ಶತಶೃಂಗ ಬೆಟ್ಟ- ಅಂತರಗಂಗೆ -ಭಾಗ 3
ಡಿಸೆಂಬರ 24,2018 ರಂದು, ಬೆಳಗ್ಗೆ ನಮ್ಮ ಲಗೇಜನ್ನು ಒಂದು ಕೋಣೆಯಲ್ಲಿರಿಸಲು ತಿಳಿಸಿದರು. ಅಚ್ಚುಕಟ್ಟಾಗಿ ಇಡ್ಲಿ, ಪೊಂಗಲ್ ಉಪಾಹಾರ ಸೇವಿಸಿ ‘ಅಂತರಗಂಗೆ’ಯ ಕಡೆಗೆ ನಡೆಯಲಾರಂಭಿಸಿದೆವು. ಶತಶೃಂಗ ಬೆಟ್ಟದ ಅಂಚಿನಲ್ಲಿ ಆಗ ತಾನೇ ಮೂಡುತ್ತಿದ್ದ ಸೂರ್ಯ ಮತ್ತು ಬಂಡೆಗಳ ಮೇಲೆ ಸಂಭಾಷಣೆ ಮಾಡುತ್ತಿದ್ದ ಹಲವಾರು ಪಕ್ಷಿಗಳು ಕ್ಯಾಮೆರಾದಲ್ಲಿ ಸೆರೆಯಾದುವು. ನಿಧಾನವಾಗಿ ನಡೆಯುತ್ತಾ, ಬೆಟ್ಟದಲ್ಲಿ ‘ಅಂತರಗಂಗೆ’ಯ ಮೂಲ ಎಂದು ಕರೆಸಿಕೊಳ್ಳುವ ಸ್ಥಳಕ್ಕೆ ತಲಪಿದೆವು.ಅಲ್ಲಿ ಇಕ್ಕಟ್ಟಾದ ಜಾಗ ಮತ್ತು ಸ್ವಲ್ಪ ಕಷ್ಟವಿದೆ ಎಂದು ಗೊತ್ತಾಯಿತು. ತಂಡದ ಕೆಲವರು ಮಾತ್ರ ‘ಅಂತರಗಂಗೆ’ ಉಗಮವಾಗುವ ಕಡೆಗೆ ಹೋದರು. ಇದೇ ಬೆಟ್ಟದ ಇನ್ನೊಂದು ಮಗ್ಗುಲಲ್ಲಿ ಇರುವ ದೇವಸ್ಥಾನದ ಕಡೆಗೆ ಹೋದೆವು. ಇಲ್ಲಿರುವ ಕಲ್ಲಿನ ಬಸವನ ಮುಖದಿಂದ ನಿರಂತರವಾಗಿ ಹರಿಯುವ ನೀರಿನ ಮೂಲ ಕಾಶಿಯ ಗಂಗೆ ಎನ್ನಲಾಗುತ್ತದೆ ಹಾಗೂ ಈ ಕ್ಷೇತ್ರವನ್ನು ದಕ್ಷಿಣಕಾಶಿ ಎಂದು ಕರೆಯುತ್ತಾರೆ.
ಅಂತರಗಂಗೆಯ ಮಂದಿರಕ್ಕೆ ಭೇಟಿ ಕೊಟ್ಟು, ಇನ್ನೂ ಕೆಲವು ಮೆಟ್ಟಿಲಿಗಳನ್ನಿಳಿದು ಬಂದಾಗ ಬೆಳಗಿನ ಉಪಾಹಾರ ಅಲ್ಲಿಗೆ ಬಂದಿತ್ತು. ಉಪಾಹಾರದ ನಂತರ ಬಸ್ಸಿನಲ್ಲಿ ಪ್ರಯಾಣಿಸಿ ಕೋಲಾರದ ಆಸುಪಾಸಿನಲ್ಲಿರುವ ಸುಂದರವಾದ ‘ಕೋಟಿ ಲಿಂಗೇಶ್ವರ’ ದೇವಸ್ಥಾನಕ್ಕೆ ಭೇಟಿ ಕೊಟ್ಟು, ವಿವಿಧ ಆಕಾರದ ಸಹಸ್ರಾರು ಶಿವಲಿಂಗಗಳ ದರ್ಶನ ಮಾಡಿದೆವು. ಪ್ರಯಾಣ ಮುಂದುವರಿದು ಗುಟ್ಟಹಳ್ಳಿ ಎಂಬಲ್ಲಿರುವ ‘ಬಂಗಾರ ತಿರುಪತಿ’ ದೇವಸ್ಥಾನಕ್ಕೂ ಭೇಟಿಕೊಟ್ಟೆವು. ‘ಅವನಿ ಬೆಟ್ಟ’ವನ್ನು ಹತ್ತುವ ಕಾರ್ಯಕ್ರಮ ಇದ್ದಿತ್ತಾದರೂ, ಸಮಯದ ಅಭಾವ ಮತ್ತು ಸಕಾಲದಲ್ಲಿ ಮೈಸೂರನ್ನು ತಲಪಬೇಕಾದ ಅನಿವಾರ್ಯತೆ ಇದ್ದುದರಿಂದ ಬೆಟ್ಟವನ್ನು ದೂರದಿಂದಲೇ ನೋಡಿ, ಅಲ್ಲಿದ್ದ ದೇವಾಲಯಕ್ಕೆ ಭೇಟಿ ಕೊಟ್ಟುದಾಯಿತು. ಮಧ್ಯಾಹ್ನ ಅಚ್ಚುಕಟ್ಟಾದ ಊಟ ಮಾಡಿ, ಪ್ರಯಾಣ ಮುಂದುವರಿಸಿದೆವು. ಪುನ: ನಮ್ಮನ್ನು ಸಂಪರ್ಕಿಸಿದ ಯೈಎಚ್.ಎ.ಐ ಕೋಲಾರ ಘಟಕದವರು ನಮ್ಮ ರಾತ್ರಿಯೂಟಕ್ಕೂ ಬಿಸಿಬೇಳೇಭಾತ್ , ಮೊಸರನ್ನದ ಬುತ್ತಿ ಕಟ್ಟಿಕೊಟ್ಟರು.
ಹೀಗೆ ಮೊದಲನೆಯ ದಿನ ಚಾರಣ, ಎರಡನೆಯ ದಿನ ಸ್ವಲ್ಪ ಚಾರಣ ಮತ್ತು ಮಂದಿರಗಳಿಗೆ ಭೇಟಿ ಕೊಟ್ಟು ಎರಡು ದಿನಗಳ ಕಾರ್ಯಕ್ರಮ ಸಂಪನ್ನವಾಯಿತು. ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿದ ಮೈಸೂರು ಘಟಕದ ಪರಶಿವಮೂರ್ತಿ ಮತ್ತು ಆಶೀಶ್ ಕುಮಾರ್ ಹಾಗೂ ನಮ್ಮ ಆತಿಥ್ಯವನ್ನು ಬಹಳ ಕಾಳಜಿಯಿಂದ ನಿರ್ವಹಿಸಿದ ಕೋಲಾರ ಘಟಕದ ಶ್ರೀ ಈಶ್ವರ್ ಮತ್ತು ತಂಡದವರಿಗೆ ಹಾಗೂ ಎಲ್ಲಾ ಸಹಚಾರಣಿಗರಿಗೆ ಕೃತಜ್ಞತೆಗಳು.
-ಮುಗಿಯಿತು
ಶತಶೃಂಗ ಬೆಟ್ಟ- ಅಂತರಗಂಗೆ -ಭಾಗ 2 : http://surahonne.com/?p=22353
– ಹೇಮಮಾಲಾ.ಬಿ. ಮೈಸೂರು