ಚಿಗುರು ಮನ

Share Button

ಮಾಲಾ ಎನ್ ಮೂರ್ತಿ

ಅಪ್ಪ-ಅಮ್ಮ, ಅಕ್ಕ-ಅಣ್ಣ, ತಂಗಿ-ತಮ್ಮ, ಅಜ್ಜ-ಅಜ್ಜಿ ……. ಆಹಾ ಎಷ್ಟು ಚೆನ್ನಾಗಿದೆ ಈ ಪದಗಳು!ಹೌದು, ಇವುಗಳೆಲ್ಲ ಬರಿ ಪದಗಳಷ್ಟೇ ಏಕೆಂದರೆ ಇವುಗಳೆಲ್ಲ ಸಂಬಂಧಗಳೆನಿಸುವುದು ಅವುಗಳ ಅರ್ಥಕ್ಕೆ ಜೀವ ಕೊಡುವವರು ಇದ್ದಾಗ ಮಾತ್ರ.  ಸಮಾಜದಲ್ಲಿ  ನಡೆಯುತ್ತಿರೋ ಅಮಾನುಷ ಕೃತ್ಯಗಳಿಗೆ ನರ ರಾಕ್ಷಸರುಗಳನ್ನು ದೂಷಿಸಿ, ಶಪಿಸಿ ನೀವುಗಳು ಸುಮ್ಮನಾಗುವಿರಿ. ಈ ಅಸಹಾಯಕ ಪುಟ್ಟ ಮನ ಮಾಡುವುದು ಅದನ್ನೇ.. ಆದರೆ ನಮ್ಮ ದೂಷಣೆಯ ಪಟ್ಟಿಯಲ್ಲಿ ಮೊದಲಿಗ ಆ ಕರುಣಾಮಯಿ ಭಗವಂತ.

“ಬದುಕೆಂಬ ಅಂಕಣದಲ್ಲಿ, ವಿಧಿ ಎಂಬ ಪಗಡೆ ಹಿಡಿದು
ಹಣೆಬರಹ ಎಂಬ ಕಾಯಿಯನ್ನು, 
ನೋವು-ನಲಿವುಗಳೆಂಬ ಮನೆಯಿಂದ ಮನೆಗೆ ಚಲಾಯಿಸುತ್ತಿರುವ ಚಾಲಾಕಿ ನೀ ಇರುವುದಾದರೂಎಲ್ಲಿ??
ಏನಯ್ಯ ನಿನ್ನ ಯೋಚನೆ ಯೋಜನೆಗಳು??
ಉತ್ತರಿಸಬೇಕಾದ ನೀ ದೊಡ್ಡ ಮೌನೀ….”

ಅನಾಥರು, ದಿಕ್ಕಿಲ್ಲದವರು,ಬಡಪಾಯಿ… ಇತ್ಯಾದಿ ನೀನೇ ರಚಿಸಿ ಮಾಡಿಸುತ್ತಿರುವ ಜೀವನವೆಂಬ ನಾಟಕದಲ್ಲಿನ ನಮ್ಮ ನಟನೆಗೆ ಸಿಕ್ಕ ಬಿರುದಗಳಿವು. ನನ್ನಮ್ಮನ ಗರ್ಭದಿಂದ ಹೊರ ಬಂದ ನನಗೆ ನನ್ನವರ್ಯಾರು ಎಂಬ ಅರಿವು ಮೂಡುವಷ್ಟರಲ್ಲಿ ಅವರನ್ನೆಲ್ಲ ಭೂತಾಯಿಯ ಗರ್ಭದೊಳಗಿನ ಯಾತ್ರೆಗೆ ಕಳುಹಿಸಿದ ನಿನ್ನ ದೂಷಿಸದೆ ಇರುವುದಾದರೂ ಹೇಗೆ?? ,,, ಕಲಿಯಲು ಕಷ್ಟ ಪಡಬೇಕಾದ ವಯಸ್ಸಿಗಾಗಲೇ ಜೀವನದ ಕಾಗುಣಿತ ಕಲಿಸಲು ಪ್ರಾರಂಭಿಸಿದ ಮಹಾಗುರು ನೀನು. ಶಾಲೆಯಲ್ಲಿ ಪಡೆದ ಪದಕ ಬಹುಮಾನಗಳ ತೋರಿಸಿ ಖುಷಿ ಹಂಚಿಕೊಳ್ಳಲು ಯಾರು ಇಲ್ಲ ನಮ್ಮವರು, ಇರುವವರಾರು ಕೇಳುವವರಲ್ಲ.

ಈ ಸಮಾಜವೆಂಬ ಮಹಾನಗರದಲ್ಲಿ ನಮಗೆಲ್ಲ ಮನೆ ಕೊಟ್ಟೆ ಆದರೆ ಈ ಮಹಾನಗರಿಯ ಜನ ನಮ್ಮ ಮನೆಗೆ ಕೊಟ್ಟ ಹೆಸರು ಅನಾಥಾಶ್ರಮ… ಯಾಕೆ ನನ್ನಮನೆಗೆ ಬೇರೆ ಹೆಸರಿಡಲು ಸಾಧ್ಯವಿಲ್ಲವೇ ?? ಅಥವಾ ಮನೆಗೆ ಹೆಸರು ಕೊಡಲೇ ಬೇಕೇ?? ನನ್ನ ಮನೆ ಮುಂದೆ ನಿಂತು ನಾ ಮೊದಲು ಓದಿದ ನನ್ನ ಮನೆ ಹೆಸರೇ ನನ್ನ ಮೊದಲ ಶತ್ರುವಾಗಿಬಿಟ್ಟಿತು.ಪುಟ್ಟ ಮನ ಚಿಗುರುವಾಗಲೇ ಚಿವುಟಿ ಹಾಕೋ ಪ್ರಯತ್ನಗಳಿವು ಅನಿಸಿಬಿಟ್ಟಿತ್ತು.

ಅನಾಥರೆಂಬ ಒಂದೇ ಒಂದು ಕಾರಣಕ್ಕೆ ಸಮಾಜ ತನ್ನ ಇಷ್ಟಕ್ಕೆ ತಕ್ಕಂತೆ ಕುಣಿಸುವ ಗೊಂಬೆಗಳಾಗಿರುವೆವು ನಾವುಗಳು ‘ಅನಾಥರು’. ಈ ಎಲ್ಲ ಕ್ರೂರತೆ ನಡುವೆಯೂ ಅಲ್ಲಿಲ್ಲಿ ‘ಪ್ರೀತಿ-ಮಮಕಾರದ ‘ ಮಳೆಯ ಸಿಂಚನ ಸಿಕ್ಕುತ್ತಿದೆ ಈ ಚಿಗುರುಗಳಿಗೆ ಬದುಕಲು.

ನೀ ಎಂತ ಚಾಲಾಕಿ ಎಂದರೆ ನಮ್ಮಿಂದ ನಮ್ಮವರನ್ನು ದೂರಮಾಡುವ ಆಟ ಆಡುವ ನೀನು ಮತ್ತೆಲ್ಲೋ ಹೊಸ ಜೀವದ ನೀರಿಕ್ಷೆಯಲ್ಲಿರುವ ಜೀವಗಳಿಗೆ ನಿರಾಸೆ ಮಾಡುವ ನಿನ್ನ ಆಟ ಪ್ರಾರಂಭಿಸಿರುತ್ತೀಯ.ಆದರೆ ಕೆಲವರಿಗೆ ಮಾತ್ರ ನಮ್ಮಂತವರನ್ನು ಭೇಟಿ ಮಾಡಿಸಿ ಚಿಗುರೋ ಬಳ್ಳಿಗೆ ಸಾಕು ತಂದೆ-ತಾಯಿ ಎಂಬ ಜೋಡಿ ಮರಗಳ ಆಸರೆ ಕೊಡುತ್ತೀಯ ಇದಕ್ಕೊಂದು ನನ್ನ ನಮನ ನಿನಗೆ.

ಎಲ್ಲವನ್ನು ಕೊಟ್ಟು ಮುಂದೊಂದು ದಿನ ಬರಿ ಕೈ ಮಾಡುವ ಯೋಚನೆ ಯೋಜನೆ ಇಲ್ಲದ ನಿನ್ನ ಪ್ರಶಂಸಿಸಲೋ?? (ಅಥವಾ) ಕನಸ ಕಾಣಬೇಕಾದ ಪುಟ್ಟ ಕಂಗಳಲಿ ಅನಾಥಪ್ರಜ್ಞೆಯ ಪೊರೆ ಬಾಲ್ಯದಲ್ಲೇ ಕೊಟ್ಟಿದ್ಯಾಕೆ ಎಂದು ಪ್ರಶ್ನಿಸಲೋ??

ಸಂಬಂಧಗಳ ಸವಿ ಸವಿದು ಖುಷಿಪಡುವವರನ್ನು ಕಂಡು ನನಗ್ಯಾಕೆ ಆ ಭಾಗ್ಯ ಇಲ್ಲ ಎಂದು ಕಣ್ಣೀರಿಡಲೋ?? (ಅಥವಾ) ಇಲ್ಲ ನನ್ನೊಂದಿಗೆ ದಿನವೂ ಸಂಬಂಧಗಳ ಅರ್ಥ ಹುಡುಕುತ್ತ ಬರಿ ಕಹಿಯನ್ನೇ ಸವಿದು ಬದುಕುವವರ ಕಂಡು ತುಂಬಿದ ಕಂಗಳ ಅಲ್ಲೇ ತಡೆ ಹಿಡಿಯಲೋ??

ಎಷ್ಟೇ ಚಿಂತಿಸಿದರು ನನಗೆ ಬೇಕಾದದ್ದು ದಕ್ಕದೆಂಬ ಸತ್ಯ ಗೊತ್ತಿದ್ದೂ..ನಮಗೂ ಮಮಕಾರ ತೋರೋ ಜೀವಗಳ ಭೇಟಿ ಮುಂದೆಂದೋ ಆಗುವುದೆಂಬ ನಂಬಿಕೆಯಲಿ ಬದುಕಲೋ?? ಅಥವಾ ……..?? ನಿನ್ನ ಎಷ್ಟೇ ದೂಷಿಸಿದರು ನಿಂದಿಸಿದರು ನೀನೊಬ್ಬನೇ ಇರುವುದು ನಮಗೆ ಖುಷಿ ದುಃಖ ಹಂಚಿಕೊಳ್ಳಲು. ನಿನ್ನಲ್ಲಿ  ನನ್ನದೊಂದು  ಬೇಡಿಕೆ…

ಯಾರನ್ನು ಹುಟ್ಟುತ್ತಲೇ ಅನಾಥರನ್ನಾಗಿಸಬೇಡ, ನನಗು ತಿಳಿದಿದೆ ನಿನ್ನ ಹುಟ್ಟು ಸಾವುಗಳ ಲೆಕ್ಕಾಚಾರ ಆದರೆ ಅನಾಥ ಕಂದಮ್ಮಗಳ ಜೀವನ ದಿನವೂ ಸಾವಿನ ಮನೆಯ ಅಥಿತಿಗಳಂತೆ.ಒಂದು ವೇಳೆ ನಿನಗೆ ನಿನ್ನ ಆಟ ಬದಲಿಸಲು ಆಗದಿದ್ದರೆ ನಿನ್ನ ಸೃಷ್ಟಿಯ ನರ ಮನುಷ್ಯರ ಭಾವನೆಗಳ ಬದಲಿಸು.ಎಲ್ಲವು ನಿನ್ನಿಂದ ಸಾಧ್ಯ ಆದರೂ ಕೈ ಚೆಲ್ಲಿ ಕೂರುವ ನೀ ಕರುಣಾಳು.

ಪ್ರೀತಿಯ ಸಮಾಜ,

ನಾವೆಲ್ಲಾ ತಿಳಿದಿದ್ದು ಮರೆತಿರುವ ಸತ್ಯ ಒಂದಿದೆ “ನಾವೆಲ್ಲರೂ ಅನಾಥರೇ ಆದರೆ ನಮ್ಮನ್ನೆಲ್ಲ ಆ ಭಗವಂತ ದತ್ತು ಪಡೆದಿದ್ದಾನೆ. ನಾವೆಲ್ಲ ಅವನು ಕೊಡುವ ಭಿಕ್ಷೆಗೆ ಅವನು ಬರೆದ ಕಥೆಯಲ್ಲಿ ನಟಿಸುವ ಪಾತ್ರಗಳಷ್ಟೇ..” ನಿಮ್ಮಿಂದ ಆಗುವುದಾದರೆ ನಮ್ಮ ಮನೆಗಳ ಮರುನಾಮಕರಣ ಮಾಡಿ,ಅದೆಷ್ಟೋ ಮಕ್ಕಳ ಮನಸಲ್ಲಿ ಈ ಅನಾಥಪ್ರಜ್ಞೆ ದಿನವೂ ಕಾಡುವುದು ತಪ್ಪುತ್ತದೆ.

ನಿಮ್ಮ ಮಕ್ಕಳ ಹುಟ್ಟುಹಬ್ಬ ಆಚರಿಸಲು ನಮ್ಮ ಮನೆಗಳಿಗೆ ಬರುವ ಅತಿಥಿಗಳೇ

ನಮ್ಮ ಹುಟ್ಟಿಗೆ ಕಾರಣೀಭೂತರಾರು?? ನಮ್ಮ ಹುಟ್ಟುಹಬ್ಬದ ದಿನ ಯಾವುದು ?? ನಮಗೇಕೆ ಈ ರೀತಿಯ ಅದೃಷ್ಟ ಇಲ್ಲ?? ಹೀಗೆ ನೂರಾರು ಪ್ರಶ್ನೆಗಳ ಅಸಮಾಧಾನದ ಬೀಜ ಬಿತ್ತದಿರಿ ಈ ಪುಟ್ಟ ಮನಗಳಲ್ಲಿ.ಬೇಕಿದ್ದಲ್ಲಿ ಪರೋಕ್ಷ ಸಹಾಯ ಮಾಡಿ ಖುಷಿ ಪಡಿ.

ಎಲ್ಲವನ್ನು ಪಡೆದಿರುವ ಅದೃಷ್ಟವಂತರೇ..

ಇಲ್ಲದವನ ಕಣ್ಣೀರ ಅಳಿಸುವ ಕೈಗಳಾಗಿ ದಯವಿಟ್ಟು ಆ ಕಣ್ಣೀರಿಗೆ ಕಾರಣವಾಗದಿರಿ.ಮಕ್ಕಳು ದೇವರ ಸಮಾನ ಎಂಬ ಮಾತಿದೆ ಆ ದೇವರುಗಳಿಗೆ ಗುಡಿ ಇಲ್ಲವೆಂದು ನಿಮ್ಮ ಅನುಕೂಲಕ್ಕೆ ಬಳಸದಿರಿ.ಅನಾಥ ಹೆಣ್ಣು ಮಕ್ಕಳ ಕಂಡಾಕ್ಷಣ ಭಕ್ಷಿಸುವ ನರ ರಾಕ್ಷಸರುಗಳಾಗದಿರಿ ಬದಲಿಗೆ ಅವರನ್ನು ರಕ್ಷಿಸಿ ಅವರ ಜೀವನ ಕಟ್ಟಿಕೊಳ್ಳಲು ಸಹಾಯಕರಾಗಿ.

ಎಲ್ಲ ತಂದೆ ತಾಯಂದಿರೇ,

ನಿಮ್ಮ ಮಕ್ಕಳನ್ನು ನಮ್ಮಂತ ಮಕ್ಕಳೊಟ್ಟಿಗೆ ಸೇರಲು ಬಿಡಿ ನಮಗೆ ಯಾರು ಇಲ್ಲ ನಿಜ ಆದರೆ ನಮ್ಮಲ್ಲಿಯೂ ಪ್ರೀತಿಸುವ ಮನಸುಗಳಿವೆ.ನಿಮ್ಮ ಮಕ್ಕಳಿಗೆ ಕೊಡೋ ಪ್ರೀತಿಯ ನಮಗೂ ತೋರಿಸಿ ನಮ್ಮನ್ನೂ ಭಾವ ಜೀವಿಗಳನ್ನಾಗಿಸಿ.

ಪೂಜ್ಯನೀಯ ಗುರುವೃಂದದವರೇ ,

ನೀವು ಕಲಿಸುವ ಪಾಠದಲ್ಲಷ್ಟೇ ಸಮಾನತೆ ಮಾನವೀಯತೆ ಇದ್ದರೆ ಸಾಲದು ಅದು ಪ್ರತಿ ಮಗುವಿನ ಮನದ ಹಾಳೆಯಲ್ಲಿ ಎಂದೂ ಅಳಿಸದ ಚಿತ್ರವಾಗಬೇಕು.ವಿದ್ಯೆ ಉಳ್ಳವರು ಮಾತ್ರ ಕೊಳ್ಳಬಹುದಾದ ವ್ಯಾಪಾರವಾಗದೆ ಸಮಾಜದ ಅಜ್ಞಾನ ತೊಲಗಿಸುವ ಸಾಧನವಾಗಬೇಕು.

ತಂದೆ ತಾಯಿಯ ಮುದ್ದು ಮಕ್ಕಳೇ,

ನಿಮ್ಮ ಜೀವನದ ಎಲ್ಲ ಖುಷಿಗೂ ಕಾರಣ ನಿಮ್ಮ ತಂದೆ ತಾಯಿ ಎನ್ನುವುದ ಮರೆಯದಿರಿ,ಅತೀ ವೇಗದಲ್ಲಿ ಬೆಳೆಯುತ್ತಿರೋ ಜಗತ್ತಿನಲ್ಲಿ ದುಡ್ಡಿನ ಹಿಂದೆ ಓಡುವ ಯಂತ್ರಗಳಾಗದೆ ಸಂಬಂಧಗಳ ಕಾಪಾಡಿಕೊಂಡು ಬದುಕುವ ಪ್ರೇಮ ಜೀವಿಗಳಾಗಿ.ನಿಮ್ಮನ್ನು ಅನಾಥಶ್ರಮದ ಹೊಸ್ತಿಲಲ್ಲಿ ನಿಲ್ಲಿಸದೆ ಸಾಕಿದ ತಂದೆ ತಾಯಿಯರನ್ನು ವೃದ್ದಾಶ್ರಮದ ಮೆಟ್ಟಿಲೇರಿಸದಿರಿ.

ವಿದ್ಯಾವಂತ,ಜವಾಬ್ದಾರಿಯುತ ನಾಗರಿಕರೇ,

ಭಿಕ್ಷೆ ಹಾಕಿಯೋ ಅಥವಾ ಅಯ್ಯೋ ಎಂದು ನಮ್ಮನ್ನು ಶಾಶ್ವತ ಅನಕ್ಷರಸ್ತ ಅಸಹಾಯಕ ಪ್ರಜೆಗಳ ಮಾಡುವ ಬದಲು ಕೂರಿಸಿಕೊಂಡು ತಿಳಿ ಹೇಳಿ, ಆದಷ್ಟು ಸಹಾಯ ಮಾಡಿ ನಮ್ಮನ್ನು ಅಕ್ಷರಸ್ತ ಪ್ರಜೆಗಳಾಗಿ ಮಾಡಿ.ನಿಮ್ಮ ಸುತ್ತ ಮುತ್ತಲಿರುವ ನಮ್ಮಂತವರ ಪ್ರತಿಭೆಗಳ ತುಳಿದು ಹಾಕುವ ಬದಲು ಉಳಿಸಿ ಬೆಳೆಸುವ ಕೈಗಳಾಗಿ ಸಮಾಜದ ಒಳಿತಿಗೆ ನಮ್ಮನ್ನು ಬಳಸಿಕೊಳ್ಳಿ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವುದ ಮರೆಯದಿರಿ.

ಬದಲಾವಣೆ ಜಗದ ನಿಯಮ ಆ ಬದಲಾವಣೆ ಜಗದ ಹಿತಕ್ಕಾದರೆ ಬಲು ಚೆನ್ನ, ಈ ಬದಲಾವಣೆಯ ಅಗತ್ಯ ಸಮಾಜದ ಒಳಿತಿಗೆ,ಮಾನವೀಯತೆ ಅಳಿಯದಿರಲಿ ಎನ್ನುವ ಉದ್ದೇಶದ ಜೊತೆಗೆ ನಮಗೂ ಪ್ರೀತಿಯ ಮಡಿಲು ಸಿಗಲಿ ಎನ್ನುವ ಸ್ವಾರ್ಥವು ಇದೆ.

ಇಂತಿ ನಿಮ್ಮ ಪ್ರೀತಿಯ,
ಬದಲಾವಣೆಯ ನಿರೀಕ್ಷೆಯಲ್ಲಿರುವ ಪುಟ್ಟ ಮನ(ಗಳು).

-ಮಾಲಾ ಎನ್ ಮೂರ್ತಿ, ಚಿಕ್ಕಮಗಳೂರು 

4 Responses

  1. Hema says:

    ಮನಸ್ಸಿಗೆ ತಟ್ಟುವ ಬರಹ. ಮುಗ್ದ ಮಗುವಿನ ಮಾತುಗಳು ಮನಸ್ಸನ್ನು ಕಲಕುತ್ತವೆ!

  2. Nayana Bajakudlu says:

    ಅಬ್ಬಾ…… ಎಲ್ಲರಿಗೂ ಒಂದೊಂದು ಪಾಠ ಇದೆ , ಸಂದೇಶ ಇದೆ ಇದರಲ್ಲಿ. ನಿಜ, ಜವರಾಯನ ಆಸ್ಥಾನದಲ್ಲಿ ಎಲ್ಲರೂ ಸಮಾನರೆ. ಸಾವಿಗೆ ಯಾವ ಮಾನದಂಡವೂ ಇಲ್ಲ

  3. Raghunath Krishnamachar says:

    ಆಹಾ ಚಂದದ ಬರಹ ಅಭಿನಂದನೆ

  4. Mala BN says:

    ಧನ್ಯವಾದಗಳು…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: