ತಸ್ಮೈ ಶ್ರೀ ಗುರುವೇ ನಮಃ
ಗುರುಬ್ರಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ:
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ
ಬದುಕಿಗೆ ದಾರಿ ತೋರುವ ಗುರುಗಳು ಸದಾ ಪೂಜನೀಯ ಸ್ಥಾನದಲ್ಲಿರುವವರು. ವಿದ್ಯೆ ಕಲಿಸುವುದರ ಜೊತೆಗೆ, ಲೋಕಾನುಭವದ ಮಾತುಗಳನ್ನಾಡುತ್ತಾ, ಬದುಕಿನ ಗುರಿ ಸ್ಪಷ್ಟವಾಗುವಂತೆ ದಾರಿ ತೋರುವವನು ಗುರು. ತಾನು ಕಲಿಸುವ ವಿದ್ಯಾರ್ಥಿಗಳು, ಬದುಕಿನಲ್ಲಿ ಮುಂದೆ ಬಂದಾಗ ಅದನ್ನು ನೋಡಿ ಸಂಭ್ರಮಿಸುವವನು ಗುರು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಸೂಕ್ತ ವೇದಿಕೆ ನೀಡಿ ಮುಂದೆ ತರುವ ಗುರುತರ ಜವಾಬ್ದಾರಿಯನ್ನು ಅಕ್ಕರೆಯಿಂದ ಮಾಡಿದ, ಮಾಡುತ್ತಿರುವ ಶಿಕ್ಷಕರು ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಯಾವುದೇ ಪ್ರಚಾರ ಬಯಸದೆ, ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚುವಂತಹ ಹಲವು ಶಿಕ್ಷಕರಿದ್ದಾರೆ. ಜೀವನಪರ್ಯಂತ ನೆನಪಿಸಿಕೊಳ್ಳುವ ಅದೆಷ್ಟೋ ಶಿಕ್ಷಕರು ಪ್ರಾತಃಸ್ಮರಣೀಯರ ಸಾಲಲ್ಲಿ ನಿಲ್ಲುತ್ತಾರೆ. ಶಿಕ್ಷಕರ ದಿನಾಚರಣೆ ಬರುತ್ತಿದೆ. ಪ್ರತಿವರ್ಷ ಸೆಪ್ಟಂಬರ್ 5 ಬಂತೆಂದರೆ ಎಲ್ಲರಿಗೂ ಶಿಕ್ಷಕರ ನೆನಪಾಗುವುದು. ಜವಾಬ್ದಾರಿಯುತ ಶಿಕ್ಷಕಿಯಾಗಿ ರೂಪುಗೊಳ್ಳಲು ಕಾರಣೀಕರ್ತರಾದ ನನ್ನ ಗುರುವೃಂದದವರನ್ನು ನೆನಪಿಸಿಕೊಳ್ಳುತ್ತಾ ಅವರಿಗೆಲ್ಲರಿಗೂ ವಂದನೆಗಳನ್ನು ಈ ಲೇಖನದ ಮೂಲಕ ಅರ್ಪಿಸಬಯಸುತ್ತೇನೆ.
ಒಂದನೇ ತರಗತಿಯಿಂದ ಆರಂಭಿಸಿ, ಸ್ನಾತಕೋತ್ತರ ಪದವಿಯವರೆಗಿನ ಶೈಕ್ಷಣಿಕ ಬದುಕಿನಲ್ಲಿ ಕಲಿಸಿದ ಶಿಕ್ಷಕರನೇಕರು ಜೀವನದ ಒಂದೊಂದು ಕ್ಷಣದಲ್ಲಿ ನೆನಪಾಗುತ್ತಾರೆ. ಅವರು ಕಲಿಸಿಕೊಟ್ಟ ಪಾಠಗಳು, ಜೊತೆಗೆ ಜೀವನದ ಪಾಠಗಳು ಆಗಾಗ ನೆನಪಾಗುತ್ತಿರುತ್ತವೆ. ಮನೆಯೇ ಮೊದಲ ಪಾಠಶಾಲೆ, ಜನನಿ ಮೊದಲ ಗುರುವು ಎಂಬ ಮಾತಿನಂತೆ ಒಂದನೇ ತರಗತಿಗೆ ದಾಖಲಾಗುವಾಗಲೇ, ಕನ್ನಡ ಅಕ್ಷರಮಾಲೆಯನ್ನು ಬರೆಯಲು, ನನ್ನಮ್ಮ ಕಲಿಸಿದ್ದರು.
ಆದರೂ, ಒಂದನೇ ತರಗತಿಯ ಮಕ್ಕಳಿಗೆ ಕಲಿಸುತ್ತಿದ್ದ ವಿಷ್ಣುಮೂರ್ತಿ ಮಾಸ್ಟ್ರು, ವಿದ್ಯಾರ್ಥಿಗಳೆಲ್ಲರ ಕೈಬರಹ ಚೆನ್ನಾಗಿರಬೇಕು ಎಂದು, ಐದನೇ ತರಗತಿಯ ಮಕ್ಕಳನ್ನು ಕರೆದು, ನಮ್ಮ ಕೈಬರಹವನ್ನು ತಿದ್ದಿಸುತ್ತಿದ್ದರು. ಉತ್ತಮ ಕೈಬರಹಕ್ಕೆ ಬಹುಮಾನ ಸಿಕ್ಕಿದಾಗಲೆಲ್ಲಾ ಹಾಗೆಯೇ “ಎಷ್ಟು ಚಂದ ಇದೆ ನಿಮ್ಮ ಕೈಬರಹ” ಎಂದು ನನ್ನ ವಿದ್ಯಾರ್ಥಿಗಳು ಹೇಳಿದಾಗಲೂ ಸಹಾ ವಿಷ್ಣುಮೂರ್ತಿ ಮಾಸ್ಟ್ರು ನೆನಪಾಗುತ್ತಾರೆ.
ಎರಡನೇ ತರಗತಿಯಲ್ಲಿ ಕಲಿಸುತ್ತಿದ್ದ ಕುಂಞಪ್ಪ ಮಾಸ್ಟ್ರ ಪ್ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ.
3 ಮತ್ತು 4ನೇ ತರಗತಿಗೆ ಕಲಿಸುತ್ತಿದ್ದವರು ಸೋಮಶೇಖರ ಮಾಸ್ಟ್ರು. ಮನೆಯಲ್ಲಿ ರೇಡಿಯೋ ಸಹಾ ಇಲ್ಲದ ಕಾಲವದು. ಸೋಮಶೇಖರ ಮಾಸ್ಟ್ರು ಶಾಲೆಯಲ್ಲಿ ವಾರಕ್ಕೊಮ್ಮೆ ನಡೆಯುತ್ತಿದ್ದ ಭಜನೆಯ ಸಮಯದಲ್ಲಿ ಹಾಡಲು ತಾಯಿ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೇ ಹಾಡನ್ನು ಹಾಡಿ, ನಮಗೆ ಕಲಿಸುತ್ತಿದ್ದದ್ದು ಈಗಲೂ ಕಣ್ಣ ಮುಂದೆ ಬರುತ್ತದೆ.
ಮುಂದೆ 5 ರಿಂದ 7ನೇ ತರಗತಿ ತನಕ ಕಲಿಸುತ್ತಿದ್ದವರು ಪ್ರಾಮಾಣಿಕತೆಯೇ ಮೈವೆತ್ತಂತಿದ್ದ ಗೋಪಾಲಕೃಷ್ಣ ಮಾಸ್ಟ್ರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ರಾಮಕೃಷ್ಣ ಹೊಳ್ಳ ಮಾಸ್ಟ್ರು- ನನ್ನ ದೊಡ್ಡಪ್ಪ (ಹೆಡ್ಮಾಸ್ಟ್ರು ಎಂದೇ ಎಲ್ಲರೂ ಅವರನ್ನು ಕರೆಯುತ್ತಿದ್ದರು). ತನ್ನ ಸ್ವಂತ/ತಮ್ಮನ ಮಕ್ಕಳಿಗೆ ಪೆಟ್ಟು ಕೊಡುವುದಿಲ್ಲ ಎಂದು ಯಾರೂ ಬೊಟ್ಟು ಮಾಡಿ ತೋರಿಸಬಾರದೆಂದು, ಅವರ ಮಕ್ಕಳಿಗೂ, ನನಗೆ ಹಾಗೆಯೇ ನನ್ನ ತಮ್ಮ-ತಂಗಿಯಂದಿರಿಗೂ, ಅವರು ಪಾಠ ಮಾಡುತ್ತಿರುವಾಗ ಕೇಳುವ ಪ್ರಶ್ನೆಗೆ ಉತ್ತರ ಹೇಳದಿದ್ದರೆ ಎರಡು ಪೆಟ್ಟು ಜಾಸ್ತಿಯೇ ಕೊಡುತ್ತಿದ್ದ ನೆನಪು.
ಎಂಟನೆಯ ತರಗತಿಗೆ ಪಟ್ಟಣದ ಶಾಲೆಗೆ ಬಂದಾಗ, ಅಲ್ಲಿಯ ಪರಿಸರ ಭಿನ್ನವಾಗಿತ್ತು. ತೀರಾ ಹಳ್ಳಿ ಶಾಲೆಯಿಂದ ಬಂದಿದ್ದ ನನಗೆ ಒಂದೆಡೆ ಭಯ, ಮುಜುಗರ. ಶಿಕ್ಷಕಿಯರು ಪ್ರಶ್ನೆ ಕೇಳಿದರೆ, ಉತ್ತರ ಗೊತ್ತಿದ್ದರೂ, ಎದ್ದು ನಿಂತು ಹೇಳಲು ಭಯ. ಉತ್ತರ ಹೇಳೆಂದು, ಎದ್ದು ನಿಲ್ಲಿಸಿದರೂ, ಮೈಬಾಗಿಸಿ ನಿಂತು ಉತ್ತರಿಸುತ್ತಿದ್ದೆ. ನಮಗೆ ಸಮಾಜ ಕಲಿಸುತ್ತಿದ್ದ ಮೇರಿ ಟೀಚರ್ “ಮೊದಲು ನೆಟ್ಟಗೆ ನಿಲ್ಲು. ಗೊತ್ತಿರುವ ಉತ್ತರವನ್ನು ಭಯಪಡದೆ ಹೇಳು. ಸಂಕೋಚಪಡುವ ಅಗತ್ಯ ಇಲ್ಲ” ಅಂತ ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು.
ಇನ್ನು ನಮಗೆ ಜೀವವಿಜ್ಞಾನ ಕಲಿಸುತ್ತಿದ್ದ ಶಶಿಕಲಾ ಟೀಚರ್ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ, ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯಲ್ಲಿ ನಿರರ್ಗಳವಾಗಿ ಕಲಿಸುತ್ತಿದ್ದದ್ದು ನಮಗೆಲ್ಲಾ ಅಚ್ಚರಿ ತರುತ್ತಿತ್ತು. ಶಶಿಕಲಾ ಟೀಚರ್ ಒಂದು ವಿಷಯವನ್ನು ಎರಡು ಸಲ ವಿವರಿಸುತ್ತಿದ್ದರು. ಗಮನವಿಟ್ಟು ಕೇಳಿದರೆ, ಇನ್ನೊಮ್ಮೆ ಓದುವ ಅಗತ್ಯವೂ ಇಲ್ಲ. ಇತ್ತೀಚೆಗೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ನಡೆಸಿಕೊಡುವ “ವೀಕೆಂಡ್ ವಿದ್ ರಮೇಶ್” ಕಾರ್ಯಕ್ರಮದಲ್ಲಿ ಖ್ಯಾತ ನಟಿ ವಿನಯಾಪ್ರಸಾದ್ ಅವರ ಸಂದರ್ಶನ ಪ್ರಸಾರವಾಗುತ್ತಿತ್ತು. ಆ ದಿನ ವಿನಯಾಪ್ರಸಾದ್ ಅವರ ಪ್ರೀತಿಯ ಶಿಕ್ಷಕಿಯಾದ ನಮ್ಮೆಲ್ಲರ ಅಚ್ಚುಮೆಚ್ಚಿನ ಶಶಿಕಲಾ ಟೀಚರ್ ಅವರನ್ನು ಕಾರ್ಯಕ್ರಮದಲ್ಲಿ ಕಂಡಾಗ ವಿನಯಾಪ್ರಸಾದ್ ಅವರಷ್ಟೇ ಅವರ ವಿದ್ಯಾರ್ಥಿನಿಯರಾದ ನಾವೆಲ್ಲಾ ಸಂಭ್ರಮಿಸಿದ್ದೆವು
ಪ್ರೀತಿಯ ಕನ್ನಡ ಶಿಕ್ಷಕರಾದ ರಾಮ ಭಟ್ ಮಾಸ್ಟ್ರಲ್ಲಿ, ಯಾವುದೋ ವಿಷಯದಲ್ಲಿದ್ದ ಸಂದೇಹ ನಿವಾರಣೆಗೆಂದು ಹೋಗಿದ್ದಾಗ ಅವರು ಉತ್ತಮ ಪ್ರಬಂಧ ಎಂದರೆ ಹೇಗಿರಬೇಕು? ಪೀಠಿಕೆ, ವಿಷಯ, ಉಪಸಂಹಾರ ಯಾವ ರೀತಿ ಇರಬೇಕು ಅಂತ ವಿವರಿಸಿ, “ನೀನೂ ಬರೆಯಮ್ಮ. ಒಳ್ಳೆಯದಾಗಲಿ” ಎಂದು ಹರಸಿದ ಕ್ಷಣ ಇಂದಿಗೂ ಕಣ್ಣ ಮುಂದಿದೆ.
ಭಗವಂತನ ಅನುಗ್ರಹವಿಲ್ಲದಿದ್ದರೆ, ಹುಲ್ಲುಕಡ್ಡಿಯೂ ಚಲಿಸಲಾರದು ಎಂಬುದನ್ನು ತೃಣಮಪಿ ನಚಲತಿ ತೇನವಿನಾ ಎಂಬ ಪದ್ಯವನ್ನು ಸುಶ್ರಾವ್ಯವಾಗಿ ಹಾಡಿ ತಿಳಿಯಪಡಿಸಿದ ಕನ್ನಡದ ಮಧುಸೂಧನ ಮಾಸ್ಟ್ರ ನೆನಪು ಸದಾ ಹಸಿರು. ಸಮಾಜ ವಿಜ್ಞಾನ ಕಲಿಸುತ್ತಿದ್ದ ಆಲಿಸ್ ಟೀಚರ್ ಹಾಗೂ ಲಿಲ್ಲಿ ಟೀಚರ್, ಗಣಿತ ಕಲಿಸುತ್ತಿದ್ದ ಲೀನಾ ಟೀಚರ್, ವಿಜ್ಞಾನ (ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ) ಕಲಿಸುತ್ತಿದ್ದ ಎಡಪಡಿತ್ತಾಯ ಹಾಗೂ ಲಿಯೋನೆಲ್ಲಾ ಟೀಚರ್, ಹಿಂದಿ ಕಲಿಸುತ್ತಿದ್ದ ಗ್ರೇಸಿ ಟೀಚರ್ ಆಗಾಗ ಕಣ್ಣ ಮುಂದೆ ಬರುತ್ತಾರೆ.
ಆಗಾಗ ಕಾಡುವ ಇನ್ನೊಬ್ಬರು ಟೀಚರ್ ಸಮಾಜವಿಜ್ಞಾನ ಕಲಿಸುತ್ತಿದ್ದ ಉಷಾ ಟೀಚರ್. ಹತ್ತನೆಯ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿನಿಯರಿಗೆ ಒಂದು ದಿನದ ಪ್ರವಾಸ ಏರ್ಪಡಿಸಿದ್ದರು. ಹಣ ಹೊಂದಿಸಲು ಕಷ್ಟ ಅಂತ ನನ್ನ ಹೆತ್ತವರು ಪ್ರವಾಸ ಹೋಗಲು ಅನುಮತಿ ನಿರಾಕರಿಸಿದ ವಿಷಯ ಹೇಳಲು ಮನಸ್ಸಿಲ್ಲದೆ, ನನಗೆ ಬರಲು ಮನಸ್ಸಿಲ್ಲ ಎಂದು ಉಷಾ ಟೀಚರ್ ಹತ್ರ ಹೇಳಿದೆ. ಆ ವಿಷಯ ಗೊತ್ತಾದ ಉಷಾ ಟೀಚರ್ “ಹಣ ಇಲ್ಲ ಅಂತ ನೀನು ಪ್ರವಾಸವನ್ನು ತಪ್ಪಿಸಬೇಡ. ನಿನ್ನ ಖರ್ಚಿನ ಹಣವನ್ನು ನಾನು ಕೊಡುತ್ತೇನೆ” ಅಂತ ಹೇಳಿದ ಮಾತನ್ನು ನನಗೆ ಮೀರಲಾಗಲಿಲ್ಲ. ಸಹಪಾಠಿಗಳೊಡನೆ ಒಂದು ದಿನದ ಪ್ರವಾಸದ ಮಜವನ್ನು ಅನುಭವಿಸುವಂತೆ ಮಾಡಿದ ಉಷಾ ಟೀಚರ್ ಅವರಿಗೆ ನಾನು ಚಿರಋಣಿ. ನನ್ನ ಫ್ರೌಢಶಾಲಾ ಶಿಕ್ಷಣ ಮುಗಿದ ಬಳಿಕ ಉಷಾ ಟೀಚರ್ ಅವರನ್ನು ನಾನು ನೋಡಿಯೇ ಇಲ್ಲ. ಜಗತ್ತು ದುಂಡಗಿದೆ ತಾನೇ? ಯಾವತ್ತಾದರೂ ಉಷಾ ಟೀಚರ್ ಮಾತನಾಡಲು ಸಿಗಬಹುದು ಎಂಬ ಆಸೆಯಿನ್ನೂ ಜೀವಂತವಾಗಿದೆ.
ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ ಜೀವನದಲ್ಲಿ ಹಲವು ಗುರುಗಳು ತೋರಿಸಿದ ಪ್ರೀತಿಯಲ್ಲಿ ಮಿಂದು ಪುನೀತರಾದ ಧನ್ಯತಾಭಾವ. ಕಾಲೇಜಿಗೆ ಬಂದ ನಂತರ ಅಧ್ಯಾಪಕರು ಎಂದರೆ Friend, Philosopher and Guide ತರಹ. ಬದುಕಿಗೊಂದು ಗುರಿ ತೋರಿಸುವಲ್ಲಿ, ಅವರೆಲ್ಲರ ಪಾತ್ರ ಮಹತ್ತರವಾದದ್ದು. ಪ್ರತಿಯೊಬ್ಬ ಅಧ್ಯಾಪಕರ ನೆನಪು ಮನಪಟಲದಲ್ಲಿ ಆಗಾಗ ಮೂಡುತ್ತದೆ. ನನ್ನ ಅಧ್ಯಾಪನ ವೃತ್ತಿಯಲ್ಲಿಯೂ, ನನ್ನ ಅಧ್ಯಾಪಕರ ಛಾಪು ನನಗರಿವಿಲ್ಲದೆ ನನ್ನ ಮೇಲಾಗಿದೆ. ಅದೆಷ್ಟೋ ಸಲ ತರಗತಿಗಳಲ್ಲಿ, ನನಗೆ ಕಲಿಸಿದ ಅಧ್ಯಾಪಕರ ಮಾತುಗಳು ನೆನಪಾಗಿ, ವಿದ್ಯಾರ್ಥಿಗಳಿಗೆ ಆ ಮಾತುಗಳನ್ನು ಹೇಳುವುದಿದೆ. ಕೃತಜ್ಞತೆ ಅರ್ಪಿಸಲು ಮಾತುಗಳು ಸಾಲದಾಗಿವೆ. ನಾನು ಕೇಳಿದ ಪದ್ಯವೊಂದರ ಸಾಲುಗಳ ಮೂಲಕ ನನ್ನ ಗುರುವೃಂದದವರಿಗೆಲ್ಲಾ ನಮನಗಳು
“ಎನ್ನೆದೆಯ ಕದ ತೆರೆದು ಹೃನ್ಮನವ ಹದಗೊಳಿಸಿ
ಜಗದ ಹಿತದಾಕಾಂಕ್ಷೆಯ ಬೀಜ ಬಿತ್ತಿ
ಧನ್ಯಗೊಳಿಸಿದೆ ಬದುಕ ಪುಣ್ಯವಂತನು ನಾನು
ಕಣ್ತೆರೆಸಿದಾ ಗುರುವೇ ನಿನಗೆ ನಮನ….”
-ಡಾ.ಕೃಷ್ಣಪ್ರಭಾ, ಮಂಗಳೂರು
Nice . ಕೆಲವು ಶಿಕ್ಷಕರು ಹಾಗೆಯೇ ,ನಾವು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವಾಗ ಅವಾಗ ಆವಾಗ ನೆನಪಾಗುತ್ತಿರುತ್ತಾರೆ . ಯಾಕಂದ್ರೆ ನಮ್ಮ ಯಶಸ್ಸಿನ ಹಿಂದೆ ಅವರ ಪರಿಶ್ರಮವೂ ಇರುತ್ತದೆ .
ನಿಮಗೂ ಶಿಕ್ಷಕರ ದಿನದ ಶುಭಾಶಯಗಳು ಮೇಡಂ .
Om shree gurubhyo namaha
Superb. Heart touching. Wsh u happy teacher’s day maaa..
Very nice mam.. Felt like I am reading my past
It’s very nice mam. Made me remember about all my teachers
Super, happy teachers day
Super mam …happy teachers day
Super mam…..
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು
Very Nice madam. Our teachers are really great during those days.
ಧನ್ಯವಾದಗಳು ಗೀತಾ…..
ಸೊಗಸಾದ ಲೇಖನ ಮೇಡಂ.
ಧನ್ಯವಾದಗಳು ಶಂಕರಿ ಅವರಿಗೆ
ಕಲಿಯುವ ಮನವಿದ್ದಲ್ಲಿ ಯಾರೂ ಗುರು ವಾಗಬಹುದು – ಏಕಲವ್ಯ ನಿಗೆ ದ್ರೋಣ ಗುರು ವಾದಂತೆ.
ಲೇಖನದ ಮೂಲಕ ನಮ್ಮ ಜೀವನ ದಲ್ಲಿ ಪ್ರಭಾವ ಬೀರಿದ ವ್ಯಕ್ತಿ ಗಳ ನ್ನು ಸ್ಮರಿಸುವಂತೆ ಮಾಡಿ ದ ತಮಗೆ ನನ್ನ ಧನ್ಯವಾದಗಳು.
ಉಪನ್ಯಾಸ ಕಿ ಯಾಗಿರುವ ತಮಗಿರುವ ಮೌಲ್ಯಗಳು ಶಿಷ್ಯ ವೃಂದ ಸದ್ಯುಪಯೋಗ ಮಾಡಿ ಕೊಳ್ಳುವುದೆಂಬ ಆಶಯ ನನ್ನ ದು.
ಸುಂದರ ಬರಹ ,: ಮೌಲ್ಯ ಆಧಾರಿತ ಲೇಖನ.. …
ಶಾಲೆಯಲ್ಲಿ ಕಲಿತ ಶಿಕ್ಷಣವಲ್ಲದೆ, ಜೀವನದಲ್ಲಿ ಎದುರಾಗುವ ಹಲವರಿಂದ ಜೀವನ ಪಾಠಗಳನ್ನು ಕಲಿಯುತ್ತೇವೆ. ಒಂದರ್ಥದಲ್ಲಿ ಅವರೂ ನಮ್ಮ ಶಿಕ್ಷಕರೇ. ಪ್ರತಿ ಶಿಕ್ಷಕರಿಂದ ಕಲಿತ ಮೌಲ್ಯಗಳನ್ನು ಮುಂದಿನ ಪರಂಪರೆಗೆ ದಾಟಿಸುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುವ ಗುರುತರವಾದ ಹೊಣೆ ಶಿಕ್ಷಕರ ಮೇಲಿದೆ. ಧನ್ಯವಾದಗಳು ಸಂತೋಷ್ ಅವರಿಗೆ