ನಿನ್ನ ನೆನಪಿಗೆ ಎಂತ ಬ್ಯುಸಿ

Spread the love
Share Button

‘ನಿನ್ನ ನೆನಪಿಗೆ ಎಂತ ಬ್ಯುಸಿ’ ಈ ಸಾಲನ್ನು ಎಲ್ಲೋ ಓದಿದ್ದೆ. ಅದೇನು ತೋಚಿತೋ ಏನೋ ಸ್ಟೇಟಸ್ ಅಂತ ಹಾಕ್ಬಿಟ್ಟೇ ನನ್ನ ಸ್ನೇಹವಲಯದಲ್ಲಿ ಎಲ್ಲರೂ ನಿಬ್ಬೆರಗಾದರು. ನನ್ನಕ್ಕ, ಗೆಳತಿ ಕಾಮೆಂಟ್ಸ್‌ದಲ್ಲೇ ನೇರವಾಗಿ ‘ಏನಾಯಿತು’ ಎಂದು ಗಾಬರಿ ಪಟ್ಕೊಂಡಿದ್ದರು. ‘ಬ್ಯುಸಿ’, ಎಂಬ ಎರಡೂವರೆ ಅಕ್ಷರದ ಶಬ್ಧ, ನಮ್ಮ ಜೀವನದಲ್ಲಿ ಜಾದೂವಿನ ಕೋಲಿನಂತೆ ಕೆಲಸ ಮಾಡುತ್ತದೆ. ಮೊದಲೇ ಧಾವಂತದ ನಮ್ಮ ಬದುಕು ಅಂಥದರಲ್ಲಿ ಯಾರಾದರೂ ನಮ್ಮ ಜೊತೆ ಮಾತಾಡ ಬಯಸಿದರೆ ಈ ಬ್ಯುಸಿ ಎಂಬ ಶಬ್ಧವನ್ನು ಚೆಂಡಿನಂತೆ ಅವರತ್ತ ಬಿಸಾಕಿ ಸುಲಭವಾಗಿ ತಪ್ಪಿಸಿಕೊಳ್ಳುತ್ತೇವೆ.

ಕವಿತಾ ಹಾಗೂ ಪ್ರದೀಪ ಇವರ ಪ್ರೀತಿ ಆಗಷ್ಟೇ ಚಿಗುರಾವಸ್ಥೆಯಲ್ಲಿತ್ತು. ಅವರ ಮಾತು ಸೂರ್ಯನು ಚೆಲ್ಲಿದ ಹೊನ್ನಿನೋಕುಳಿಯನ್ನು ಬೆಳದಿಂಗಳ ಸೊಬಗನ್ನು ಕವಿತಾಳ ಸೌಂದರ್ಯಕ್ಕೆ ಹೋಲಿಸಿ ಪುಂಖಾನುಪುಂಖ ಕವನಗಳು ಮೂಡುತ್ತಿದ್ದವು. ಅದೆಷ್ಟು ಕ್ಷಣಗಳು ಅವರ ಭೇಟಿಯ ಸಂಭ್ರಮದ ಸಾಕ್ಷಿಯಾಗಿದ್ದವು. ಆಗ ಈ ಬ್ಯುಸಿ ಎಂಬ ಶಬ್ದಕ್ಕೆ ಧ್ವನಿ ಇರಲಿಲ್ಲ. ಅಪ್ಪಿ ತಪ್ಪಿ ಕೇಳಿಸಿಕೊಂಡರೂ, ಒಲವೇ ನಿನ್ನ ನೆನಪಿಗೆ ಎಂತ ಬ್ಯುಸಿ ಎಂಬ ಉತ್ತರ ತಟ್ಟನೆ ಬರ್ತಿತ್ತು. ಅದೇ ಈಗ ಈಗ ಕೇವಲ ಎಂಟು ತಿಂಗಳಲ್ಲಿಯೇ, ಅವರಿಬ್ಬರ ಮಾತಲ್ಲಿ ಬ್ಯುಸಿ ಎಂಬ ಪದ ಹಾಸುಹೊಕ್ಕಿದೆ. ಇಬ್ಬರ ಸಂಬಂಧಗಳಲ್ಲಿ ಬಿರುಕು ಬಂದಂತಾಗಿದೆ.

ಪಕ್ಕದ ಮನೆಯ ಶಾರದಾ ಆಂಟಿ ಕಳೆದ 2  ವಾರದಿಂದ, ‘ಇಂದು ನನ್ನ ಮಗ ಬರ್ತಾನೆ, ಸೊಸೆ ಬರ್ತಾಳೆ, ಮೊಮ್ಮಗ ಬರ್ತಾಳೆ,’ ಅಂತ ಬೆಳಿಗ್ಗೇನೆ ಹಾಲು ಬಿಸಿ ಮಾಡಿ ಇಡ್ತಿದ್ಲು. ಮಧ್ಯಾಹ್ನ ಅವನು ಕರೆ ಮಾಡಿ, ಅಮ್ಮ ಇಂದು ನಿಮ್ಮ ಸೊಸೆಯ ಗೆಳೆಯ ಗೆಳತಿಯರು ಮನೆಗೆ ಬರ್ತಿದ್ದಾರೆ’ ಇಂದು ಬರೋಲ್ಲ. ಮಾರನೆ ದಿನ ಪಾಪುವಿಗೆ ಸ್ವಲ್ಪ ಜ್ವರ, ಇಂದು ಆಫೀಸಿನಲ್ಲಿ ಅರ್ಜೆಂಟ್ ಅಪಾಯಿಂಟ್ಮೆಂಟ್ ಇದೆ. ನಾನು ಬ್ಯುಸಿ ಬರೋಕಾಗಲ್ಲ ಎಂದು ಸುಲಭವಾಗಿ ಹೇಳಿ ಬಿಡ್ತಿದ್ದ, ಆದರೆ ಈ ಮಮತೆಯ ಒಡಲ ನೋವು ಈ ಒಂದು ಶಬ್ದಕ್ಕೆ ಅರ್ಥವಾಗಬಹುದೇ?

ಎಷ್ಟೋ ಕಂದಮ್ಮಗಳು ತನ್ನ ಜನ್ಮ ದಿನದ ಕೇಕ್ ಎದುರಿಗಿಟ್ಟು ಅಪ್ಪನನ್ನು ಕಾಯುತ್ತಿರುತ್ತವೆ, ಮಗನ ಶಾಲೆಯಲ್ಲಿ ಬೆಸ್ಟ್ ಸ್ಟೂಡೆಂಟ್ ಅವಾರ್ಡ್ ಕಾರ್ಯಕ್ರಮವಿದೆ. ಹೆಸರು ಕರೆದಾಗ ಒಬ್ಬನೇ ವೇದಿಕೆ ಏರಿ ಹಿಂತಿರುಗಿ ನೋಡುತ್ತಾ ಮುಖ ಬಾಡಿಸಿ ಬಹುಮಾನ ಪಡೆಯುತ್ತಾನೆ. ತಂಗಿ ತನ್ನ ಅಣ್ಣ ಅಕ್ಷತೆ ಹಾಕಲಾದ್ರು ಬಂದೆ ಬರುವನೆಂದು ಮದುವೆಯ ಮಂಟಪದಿಂದ ಬಾಗಿಲತ್ತ ಕಣ್ಣಿಟ್ಟು ಕಾಯುತ್ತಾಳೆ. ಅಸ್ಪತ್ರೆಯಲ್ಲಿ ಬಿದ್ದುಕೊಂಡಿರುವ ಮುದಿ ಅಪ್ಪ ಡಿಸ್ಟಾರ್ಜ್‌ಗಾಗಿ ಕಾಯುತ್ತಿರುತ್ತಾನೆ, ಮಗನಿಗೆ ಟೈಮ್ ಇಲ್ಲ.
ಒಂದು ಕಡೆ ಜನರಿಗೆ ಚಂದ್ರಲೋಕಕ್ಕೆ ಹೊಗಲು ಸಮಯವಿದೆ. ಅದೇ ಮತ್ತೊಂದು ಕಡೆ ಪ್ರಸವ ನೋವಿಗಾಗಿ ಕಾಯುವ ಸಮಯ, ತಾಳ್ಮೆ ತಾಯಿಯಾಗುವವಳಿಗೆ ಇಲ್ಲ. ಇನ್ಸ್ಟಂಟ್ ರಿಸಲ್ಟ್ ಬಯಸುವ ಕಾಲವಿದು. ಇನ್ಸ್ಟ್ಂಟ್ ಕಾಫಿಯಾ ಹಾಗೆ, ಕುಕ್ಕರಿನಲ್ಲಿ ಎರಡು ಸಿಟಿಗೆ ಬೇಯುವ ಅನ್ನದಂತೆ, ಈ ಫಾಸ್ಟ್‌ಫುಡ್ ನಮ್ಮ ಆರೋಗ್ಯಕ್ಕೆ ಎಷ್ಟು ಒಳಿತು? ಎಂಬ ಕಾಳಜಿ ಬಹುತೇಕ ಜನರು ಮಾಡುವುದೇ ಇಲ್ಲ.

ಮುಂಚೆ ಮನೆ ಮದುವೆಯಾದರೆ ಸಂಬಂಧಪಟ್ಟ ಎರಡೂ ಮನೆಯವರ ಸಹ ಕುಟುಂಬ ಸೀರೆ, ಜವಳಿ, ಆಮಂತ್ರಣ ಪತ್ರ ಕೊಡಲು ಹೋಗುವುದಿತ್ತು. ಅಲ್ಲಿ ತನ್ನ ಹಳೆಯ ನೆನಪುಗಳನ್ನು ತಾಜಮಾಡುವ ವೇಳೆ ನವ ವಧುವರರಿಗೂ ಜೀವನ ಹೊಸ ಅಧ್ಯಾಯದ ಪಾಠ ಮಾಡಿದಂತಾಗುತ್ತಿತ್ತು. ಆದರೆ ಈಗ ಅದೆಲ್ಲಕ್ಕೆ ಅಸ್ಪದೆಯೇ ಇಲ್ಲ. ಎಲ್ಲ ಯು-ಟ್ಯೂಬ್ ಚ್ಯಾನೆಲುಗಳಲ್ಲಿ ಲಭ್ಯವಾಗಿರುತ್ತದೆ. ಆಮಂತ್ರಣವನ್ನು ಕೊರಿಯರ್   ಮೂಲಕ ರವಾನಿಸಿ ಒಂದು ಕರೆ ಮಾಡಿ ಹೇಳಿದರೆ ಕೆಲಸ ಮುಗಿಯಿತು. ಹಾಗೆಯೇ ಸೀರೆ ಜವಳಿ ಖರೀದಿಸಲು ಕೇವಲ ಹೆಣ್ಣು ಗಂಡು ಅಥವಾ ಆನ್ ಲೈನ್ ಶಾಪಿಂಗ್‌ಗೆ ಮಾರು ಹೋಗಿ ಮನೆ ಬಾಗಿಲಿಗೆ ಸೂಜಿದಾರದಿಂದ ಹಿಡಿದು ಎಲ್ಲಾ ವಸ್ತುಗಳು ಬರುವಾಗ ಅಂಗಡಿ ಅಂಗಡಿ ಅಲೆದಾಡುವ ಕಷ್ಟ ಯಾರಿಗೆ ಬೇಕು. ಇಷ್ಟಾದರೂ ನಮ್ಮವರಿಗೆ ಪುರುಸೊತ್ತೇ ಇರುವುದಿಲ್ಲ. ‘ನಾವು ನೆರವಾಗಿ ಮದುವೆ ಸಭಾಗೃಹಕ್ಕೆ ಬಂದು ಹೊಗುವೆವು’ ಎನ್ನುವವರೇ ಹೆಚ್ಚು. ಒಬ್ಬರು ಬಾರದಿರಲು ಮುಂದೆ ಅವರ ಮನೆ ಸಮಾರಂಭಗಳಲ್ಲಿ ಇವರೂ ಕಾಟಾಚಾರಕ್ಕೆ ಹೋದಂತೆ ಹೋಗಿ ಬರುತ್ತಾರೆ.

ಇಂದಿನ ನಮ್ಮ ಬದುಕಿನಲ್ಲಿ ಸಂಬಂಧ, ಸಂಬಂಧಿಕರಿಗೆ ಕೊಡಬೇಕಾದ ಆದ್ಯತೆ ಕೊಡುವುದಿಲ್ಲ. ಏಕೆಂದರೆ ಇಂದು ಹಣ ಕೊಟ್ಟರೆ ಸಾಕು ಬೇಕು ಬೇಕಾದ ರೀತಿಯಲ್ಲಿ ಅಚ್ಚು ಕಟ್ಟಾಗಿ ಎಲ್ಲವನ್ನು ರೆಡಿಮಾಡುವ ಪ್ರೊಫೆಷನಲ್ ಡೆಕೊರೆಟರ್ಸ್, ಬ್ಯೂಟಿಷನ್ಸಗಳು ಎಲ್ಲವನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸುತ್ತಾರೆ. ಹೀಗಿರುವಾಗ ಯಾರ್ಯಾರಿಗೆ ಕೈ ಕಾಲು ಮುಗಿದು ಕೆಲಸ ಮಾಡಿಸಿ ಕೊಳ್ಳಬೇಕೆಂದೆನಿಸುದಿಲ್ಲ. ಹಾಗೆ ನೋಡಿದರೆ ಈ ಬ್ಯುಸಿಯಿಂದಾಗಿ ಮಾರ್ಕೆಟಿನಲ್ಲಿ ಬರುವ ಹೊಸ ಹೊಸ ಅಯಾಮಗಳ ವ್ಯಾಪಾರಗಳೂ ಬೆಳೆಯುತ್ತಿದೆ.

ನಾವು ಬಯಸುವ ನಮ್ಮವರ ಬಾಂಧವ್ಯವನ್ನು ಈ ಬ್ಯುಸಿ ಎಂಬ ಶಬ್ಧ ಶೂಲದಂತೆ ಚುಚ್ಚುತ್ತಿರುತ್ತೇವೆ. ಎಲ್ಲಿ ಪ್ರೇಮವಿರುತ್ತದೆಯೋ ಅಲ್ಲಿ ಮನಸ್ಸು ಭಾವ ಬೆಸುಗೆ ಬಯಸೋದು ಸಹಜ. ಮತ್ತದು ಸ್ನೇಹಿತರೆ ಆಗಲಿ, ಪ್ರೇಮಿಗಳೇ ಆಗಲಿ ಅಥವಾ ನಮ್ಮ ಬಂಧಗಳೇ ಆಗಲಿ… ನಾವು ಅಂತರ್ಜಾಲತಾಣದಲ್ಲಿ ಅದೆಷ್ಟು ಸಮಯ ವ್ಯಯ ಮಾಡುತ್ತಿರುತ್ತೇವೆ ಅದೇ ನಮ್ಮ ಮನಸ್ಸು ನಮ್ಮವರೊಂದಿಗೆ ಬೆರೆಯಲು ಕೇಳದು. ವಾಟ್ಸ್ ಆಪ್‌ಗಳಲ್ಲಿಯ ಪ್ರತಿಯೊಂದು ಸ್ಟೇಟಸ್ ಸ್ಪಂದಿಸದಿದ್ದರೂ ಪರವಾಗಿಲ್ಲ. ಆದರೆ ನಮ್ಮ ಮನೆಯಲ್ಲಿರುವ ಹಿರಿ ಜೀವಿಗಳ ಮಾತನ್ನು ಆಲಿಸಿದರೆ ಅವರಿಗೆ ಸಿಗುವಂತಹ ನೆಮ್ಮದಿ ಎಲ್ಲಾ ಪ್ರತಿಕ್ರಿಯೆಗಳಿಗಿಂತಲೂ ಮಿಗಿಲಾಗಿರುತ್ತವೆ. ಅವರ ಮನಸನ್ನು ನಾವಿಟ್ಟ ಹೆಜ್ಜೆಗೆ ನಮ್ಮ ಮುಂದಿನ ಪೀಳಿಗೆ ಹೆಜ್ಜೆಯಿಡುವುದು. ಆಗ ನಮಗೂ ಇದೆ ಬ್ಯುಸಿ ಎಂಬ ಶೂಲದ ಗಾಯದ ವೇಧನೆಯ ಅನುಭವ ಆಗಲೂಬಹುದು.

ಹಾಗೆಯೇ ನಾವು ಎಷ್ಟೇ ಬ್ಯುಸಿ ಆಗಿದ್ದರೂ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಂತ ಮುಖ್ಯವಾದದ್ದು. ನಮ್ಮ ಸುತ್ತು ಮುತ್ತಲಿನ ಪ್ರಕೃತಿಯ ಅದಮ್ಯ ಸೊಬಗನ್ನು ಕಣ್ತುಂಬಿಕೊಂಡು ನಮ್ಮಲ್ಲಿ ಹೊಸ ಚೈತನ್ಯ ಮೂಡುವುದು. ಅದಕ್ಕಾಗಿಯೇ ಈ ಬ್ಯುಸಿಯ ಧಾವಂತದಲ್ಲಿ ಒಂದು ಸಣ್ಣ ಬ್ರೇಕ್ ಕೊಟ್ಟು ಎಲ್ಲಿಗಾದರೂ ಹೋಗಿ ಬಂದರೆ ಮನಸ್ಸು ಪ್ರಫುಲ್ಲಿತವಾಗುವುದು.
ಬದುಕು ಎಷ್ಟು ಮುಂದೆ ಹೋಗಿರುತ್ತದೆಯೋ ನೆನಪಿನ ಬುಟ್ಟಿಯಲ್ಲಿ ಸಾಕಷ್ಟು ಮಧುರ ಕ್ಷಣಗಳನ್ನು ಕಟ್ಟಿಟ್ಟಿರುತ್ತದೆ. ಎಂದಾದರೂ ಅವುಗಳನ್ನು ಬಿಚ್ಚಿ ನೋಡಿದರೆ ಅದೆಷ್ಟು ಚೆಂದ. ನಮ್ಮ ಬಾಲ್ಯದ ಗೆಳೆಯರು ನಮ್ಮ ಗುರುಗಳು, ನಮ್ಮ ಅಕ್ಕ ಪಕ್ಕದವರು, ನಮ್ಮ ಕೆಟ್ಟ ಕಾಲಕ್ಕೆ ನಮಗೆ ಸಹಾಯ ಮಾಡಿದವರು. ಇವರೆಲ್ಲರನ್ನು ನೆನೆಯುವುದೂ ಒಂದು ರೀತಿಯ ಅಧ್ಯಾತ್ಮಿಕತೆಯೇ, ಅವರ ಬಗ್ಗೆ ತಿಳಿದುಕೊಳ್ಳುವುದು, ಎಂದಾದರು ಅವರನ್ನು ಭೇಟಿಯಾಗಿ ಮೊದಲಿನ ಆ ಕ್ಷಣಗಳನ್ನು ನೆನೆಯುದರಲ್ಲೂ ಎಷ್ಟು ಸುಖವಿದೆ. ಹಾಗೆಯೇ ಅವರು ಏನದರೂ ಕಷ್ಟದಲ್ಲಿದ್ದರೆ ತನ್ನ ಕೈಲಾದುದ್ದನ್ನು ಮಾಡುವುದು, ಇಲ್ಲವೇ ಅಕ್ಕರೆಯ ಎರಡು ಮಾತನ್ನಾಡಿದ್ದರೆ ಅದುವೆ ಮನಸ್ಸು ಮನಸ್ಸುಗಳ ಬೆಸುಗೆ ಎಂಬುವುದ ಸಾರ್ವಕಾಲಿಕ ಸತ್ಯ.

ಕೆಲವೊಂದು ಸಂದರ್ಭಗಳಲ್ಲಿ ಈ ಬ್ಯುಸಿ ಎಂದು ನಾವು ಮಾಡಿಕೊಂಡ ಒಂದು ಅವಕಾಶ. ಒತ್ತಡದ ಸಮಯದಲ್ಲಿ ಯಾರಾದರೂ ಕರೆ ಮಾಡಿದರೆ, ಸಹಜವಾಗಿಯೇ ಈಗ ಬ್ಯುಸಿ ಎಂದು ಹೇಳೋದು ಔಚಿತ್ಯಪೂರ್ಣವಾಗಿರುತ್ತದೆ, ಅನಂತರ ತಾನೇ ಕರೆ ಮಾಡಿ ಮಾತನಾಡಿಸಿದರೆ ಸರಿ. ಅವಸರದ ಘಳಿಗೆಯಲ್ಲಿ, ಅನಾವಶ್ಯಕವಾದ ಮಾತುಗಳ ಪ್ರಹಾರದಿಂದ ತನ್ನನ್ನು ರಕ್ಷಿಸಲು ಇದನ್ನು ಉಪಯೋಗಿಸುವುದು ಅನಿವಾರ್ಯವೂ ಹೌದು. ಒಬ್ಬ ವ್ಯಕ್ತಿಯನ್ನು ಅಥವಾ ಅವನ ಮಾತನ್ನು ನಿರಾಕರಿಸಲು ಉಪಯೋಗಿಸುವ ಸುಲಭ ಸಾಧನೆ ಎಂದೆನ್ನಬಹದು. ಈ ಬ್ಯುಸಿ ತನ್ನನ್ನು ಒಂದು ಚೌಕಟ್ಟಿನಲ್ಲಿ ಕೂಡಿಡುವ ಆಜ್ಞಾನದ ಹಾಗೂ ಅಹಂಕಾರದ ಗೋಡೆಯಾಗದಿರಲಿ.

-ಹೇಮಾ ಸದಾನಂದ ಅಮೀನ್, ಮುಂಬೈ

10 Responses

 1. ARUN RAO says:

  ತುಂಬಾ ಚೆನ್ನಾಗಿದೆ ಮೇಡಂ

 2. Yunus says:

  आपका केहना बिलकुल सही है ! ईस्स कंप्यूटर
  जमानेमे एक से बात करना भी मुश्किल ही नहि
  बलके ना मूमकिन है ! ओर स्मार्ट फोन आनेके
  बाद हमसब्ब पास के लोगोंको धुर करके धुरके
  लोगों को करीब। लाना चाह रहे है ! ऐ छोड़कर
  थोडा़ वक्त निकालकर अपनों से ओर दोस्तों से
  आपभी बात करो हम्बी करेंगे ! धन्यावाद जी

 3. ಬ್ಯುಸಿ ಜೀವನದ ವಾಸ್ತವತೆಯನ್ನು ಸರಳವಾಗಿ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ , ಹಿರಿಯರಿಗೆ ಮಕ್ಕಳಿಗೆ ಪ್ರೀತಿಯಿಂದ ಮಾತನಾಡಿಸಲೂ ಸಮಯವಿಲ್ಲದಾಗಿದೆ.
  ಇನ್ನಾದರೂ ಮಕ್ಕಳಿಗೆ ಹಿರಿಯರಿಗೆ ಸಮಯ ಕೊಡದಿದ್ದರೆ , ಮುಂದೆ ಬರುವ ದುಷ್ಪರಿಣಾಮಗಳಿಗೆ ನಾವೇ ಹೊಣೆಗಾರರು

 4. ವಿಠಲಗಟ್ಟಿ ಉಳಿಯ says:

  ಪ್ರೀತಿಯ ಹೇಮಾ ಸದಾನಂದ ಅಮೀನ್,
  ನಿಮ್ಮ ಸುರಹೊನ್ನೆ ವಿಚಾರ ಅಥವಾ ಪ್ರಬಂಧ ಓದಿದೆ. ಇದೊಂದು ಸಕಾಲಿಕ ಬರಹ. ‌ಬರೆದಿರುವ ನಿಜ ಜೀವನದ ಸಂಗತಿಗಳು “ಅಂಗ್ಯೆ ಹುಣ್ಣಿಗೆ ಕನ್ನಡಿ ಬೇಕೇ?” ಎಂದು ಕೇಳುವಷ್ಟು ವಿಷಯಗಳನ್ನು ಕಟ್ಟಿಕೊಟ್ಟು ನಮ್ಮನ್ನು ಚಿಂತನೆಗೆ ಹಚ್ಚುತ್ತೀರಿ. ತುಂಬಾ ಮಾರ್ಮಿಕವಾಗಿ ಬರೆದಿದ್ದೀರಿ. ಅಭಿನಂದನೆಗಳು! – ವಿಠಲಗಟ್ಟಿ ಉಳಿಯ

 5. Hema says:

  ವಾಸ್ತವಕ್ಕೆ ಕನ್ನಡಿ ಹಿಡಿಯುವ ಬರಹ. ಅರ್ಥಪೂರ್ಣವಾಗಿದೆ. ಕೊನೆಯ ಸಾಲು ಈ ಬ್ಯುಸಿ ತನ್ನನ್ನು ಒಂದು ಚೌಕಟ್ಟಿನಲ್ಲಿ ಕೂಡಿಡುವ ಆಜ್ಞಾನದ ಹಾಗೂ ಅಹಂಕಾರದ ಗೋಡೆಯಾಗದಿರಲಿ..’ ಬಹಳ ಸೂಕ್ತವೆನಿಸಿತು.

 6. Anonymous says:

  Tumba chennagide

 7. Nayana Bajakudlu says:

  ಬ್ಯೂಟಿಫುಲ್ …. ಬದುಕಿನ ನೆನಪಿನ ಬುತ್ತಿಯನ್ನು ತೆರೆಯುವಂತೆ ಮಾಡಿತು ಧಾವಂತದ ಬದುಕಲ್ಲೂ ಈ ಬರಹ. ಹೌದು ಎಷ್ಟೊಂದು ಸುಂದರವಾದ ನೆನಪುಗಳನ್ನು , ಸಂಗತಿಗಳನ್ನು ಈ ಬಿಝಿ ಅನ್ನೋ ಶಬ್ದದೊಳಗೆ ಕಳೆದುಕೊಳ್ಳುತ್ತಿದ್ದೇವೆ ನಾವು …

 8. Smitha Amrithraj says:

  ಚೆನ್ನಾಗಿದೆ ಬರಹ ಹೇಮಾ..

 9. Rajanikaanth says:

  ನಿಜವಾದ ಬ್ಯುಸಿನರ್ತನ ನಾಟ್ಯವಾಡಿದೆ ಅಂತಲೇ ಹೇಳಬಹುದು… ಪ್ರೀತಿ ಪ್ರೇಮದಲ್ಲಿ ತೊಡಗಿರುವವರಿಗೆ ಸ್ನೇಹಿತರು ಹಾಗೂ ಸಂಬಂಧಿಕರೊಡಗೂಡುವ ಕೆಲಸಗಳಲ್ಲಿ ಮಾತ್ರ ಈ ಬ್ಯುಸಿ ಸಖತ್ ರೌಂಡ್ ಹೊಡಿತಿರುತ್ತೆ..! ಯಾವಾಗ ತಮ್ಮದೇ ಪ್ರೀತಿಯ ಸಂಬಂಧಗಳಲ್ಲಿ ಮನಸ್ಥಾಪವುಂಟಾಗುತ್ತೋ ಆಗ ಊರೂರು ಸುತ್ತುತ್ತಿದ್ದ ಬ್ಯುಸಿ ಅವರನ್ನೇ ವಕ್ಕರಿಸುತ್ತೆ..!
  ಈ ಬ್ಯುಸಿಯನ್ನ ಕೆಲವರು ಹಣಸಂಪಾದನೆಗೆ ಹಾಗೂ ಪ್ರಮುಖ ಕೆಲಸಗಳಿಗೆ ಉಪಯೋಗಿಸಿದರೆ, ಮತ್ತೆ ಕೆಲವರು ನಾಟಕವಾಡಲು ಬಳಸುವುದುಂಟು. !
  ಈ ಮೊದಲು ತಂತ್ರಜ್ಞಾನವಿಲ್ಲದ ಕಾಲದಲ್ಲಿನ ಮದುವೆಗಳಲ್ಲಿ ಬೇಸರವೇ ಇಲ್ಲದ ಸಂತೋಷದ ಸಂಭ್ರಮದ ಬ್ಯುಸಿ ಇರ್ತಿತ್ತು, ಅದರ ಮಜವೇ ಬೇರೆಯಾಗಿರ್ತಿತ್ತು..! ಈಗ ನೀವೇಳಿದಂತೆ ಕುಳಿತಲ್ಲಿಗೆ ಎಲ್ಲವೂ ಬರುವುದರಿಂದ ಸೋಮಾರಿಗಳಾಗಿದ್ದಲ್ಲದೇ ಸಂಬಂಧಪಟ್ಟವರೊಡನೆ ಸಂಪೂರ್ಣ ಬೆರೆಯುವುದಕ್ಕೂ ಸಮಯ ಹೊಂದಿಸಿಕೊಳ್ಳದೇ ಜಾಲತಾಣಗಳಲ್ಲಿ ಬ್ಯುಸಿಯಾಗಿರೋದೇ ಹೆಚ್ಚಾಗಿದೆ..
  ಬ್ಯುಸಿಯ ಬಗ್ಗೆ ಮನಸ್ಸು ಅತ್ತಿತ್ತ ಹೋಗಲು ಬಿಡದಂತೆ ಒಂದೊಳ್ಳೆಯ ಧೀರ್ಘ ಲೇಖನ ಬರೆದಿರುವುದನ್ನು ನಾನು ಇದೇ ಮೊದಲು ಓದುತ್ತಿರುವುದೂ ಕೂಡ..
  ಇದು ಹೊಸ ಪ್ರಾಜೆಕ್ಟ್ ಎನಿಸಿತು ಅಕ್ಕಾಜೀ…
  ಕೊನೆಯದಾಗಿ ನಮಗೆ ಸಿಗುವ ಅಮೂಲ್ಯ ಸಲಹೆಯೆಂದರೆ, ನಾವು ಯಾವುದೇ ಕೆಲಸದಲ್ಲಿ ಯಾವುದೇ ಸಮಯದಲ್ಲಿ ಎಷ್ಟೇ ಬ್ಯುಸಿಯಿದ್ದರೂ ಕೂಡ ನಮ್ಮವರಿಗಾಗಿ ಹಾಗೂ ನಮ್ಮನ್ನು ಗೌರವಿಸುವವರಿಗಾಗಿ ಸಮಯವನ್ನು ಮೀಸಲಿಟ್ಟು, ಈ ಬ್ಯುಸಿಯ ಮೂಗಿಗೆ ಮೂಗುದಾರ ಹಾಕಿ ಅದನ್ನ ಸಾಕಷ್ಟು ನಿಯಂತ್ರಣದಲ್ಲಿಟ್ಟು ಹೊಂದಾಣಿಕೆಯ ಜೀವನ ಮಾಡಬೇಕೆಂಬುದು ಅರಿವಾಯಿತು..
  ಕಥೆ ಬರೆದ ಲೇಖಕಿಗೆ ಮನಃಪೂರ್ವಕ ಧನ್ಯವಾದಗಳು..
  ಕಥೆ ಪ್ರಕಟಿಸಿದ ಸುರಹೊನ್ನೆಗೆ ಧನ್ಯವಾದಗಳು…

 10. ಡಾ. ಗುರುಸಿದ್ಧಯ್ಯಾ ಸ್ವಾಮಿ, ಅಕ್ಕಲಕೋಟ says:

  ಪ್ರತಿಯೊಬ್ಬರಿಗೂ ನಾವು ಸದಾ ಬ್ಯುಸಿ ಎಂದು ಹೇಳುವ ಮುನ್ನ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲು ಹಚ್ಚುವ ಲೇಖನ. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: