ಸಮುದ್ರದ ನೀರಿನಿಂದ ಉಪ್ಪು ತಯಾರಿಸುವುದು ನಮಗೆ ಗೊತ್ತಿರುತ್ತದೆ. ಆದರೆ 3000 ವರ್ಷಗಳಿಂತ ಹಿಂದಿನ ಪುರಾತನ ವಿಧಾನದಿಂದ, ಸಮುದ್ರದ ನೀರು ಬಳಸದೆ, ಪರ್ವತಗಳ ಹತ್ತಿರದಲ್ಲಿ ಅತ್ಯಂತ ಉತ್ತಮ ಗುಣಮಟ್ಟದ ಉಪ್ಪು ತಯಾರಿಸುತ್ತಿರುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ.
ದಕ್ಷಿಣ ಅಮೇರಿಕಾದಲ್ಲಿರುವ ಪೆರು ದೇಶದಲ್ಲಿ ಮರಾಸ್ ಎನ್ನುವ ಪ್ರದೇಶದಲ್ಲಿ ಪರ್ವತಗಳ ನಡುವೆ, ಸುಮಾರು 11000 ಅಡಿಗಳಷ್ಟು ಎತ್ತರದಲ್ಲಿ ನೈಸರ್ಗಿಕ ವಿಧಾನದಲ್ಲಿ ಉಪ್ಪು ತಯಾರಿಸುವುದನ್ನು ಕಳೆದ 3000 ವರ್ಷಗಳಿಂದ ಮಾಡಲಾಗುತ್ತಿದೆ. ಸುಮಾರು 3500 ಹೊಂಡಗಳನ್ನು ಉಪ್ಪು ತಯಾರಿಸಲು ಇಲ್ಲಿ ನಿರ್ಮಿಸಲಾಗಿದೆ. ಸಮುದ್ರದ ನೀರಿಗಿಂತ 6 ರಿಂದ 9 ಪಟ್ಟು ಹೆಚ್ಚು ಉಪ್ಪಿನ ಅಂಶ ಹೊಂದಿರುವ ಬಿಸಿನೀರಿನ ಚಿಲುಮೆಯೊಂದರಿಂದ ಬರುವ ನೀರನ್ನು ಈ ಹೊಂಡಗಳಲ್ಲಿ ತುಂಬಿಸಲಾಗುತ್ತದೆ.
ಬಿಸಿಲಿಗೆ ಈ ಹೊಂಡಗಳಲ್ಲಿರುವ ನೀರು ಆವಿಯಾದಾಗ, ಅತ್ಯಂತ ಉತ್ತಮ ಗುಣಮಟ್ಟದ ಉಪ್ಪು ದೊರೆಯುತ್ತದೆ. ಪುಟ್ಟ ಪುಟ್ಟ ಹೂವಿನಂತೆ ಇರುವ ಉಪ್ಪು, ಹರಳು ಉಪ್ಪು ಮತ್ತು ಪಿಂಕ್ ವರ್ಣದ ಉಪ್ಪು ಇಲ್ಲಿ ದೊರೆಯುತ್ತದೆ.
ಪ್ರತಿವರ್ಷ 150 ರಿಂದ 200 ಟನ್ ಉಪ್ಪು ಮಾತ್ರ ಇಲ್ಲಿಂದ ಹೊರತಗೆಯುವ ಸ್ಥಳೀಯರು, ಈ ಪ್ರದೇಶ ಮತ್ತು ಪುರಾತನ ವಿಧಾನವನ್ನು ಸಂರಕ್ಷಿಸಿಕೊಳ್ಳಲು ಅದ್ಯತೆ ನೀಡಿದ್ದಾರೆ.
ಕಾರ್ಖಾನೆಗಳಲ್ಲಿ ನೂರಾರು ಟನ್ ಉಪ್ಪು ತಯಾರಿಸಿ, ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿ, ಜನಸಾಮಾನ್ಯರಿಗೆ ಮಾರಾಟ ಮಾಡುತ್ತಿರುವ ಇಂದಿನ ದಿನಗಳಲ್ಲಿ, 3000 ಕ್ಕೂ ಹೆಚ್ಚು ವರ್ಷಗಳಿಂದ ನೈಸರ್ಗಿಕವಾಗಿ ತಯಾರಿಸಲಾಗುತ್ತಿರುವ ಈ ಪ್ರದೇಶ ಮತ್ತು ಅದನ್ನು ಕಾಪಾಡಿಕೊಳ್ಳುತ್ತಿರುವ ಸ್ಥಳೀಯರನ್ನು ಕುರಿತು ಹೆಮ್ಮೆ ಎನ್ನಿಸುತ್ತದೆ.
-ಉದಯಶಂಕರ ಪುರಾಣಿಕ
ಹೊಸ ವಿಚಾರದಿಂದ ಕೂಡಿದ ಲೇಖನ , ಮಾಹಿತಿಯುಕ್ತವಾಗಿದೆ
ವಿಶಿಷ್ಟ ಮಾಹಿತಿಯನ್ನು ತಿಳಿಯಪಡಿಸಿದಿರಿ…ಧನ್ಯವಾದಗಳು .
ಸಮುದ್ರದಿಂದ ಉಪ್ಪು ತಯಾರಿಕೆ ನೈಸರ್ಗಿಕ ವಿಧಾನ ಹೊರತು ಬೇರೆ ವಿಧಾನದಿಂದಲೂ ಆಗುತ್ತದೆಯೆ ?
ಒಳ್ಳೆಯ ಮಾಹಿತಿಯುಕ್ತ ಲೇಖನ…ಹೊಸ ವಿಷಯವೊಂದು ತಿಳಿದಂತಾಯಿತು.