ಸೂರ್ಯನಿಗೊಂದು ಅಂದದ ಮಂದಿರ

Share Button

 

ಈಗಿನ ಒಡಿಶಾ ರಾಜ್ಯದ ಭುವನೇಶ್ವರದಿಂದ 64 ಕಿ.ಮೀ ದೂರದ ಕೋನಾರ್ಕದಲ್ಲಿರುವ ಸೂರ್ಯ ದೇವಾಲಯವು , ಅದ್ಭುತ ವಾದ ಶಿಲ್ಪವೈಭವಕ್ಕೆ ಹೆಸರುವಾಸಿಯಾಗಿದೆ. ಸೂರ್ಯನು ಏಳು ಕುದುರೆಗಳಿಂದ ಒಯ್ಯಲ್ಪಡುವ 24  ಚಕ್ರಗಳುಳ್ಳ  ರಥವನ್ನೇರಿ ಬರುವಂತೆ ಕಟ್ಟಲಾದ ಭವ್ಯ ಮಂದಿರವಿದು.  ಈ ದೇವಾಲಯವನ್ನು 13 ನೇ ಶತಮಾನದಲ್ಲಿ ಗಂಗ ವಂಶದ ದೊರೆ ನರಸಿಂಹದೇವನು ಕಟ್ಟಿಸಿದನು.   ಭಾಗಶ: ಹಾನಿಗೊಂಡ ಸ್ಥಿತಿಯಲ್ಲಿದ್ದರೂ, ಇಂದಿಗೂ ಭವ್ಯವಾಗಿ ಕಾಣಿಸುವ ಕೋನಾರ್ಕದ ಗುಡಿಯ ಹೊರಗಿನ ಶಿಲ್ಪಕಲಾಕೃತಿಗಳು, ರಥದ ಚಕ್ರಗಳಲ್ಲಿನ ಕುಸುರಿ ಕೆತ್ತನೆಗಳು  ಅಂದಿನ ಕಾಲದ ವಾಸ್ತುಶಿಲ್ಪದ   ಪ್ರತಿಭೆಯನ್ನು ಸೂಚಿಸುತ್ತದೆ. ಮುಖ್ಯಗುಡಿಯ ಮುಂದೆ ವಿಶಾಲವಾದ ನರ್ತನ ಮಂಟಪವಿದೆ.  ಈ ದೇವಾಲಯವು ಸುಸ್ಥಿತಿಯಲ್ಲಿದ್ದಾಗ,  ಮುಂಜಾನೆ ಸೂರ್ಯನ ಮೊದಲ ಕಿರಣಗಳು ಗರ್ಭಗುಡಿಯಲ್ಲಿರುವ  ಅರ್ಕ (ಸೂರ್ಯ)ನ ಮೂರ್ತಿಯ ಮೇಲೆ ಒಂದು ಕೋನದಲ್ಲಿ ಬೀಳುತ್ತಿದ್ದವಂತೆ.  ಹಾಗಾಗಿ ಕೋನಾರ್ಕ ಎಂಬ ಹೆಸರು ಬಂತು. ಕೋನಾರ್ಕದ ಬಗ್ಗೆ ಪ್ರಚಲಿತವಿರುವ ದಂತಕಥೆ ಹೀಗಿದೆ:

13 ನೆ ಯ ಶತಮಾನದಲ್ಲಿ,   ಒಡಿಯಾದ ಪ್ರಸಿದ್ಧ ವಾಸ್ತುಶಿಲ್ಪಿ ಬಿಸು ಮಹಾರಾಣ‘ನ ನೇತೃತ್ವದಲ್ಲಿ, 12000 ಕುಶಲಕರ್ಮಿಗಳು ಸತತವಾಗಿ 12  ವರ್ಷಗಳಿಂದ ದುಡಿದು ಕೋನಾರ್ಕ ದೇವಾಲಯವನ್ನು ನಿರ್ಮಿಸುತ್ತಿದ್ದರು.             ‘ಬಿಸು ಮಹಾರಾಣ’ನಿಗೆ  ಧರ್ಮಪಾದಎಂಬ ಒಬ್ಬ ಮಗನಿದ್ದ.  ಆತನೂ ಎಳವೆಯಿಂದಲೇ ವಾಸ್ತುಶಿಲ್ಪದ ಬಗ್ಗೆ ಅರಿತುಕೊಂಡಿದ್ದ.  ಸದಾ ಮಂದಿರ ನಿರ್ಮಾಣದಲ್ಲಿ ನಿರತನಾದ ತನ್ನ ತಂದೆಯ ಪ್ರತಿಭೆಯ ಬಗ್ಗೆ ಕೇಳಿ ತಿಳಿದಿದ್ದನಾದರೂ ಈ ಬಾಲಕ ಇನ್ನೂ ತಂದೆಯನ್ನು ನೋಡಿರಲಿಲ್ಲ. ಅದೊಂದು ದಿನ ತಾಯಿಯೊಡನೆ ಹಠ ಹಿಡಿದು ತಂದೆಯನ್ನು ನೋಡಿ ಬರುವೆನೆಂದು , 12 ರ ಬಾಲಕ ಧರ್ಮಪಾದನು ಕೋನಾರ್ಕಕ್ಕೆ ಬರುತ್ತಾನೆ.

ಅಲ್ಲಿ ನಿರ್ಮಾಣದ ಹಂತದಲ್ಲಿರುವ ಅದ್ಭುತವಾದ ಮಂದಿರವನ್ನು ನೋಡಿದಾಗ ತನ್ನ ತಂದೆ ಇಲ್ಲಿಯೇ ಕೆಲಸ ಮಾಡುತ್ತಿರಬೇಕು ಎಂದು ಹುಡುಕುತ್ತಾ ಬಂದು ತಂದೆಯನ್ನು ಕಾಣುತ್ತಾನೆ.  ತಂದೆ- ಮಗನ ಪ್ರಥಮ ಭೇಟಿಯಿಂದ  ಇಬ್ಬರೂ ಬಹಳಷ್ಟು ಸಂತೋಷ ಪಟ್ಟರೂ, ತನ್ನ ತಂದೆ ಚಿಂತೆಯಲ್ಲಿರುವುದನ್ನು ಧರ್ಮಪಾದನು ಗಮನಿಸುತ್ತಾನೆ. ಕಾರಣೆವೇನೆಂದು ಕೇಳಿದಾಗ ಮಹಾರಾಣನು,  ಮಂದಿರದ  ನಿರ್ಮಾಣದ ಕೆಲಸಗಳು ಪೂರ್ಣಗೊಂಡಿದ್ದರೂ,  ಗೋಪುರದ ಕಲಶವನ್ನು ಕೂರಿಸಲು ಸಾಧ್ಯವಾಗುತ್ತಿಲ್ಲ. ಬಹಳಷ್ಟು ಪ್ರಯತ್ನಗಳು ಫಲ ಕೊಡಲಿಲ್ಲ, ನಾಳೆ ಮುಂಜಾನೆಯೊಳಗೆ ಗೋಪುರದ ಕಲಶವನ್ನು ಕೂರಿಸದಿದ್ದರೆ  ಎಲ್ಲಾ ಕುಶಲಕರ್ಮಿಗಳನ್ನು ಕೊಲ್ಲಿಸುವುದಾಗಿ ರಾಜರ ಅಪ್ಪಣೆಯಾಗಿದೆ ಎಂದನು.  ಕೂಡಲೇ,  ಧರ್ಮಪಾದನು, ಆ ಬಗ್ಗೆ ತಾನು ಓದಿ  ತಿಳಿದಿದ್ದೇನೆಂದೂ, ಇನ್ನೊಮ್ಮೆ ಪ್ರಯತ್ನಿಸೋಣವೆಂದೂ ತಿಳಿಸಿದನು.  ಧರ್ಮಪಾದನ ನಾಯಕತ್ವದಲ್ಲಿ, ಪುನ: ಅತಿ ಭಾರವಾದ ಕಲಶವನ್ನು ಮರಳಿನ ಮೇಲೆ ಹಗ್ಗದ ಮೂಲಕ ಮಂದಿರದ ಮೇಲಕ್ಕೆ ತಂದು, ವಿಶಿಷ್ಟ ಚಾಕಚಕ್ಯತೆಯಿಂದ ಗೋಪುರದ ಮೇಲೆ ಕೂರಿಸಲು ಸಫಲರಾದರು. ಮಧ್ಯರಾತ್ರಿಯ ಸಮಯಕ್ಕೆ ಮಂದಿರದ ನಿರ್ಮಾಣವು ಸಂಪೂರ್ಣವಾಯಿತು. ತನ್ನ ಮಗನು ಇಷ್ಟು ಚಿಕ್ಕ ವಯಸ್ಸಿನಲ್ಲಿ ವಾಸ್ತುಶಿಲ್ಪದ ಪಟ್ಟುಗಳನ್ನು ಕರಗತಮಾಡಿದನೆಂದು ಮಹಾರಾಣನಿಗೆ ಬಲು ಹೆಮ್ಮೆಯಾಯಿತು. ಶಿಲ್ಪಿಗಳೂ ನಿರಾಳ ಮನಸ್ಸಿನಿಂದ ಬಾಲಕನನ್ನು ಕೊಂಡಾಡಿದರು.

ಆಷ್ಟರಲ್ಲಿ ಅಲ್ಲಲ್ಲಿ ಗುಸುಗುಸು ಮಾತು,  ಕಳವಳ ಆರಂಭವಾಯಿತು. ಇಷ್ಟೊಂದು ಜನ ಪ್ರತಿಭಾವಂತ ಶಿಲ್ಪಿಗಳಿಂದ ಮಾಡಲಾಗದ ಕೆಲಸವನ್ನು ಬಾಲಕನೊಬ್ಬ ನೆರವೇರಿಸಿದನೆಂದು ರಾಜನಿಗೆ ಗೊತ್ತಾದರೆ, ತಮ್ಮ ಪ್ರಾಣ ಉಳಿಯುವುದೇ, ಎಂದು ಶಿಲ್ಪಿಗಳು ಮಾತಾಡಿಕೊಂಡರು. ಇದನ್ನು ಕೇಳಿಸಿದ ಧರ್ಮಪಾದನು, ತನ್ನಿಂದಾಗಿ ಯಾರಿಗೂ ಜೀವಹಾನಿಯಾಗುವುದು ಬೇಡವೆಂದು, ಸದ್ದಿಲ್ಲದೆ, ಆಗಷ್ಟೇ ಮೇಲೇರಿಸಿದ ಕಲಶದ ಮೇಲೆ ಹತ್ತಿ ನಿಂತು ಎದುರುಗಡೆ ಕಾಣಿಸುತ್ತಿದ್ದ ಭೋರ್ಗರೆವ ಸಮುದ್ರಕ್ಕೆ ಧುಮುಕಿ ಪ್ರಾಣತ್ಯಾಗ ಮಾಡಿದನು. ಇದು ಗೊತ್ತಾದ ಮೇಲೆ ರಾಜನು ಶಿಲ್ಪಿಗಳಿಗೆಲ್ಲರಿಗೂ ಜೀವದಾನ ಮಾಡಿದನು. ಹೀಗೆ ದೇವಾಲಯದ ಆರಂಭದಲ್ಲಿಯೇ ವಿಘ್ನ ಬಂದುದರಿಂದ, ಇಲ್ಲಿ ಸೂರ್ಯದೇವನಿಗೆ ಪೂಜೆ ನಡೆದೇ ಇಲ್ಲಬಾಲಕ ಧರ್ಮಪಾದನ ಚರಿತ್ರೆಯು ಒಡಿಯಾ ಶಿಲ್ಪಕ್ಷೇತ್ರದಲ್ಲಿ ಅಜರಾಮರವಾಗಿದೆ.

ಕಾಲನ ಹೊಡೆತಕ್ಕೆ ಸಿಕ್ಕಿ, ದೇವಾಲಯವು ಈಗ ಶಿಥಿಲಗೊಂಡಿರುವುದರಿಂದ ಸಾರ್ವಜನಿಕರಿಗೆ ಒಳಗೆ ಪ್ರವೇಶವಿಲ್ಲ.  ಸಮುದ್ರ ತೀರದಲ್ಲಿರುವುದರಿಂದ ಬಹಳಷ್ಟು ಬಾರಿ ನೈಸರ್ಗಿಕ ವಿಕೋಪಕ್ಕೂ ಬಲಿಯಾಗಿದೆ. ಬ್ರಿಟಿಷರ ಕಾಲದಲ್ಲಿ ಕೋನಾರ್ಕವನ್ನು ಸಂರಕ್ಷಿಸುವ ಪ್ರಯತ್ನಗಳಾದುವು. ಕೋನಾರ್ಕವನ್ನು ‘ ಕಪ್ಪು ಪಗೋಡ’ ಎಂತಲೂ ಕರೆಯುತ್ತಾರೆ. ಕೋನಾರ್ಕವು ಯುನೆಸ್ಕೋದಿಂದ   “ವಿಶ್ವ ಪರಂಪರೆಯ ತಾಣ” ಎಂದು ಗುರುತಿಸಲ್ಪಟ್ಟಿದೆ.

– ಹೇಮಮಾಲಾ.ಬಿ

4 Responses

  1. Vasundhara Kadaluru Mallappa says:

    ಅಮರಶಿಲ್ಪಿ ಜಕಣಾಚಾರಿಯ ಕತೆ ನೆನಪಾಯ್ತು. ಗಂಗರಸ ನರಸಿಂಹ ಎಂದರೆ ನಮ್ಮ ಕರ್ನಾಟಕದ ಗಂಗರೇ? ಸ್ಥಳ ಐತಿಹ್ಯ, ಇತಿಹಾಸದಿಂದಿಡಿದು ಯುನೆಸ್ಕೋವರೆಗೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ನಿಮಗೆ

  2. ನಯನ ಬಜಕೂಡ್ಲು says:

    ಚಂದದ ಮತ್ತು ನಾನು ಇಷ್ಟರವರೆಗೆ ಓದಿದ ನಿಮ್ಮ ಪ್ರವಾಸಕಥನಗಳಲ್ಲಿ ಇದು ವಿಭಿನ್ನವಾಗಿದೆ . ಸಾಕಷ್ಟು ಹೊಸ ವಿಚಾರಗಳನ್ನು ಒಳಗೊಂಡಂತಹ ಬರಹ , very nice ಹೇಮಕ್ಕ

  3. Shankari Sharma says:

    ಇತ್ತೀಚೆಗೆ ನೋಡಿದ ಸುಂದರ ತಾಣಗಳಲ್ಲೊಂದರ ಬರಹ…ಓದಿ ಖುಷಿಯಾಯಿತು.

  4. Shruthi Sharma says:

    ಚೆಂದದ ಬರಹ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: