ಎಚ್ಚರಾಗು ನೀ ಎಚ್ಚರಾಗು!
ನೋಡ ನೋಡ ಗೂಡಿನೊಳಗ,
ಕಣ್ಣ ಬಿಟ್ಟು ನೋಡಾ
ಆಗ ಮಾತ್ರ ದೃಷ್ಟಿ ಚೆನ್ನ,
ತಿಳಿಯಿತೇನ ಮೂಢ!
ಏಕೆ ನೋಡತೀಯ ಹೊರಗೆ,
ಎವೆಯು ನೋಯದೇನ?
ಕನಸು ಕನಸು ಮಾತ್ರವಲ್ಲಿ,
ಇಲ್ಲ ಏನು ತಾನ!
ಶಬ್ದ ಸದ್ದು ಮನಸಲಿದ್ದು,
ಅರ್ಥ ಸಿಗುವುದೇನ?
ಜಾಸ್ತಿ ಜಾಸ್ತಿ ಅದೇ ಆದ್ರ,
ಮಾಡಿತೇನ ಮೌನ!
ಗೂಡಿನೊಳಗ ಜಾದೂ ಯಂತ್ರ,
ತಂತ್ರ ತಿಳಿಯಿತೇನ?
ತಂತ್ರದೊಳಗ ನಾದ ಮಂತ್ರ,
ನಾದ ಕೇಳಿತೇನ?
ಬ್ರಹ್ಮಾಂಡ ಬೆರಗ ಗೂಡಲಿಟ್ಟ
ಗುಟ್ಟು ಬಿಚ್ಚಿತೇನ?
ಅನಂತಕಡಲ ನಾದದಲ್ಲಿ
ಎಲ್ಲ ಏಕತಾನ!
ನೋಡ ನೋಡ ಎಷ್ಟು ಹೊಳಪು,
ಮಿಂಚು ಕಂಡಿತೇನ?
ಎಚ್ಚರಾಗು ಅಲ್ಲೆ ನೀನು,
ತನನ ತಾನ ತಾನ!
–ಕೆ.ಆರ್.ಎಸ್. ಮೂರ್ತಿ
Kavana chennagide.x
Congratulations. Very nice composition.
*ಎಚ್ಚರಾಗು ನೀ ಎಚ್ಚರಾಗು!*
ಉತ್ತಮವಾದ ಈ ಕವನಕ್ಕೆ ನನ್ನದೊಂದು ಟೀಕು:
ಇಂತಹ ಕವಿತೆಗಳು ಪಾಂಡಿತ್ಯದಿಂದ ಮೂಡುವುದಿಲ್ಲ. ಒಂದು ವಿಚಾರವನ್ನು ತಾನಾಗಿಯೇ ವಿಶ್ಲೇಷಣೆ ಮಾಡಿಕೊಳ್ಳುವಾಗ ಉಂಟಾಗುವ ಸತ್ಯದ ಅನಾವರಣ ಈ ಕವಿತೆಯಾಗಿ ಮೂಡಿಬಂದಿದೆ. ಕವಿತೆ ಸರಳವಾಗಿ ಸುಂದರವಾಗಿರುವುದಕ್ಕೂ ಇದೇ ಕಾರಣ.
ನಿಜವಾಗಿ ನಾವು ನೋಡಬೇಕಾಗಿರುವುದು ನಮ್ಮ ಒಳಗನ್ನು ಎನ್ನು ಸೂಕ್ಷ್ಮವನ್ನು ತಿಳಿಸುತ್ತ ಅದೇ ನಿಜವಾದ ದೃಷ್ಟಿ ಎನ್ನುವ ಕವಿ ಹಾಗೆ ನೋಡುವ ಕ್ರಿಯೆಯಲ್ಲಿ ಉಂಟಾಗುವ ಅರಿವಿನ ಹಂತಗಳನ್ನು ವಿವರಿಸುತ್ತಾರೆ.
ಇಂದ್ರಿಯಗಳ ಸಾಮರ್ಥ್ಯಕ್ಕೆ ಮಿತಿಯುಂಟು. ಅತಿಯಾಗಿ ಬಳಕೆಯಾದರೆ ಅವು ಬಳಲುತ್ತವೆ. ಅವು ನೋಡುವುದಾದರೂ ಏನನ್ನು? ಅರಿವು ತಿಳಿದಾಗ ನಶ್ವರವೆನ್ನಿಸುವ ವಸ್ತುಗಳನ್ನು.
ಶಬ್ದ, ಸದ್ದು ಮನಸಲಿರುವುದು ಎಂದರೆ ಮನಸ್ಸಿನಲ್ಲಿ ವಿಚಾರಗಳ ತಾಕಲಾಟ. ಅದಿರುವ ತನಕ ಯಾವುದೇ ಸ್ಪಷ್ಟತೆ ದೊರೆಯುವುದಿಲ್ಲ. ಆದರೆ ಅದು ಅತಿಯಾದಾಗ ಮೌನ ಖಂಡಿತ ಮೂಡುತ್ತದೆ, ಇದು ಧ್ಯಾನದ ಒಂದು ರಹಸ್ಯ. ಯಾವುದು ಬೇಸರವನ್ನುಂಟು ಮಾಡುತ್ತದೆಯೋ ಅದನ್ನೇ ಪದೇ ಪದೇ ಮಾಡುತ್ತ ಅಭ್ಯಾಸವಾಗಿ ಮಾಡಿಕೊಳ್ಳುವುದರಿಂದ ಮತ್ತೆ ಬೇಸರವನ್ನುಂಟು ಮಾಡುವುದಿಲ್ಲವೆಂಬುದು ಸೂತ್ರ.
ಮನದಾಳಕ್ಕೆ ಇಳಿಯುವಾಗ ಅಚ್ಚರಿಗಳು ಎದುರಾಗುತ್ತವೆ. ಕೊನೆಯಲ್ಲಿ ಓಂಕಾರದ ನಾದ ಕೇಳಿಸುತ್ತದೆ. ದೇಹದಲ್ಲಿರುವ ಆತ್ಮದ ಅರಿವಾದಾಗ ಈ ಜೀವಸಾಗರದಲ್ಲಿ ಎಲ್ಲವೂ ಒಂದೇ ಮೂಲದ ಸೃಷ್ಟಿಗಳು,ಮೂಲದಲ್ಲಿ ಎಲ್ಲವೂ ಏಕತಾನ ಎಂಬ ವೈಶ್ವಿಕ ಜ್ಞಾನ ಉಂಟಾಗುತ್ತದೆ.
ಈ ಆತ್ಮವು ಚಿನ್ನದಂತೆ ಹೊಳೆಯುತ್ತದಂತೆ. ಅದರ ಅರಿವು ಮೂಡಿದಾಗಲೇ ನಿಜವಾದ ಎಚ್ಚರ. ಆಗಲೇ ತನನ ತಾನ ತಾನ; ಸಚ್ಚಿದಾನಂದ.
ಧ್ಯಾನದ ಸುಖವನ್ನು ಅರಿತಿರುವ ಕವಿಯ ರಚನೆಯಿದು. ಗೇಯಗುಣವನ್ನು ಸಹಜವಾಗಿಯೇ ಆಂತುಕೊಂಡಿದೆ. ಸರಳ ಶಬ್ದಗಳಲ್ಲಿ ಗಹನ ವಿಚಾರಗಳನ್ನೂ ತಿಳಿಸಬಹುದು ಎಂಬುದಕ್ಕೆ ಈ ಕವನ ಒಂದು ಉದಾಹರಣೆ.
ಶೀರ್ಷಿಕೆಯ ಅಂದ ಗಮನಿಸಿ. ಹೊರಗೆ ನೋಡಿ ನೋಯುವ ಅಂಗಗಳನ್ನು ಹಿಂದಕ್ಕೆಳೆದುಕೊಂಡು ವಿರಮಿಸುವುದು ಕವನದ ಆಶಯ. ಅಂದರೆ ಲೋಕಜ್ಞಾನದಿಂದ ನಿವೃತ್ತಿ; ಒಂದು ರೀತಿಯಲ್ಲಿ ನಿದ್ದೆ ಮಾಡುವುದು! ಆದರೆ ಅರಿವಿನಿಂದ ಇದೇ ಕ್ರಿಯೆ ನಡೆಸಿದರೆ ಅದು ಧ್ಯಾನ. ಹೊರಗಿನ ಪ್ರಪಂಚದಲ್ಲಿ ನಮ್ಮ ಪ್ರಯತ್ನಗಳೆಲ್ಲವೂ ಜಗತ್ತಿನ ರಹಸ್ಯವನ್ನು ಅರಿಯುವುದಕ್ಕಾಗಿದೆ. ಆದರೆ ಅಲ್ಲಿ ಅದು ಸಂಪೂರ್ಣವಾಗಿ ದೊರೆಯುವುದೇ ಇಲ್ಲ. ಬದಲಾಗಿ ಅಂತರ್ಮುಖಿಯಾದ ಕ್ಷಣದಲ್ಲಿ ಸತ್ಯದ ಮಾರ್ಗ ಕಾಣಿಸುತ್ತದೆ.ಅಂತ್ಯದಲ್ಲಿ ಸತ್ಯ ಕಾಣಿಸುತ್ತದೆ. ಕಣ್ಣು ಮುಚ್ಚಿದರೇ ಎಚ್ಚರಾಗುವುದು ಸಾಧ್ಯ!
– ಕೆ ಜನಾರ್ದನ ತುಂಗ
ಉನ್ನತವಾದ ಸಂದೇಶವಿರುವ ರಚನೆಗೆ ಅಮೋಘವಾದ ವಿಶ್ಲೇಷಣೆ, ಜನಾರ್ಧನ ಅವರೇ. ಕವಿಗಳಿಗೂ, ವಿಮರ್ಶಕರಿಗೂ ತುಂಬಾ ಧನ್ಯವಾದಗಳು.
ಲಯಬದ್ಧವಾದ ಗೀತೆ.
ಎಚ್ಚರಾಗು ನೀ ಎಚ್ಚರಾಗು
ಮುಗಿಯುವ ಮುನ್ನ ಬದುಕೆಂಬ ಬೆರಗು.
ಚೆನ್ನಾಗಿದೆ ಸರ್ ಕವನ
ಕವನ ಚೆನ್ನಾಗಿದೆ. ‘ಎಲ್ಲ ಏಕತಾನ’ ಎಂಬುದರ ಬಗ್ಗೆ ಅನುಮಾನ ಬಂತು. ಶ್ರೀ ತುಂಗಾ ರವರ ವ್ಯಾಖ್ಯಾನ ಓದಿದ ಮೇಲೆ ಪರಿಹಾರವಾಯಿತು. ಅಭಿನಂದನೆಗಳು
ಚಂದದ ಕವನ.
ಕವನಕ್ಕೆ ಸ್ಪಂದಿಸಿದ ಎಲ್ಲರಿಗೆ ಧನ್ಯವಾದಗಳು.
ಮೂರ್ತಿ