ಪ್ರವಾಸ ಪ್ರವರ 

Share Button

ನಮ್ಮ   ಜ್ಞಾನಾರ್ಜನೆಗಾಗಿ  ಪುಸ್ತಕಗಳನ್ನು ಓದುವುದರ ಜೊತೆಗೆ ಜೀವನಾನುಭವಗಳನ್ನು ಪಡೆಯಲು ಆಗಾಗ್ಗೆ ಪ್ರವಾಸ ಕೈಗೊಳ್ಳಬೇಕು  ಎಂಬುದನ್ನು  ‘ದೇಶ ಸುತ್ತಬೇಕು, ಕೋಶ ಓದಬೇಕು’ ಎಂಬ ನುಡಿಗಟ್ಟಿನ  ಮೂಲಕ   ನಮ್ಮ ಹಿರಿಯರು ಬೋಧಿಸಿದ್ದಾರೆ.. ಹಿಂದಿನ ಕಾಲದಲ್ಲಿ ದೇಶ ಸುತ್ತುವ ಮುಖ್ಯ ಉದ್ದೇಶ  ತೀರ್ಥಯಾತ್ರೆ ಆಗಿತ್ತು. ಬಾಲ್ಯ, ಯೌವನ ಕಳೆದು ಗೃಹಸ್ಥಾಶ್ರಮದ ಜವಾಬ್ದಾರಿಗಳನ್ನೂ ನಿರ್ವಹಿಸಿ ಜೀವನ ಪಕ್ವವಾದ ಮೇಲೆ ದೇಶದುದ್ದಕ್ಕೂ ಪ್ರಯಾಣಿಸಿ ವಿವಿಧ ತೀರ್ಥಕ್ಷೇತ್ರಗಳಿಗೆ ಭೇಟಿಕೊಟ್ಟು ಸಾರ್ಥಕತೆಯನ್ನು ಅನುಭವಿಸುತ್ತಿದ್ದರು.  ಆ ದಿನಗಳ ಯಾತ್ರೆಗಳಲ್ಲಿ, ಮಾರ್ಗ ಮಧ್ಯೆ   ಕುದುರೆ, ದೋಣಿ, ಬಸ್ಸು, ರೈಲು ಮೊದಲಾದ ಸ್ಥಳೀಯ ಸಾರಿಗೆ ಲಭಿಸಿದರೆ ಸರಿ, ಇಲ್ಲವಾದರೆ  ತಿಂಗಳಾನುಗಟ್ಟಲೆ ಕಾಲ್ನಡಿಗೆಯ ಮೂಲಕ ದೇಶದ ಉದ್ದಗಲ ಸಂಚರಿಸಿದವರೂ ಇದ್ದರು.  ಸಂಜೆ ಸಮಯ ಯಾವ ಊರಿಗೆ ತಲಪಿದರೋ ಆ ಊರಲ್ಲಿ ವಿಶ್ರಾಂತಿ ಪಡೆಯಲು ಊಟ ವಸತಿಗೆ ಯಾವುದಾದರೂ ಛತ್ರವನ್ನೋ ದೇವಾಲಯವನ್ನೋ ಆಶ್ರಯಿಸುತ್ತಿದ್ದರು. ಪುಣ್ಯಕಾರ್ಯವೆಂದು, ಅಪರಿಚಿತ ಯಾತ್ರಿಕರಿಗೂ ತಮ್ಮ ಮನೆಯಲ್ಲಿ ಆದರಿಸಿ ವಿಶ್ರಾಂತಿಗೆ ಅನುವು ಮಾಡಿಕೊಡುವ ಗೃಹಸ್ಥರೂ ಬಹಳಷ್ಟು ಮಂದಿ ಇದ್ದರು. ಕಾಶಿ, ಪ್ರಯಾಗ ಇತ್ಯಾದಿ ದೂರದಲ್ಲಿರುವ ಕ್ಷೇತ್ರಗಳಿಗೆ ಹೊರಟವರು ಬದುಕಿ ಬಾರದಿರುವ ಸಾಧ್ಯತೆಯೂ ಇತ್ತು.

ಇಂದು ಬದಲಾದ ಕಾಲಘಟ್ಟ. ಪ್ರವಾಸದ ಕಾರಣ ಹಾಗೂ ಆಯಾಮಗಳು ದಶದಿಕ್ಕುಗಳಲ್ಲಿಯೂ ವ್ಯಾಪಿಸಿವೆ.  ವಿದೇಶದಲ್ಲಿರುವ ಗರ್ಭಿಣಿ ಹೆಣ್ಣು ಮಗಳು ಹೆರಿಗೆಗೆಂದು ತನ್ನ  ತವರಿಗೆ ಬರುವ ಮೂಲಕ ಗರ್ಭಸ್ಥ ಶಿಶುವಿನಿಂದಲೇ  ಖಂಡಾಂತರಗಳ ಪ್ರವಾಸ ಆರಂಭವಾಗುವುದೂ ಇದೆ. ಆಮೇಲೆ  ಶಾಲಾದಿನಗಳ ಶೈಕ್ಷಣಿಕ ಪ್ರವಾಸ, ನೆಂಟರಿಷ್ಟರ ಮನೆಗೆ ಪ್ರಯಾಣ, ವಿಧ್ಯಾಭ್ಯಾಸ ನಿಮಿತ್ತ ದೂರದ ಕಾಲೇಜಿಗೆ ಸ್ಥಳಾಂತರ, ಉದ್ಯೋಗದ ಅಗತ್ಯವಾಗಿ ಮತ್ತಷ್ಟು  ದೇಶ ಸಂಚಾರ, ಮದುವೆ-ಹನಿಮೂನ್  ಸುತ್ತಾಟ,  ಮನೋರಂಜನೆಗೆಂದು ಆಗಾಗ ಪ್ರಯಾಣ ಇತ್ಯಾದಿ ಪ್ರವಾಸಗಳು  ಸಾಮಾನ್ಯವಾಗಿವೆ. ಕೆಲವರು ಪ್ರಕೃತಿ ವೀಕ್ಷಣೆ,  ಚಾರಣ, ಸಾಹಸ ಕ್ರೀಡೆ ಇತ್ಯಾದಿ ಹವ್ಯಾಸಗಳನ್ನು ಹಮ್ಮಿಕೊಂಡು  ಕಾಡುಮೇಡು ಹಿಮಪರ್ವತ, ಸಾಗರದಾಳದಲ್ಲಿ ಅಲೆದಾಡುತ್ತಾರೆ, ಆಸ್ತಿಕರು ಪುಣ್ಯ ಸಂಪಾದನೆಗಾಗಿ ತೀರ್ಥಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಆಯಾ ಋತುವಿಗೆ ತಕ್ಕಂತೆ ವಿಶೇಷ ಪ್ರವಾಸ, ಗತವೈಭವದ ಅಥವಾ ಕರಾಳ ದಿನಗಳ ಐತಿಹ್ಯವುಳ್ಳ ಜಾಗಗಳಿಗೆ ಪ್ರವಾಸ, ದೇಶದ ಗಡಿಭಾಗಗಳಿಗೆ ಪ್ರವಾಸ , ಸಾಂಸ್ಕೃತಿಕ ಪ್ರವಾಸ, ಕೌಟುಂಬಿಕ ಪ್ರವಾಸ, ಏಕಾಂಗಿ ಪ್ರವಾಸ , ಏಕತಾನತೆಯನ್ನು ಮುರಿಯಲು ಪ್ರವಾಸ, ವಾರಾಂತ್ಯದ ಪ್ರವಾಸ……..ಹೀಗೆ ಜೀವನದ ಪ್ರತಿ ಹಂತದಲ್ಲಿಯೂ  ಆಸಕ್ತಿ ಉಳ್ಳವರಿಗೆ ಪ್ರವಾಸಕ್ಕೆ ಕಾರಣಗಳು ನೂರಾರು .

ಇಂದಿನ ದಿನಗಳಲ್ಲಿ ಪ್ರವಾಸಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು ಬಲು ಸುಲಭ. ಕಂಪ್ಯೂಟರ್ ಅಥವಾ  ಮೊಬೈಲ್  ಫೋನ್ ನಲ್ಲಿ  ಅಂತರ್ಜಾಲ ಸಂಪರ್ಕವಿದ್ದರೆ ಸಾಕು. ಹೋಗಬೇಕಾದ ಪ್ರವಾಸಿ ಸ್ಥಳದ ಬಗ್ಗೆ ಮಾಹಿತಿ, ಪ್ರವಾಸಕ್ಕೆ ತಗಲುವ ಅಂದಾಜು  ಖರ್ಚುವೆಚ್ಚ, ಹವಾಮಾನ, ಊಟ ವಸತಿಯ ಏರ್ಪಾಡು, ಟಿಕೆಟ್, ಅಗತ್ಯವಿದ್ದಲ್ಲಿ ಪಾಸ್ ಪೋರ್ಟ್,  ವೀಸಾ ಇತ್ಯಾದಿಗಳನ್ನು ಖುದ್ದಾಗಿ ಮಾಡಬಹುದು.   ಹೆಚ್ಚಿನ ನಗರಗಳಲ್ಲಿ ಟೂರಿಸ್ಟ್ ಏಜೆಂಟ್ ಗಳಿರುತ್ತಾರೆ. ನಗರಗಳ ಬಸ್ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣಗಳಲ್ಲಿಯೂ  ಸ್ಥಳೀಯ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ದೊರೆಯುತ್ತಿದೆ. ಒಟ್ಟಿನಲ್ಲಿ  ತಕ್ಕಷ್ಟು ಹಣ, ಆರೋಗ್ಯ ಹಾಗೂ ಸಮಯವಿದ್ದರೆ ಈ ದಿನಗಳಲ್ಲಿ ಪ್ರವಾಸ ಮಾಡುವುದು ಸುಲಭ.

ಸಂಪರ್ಕ ಮಾಧ್ಯಮಗಳು ಹಾಗೂ ಸಾರಿಗೆ ಸೌಕರ್ಯಗಳಿಂದಾಗಿ ಇತ್ತೀಚಿನ ದಿನಗಳಲ್ಲಿ  ಪ್ರವಾಸಿ ಮನೋಭಾವ ಹೆಚ್ಚುತ್ತಿದೆ.  ಪ್ರತಿ ದೇಶವೂ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿವೆ. ಭಾರತದಲ್ಲಿ ಖಾಸಗಿ ಸಂಸ್ಥೆಗಳ ಜೊತೆಗೆ, ಸರಕಾರಿ ಒಡೆತನದಲ್ಲಿರುವ ರೈಲ್ವೇ ಹಾಗೂ ಸಾರಿಗೆ ಸಂಸ್ಥೆಗಳು ಕೂಡ  ಬಹಳಷ್ಟು ಪ್ರವಾಸಿ ಪ್ಯಾಕೇಜ್ ಗಳನ್ನು ರೂಪಿಸಿ ಜನರನ್ನು ಆಕರ್ಷಿಸುತ್ತಿವೆ.. ಪ್ರವಾಸಿಗಳ ಅನುಕೂಲಕ್ಕಾಗಿ   ಅನೇಕ ಸೌಕರ್ಯ ಹಾಗೂ  ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ  ಸ್ಥಳೀಯ ಜನರಿಗೆ ವಿವಿಧ ಶ್ರೇಣಿಯ ಹುದ್ದೆಗಳ ಸೃಷ್ಟಿಯಾಗುತ್ತದೆ, ಸಾರಿಗೆ ಸಂಪರ್ಕ ಉತ್ತಮವಾಗುತ್ತದೆ. ಆದರೆ ಅತಿಯಾದ ಪ್ರವಾಸೋದ್ಯಮದಿಂದಾಗಿ ಸ್ಥಳೀಯ ಪರಿಸರ ಹಾಗೂ ಸಂಸ್ಕೃತಿಯ ಮೇಲೆ  ದುಷ್ಪರಿಣಾಮಗಳಾಗುತ್ತಿರುವುದೂ ಸತ್ಯ.

ಪ್ರವಾಸದ ಅವಧಿಯಲ್ಲಿ ದೈನಂದಿನ ಆಹಾರ ಹಾಗೂ ವಿಶ್ರಾಂತಿಗೆ ಅನಾನುಕೂಲವಾಗಬಹುದು. ಅನಿರೀಕ್ಷಿತ ತೊಂದರೆಗಳು ಎದುರಾಗಬಹುದು.    ಹೀಗಾದರೂ, ಸಾಕಷ್ಟು ಪೂರ್ವತಯಾರಿ ಮಾಡುವುದು, ಕಡಿಮೆ ಲಗೇಜು ಒಯ್ಯುವುದು,  ಭೇಟಿ ಕೊಟ್ಟ ಊರಿನ ಸ್ಥಳೀಯ ತಿನಿಸುಗಳನ್ನು ಸವಿಯುವ ಪ್ರಯತ್ನ ಮಾಡುವುದು, ಭಾಷೆ ಅರ್ಥವಾಗದಿದ್ದರೂ ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವುದು, ಸಹ ಪ್ರವಾಸಿಗಳೊಂದಿಗೆ ಸ್ನೇಹಪರರಾಗಿರುವುದು,  ಸಣ್ಣ ಪುಟ್ಟ ಅನಾನುಕೂಲತೆಗಳಿಗೆ ಸಿಡಿಮಿಡಿಗೊಳ್ಳದೆ ಶಾಂತವಾಗಿರುವುದು ಹೀಗೆ ಕೆಲವು ಹೊಂದಾಣಿಕೆಯ ಸ್ವಭಾವ ಬೆಳೆಸಿಕೊಂಡರೆ  ಪ್ರವಾಸವು ಎಂದಿಗೂ ಪ್ರಯಾಸವಾಗದು,

ನಮ್ಮ ದೇಶದಲ್ಲಿ ಅಗಾಧವಾದ ಭೂವೈವಿಧ್ಯತೆ, ಪ್ರಾಕೃತಿಕ ಸೊಬಗು, ಸಾಂಸ್ಕೃತಿಕ ಸಂಪತ್ತು, ಐತಿಹ್ಯ ಎಲ್ಲವೂ ಇದೆ. ಆದರೆ ಇವುಗಳನ್ನು ಸಮರ್ಥವಾಗಿ ಪ್ರದರ್ಶಿಸುವಲ್ಲಿ ಹಾಗೂ ಅಚ್ಚುಕಟ್ಟಾಗಿ  ನಿರ್ವಹಿಸುವಲ್ಲಿ ನಾವು ಸೋತಿದ್ದೇವೆ.  ಕೆಲವು ಪ್ರವಾಸಿತಾಣಗಳಲ್ಲಿ   ಅನಾಗರಿಕ ಬರಹಗಳು ಹಾಗೂ  ಅಸಂಬದ್ಧ ಚಿತ್ರಗಳು ಆಧುನಿಕ ಮನಸ್ಸಿನ ವಿಕೃತಿಯ ಸೂಚಕಗಳಂತೆ ಕಾಣಸಿಗುತ್ತವೆ. ಕಣ್ಣಿಗೆ ರಾಚುವ ಕಸದ ರಾಶಿ,  ನಿರ್ವಹಣೆಯಿಲ್ಲದ ಶೌಚಾಲಯಗಳು, ಪ್ರವಾಸಿಗರೊಂದಿಗೆ ಒರಟಾದ ನಡವಳಿಕೆ, ಅಗತ್ಯ ವಸ್ತುಗಳಿಗೆ  ದುಪ್ಪಟ್ಟು ಬೆಲೆ, ಮೋಸ,  ಅಶಿಸ್ತು  ಇತ್ಯಾದಿ ಪ್ರದರ್ಶಿಸುತ್ತಾ  ನಮ್ಮ  ಪ್ರವಾಸೋದ್ಯಮದ ಅವ್ಯವಸ್ಥೆಯನ್ನು ದೇಶಿ-ವಿದೇಶಿ ಪ್ರವಾಸಿಗರ ಮುಂದೆ ಹರಾಜಿಗಿಡುತ್ತೇವೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರವಾಸೋದ್ಯಮವನ್ನು ವೃದ್ಧಿಪಡಿಸಲು ,  ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಕರ್ಯಗಳು, ಶುಚಿತ್ವ, ಸುರಕ್ಷತೆ  ಹಾಗೂ ಶಿಸ್ತನ್ನು ಕಾಪಾಡುವುದು ಅಗತ್ಯ.

– ಹೇಮಮಾಲಾ.ಬಿ , ಮೈಸೂರು

9 Responses

  1. ಕಲಾ ಚಿದಾನಂದ says:

    ಪ್ರತಿಯೊಬ್ಬ ಪ್ರವಾಸಿಗನೂ ತನ್ನ ಜವಾಬ್ದಾರಿ ಅರಿತು ನಿಭಾಯಿಸಬೇಕು. ಚಂದದ ಬರಹ ಮೇಡಮ್.

  2. km vasundhara says:

    ಪ್ರವಾಸಿಗರಿಗೆ ಹಾಗೂ ಆಯೋಜಕರಿಗೆ ಮತ್ತು ಪ್ರವಾಸಿ ಸ್ಥಳಗಳ ನಿರ್ವಾಹಕರಿಗೆ ಸೂಕ್ತವಾದ ಸಂದೇಶಗಳಿವೆ. ಬರಹ ಒಳ್ಳೆಯದಿದೆ.

  3. ನಯನ ಬಜಕೂಡ್ಲು says:

    Superb and well said ಹೇಮಕ್ಕ .
    ನಮ್ಮ ಪೂರ್ವಜರು ಯಾವುದನ್ನೂ ಕಾರಣವಿಲ್ಲದೆ ಮಾಡಿರುವುದಿಲ್ಲ , ಇದಕ್ಕೆ ಸಂಪ್ರದಾಯ, ಆಚರಣೆ ಅಂತ ಹೆಸರು ಕೊಟ್ಟರೂ ಸರಿಯೇ , ಯಾವುದೇ ವಿಷಯ ಇರಲಿ ಅದರ ಹಿಂದೊಂದು ಕಾರಣ ಇದ್ದೇ ಇರುತ್ತದೆ , ಬಹಳಷ್ಟು ಸಲ ಅದನ್ನು ನಾವು ಅರಿಯುವ ಪ್ರಯತ್ನ ಮಾಡದೆ ನಮ್ಮ ನಮ್ಮ ಮಟ್ಟದಲ್ಲೇ ಯೋಚಿಸಿ ಅದಕ್ಕೆ ಬಿರುದುಗಳನ್ನು , ಕಾರಣಗಳನ್ನು ಕೊಡ್ತಾ ಇರ್ತೇವೆ .
    ಪ್ರವಾಸ ಹೋದಾಗ ನಾವು ಯಾವೆಲ್ಲ ಅಂಶಗಳನ್ನು ಅನುಸರಿಸಿದ್ರೆ ಪ್ರವಾಸವನ್ನು ಎಂಜಾಯ್ ಮಾಡಬಹುದು ಅನ್ನುವುದನ್ನು ಹೇಳಿದ್ರಿ . I am sure, ನೀವು ಈ ಎಲ್ಲಾ ಅಂಶಗಳನ್ನು ನಿಮ್ಮ ಪ್ರವಾಸದಲ್ಲಿ ಅಳವಡಿಸಿಕೊಂಡಿರುವುದರಿಂದಲೆ ನಿಮ್ಮ ಎಲ್ಲ ಪ್ರವಾಸಗಳು ಸಕ್ಸಸ್ ಆಗಿರೋದು . ಮತ್ತು ನಮಗೆಲ್ಲ ಅದರ ಸವಿ ನೀವು ಹಂಚುತ್ತಿರುವುದು . ತುಂಬಾ ಚಂದದ ಮತ್ತು ಉಪಯುಕ್ತ ಲೇಖನ .

  4. Shruthi Sharma says:

    ಉತ್ತಮ ಲೇಖನ. ನಿಮ್ಮ ಪ್ರವಾಸಗಳಿಂದ ಬಹಳವೇ ಪ್ರೇರಣೆಯನ್ನು ಪಡಕೊಂಡವರಲ್ಲಿ ನಾನೂ ಒಬ್ಬಳು. ನಿಜ, ಪ್ರವಾಸ ಖುಷಿಯ ಜೊತೆ ಜ್ಞಾನವನ್ನೂ ಈಯುತ್ತದೆ.

  5. Shankari Sharma says:

    ಪ್ರವಾಸದ ಬಗೆಗಿನ ನಿಮ್ಮ ಲೇಖನ ಪ್ರವಾಸೀ ತಾಣಗಳ ನಿರ್ವಾಹಕರಿಗೆ ಎಚ್ಚರಿಸುವಂತಿದೆ. ಈಶಾನ್ಯ ಭಾರತ ಪ್ರವಾಸ ಮುಗಿಸಿ ಈಗ ಅಮೇರಿಕಾ ಪ್ರವಾಸದಲ್ಲಿರುವ ನನಗೆ ಅದರ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತಿದೆ. ನಮ್ಮಲ್ಲಿ ಪ್ರವಾಸಿಗಳ ಮೂಲ ಸೌಕರ್ಯಗಳ ಬಗ್ಗೆ ಕೊಂಚವೂ ಯೋಚಿಸದ ಅಧಿಕಾರಿಗಳು….ಇಲ್ಲಿ, ಪ್ರತಿಯೊಂದು ಕಡೆಯೂ ಲಭ್ಯವಿರುವ ಅನುಕೂಲತೆಗಳು!…ಅಜಗಜಾಂತರ! ನಮ್ಮಲ್ಲಿಯೂ ಹೀಗಿದ್ದರೆ ಎಷ್ಟು ಚೆನ್ನ…ಎನಿಸುತ್ತಿದೆ.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: