ಹೋರಾಟದ ಬದುಕು -‘ಅವನು ಶಾಪಗ್ರಸ್ಥ ಗಂಧರ್ವ’

Share Button

ನಳಿನಿ. ಟಿ. ಭೀಮಪ್ಪ

ನಾನೆಂದೂ ವಿಮರ್ಶೆ ಬರೆದವಳಲ್ಲ, ಬರೆಯುವ ರೀತಿಯೂ ಗೊತ್ತಿಲ್ಲ. ಆದರೆ ಈ ಪುಸ್ತಕ ಓದಿದ ಮೇಲೆ ಏಕೋ ಒಂದೆರಡು ಸಾಲು ಬರೆಯಬೇಕೆನಿಸಿತು. ಬರೆಯುವುದು ಹೇಗೆಂದು ಒದ್ದಾಡಿ ಹೋದೆ. ಆಗ ನನ್ನ ಎಫ್‌ಬಿ ಯ ಫ್ರೆಂಡ್, ವಾಟ್ಸಪ್ಪಿನಲ್ಲೂ ಆಗಾಗ ಸಲಹೆ ನೀಡುವ ಒಬ್ಬ ಯುವ ಲೇಖಕ ‘ಮ್ಯಾಮ್, ಒಬ್ಬ ಲೇಖಕರು ಹೇಳಿದ್ದಾರೆ, ವಿಮರ್ಶೆ ಎನ್ನುವ ಪದ ದೊಡ್ಡದು, ಅದು ಬೇಡ, ನಿಮ್ಮ ಮನದಾಳದಲ್ಲಿ ಪುಸ್ತಕದ ಬಗ್ಗೆ ಏನು ಅನ್ನಿಸುತ್ತದೆಯೋ ಅದನ್ನು ಮಾತ್ರ ಬರೆಯಿರಿ’ ಎಂದು ಸಲಹೆ ನೀಡಿದ ಆ ಗುರುವಿಗೊಂದು ಧನ್ಯವಾದ. ಅನಿಸಿದ ಹಾಗೆ ಬರೆದಿದ್ದೇನೆ.

ಯಾವುದೋ ಪುರಾಣ ಕಥೆಯಲ್ಲಿ ಮನುಷ್ಯನ ಮನ ಹೊಕ್ಕು ಮನಸ್ಸನ್ನು ಅರಿತು ಬರುವ ಸಿದ್ಧಿ ಒಬ್ಬ ಸಂತನಿಗೆ ಇತ್ತಂತೆ. ಬಹುಶಃ ಸಂತೋಷ್ ಕುಮಾರ್ ಮೆಹೆಂದಳೆಯವರು ಆ ಸಂತನ ವರ್ಗಕ್ಕೆ ಸೇರಿರಬೇಕು ಎನ್ನಿಸುತ್ತದೆ. ಅದಕ್ಕೆ ಉದಾಹರಣೆ ಇವರು ಬರೆದಿರುವ ಪುಸ್ತಕ ‘ಅವನು ಶಾಪಗ್ರಸ್ತ ಗಂಧರ್ವ’. ಮನಸ್ಸನ್ನು ಹೊಕ್ಕಿ, ಭಾವನೆಗಳನ್ನು ಹೆಕ್ಕಿ ಪುಸ್ತಕದ ರೂಪದಲ್ಲಿ ಮುಂದಿಟ್ಟಿರುವ ಈ ಮನುಷ್ಯನ ಹುಕಿಗೆ ಓದುವ ವರ್ಗ ನಿಜವಾಗಿಯೂ ಕಕ್ಕಾಬಿಕ್ಕಿ. ಗಂಡು-ಹೆಣ್ಣಿನ ಮುಂದೆ ಕನ್ನಡಿಯ ಹಾಗೆ ಈ ಪುಸ್ತಕ ಇಟ್ಟು, ನಿಮ್ಮನ್ನು ನೀವು ನೋಡಿಕೊಳ್ಳಿ ಎನ್ನುವ ಹಾಗಿದೆ.

ಜೀವನ ಪೂರ್ತಿ ಪತಿ-ಪತ್ನಿ ಪರಸ್ಪರ ಒಬ್ಬರನ್ನೊಬ್ಬರು ಅರಿಯಲು ಪ್ರಯತ್ನಿಸಿದರೂ ಸಾಧ್ಯವಾಗದೇ ನಿಟ್ಟುಸಿರು ಬಿಡುತ್ತಾ ‘ಲೈಫು ಇಷ್ಟೇನೇ‘ ಎಂಬ ಟ್ಯಾಗ್ ಲೈನಿಗೆ ಜೋತುಬೀಳುವ ಪ್ರಮೇಯವೇ ದಾಂಪತ್ಯದಲ್ಲಿ ಹೆಚ್ಚು. ಅಂತಾದ್ದರಲ್ಲಿ ಪ್ರತಿ ಹೆಣ್ಣಿನ ಮನಸ್ಸನ್ನು, ಪ್ರತಿ ಪುರುಷನ ತಲ್ಲಣ, ತಳಮಳಗಳ ಅವಸ್ಥೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ದಾಖಲಿಸುವುದು ಸವಾಲೇ ಸೈ. ಪುಸ್ತಕ ಓದುತ್ತಾ ಹೋದಂತೆ ಯಾಕಾಗಿ ಪುರುಷ ಶಾಪಗ್ರಸ್ತ ಗಂಧರ್ವನಾದ ಎಂಬುದಕ್ಕೆ ಉತ್ತರದ ಜೊತೆಗೆ, ನಮ್ಮಪ್ಪ ಹೀಗೇ ಇದ್ದ ಹೌದಲ್ವಾ?, ನಮ್ಮಜ್ಜನ ಪರಿಸ್ಥಿತಿ ಹೀಗೇ ಇತ್ತಲ್ವಾ?, ಪತಿಯ ಕೋಪಕ್ಕೆ ಕಾರಣ ಇದೇ ಇರಬಹುದಲ್ವಾ?, ಮಗನ ರೋಷಕ್ಕೆ, ಆವೇಶಕ್ಕೆ ಈ ಸಾಧ್ಯತೆಗಳೂ ಇದೆಯಲ್ವಾ? ಎಂಬ ಪ್ರಶ್ನೆಗಳು ಪುಂಖಾನುಪುಂಖವಾಗಿ ಮೂಡತೊಡಗಿ, ಅದರೊಳಗಿನ ಉತ್ತರಗಳಿಗೆ ಪ್ರತಿಯೊಂದು ಹೆಣ್ಣೂ ತನ್ನನ್ನು ತಾನು ಅವಲೋಕಿಸುತ್ತಾ ಸಾಗುವುದು ದಿಟ.


ಮೊದಲ ಕೆಲವು ಅಧ್ಯಾಯಗಳಲ್ಲಿ ನಿಜವಾಗಿ ಅಪ್ಪನ ಜವಾಬ್ದಾರಿ ಹೊತ್ತ ಗಂಡಸು ಜೀವನದುದ್ದಕ್ಕೂ ತನ್ನ ಕುಟುಂಬಕ್ಕಾಗಿ ಅನುಭವಿಸುವ ಬವಣೆ ಕಣ್ಮುಂದೆ ಹಾದು ಹೋಗುತ್ತದೆ. ಅದಕ್ಕಾಗಿ ಅವನು ಮಾಡುವ ತ್ಯಾಗ, ತನ್ನ ಆಸೆ, ಆಕಾಂಕ್ಷೆ, ಕಡೆಗೆ ಸ್ವಂತ ಸುಖಕ್ಕೂ ಕಲ್ಲು ಹಾಕಿಕೊಂಡು ಮರುದಿನ ಮತ್ತದೇ ಹುರುಪಿನಿಂದ ಕಂಬಳಕ್ಕೆ ತಯಾರಾಗುವ ಅವನ ಜೀವನಪ್ರೀತಿಯನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ ಅದೇ ಸಮಯದಲ್ಲಿ ಅವನಿಗೆ ಮೈ-ಮನಸಿಗೆ ತನಿ ಎರೆದು ಆಸರೆಯಾಗಬೇಕಾದ ಹೆಣ್ಣು ಉಡಾಫೆ, ನಿರ್ಲಕ್ಷತನ, ಉದಾಸೀನತೆಯಿಂದ ಅವನ ಜೀವನದ ಎಷ್ಟೋ ಬಣ್ಣದ ಕನಸುಗಳನ್ನು ಹೊಸಕಿಹಾಕುವ ಪರಿ, ಮತ್ತೆಲ್ಲೋ ಕಾಮನಬಿಲ್ಲು ಅರಸಲು ಹೋಗಿ ಅತ್ತ ಕುಟುಂಬಕ್ಕೂ ಇಲ್ಲದೆ, ಹೊರಗೂ ಸಲ್ಲದೆ ತ್ರಿಶಂಕು ಸ್ಥಿತಿಯ ಗಂಡಸರ ಪಾಡು ದೇವರಿಗೇ ಪ್ರೀತಿ ಎಂಬುದನ್ನು ಮನಗಾಣಬಹುದು.

ಹೆಣ್ಣೊಬ್ಬಳು ಗಂಡ ತನ್ನ ಜೊತೆ ಮಾತನಾಡುವುದಿಲ್ಲ, ಊರವರ ಜೊತೆಗೆಲ್ಲಾ ಹರಟುತ್ತಾನೆ ಎಂಬ ಆರೋಪಕ್ಕೆ ಉತ್ತರವಾಗಿ ದಾಂಪತ್ಯದಲ್ಲಿ ಇರದ ನಾವೀನ್ಯತೆ, ಒತ್ತಾಯಿಸಿ ಸುಖ ಪಡೆಯಲಾಗುವುದೆನ್ನುವ ಸತ್ಯ, ಅಳಿದುಳಿದ ಆಸಕ್ತಿಯ ಮೇಲೆ ಪರಿಣಾಮ ಬೀರುತ್ತಾ, ಸಾಂಗತ್ಯ ಯಾಂತ್ರಿಕ ಎನ್ನಿಸತೊಡಗಿ, ಹಂಚಿಕೊಳ್ಳಬೇಕು ಎಂಬ ಮನಸ್ಸು ಕಡಿಮೆಯಾಗಿ ಬೇರೆ ಆಸಕ್ತಿಕರ ವಿಷಯದ ಕಡೆ ಹೊರಳುವ ಪುರುಷನ ಮನಸ್ಸು ಒಂದೆಡೆಯಾದರೆ, ಏನಾದರೂ ಮಾತಾಡಿ ಕಿರಿಕ್ ಮಾಡಿಕೊಳ್ಳುವುದಕ್ಕಿಂತ ಸುಮ್ಮನಿದ್ದರೆ ವಾಸಿ ಎಂಬ ಮನೋಭಾವನೆ ಜೊತೆಗೆ ಒಲ್ಲದ ಮನಸ್ಥಿತಿಗೆ ದೇಹದಲ್ಲಿ ಸ್ರವಿಸುವ ಹಾರ್ಮೋನುಗಳು ಅವನನ್ನು ಬೇರೆಡೆಗೆ ಸೆಳೆಯುತ್ತಾ ಅವನಿಗರಿವಾಗದಂತೆ ಅವನನ್ನು ಮಾತಾಡದಂತೆ ತಡೆಯಲು ಪ್ರೇರೇಪಿಸುತ್ತವೆ ಎಂಬ ಸತ್ಯದ ದರ್ಶನ ಲೇಖಕರು ಮಾಡಿಸಿದ್ದಾರೆ.

ಕೇವಲ ಹಿಡಿ ಪ್ರೀತಿಗಾಗಿ ಕಾಯುತ್ತಾ, ಮಕ್ಕಳು ಉದ್ಧಾರವಾದಾಗ ಎದೆಯುಬ್ಬಿಸಿ, ಅದೇ ಕೆಲಸಕ್ಕೆ ಬಾರದವರಾದಾಗ ಅವಮಾನದಿಂದ ಮೈಹಿಡಿ ಮಾಡಿಕೊಂಡು ಅವರನ್ನು ನೆಲೆ ನಿಲ್ಲಿಸಲು ಹೋರಾಡುವ ಅಪ್ಪನ ಉದಾಹರಣೆ ಊಟದ ಮಾಸ್ತರದು. ತನ್ನವರಿಗಾಗಿ ಭೂಮಿ ಮೇಲೆ ಸ್ವರ್ಗ ಸೃಷ್ಟಿಸಲು ಹೆಣಗಾಡುವ ಗಂಡಸು ಕೊನೆಗಾಲದಲ್ಲಿ ನರಕಯಾತನೆ ಅನುಭವಿಸುವ ದೃಶ್ಯ ಓದುವಾಗ ಕಣ್ಣಾಲಿಗಳು ತುಂಬಿ ಬರುತ್ತವೆ. ಹಾಗೆಯೇ ಪ್ರೀತಿಸುವ ಪತ್ನಿಯನ್ನು ಕಳೆದುಕೊಂಡ ವೆಂಕಣ್ಣ, ಪದ್ಯಾ, ಚಂದ್ರಿಯ ಗಂಡ ತಮ್ಮ ಮಗುವಿಗಾಗಿ ಎದೆ ಗಟ್ಟಿ ಮಾಡಿಕೊಂಡು ತಾನೇ ತಂದೆ-ತಾಯಿ ಎರಡೂ ಆಗಿ ಬೆಳೆಸುವ ಪರಿ ಪುರುಷನ ಜೀವನಪ್ರೀತಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಮತ್ತೊಂದರಲ್ಲಿ ಕುಂಟು ಬಸ್ಯಾ ತನಗಿಂತಾ ಹೆಚ್ಚು ಅಂಗವಿಕಲೆಯೊಬ್ಬಳಿಗೆ ಬಾಳು ನೀಡಿ, ಅವರಿಬ್ಬರ ಅನ್ಯೋನ್ಯತೆಯ ಸಂಸಾರ ಎಲ್ಲ ಸರಿಯಿದ್ದೂ ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದಾಗಿ ರಂಪಾಟ ಮಾಡಿಕೊಳ್ಳುವ ಹೆಣ್ಣು-ಗಂಡುಗಳಿಗೆ ಮಾದರಿ.

ಗಂಡು ಹೆಣ್ಣುಗಳ ದೇಹದ ನೈಸರ್ಗಿಕ ರಚನೆ, ಜೊತೆಗೆ ಭಾವನೆಗಳಿಗೆ ಕಾರಣವಾಗುವ ಮೆದುಳಿನ ‘ಕಾರ್ಪಸ್ ಕ್ಯಾಲೊಸಮ್’, ಹಾಗೂ ಶೃಂಗಾರಕ್ಕೆ ಸಹಕರಿಸುವ ‘ಹೈಪೋಥೆಲಾಮಸ್’ನ ಆ ದೇವರು ಇಬ್ಬರಿಗೂ ಬೇರೆ ಬೇರೆ ಪ್ರಮಾಣದಲ್ಲಿ ಕೊಟ್ಟು, ಅದರಿಂದ ಭಾವ-ಪ್ರಯೋಗ ಸಿದ್ಧಾಂತಕ್ಕೆ ಧಕ್ಕೆ ಉಂಟಾಗಿರುವ ಬಗೆ ವಿವರಿಸಿರುವ ರೀತಿ ಶ್ಲಾಘನೀಯ. ಪುಸ್ತಕ ಓದಿ ಅದನ್ನರಿತು ಸ್ವಲ್ಪ ಮಟ್ಟಿನ ಬದಲಾವಣೆ ಜೀವನದಲ್ಲಿ ಅಳವಡಿಸಿಕೊಂಡರೂ ದಾಂಪತ್ಯದ ಹಾದಿ ಸುಗಮ.
ಪುಸ್ತಕ ಓದಿದ ಮೇಲೆ ನನಗನಿಸಿದ್ದು

ಹೌದು ನಮ್ಮಪ್ಪ, ದಿನಕ್ಕೆರಡು ಶಿಫ್ಟ್ ಕೆಲಸ ಮಾಡಿ, ತಂಗಿಯರ, ತಮ್ಮಂದಿರ ಓದು, ಮದುವೆ, ಬಸಿರು, ಬಾಣಂತನ ಎಲ್ಲದಕ್ಕೂ ನೆರವಾಗಿ, ಅಮ್ಮನ ಜೊತೆಯಾಗಿ ಕಳೆಯಬೇಕಾಗಿದ್ದ ಎಷ್ಟೋ ರಸಘಳಿಗೆಗಳನ್ನು, ಇರುಳುಗಳನ್ನು ಕೆಲವೊಮ್ಮೆ ರಾತ್ರಿ ಪಾಳಿಯ ಕೆಲಸ, ಮಗದೊಮ್ಮೆ ಮನೆಗೆ ಬರುವ ಅಕ್ಕ, ತಂಗಿಯರ ಬಸಿರು, ಬಾಣಂತನ, ಅಳಿಯಂದಿರ ಆಗಮನ ಅಂತಾ ಕೋಣೆಯನ್ನು ಆಕ್ರಮಿಸಿಕೊಂಡು ಬಿಡುತ್ತಿದ್ದವು. ಅದೆಷ್ಟೇ ಲೇಟಾಗಿ ಬಂದರೂ ನಾವೆಲ್ಲಾ ಅಪ್ಪ ಊಟ ಮಾಡಿ ಮಲಗುತ್ತಿದ್ದಂತೆ ತಂಗಿ ಹಾಗೂ ನಾನು ಎರಡೂ ಕಡೆಯ ಕೈಗಳನ್ನು ದಿಂಬಾಗಿಸಿಕೊಂಡು, ಪುಟ್ಟ ತಮ್ಮ ಅಪ್ಪನ ಹೊಟ್ಟೆಯ ಮೇಲೆ ಬಕ್ಕಬೋರಲ ಮಲಗಿ ಕಥೆ ಕೇಳುತ್ತಾ, ನಿದ್ದೆ ಹೋಗುತ್ತಿದ್ದೆವು. ತಾನಾಗಿಯೇ ಎಂದೂ ಒಂದು ಹೊಸ ಬಟ್ಟೆ, ಚಪ್ಪಲಿ ಕೊಂಡವನಲ್ಲ. ಎಲ್ಲವನ್ನೂ ಅಮ್ಮನೇ ತಿಳಿದುಕೊಂಡು ತರಬೇಕಿತ್ತು. ತಂದ ಮೇಲೆ ಇದಕ್ಕೆಲ್ಲಾ ದುಡ್ಡು ಯಾಕೆ ಖರ್ಚು ಮಾಡ್ತೀಯಾ ಎಂಬ ಬೈಗುಳ ಬೇರೆ. ಎಷ್ಟೋ ಸಲ ನಾವು ಮಕ್ಕಳು ಹಠ ಹಿಡಿದು ಹೊಸ ಬಟ್ಟೆ, ಚಪ್ಪಲಿ ಹಾಕಿಸಿದ್ದು ನೆನಪಿದೆ. ಹೆಂಡತಿ ಮಕ್ಕಳು ಮಾತ್ರ ಯಾವುದಕ್ಕೂ ಕೊರತೆಯಾಗದಂತೆ ಝಂ ಎಂದು ಇರಬೇಕೆಂಬುದು ಅವನ ಮಹದಾಸೆ. ನಾವು ಅಮ್ಮ, ಮಕ್ಕಳು ರಾತ್ರಿಯ ಕತ್ತಲಲ್ಲಿ ನಗಾಡುತ್ತಾ ಟಿವಿಯನ್ನು ನೋಡುತ್ತಿದ್ದರೆ ಅವನು ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದ. ಬಹುಶಃ ಅವನು ಸೃಷ್ಟಿಸಿದ ಸ್ವರ್ಗದಲ್ಲಿ ಕುಟುಂಬ ನೆಮ್ಮದಿಯಾಗಿ ನಗುತ್ತಾ ಇರುವುದನ್ನು ಕಂಡು ಸಂತೋಷಿಸುತ್ತಿದ್ದ ಎನಿಸುತ್ತದೆ. ಅಮ್ಮ ಕೈಕೊಟ್ಟು ಹೋದ ಘಳಿಗೆಯಿಂದಲೂ ಸಹ ಮಕ್ಕಳಿಗೆ, ಮೊಮ್ಮಕ್ಕಳಿಗೆ ನಾನಿದ್ದೇನೆ ಎಂಬ ಧೈರ್ಯ ತುಂಬುವ ಜೀವಿ. ಈಗಲೂ, ಅಂದರೆ ಎಪ್ಪತ್ತರ ವಯಸ್ಸಿನಲ್ಲೂ ದುಡಿಮೆಗೆ ಪಕ್ಕಾಗಿರುವ ಜೀವ. ಲೇಖಕರ ಪುಸ್ತಕ ಓದುತ್ತಾ ಹೋದ ಹಾಗೆ ನಮ್ಮಪ್ಪನ ನೆರಳು ಪುಸ್ತಕದುದ್ದಕ್ಕೂ ಹಿಂಬಾಲಿಸಿದಂತೆ ಕಂಡು ಬಂದಿದ್ದು ನೂರಕ್ಕೆ ನೂರು ಸತ್ಯ. ಮತ್ತೇನು ಹೇಳಲಿ, ಹೀಗೆ ನನ್ನಪ್ಪನ ಹಾಗೆ ಅದೆಷ್ಟು ಶಾಪಗ್ರಸ್ಥ ಗಂಧರ್ವರಿದ್ದಾರೋ ಈ ಭೂಮಿ ಮೇಲೆ, ಅವರೆಲ್ಲರಿಗೊಂದು ಸಾಷ್ಟಾಂಗ ನಮನ. ಅಂಥಹ ಶಾಪಗ್ರಸ್ಥ ಗಂಧರ್ವರನ್ನು ಜಗಕ್ಕೆ ಪರಿಚಯ ಮಾಡಿಸಲು ಹೊರಟಿಹ ಲೇಖಕರಿಗೊಂದು ಮನದಾಳದ ಪ್ರೀತಿಯ ಧನ್ಯವಾದ.

-ನಳಿನಿ. ಟಿ. ಭೀಮಪ್ಪ, ಧಾರವಾಡ

6 Responses

  1. km vasundhara says:

    ನಳಿನಿ ಟಿ ಭೀಮಪ್ಪನವರೇ.. ಪುಸ್ತಕದ ಸಾರಾಂಶ ನೀಡುವ ಜೊತೆಗೆ ನಿಸ್ವಾರ್ಥ ದೈವದಂತಿರುವ ನಿಮ್ಮ ತಂದೆಯವರ ಬಗ್ಗೆ ಗೌರವದಿಂದ ನೆನೆದು ಬರೆದಿರುವುದು ಬಹಳ ಸಾರ್ಥಕವಾಗಿದೆ. ಒಂದು ಪುಸ್ತಕ ಓದುಗನಿಗೆ ಹೇಗೆ ಸ್ಪಂದಿಸುತ್ತದೆ ಎನ್ನುವುದೂ ಸಹ ಪುಸ್ತಕದ ಜನಪ್ರಿಯತೆಗೆ ಸಾಕ್ಷಿಯಾಗುತ್ತದೆ. ಅಭಿನಂದನೆಗಳು ನಿಮಗೆ.

  2. ನಯನ ಬಜಕೂಡ್ಲು says:

    ಬಹಳ ಚೆನ್ನಾಗಿದೆ ಕೃತಿ ಪರಿಚಯ. ಪುಸ್ತಕ ಓದಿದ ನಂತರ ನಿಮಗನ್ನಿಸಿದ ಭಾವನೆಗಳನ್ನೂ ಬಹಳ ಚೆನ್ನಾಗಿ ಬರೆದಿದ್ದೀರಿ . ಸಂತೋಷ್ ಮೆಹಂದಳೆಯವರ ಇಂತಹುದೇ ಇನ್ನೊಂದು ಅದ್ಭುತ ಕೃತಿ “ಅವಳು ಎಂದರೆ “. ಅದರಲ್ಲಿ ಅಮ್ಮಂದಿರ ಬದುಕು ಅನಾವರಣಗೊಂಡಿದೆ . Nice madam ji

  3. Shankari Sharma says:

    ಅನಿಸಿಕೆ ಸೊಗಸಾಗಿ ಮೂಡಿ ಬಂದಿದೆ.

  4. ನಿಮ್ಮ ಅಭಿಪ್ರಾಯ ಓದಿದ ಮೇಲೆ ನನಗೂ ಆ ಗಂಧರ್ವನನ್ನು ಓದಬೇಕು ಅನಿಸ್ತಿದೆ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: