ದೀಪಗಳ ಸಾಲಿನ ದೀಪಾವಳಿ
ಸನಾತನ ಧರ್ಮದ ಸಂಪ್ರದಾಯ ಸಂಸ್ಕೃತಿಯ ತವರೂರು ನಮ್ಮ ಭಾರತ. ಮೂಕ್ಕೋಟಿ ದೇವರಗಳ ಆರಾಧನೆಯ ನೆಲೆಯೂರು ಭಾರತ. ಯುಗದ ಆದಿಯ ಹಬ್ಬ ಯುಗಾದಿಯಿಂದ ಆರಂಭವಾಗುವ ನೂರಾರು ಹಬ್ಬಗಳಲ್ಲಿ ದೀಪಗಳ ಆವಳಿಯ ಮೂಲಕ ಬಾಳಿನ ಅಂಧಕಾರವನ್ನು ಹೋಗಲಾಡಿಸಿ, ಬಾಳಿನಲ್ಲಿ ಬೆಳಕನು ತರುವ ಹಬ್ಬ ದೀಪಾವಳಿಗೆ ವಿಶೇಷ ಸ್ಥಾನವಿದೆ.
ಪುರಾಣಗಳ ಪ್ರಕಾರ ಲೋಕ ರಕ್ಷಕ ಶ್ರೀವಿಷ್ಣುವು ವಾಮನನ ಅವತಾರವೆತ್ತಿ ಬಲಿ ಚಕ್ರವರ್ತಿಯನ್ನು ತ್ರಿವಿಕ್ರಮನಾಗಿ ಪಾತಾಳಕ್ಕೆ ಕಳಿಸಿದ ಶುಭ ದಿನವು, ದಾಶಠಥಿಯು ದಶಕಂಠನ ಸಂಹರಿಸಿ ಅಯೋಧ್ಯೆಗೆ ಮರಳಿದ ಘಳಿಗೆಯೂ, ಗೋಕುಲ ನಂದನ ಕೃಷ್ಣನು ಗೋವರ್ಧನ ಗಿರಿಯನ್ನು ಕಿರುಬೆರಳನಿಂದೆತ್ತಿ ಗೋಕುಲದ ಜನರನ್ನು ಇಂದ್ರನಿಂದ ರಕ್ಷಿಸಿದ ಸಮಯವು, ನೀಲಮೇಘ ಶ್ಯಾಮನು ನರಕಾಸುರನ ನರಕಕ್ಕೆ ಅಟ್ಟಿ, ಹದಿನಾರು ಸಾವಿರ ನಾರಿಯರ ಬಂಧನದಿಂದ ಮುಕ್ತಗೊಳಿಸಿದ ಕ್ಷಣಗಳನು ಮೆಲುಕು ಹಾಕುತ್ತ, ನಮ್ಮ ಪೂರ್ವಜರ ಸ್ಮರಣೆ ಮಾಡುತ, ಶ್ರೀಲಕ್ಷ್ಮಿಯ ಕೃಪಾ ಕಟಾಕ್ಷವು ನಮಗೆ ಸಿಗಲೆಂದು ಬೇಡುತ, ದುಷ್ಟ ಮನೋವಿಕಾರಗಳನು ಸುಟ್ಟು ಹಾಕುತ, ದೀಪಗಳ ಬೆಳಕು ಬಾಳಲಿ ಸಂತೋಷ, ಸಮೃದ್ಧಿ, ಶಾಂತಿಯ ತರಲೆಂದು ಆಚರಿಸುವ ಹಬ್ಬವೇ ದೀಪಾವಳಿ.
ಮಣ್ಣಿನ ದೀಪಗಳನ್ನು ಸಾಲಾಗಿ ಹಚ್ಚುವ ಮೂಲಕ ಮನದ ಮನೆಯ ಅಂಧಕಾರವೆಲ್ಲಾ ಕಳೆಯುವ ಹಬ್ಬವು ದೀಪಾವಳಿ. ಆದರೆ ನೂರಾರು ವರ್ಷಗಳ ಹಿಂದೆ ದೀಪಗಳ ಸಾಲುಗಳ ಜೊತೆ ಜೊತೆಯಲ್ಲಿಯೇ ಪಟಾಕಿಗಳ ಸುಡುವ ಆಚರಣೆಯು ಆರಂಭವಾದ ನಂತರ ಪರಿಸರದ ಮೇಲೆ ವ್ಯತಿರಿಕ್ತವಾದ ಪರಿಣಾಮಗಳು ಉಂಟಾಗತೊಡಗಿತು.
ಬೆಳಕಿನ ಹಬ್ಬ ಜೀವನದಲ್ಲಿ ಬೆಳಕನು ತರುವ ಬದಲಾಗಿ ಸಾವಿರಾರು ಜನರ ಬಾಳನು ಅಂಧಕಾರದಲ್ಲಿ ಕಳೆಯುವಂತೆ, ಪ್ರಾಣಿ ಪಕ್ಷಿಗಳ ಸಂಕಟಕ್ಕೆ, ಬೆಂಕಿ ಅವಘಡಗಳಿಗೆ ಕಾರಣವಾಗ ತೊಡಗಿತು.
ಸರ್ಕಾರವು ಪರಿಸರ ಹಾಗೂ ಜನರ ಹಿತದೃಷ್ಟಿಯಿಂದ 125 ಡೆಸಿಬೆಲ್ ಸಾಮರ್ಥ್ಯಕ್ಕಿಂತ ಹೆಚ್ಚಿನ ಪಟಾಕಿಗಳನ್ನು ಮಾರಾಟ ಮತ್ತು ಬಳಸುವುದನ್ನು ನಿಷೇಧಿಸಿದ್ದರು ಸಹ ನಮ್ಮ ಪ್ರಜ್ಞಾವಂತ ಜನರು ಮೂರ್ಖರಂತೆ ಮರೆತು ಪಟಾಕಿಗಳ ಹಚ್ಚಿ ಸಂಭ್ರಮಿಸುತ್ತಿರುವುದು ದುರಂತವೇ ಸರಿ. ಪರಿಸರ ಸ್ನೇಹಿ ದೀಪಾವಳಿಯ ಆಚರಣೆಯನ್ನು ನಾವು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಆಚರಿಸಬೇಕಾಗಿದೆ.
ಏಕೆಂದರೆ ದೀಪಾವಳಿಯ ಸಮಯದಲ್ಲಿ ಆಗುವ ಪಟಾಕಿಗಳ ಅನಾಹುತಗಳು ಅಸಂಖ್ಯಾತ. ಪಟಾಕಿ ತಯಾರಿಸುವ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುವ ಲಕ್ಷಾಂತರ ಜನರು ರೋಗಗಳು ಹಾಗೂ ಅಗ್ನಿ ದುರಂತಗಳಿಗೆ ಬಲಿಯಾಗುತ್ತಿದ್ದಾರೆ.
ದೀಪಾವಳಿಯ ದಿನದಂದು ಮುಂಜಾಗ್ರತಾ ಕ್ರಮಗಳಿಲ್ಲದೇ ಪಟಾಕಿ ಸಿಡಿಸುವಾಗ ಕಣ್ಣುಗಳನ್ನು ಕಳೆದುಕೊಂಡಂತಹ ಚಿಕ್ಕ ಮಕ್ಕಳನ್ನು ನೋಡಿದ್ದೇವೆ. ಪಟಾಕಿಗಳ ಅಬ್ಬರದಿಂದ ಅನಾರೋಗ್ಯ ಪೀಡಿತರು, ಹೃದಯ ರೋಗಿಗಳು, ಬಾಣಂತಿಯರು, ಚಿಕ್ಕ ಮಕ್ಕಳು ಭಯಗೊಂಡು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರಾಣಿ ಪಕ್ಷಿಗಳು ಕಿವುಡುತನಕ್ಕೆ ಒಳಗಾಗುತ್ತವೆ. ಪರಿಸರದಲ್ಲಿ ವಾಯು, ಶಬ್ಧ ಮಾಲಿನ್ಯವಾಗುವುದರ ಜೊತೆಗೆ ಪಟಾಕಿಗಳ ತ್ಯಾಜ್ಯದಿಂದ ವಾತಾವರಣ ಕಲುಷಿತಗೊಳ್ಳುತ್ತದೆ. ಬಾಣ ಬಿರುಸಿನ ಪಟಾಕಿಗಳಿಂದ ರೈತರ ಬಣವೆ, ದಾಸ್ತಾನು ಕೊಠಡಿ, ಮನೆಗಳು ಬೆಂಕಿಗೆ ಬಲಿಯಾಗುತ್ತಿದೆ. ನಾವು ಸೇವಿಸುವ ಗಾಳಿ, ಕುಡಿಯುವ ನೀರು, ವಾಸಿಸುವ ಭೂಮಿಯು ವಿಷಕಾರಿಯಾಗುತ್ತದೆ. ಇದರ ಜೊತೆಯಲ್ಲಿಯೇ ಹಬ್ಬದ ಸಮಯದಲ್ಲಿ ಅಂಗಡಿಗಳಿಂದ ತರುವ ವಿಷಪೂರಿತ ರಾಸಾಯನಿಕ ಹೊಂದಿರುವ, ಬಾಯಿಯಲ್ಲಿ ನೀರೂರಿಸುವ ಸಿಹಿ ತಿನಿಸುಗಳು ನಮ್ಮ ಆರೋಗ್ಯಕ್ಕೆ ಮಾರಕವಾಗುತ್ತಿವೆ.
ನಾವು ಆಚರಿಸುವ ಹಬ್ಬಗಳು ಪರಿಸರಕ್ಕೆ ಮಾರಕವಾಗುವ ಬದಲು ಸ್ನೇಹಿಯಾಗುವಂತೆ ಆಚರಿಸುವ ಮೂಲಕ ಹಬ್ಬಗಳ ಸಂಭ್ರಮವನ್ನು ಸವಿಯಬೇಕು. ಇದಕ್ಕಾಗಿ ನಾವುಗಳು 125 ಡೆಸಿಬೆಲ್ ಸಾಮರ್ಥ್ಯಕ್ಕಿಂತ ಕಡಿಮೆಯ ಪಟಾಕಿಗಳನ್ನು ಮಾತ್ರ ಸಿಡಿಸುವ. ರೋಗಿಗಳು ಬಾಣಂತಿಯರು, ವಯೋವೃದ್ಧರು, ಮಕ್ಕಳು, ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ, ಚಿಕ್ಕ ಮಕ್ಕಳು ಪಟಾಕಿ ಹಚ್ಚುವಾಗ ದೊಡ್ಡವರು ಜೊತೆಯಲ್ಲಿರುವ, ಮಣ್ಣಿನ ಹಣತೆಗಳನ್ನು ಹೆಚ್ಚಾಗಿ ಬಳಸುವ, ಪಟಾಕಿ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ, ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯೊಳಗೆ ಪಟಾಕಿಗಳನ್ನು ಸುಡದಂತೆ ಪ್ರತಿಜ್ಞೆಯ ಮಾಡುವ, ಆಸ್ಪತ್ರೆ, ಹುಲ್ಲಿನ ಬಣವೆ, ಗುಡಿಸಲು, ಜನಜಂಗುಳಿಗಳಿಂದ ದೂರದಲ್ಲಿ ಪಟಾಕಿ ಹಚ್ಚುವ, ಕಣ್ಣುಗಳು, ಕಿವಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವ, ಸೂಕ್ತ ಉಡುಪುಗಳನ್ನು ಮಾತ್ರ ಧರಿಸುವ, ಸ್ವದೇಶಿ ಪಟಾಕಿಗಳ ಮಾತ್ರ ಬಳಸುವ, ಪ್ಲಾಸ್ಟಿಕ್ ಪ್ಯಾಕಿಂಗ್ ಉಡುಗೊರೆಗಳ ಬದಲಾಗಿ ನೈಸರ್ಗಿಕ ಹಾಗೂ ನಾವೇ ಸ್ವತಃ ಪರಿಸರ ಸ್ನೇಹಿ ಉಡುಗೊರೆಗಳನ್ನು ನೀಡುವ, ಹಬ್ಬಕ್ಕಾಗಿ ಖರ್ಚು ಮಾಡುವ ದುಂದು ವೆಚ್ಚದ ಬದಲು ಅದೇ ಹಣವನ್ನು ಅನಾಥರು, ವೃದ್ಧರು, ಬಡವರಿಗೆ ಬಟ್ಟೆಗಳನ್ನು ಕೊಡಿಸುವ ಮೂಲಕ ನಾವೆಲ್ಲರೂ ದೀಪಗಳ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋಣ.
ಮಾನವೀಯತೆಯೇ ಮಣ್ಣಿನ ಹಣತೆಯಲ್ಲಿ, ಸಹಬಾಳ್ವೆ ಪ್ರೀತಿಯೇ ಎಳ್ಳಿನ ತೈಲವನ್ನು ಹಾಕಿ, ಸ್ನೇಹ ಸಹೋದರತ್ವವೇ ಹೊಸೆದ ಬತ್ತಿಯನ್ನಿಟ್ಟು, ಸಂಸ್ಕಾರ ಸಂಸ್ಕೃತಿಯೇ ಬೆಳಕನ್ನು ಹಂಚುವ. ಅರಿಷಡ್ವರ್ಗ, ಅಷ್ಟ್ಮದಗಳ ಸುಟ್ಟು ಹಾಕುತ, ಸಿಡಿಮದ್ದು ಪಟಾಕಿಗಳ ಹಾವಳಿ ಬೀಡುವ. ಪ್ರಾಣಿ ಪಕ್ಷಿಗಳ ಉಳಿವಿಗಾಗಿ ಚಿಂತಿಸುತ, ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ಬನ್ನಿರಿ…
-ಶಿವಮೂರ್ತಿ.ಹೆಚ್. ದಾವಣಗೆರೆ.
ಅದ್ಬುತ ವಿಚಾರ ಮಾಲಿಕೆ
ತುಂಬು ಹೃದಯದ ಧನ್ಯವಾದಗಳು ಸರ್..
ನಮ್ಮ ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸಿ ಹುರಿದುಂಬಿಸುತ್ತಿರುವ ಸುರಹೊನ್ನೆ ಪತ್ರಿಕೆಯ ಸಂಪಾದಕರು ಮುದ್ರಣಕಾರರು ಸಿಬ್ಬಂದಿ ವರ್ಗದವರಿಗೂ ಹೃತ್ಪೂರ್ವಕ ಧನ್ಯವಾದಗಳು. ಹಾಗೂ ದೀಪಗಳ ಹಬ್ಬ ದೀಪಾವಳಿಯ ಶುಭಾಶಯಗಳು.
Tumba chennagide sir vandhu lekana pragnyavantha vichar Samaja parivarthge thumba outtu Kottidiri. It’s beautiful words cannot express how much impressive the article is! It’s serving educative purpose also.
ನಿಮ್ಮ ಪ್ರೋತ್ಸಾಹವೂ ಸದಾ ಹೀಗೇ ಇರಲಿ ಮೇಡಂ. ತುಂಬು ಹೃದಯದ ಧನ್ಯವಾದಗಳು.
ದೀಪಾವಳಿ ಹಬ್ಬದ ಹಿನ್ನಲೆ , ಆಚರಣೆ, ಪಟಾಕಿ ಹಚ್ಚುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಎಲ್ಲವನ್ನು ಸ್ಟೆಪ್ ಬೈ ಸ್ಟೆಪ್ ವಿವರಿಸಿದ ರೀತಿ ಚೆನ್ನಾಗಿದೆ .
ತುಂಬು ಹೃದಯದ ಧನ್ಯವಾದಗಳು ಹಿರಿಯರೇ
ಮನ ಮುಟ್ಟುವ ಕವನ.
ತುಂಬು ಹೃದಯದ ಧನ್ಯವಾದಗಳು ಹಿರಿಯರೇ