ಪುಸ್ತಕ ನೋಟ : ‘ತೆರೆದ ಕಿಟಿಕಿ’
ನಿನ್ನಾಸೆಗಳೆಲ್ಲವು
ಗುರಿಗಳಾಗಿದ್ದರೆ
ಎಷ್ಟು ಚೆನ್ನಾಗಿತ್ತು ಚೆಲುವೆ…
ಇಂತಹ ಹಲವಾರು ವಿಭಿನ್ನ ಸಾಲುಗಳಿಂದ ‘ ತೆರೆದ ಕಿಟಕಿ’ ಎಂಬ ಕೃತಿಯ ಮೂಲಕ ಸಾರಸ್ವತ ಲೋಕಕ್ಕೆ ಕಾಲಿಟ್ಟು , ಸಾಹಿತ್ಯಾಸಕ್ತರನ್ನೆಲ್ಲ ಇದಿರುಗೊಂಡಿದ್ದಾರೆ ವೃತ್ತಿಯಿಂದ ಇಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಕೆ. ಎಸ್. ಮರಿಯಯ್ಯಸ್ವಾಮಿಯವರು. ಬರವಣಿಗೆ ಯಾರಿಗು ಯಾವ ಸಂದರ್ಭದಲ್ಲು ಒಲಿದು ಬರುತ್ತದೆ ಎಂಬುದಕ್ಕೆ ಇವರೆ ಸಾಕ್ಷಿ. ಯಾಕೆಂದರೆ ಅವರೆ ಹೇಳಿದಂತೆ ಮದುವೆಯಾದ ಹೊಸತರಲ್ಲಿ ಪರಮಾಶ್ಚರ್ಯವೆಂಬಂತೆ ಒಲಿದು ಬಂದಳು ಕಾವ್ಯ ದೇವತೆ ಎಂದಿದ್ದಾರೆ. ಇದರರ್ಥ ಪ್ರೇಮದ ಪರಮಾವಧಿಯಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದರ ಅರಿವಾಗುತ್ತದೆ. ತದನಂತರ ಇದನ್ನು ಅತ್ಯುತ್ತಮವಾದ ಹವ್ಯಾಸವನ್ನಾಗಿ ಮುಂದುವರೆಸುತ್ತಿರುವ ಇವರ ಸಾಹಿತ್ಯಾಸಕ್ತಿ ಶ್ಲಾಘನೀಯ. ಯಾಕೆಂದರೆ ತನ್ನಿಂದ ತಾನೆ ಒಲಿದು ಬಂದಿದೆ ಎಂದರು ಇದರ ಹಿಂದೆ ಅವರ ಪರಿಶ್ರಮ ಅಪಾರ. ತನ್ನೊಳಗಡೆಯೆ ಬಚ್ಚಿಟ್ಟುಕೊಂಡಿದ್ದ ಈ ತಹತಹಿಕೆ ಒಂದು ಸಂಧರ್ಭದಲ್ಲಿ ಹೊರಬಂದಿದೆ ಎಂದರು ತಪ್ಪಲ್ಲ. ಸಾಹಿತ್ಯದ ಒಲವೆಂದರೆ ಹೀಗೆ ಆವರಿಸಿಕೊಂಡರೆ ಸಾವರಿಸಿಕೊಳ್ಳಲಾಗದಂತಹ ಕಕ್ಕುಲಾತಿ ನೀಡುತ್ತದೆ.
ಇವರ ಕವಿಮನಸ್ಸು ಸಮರ್ಥವಾಗಿ ಅದೆಷ್ಟೋ ವರ್ಷಗಳಿಂದ ನಿರಂತರವಾಗಿ ರಚಿಸುತ್ತಾ ಬಂದಿರುವ ಚಿಕ್ಕ ಚಿಕ್ಕ ಕವಿತೆಗಳ ಗುಚ್ಛವನ್ನು ಕೃತಿಯ ಮೂಲಕಹೊರತಂದಿದ್ದಾರೆ. ವಿಶೇಷವೆಂದರೆ ಇಲ್ಲಿ ಯಾವ ಕವಿತೆಗಳಿಗು ಶೀರ್ಷಿಕೆಗಳು ಇಲ್ಲ. ಇದು ಪಿ.ಲಂಕೇಶರ ನೀಲು ಕಾವ್ಯವನ್ನೇ ನೆನಪಿಸುತ್ತದೆ. ಅಲ್ಲಿಯು ಯಾವುದೇ ಹನಿ ಕವಿತೆಗಳಿಗೆ ಶೀರ್ಷಿಕೆಗಳು ಇಲ್ಲ . ಇಂತಹ ಪ್ರಯೋಗವನ್ನು ಇನ್ನು ಹಲವಾರು ಬರಹಗಾರರು ಮಾಡಿದ್ದಾರೆ. ತಿರುಮಲೇಶರ ಕವಿತೆಗಳು , ಎಂ.ಎಸ್. ರುದ್ರೇಶ್ವರಸ್ವಾಮಿಯವರ ‘ಅವಳ ಕವಿತೆ’ ಕೃತಿ, ಶ್ರೀ ವಾಸುದೇವ ನಾಡಿಗರ ‘ ನಿನ್ನ ಧ್ಯಾನದ ಹಣತೆ ‘ ಇತ್ಯಾದಿ ಕವನ ಸಂಕಲನಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಈಗಾಗಲೇ ಇವೆ. ಇಂಥದೆ ಪ್ರಯೋಗಕ್ಕೆ ಕೆ.ಎಸ್. ಮರಿಯಯ್ಯಸ್ವಾಮಿಯವರ ‘ತೆರೆದ ಕಿಟಕಿ ‘ ಕೃತಿಯು ಸೇರುತ್ತದೆ. ಕಾವ್ಯ ಹೇಗಿರಬೇಕು, ನಿಜವಾದ ಕಾವ್ಯ ಯಾವುದು ಎಂಬ ಚೌಕಟ್ಟು ಹಾಕಿಟ್ಟರೆ ತಮ್ಮ ತಮ್ಮ ಆತ್ಮಸಂತೋಷಕ್ಕಾಗಿ , ಬಿಡುಗಡೆಯ ಮಾಧ್ಯಮವಾಗಿ ಬರವಣಿಗೆಯ ತೆಕ್ಕೆಗೆ ಬಿದ್ದವರು ಬರೆದದನ್ನು ಮುಚ್ಚಿಟ್ಟುಕೊಳ್ಳಬೇಕಾಗುತ್ತದೆ. ಕಾವ್ಯ ಯಾರ ಹಂಗಿಲ್ಲದೆ , ಯಾವುದೇ ಆಯಾಮಗಳಿಲ್ಲದೆ ಮನಸ್ಸಿನಾಳದ ಭಾವನೆಗಳನ್ನು ಪ್ರತಿಬಿಂಬಿಸಲು ವ್ಯಕ್ತವಾಗುತ್ತಿರುವುದು ಪ್ರಸ್ತುತ ದಿನಗಳಲ್ಲಿ ಉತ್ತಮ ಬೆಳವಣಿಗೆ.
ಅವಸರದ ಬದುಕು
ಬೇಸರದ ಬೆಂಗಳೂರು
ಸಂಚಾರ ದಟ್ಟಣೆ ಯಲ್ಲಿ ಬಂಧಿ
ಆ್ಯಂಬುಲೆನ್ಸ್ ಆರ್ತನಾದ ಕೇಳಿಯೂ
ಮನಸ್ಸು ಇಬ್ಬಂದಿ….?!
ತುರ್ತು ಸಮಯದಲ್ಲು ದಾರಿ ಬಿಡದೇ..!?
ಹೊಂಚು ಹಾಕಿದೆ ಸ್ವಾರ್ಥ
ಬೇಗ ಸೇರುವ ಗಮ್ಯಕ್ಕೆ
ಧಾವಂತದ ಬದುಕಿನ ಸದ್ಯದಲ್ಲಿ ಉಸಿರುಗಟ್ಟುವ ಶಹರ ಜೀವನವನ್ನು ಹೇಳಿದ ಪರಿ ಅನನ್ಯವಾಗಿದೆ. ವೃತ್ತಿಗಾಗಿ ಪಟ್ಟಣ ಸೇರುವ ಅದೆಷ್ಟೋ ಮನಸ್ಸುಗಳಿಗೆ ಇದರ ಅನುಭವವಾಗಿರುತ್ತದೆ.ಬರವಣಿಗೆಯ ಪ್ರವೃತ್ತಿ ಇರುವವರು ತಮ್ಮ ಬೇಗುದಿಯನ್ನು ಹೀಗೆ ಹೊರಹಾಕಿದರು ಅವರಲ್ಲೊಂದು ಹೋರಾಟದ ಮನಸ್ಥಿತಿಯಿರುತ್ತದೆ. ಹೋರಾಡುವ ಮನಸ್ಸು, ಅನ್ಯಾಯವನ್ನು ಪ್ರತಿಭಟಿಸುವ ಧೈರ್ಯ, ಶೋಷಣೆಯ ವಿರುದ್ಧ ಸಿಡಿದೇಳುವ ಸ್ಥೈರ್ಯ ಯಾವಾಗಲೂ ಬರಹಗಾರರಿಗೆ ಇರಲೇಬೇಕಾದ ಅಂಶಗಳು ಎಂಬುದು ನನ್ನನಿಸಿಕೆ . ಇಲ್ಲಿನ ಬಹುತೇಕ ಹನಿ ಕವಿತೆಗಳು ಹೀಗೆ ಇದೇ ಅಂಶಗಳ ಬಗ್ಗೆ ಧ್ವನಿಯೆತ್ತುತಿರುವುದು ಲೇಖಕರ ಸಮಾಜಮುಖಿ ಕಳಕಳಿಯನ್ನು ತೋರಿಸುತ್ತದೆ.
ಸುಖ- ದುಃಖ
ಎರಡಕ್ಕೂ ಸಮಾನ ” ಬಳಸಿ “
ಬಿಸಾಡುವ ವಸ್ತು ??
ನಿಷ್ಪಾಪಿ ಹೂವಿಗಿಲ್ಲ!!?
ಕಟ್ಲೆ ದಾಖಲಿಸಿ
ನ್ಯಾಯ ಕೇಳುವ ಹಕ್ಕು
ಒಂದು ಸಾಧು ಹೂವಿಗಾದರು ನ್ಯಾಯ ಬೇಕು ಎಂಬ ಧ್ವನಿ ಅರ್ಥಗರ್ಭಿತವಾದುದು.ಯಾಕೆಂದರೆ ಜೀವಿಸುವ ಪ್ರತಿ ಅಣುವಿಗು ಇಲ್ಲಿ ನ್ಯಾಯ ಸಲ್ಲಬೇಕು. ಇರುವಷ್ಟು ದಿನದ ಜೀವನದಲ್ಲಿ ಮೇಲು ಕೀಳೆಂಬ ತಾರತಮ್ಯ ಇರಬಾರದು.
ಜೀವರಾಶಿಗಳ
ಸ್ವರೂಪ ಗಾತ್ರ
ಅಸಮಾನ
ಸಾವು ನೋವು ಮಾತ್ರ
ಒಂದೇ ಪರಿಮಾಣ .
ನುಡಿದಂತೆ ನಡೆಯುವುದು ಅತಿ ವಿರಳವಿರುವ ಈ ಲೋಕದಲ್ಲಿ ಕಂಡದ್ದನ್ನು ಕಂಡಂತೆ ಹೇಳಿದಂತಿರುವ ಲೇಖಕರ ಈ ಕವಿತೆಯ ಸಾಲುಗಳು ಮೆಚ್ಚುವಂತದ್ದು.
ನಮ್ಮ ಗುರುವರ್ಯರು
ನಿವೃತ್ತಿಯವರೆಗೂ
ಸರ್ವಜ್ಞನ ವಚನ
ಮಹಿಳಾ ಸಬಲೀಕರಣ
ಬೋಧಿಸಿ ಮೆದುವಾದರು
ಮಗನ ಮದುವೆಗೆ
ವರದಕ್ಷಿಣೆ ಪಡೆದು ಗೆಲುವಾದರು
ಪಂಚಾಮೃತದ ‘ ಸವಿಯ ‘ ಬಲ್ಲುದೆ ಸೌಟು
ಜ್ಞಾನ ಉಣಬಡಿಸಿದವನ ಖಾಲಿ ಸ್ಲೇಟು
ಇಷ್ಟು ಸೊಗಸಾದ ಕವಿತೆಯಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನು ಛೇಡಿಸಿದ್ದು ಜನತೆಗೆ ಎಚ್ಚೆತ್ತುಕೊಳ್ಳುವ ಪಾಠ. ಇವರ ಈ ಹನಿ ಕವಿತೆ ವಾಸ್ತವಕ್ಕೆ ಹಿಡಿದ ಕೈಗನ್ನಡಿಯಂತಿದೆ. ಇಂತಹ ವ್ಯಕ್ತಿಗಳೆ ತುಂಬಿರುವ ಸಮಾಜದಲ್ಲಿ ಒಳ್ಳೆಯತನಕ್ಕೆ , ಮಾನವೀಯತೆಗೆ ಜಾಗವೆಲ್ಲಿ ಬರಬೇಕು ಎಂದು ಪ್ರಶ್ನಿಸಿದಂತಿದೆ. ಲೇಖಕರಿಗೊಬ್ಬರು ಗುರುವಿದ್ದರು ಅವರು ಹೀಗೆ ಮಾಡಿದರು ಎಂಬುದೇನು ನಮಗೆ ಗೊತ್ತಿಲ್ಲ. ಇವರ ಕವಿತೆ ಕಲ್ಪನೆಯು ಇರಬಹುದು . ಆದರೆ ಇಂತಹ ಕವಿತೆ ಹುಟ್ಟಬೇಕೆಂದರೆ ಸಮಾಜ ಎಷ್ಟು ಕೆಟ್ಟಿದೆ ಎಂಬುದನ್ನು ಪ್ರತಿ ಮನುಜನು ಚಿಂತಿಸಬೇಕು. ಬರಹಗಾರರು ಮಾಡಲೇಬೇಕಾದ ಮೊದಲ ಕೆಲಸವೆಂದರೆ ಇದೇ ರೀತಿ ನ್ಯಾಯವಲ್ಲದ್ದನ್ನು ಟೀಕಿಸುತ್ತ ಗುರುವಾಗಬೇಕು. ಇದನ್ನೋದಿ ಒಬ್ಬ ಬದಲಾದರು ಸಾಕು ಕೃತಿ ಸಾರ್ಥಕತೆ ಪಡೆದುಕೊಳ್ಳುತ್ತದೆ.
ಜೀವಾತ್ಮವಿರುವ
ಮನದ ಗರ್ಭ ಗುಡಿಯ
ಬಾಗಿಲು ಮುಚ್ಚಿದ ಜನ
ಗ್ರಾನೈಟ್ ಕಲ್ಲಿನ ಗುಡಿಯ ಕಟ್ಟಿ
ಹೂಳುತ್ತಿದ್ದಾರೆ ಹೆಣ?!?!
ಹಿಂಸೆಯನ್ನು ಅಲ್ಲಗಳೆಯುವ, ನವಿರಾಗಿ ಹೇಳುವ ರೀತಿ ಓದುಗರನ್ನು ತಟ್ಟನೆ ಸೆಳೆಯುವ ಕವಿತೆಯೊಂದು ಇಲ್ಲಿದೆ. ಅಹಿಂಸೆ, ಅಹಿಂಸೆ ಎಂದು ನಾವು ಬಡಕೊಂಡರು ಪ್ರಾಣಿಗಳನ್ನು ಬಿಡಿ ಮನುಷ್ಯ ಮನುಷ್ಯರನ್ನೆ ಎಗ್ಗಿಲ್ಲದೆ ಕೊಲ್ಲುವ ಕೆಟ್ಟ ಜಮಾನವಾಗಿಬಿಟ್ಟಿದೆ ಬದಲಾದ ನಮ್ಮ ಈ ಕಾಲ. ಕಾಲ ಬದಲಾಗಿದೆ ಎಂದು ನಾವು ಅವಲತ್ತುಕೊಂಡರು ಏನು ಪ್ರಯೋಜನ ಬಂತು ? ಬದಲಾದವರು ನಾವುಗಳೇ ತಾನೆ? ಮನುಷ್ಯರೇ ಮನುಷ್ಯನನ್ನು ಕುರಿಗಳಾಗಿ ಮಾಡಿ ಬದುಕುತ್ತಿರುವ ಜೀವನವಿಂದು ನಡೆಯುತ್ತಿದೆ.
ಬೆನ್ನು ಸವರಿ
ನೆತ್ತಿ ನೇವರಿಸಿ
ಕಟುಕನ ಕೈಯಲ್ಲಿ
ಎತ್ತಿ ತೂಗಿಸಿಕೊಂಡ
ಹತ್ತಿಯ ಬಣ್ಣದ
ಪೆದ್ದು ಕುರಿಯ
ಅರಿವಿಗೇನು ಗೊತ್ತು!?
ಇದು ಮುದ್ದಲ್ಲ!!
ವ್ಯಾಪಾರ!?!!
ಪ್ರೀತಿಯ ಬಗ್ಗೆ ಇಲ್ಲಿ ಬಲು ಹೃದ್ಯವಾದ ಕವಿತೆಗಳಿವೆ. ಪ್ರೀತಿಯ ದಾಂಪತ್ಯ ಗೀತೆಗಳು ಹೆಚ್ಚು ತೂಕದಿಂದ ಕೂಡಿರುತ್ತವೆ ಎಂಬುದು ನಮಗಿಲ್ಲಿ ಮತ್ತೊಮ್ಮೆ ದಿಟವಾಗುತ್ತದೆ.
ಹಳೆಯ ಹಾಡುಗಳೇ
ಎಲ್ಲಿ ಹೋದಿರಿ
ಬಂದೆನ್ನ ಸಂತೈಸಿ
‘ ಅವಳು ‘
ತವರಿಗೆ ಹೋಗಿದ್ದಾಳೆ.
ಇಂತಹ ಕವಿತೆಗಳನ್ನು ಏನು ಹೇಳದೆ ಬರಿದೆ ಓದಿ ಆಸ್ವಾದಿಸುವುದಷ್ಟೆ ನಮಗೆ ಕೆಲಸ ,ಅದುವೆ ಓದಿನಿಂದ ಸಿಗುವ ಸಿಖವು ಹೌದು.
ಅವಳ ಹೆರಳು
ಗರಿಬಿಚ್ಚಿ ಹಾರಾಡಿದಾಗ
ಕಪ್ಪನೆ ಮೋಡ ಬಂದಂತೆ
ಭ್ರಮಿಸಿ ನಲಿದವು
ಬಾಯಾರಿದ ಪಯಿರು
ಇಲ್ಲಿರುವ ಕವಿತೆಗಳೆಲ್ಲವು ಹನಿಗಳಾದರು ಅದು ಹೇಳುವ ನಾನರ್ಥ ಅಗಾಧವಾಗಿದೆ. ಬದುಕಿನ ವಿವಿಧ ಮಜಲುಗಳಲ್ಲಿ ಕಂಡ ಅನುಭವಗಳ ಸಾರವಿದೆ. ಪ್ರೀತಿ , ವಿರಹ, ನಿಸರ್ಗ , ಸಾಮಾಜಿಕ , ಶೈಕ್ಷಣಿಕ ಹೀಗೆ ಹಲವಾರು ಸಂಗತಿಗಳಿಗೆ ದಕ್ಕಿದ ಭಾವಭಿವ್ಯಕ್ತಿ ಇದೆ. ಚಿಕ್ಕ ಕವಿತೆಗಳನ್ನು ಬರೆಯುವುದು ಖಂಡಿತ ಸುಲಭವಲ್ಲ . ಓದುವಾಗ ಸುಲಭವೆಂದು ತೋಚಿದರು ಹನಿಗವಿತೆಗಳನ್ನು ಬರೆಯುವುದು ಕ್ಲಿಷ್ಟಕರ. ಯಾಕೆಂದರೆ ಸೂಕ್ತ ಪ್ರಾಸಪದಗಳಿಗೆ ನಾವು ತಡಕಾಡಬೇಕಾಗುತ್ತದೆ , ಹೇಳಬೇಕಾದದನ್ನು ಪದಗಳಲ್ಲಿ ಹಿಡಿದಿಡಬೇಕಾಗುತ್ತದೆ ಮತ್ತು ಬರೆಯಲು ಸಂಯಮ ಬೇಡುತ್ತದೆ. ಇದು ವಿಶಿಷ್ಟವಾದ ಪ್ರಯೋಗ ಮತ್ತು ಪ್ರತಿಭೆ ಎಂಬುದು ನನ್ನಭಿಪ್ರಾಯ. ಸಾಹಿತ್ಯವನ್ನು ಅಗಾಧವಾಗಿ ಪ್ರೀತಿಸಿದ ಮತ್ತು ಗಂಭೀರವಾಗಿ ಪರಿಗಣಿಸಿದ ಲೇಖಕರಿವರು ಎಂಬುದು ನಮಗಿಲ್ಲಿ ತಿಳಿಯುತ್ತದೆ. ತಮ್ಮ ಧೋರಣೆಗಳಲ್ಲಿ ತಾಜಾತನವಿದೆ. ಕವಿಯ ಜೀವನೋತ್ಸಾಹದ ತಂತುಗಳು ಕವಿತೆಯ ಎಳೆಗಳಲ್ಲಿ ಕಂಡುಬರುತ್ತವೆ. ಬದುಕಿನ ಸೂಕ್ಷ್ಮ ವಿಚಾರಗಳನ್ನು ಗ್ರಹಿಸುವ ಇವರ ಗ್ರಹಿಕೆ ಅಪರೂಪವಾದದ್ದು. ಸಂಬಂಧಗಳ ನಡುವಿನ ಗೌರವ ಇವರ ಕಾವ್ಯದಲ್ಲಿ ಕಾಣಿಸುತ್ತದೆ. ಹೆಣ್ಣು ಮತ್ತು ಪ್ರೀತಿ ಪರಸ್ಪರ ರೂಪಕವಾಗಿರುವುದು ರೋಚಕವಾಗಿದೆ. ಕೆ.ಎಸ್. ಮರಿಯಯ್ಯಸ್ವಾಮಿಯವರ ಸಾಹಿತ್ಯ ಯಾನ ನಿರಂತರವಾಗಿರಲಿ ಎಂಬುದಾಗಿ ನಾವೆಲ್ಲರು ಆಶಿಸೋಣ.
– ಸಂಗೀತ ರವಿರಾಜ್, ಚೆಂಬು.
ಶೀರ್ಷಿಕೆ ಇಲ್ಲದ ಕವನಗಳ ಪರಿಕಲ್ಪನೆ ವಿಶಿಷ್ಟ ಎನಿಸಿತು. ಉತ್ತಮ ಪುಸ್ತಕ ಪರಿಚಯ. .
ಧನ್ಯವಾಗಳು
ನೈಸ್ sangeetha
ಕೃತಿ ಪರಿಚಯ, ಕವನಗಳ ಆಯ್ದ ಸಾಲುಗಳು ಚೆಂದ ಬಂದಿದೆ.. ಶುಭಾಶಯಗಳು ಸಂಗೀತಾ ಜೀ..
ಪುಸ್ತಕ ಪರಿಚಯಿಸಿದ ಸಂಗೀತರವರಿಗೆ ಅಭಿನಂದನೆಗಳು..
ತಮ್ಮ ಬರವಣಿಗೆಯ ಶೈಲಿ ಆಪ್ಯಾಯಮಾನ
ಕವಿ ಮನಸಿನ ಗೆಳೆಯ. ಅದ್ಬುತ ಪರಿಕಲ್ಪನೆ. ಇನ್ನಷ್ಟು ಸಂಕಲನಗಳು ಮೂಡಿಬರಲಿ.
ಹಂತ ಹಂತವಾಗಿ ಕವಿತೆಯ ಪುಟಗಳನ್ನೂ , ಅವುಗಳ ವೈಶಿಷ್ಟ್ಯವನ್ನೂ ಪರಿಚಯಿಸಿದ ರೀತಿ ಚೆನ್ನಾಗಿದೆ . nice one
ಚೆನ್ನಾಗಿದೆ ಪರಿಚಯಿಸಿದ್ದು.
ಪುಸ್ತಕ ಪರಿಚಯ ಚೆನ್ನಾಗಿ ಮೂಡಿಬಂದಿದೆ.
ನನ್ನ ಬರಹವನ್ನು ಮೆಚ್ಚಿ ಅಭಿನಂದಿಸಿದ ಎಲ್ಫ್ಲರಿಗೂ ಅಭಿನಂದನೆಗಳು
sangeetha
Please send me a copy