ನಾನೂ ಶಿಕ್ಷಕಿಯಾದೆ
ನಲ್ವತ್ತೈದು ವರ್ಷಗಳ ಹಿಂದಿನ ಮಾತು. ತೀರಾ ಹಳ್ಳಿ ಪ್ರದೇಶದಲ್ಲಿ ಹುಟ್ಟಿ ಬೆಳೆದರೂ, ಹಿರಿಯರ ಬೆಂಬಲದಿಂದ ಉತ್ತಮ ವಿದ್ಯಾಭ್ಯಾಸ ಪಡೆಯುವ ಅವಕಾಶ ಒದಗಿಬಂತು. ವಿಜ್ಞಾನ ಮತ್ತು ಗಣಿತ ಮುಖ್ಯ ವಿಷಯಗಳಾಗಿ ಉನ್ನತ ಶ್ರೇಣಿಯಲ್ಲಿ ವಿಜ್ಞಾನ ಪದವಿ ಪಡೆದ ಮೇಲೆ, ನೌಕರರಿಗಾಗಿ ನಡೆಸಿದ ಪ್ರಯತ್ನ ಅಷ್ಟು ಫಲಕಾರಿಯಾಗಲಿಲ್ಲ. ಮನೆಗೆ ದಿನಪತ್ರಿಕೆ ಬರುತ್ತಿರಲಿಲ್ಲ, ರೇಡಿಯೋ ಇರಲಿಲ್ಲ. ಸುಮ್ಮನೆ ಕುಳಿತಿರಲಾಗದೆ,ನಾನು ಕಲಿತ ಖಾಸಗಿ ಶಾಲೆಯಲ್ಲಿಯೇ, ತಾತ್ಕಾಲಿಕ ನೆಲೆಯಲ್ಲಿ ಹೈಸ್ಕೂಲು ಮಕ್ಕಳ ಮೇಲ್ವಿಚಾರಣೆಯ ಕೆಲಸಕ್ಕೆ ಕರೆ ಬಂದಾಗ, ಆ ಕೆಲಸವನ್ನು ಖುಷಿಯಿಂದಲೇ ಮಾಡಿದೆ. ಸ್ವಲ್ಪ ಸಮಯದ ಬಳಿಕ, ಕೇಂದ್ರ ಸರಕಾರದ ಒಡೆತನದ, ದೂರವಾಣಿ ಇಲಾಖೆಯಲ್ಲಿ ನೌಕರಿ ದೊರೆಯಿತು. ಅಲ್ಲಿ ಸುಮಾರು ಮೂವತ್ತೆಂಟು ವರ್ಷಗಳ ಕಾಲ, ಹಲೋ..ಹಲೋ..ವೇ ಮುಖ್ಯವಾಗಿತ್ತು. ಅದರಲ್ಲಿ ತಾಂತ್ರಿಕ, ಮೇಲ್ವಿಚಾರಣೆ, ಆಢಳಿತದಂತಹ ವಿವಿಧ ಮುಖ್ಯ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿ, ಸಂತೃಪ್ತಿಯಿಂಲೇ ನಿವೃತ್ತಿ ಹೊಂದಿದೆನೆನ್ನಲು ಸಂತೋಷವೆನಿಸುತ್ತದೆ. ಆ ಬಳಿಕ ಆನಾಯಾಚಿತವಾಗಿ ಬಂದ, ಪುಟ್ಟ ಶಿಕ್ಷಕಿ ಹುದ್ದೆಯನ್ನು, ಉಚಿತವಾಗಿ, ನನ್ನದೇ ನೆಲೆಯಲ್ಲಿ ಪ್ರವೃತ್ತಿಯಾಗಿ ನಿರ್ವಹಿಸುತ್ತಿರುವುದು ನಿಜವಾಗಿಯೂ ಮನಸ್ಸಿಗೆ ತುಂಬಾ ಸಂತಸ, ನೆಮ್ಮದಿ ನೀಡುವಂತಹುದು.
ನಿಜವಾಗಿ ನೋಡಿದರೆ, ಮಕ್ಕಳಿಗೆ ಪಾಠ ಮಾಡಿದ ಯಾವುದೇ ಅನುಭವವೂ ನನಗಿಲ್ಲ. ಕಾಲೇಜಿನಲ್ಲಿ ಗಣಿತ ಪಾಠ ಮಾಡುತ್ತಿದ್ದ, ನನ್ನ ನೆಚ್ಚಿನ ಪ್ರಬೋಧಕಿಯವರಲ್ಲಿ, ನಿವೃತ್ತಿಯ ನಂತರದ ಅವಕಾಶಗಳ ಬಗ್ಗೆ ಕೇಳಿದಾಗ ಅವರಿತ್ತ ಸಲಹೆ, “ಅನಾಥಾಶ್ರಮದಲ್ಲಿರುವ ಹತ್ತನೇ ತರಗತಿ ಮಕ್ಕಳಿಗೆ ಗಣಿತ ವಿಷಯಕ್ಕೆ ಪ್ರತ್ಯೇಕ ಪಾಠದ ಅಗತ್ಯವಿದೆ. ಕಲಿತ ಗಣಿತವನ್ನು ಅಲ್ಲಿ ಹೇಳಿಕೊಡಬಹುದಲ್ಲ” ಎಂದು. ನಾನು ಗಾಬರಿಯಿಂದ, “ಮೇಡಂ, ನಲ್ವತ್ತು ವರ್ಷಗಳ ಬಳಿಕ, ಮೊದಲು ಕಲಿತಿದುದೆಲ್ಲ ನೆನಪಿರಬಹುದೇ..ತುಂಬಾ ಭಯವಾಗುತ್ತದೆ” ಎಂದೆ. “ಪರ್ವಾಗಿಲ್ಲ.. ಪ್ರಾರಂಭಿಸಿ ನೋಡಿದರೆ ಎಲ್ಲಾ ನೆನಪಿಗೆ ಬರ್ತದೆ. ಹೆದರ್ಬೇಕಾಗಿಲ್ಲ” ಎಂದು ಧೈರ್ಯ ತುಂಬಿದರು. ಪಾಠದ ಮೊದಲನೇ ದಿನ..ಯಾವುದೇ ಪೂರ್ವ ತಯಾರಿ ಇಲ್ಲದೆ ಹೋದೆ.
ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲದ ದೊಡ್ಡದಾದ ಹಾಲ್. ಹನ್ನೊಂದು ಮಕ್ಕಳು ನೆಲದ ಮೇಲೆ ಸಾಲಾಗಿ ಕುಳಿತಿದ್ದರು. “ನಮಸ್ತೇ ಮಾತಾಜಿ”, ಎಲ್ಲರ ಒಕ್ಕೊರೊಲ ಆದರದ ಸ್ವಾಗತ. ಮನಸ್ಸು ಒಂದು ತರಹದ ಆತಂಕದ ಸ್ಥಿತಿಯಲ್ಲಿತ್ತು..ಮಕ್ಕಳೆಲ್ಲರ ಪರಿಚಯ ಮಾಡಿದ್ದಾಯಿತು. ನನಗೋ, ಗಂಭೀರವಾಗಿರಲೋ, ಬೇಡವೋ ಒಂದೂ ತಿಳಿಯುತ್ತಿರಲಿಲ್ಲ. ಮಕ್ಕಳಿಗೆ ನಾನು ಹೊಸಬಳಾದ್ದರಿಂದ, ಸಹಜವಾಗಿಯೇ ಸ್ವಲ್ಪ ಹೆದರಿದಂತಿದ್ದರು. ಅವರಂತೆಯೇ ನಾನೂ ಹೆದರಿದ್ದೆ ಎಂದೆನಿಸುತ್ತದೆ ಈಗ! ನಗುತ್ತಾ, ಚೆನ್ನಾಗಿ ಮಾತಾಡಿ, ಅವರ ಹೆದರಿಕೆ ಹೋಗಲಾಡಿಸಿದ ಮೇಲೆ ಪಾಠ ಪ್ರಾರಂಭಿಸುವುದೆಂದುಕೊಂಡು, ನನ್ನ ಪರಿಚಯ ಹೇಳಿದ್ದಾಯ್ತು. ನಾನು ಶಿಕ್ಷಕಿಯಾಗಿ ಕೆಲಸ ಮಾಡಿಲ್ಲವೆಂದೂ, ಆದರೆ ಪ್ರಯತ್ನ ಪಟ್ಟು ಕಲಿಸುವೆನೆಂದೂ, ಪಾಠ ಅರ್ಥವಾಗದಿದ್ದಲ್ಲಿ ಯಾರು ಬೇಕಾದರೂ ತಕ್ಷಣ ಕೇಳಬಹುದೆಂದೂ ಮನದಟ್ಟು ಮಾಡಿಸಿದೆ. ಮಕ್ಕಳಿಗೆ ಸಮಾಧಾನವಾದಂತೆನಿಸಿತು. ಅಲ್ಲೇ ಗೋಡೆಯಲ್ಲಿ ಕರಿಹಲಗೆ, ಕಿಟಕಿ ಬದಿಯಲ್ಲಿ ನಾಲ್ಕೈದು ಚೋಕ್ ಗಳು ಕಾಯುತ್ತಿದ್ದುವು. ಜೀವನದಲ್ಲಿ ಮೊದಲ ಬಾರಿಗೆ, ಬೋರ್ಡ್ ನಲ್ಲಿ ಬರೆದು ಮಕ್ಕಳಿಗೆ ಪಾಠ ಮಾಡುವ ಅವಕಾಶಕ್ಕಾಗಿ ಮನದಲ್ಲೇ ದೇವರಿಗೆ ವಂದಿಸಿ, ತುಂಬು ಖುಷಿ ಮನಸ್ಸಿನಿಂದ ಆರಂಭಿಸಿದೆ. ಗಣಿತದ ಸೂತ್ರಗಳು, ಗಣಿತವನ್ನು ಸರಳವಾಗಿ ಹೇಳಿಕೊಡುವ ವಿಧಾನ ಇತ್ಯಾದಿಗಳು ತನ್ನಿಂದ ತಾನಾಗಿಯೇ ಹೊಳೆಯುತ್ತಾ ಹೋಯಿತು. ನನಗೇ ಆಶ್ಚರ್ಯವಾಯಿತು.. ಇದು ಹೇಗೆ ನನಗೆ ಸಾಧ್ಯವಾಯಿತೆಂದು! ನಿಜವಾಗಿ ದೈವಕೃಪೆಯಲ್ಲದೆ ಮತ್ತೇನು? ಒಂದು ಪಾಠವಾದ ಕೂಡಲೇ ಮಕ್ಕಳಲ್ಲಿ ಅರ್ಥವಾಯಿತೇ ಇಲ್ಲವೇ ಎಂದು ವಿಚಾರಿಸಿದಾಗ, ಸರಿಯಾಗಿ ಅರ್ಥವಾದ ಬಗ್ಗೆ, ಎಲ್ಲರ ಒಕ್ಕೊರೊಲ ಉತ್ತರ ಕೇಳಿ ಮನಸ್ಸಿಗೆ ತುಂಬಾ ಸಮಾಧಾನವಾಯಿತು, ಜೊತೆಗೇ ಒಂದು ಅವರ್ಣನೀಯ ಧನ್ಯತಾ ಭಾವ.
ಶಾಲೆಯ ರಜಾದಿನಗಳಲ್ಲಿ ಮಾತ್ರ ಆಶ್ರಮಕ್ಕೆ ಹೋಗಿ, 2-3ಗಂಟೆಗಳಷ್ಟು ಹೊತ್ತು ಪಾಠ ಮಾಡುತ್ತಿದ್ದೆ. ಸಮಯಾವಕಾಶ ಕಡಿಮೆ ಇದ್ದುದರಿಂದ, ಪೂರ್ತಿ ಮಾಡಲಾಗದಿದ್ದರೂ, ಮಕ್ಕಳಿಗೆ ಅವರ ಕ್ಲಾಸಿನಲ್ಲಿ ಅರ್ಥವಾಗದ ಭಾಗಗಳನ್ನು ಸರಿಯಾಗಿ ವಿವರಿಸುತ್ತಿದ್ದೆ. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳು ಬಂದಾಗ ಎಲ್ಲರಿಗೂ ಆಗಾಗ ಪೆನ್ನು, ಪುಸ್ತಕಗಳ ಉಡುಗೊರೆಗಳನ್ನು ಕೊಟ್ಟು ಹುರಿದುಂಬಿಸುವುದೂ ನಡೆದಿತ್ತು. ಮಧ್ಯದಲ್ಲೊಮ್ಮೆ, ನನ್ನ ಹುಟ್ಟಿದ ದಿನಾಂಕವನ್ನು ತಿಳಿದುಕೊಂಡು, ಮಕ್ಕಳೆಲ್ಲರೂ ಅವರದೇ ರೀತಿಯಲ್ಲಿ ಶುಭಾಶಯ ಕೋರಿದರು. ಆ ದಿನ ಮಾತ್ರ ತುಂಬಾ ಭಾವುಕಳಾಗಿಬಿಟ್ಪಿದ್ದೆ.
ಕೋಣೆಯನ್ನು, ಬಣ್ಣ ಬಣ್ಣದ ನಾಲ್ಕೈದು ಬೆಲೂನುಗಳನ್ನು ಕಟ್ಟಿ ಅಲಂಕರಿಸಿದ್ದರು. ಮಕ್ಕಳು ತುಂಬಾ ಸಂಕೋಚದಿಂದ, ಅವರು ತಮ್ಮ ಕೈಯಾರೆ ತಯಾರಿಸಿದ ಚಿತ್ರ, ಅಲ್ಲೇ ಸಿಕ್ಕಿದ ಹೂ, ಹುಲ್ಲುಗಳ ಚಂದದ ಗುಚ್ಛ, ಪೆನ್ನು, ಇತ್ಯಾದಿಗಳನ್ನು ಬೇಡವೆಂದರೂ ಕೇಳದೆ, ಕೊಟ್ಟು ಆಶೀರ್ವಾದ ಪಡೆದರು. ಒಂದಿಬ್ಬರಂತೂ ನಮ್ಮಲ್ಲಿ ಕೊಡಲೇನೂ ಇಲ್ಲವೆಂದು ಮೈಹಿಡಿಯಾಗಿ ಹೇಳಿ ಆಶೀರ್ವಾದ ಪಡೆದಾಗ, ಮಕ್ಕಳ ಆ ಮುಗ್ಧ, ನಿರ್ಮಲ ಮನಸ್ಸುಗಳು ನನ್ನ ಕಣ್ಣಂಚು ಒದ್ದೆ ಮಾಡಿಸಿದವು. ಆ ವರ್ಷದ, ಅಲ್ಲಿಯ, ಹತ್ತನೇ ತರಗತಿಯ ಮಕ್ಕಳು, ಕಷ್ಟಪಟ್ಟು ಅಭ್ಯಾಸ ಮಾಡಿ ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾದುದು ಎಲ್ಲರಿಗೂ ಹೆಮ್ಮೆಯ ಸಂಗತಿ.
ಯಾರೇ ಆಗಲಿ..ಏನೇ ಆಗಲಿ, ಕಲಿಸುವವರೆಲ್ಲಾ ಶಿಕ್ಷಕರು, ಕಲಿಯುವವರು ವಿದ್ಯಾರ್ಥಿಗಳು. ಅಂತಯೇ ನನ್ನ ಪ್ರವೃತ್ತಿಯಾದ, ಈ ಅರೆ ಶಿಕ್ಷಕಿ ಕಾರ್ಯವು ಈಗ ಐದನೇ ವರ್ಷಕ್ಕೆ ಹೆಮ್ಮೆಯಿಂದ ಹೆಜ್ಜೆಯಿಡುತ್ತಿದೆ. ಮನೆ ಹತ್ತಿರದ ಕೆಲ ಮಕ್ಕಳೂ, ತಿಳಿಯದ ವಿಷಯಗಳನ್ನು ಅರಿತುಕೊಳ್ಳಲು ಬರುತ್ತಿರುತ್ತಾರೆ. ಎಷ್ಟೇ ಹೊತ್ತಿಗೆ ಬಂದರೂ, ಖುಷಿಯಿಂದ, ಅರ್ಥವಾಗುವಂತೆ ವಿವರಿಸಿ, ಅದರಿಂದ ಅವರಿಗೆ ಪ್ರಯೋಜನವಾದಾಗ ಸಿಗುವ ಸಂತೋಷ ಏನು ಕೊಟ್ಟರೂ ಸಿಗದೇನೋ.
ಎರಡು ವರ್ಷಗಳ ಹಿಂದಿನ ಸಂಗತಿ :
ಬಾಲ್ಯದ ಸ್ನೇಹಿತೆಗೆ ನಾನು ಮಕ್ಕಳಿಗೆ ಗಣಿತ ಹೇಳಿಕೊಡುವ ವಿಚಾರ ತಿಳಿದು, ಅವಳ ಮೊಮ್ಮಗನ ವಿಚಾರ ತಿಳಿಸಿದಳು. ಹತ್ತನೇ ತರಗತಿಯ ಒಳ್ಳೆಯ ವಿದ್ಯಾರ್ಥಿಯಾಗಿದ್ದ ಅವನು, ಕೆಟ್ಟ ಸ್ನೇಹಿತರ ಸಂಗದಿಂದ ಎಲ್ಲಾ ವಿಷಯಗಳಲ್ಲೂ ಅನುತ್ತೀರ್ಣನಾಗತೊಡಗಿದ್ದ. ಕೊನೆಯ ಪರೀಕ್ಷೆಗೆ ನಲ್ವತ್ತೈದು ದಿನಗಳು ಮಾತ್ರ ಉಳಿದಿದ್ದವು. ಅವನ ವಿದ್ಯಾಭ್ಯಾಸ ಬಗ್ಗೆ ಹೆತ್ತವರಿಗೆ ಏನೂ ಕಾಳಜಿ ಇರಲಿಲ್ಲ. ಅವಳು ತುಂಬಾ ಬೇಸರದಿಂದ ವಿಷಯಗಳನ್ನೆಲ್ಲಾ ತಿಳಿಸಿ, ಹೇಗಾದರೂ ಮಾಡಿ ಅವನನ್ನು ಪಾಸಾಗುವಂತೆ ಮಾಡು ಎಂದಾಗ, ಅದನ್ನು ನಾನು ಸವಾಲಾಗಿ ಸ್ವೀಕರಿಸಿದೆ.
ಮರುದಿನದಿಂದಲೇ, ಸಮರೋಪಾದಿಯಲ್ಲಿ ಪಾಠ ಸುರುವಾಯಿತು. ಯಾವ ವಿಷಯಗಳಲ್ಲೂ, ಏನೂ ಗೊತ್ತಿರಲಿಲ್ಲ. ಗಾಬರಿಯಾದರೂ, ದೇವರ ಮೇಲೆ ಭಾರ ಹಾಕಿ, ಮೊದಲಿಗೆ ನಾನೇ ಆಪ್ತ ಸಮಾಲೋಚನೆಯನ್ನು ನಡೆಸಿ, ಅವನ ಮನಸ್ಸನ್ನು ಸರಿ ದಾರಿಗೆ ತರುವ ಪ್ರಯತ್ನ ನಡೆಸಲಾಯಿತು. ಎಲ್ಲಾ ವಿಷಯಗಳಲ್ಲಿ ಮುಖ್ಯ ಪ್ರಶ್ನೆಗಳಿಗೆ ಉತ್ತರ ಕಲಿಯಲು ನೆರವಾದೆ, ಮುಖ್ಯವಾಗಿ ಗಣಿತದಲ್ಲಿ. ಅಂತೂ ಕೊನೆಯ ಹಂತದಲ್ಲಿ, ನನಗೇ ಪಬ್ಲಿಕ್ ಪರೀಕ್ಷೆ ಎನ್ನುವಂತೆ, ತೀವ್ರ ನಿಗಾವಹಿಸಿ, ಇಡೀ ದಿನ ಕುಳಿತು ಅಭ್ಯಾಸಗಳನ್ನು ಮಾಡಿಸಿ ತಯಾರಾದೆ. ಪರೀಕ್ಷೆ ಮುಗಿಸಿ, ಫಲಿತಾಂಶ ಬಂದಾಯಿತು. ಮನೆ ಮುಂದೆ ಹೋಗುತ್ತಿದ್ದಾಗ ಓಡಿ ಬಂದು ರಸ್ತೆಯಲ್ಲೇ ಕಾಲಿಗಡ್ಡ ಬಿದ್ದ, ಆ ವಿದ್ಯಾರ್ಥಿ, ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದ. ನಮ್ಮ ಶ್ರಮಕ್ಕೆ, ದೈವಬಲದಿಂದ, ಉತ್ತಮ ಪಲ ಸಿಕ್ಕಿತ್ತು. ಇದು ನನ್ನ ಜೀವನದಲ್ಲಿ ಒಂದು ಮರೆಯಲಾರದ, ಹೆಮ್ಮೆಯ ಘಟನೆಯಾಗಿ ಉಳಿದು ಬಿಟ್ಟಿದೆ.
ನಮ್ಮಲ್ಲಿಂದ ಇಪ್ಪತ್ತು ಕಿ.ಮೀ.ದೂರದ ಗುರುಕುಲವೊಂದರಲ್ಲಿ, ಸಮಯವಿದ್ದಾಗ ಹೋಗಿ, ಮಕ್ಕಳಿಗೆ ಉಚಿತವಾಗಿ ಕಲಿಸುವ ಅವಕಾಶ ಒದಗಿದುದನ್ನು ಸದುಪಯೋಗಪಡಿಸಿಕೊಂಡಿರುವೆ.
ಎಲ್ಲರೂ ಹೇಳುವಂತೆ, ಯಾವುದೇ ರೀತಿಯ ಸಾವಿರಾರು ಬಗೆಯ ವೃತ್ತಿಗಳಿರಬಹುದು.. ಆದರೆ ತುಂಬು ಹೃದಯದಿಂದ ಮಾಡುವ ಶಿಕ್ಷಕ ವೃತ್ತಿಯು ಸದಾ ಸಂತೋಷವನ್ನು ಕೊಡುವುದರಲ್ಲಿ ಎರಡು ಮಾತಿಲ್ಲ. ಎಲ್ಲಿಯಾದರೂ, ಕಲಿಸಿದ ವಿದ್ಯಾರ್ಥಿಗಳು ಸಿಕ್ಕಿ ಖುಷಿಯಿಂದ ನಮ್ಮನ್ನು ಮಾತನಾಡಿಸಿದರೆ ಅಭಿಮಾನವೆನಿಸುತ್ತದೆ. ಆದರೆ ನೋಡಿ..ಫೋನಲ್ಲಿ ಹಲೋ..ಹಲೋ.. ಹೇಳುತ್ತಿದ್ದ ನಾನು, ಈ ಅನುಭವಗಳನ್ನು ಪಡೆಯುವ ಅವಕಾಶ ಒದಗಿ ಬಂದುದು, ವಿಧಿ ನಿಯಮವಲ್ಲದೆ ಮತ್ತೇನು..!?
-ಶಂಕರಿ ಶರ್ಮ, ಪುತ್ತೂರು.
Nicely written article madam…
Thanks madam
ವಾ……ವ್ , ಸುಂದರವಾದ ಅನುಭವ ಮೇಡಂ, and great also. ಹಾದಿ ತಪ್ಪಿದ ವಿದ್ಯಾರ್ಥಿಯ ಬದುಕನ್ನು ಸಮಾಧಾನದಿಂದ ತಿದ್ದಿ ಅವನಿಗೊಂದು ಉಜ್ವಲ ಭವಿಷ್ಯ ಸಿಗುವಲ್ಲಿ ನೆರವಾದ ನಿಮ್ಮ ಬಗ್ಗೆ ಅಭಿಮಾನ ಮೂಡುತ್ತಿದೆ ಮೇಡಂ. ಶಂಕರಿ ಮೇಡಂ, ಶಿಕ್ಷಕರ ದಿನಾಚರಣೆಯ ಶುಭಾಶಯಗಳು ನಿಮಗೆ .
ಧನ್ಯವಾದಗಳು, ನಯನ ಮೇಡಂ.
ಪ್ರತಿಭಾವಂತರಿಗೆ . ಕಲಿಸುವದು ದೊಡ್ಡತನವಲ್ಲ. ಇದೇ ನಿಮ್ಮ ಕೆಲಸ, ಸಾಧನೆಗೆ ನಮೋನಮಃ ಶಂಕರಿಯವರೆ.
ನಿಮ್ಮ ಅನುಭವದ ಲೇಖನ ತುಂಬಾಚೆನ್ನಾಗಿದೆ.ಓದಿ ಖುಷಿಯಾಯಿತು.
ಧನ್ಯವಾದಗಳು ಮೇಡಂ.
Excellent . God may like your selfless service.
Thank you so much.
ಒಳ್ಳೆಯ ಕೆಲಸ ಹಾಗೂ ಉತ್ತಮ ಅನುಭವ ಶಂಕರಿಯಕ್ಕ ಪಾಠ ಮಾಡುವುದು ಒಂದು ಕಲೆ
ಧನ್ಯವಾದಗಳು.
ನಿಮ್ಮ ಜೇವನ ಚರಿತ್ರೆ ಹೀಗೆ ಸಾಗಲಿ ತುಂಬ ಸಂತೊಪವಾಯಿತು