ಜಾನ್ ಕೀಟ್ಸ್ ನನ್ನು ಭಾವವಾಗಿ ಕಾಡಿಸುವ ರಾಗಂ…

Spread the love
Share Button

“ಪ್ರತಿ ಮನುಷ್ಯನು ಮಹಾಮಾನವನಾಗಬೇಕು ಆತ ಮನುಷ್ಯತ್ವವೇ ಆಗಬೇಕು. ಕುರುಚಲು ಗಿಡಗಂಟಿಗಳಂತೆ ಅಥವಾ ಅಲ್ಲೊಂದು ಇಲ್ಲೊಂದು ಬಳಗ ಬಿಟ್ಟು ಬೆಳೆಯುವ ಓಕ್ ಮರಗಳಂತೆ ಬಾಳಬಾರದು ಮನುಷ್ಯ. ಆತ ಸಂಬಂಧಗಳ ದಟ್ಟಾರಣ್ಯವಾಗಬೇಕು! ದರ್ಶನವಾಗಬೇಕು” ಈ ಬಗೆಯ ಮಾತುಗಳಿಂದಲೇ ಕೀಟ್ಸ್ ನಂತ ಕವಿಗಳು ನಮ್ಮನ್ನು ನಿರಂತರವಾಗಿ ಕಾಡುವುದಾಗುತ್ತದೆ. ಬದುಕೇ ಎಲ್ಲಾ ಕಾಲಕ್ಕೂ ದೊಡ್ಡದು ಎನ್ನುವ ಭಾವುಕ ಬದುಕಿನ ನಂಬಿಕೆಗಳನ್ನು ಇದು ದೃಢೀಕರಿಸುತ್ತದೆ. ಬದುಕನ್ನೇ ಪ್ರಯೋಗಶಾಲೆ ಮಾಡಿಕೊಂಡು ಅಖಂಡ ಜೀವನ ಪ್ರೀತಿಯನ್ನು ಕಾಯ್ದುಕೊಂಡವರಿಗೆ ಮಾತ್ರ ಈ ಬಗೆಯ ಅನುಭವಗಳನ್ನು ಮನನ ಮಾಡಿಕೊಳ್ಳುವುದಾಗುತ್ತದೆ. ತನ್ನ ಬದುಕಿನ ಅಲ್ಪಾವಧಿ ಜೀವಿತದ ನಂತರ ಬಹುಮುಖ್ಯ ಕವಿಯೆಂದು ಗುರುತಿಸಲ್ಪಡುವ ದುರಂತಕ್ಕೆ ಕನ್ನಡವನ್ನು ಒಳಗೊಂಡಂತೆ ಜಗತ್ತಿನ ಹಲವು ಮಹತ್ವದ ಕವಿಗಳು ಪಾತ್ರರಾಗಿದ್ದಾರೆ. ವಿಚಿತ್ರವಾದರೂ ಸತ್ಯವೆಂದೇ ಇದನ್ನು ಅರಗಿಸಿಕೊಳ್ಳುವುದಾಗುತ್ತದೆ. ಆದರೂ ಕೀಟ್ಸ್ ತನ್ನ ನಂತರವೂ ಜಗದ ಸಾಂಸ್ಕ್ರತಿಕ ಲೋಕದ ಅನಭಿಷಕ್ತ ಸಾಮ್ರಾಟನಾದದ್ದನ್ನು ಚರಿತ್ರೆಯು ನಿರಾಕರಿಸಲಾಗುವುದಿಲ್ಲವೆನ್ನುವುದೇ ಮುಖ್ಯವಾದುದು.

ಕಾವ್ಯ, ಕತೆ, ನಿಬಂಧ, ಅಂಕಣ, ನಾಟಕ, ಸಂಪಾದನೆ ಎಂದೆಲ್ಲಾ ಹಲವು ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ನಮ್ಮ ನಡುವಿನ ಭರವಸೆಯ ಸಾಹಿತ್ಯಪ್ರಿಯ ರಾಗಂ ‘ಜಾನ್‍ಕೀಟ್ಸ್ಕುರಿತ ನೀರ ಮೇಲೆ ನೆನಪ ಬರೆದು...’ ಕೃತಿಯ ಕಾಡುವಿಕೆಯೇ ವಿಶಿಷ್ಟವಾದದ್ದು. ಬರೆಯದೆ ಬದುಕಲಾಗದು ಎಂದುಕೊಂಡು ತಮ್ಮಷ್ಟಕ್ಕೆ ಬರೆಯುವವರ ಜಗತ್ತಿನಲ್ಲಿ ಗೆಳೆಯ ರಾಗಂನದು ಅಗ್ರಸ್ಥಾನ. ಕಾಡುವಂತಹ ಬರಹವನ್ನೇ ಪ್ರತಿಭೆಯಾಗಿ ಪಡೆದುಕೊಂಡ ರಾಗಂ ಬಗೆಗೆ ಅವರ ಭಾಷೆಯ ಬಗೆಗೊಂದು ಅಸೂಯೆಯಾದರೂ ಅದೊಂದು ಹಿತ-ಪ್ರೀತಿಯ ಅಸೂಯೆಯೇ ಹೌದು. ಈ ಕೃತಿ ಒಂದು ಅಪರೂಪದ ಪ್ರಯತ್ನ. ಬಹಳಷ್ಟು ಇಂಗ್ಲೀಷ್ ಮೇಷ್ಟ್ರುಗಳು ಕನ್ನಡದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡದ್ದು ಈಗ ಕನ್ನಡ ಸಾಹಿತ್ಯ ಜಗತ್ತಿನ ಒಂದು ಚರಿತ್ರೆ. ಆದರೆ ರಾಗಂ ಹಠ ಭಿನ್ನವಾದದ್ದು. ಆತ ಜಗತ್ತಿನ ಕಾಡುವಿಕೆಯ ಕವಿ, ಕಾವ್ಯ, ಚಿಂತನೆಗಳನ್ನು ಕನ್ನಡತನಕ್ಕೆ ಎರಕ ಹೊಯ್ದಂತೆ ತರುವುದು ವಿಶಿಷ್ಟವಾದದ್ದು. ಇದು ಕನ್ನಡತನದ ಪ್ರಜ್ಞಾವಲಯವನ್ನು ವಿಸ್ತರಿಸುವ ಸಾಂಸ್ಕ್ರತಿಕ ಜವಾಬ್ದಾರಿಯನ್ನು ಹೇಳುವಂತದ್ದೇ ಹೌದು.

‘ನೀರಮೇಲೆ ನೆನಪ ಬರೆದು.. ಕೃತಿ ಕೀಟ್ಸ್ ನ ವ್ಯಕ್ತಿತ್ವವನ್ನು ಅವನ ಬದುಕು-ಕಾವ್ಯ ಮತ್ತು ಚಿಂತನೆಯ ಆಳದಿಂದಲೇ ಅರ್ಥೈಸುವ ಒಂದು ವಿಶಿಷ್ಟ ಕ್ರಮ. ಇಲ್ಲಿರುವ ತುಲನೆ ಎನ್ನುವುದು ಸಾಮಾನ್ಯವಾದ ತಾತ್ವಿಕತೆಯ ಚೌಕಟ್ಟಿನಿಂದ ಆಚೆಗೆ ಜಿಗಿದು ತನ್ನತನವನ್ನು ವಿಶಿಷ್ಟವಾಗಿ ಅನನ್ಯ ಎಂಬಂತೆ ಪ್ರತಿಷ್ಠಾಪಿಸುವಂತದ್ದು ಇಲ್ಲಿ ಮತ್ತೆ ಮತ್ತೆ ರಾಗಂನ ಭಾಷೆ, ನಿರೂಪಣೆ ಮತ್ತು ಭಾವುಕತೆ ಕಾಡತೊಡಗಿ ಅರ್ಥೈಸಿಕೊಳ್ಳುವ ಕ್ರಮಕ್ಕೊಂದು ತಾಜಾತನ ಒದಗಿ ಬರುವುದು ಕೃತಿಯ ವೈಶಿಷ್ಟ್ಯತೆಯನ್ನೇ ಧ್ವನಿಸುವಂತಹದು. ಇಂಗ್ಲೀಷಿನ ರಮ್ಯಯುಗದ ಶ್ರೇಷ್ಠತೆಗೆ ಕೀಟ್ಸ್‍ನ ಶಬ್ದಾರ್ಥದ ಕಾಣ್ಕೆ ದೊರೆಯದೇ ಹೋಗಿದ್ದರೆ ಅದಕ್ಕೊಂದು ಪರಿಪೂರ್ಣತೆ ಲಭ್ಯವಾಗುತ್ತಿರಲಿಲ್ಲವೇನೋ ಎನ್ನುವುದನ್ನು ತೀರ ಉತ್ಪ್ರೇಕ್ಷೆಯ ಮಾತೆಂದುಕೊಳ್ಳಬೇಕಿಲ್ಲ.

ಕೇವಲ ಇಪ್ಪತ್ತೈದುವರೆ ವರ್ಷಗಳ ಬದುಕು, ಎಷ್ಟೋ ಜನರ ಬದುಕು ಆರಂಭವಾಗುವುದೇ ನಂತರಕ್ಕೆ ಎಂಬಂತಿದೆ. ಆದರೆ ಅಷ್ಟರ ಒಳಗೆ ತನ್ನನ್ನು ತನ್ನ ನಂತರಕ್ಕೆ ಅಜರಾಮರ ಮಾಡಿಕೊಂಡ ಕೀಟ್ಸ್‍ನನ್ನು ಅವನ ಪ್ರತಿಭೆಯನ್ನು ಯಾವ ಹೆಸರಿನಿಂದ ಗುರುತಿಸಲಾದೀತು? ಸುಲಭವಿಲ್ಲ . ಹಾಗಾಗಿ ‘ಕೀಟ್ಸ್ಎನ್ನುದಷ್ಟೇ ಅನ್ವರ್ಥವಾಗಲಿ, ಬಿಟ್ಟು ಬಿಡೋಣ. ಇದೊಂದು ಸಾಮಾನ್ಯ ಚಾರಿತ್ರಿಕ ಸಂಗತಿಯಲ್ಲ ಎನ್ನುವುದನ್ನು ಈ ಕೃತಿ ಪ್ರತಿ ಶಬ್ದ, ಅರ್ಥ, ವಾಕ್ಯಗಳಲ್ಲಿ ಅಡಗಿಸಿ, ಹುಡುಕಿಸಿ ತೋರುವ ಕೆಲಸ ಮಾಡುತ್ತದೆ. ಭಾಷೆ ಎನ್ನುವುದು ಬಂಧನವಲ್ಲ ಭಾವವೆನ್ನುವುದೇ ವಿಶ್ವಪ್ರಜ್ಞೆ, ಬದುಕಿನ ಒಳಸುಳಿಗಳು ನಿಜವಾದ ತಪಸ್ಸಿನ ರೂಪಕಗಳು ಎನ್ನುವುದನ್ನು ಈ ಪುಟ್ಟ ಕೃತಿ ಮನದೊಳಗೆ ಉಳಿಸಿ ಬಿಡುವುದು ಖಂಡಿತಾ ಚೋದ್ಯವೇ ಹೌದು. ಕವಿಯೂ ಆಗಿರುವ ರಾಗಂ ಕೀಟ್ಸ್‍ನ ಪ್ರತೀ ಭಾವವೂ ತನ್ನದೇ ಎಂಬಂತೆ ಅನುವಾದಿಸಿ ಅರ್ಥೈಸುವ ಕ್ರಮವೊಂದು ಮಾದರಿ ಮತ್ತು ಅನುಕರಣೀಯ. ಸಾಹಿತ್ಯವೆಂದರೆ ಏನು? ಎನ್ನುವುದಕ್ಕೆ ಅನ್ನಿಸಿದಂತೆಲ್ಲಾ ಉತ್ತರ ನೀಡಿರುವ ನಾವು, ಕೀಟ್ಸ್‍ನ ಬದುಕು-ಬವಣೆ-ಬರಹ-ಪ್ರೀತಿ, ಧ್ಯಾನವೇ ಮೊದಲಾದವು ಬಿಡಿಸುವ ಎದೆಯೊಳಗಿನ ಚಿತ್ತಾರಕ್ಕೆ ಮೌನವಾಗಿಯೇ ಸಂವೇದನೆಯ ತಲ್ಲಣಗಳಿಗೆ ಸಾಕ್ಷಿಯಾಗುವುದು ಅನಿವಾರ್ಯವಾಗುತ್ತದೆ. “ಕವಿತೆಯಂತಹ ರಮಿಸಿಕೊಳ್ಳುವ ಕ್ರಿಯೆ ಈ ಪ್ರಪಂಚದಲ್ಲಿ ಮತ್ತೊಂದಿಲ್ಲ” ಎನ್ನುವ ರಾಗಂನ ನಿಲುವು ಅದ್ಭುತವಾದದ್ದು. ಇದು ಸಹೃದಯ ಲೋಕಕ್ಕೆ ಸರಳವಾಗಿ ಅರ್ಥವಾಗಿದ್ದರೂ ಅವೆಷ್ಟೋ ಬದುಕುಗಳಿಗೆ ರಮ್ಯತೆಯೇ ಒಂದು ಭಾವ ಭದ್ರತೆಯನ್ನು ಒದಗಿಸಿ ಬಿಡುತ್ತಿತ್ತು, ಹಾಗಾಗಲಿಲ್ಲವೆನ್ನುವುದೇ ನಮ್ಮ ನಡುವಿನ ದುರಂತ.

ತನ್ನ ಹದಿನಾಲ್ಕನೇ ವರ್ಷದಿಂದಲೇ ಅಕ್ಷರ ಜಗತ್ತಿನೆಡೆಗೆ ಹೆಜ್ಜೆಯಿಟ್ಟ ಅರಿವಿನ ಲೋಕಕ್ಕೆ ಮುಖಾಮುಖಿಯಾದ ಕೀಟ್ಸ್ ಕೇವಲ ಎಂಟತ್ತು ವರ್ಷಗಳಷ್ಟನ್ನೇ ಸಾಹಿತ್ಯದ ಅನುಸಂಧಾನಕ್ಕೆ ಮೀಸಲಿಟ್ಟಂತೆ ಬರೆದನಾದರೂ ಶತಮಾನಗಳುದ್ದಕ್ಕೂ ಮತ್ತೆ ಮತ್ತೆ ಹಾಜರಾಗುತ್ತಿದ್ದಾನೆನ್ನುವುದೇ ಅವನ ಕಾವ್ಯ ಕಲೆಯ ಜೀವಂತಿಕೆಯ ಸಾಕ್ಷಿ. ಬದುಕು ತಪಸ್ಸು ಎನ್ನುವ ಮಾತುಗಳನ್ನು ಅಲ್ಲಲ್ಲಿ ನಾವು ಬಳಸುವುದುಂಟು. ಅದರ ಪ್ರತೀ ಪ್ರಜ್ಞೆಯ ಅರ್ಥವನ್ನು ಅರ್ಥೈಸಿಕೊಳ್ಳಬೇಕೆಂದರೆ ಕೀಟ್ಸ್ ನಮಗೆ ಅರ್ಥವಾಗಬೇಕು. ಅದಕ್ಕೆ ರಾಗಂ ಅವರ ಈ ಕೃತಿ ಆಕರವಾಗಬಲ್ಲುದು. ಎಲ್ಲವನ್ನು ಕಳೆದುಕೊಂಡವರಂತೆ ಆಧುನಿಕತೆಯ ಉತ್ಕರ್ಷದಲ್ಲಿ ನಮ್ಮತನವನ್ನೇ ಕಳೆದುಕೊಂಡು ಬದುಕುವ ಹೊತ್ತಿಗೆ ಈ ಬಗೆಯ ಜೀವನ ಪ್ರೀತಿಯನ್ನು ಬರಡು ಬದುಕಿನ ಕಾರಂಜಿಯಾಗಿಸಿಕೊಳ್ಳಬೇಕಲ್ಲವೇ?

ಕೀಟ್ಸ್ ನ ಪತ್ರಗಳು ಬದುಕಿನ ಬವಣೆಯ, ಚಿಂತನೆಯ ಬಿಡಿಯಾದ ರೂಪಗಳಾಗುತ್ತಲೇ ಜೀವನ ಚಿತ್ರಗಳೂ ಆಗಬಲ್ಲವು ಎನ್ನುವುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡ ಫಲಿತವೇ ಈ ಅಪರೂಪದ ಮಹತ್ವದ ಕೃತಿ. ‘ನೀರ ಮೇಲೆ ನೆನಪ ಬರೆದು…’, ಈ ಕೃತಿ ‘ಒಂದು ಬೊಗಸೆ ಎಳನೀರು’ಎನ್ನುವ ಡಾ. ಸಿ. ಆರ್. ಯೆರವಿನತೆಲಿಮಠ ಅವರ ಗ್ರಹಿಕೆಯಾದರೂ ಅತ್ಯಂತ ಅರ್ಥಪೂರ್ಣವಾದುದು. ಇದು ಜೀವಾಮೃತವೂ ಹೌದು, ಕಳೆದುಹೋದ ಮಧುರ ಗಾಢ ಬದುಕಿನ  ಸ್ಮೃತಿಯನ್ನು ಮನನ ಮಾಡಿಕೊಳ್ಳಬಹುದಾದ ನೆಪವೂ ಹೌದು. ಹೀಗೊಂದು ಚರಿತ್ರೆಯನ್ನು ಕಾವ್ಯ ಪ್ರಜ್ಞೆಯ ಭಾವದಿಂದಲೇ ಗ್ರಹಿಸಿ ಸಹೃದಯನಿಗೆ ನೀಡುವುದು ಸುಲಭದ ಕೆಲಸವಲ್ಲ. “ಎಲ್ಲ ನಿರ್ಮಲ ಹೆಣ್ಣುಗಳಲ್ಲಿ ಅವನ ಪ್ರೇಯಸಿ ಫ್ಯಾನಿಯನ್ನು, ಮಣ್ಣಲ್ಲಿ ಅವನ ತಾಯಿಯನ್ನು, ದಾರಿಯಲ್ಲಿ ಸಿಕ್ಕ ಶವಗಳ ಮೆರವಣಿಗೆಗಳಲ್ಲಿ ಸ್ವಯಂ ಕೀಟ್ಸ್ ನನ್ನು, ಅವನ ಸಮಗ್ರ ಮೃತ್ಯು ಪೀಡಿತ ಸಂಸಾರವನ್ನು ಇವನ ಕವಿತೆಗಳಲ್ಲಿ ಕಾವ್ಯದ ಸಾತ್ವಿಕ-ಸಾಧ್ವಿಕ ಸಂಭ್ರಮವನ್ನು ನಾನು ಕಂಡಿದ್ದೇನೆ, ಅನುಭವಿಸಿದ್ದೇನೆ” ಎನ್ನುವ ರಾಗಂ ಮಾತುಗಳು ಇಡಿಯಾಗಿ ಪರಕಾಯ ಪ್ರವೇಶ ಮಾಡದಿದ್ದರೆ ಸೂಕ್ಷ್ಮ- ಸಮಗ್ರ ಅರಿವು ಸಾಧ್ಯವಾಗುವುದಿಲ್ಲ ಎನ್ನುವ ನಂಬಿಕೆಯನ್ನು ದೃಢಪಡಿಸುವಂತಿದೆ. ಕವಿಯೊಬ್ಬ ಕೇವಲ ಅಕ್ಷರವಾಗಿ, ವರ್ಣನೆಯಾಗಿ, ಒಳಿತು ಕೆಡುಕಾಗಿಯಷ್ಟೇ ದಕ್ಕುವುದಾದರೆ ಅದು ಸಹೃದಯತೆಯ ಅರ್ಥವಲ್ಲ ಹಾಗಿದ್ದರೆ ಕವಿ ಜಗತ್ತು ಹೀಗೊಂದು ಸಾರ್ವಕಾಲಿಕ, ನಿರಂತರ ಪ್ರಜ್ಞಾ ಪ್ರವಾಹದ ಫಲಿತವಾಗಿರಬೇಕಿರಲಿಲ್ಲ. ರಾಗಂ ತನ್ನ ಪ್ರತೀ ಬರಹ, ಚಿಂತನೆ, ಕೃತಿಯಲ್ಲಿ ಆಪ್ತವಾಗುವುದೇ ಹೀಗೆ ಒಳಗೊಂಡು ಕಾಡುವಿಕೆಯ ಅಗ್ಗಿಷ್ಟಿಕೆಯಲ್ಲಿ ಬೆಂದು ತಾನೇ ಅದಾಗುವ ಕ್ರಿಯೆಯಲ್ಲಿ ಎನ್ನಬಹುದು. ಪ್ರತಿಯೊಬ್ಬ ಮಹತ್ವದ ಸರ್ವಶ್ರೇಷ್ಠ ಎನ್ನಬಹುದಾದ ಕವಿಯನ್ನು ಅರ್ಥೈಸಿಕೊಳ್ಳಲು ಕೆಲವು ಅರಿವು ಎಚ್ಚರಗಳಂತೂ ಅತ್ಯಗತ್ಯ. ಜಗತ್ತಿನ ಕವಿಗಳಿಂದ ಹಿಡಿದು ನಮ್ಮ ಕುವೆಂಪು ಅವರ ವರೆವಿಗೂ ಇದೊಂದು ಪ್ರವೇಶಿಕೆಯ ಅನಿವಾರ್ಯತೆ.

ಇಲ್ಲಿ ಕೀಟ್ಸ್ ನ ಪತ್ರಗಳು ಅವು ಲೋಕಾಭಿರಾಮದ ಶಾಬ್ದಿಕ, ಪರಂಪರೆಯ ಸಂಪ್ರದಾಯಗಳಲ್ಲ. ಅದನ್ನು ರಾಗಂ ಅದ್ಭುತವಾಗಿ ಗುರುತಿಸುತ್ತಾರೆ. “ಕವಿತೆ ಕಾಣದ ಒಂದೇ ಒಂದು ಸಾಲು ಅವನ ಪತ್ರಗಳಲಿಲ್ಲ. ಕೀಟ್ಸ್ ನ ಬರಹವನ್ನು ಗದ್ಯ, ಪದ್ಯ ಎಂದು ಸೀಳಲಾಗದು. ಅಖಂಡವಾದ ಕಾವ್ಯ ಧರ್ಮಕ್ಕೆ ಒಂದು ಅದ್ಭುತ, ಶಾಶ್ವತ ನಿದರ್ಶನ ಕೀಟ್ಸ್. ಅವನ ಪಾಲಿಗೆ ಈ ಪ್ರಪಂಚ ಒಂದು ಮಹಾಕಾವ್ಯ. ಈ ಪ್ರಪಂಚಕ್ಕೆ ಕೀಟ್ಸ್ ಒಂದು ಮರೆಯದ, ಮುಗಿಯದ ಕವಿತೆ”. ಒಂದು ಶ್ರೇಷ್ಠ ಕಾವ್ಯ ಪ್ರಪಂಚವನ್ನು ಕಾವ್ಯಾತ್ಮಕವಾಗಿಯೇ ವಿವರಿಸಿ, ವಿಮರ್ಶಿಸುವ ಸಾಧ್ಯತೆಯೆಂದರೆ ಹೀಗೆ ಇದ್ದೀತು. ಇಂತಹದ್ದೊಂದು ಅಪರೂಪದ ಆದರೆ ಅತ್ಯಗತ್ಯ ಎನ್ನಿಸುವ ಪ್ರಯತ್ನಕ್ಕೆ ಮುಂದಾದ ಗೆಳೆಯನ ಪ್ರಾಮಾಣಿಕ ಪ್ರಯತ್ನ ಅಭಿನಂದನಾರ್ಹ. ಇಡಿಯಾಗಿ ಗ್ರಹಿಸಿ ವಿವರಿಸುವ ಕ್ರಮವೆಂದರೆ ಹೀಗೆ ಇರುವಂತದ್ದು.

“ಆತ್ಮಕತೆಯನ್ನು ನಂಬಿಯೂ ಅಷ್ಟನ್ನು ಬರೆದು ತೀರಿಸುವಷ್ಟು ಜೀವನಾವಧಿ ಪಡೆಯದವನಾಗಿದ್ದ ಕೀಟ್ಸ್ ತನ್ನ ಕಾವ್ಯದಲ್ಲಿ, ಪತ್ರಗಳಲ್ಲಿ, ಕಾವ್ಯಾಸಕ್ತರ ಒಳಗುದಿಗಳನ್ನೆಲ್ಲಾ ಹಂಚಿಕೊಂಡು ಚರಿತ್ರೆಯ ಹೊಸ ಸಾಧ್ಯತೆಯನ್ನು ತೋರಿಸಿದ್ದಾನೆ. ಅವನ ಪತ್ರ ವ್ಯವಹಾರದಲ್ಲಿ ಎಲ್ಲಿಲ್ಲದ ಅಚ್ಚುಕಟ್ಟುತನವಿದೆ. ಅವುಗಳನ್ನು ಸುಮ್ಮನೆ ದಿನಾಂಕಗಳನ್ನು ಆಧರಿಸಿ ಹೊಂದಿಸಿಟ್ಟರೆ ಸಾಕು, ಆತನ ಬದುಕು ಅನಾವರಣಗೊಂಡು ಬಿಡುತ್ತದೆ. ಇಂಥ ಜೀವನ ಕಥನದ ಸಾಧ್ಯತೆಯನ್ನು ತೋರಿಸಿದ ಲೇಖಕ ಇವನೊಬ್ಬನೇ ಇರಬೇಕು”. ಇದು ಸಮರ್ಥವಾದ ಸಮಗ್ರವಾದ ವ್ಯಾಖ್ಯಾನ ಇಂತಹ ಸ್ಪಷ್ಟ ವ್ಯಾಖ್ಯಾನಗಳು ಇಡೀ ಕೃತಿಯ ತುಂಬಾ ಔಚಿತ್ಯಪೂರ್ಣ ಪ್ರಜ್ಞೆಯೊಂದಿಗೆ ವಿವರಿಸಲ್ಪಟ್ಟಿವೆ. ಅವೇ ಕೀಟ್ಸ್‍ನನ್ನು ಮನದೊಳಗೆ, ಭಾವದೊಳಗೆ, ಬದುಕಿನೊಳಗೆ ಪರಮಾಪ್ತ ಬಂಧುವಾಗಿಸಿ ಕೆಲವೊಮ್ಮೆ ಅವನನ್ನೇ ನಾವಾಗಿಸುವ ನಮ್ಮನ್ನೇ ಅವನನ್ನಾಗಿಸುವ ಅನಂತತೆಗೂ ಚಾಚಿಕೊಳ್ಳುತ್ತವೆ. ಇಡೀ ಕೃತಿ ಕೀಟ್ಸ್ ನ ಬದುಕನ್ನು ಅಕ್ಷರ ಸಂಪತ್ತಿನಲ್ಲಿ ಹರಡಿಕೊಂಡ ಕ್ರಮವೇ ರಮ್ಯವಾದುದು. ಬಿಡಿ ಬಿಡಿಯಾಗಿ ಅಷ್ಟೇ ಅದ್ಭುತವಾದ ಕಾವ್ಯಮಯ ಶೀರ್ಷಿಕೆಗಳೊಂದಿಗೆ ಇಪ್ಪತ್ತೊಂದು ಅಧ್ಯಾಯಗಳಲ್ಲಿ ಹುದುಗಿ ಕಾಡುವುದು ಲೇಖಕನ ಬದ್ಧ ಶಿಸ್ತಿನ ಫಲಿತವೂ ಆಗಿದೆ.

ಬದುಕನ್ನು ಬಿಡಿಯಾದುದರ ಆಚೆಗೆ ಇಡಿಯಾದದ್ದು ಎಂದು ಅರ್ಥೈಸಿಕೊಂಡು ಗ್ರಹಿಸುವ ಹೊತ್ತಿಗಾಗಲೇ ಮನೆಯ ಒತ್ತಡಗಳು, ಅಪ್ಪನ ಮರಣ, ತಾಯಿಯ ಅನಾರೋಗ್ಯ, ಅವನ ಬಾಲ್ಯದ ತಳಮಳ, ಮುಂದೆ ಅವನ ಅನಾರೋಗ್ಯ ಹೀಗೆ ಒಂದೇ ಎರಡೇ ಬದುಕಾದರೂ ಹೀಗೆ ಮತ್ತೆ ಮತ್ತೆ ಕ್ರೂರವಾಗಬೇಕೆ? ಆದರೆ ಅದು ಕೀಟ್ಸ್ ನನ್ನು ಅಧೀರನನ್ನಾಗಿಸಿತೆ! ಓದು ಮತ್ತು ಅದರಲ್ಲಿನ ಯಶಸ್ಸು ಅವನಿಗೆ ಹುಡುಗಾಟವೆನ್ನಿಸಿದ್ದು ಅವನ ಗುಪ್ತ ಪ್ರಜ್ಞೆಯನ್ನು ಸೂಚಿಸುವಂತಿತ್ತೆ? ಹಾಗಾಗಿಯೂ “ಜಗಳ, ಪ್ರೀತಿ ಮತ್ತು ಕಣ್ಣೀರು” ಕೀಟ್ಸ್ ನ ವ್ಯಕ್ತಿತ್ವದ ಮುಖ್ಯವಾದ ಲಕ್ಷಣವಾಗಿತ್ತೆ?

“ಗೆಳೆಯ ಮಾರಾಯ, ಕೇಳಿಲ್ಲಿ ಸ್ವಲ್ಪ
ಬುದ್ಧಿ ನಿದ್ದೆಗೆಡುವಷ್ಟು ಆತ್ಮ ಆಕಾಶಮುಖಿಯಾದರೆ
ಗೊಂದಲ, ಗಲಿಬಿಲಿ, ಕಳವಳ ಬಿಟ್ಟರೆ ಇನ್ನೇನು ದಕ್ಕೀತು?
ಯಾವ ಸುಖ ಸಿಕ್ಕೀತು?


ಇದು ಯಾವ ಧ್ಯಾನದ ಫಲಿತ, ಯಾವ ತಪಸ್ಸಿನ ವರ, ಯಾರು ಹೇಳಬೇಕು? ಕೀಟ್ಸ್ ಕಳೆದು ಹೋಗುವುದೇ ಇಲ್ಲ ಎದೆಯೊಳಗೆ ಕುಳಿತು ಪಿಸುಮಾತಾಗುತ್ತಲೇ ಮತ್ತೇನೇನೋ ಆಗಿಬಿಡುತ್ತಾನೆ. ಇಂತಹ ಕೃತಿಯೊಂದನ್ನು ಸಾರಸ್ವತ ಲೋಕಕ್ಕೆ ಕೊಟ್ಟ ರಾಗಂ ನಾವು ಮಾಡಬೇಕಿರುವುದೇನು ಎನ್ನುವುದರ ಎಚ್ಚರವನ್ನು ವಿಶ್ವದ ಸತ್ಯಗಳು, ಬದುಕು, ಭಾವಗಳು ಕನ್ನಡೀಕರಣಗೊಳ್ಳಬೇಕಾದ ಕ್ರಮವನ್ನು ನೆನಪಿಸುತ್ತಿದ್ದಾನೆ. ನಿಜವಾದ ವಿಶ್ವಪ್ರಜ್ಞೆಗೆ ಸಾಕ್ಷ್ಯ ಒದಗಿಸುತ್ತಿದ್ದಾರೆ. ಇಂಗ್ಲೀಷ್ ಮೇಷ್ಟ್ರುಗಳು ಕನ್ನಡಿಗರಾಗಿ ತೀರಿಸಬೇಕಾದ ಋಣದ ವ್ಯಾಖ್ಯಾನವೇ ಹೀಗೆ ಎನ್ನಿಸುತ್ತಿದೆ. ಈ ಪ್ರಯತ್ನಗಳು ನಿರಂತರವಾಗಬೇಕು “ಹಾಡುವುದು ಅನಿವಾರ್ಯ ಕರ್ಮ ನನಗೆ” ಎನ್ನುವಂತೆ…

“ಈ ಕೀಟ್ಸ್ ಶೆಲ್ಲಿಯಂತೆ ಬರೀ ಬಾನಾಡಿ ಅಲ್ಲವೇ ಅಲ್ಲ. ಬಸವನ ಹುಳುವಿನಂತೆ ನೆಲವ ನಂಬಿ ಇಲ್ಲಿರುವುದೆಲ್ಲವನ್ನು ಅಂಟಿಸಿಕೊಳ್ಳುವವನು. ಹೀಗಾಗಿಯೇ ಆತ ಕಟು ವಿಮರ್ಶೆಗೆ ನೊಂದಿದ್ದಾನೆ. ಪ್ರೋತ್ಸಾಹದ ಮಾತುಗಳಿಗೆ ಹೂವಿನಂತೆ ಅರಳಿದ್ದಾನೆ. ಸಮಕಾಲೀನರೊಂದಿಗೆ ನಿತ್ಯ ನೂರು ಜಗಳ ಆಡಿಯೂ ಜೀವವಾಗಿ ಜೊತೆಯಿರಲು ಬಯಸಿದ್ದಾನೆ. ಇಂತಹ ಕೀಟ್ಸ್‍ನಿಗೆ ಸಿಕ್ಕ ಖುಷಿ ಅಷ್ಟಕ್ಕಷ್ಟೆ”-ಹಾಗೆಂದು ಆತ ಸುಮ್ಮನಾಗಲಿಲ್ಲ ಕಾಲಕ್ಕೆ ಮುಖಾ-ಮುಖಿಯಾಗಿದ್ದಾನೆ. ಅವನಾಚೆಗೆ ಭವಿಷ್ಯವೇ ಅವನನ್ನು ತನ್ನವನೆಂದುಕೊಂಡು ಸಂಭ್ರಮಿಸಿದೆ ನಿಟ್ಟುಸಿರಿಟ್ಟಿದೆ.

‘ನೀರ ಮೇಲೆ ನೆನಪ ಬರೆದು…’ ಎನ್ನುವ ಮಾತು ಸಹಜಾರ್ಥದಲ್ಲಿ ನಶ್ವರತೆಯ ಸೂಚಕವಾಗಬಹುದು. ಆದರೆ ನೀರು ಜೀವಶಕ್ತಿಯ ಕ್ರೀಯಾಶೀಲತೆಯ ಸಂಕೇತ ಅದು ಹರಿಯುತ್ತಲೇ ತನ್ನೊಂದಿಗೆ ಕೊಂಡೊಯ್ದು ಜಗವನ್ನೆಲ್ಲಾ ಆವರಿಸಿ ಬಿಡಬಹುದು… ಅದು ಕೀಟ್ಸ್ ನ ನೆನಪುಗಳಿಗಿರುವ ಶಕ್ತಿ, ರಾಗಂ ಕೃತಿಯ ಸಾರ್ಥಕತೆ. ಮತ್ತೊಮ್ಮೆ ಜವಾಬ್ದಾರಿಯುತ ಬದ್ಧವಾಗಿ ಬರೆಯುವ ಗೆಳೆಯನಿಗೆ ಅಭಿನಂದನೆಗಳು.

– ಡಾ. ಜಿ. ಪ್ರಶಾಂತ ನಾಯಕ

4 Responses

 1. Nayana Bajakudlu says:

  ಕೀಟ್ಸ್ ಬಗ್ಗೆ ಕೇಳಿದ್ದೆ .ಆದರೆ ಇವತ್ತು ವಿವರವಾಗಿ ಅವನ ಬಗ್ಗೆ ತಿಳಿದು ಕೊಳ್ಳುವ ಹಾಗಾಯಿತು . Beautiful article sir .

 2. ಚೆನ್ನಪ್ಪ ಕಟ್ಟಿ says:

  ‘ನೀರ ಮೇಲೆ ನೆನಪ ಬರೆದು…’ ಕೃತಿಯ ಮೂಲಕ ನೀವು ತನ್ನನ್ನು brittle glass ಎಂದೇ ಭಾವಿಸಿಕೊಂಡಿದ್ದ ಕೀಟ್ಸ್ ನ ಸಾಧನೆಯ ಬಗೆಗೆ ಶಿಲಾಶಸನದಂಥ ಮಾತುಗಳನ್ನು ಬರೆಯುವ ಮೂಲಕ ಅಪರೂಪದ ಮೌಲ್ಯಮಾಪನ ಮಾಡಿದ್ದೀರಿ. ಅಭಿನಂದನೆಗಳು. ಡಾ.ಜಿ.ಪ್ರಶಾಂತ ನಾಯಕ ನಿಮ್ಮ ವಿಮರ್ಶಾ ಸಾಮರ್ಥ್ಯವನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಅವರಿಗೆ ವಿಶೇಷ ಕೃತಜ್ಞತೆಗಳು.
  -ಪ್ರೊ.ಚೆನ್ನಪ್ಪ ಕಟ್ಟಿ

 3. ಹೇಮಾ ಸದಾನಂದ್ ಅಮೀನ್ says:

  ಒಂದು ಸಮೀಕ್ಷೆಯನ್ನು ಓದಿ ಪುಸ್ತಕ ಖರಿದಿಸಿ ಓದಬೇಕೆಂದು ನನಗನಿಸಿದ್ದು ಪ್ರಥಮ ಬಾರಿ . ಇದರ ಶ್ರೇಯ ಡಾ. ಜಿ . ಪ್ರಕಾಶ್ ನಾಯಕ್ ಸರ್ ಅವರಿಗೆ. . ತುಂಬಾ ಇಷ್ಟವಾದ ಬರಹ. ಖುಷಿ ಕೊಟ್ಟಿತು.

  • Sanghamitra says:

   ಧನ್ಯವಾದಗಳು ಮೇಡಂ..ಪುಸ್ತಕ ಪ್ರತಿಗಾಗಿ ದಯವಿಟ್ಟು 9242121461 ಈ ನಂಬರನ್ನು ಸಂಪರ್ಕಿಸಿ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: