ಪರಿಸರ ಸ್ನೇಹಿ ಯಂತ್ರಗಳು
ಉಜಿರೆ, ಡಿ.೬: ಅಲ್ಲಿ ದೊಡ್ಡ ದೊಡ್ಡ ಯಂತ್ರಗಳು ಇದ್ದವು. ಎಲ್ಲವೂ ಬಾರಿ ದುಬಾರಿ ವಸ್ತುಗಳೇ ಎಂಬಂತೆ ತೋರುತ್ತಿದ್ದವು. ಅವುಗಳು ಹೊಗೆ ಬಿಡುವ ಯಂತ್ರಗಳಲ್ಲ. ಪರಿಸರ ಸ್ನೇಹಿ ಉಪಕರಣಗಳು. ಇದನ್ನು ಕೊಂಡುಕೊಳ್ಳಬೇಕೆಂಬ ಹಂಬಲ ಎಲ್ಲರಿಗೂ ಇತ್ತು. ಆದರೆ ಅದು ಮಾರಾಟಕ್ಕಿರಲಿಲ್ಲ.ಲಕ್ಷದೀಪೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ವಸ್ತು ಪ್ರದರ್ಶನ ಕೇಂದ್ರದಲ್ಲಿ ಈ ರೀತಿಯಾಗಿ ವಿದ್ಯಾರ್ಥಿಗಳಿಂದಲೇ ನಿರೂಪಿತವಾದ ಯಂತ್ರಗಳು ಕಂಡು ಬಂದವು.
ಉಜಿರೆಯ ಎಸ್.ಡಿ.ಎಮ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಂದ ನಿರ್ಮಿತವಾದ ಪರಿಸರ ಸ್ನೇಹಿ ಯಂತ್ರಗಳು ಲಕ್ಷದಿಪೋತ್ಸವದಲ್ಲಿಯೂ ತಮ್ಮ ಮೆರಗನ್ನು ಮೂಡಿಸಿದವು. ಊಟದ ನಂತರ ಬಾಳೆ ಎಲೆಯನ್ನು, ಬಟ್ಟಲನ್ನು ತೆಗೆಯುವ ಹಾಗೂ ಅಡಿಕೆ ಸಿಪ್ಪೆ ಸುಲಿಯುವ ಯಂತ್ರಗಳು ಒಂದು ಕಡೆಯಾದರೆ. ಇನ್ನೊಂದೆಡೆ ಮಳೆಕೊಯ್ಲು ಯಂತ್ರ, ಮೆಕ್ಕೆ ಜೋಳವನ್ನು ಬೇರ್ಪಡಿಸುವ ಉಪಕರಣ, ಮಹಡಿ ಶುದ್ಧೀಕರಕರಿಸುವ ಹಾಗೂ ಕಸ ತೆಗೆಯುವ ಯಂತ್ರಗಳಿದ್ದವು.
ಇವುಗಳಿಂದ ಎರಡರಿಂದ ಮೂರು ಜನ ಮಾಡುವ ಒಂದು ಕೆಲಸಕ್ಕೆ ಒಬ್ಬ ವ್ಯಕ್ತಿ ಮಾತ್ರ ಬೇಕಾಗುತ್ತದೆ. ಕಡಿಮೆ ಖರ್ಚಿನಲ್ಲಿ ಹಾಗೂ ಸಮಯದಲ್ಲಿ ಹೆಚ್ಚು ಕೆಲಸವನ್ನು ಮಾಡಲು ಈ ಯಂತ್ರಗಳು ಸಹಾಯಕವಾಗುತ್ತದೆ. ಇವುಗಳಿಂದ ಪರಿಸರಕ್ಕೆ ಆಗುವ ತೊಂದರೆಗಳನ್ನು ಸಹ ತಡೆಯಬಹುದು.
ಪ್ರತೀ ಸೆಮಿಸ್ಟರ್‌ಗೆ ಇಂತಹ ಹೊಸ ಪ್ರಯತ್ನ ಮಾಡಿ ಯಂತ್ರೋಪಕರಣಗಳ ಮಾದರಿಯನ್ನು ತಯಾರಿಸುವ ಈ ವಿದ್ಯಾರ್ಥಿಗಳಿಗೆ ಇಲ್ಲಿನ ಶಿಕ್ಷಕ ವೃಂದವೇ ಸ್ಫೂರ್ತಿ. ಈ ಬಾರಿಯ ಉಪಕರಣಗಳನ್ನು ವಸ್ತು ಪ್ರದರ್ಶನ ಮಂಟಪದಲ್ಲಿಟ್ಟು ಆಗಮಿಸಿದ ವೀಕ್ಷಕರಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅವರು ನೀಡುತ್ತಿದ್ದರು.
ವಿದ್ಯಾರ್ಥಿಗಳ ಈ ಪ್ರಯೋಗಕ್ಕೆ ನಾವು ಕೇವಲ ಮಾರ್ಗದರ್ಶಕರಾಗಿರುತ್ತೇವೆ. ಅವರೇ ತಮ್ಮ ಬುದ್ದಿವಂತಿಕೆಯಿಂದ ಇವುಗಳನ್ನು ತಯಾರು ಮಾಡುತ್ತಾರೆ ಎಂದು ತಮ್ಮ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಕಾಲೇಜಿನ ಸಹಾಯಕ ಉಪನ್ಯಾಸಕರಾದ ಅಶೋಕ್.
-ಅಮೃತಾ ನಾಯರಿ
ದ್ವಿತೀಯ ಎಂ.ಸಿ.ಜೆ ಎಸ್.ಡಿ.ಎಮ್ ಕಾಲೇಜು ಉಜಿರೆ