ಅಮೇರಿಕಾದಲ್ಲಿ ಇದ್ಧ ಕೆಲವು ತಿಂಗಳುಗಳಲ್ಲಿ ನನಗೆ ಅಲ್ಲಿಯ ಕೆಲವಾರು ವಿಷಯಗಳು ಕುತೂಹಲ, ಅಚ್ಚರಿ ಮೂಡಿಸಿದ್ದಿದೆ. ಅವುಗಳನ್ನು ನಿಮ್ಮೊಡನೆ ಹಂಚಿಕೊಳ್ಳವಾಸೆ.
ನಾನು ಒಂಭತ್ತು ವರ್ಷಗಳ ಮೊದಲು, ಮೊದಲ ಬಾರಿಗೆ ಅಮೇರಿಕಾಕ್ಕೆ ಹೋದಾಗಿನ ಘಟನೆ. ನಿರಾತಂಕವಾಗಿ ಒಬ್ಬಳೇ ವಾಕಿಂಗ್ ಹೋಗಲು ಬಹಳ ಪ್ರಶಸ್ತವಾದ ಜಾಗವಿದು. ಹಾಗೆಯೇ ನಾನು ಒಮ್ಮೆ ವಾಕಿಂಗ್ ಹೋಗುವಾಗ ಮಾರ್ಗದ ಬದಿಯಲ್ಲಿ ವಿಶೇಷವಾದ ಸೂಚನಾ ಫಲಕವೊಂದು ಗೋಚರಿಸಿತು.”ಬಾತುಕೋಳಿ ಅಡ್ಡ ದಾಟುವವು(Duck crossing )”. ಗಮನಿಸಿದಾಗ, ಪ್ರತೀ ಕಾರು ಚಾಲಕನೂ ಆ ಜಾಗದಲ್ಲಿ ತನ್ನ ಕಾರನ್ನು ನಿಧಾನಿಸಿ ಮುಂದೆ ಹೋಗುವುದು ಕಾಣಿಸಿತು. ಸರಿ..ಎಷ್ಟು ಯೋಚಿಸಿದರೂ ಯಾಕಾಗಿ ಈ ಬೋರ್ಡ್ ಹಾಕಿದ್ದಾರೆಂದು ತಿಳಿಯಲಿಲ್ಲ! ಅದು ಹೌದು.. ಇಂಥಹ ಜಾಗದಲ್ಲೇ ಬಾತುಕೋಳಿಗಳು ಮಾರ್ಗ ದಾಟುವವೆಂದು ಇವರಿಗೆ ಹೇಗಪ್ಪಾ ತಿಳಿಯಿತು ಎಂಬುದೇ ಯಕ್ಷಪ್ರಶ್ನೆಯಾಗಿತ್ತು ನನಗೆ. ಮಗಳಲ್ಲಿಯೂ ಕೇಳದೆ (ನಾನೇನೂ ತಿಳಿಯದವಳೆಂದು ಬೆಪ್ಪಳಾಗಬಾರದಲ್ಲ), ನಾನೇ ಕಂಡು ಹಿಡಿಯುವೆನೆಂದು ಪತ್ತೇದಾರಿ ಕೆಲಸಕ್ಕಿಳಿದೆ.
ದಿನಾ ಅಲ್ಲಿಗೇ ವಾಕಿಂಗ್ ಹೋಗಿ, ಯಾರಿಗೂ ಸಂಶಯ ಬಾರದಂತೆ ಸ್ವಲ್ಪ ಹೊತ್ತು ಅಲ್ಲೇ ಸುಳಿದಾಡುವುದೇ ನನ್ನ ದಿನಚರಿಯಾಯಿತು. ಕೈಯಲ್ಲಿರುವ ಕ್ಯಾಮೆರಾವನ್ನು ರೆಡಿಯಾಗಿ ಇರಿಸಿದ್ದೆ.(ಆಗ ನನ್ನಲ್ಲಿ ಮೊಬೈಲ್ ಇರಲಿಲ್ಲ) ಹೀಗೇ ನಾಲ್ಕೈದು ದಿನ ಕಳೆದಾಗ ಅದ್ಭುತ ದೃಶ್ಯ ವೊಂದು ಕಣ್ಣಿಗೆ ಬಿತ್ತು! ಆ ಬೋರ್ಡಿನ ಬಳಿಯಿಂದಲೇ, ಮಾರ್ಗದ ಒಂದು ಬದಿಯಿಂದ ದೊಡ್ಡ ಬಾತುಕೋಳಿ(ಅಮ್ಮ?)ಯೊಂದರ ಮುಂದಿನಿಂದ ನಾಲ್ಕು ಮತ್ತು ಹಿಂದಿನಿಂದ ಐದು ಮರಿಗಳು ಶಿಸ್ತಿನ ಸಿಪಾಯಿಗಳಂತೆ ಗತ್ತಿನಿಂದ ಸಾಲಾಗಿ ಮಾರ್ಗದ ಇನ್ನೊಂದು ಬದಿಗೆ ಹೋದವು. ನಾನು ಅದನ್ನು ಖುಷಿಯಿಂದ ನೋಡುವುದರಲ್ಲೇ ಮಗ್ನಳಾಗಿದ್ದೆ… ತಕ್ಷಣ ನೆನಪಾಗಿ ಕ್ಯಾಮೆರಾ ಕೈಯಲ್ಲಿ ಹಿಡಿಯುವುದರೊಳಗೆ ಅವುಗಳು ರೋಡ್ ದಾಟಿಯಾಗಿತ್ತು. ಫೋಟೋ ತೆಗೆಯಲು ಆಗಲೇ ಇಲ್ಲ. ಛೇ..ಎಂತಹ ಕೆಲಸವಾಯ್ತು ಎಂದು ಬೇಸರವಾಯ್ತು. ಮನೆಗೆ ಬಂದು ಮಗಳಲ್ಲಿ ವಿಷಯ ತಿಳಿಸಿದಾಗ ಜೋರಾಗಿ ನಗಬೇಕೇ? ಪೆಚ್ಚಾಗಿ ಏನೆಂದು ಕೇಳಿದಾಗ ತಿಳಿಯಿತು, ಆ ಜಾಗದಲ್ಲಿ ಎರಡೂ ಕಡೆಗಳಲ್ಲೂ ದೊಡ್ಡ ಕೊಳಗಳಿದ್ದುವು. ಅಲ್ಲಿ ಎರಡೂ ಕಡೆಗಳಲ್ಲೂ ತುಂಬಾ ಬಾತುಕೋಳಿಗಳ ಸಂಸಾರ. ಆತ್ತಿಂದಿತ್ತ, ಇತ್ತಿಂದತ್ತ ಅವುಗಳ ಸಂಸಾರಗಳ ವಾಕಿಂಗ್…ನಮ್ಮ ಹಾಗೆ. ಈಗವಿಷಯವೇನೆಂದು ನಿಮಗೂ ತಿಳಿಯಿತಲ್ಲಾ..?
(ಚಿತ್ರಕೃಪೆ: ಅಂತರ್ಜಾಲ)
-ಶಂಕರಿ ಶರ್ಮ, ಪುತ್ತೂರು.
ಚಂದದ ಅನುಭವ, ನೆನಪಿನ ಬುತ್ತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ ಮೇಡಂ.
ಧನ್ಯವಾದಗಳು ನಯನ ಮೇಡಂ.