು ಸಾಂಕೇತಿಕವೆಂಬಂತೆ ಪಟ ಪಟಿಸಿಕೊಂಡು ಹಾರಾಡುವುದ ಬಿಟ್ಟರೆ ಒಂದೇ ಒಂದು ದುಂಬಿಗಳು ಕಾಣ ಸಿಗಲಿಲ್ಲ. ಹಬ್ಬ ಎಲ್ಲಾದರೂ ತಪ್ಪಿ ಬಂದಿದೆಯಾ ಅಂತ ಕಸಿವಿಸಿಯಾಗುತ್ತಿದೆ. ಗದ್ದೆ ಬಯಲಿನಲ್ಲಿ ಪೈರಿನಂತೆ ಎದ್ದ ಕಾಂಕ್ರೀಟ್ ಕಟ್ಟಡಗಳ ನಡುವೆ ತೆನೆಗೆ ಹಾಲು ಕುಡಿಸಲು ಹೋದ ದುಂಬಿಗಳು ಎಲ್ಲೋ ದಾರಿ ತಪ್ಪಿ ನಾಪತ್ತೆಯಾಗಿವೆಯಾ..? ಅಂತ ಸಂಶಯ ಬರುತ್ತಿದೆ.
ಇಲ್ಲಿ ಒಂದೆರಡು ಗಿಡಗಳು,ಅದರಲ್ಲಿ ಬಿಟ್ಟ ಹೂಗಳು ಹೀಚು ಕಾಯಾಗಿ ಹಣ್ಣಾಗಲು ಹವಣಿಸುತ್ತಾ ದುಂಬಿ ಚಿಟ್ಟೆಗಳನ್ನು ಕಾದು ಕಾದು ಬಾಡಿ ಹೋಗುತ್ತಿವೆ. ದುಂಬಿಯ ಬಾಲಕ್ಕೆ ದಾರ ಸುತ್ತಿ ಹಾರಿಸಿದ್ದಕ್ಕೆ ಪಾಪ ತಟ್ಟಿತ್ತಾ! ಮುಂದೆ ಉಪವಾಸ…ಏನೆಲ್ಲಾ ಮನದೊಳಗೆ ನೂರೆಂಟು ದಿಗಿಲು. ಎಲ್ಲ ಮರೆತಂತೆ ಉದುರಿ ಬಿದ್ದು ಹುಟ್ಟಿದ ಚೆಂಡು ಹೂಗಳು ಮಾತ್ರ ಬರುವ ದೀಪಾವಳಿಗೆ ಸ್ವಾಗತ ಕೋರಲೆಂಬಂತೆ ಅರಳಿ ನಿಂತುಕೊಂಡಿದೆ. ಒಳ ಕೋಣೆಯ ಮೂಲೆಯಲ್ಲಿರುವ ಮಣ್ಣಿನ ಹಣತೆಯೊಂದು ಮಾತ್ರ,ಸ್ವಲ್ಪ ಎಣ್ಣೆ ಬತ್ತಿ ಇಟ್ಟರೆ ಸಾಕು ..ಇಡೀ ಜಗತ್ತನ್ನೇ ಬೆಳಗುವೆನೆಂಬ ಆಶಾವಾದದಲ್ಲಿ ದಾರಿ ಕಾಯುತ್ತಾ ಕೂತಿದೆ.
-ಸ್ಮಿತಾ ಅಮೃತರಾಜ್.ಸಂಪಾಜೆ.
‘ಗದ್ದೆ ಬಯಲಿನಲ್ಲಿ ಪೈರಿನಂತೆ ಎದ್ದ ಕಾಂಕ್ರೀಟ್ ಕಟ್ಟಡಗಳ ನಡುವೆ ತೆನೆಗೆ ಹಾಲು ಕುಡಿಸಲು ಹೋದ ದುಂಬಿಗಳು ಎಲ್ಲೋ ದಾರಿ ತಪ್ಪಿ ನಾಪತ್ತೆಯಾಗಿವೆಯಾ..? ‘.. ಇದು ವಾಸ್ತವಕ್ಕೆ ಹಿಡಿದ ಕನ್ನಡಿ ಅನಿಸುತ್ತದೆ..ಚೆಂದದ ಬರಹ.
ಥ್ಯಾಂಕ್ಸ್ akkaa
ಚಂದದಬರಹ
Beautiful article. ಬಾಲ್ಯದ ಮರೆಗೆ ಸರಿದಿದ್ದ ಕೆಲವು ಸುಂದರ ನೆನಪುಗಳನ್ನೂ ನೆನಪಿಗೆ ಬರುವಂತೆ ಮಾಡಿತು ಮೇಡಂ ನಿಮ್ಮ ಬರಹ . ಅದರ ಜೊತೆಗೆ ಹಂತ ಹಂತವಾಗಿ ಬದಲಾಗುತ್ತಾ ಬಂದ ಕಾಲದ ಪರಿಚಯ , ನೈಸ್ .
ನಮ್ಮ ಬಾಲ್ಯದ ನೆನಪಿನ ಅಲೆಗಳೆದ್ದು ಬಂದಂತಾಯ್ತು..ಕಾಲ ಮರೆತು ಹೋಯ್ತು.. ಚಂದದ ಲೇಖನ.