ವಿಶೇಷ ದಿನ

ದೀಪಾವಳಿ

Share Button

 

ಕಾಣಬೇಕಿದೆ  ಬಾಳಿನುದ್ದಕು ಬೆಳಕ ಜಾಡು
ಬಾಳ ಯಾನದ ಮಧುರ ನೆನಪಿಗದೇ ಹಾಡು
ಮತ್ತೆ ಬರುತಲಿ ದೀಪ ಬೆಳಗುವ ದೀಪಾವಳಿ
ಮನೆ ಮನದ ತುಂಬ ಒಲವ ಸಿಹಿ ಬಳುವಳಿ.

ಮನೆಗಿಷ್ಟು ಚಂದ ಸುಣ್ಣ ಬಣ್ಣ ಒಪ್ಪ ಓರಣ
ಪೂಜೆ ಪುನಸ್ಕಾರವೆಂದೆನ್ನೆ ಹಸಿರು ತೋರಣ
ಸಿಹಿಯಡುಗೆ ಹೋಳಿಗೆ ಪಾಯಸ ಹೂರಣ
ಮೂರ್ನಾಲ್ಕು ದಿನ ಮನಕೆ ಸಂತಸದ ಚಾರಣ.

ಲೋಕ ಕಲ್ಯಾಣಾರ್ಥ ಶ್ರೀ ಕೃಷ್ಣಗೈದ ಬಲ ಪ್ರಹಾರ
ಅಸುರರೆಲ್ಲರ ಪ್ರತಿನಿಧಿ ನರಕಾಸುರನ ಸಂಹಾರ
ಪ್ರತೀತಿ ಗಂಗೆಯಲಿ ಮಿಂದೆದ್ದು ಪಾಪ ಪರಿಹಾರ
ನರಕ ಚತುರ್ದಶಿ ದಿನವಾಗಿ ಅಭ್ಯಂಜನದಲಿ ಪರಿವಾರ.

ತಮವನಳಿಸುವ ಕಾತುರ, ನೇಸರ ಮತ್ತೆ ಬರಲದೆ
ದಿನದ ಸಂಭ್ರಮ, ರಾತ್ರಿ ಕಾರಿರುಳ ಅಮವಾಸ್ಯೆ.
ಎಂದಿನಂತಲ್ಲ ದೀಪಾರಾಧನೆಯ ಸ್ವಾಗತದಲೇ
ಬರುವಳವಳು ಧನಲಕ್ಷ್ಮಿ ನೀಗುತೆಲ್ಲರ ಸಮಸ್ಯೆ.

ಎಲ್ಲಿ ನೋಡಲ್ಲಿ ಶ್ರೀ ಕೃಷ್ಣ ಲೀಲೆ ಈ ಜಗದಲಿ
ಮತ್ತೆ ತೃತೀಯಕೆ ಗೋಪಾಲಕನ ಜಯಭೇರಿ
ಗೋವರ್ಧನ ಗಿರಿಯನ್ನೆತ್ತೆ ಇಂದ್ರನವನೆ ಗಲಿಬಿಲಿ
ಇದೆಯಿಂದಿಗೂ ಪೂಜೆಗೊಂಡ ಗೋವುಗಳ
ಸಾಲ ಅಲಂಕೃತ ಪ್ರಭಾತ್ಭೇರಿ‌.

ಸಡಗರಕೆ ಮೂರಲ್ಲ ಮಾಸ ಪೂರ್ಣ ಹರ್ಷವು
ಕಾರ್ತಿಕದ ದೀಪವದೆ ಸಾಲು ಸಾಲು ದೀಪ ಅವಳಿ
ಮನೆ ಮಂದಿರದ ಹೊಸ್ತಿಲಾಚೆ ಕೂಡ ಚಂದವು
ಬೆಳಕ ಹಬ್ಬ ಕಳೆದು ಮಬ್ಬ ಉತ್ಸಾಹವು ಬಾಳಲಿ.

ಬರಲಿ ಬರಲಿ ದೀಪಾವಳಿ ವರುಷಕಾಗೋ ಹರುಷ ಹೊತ್ತು.
ಅಹಮಿಕೆಯ,ಸಂಕುಚಿತತೆಯ ತಮವನೆಲ್ಲ
ಕಳೆವ ಗುರಿ ಹೊತ್ತು.
ಸಹನೆ,ಸಹಮತದ ಬಾಳ್ವೆಗಣಿಯಾಗುವ ಸ್ವಚ್ಚ
ಮನದ ಬೆಳಕನಿತ್ತು
ಬರಲಿ ಬರಲಿ ದೀಪಾವಳಿ ವರುಷಕಾಗೋ
ಹರುಷ ಹೊತ್ತು.

-ಲತಾ(ವಿಶಾಲಿ) ವಿಶ್ವನಾಥ್

5 Comments on “ದೀಪಾವಳಿ

  1. ಇಡೀ ದೀಪಾವಳಿ ಹಬ್ಬದ ಆಚರಣೆಯನ್ನು ಒಂದು ಕವನದಲ್ಲಿ ಹಿಡಿದಿಡಲಾಗಿದೆ . ಚೆನ್ನಾಗಿದೆ .

  2. ದೀಪಾವಳಿ ಹಬ್ಬದಾಚರಣೆ ಬಗೆಗಿನ ಕವಿತೆ ಚೆನ್ನಾಗಿದೆ.

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *