ಯುಗಾದಿ…ಬಂದಾಗ ಅಬ್ಬಬ್ಬಾ
ಪ್ರಕೃತಿಯಲ್ಲಿ ಹೊಸ ಬದಲಾವಣೆಯ ಪರ್ವ ಆರಂಭವಾಗುವ ಸಮಯ. ಬಿರುಬಿಸಿಲಿನಲಿ ಆಗಾಗ ಸವರಿಕೊಂಡು ಹೋಗುವ ತಂಗಾಳಿ, ಬೋಳಾದ ಗಿಡಮರಗಳಲ್ಲಿ ಹಸಿರಿನ ಸಿಂಚನ, ಗೊಂಚು ಗೊಂಚಲು ಮಾವನ್ನು ಹಿಡಿದು ವೈಯ್ಯಾರಿಯಂತೆ ನರ್ತಿಸುತ್ತ ತೂಗಾಡುವ ಮಾಮರದಲ್ಲಿ ಕೋಗಿಲೆಯ ಗಾಯನ, ವಸಂತಾಗಮನ ಕೊಡುವ ಸೂಚನೆ ಒಂದೇ ಎರಡೇ. ಜೊತೆಗೆ ನಮ್ಮ ಹೊಸ ಸಂವತ್ಸರ ಶುರುವಾಗುವುದು ಯುಗಾದಿಯಿಂದಲೇ ಅಲ್ಲವೇ?…ಹೌದು ಮತ್ತೆ ಯುಗಾದಿ ಬಂದಿದೆ.
ಚಿಕ್ಕವರಿದ್ದಾಗ ಹೊಸ ವರ್ಷದ ಹಬ್ಬ ಹೊಸಬಟ್ಟೆಯಿಲ್ಲದೆ ನಡೆಯುತ್ತಿರಲಿಲ್ಲ(ಈಗಿನ ಹಾಗೆ ಬೇಕಾದಾಗಲೆಲ್ಲ, ಚಂದ ಕಾಣಿಸಿದ್ದನ್ನೆಲ್ಲ ಕೊಂಡು, ಉಡುವ ಕಾಲ ಅದಾಗಿರಲಿಲ್ಲವಲ್ಲ). ನಾಲ್ಕು ದಿನದ ಮುಂಚೆಯೇ ಕರ್ಚಿಕಾಯಿ, ರವೆಉಂಡೆ, ಚಕ್ಕುಲಿಯ ಫಳಾರ ಸಿದ್ಧವಾಗಿ ಶೆಲ್ಫಿನ ಮೇಲೇರಿ ಕೂಡುತ್ತಿತ್ತು. ಅವುಗಳನ್ನಿಟ್ಟ ಡಬ್ಬಿ ಯಾವಾಗ ಕೆಳಗಿಳಿಯುವುದೋ ಎಂದು ಮಕ್ಕಳ ಕಣ್ಣು ಅಡುಗೆ ಮನೆಗೆ ಹಾಯ್ದಾಗಲೊಮ್ಮೆ ಅದರೆಡೆ ನೋಟ ಬೀರುತ್ತಿತ್ತು. ಯುಗಾದಿಯ ಹಿಂದಿನ ದಿನ ನೀರು ತುಂಬುವ ಹಬ್ಬದಲ್ಲಿ ಮನೆಯ ಹಂಡೆ ತೊಟ್ಟಿಗಳೆಲ್ಲಾ ಖಾಲಿಯಾಗಿ, ಸ್ವಚ್ಛಗೊಂಡು ನೀರಿನಿಂದ ಮತ್ತೆ ಭರ್ತಿಯಾಗುತ್ತಿದ್ದವು. ಘಮಘಮ ಸುವಾಸನೆ ಬೀರುತ್ತಾ ತಯಾರಾಗುತ್ತಿದ್ದ ಬೇವು ಬೆಲ್ಲದ ಪುಡಿ ಸಿದ್ಧವಾಗಿ ಮರುದಿನ ಬೇವಿನ ಹೂಗಳ ಜೊತೆ ಒಂದಾಗಿ ಭಗವಂತನಿಗೆ ನೈವೇದ್ಯಗೊಳ್ಳಲು ಕಾಯುತ್ತಿತ್ತು.
ಮರುದಿನ ಸೂರ್ಯ ಹುಟ್ಟುವುದಕ್ಕೆ ಮುಂಚೆಯೇ ಅಮ್ಮನ ಸುಪ್ರಭಾತ ಶುರುವಾಗುತ್ತಿತ್ತು. ‘ಇಂದು ಹೊಸ ವರ್ಷದ ಯುಗಾದಿ, ಎಲ್ಲರೂ ಬೇಗ ಬೇಗ ಎದ್ದು ಬನ್ನಿ, ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ, ಪದೇ ಪದೇ ಹೇಳಿಸಿಕೊಳ್ಳಬೇಡಿ, ಇವತ್ತು ಬೈಸಿಕೊಂಡರೆ ವರ್ಷ ಪೂರ್ತಿ ಬೈಸಿಕೊಳ್ಳುತ್ತೀರಿ‘ ಎಂದು ಎಚ್ಚರಿಸುತ್ತಿದ್ದಳು. ಅದೇನೋ ಗೊತ್ತಿಲ್ಲ ಅಂದು ಮಾತ್ರ ಜಾಣ ಮಕ್ಕಳಂತೆ ಎಲ್ಲ ಕೆಲಸ ಮಾಡಿಮುಗಿಸುತ್ತಿದ್ದೆವು. ಪೂಜೆಯ ನಂತರ ಮೊದಲು ಬೇವು-ಬೆಲ್ಲ ಹಂಚುತ್ತಿದ್ದರು. ದೊಡ್ಡವರಿಗೆ ಗೊತ್ತಾಗದಂತೆ ಅದರಲ್ಲಿನ ಬೇವಿನ ಹೂಗಳನ್ನೆಲ್ಲಾ ಬಿಸಾಡಿ ಬರೀ ಸಿಹಿಪುಡಿಯನ್ನು ಹೊಟ್ಟೆಗೆ ಇಳಿಸುತ್ತಿದ್ದೆವು. ಮಧ್ಯಾಹ್ನ ಹೋಳಿಗೆ, ಮಾವಿನಕಾಯಿ ಚಿತ್ರಾನ್ನ, ಹಪ್ಪಳ ಸಂಡಿಗೆ, ಅಟ್ಟದಿಂದ ಇಳಿದ ಪಳಾರ ಸಾಕಾಗುವಷ್ಟು ಮೇಯುತ್ತಿದ್ದೆವು. ಮಾವಿನಕಾಯಿ ತಿನ್ನುವ ಲೈಸೆನ್ಸ್ ಸಿಕ್ಕುತ್ತಿದ್ದುದು ಯುಗಾದಿಯಿಂದಲೇ. ಅದಕ್ಕೂ ಮುಂಚೆ ತಿನ್ನಬಾರದು ಎಂಬುದು ಅಜ್ಜಿಯ ಕಟ್ಟಾಜ್ಞೆಯಾಗಿತ್ತು.
ಯುಗಾದಿಯ ಮಾರನೆಯ ದಿನ ಸಂಜೆಯಾಗುತ್ತಲೇ ಹೊಸಬಟ್ಟೆ ತೊಟ್ಟು ಆಗಸದಲ್ಲಿ ಹೊಸ ಸಂವತ್ಸರದ ಚಂದ್ರನನ್ನು ಹುಡುಕುವ ಕೆಲಸ. ತೆಳ್ಳಗೆ, ಗೀರಿದ ಕಡ್ಡಿಯಂತೆ ಕಂಡೂ ಕಾಣದ ಹಾಗೆ ಮೋಡಗಳ ಮರೆಯಲ್ಲಿ ಇಣುಕುತ್ತಿದ್ದ ಅರ್ಧಚಂದ್ರನನ್ನು ನೋಡಿ, ಒಳಗೆ ಹೋಗಿ ಮನೆಯ ಹಿರಿಯರಿಗೆ ಬೇವು-ಬೆಲ್ಲ ಕೊಟ್ಟು ಕಾಲಿಗೆ ನಮಸ್ಕರಿಸುವುದು ವಾಡಿಕೆ. ಬರೀ ಮನೆಯಲ್ಲಷ್ಟೇ ಅಲ್ಲ ಪರಸ್ಪರ ಬಂಧುಬಳಗದವರೂ ಸಹ ಮನೆ ಮನೆಗೆ ತೆರಳಿ, ಬೇವು-ಬೆಲ್ಲವನ್ನು ಹಂಚಿ ನಮಸ್ಕರಿಸುತ್ತಿದ್ದರು. ನಂತರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಈಗಲೂ ಯುಗಾದಿ ಎಂದರೆ ಅದೇ ಸಂಭ್ರಮ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎನ್ನುವ ಕುವೆಂಪು ವಾಣಿಯ ಹಾಗೆ, ಹೊಸವರ್ಷಕೆ ನಾಂದಿ ಹಾಡಲು ಮತ್ತೆ ಯುಗಾದಿ ಬಂದಿದೆ. ಬನ್ನಿ ಸಡಗರದಿಂದ ಆಚರಿಸಿ ಹೊಸ ಸಂವತ್ಸರವನ್ನು ಸ್ವಾಗತಿಸೋಣ.
– ನಳಿನಿ. ಟಿ. ಭೀಮಪ್ಪ ,ಧಾರವಾಡ.
ಹಬ್ಬದ ಸಡಗರ , ಮನಸಿನ ತುಂಬಾ ಒಮ್ಮೆ ಹಬ್ಬದ ವಾತಾವರಣವನ್ನೇ ತುಂಬಿತು, ಲೇಖನದ ಆರಂಭದಲ್ಲಿ ಪ್ರಕೃತಿಯ ವಿವರಣೆ ಸೊಗಸಾಗಿದೆ .
Thank you nayana