ಅವ್ವ ಮತ್ತು ಅಬ್ಬಲ್ಲಿಗೆಯೆಂಬ ನವಿರು ಕವಿತೆಗಳ ದಂಡೆ.

Share Button

ಈ ಕವಿತೆಗಳು ಮತ್ತು ಹೂವುಗಳು ಬೇರೆ ಬೇರೆಯಲ್ಲ ಅಂತ ಅನ್ನಿಸುತ್ತಿದೆ. ಹಿತ್ತಲಿನ ಮೂಲೆಯಲ್ಲಿ ಯಾರ ದೇಖರೇಖಿಯೂ ಇಲ್ಲದೆ ತಮ್ಮಷ್ಟಕ್ಕೆ ತಾವೇ ಅರಳಿಕೊಂಡ ಸುಮಗಳು ತಮ್ಮ ಪರಿಮಳದ ಮೂಲಕವಷ್ಟೇ ಇಡೀ ಜಗತ್ತನ್ನ ವ್ಯಾಪಿಸಿಕೊಳ್ಳುತ್ತದೆ. ಕವಿತೆಯೂ ಕೂಡ ಅಷ್ಟೇ ತಾನೇ? . ಇಲ್ಲದಿದ್ದರೆ ಯಾವುದೋ ಹಳ್ಳಿ ಮೂಲೆಯಲ್ಲಿರುವ ನಾನು ಮತ್ಯಾವುದೋ ಊರಿನಲ್ಲಿರುವ ಶೋಭಾ, ಹೇಗೆ ಮುಖ:ತ ಭೇಟಿಯಾಗದಿದ್ದರೂ ಪರಿಚಯವಾಗಿದ್ದೇವೇ?. ಬಹುಷ; ಕವಿತೆಯ ಗಂಧವಷ್ಟೇ ನಮ್ಮೆಲ್ಲರನ್ನು ಬೆಸೆಯುವ ತಂತು ಅಂತ ಬಲವಾಗಿ ಅನ್ನಿಸತೊಡಗಿದೆ.  ಕವಿತೆಯ ಸಖ್ಯದಿಂದಾಗಿ ಒಡನಾಟಕ್ಕೆ ದಕ್ಕಿದವರು ಅದೆಷ್ಟೋ ಮಂದಿ. ಹೀಗೆ ಕವಿತೆಯ ಮೂಲಕವೇ ಪರಿಚಯವಾದವರು ಉತ್ತರಕನ್ನಡದದ ಸಿದ್ದಾಪುರದ ಶೋಭಾ ಹೀರೇಕೈ ಕಂಡ್ರಾಜಿ.

ಪ್ರತಿದಿನ ಅವಧಿ ಅಂತರ್ಜಾಲ ಪತ್ರಿಕೆಯನ್ನು ಕಣ್ಣಾಡಿಸುವ ಗೀಳು ನನಗೆ. ಶೋಭಾ ಹೀರೆಕೈ ಯವರ ಕವಿತೆಯ ದಂಡೆ ಸಿಕ್ಕಿದ್ದು ಕೂಡ ಅವಧಿಯ ಜಗಲಿಯಲ್ಲಿಯೇ. ಅವರ ನವಿರು ನವಿರು ಕವಿತೆಗಳ ಪರಿಮಳಕ್ಕೆ ಮಾರು ಹೋದದ್ದು, ಪರಿಚಯವಾಗಿ ಗೆಳತಿಯರಾದದ್ದು, ತದನಂತರ ಅವರ ಅವ್ವ ಮತ್ತು ಅಬ್ಬಲ್ಲಿಗೆ ದಂಡೆ ನಮ್ಮ ಮನೆಯ ಜಗಲಿಯ ಮೇಲೂ ಬಂದು ಕುಳಿತ್ತದ್ದು .. ಎಲ್ಲಾ ತೀರಾ ನಿನ್ನೆ ಮೊನ್ನೆಯ ಸಂಗತಿಗಳು. ಈಗ ಅವ್ವ ಮತ್ತು ಅಬ್ಬಲ್ಲಿಗೆ ದಂಡೆಯ  ಅಂಗೈಯೊಳಗಿಟ್ಟು ಅದರ ಒಂದೊಂದೇ ಹೂ ಕವಿತೆಯನ್ನು ನೇವರಿಸುತ್ತಾ ಪರಿಮಳವನ್ನು ಒಳಗೆಳೆದುಕೊಳ್ಳುತ್ತಲೇ ಅಲ್ಲಿನ ಕವಿತೆಗಳ ನಿಮ್ಮ ಮುಂದೆಯೂ ಹರವಿಕೊಳ್ಳುವ ತಹತಹಿಕೆ ನನ್ನದು.

ಮೊನ್ನೆಯಷ್ಟೇ ಬಿಡುಗಡೆಗೊಂಡ ತಾಜಾ ತಾಜ ಅಬ್ಬಲ್ಲಿಗೆಯ ದಂಡೆ 40 ಕವಿತೆಗಳ ಗುಚ್ಚ. ಇಡೀ ಸಂಕಲನದುದ್ದಕ್ಕೂ ಕವಯತ್ರಿಯ ಮನದಾಳದ ಅಭಿವ್ಯಕ್ತಿಯಿದೆ. ಇಲ್ಲಿನ ಕವಿತೆಗಳು ಮೆಲುದನಿಯಲ್ಲಿ ಮಾತನಾಡಿಕೊಂಡಂತೆ ಭಾಸವಾದರೂ, ಇಲ್ಲಿನ ಮೆಲು ಮಾತುಗಳು ಹೇಗೆ ತೀವ್ರವಾಗಿ ನಮ್ಮನ್ನು ತಟ್ಟಿ , ನಮ್ಮ ಎದೆಯೊಳಗೆ ಇಳಿದು, ನಮ್ಮದೇ ಭಾವಾಭಿವ್ಯಕ್ತಿಯಂತೆ ಕಾಡಬಲ್ಲವು ಎಂಬುದಕ್ಕೆ ಇಲ್ಲಿನ ಕವಿತೆಗಳೇ ಸಾಕ್ಷಿ.

ಶೋಭಾ ಕವಿತೆಗಳಿಗಾಗಿ ತನ್ನದಲ್ಲದ ಪ್ರಪಂಚ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ. ಆಕೆಯ ಕಣ್ಣಳತೆಯಲ್ಲಿರುವ ಜಗತ್ತು, ಅಲ್ಲಿ ತಾನು ಕಂಡುಂಡ ಅನುಭವಗಳೇ ಕವಿತೆಯಾಗಿ ರೂಪು ತಳೆದಿವೆ. ತೀರಾ ಕಾಡಿದ ಭಾವಗಳು ಎದೆಯಾಳದಿಂದ ಹೊರಹೊಮ್ಮುವಾಗ ಮಾತ್ರ ಅದು ಸಹಜವಾಗಿ ತನ್ನ ತಾಜಾತನವನ್ನು ಕಾಪಾಡಿಕೊಳ್ಳುತ್ತದೆ.  ಶೋಭಾ ಮಣ್ಣಿನ ಮಗಳು. ಕೃಷಿ ನೆಲದಿಂದ ಬಂದವಳು. ಮತ್ತೊಂದು ಕಡೆಯಲ್ಲಿ ಬದುಕುವ ಅನಿವಾರ್ಯತೆಯಲ್ಲಿ ಪೇಟೆಯಲ್ಲಿ ನೆಲೆ ನಿಂತವಳು. ಹಾಗಾಗಿ ಈ ಎರಡು ಕಡೆಗೂ ಮುಖಾಮುಖಿಯಾಗುತ್ತಲೇ ತನ್ನ ಮೂಲ ಜಗತ್ತಿಗೇ ಹೊರಳಿಕೊಂಡವರು. ಆಧುನಿಕತೆಯ ತಳಕು ಬಳುಕಿನ ಆಕರ್ಷಣೆಗಿಂತ ಸಹಜ ಸೌಂದರ್ಯ ಮತ್ತು ನೆಮ್ಮದಿ ದಕ್ಕುವುದು ನಮ್ಮ  ಮಣ್ಣಿನಲ್ಲಿಯೇ ಅನ್ನುವ ಒಂದು ಎಚ್ಚರದ ಜಾಗೃತ ಪ್ರಜ್ಞೆ ಅವರ ಕವಿತೆಗಳಲ್ಲಿದೆ. ಹಾಗಾಗಿಯೇ ಇಲ್ಲಿನ ಕವಿತೆಗಳು ಈ ನೆಲದ ಶ್ರಮಿಕರ ಬೆವರಿಗೆ ಎಂದು ಅರ್ಪಿಸಿರುವುದು ತೀರಾ ಪ್ರಾಮಾಣಿಕವಾದ ಮಾತು.

ತಮ್ಮ ಸುತ್ತ ಮುತ್ತಲಿನ ಅದೇ ಕಡಲು, ನದಿ, ತವರು, ತಾರಸಿ ,ಬಚ್ಚಲು ..ಇಂತಹುವುಗಳೇ ಕವಿತೆಯ ವಸ್ತುವಾದರೂ, ಆ ಪ್ರತಿಮೆಗಳ ಮೂಲಕ ಅವರು ಕಟ್ಟಿಕೊಡುವ ಜಗತ್ತೂ ಅದರಾಚೆಗೂ ವ್ಯಾಪಿಸಿಕೊಳ್ಳುತ್ತವೆ.  ಇಲ್ಲಿ ಕವಯತ್ರಿಗೆ ಕಡಲನ್ನು ನೋಡ ಬೇಕೆಂಬ ಅದಮ್ಯ ಆಸೆ. ತನ್ನೂರಿನ ನದಿಯೇ ಕಡಲಾಗಬೇಕೆಂಬ ಆಕೆಯ ಹಪಾಹಪಿಕೆಯಾದರೂ ನನ್ನೂರಿನ ನದಿ ಕಡಲಾಗದು ಅನ್ನುವ ಕಳವಳ ಆಕೆಗೂ ಇದೆ. ಹಾಗಾಗಿ ತಾನೇ ಕಡಲೂರಿಗೆ ಹೋಗಿ ಕಡಲನ್ನ ನೋಡಿ , ಅಲ್ಲಿಯ ಮರಳಿನ ಮೇಲೆ ಹೊಸ ತಾವೊಂದನ್ನ ಹುಡುಕಿ ಹೆಜ್ಜೆ ಊರಿ ಬರಬೇಕೆಂದು ಆಶಿಸುವ  ಕವಯತ್ರಿಯ ಆಳದೊಳಗೆ  ಬದುಕಿನ ವಿಸ್ತಾರಕ್ಕೆ ತೆರೆದುಕೊಳ್ಳುವ, ಹೊಸ ಗುರಿಯೆಡೆಗೆ ಚಲಿಸುವ ತುಡಿತವಿದೆ. ಬೇರೆ ಬೇರೆ ರೀತಿಯಲ್ಲಿ ನನ್ನನ್ನ ಕಾಡಿದ ಕವಿತೆಯಿದು. ನದಿಯನ್ನು ನೋಡುತ್ತಾ ಕಡಲಿಗೆ ಹಂಬಲಿಸುವುದು ಬದುಕಿನ  ಉತ್ಸುಕತೆಗೆ,ಜೀವಂತಿಕೆಯ ಮನೋಧರ್ಮದಂತೆ ಗೋಚರಿಸುತ್ತದೆ.  ತೊರೆಯಾಗಿ, ನದಿಯಾಗಿ ಕಡಲಾಗುವುದು ಪುಟ್ಟ ಪುಟ್ಟ ಜೀವದೊರತೆಗಳ ಗಮ್ಯ ತಾನೇ?.

ಬದಲಾದ ಕಾಲಘಟ್ಟದೊಳಗೆ ಹೇಗೆ ನಾವುಗಳು ಪರಕೀಯರಾಗಿ ಬಿಡುತ್ತೇವೆ ಎನ್ನುವ ಆತಂಕ ಕವಯತ್ರಿಗಿದೆ.  ಸೋಗೆ ಮಾಡು ಹೆಂಚಿನ ಮಾಡಾಗಿ, ಹೆಂಚು ತಾರಾಸಿಯಾಗುವ ಗಳಿಗೆ ಎಷ್ಟೆಲ್ಲ ಪಲ್ಲಟಗಳು ಘಟಿಸಿ ಬಿಡುತ್ತವೆ?. ಬಹುಷ: ಸೂಕ್ಷ್ಮ ಭಾವ ಪ್ರಪಂಚದೊಳಗಷ್ಟೇ ಮಿಡುಕುವ ಸಂಗತಿಯಿದು.  ತವರು ತಾರಸಿಯಾಗುವಾಗ  ತನ್ನ ಅಮೂಲ್ಯ  ವಸ್ತುಗಳು ಅಲ್ಲಿಗೆ ಹೊಂದಿಕೆಯಾಗದೆ ಹೊರಗುಳಿಯಬೇಕಾದ ಸಂದಿಗ್ಧತೆಯನ್ನು  ಹೇಳುತ್ತಲೇ , ಅದೇ ಮನೆಯ ಕುಡಿಯೊಬ್ಬಳು ಮದುವೆಯಾದ ತಕ್ಷಣ ಮನೆ ತವರಾಗಿ, ಕುಲದಿಂದಲೇ ಬೇರೆಯಾಗಿ ನಿಲ್ಲುವ  ಸಂಕಟದ ಕ್ಷಣಗಳನ್ನ  ಬಲು ಆರ್ದ್ರವಾಗಿ ಕಟ್ಟಿ ಕೊಡುತ್ತಾರೆ.

ಈ ಸಂಕಲನದ ಶೀರ್ಷಿಕೆ ಕವಿತೆ ’ ಅವ್ವ ಮತ್ತು  ಅಬ್ಬಲ್ಲಿಗೆ’ ಇಲ್ಲಿಯ ಎಲ್ಲ ಕವಿತೆಗಳ ಸಾರವನ್ನು ಹಿಡಿದಿಟ್ಟಂತೆ ನಿಂತ ಈ ಕವಿತೆ ಒಂದು ರೀತಿಯಲ್ಲಿ ದೇಸಿ ಸೊಗಡಿಗೆ,ತನ್ನ ಮೂಲ ಬೇರಿನಲ್ಲಿ ತಳವೂರಲು ಬಯಸುತ್ತದೆ. ಆಧುನಿಕ ವಾತಾವರಣದಲ್ಲಿ ತಾನು ಬದುಕುತ್ತಿದ್ದರೂ ಇಲ್ಲಿ ಕವಯತ್ರಿಗೆ ತನ್ನ ನೆಲದೊಡಲ ಕಂಪೇ ಹೆಚ್ಚು ಪ್ರಿಯವೆನ್ನಿಸುತ್ತದೆ. ಬದುಕನ್ನು ಕಟ್ಟಿಕೊಳ್ಳಲು ದೂರದಲ್ಲಿ ನೆಲೆನಿಂತ  ಎಲ್ಲ ಭಾವುಕ ಮನಸುಗಳ ಆಳದ ಆಸೆ ಇದುವೇ. ಹೋಗುವೆನು ನಾನು..ಹೋಗುವೆನು ನಾನು..ನನ್ನ ಬೀಡಿಗೆ, ಮಲೆಯ ನಾಡಿಗೆ ಅನ್ನುವ  ರಸಋಷಿ ಕುವೆಂಪುರವರ ಪದ್ಯ ಈ  ಹೊತಿನಲ್ಲಿ ನೆನಪಾಗುತ್ತಿದೆ.

ಮೊದಲ ಸಾರಿಗೆ ಓದಿದಾಗ ಶೋಭಾರ ಕವಿತೆಗಳು ಸ್ವಗತದ ಹಾಗೆ ಗುನುಗುನಿಸಿದಂತೆ ಅನ್ನಿಸಿದರೂ ಇಲ್ಲಿನ ಕವಿತೆಗಳಲ್ಲಿ ಒಂದು ರೀತಿಯ ಸಾತ್ವಿಕ ಬಂಡಾಯವನ್ನು , ಪ್ರಶ್ನಿಸುವ ಎದೆಗಾರಿಕೆಯನ್ನೂ ನಾವು ಗಮನಿಸ ಬಹುದು. ಇದನ್ನೇ ಅವರು- ಹೆಚ್ಚೆಂದರೆ ಏನು ಮಾಡಿಯೇನು? ಅನ್ನುವ ಕವಿತೆಯಲ್ಲಿ ಕೇಳುತ್ತಾರೆ. ಇಲ್ಲಿ ಕವಯತ್ರಿ ಅಯ್ಯಪ್ಪನೊಂದಿಗೆ ಎತ್ತುವ ಪ್ರಶ್ನೆ ಇಡೀ ಸ್ತ್ರೀ ಕುಲದ ಅಭಿವ್ಯಕ್ತಿಯಂತಿದೆ. ಅಯ್ಯಪ್ಪನನ್ನು ತಮ್ಮ ಮಗುವೇ ಎಂದು ಪರಿಭಾವಿಸಿಕೊಂಡಿರುವಾಗ , ಅವನ ಮೇಲಿನ ಪ್ರೀತಿ,ಮಮತೆಯೇ ಭಕ್ತಿಯಾಗಿ ರೂಪು ತಳೆದಿರುವಾಗ ತಾನು ನಿನ್ನನ್ನು ದರ್ಶನ ಮಾಡಿದರೆ ಹೆಚ್ಚೇನು ಆಗುವುದು? ಎಂದು ಪ್ರಶ್ನೆ ಹಾಕುತ್ತಾರೆ. ಇದರ ಹಿಂದೆ ಮಡಿ ಮೈಲಿಗೆಯೆಂಬುದು ಸಮಾಜ ಹೆಣ್ಣನ್ನು ಕಟ್ಟುಪಾಡಿನಲ್ಲಿಡಲು ಮಾಡಿದ ತಂತ್ರವಷ್ಟೆ. ಇದೊಂದು ಸಹಜ ಕ್ರಿಯೆ. ಅನ್ನುವಂತದ್ದನ್ನ ಯಾವುದೇ ಉದ್ವೇಗವಿಲ್ಲದೆ ಹೇಳಬಲ್ಲರು. ಇನ್ನು ಮುಂದಕ್ಕೆ ಹೋಗಿ ಇದು ಗರ್ಭ ಗುಡಿಯ ಕೆನ್ನೀರು. ಇದು ಯಾವತ್ತೂ ಖಾಲಿಯಾಗಲೇ ಬಾರದು. ನಮ್ಮೊಳಗಿನ ಜೈವಿಕ ಕ್ರಿಯೆ ಅದು ಮೈಲಿಗೆಯಲ್ಲ  ಅದು ಪವಿತ್ರವಾದದ್ದು ಅನ್ನುವುದನ್ನ ನಿರ್ಭಿಡೆಯಾಗಿ ಹೇಳುತ್ತಾರೆ.

ನಮ್ಮ ಹೆಣ್ಣುಮಕ್ಕಳ ಬದುಕೇ ಒಂದು ಕಾವ್ಯ. ಹಾಗಂತ ಅದರಲ್ಲಿ ತೊಡಗಿಸಿಕೊಳ್ಳುವುದು ಅಷ್ಟೊಂದು ಸುಲಭ ಸಾಧ್ಯವಾ?. ಶೋಭಾರ ಈ ಪ್ರಶ್ನೆ ನಮ್ಮೆಲ್ಲರದ್ದು ಕೂಡ. ಪಕ್ಕನೆ ಮಿಂಚಿ ಮರೆಯಾಗುವ ಕವಿತೆಯ ಎಳೆಯನ್ನು ಹಾಗೆ ತಂದು ಕೂಡಿಸುವುದು ಸರಳ ಸಂಗತಿಯಲ್ಲ. ಅವಳದೇ ಆದ ಜವಾಬ್ದಾರಿಗಳನ್ನು ನಿಭಾಯಿಸುವ ತರಾತುರಿಯಲ್ಲಿ ಇದಕ್ಕೇ ಬೇಕಾದ ಧ್ಯಾನಸ್ಥ ಮನಸ್ಥಿತಿ ಮತ್ತು ಅದಕ್ಕೆ ಪೂರಕವಾದ ಅನುಕೂಲಗಳು ಆಕೆಗೆ ಸಿಗುವುದು ದುಸ್ತರವೇ. ಸ್ತ್ರೀವಾದಿ ಚಿಂತಕಿಯೊಬ್ಬರು ಹೇಳಿದ್ದು ಇದನ್ನೇ. ನಮ್ಮಲ್ಲಿ ಎಷ್ಟು ಜನ ಲೇಖಕರಿಯರಿಗೆ ಬರೆಯಲು ತಮ್ಮದೇ ಆದ ಕೋಣೆ, ಮೇಜು, ಕುರ್ಚಿ, ಸಮಯ ಸಿಕ್ಕಿದೆ ಅನ್ನುವಂತದ್ದು. ಹೀಗೆ ರಾತ್ರೆಗಳಲ್ಲಿ ತನ್ನ ಕವನಗಳು ಕಳೆದು ಹೋಗುತ್ತವೆ ಎನ್ನುವಲ್ಲಿ ಇಡೀ ಬರಹಗಾರ್ತಿಯರ ಬವಣೆಗಳಿವೆ.

ಹೆಚ್ಚಾಗಿ ಇಲ್ಲಿನ ಕವಿತೆಗಳಲ್ಲಿ ಹೆಣ್ಣಿನ ಮನದ ನೋವು ನಲಿವುಗಳು ಬೇರೆ ಬೇರೆ ಬಗೆಯಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತವೆ. ಆಕೆ ಸೀರೆಯ ಕುರಿತು ಹೇಳುತ್ತಾ ಸೀರೆ ಹಳತಾದರೂ ಅದನ್ನು ಮೂಲೆಗುಂಪು ಮಾಡಲು ಮನಸ್ಸು ನಿರಾಕರಿಸುತ್ತವೆ. ಒಂದೊಂದು ಸೀರೆಗೂ ಅದರದೇ ಆದ ಭಾವನಾತ್ಮಕ ಜಗತ್ತು ಇದೆ ಎನ್ನುವುದನ್ನ ಹಲವು ಸಂದರ್ಭಗಳೊಂದಿಗೆ ಸಮೀಕರಿಸುತ್ತಾ ಹೇಳುವಾಗ ಸಂಬಂಧಗಳ ಪ್ರಾಮುಖ್ಯತೆಯೂ ಇಲ್ಲಿ ಎದ್ದು ತೋರುತ್ತದೆ.  ಜೊತೆಗೆ ಈಗೀಗ ನನಗೂ ಗೊತ್ತಾಗುತ್ತದೆ..ಮಸುಕು ಮಸುಕಾಗುವ ಸಂಕಟ ಎನ್ನುವಲ್ಲಿ ಕವಿತೆ ಛಂಗನೆ ಮತ್ತೊಂದು ಅರ್ಥಕ್ಕೆ ಜಿಗಿದುಕೊಳ್ಳುತ್ತದೆ. ಶೋಭಾಳ ಕವಿತೆಯ ಆಪ್ತತೆ ಮತ್ತು ಗೆಲುವು ಇರುವುದು ಇಂತಹ ಸಾಲುಗಳಲ್ಲಿಯೇ. ಸರಳವಾಗಿ ಹೇಳುತ್ತಲೇ ತಟಕ್ಕನೆ ಮಿಂಚಂತೆ ಮತ್ತೊಂದು ಅರ್ಥ ಹೊಳೆಯಿಸಿಯೂ ತಾನೇನೂ ಹೇಳೇ ಇಲ್ಲ ಅನ್ನುವಂತೆ ಇಲ್ಲಿನ ಕವಿತೆಗಳು ಮೌನಕ್ಕೆ ಜಾರಿ ಬಿಡುತ್ತವೆ.

ಈ ನೆಲ, ಇಲ್ಲಿಯ ಮಣ್ಣು,ಇವುಗಳನ್ನು ಪ್ರೀತಿಸುತ್ತಲೇ ಬದಲಾದ ಕಾಲಘಟ್ಟಕ್ಕೆ ಒಡ್ಡಿಕೊಳ್ಳುತ್ತಲೇ ಹಿಂದಕ್ಕೆ ಹೊರಳಿಕೊಳ್ಳುತ್ತಾ ಬದುಕಿನ ಸತ್ವವನ್ನು ಹಿಡಿದಿಡುತ್ತವೆ ಇಲ್ಲಿನ ಕವಿತೆಗಳು.  ಇಲ್ಲಿನ ಕವಿತೆಗಳ ತುಂಬಾ ಬದುಕಿನ ಕುರಿತಾದ ಕಾಳಜಿ ಮತ್ತು ಪ್ರೀತಿಯೇ. ಅದಕ್ಕಾಗಿಯೇ  ಬದುಕಿಗೆ ಹೇಗೆ ನಾವು ಋಣಿಯಾಗಿರ ಬೇಕೆಂದು ಋಣ ಪತ್ರವನ್ನು  ಕವಿತೆಯ ಸಾಲಿನ ಮೂಲಕ ಬರೆದಿಡಬಲ್ಲರು. ಒಂದಷ್ಟು ಸ್ವಾತಂತ್ರ್ಯ ಕೊಟ್ಟರೂ ಸಾಕು ನಾವು  ಆಕಾಶದ ಉದ್ದಗಲವ ಅಳೆದು ಮತ್ತೆ  ಪುನ; ನೀವಿಟ್ಟ ಪಂಜರದೊಳಗೆ ಬಂಧಿಯಾಗುವೆವು ಅನ್ನುತ್ತಲೇ ಕಾರಿನ ಗೀರಿಗೆ ಹುಯಿಲಿಡುವ ನಾವುಗಳು ಮನಸಿಗಾದ ಬರೆಗೆ ಹೃದಯ ಮಿಡುಕುವುದಿಲ್ಲ ಅನ್ನುವ ಆತಂಕ ವ್ಯಕ್ತಪಡಿಸುತ್ತಲೇ,ಶುಷ್ಕ ನಿರ್ಭಾವುಕ ವಾತಾವರಣದಲ್ಲಿ ಜೀವಂತಿಕೆಯನ್ನು ಕಾಪಿಡ ಬೇಕೆನ್ನುವುದೇ ಇಲ್ಲಿನ ಕವಿತೆಗಳ ಆಶಯ.ಹುಡಿ ಮಣ್ಣೋ , ನೀರ ಸೆಲೆಯೋ ನೀ ಆಗಬೇಕಿತ್ತು,ಕಲ್ಲಾಗಿ ಶಾಪ ವಿಮೋಚನೆಗೆ ಕಾಯದೇ  ಅಂತ ಅಹಲ್ಯೆಯನ್ನು ಪ್ರಶ್ನೆ ಮಾಡುವುದರ ಹಿಂದೆ,ಯಾವುದಕ್ಕೂ ಎದೆಗುಂದದೆ,ನಮ್ಮೊಳಗಿನ ಜೀವಸೆಲೆಯನ್ನು ಬತ್ತಿಸದೆ,  ಮಿತಿಯೊಳಗಿದ್ದುಕೊಂಡೇ ಮೀರಿ ಬೆಳೆಯ ಬೇಕೆನ್ನುವ  ಚಲವನ್ನು ಬಿತ್ತಿದಂತೆ ತೋರುತ್ತದೆ.

ನಮ್ಮ ಬದುಕು ನಿಂತಿರುವುದೇ ಮಾನವತೆಯ ಹಂದರದ ಮೇಲೆ ಎನ್ನುವುದರಲ್ಲಿ ಕವಿಗೆ ಬಲವಾದ ನಂಬುಗೆ. ಹಾಗಾಗಿ ಸಮಸಮಾಜದ ನಿರ್ಮಾಣಕ್ಕೆ ಮನಸು ಚಡಪಡಿಸುತ್ತದೆ. ಒಳ್ಳೆಯ ಕಾವ್ಯದ ಉದ್ದೇಶವೂ ಇದುವೇ ತಾನೇ?. ಜಾತಿ ಧರ್ಮಗಳ ಅಂಧ ಅನುಕರಣೆಯ ಕುರಿತು ಆಕ್ರೋಶ ವ್ಯಕ್ತ ಪಡಿಸುತ್ತಲೇ, ನನ್ನ ರಕ್ತವೇನಾದರೂ ಚೆಲ್ಲಿದರೆ ಎಲ್ಲಾ ಧರ್ಮದ ಶೀಷೆಯೊಳಗೆ ಸುರಿದುಬಿಡಿ..ಪ್ರೇಮ ಧರ್ಮವೊಂದೇ ಚಿರಸ್ಥಾಯಿಯಾಗಲಿ ಅನ್ನೋ ಕವಿತೆಯ  ಆಶಯಕ್ಕೆ ಮನಸು ತಲೆಬಾಗುತ್ತದೆ.

ತಮ್ಮಷ್ಟಕ್ಕೇ ಹಿತ್ತಲಿನಲ್ಲಿ ಅರಳಿಕೊಂಡ ಹೂವುಗಳಂತೆ, ತಮ್ಮ ಪಾಡಿಗೆ ಗುನುಗಿಕೊಳ್ಳುವ ಪದ್ಯದ ಸಾಲಿನಂತೆ, ಗೆಳತಿಯೊಂದಿಗೆ ಮೆಲ್ಲುಸುರಿದಂತೆ, ಚಿಟ್ಟೆ ರೆಕ್ಕೆ ಪಟಪಟಿಸಿದಂತೆ, ಹಕ್ಕಿಯೊಂದು ಮೆತ್ತಗೆ ಹಾರಿ ಹೋದಂತೆ, ಝುಳು ಝುಳು ನೀರ ನಿನಾದದಂತೆ ಹಿತವೆನಿಸಿ ಮುದ ಕೊಡುವ ಇಲ್ಲಿನ ಕವಿತೆಗಳು ಹೂವಿನ ಸುಗಂಧದಷ್ಟೇ ನವಿರು ನವಿರು. ಬನ್ನಿ, ಅಬ್ಬಲ್ಲಿಗೆ ದಂಡೆಯನ್ನು ಕೈಗೆತ್ತಿಕೊಳ್ಳಿ. ಶೋಭಾ ಹೀರೆಕೈ ಅವರ ಕಾವ್ಯ ಪ್ರೀತಿ ಹೆಚ್ಚಾಗಲಿ. ಅವ್ವ ಮತ್ತು ಅಬ್ಬಲ್ಲಿಗೆ ಕಾವ್ಯ ಲೋಕದ ನೆಚ್ಚಾಗಲಿ.

-ಸ್ಮಿತಾ ಅಮೃತರಾಜ್. ಸಂಪಾಜೆ.

8 Responses

  1. Shobha Hirekai says:

    ತುಂಬಾ ಧನ್ಯವಾದಗಳು ಸುರಹೊನ್ನೆಗೆ ಮತ್ತು ಗೆಳತಿ ಸ್ಮಿತಾಗೆ.

  2. ನಯನ ಬಜಕೂಡ್ಲು says:

    ಯಸ್, ಕವಿತೆ ಎಂಬ ಕಲ್ಪನಾ ಲೋಕ ಬಹಳ ಸುಂದರ . ನಿಮ್ಮ ಪುಸ್ತಕ ಪರಿಚಯ ಕವಿತೆಯಷ್ಟೇ ಸಿಹಿಯಾಗಿದೆ . nice

  3. KRISHNAPRABHA M says:

    ಸರಳ, ಸುಂದರ ಪದಸಂಯೋಜನೆಗಳನ್ನುಳ್ಳ ಲೇಖನ…ಅಭಿನಂದನೆಗಳು ಸ್ಮಿತಾ ಅವರಿಗೆ

  4. Hema says:

    ಈ ಕೃತಿಯ ಬಗ್ಗೆ ಅದೆಷ್ಟು ನವಿರಾದ ಪದಗಳನ್ನು ಜೋಡಿಸಿದ್ದೀರಾ ಸ್ಮಿತಾ. ಬಹಳ ಸೊಗಸಾದ.ಚೆಂದದ ಪುಸ್ತಕ ವಿಮರ್ಶೆ. ಕವಯಿತ್ರಿ ಶೋಭಾ ಹೀರೆಕೈ ಅವರಿಗೂ ನಿಮಗೂ ಅಭಿನಂದನೆಗಳು

  5. Smitha Amrithraj says:

    ನಿಮ್ಮೆಲ್ಲರ ಪ್ಲೋತ್ಸಾಹ ದೊಡ್ಡದು

  6. Shankari Sharma says:

    ಕವನ ಹೂವುಗಳ ಗುಚ್ಛದ ಪರಿಚಯ ಹಾಗೂ ವಿಮರ್ಶೆ, ಹೂವಿನ ದಳಗಳಷ್ಟೇ ನವಿರಾಗಿ ಮೂಡಿ ಬಂದಿದೆ.

  7. sangeetha raviraj says:

    ಅಭಿನಂದನೆಗಳು ಶೋಭಾ ರವರಿಗೆ… ಸ್ಮಿತಕ್ಕ ಸಂಕಲನ ಕೊಡಿ

  8. nagraj Harapanahalli says:

    ಕವಿತೆಗಳ ಒಳನೋಟ ಅದ್ಭುತವಾಗಿ ಬಂದಿದೆ. ಪ್ರೀತಿಯಿಟ್ಟು ಬರೆಯುವುದು ಅಂದರೆ ಬೇರೇನಲ್ಲ…ಅದು ಇಲ್ಲಿದೆ. ಶೋಭಾ ಅವರ ಆಶಯ, ಹುಡುಕಾಟ, ಕನಸುಗಳಿಗೆ, ತಣ್ಣನೆಯ ಬಂಡಾಯಕ್ಕೆ ನ್ಯಾಯದಕ್ಕಿದೆ. ಒಂದು ಕೃತಿಯನ್ನು ಕಟ್ಟಿ ಕೊಡುವ ಸೊಗಸು ಇಲ್ಲಿದೆ. ಇಡೀ ಬರಹ ಕಾವ್ಯದಂತಿದೆ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: