ಪ್ರವಾಸ

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 7

Share Button


ಶರಸೇತು ಬಂಧನ

ಬೆಳಗ್ಗಿನಿಂದ ಸಂಜೆ ತನಕ ಅಪರೂಪದ ಸೂರ್ಯದೇಗುಲ ಕೋನಾರ್ಕ್,  ಧವಳಗಿರಿಯ ಶಾಂತಿ ಸ್ತೂಪ ಇತ್ಯಾದಿಗಳನ್ನು ಕಣ್ತುಂಬಿಕೊಂಡು, ಮನತುಂಬಿಕೊಂಡು ಹೋಟೇಲಿಗೆ ಹಿಂತಿರುಗಿದಾಗ ಪ್ರವಾಸದ ಎರಡನೇ ದಿನವೂ ಮುಗಿಯುತ್ತಾ ಬಂತಲ್ಲಾ ಎಂಬ ಬೇಸರದೊಂದಿಗೆ, ಉಳಿದ ದಿನಗಳಲ್ಲಿ ನೋಡಲಿರುವ ವಿಶೇಷ ಸ್ಥಳಗಳ ಬಗ್ಗೆಯೂ ಕುತೂಹಲ ಮೂಡಿತ್ತು. ಸದ್ಯದ  ಪರಿಸ್ಥಿತಿಯಲ್ಲಿ, ತಾಜಾ ತರಕಾರಿ, ಹಾಲು, ಮೊಸರು ಸಿಗುವುದು ಕಷ್ಟವಾಗಿತ್ತು. ಆಗಷ್ಟೆ ರಾತ್ರಿ 8ಗಂಟೆ. ಊಟಕ್ಕೆ ಸ್ವಲ್ಪ ತಡವಿದೆಯೆಂಬ ಸೂಚನೆ ಬಂತು. ಇವುಗಳೆಲ್ಲದರ ನಡುವೆಯೂ ನಮಗೆ ಅತ್ಯುತ್ತಮ ಆಹಾರ ಒದಗಿಸಲು ಬಾಲಣ್ಣನವರು ಹರಸಾಹಸ ಪಡುತ್ತಿದ್ದರು.

ಎಲ್ಲರೂ ಶುಚಿರ್ಭೂತರಾಗಿ ಊಟಕ್ಕೇನೋ ತಯಾರಾದರೂ, ಅದಕ್ಕಿನ್ನೂ ತಡವಿರುವುದರಿಂದ  ಯಾರೋ ಹೇಳಿದರು,  “ತಾಳಮದ್ದಳೆಯಿದೆಯಂತೆ” ಹೋ.. ಹೊಸತಾಗಿ ಈ ಪ್ರವಾಸಿ ಗುಂಪಿಗೆ ಸೇರಿದ ನಮಗೆ ಇದೊಂದು ವಿಶೇಷ ಸುದ್ದಿಯಾಗಿತ್ತು. ಊಟದ ಹಾಲ್ ನಲ್ಲಿ  ಮಾಡುವುದೆಂದು ಎಲ್ಲರೂ ಅಲ್ಲೇ ಕುಳಿತಾಗ, “ಇಲ್ಲಿ ಸೆಕೆಯಪ್ಪಾ,ಮೇಲಿನ ಟೆರೇಸ್ ಲ್ಲಿಯೇ ಆಗಬಹುದು”.  ಕರಾವಳಿಯವರಾದ ನಮಗೆ ಯಕ್ಷಗಾನ, ತಾಳಮದ್ದಳೆಗಳು ಅತೀ ಪ್ರಿಯವಾದುವುಗಳು. ನನಗಂತೂ ಕುತೂಹಲ.. ಹೇಗಿರಬಹುದು?.. ಅತೀ ಅಗತ್ಯ ಪರಿಕರಗಳಿಗೆ ಏನು ಮಾಡುವರು?.. ಎಂದು. ಮೇಲಿನ ಮಾಡು ಇಲ್ಲದ ಟೆರೇಸ್ ಮೇಲೆ, ನಮ್ಮ ಊಟದ ಕುರ್ಚಿಗಳೆಲ್ಲಾ ಬಂದು ಕೂತವು. ನಾವೆಲ್ಲರೂ ಅದರ ಮೇಲೆ ಆಸೀನರಾದೆವು. ಬಾಗಿಲ ಬಳಿ ಇದ್ದ ಒಂದೇ ಒಂದು ಬಲ್ಬಿನಿಂದ ಬರುವ ನಸು ಬೆಳಕಲ್ಲಿ ಪ್ರಾರಂಭವಾದ ತಾಳಮದ್ದಳೆಯ ವೇದಿಕೆಯ ಬಗ್ಗೆ ಹೇಳಲೇ ಬೇಕು..ಯಾಕೆಂದರೆ, ಎಲ್ಲಾ ಅಣ್ಣಂದಿರ ಉತ್ಸಾಹ ಇದೆಯಲ್ಲ …ಎಷ್ಟು ಹೊಗಳಿದರೂ ಕಡಿಮೆಯೇ!   ನಾರಾಯಣಣ್ಣ ಅವರು, ಸ್ವಂತದ ಪುಟ್ಟ ಧ್ವನಿವರ್ಧಕದ ವ್ಯವಸ್ಥೆ ಮಾಡಿದರೆ, ಭಾಗವತರಾದ ಗೋಪಾಲಣ್ಣನವರಿಗೆ ಅವರ ಸ್ಥಾನ ಮರ್ಯಾದೆಗೆ ತಕ್ಕಂತೆ, ಎತ್ತರದ ಆಸನ(ಊಟದ ಮೇಜೇ ವೇದಿಕೆ!) ಸಿದ್ಧವಾಗಿತ್ತು. ಜ್ಯೋತಿ ಅಕ್ಕ-ಚಂದ್ರಣ್ಣನವರ ಕುವರ, ಉತ್ಸಾಹೀ, ಸಂಕೋಚ ಸ್ವಭಾವದ, ಚೆಂಡೆ ಕಲಿಯುತ್ತಿರುವ ಹುಡುಗ ಭಾರ್ಗವ ಕೃಷ್ಣ ಎರಡು ಕೋಲುಗಳನ್ನು ಹಿಡಿದು ತಯಾರು.. ಆದರೆ ಬಡಿಯುವುದು ಯಾವುದರ ಮೇಲೆ? ಅದೋ, ಆಗ ಬಂತು ನೋಡಿ.. ಅದಕ್ಕಾಗಿ ವಿಶೇಷ ಸಲಕರಣೆ..ದಪ್ಪ ರಟ್ಟಿನ ಅಟ್ಟಿ! ಎದುರು ಬದುರಾಗಿ ಹಾಕಿದ ಕುರ್ಚಿಗಳು ಅರ್ಥಧಾರಿಗಳಿಗಾಗಿ. ಬೆಳಕಿಗಾಗಿ ಅವರವರ ಮೊಬೈಲ್ ಬೆಳಕು ಸಹಕರಿಸಿತು. ಇರುವ ಸಲಕರಣೆಗಳಿಂದಲೇ ಈ ರೀತಿಯಲ್ಲಿ ಒಂದು ಕಾರ್ಯಕ್ರಮ ಮಾಡುವುದನ್ನು  ನೋಡುವುದು ನಾನಂತೂ ಇದೇ ಮೊದಲು..ತುಂಬಾ ಖುಷಿಯಾಗಿತ್ತು. ಭಾಗವತರು ತಯಾರಾಗಿಯೇ ಬಂದಿದ್ದರು, ತಮ್ಮ ತಾಳದೊಂದಿಗೆ.

ಮಂದ ಬೆಳಕಿನಲ್ಲಿ, ಹದವಾಗಿ ಬೀಸುತ್ತಿರುವ ತಂಗಾಳಿಗೆ ಮೈಯೊಡ್ಡಿ  ಕುಳಿತಿರುವಾಗಲೇ,  ಎಂಟೂವರೆಗೆ ಸರಿಯಾಗಿ ಭಾಗವತರು ವಿನಾಯಕನಿಗೆ ವಂದಿಸಿ ಹಾಡು ಪ್ರಾರಂಭಿಸಿದಾಗ ಎಲ್ಲರಿಗೂ ರೋಮಾಂಚನ! ‘ಶರಸೇತು ಬಂಧನ’ ತಾಳಮದ್ದಳೆಯ ಕಥಾವಸ್ತು. ಅರ್ಜುನನಾಗಿ ಚಂದ್ರಣ್ಣ, ಹನುಮಂತನಾಗಿ ಕೇಶವಣ್ಣ, ಕೃಷ್ಣನಾಗಿ ಮಹೇಶಣ್ಣ, ವೃದ್ಧ ಬ್ರಾಹ್ಮಣನಾಗಿ ಕೃಷ್ಣಣ್ಣ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಶಾಭಾಷ್ ಗಿಟ್ಟಿಸಿಕೊಂಡರು. ಹವ್ಯಾಸಿ ಕಲಾವಿದರು ಯಾರಿಗೂ ಕಡಿಮೆಯಿಲ್ಲದಂತೆ ತಮ್ಮ  ಪ್ರತಿಭೆಯನ್ನು ಅನಾವರಣಗೊಳಿಸಿದ್ದರು. ಭಾರ್ಗವನ ಚೆಂಡೆ ಪೆಟ್ಟನ್ನಂತೂ ಮರೆಯುವ ಹಾಗೇ ಇಲ್ಲ. ನಿಜವಾಗಿಯೂ ಆ ದಿನದ ಕಾರ್ಯಕ್ರಮವು ನಮಗೆಲ್ಲರಿಗೂ ಅವಿಸ್ಮರಣೀಯವಾಗಿದೆ. ರಾತ್ರಿ ಗಂಟೆ 9.30 ಕಳೆದರೂ, ಯಾರಿಗೂ ಊಟದ ನೆನಪೇ ಇದ್ದಂತಿರಲಿಲ್ಲ..ಅದರಿಂದಲೇ ತಿಳಿಯುವುದಲ್ಲವೇ ನಮ್ಮ ಶರಸೇತು ಬಂಧನ ಎಷ್ಟು ಚೆನ್ನಾಗಿತ್ತೆಂದು?
.
(ಮುಂದುವರಿಯುವುದು..)

ಹಿಂದಿನ ಪುಟ ಇಲ್ಲಿದೆ:  ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 6

– ಶಂಕರಿ ಶರ್ಮ, ಪುತ್ತೂರು.

8 Comments on “ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 7

  1. ಈ ತಂಡದವರ ಸದಭಿರುಚಿ ಹಾಗೂ ಹವ್ಯಾಸಕ್ಕೆ ಶರಣು. ನಾವು ಅವರ ಜೊತೆಗೆ ಮುಕ್ತಿನಾಥಕ್ಕೆ ಹೋಗಿದ್ದಾಗಲೂ, ಲಭ್ಯ ಸಲಕರಣೆ ಬಳಸಿ, ‘ತಾಳ ಮದ್ದಳೆ’ ನಡೆಸಿದ್ದರು. ಚೆಂದದ ಪ್ರವಾಸಕಥನ .

    1. ಹೌದು..ಅವರೆಲ್ಲ ಉತ್ಸಾಹವನ್ನು ಮೆಚ್ಚಲೇಬೇಕು… ಧನ್ಯವಾದಗಳು ಮಾಲಾ.

  2. ಮುಂದಿನ ಓದಿಗೆ ಕಾತರಿಸುವಂತೆ ಕುತೂಹಲ ಕಾಯ್ದುಕೊಂಡಿದ್ದೀರಿ…

  3. ಪ್ರತಿ ಕಂತನ್ನು ಓದಿದಂತೆಲ್ಲಾ ನನ್ನ ಭುವನೇಶ್ವರ ಭೇಟಿಯ ನೆನಪುಗಳು ಬರುತ್ತಿದ್ದವು..ಆಯಾಯ ಸ್ಥಳ ಗಳ ವಿವರಣೆ ಚೆನ್ನಾಗಿ ಕೊಟ್ಟಿರುವಿರಿ. ಆಭಿನಂದನೆಗಳು

  4. ತಮ್ಮ ನೆನಪಿನ ಬುತ್ತಿಯಿಂದ ಸೊಗಸಾದ ಪ್ರವಾಸ ಕಥನದ ಸುಂದರ ನೆನಪುಗಳನ್ನು ನಮ್ಮ ಮುಂದೆ ಬಿಚ್ಚಿ ಇಡುತ್ತಿರುವ ಶಂಕರಿ ಮೇಡಂ ಗೆ ಧನ್ಯವಾದಗಳು . ನಿಮ್ಮ ಪ್ರವಾಸ ಕಥನ ಹೇಮಮಾಲಾ ಅವರ “ಚಾರ್ ಧಾಮ್” ಅನ್ನು ಒಮ್ಮೆ ನೆನೆಯುವಂತೆ ಮಾಡುತ್ತದೆ . ತುಂಬಾ ಚೆನ್ನಾಗಿದೆ ಮೇಡಂ ಪ್ರವಾಸ ಕಥನ

    1. ನಯನ ಮೇಡಂ, ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.

Leave a Reply to km vasundhara Cancel reply

 Click this button or press Ctrl+G to toggle between Kannada and English

Your email address will not be published. Required fields are marked *