ರಾಂಚೋ ಮಿಂಚಿದ ಶಾಲೆಯಲ್ಲಿ…
‘ನಿಮಗೆ ಡ್ರೂಕ್ ಪದ್ಮಾ ಕಾರ್ಪೋ ಸ್ಕೂಲ್ ಗೊತ್ತಾ ‘ ಅಂದರೆ ‘ಇಲ್ಲ’ ಎಂಬಂತೆ ತಲೆಯಾಡಿಸುತ್ತೇವೆ. ‘ರಾಂಚೋ ಸ್ಕೂಲ್ ಗೊತ್ತಾ’ ಅಂದರೆ ತಕ್ಷಣವೇ ‘ಓಹ್, ಗೊತ್ತು, ತ್ರೀ ಈಡಿಯಟ್ಸ್ ಸಿನೆಮಾದಲ್ಲಿದೆ, ಅದು ಲೇಹ್ ನಲ್ಲಿರುವ ಸ್ಕೂಲ್’ . ಅನ್ನುತ್ತೇವೆ. ಜೊತೆಗೆ ‘ರಾಂಚೋ’ ಪಾತ್ರಧಾರಿ ಅಮೀರ್ ಖಾನ್ , ಆತನ ಕಾಲೇಜು ಜೀವನದ ವಿವಿಧ ಅವಾಂತರಗಳು, ಪೇಚಿಗೆ ಸಿಕ್ಕಿಹಾಕಿಕೊಂಡು ತಪ್ಪಿಸಿಕೊಳ್ಲುವ ಜಾಣ್ಮೆ, ಕಿಲಾಡಿತನದ ನಡುವೆಯೂ ಬಹಳಷ್ಟು ಪರೋಪಕಾರವನ್ನು ಮಾಡಿ ಎಲ್ಲರ ಮನ್ನಣೆ ಗಳಿಸುವ ತ್ರೀ ಈಡಿಯಟ್ಸ್, ಹಿಮಾಲಯದ ನಿಸರ್ಗ ಸೌಂದರ್ಯದ ಝಲಕ್ , ಸ್ಪಟಿಕ ಶುದ್ದ ತಿಳಿಯಾಗಿರುವ ಪ್ಯಾಂಗೋಂಗ್ ಸರೋವರ, ಹಳದಿ ಬಣ್ಣದ ಸ್ಕೂಟರ್ ನಲ್ಲಿ ಬರುವ ಕರೀನಾ ಕಪೂರ್, ಇಷ್ಟಪಟ್ಟ ವಿಷಯವನ್ನು ಕಲಿಯಿರಿ, ಅಂಕಗಳಿಕೆಯೊಂದೇ ಜೀವಮಾನದ ಸಾಧನೆಯಲ್ಲ ಎಂಬ ತತ್ವಗಳು ….ಹೀಗೆ ತ್ರೀ ಈಡಿಯಟ್ಸ್ ಸಿನೆಮಾದ ಹಲವಾರು ದೃಶ್ಯಗಳು ಮನಸ್ಸಿನಲ್ಲಿ ಮೆರವಣಿಗೆ ಹೊರಡುತ್ತವೆ.
ಭಾರತದ ಭಾಗವಾಗಿದ್ದರೂ, ತನ್ನ ವಿಶಿಷ್ಟ ಭೌಗೋಳಿಕತೆ, ಹವಾಮಾನ ಹಾಗೂ ಟಿಬೆಟ್ ನ ಸಾಮೀಪ್ಯದಿಂದಾಗಿ ಲಡಾಖ್ ನಲ್ಲಿ ಟಿಬೆಟಿನ ಸಂಸ್ಕೃತಿ ಎದ್ದು ಕಾಣುತ್ತದೆ. ನಮ್ಮ ಕಾರನ್ನು ಚಲಾಯಿಸುತ್ತಿದ್ದ ಸ್ಥಳೀಯ ‘ನೊಬ್ರು’ ನಮ್ಮ ಸಂಭಾಷಣೆಯ ನಡುವೆ ಸಾಂದರ್ಭಿಕವಾಗಿ, “ ಇಧರ್ ಹೋಟೆಲ್ಸ್ ಬಹುತ್ ಕಮ್ ಥಾ… ಅಭೀ ಸಾರಾ ವಹೀ ಹೈ,ದೇಖಿಯೇ ಒನ್ಲಿ ಬಿಲ್ದಿಂಗ್ಸ್ ಇಧರ್ ಪ್ಲಾಸ್ಟಿಕ್ ನಹೀ ಥಾ,.. ಅಭೀ ಬಹುತ್ ಹೈ, ಹಮ್ ಕೋ ಸೀಸನ್ ಮೆ ಕುಚ್ ಕಮಾಯಿ ಹೋತಾ ಹೈ ..ವಿಂಟರ್ ಮೆ ಜಮ್ಮು ಮೆ ಕಾಮ್ ಕರತಾ ಹೂಮ್, ಲಡಾಖಿ ಲೋಗ್ ಮಿಲ್ ಜುಲ್ಕೆ ಖೇತಿ ಕರತೆ ಥೆ… ಅಭೀ ಬಹುತ್ ಕಮರ್ಶಿಯಲ್ ಹೋ ರಹಾ ಹೈ..’ ಎಂದು ಪ್ರವಾಸೋದ್ಯಮದ ಪರ-ವಿರೋಧ ಅಭಿಪ್ರಾಯವನ್ನು ಹಿಂದಿ-ಇಂಗ್ಲಿಷ್ ಮಿಶ್ರ ಭಾಷೆಯಲ್ಲಿ ಮಂಡಿಸಿದಾಗ, ನಾವು ಬಂದಿದ್ದು ಇವರಿಗೆ ಇಷ್ಟವಾಯಿತೆ-ಕಷ್ಟವಾಯಿತೆ ಎಂಬ ಗೊಂದಲ ನಮಗೂ!
ಲೇಹ್ ನಲ್ಲಿ ಅದುವರೆಗೂ ವರ್ಷಕ್ಕೆ ಸರಾಸರಿ ನಾಲ್ಕು ಲಕ್ಷದಷ್ಟಿದ್ದ ಪ್ರವಾಸಿಗರ ಸಂಖ್ಯೆಯು 2009 ರಲ್ಲಿ ‘ತ್ರೀ ಈಡಿಯಟ್ಸ್’ ಸಿನೆಮಾ ಬಿಡುಗಡೆಯಾದ ಮೇಲೆ , ನಾಲ್ಕು ಪಟ್ಟು ಹೆಚ್ಚಿದೆ ಹಾಗೂ ಇನ್ನೂ ಹೆಚ್ಚುತ್ತಲಿದೆ. ಇದು ಸ್ಥಳೀಯ ಆರ್ಥಿಕತೆಯನ್ನೂ, ವ್ಯಾವಹಾರಿಕ ಪ್ರಪಂಚವನ್ನೂ ಹಿಗ್ಗಿಸಿದೆ. ಆದರೆ ಪ್ರವಾಸಿಗರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವ ದೃಷ್ಟಿಯಲ್ಲಿ ಅಲ್ಲಲ್ಲಿ ಹೋಟೆಲ್ ಗಳು, ಕೆಫೆಗಳು ಮೇಳೈಸಿ ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಹಾಳುಗೆಡುವುತ್ತಿವೆ. ಆಧುನಿಕ ಜೀವನ ಶೈಲಿಯು ಸ್ಥಳೀಯ ನಾಗರಿಕತೆಗೆ ಧಕ್ಕೆಯನ್ನುಂಟುಮಾಡುತ್ತಿದೆ. ಪರಸ್ಪರ ಸಹಾಯ ಮಾಡುತ್ತಾ ಯಾಕ್ , ಕುರಿಗಳನ್ನು ಮೇಯಿಸುತ್ತಾ , ಪರ್ವತ, ಕಣಿವೆಗಳಲ್ಲಿ ಹಾಡಿಕೊಂಡು ಕುಣಿದುಕೊಂಡು ನೆಮ್ಮದಿಯಾಗಿದ್ದ ಅಲ್ಪತೃಪ್ತ ಲಡಾಖಿಗಳು ಈಗ ಕುರುಡು ಕಾಂಚಾಣದ ಹಿಂದೆ ಹೋಗುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವುದು ಕಳವಳಕಾರಿ ಅಂಶ. ಪ್ರಸಿದ್ಧವಾದ ಚಲನಚಿತ್ರವೊಂದು ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಯ ಅಭಿವೃದ್ಧಿಗೆ ಕಾರಣವಾಗುತ್ತಿದೆ ಎಂಬುದಕ್ಕೆ ‘ತ್ರೀ ಈಡಿಯಟ್ಸ್’ ಉತ್ತಮ ಉದಾಹರಣೆ .
ಜೂನ್ 29, 2018 ರಂದು, ನಾವು ಲೇಹ್ ನಗರಕ್ಕೆ ಭೇಟಿಕೊಟ್ಟಿದ್ದಾಗ, ‘ತ್ರೀ ಈಡಿಯಟ್ಸ್’ ಸಿನೆಮಾದ ಕೆಲವು ಭಾಗಗಳನ್ನು ಚಿತ್ರೀಕರಣ ನಡೆಸಿದ್ದ ‘ಡ್ರೂಕ್ ಪದ್ಮಾ ಕಾರ್ಪೋ ಸ್ಕೂಲ್’ಶಾಲೆಗೆ ತಲಪಿದೆವು . ಶಾಲಾ ಅವಧಿಯ ನಂತರ, ಪ್ರವಾಸಿಗರಿಗೆ ಇಲ್ಲಿ ಪ್ರವೇಶಕ್ಕೆ ಅನುಮತಿ ಇದೆ. ಪಕ್ಕದಲ್ಲಿ ‘ರಾಂಚೋ ಕೆಫೆ’ ಇದೆ. ‘ರಾಂಚೊ’ ಹೆಸರಿನ ಟಿ- ಶರ್ಟ್, ಪುಸ್ತಕ ಇತ್ಯಾದಿ ಮಾರಾಟಕ್ಕೆ ಲಭ್ಯವಿವೆ. 2016 ನೇ ಇಸವಿಯಲ್ಲಿ , ಸುಂದರವಾದ ಪರಿಸರ ಮತ್ತು ಉತ್ತಮ ನಿರ್ವಹಣೆಗಾಗಿ ಬಿಬಿಸಿಯಿಂದ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಶಾಲೆಯಿದು.
‘ತ್ರೀ ಈಡಿಯಟ್ಸ್’ ಚಿತ್ರದಲ್ಲಿ ಒಬ್ಬ ಪಾತ್ರಧಾರಿಯು ಜಲಬಾಧೆ ತೀರಿಸಿಕೊಳ್ಳಲು ಗೋಡೆಯ ಬಳಿ ಹೋದಾಗ, ಶಾಲಾಮಕ್ಕಳು ಅವನನ್ನು ಎಚ್ಚರಿಸುತ್ತಾರೆ. ಆತ ಕಿವಿಗೊಡದಾಗ, ತಮ್ಮ ಉಪಕರಣವೊಂದರ ಸಹಾಯದಿಂದ ಮಹಡಿ ಮೇಲಿಂದಲೇ ವಯರನ್ನು ಕೆಳಕ್ಕಿಳಿಸಿ ನಟನಿಗೆ ‘ವಿದ್ಯುತ್ ಶಾಕ್’ ಕೊಡುವ ಸನ್ನಿವೇಶವನ್ನು ಇಲ್ಲಿನ ಶಾಲೆಯ ಗೋಡೆಯೊಂದರ ಸಮೀಪ ಚಿತ್ರೀಕರಿಸಲಾಗಿದೆ. ‘ರಾಂಚೋ ಗೋಡೆ‘ಯೆಂದು ಕರಯಲ್ಪಡುವ ಆ ಸ್ಥಳದಲ್ಲಿ ಸಿನೆಮಾಕ್ಕೆ ಸಂಬಂಧಿಸಿದ ವರ್ಣಚಿತ್ರ ಗಳನ್ನು ಮೂಡಿಸಿದ್ದಾರೆ. ಪ್ರವಾಸಿಗರು ಈ ಗೋಡೆಯ ಹಿನ್ನೆಲೆಯಲ್ಲಿ ಫೊಟೋ ಕ್ಲಿಕ್ಕಿಸಿಕೊಳ್ಲಬಹುದು. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಹೆಚ್ಚಳ ಮತ್ತು ಅಶಿಸ್ತಿನಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆಯೆಂದು, ಶಾಲೆಯ ಆವರಣಕ್ಕೆ ಪ್ರವಾಸಿಗರನ್ನು ಬಿಡದಿರಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ತಲಪುವುದು ಹೇಗೆ:
ದೆಹಲಿಯಿಂದ ಲೇಹ್ ಗೆ ವಿಮಾನ ಸಂಪರ್ಕವಿದೆ. ಕಾಶ್ಮೀರದ ಮೂಲಕ ರಸ್ತೆಪ್ರಯಾಣವೂ ಸಾಧ್ಯ. ಲಡಾಖ್ ಜಿಲ್ಲೆಯಲ್ಲಿ ವರ್ಷದ ಹೆಚ್ಚಿನ ಸಮಯವೂ ಚಳಿ ಇರುವುದರಿಂದ, ಪ್ರಯಾಣಿಸುವ ಮೊದಲು ಸಂಬಂಧಿಸಿದ ಜಾಲತಾಣ ಅಥವಾ ಪ್ರವಾಸಿ ಏಜಂಟ್ ರ ಮೂಲಕ ಮಾಹಿತಿ ಪಡೆದು, ಜೂನ್ ನಿಂದ- ಸೆಪ್ಟೆಂಬರ್ ಅವಧಿಯಲ್ಲಿ ಪ್ರಯಾಣಿಸುವುದು ಉತ್ತಮ. ಲಡಾಖ್ ನಲ್ಲಿ ಭಾರತೀಯ ಶೈಲಿಯ ಆಹಾರದ ಜೊತೆಗೆ ಚೈನೀಸ್, ಕಾಂಟಿನೆಂಟಲ್ ಇತ್ಯಾದಿ ಆಹಾರವನ್ನು ಒದಗಿಸುವ ಹೋಟೆಲ್ ಗಳಿವೆ.
ಲಡಾಖ್ ನಲ್ಲಿ ನೋಡಬಹುದಾದ ಇತರ ಸ್ಥಳಗಳು :
ಲೇಹ್ ಅರಮನೆ, ಸೇನಾ ಮ್ಯೂಸಿಯಂಗಳು, ಕಾರ್ಗಿಲ್ ಯುದ್ಧ ಸ್ಮಾರಕಗಳು, ಬೌದ್ದ್ಧರ ಮೊನಾಸ್ತ್ರಿಗಳು, ನುಬ್ರಾ ಕಣಿವೆ, ಸಿಂಧೂನದಿ ಕಣಿವೆ, ಪ್ಯಾಂಗಾಂಗ್ ಸರೋವರ, ಕರ್ದೂಂಗ್ಲಾ ಪಾಸ್ , ಚಾಂಗ್ಲಾ ಪಾಸ್ ಇತ್ಯಾದಿ. ಸಾಹಸಪ್ರಿಯರಿಗೆ ವಿವಿಧ ಚಾರಣಗಳು ಹಾಗೂ ಮೌಂಟೇನ್ ಬೈಕ್ ರೈಡಿಂಗ್ ಗೆ ಅವಕಾಶವಿರುತ್ತದೆ.
– ಹೇಮಮಾಲಾ.ಬಿ
ಬರಹ ಚಿತ್ರಗಳನ್ನು ನೋಡಿ ಹೋಗಲೇ ಬೇಕು ಎನಿಸುತ್ತದೆ. This has been added to my bucket list!! Nicely written! 🙂
ಏಕಕಾಲಕ್ಕೆ ಪ್ರವಾಸ ಕಥನ, ಅನುಭವ ಕಥನ, ಮಾಹಿತಿ ಪ್ರಧಾನವೂ ಆಗಿದೆ. ಇಂತಹ ಬರವಣಿಗೆ ನಿರೀಕ್ಷೆಯಿದೆ..
ಧನ್ಯವಾದಗಳು..
ಬರಹವನ್ನು ಓದುತ್ತಿದಂತೆ ನಮ್ಮ ಪ್ರವಾಸದ ನೆನಪಾಯಿತು. ದಿನೇ ದಿನೇ ಹೆಚ್ಚುತ್ತಿರುವ ಪ್ರವಾಸಿಗರಿಂದಾಗಿ ಲಡಾಖ್ ತನ್ನ ನೈಜತೆಯನ್ನು ಕಳೆದುಕೊಳ್ಳುತ್ತಿದೆ ಎಂಬುವುದೇ ಬೇಸರದ ಸಂಗತಿ.
Beautiful ಹೇಮಕ್ಕ, ತ್ರೀ ಈಡಿಯಟ್ಸ್ ಸಿನೆಮಾ ಮತ್ತೊಮ್ಮೆ ನೆನಪಾಯಿತು ನಿಮ್ಮ ಲೇಖನ ಓದಿ . ಚಾರಣ ಎಂದೊಡನೆ ಮನಸು ಅರಳುತ್ತದೆ. ಒಮ್ಮೆಯಾದರೂ ಬದುಕಲ್ಲಿ ಇಂತಹ ಜಾಗಗಳನ್ನು ನೋಡಬೇಕು
ಎಷ್ಟೋ ಗೊತ್ತಿಲ್ಲದ ಅಜ್ಞಾತ ಸ್ಥಳಗಳ ವಿವರಗಳನ್ನು ತಮ್ಮ ಪ್ರವಾಸ ಲೇಖನಗಳ ಮೂಲಕ ನೀಡುತ್ತಿದ್ದಿರಿ. ನಿಮಗೆ ಅಭಿನಂದನೆಗಳು ಮೇಡಂ
ಧನ್ಯವಾದಗಳು