ನಾ ಕಂಡಂತೆ ಮೈಸೂರು ..

Share Button

ಆರು ತಿಂಗಳ ಹಿಂದೆ ಕೊಚ್ಚಿಯ ಐ.ಟಿ ಕಂಪನಿಯೊಂದರಲ್ಲಿದ್ದ ನನಗೆ ಅನಿರೀಕ್ಷಿತವಾಗಿ ಉನ್ನತ ವ್ಯಾಸಂಗಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ದೊರಕಿದಾಗ ಆದ ಆಶ್ಚರ್ಯ ಅಷ್ಟಿಷ್ಟಲ್ಲ. ಅದುವರೆಗೆ ಕೇರಳದ ಬೇರೆ ಬೇರೆ ಕಡೆ ವ್ಯಾಸಂಗ ಮಾಡಿದ್ದ ನನಗೆ ಅಲ್ಲಿಯ ಭಾಷೆ, ಜನ, ರೀತಿ ನೀತಿಗಳೊಂದಿಗೆ ಸಾಕಷ್ಟು ಹೊಂದಾಣಿಕೆಯಾಗಿತ್ತು. ಮೈಸೂರಿಗೆ ವರ್ಷದ ಹಿಂದೆ ಸ್ನೇಹಿತರ ಜೊತೆ ಟ್ರಿಪ್ ಬಂದದ್ದು ಬಿಟ್ಟರೆ ಅಲ್ಲಿಯ ಬಗ್ಗೆ ಬೇರೇನೂ ಗೊತ್ತಿರಲೂ ಇಲ್ಲ. ಸಾಂಸ್ಕೃತಿಕ ನಗರಿ ಎಂದು ಹೆಸರುವಾಸಿಯಾದ ಮೈಸೂರು ಎಂದಾಗ ಅಲ್ಲಿಯ ಜನ, ರೀತಿ ನೀತಿ ಇವುಗಳ ಬಗ್ಗೆ ಸಣ್ಣ ಕುತೂಹಲವೂ ಇತ್ತು.

ಹಲವು ವಿಷಯಗಳನ್ನು ಪುಸ್ತಕಗಳ ಮೂಲಕ ಅಥವಾ ಗೂಗಲ್ ಮಾಡಿ ಅರಿತಿದ್ದರೂ, ನೇರವಾಗಿ ನೋಡಿದಾಗಲೇ ನಿಜವಾದ ಬಗೆಯನ್ನರಿಯುವುದು. ಪ್ರಥಮ ಬಾರಿಗೆ ಕರ್ನಾಟಕದ ಯೂನಿವರ್ಸಿಟಿಯೊಂದರಲ್ಲಿ ಕಲಿಯುವ ಸಣ್ಣದೊಂದು ಅಳುಕಿನೊಂದಿಗೇ ಮೈಸೂರಿಗೆ ಬಂದಿಳಿದಾಗ ನನಗೆ ಮೊತ್ತ ಮೊದಲಿಗೆ ಕಾಣಸಿಕ್ಕಿದ್ದು ಹೂ ಹಣ್ಣುಗಳನ್ನೂ ವಿವಿಧ ಸೊಪ್ಪುಗಳನ್ನೂ ಮಾರುವ ಹೆಂಗಳೆಯರು. ಹೂವುಗಳನ್ನು ಕೊಳ್ಳುವ, ಮುಡಿಯುವ ಮಂದಿಗೂ ಕೊರತೆಯಿಲ್ಲ. ಸಾಂಸ್ಕೃತಿಕ ನಗರಿಯಲ್ಲಿ ಸಂಸೃತಿಯನ್ನು ಅವರವರದೇ ರೀತಿಯಲ್ಲಿ ಉಳಿಸುವ ಮಂದಿಯನ್ನು ಕಂಡು ಆಶ್ಚರ್ಯ, ಒಂದು ರೀತಿಯಲ್ಲಿ ಸಂತಸವಾಯಿತು.

ಜಟಕಾಗಳು, ಟಾಂಗಾಗಳು, ಹಳೆಯಕಾಲದ ಗಟ್ಟಿಮುಟ್ಟಾದ ರಾಜವೈಭವದ ಕಟ್ಟಡಗಳು, ಭಾರತೀಯತೆಯನ್ನು ಬಿಂಬಿಸುವಂತೆ ವೇಷ ಧರಿಸಿದ ನಾರೀಮಣಿಯರು, ಇವೆಲ್ಲವೂ ನೋಡಲು ಎಷ್ಟು ಚೆನ್ನ!

 

Mysore universityಮೈಸೂರು ಯೂನಿವರ್ಸಿಟಿ ಅಂತೂ ಒಂದು ಅರಮನೆಯನ್ನೇ ಹೊಲುತ್ತಿರುವಂತೆ ಭಾಸವಾಗುತ್ತದೆ. ೧೯೧೬ ರಲ್ಲಿ ಅಂದಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟ ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕದ ಮೊತ್ತಮೊದಲ ಹಾಗೂ ಭಾರತದ ಆರನೆಯ ವಿಶ್ವವಿದ್ಯಾಲಯ. ಅದನ್ನು ಪೂರ್ಣವಾಗಿ ನೋಡಲೇ ತುಂಬಾ ದಿನಗಳು ಹಿಡಿದುವು.

 

 

roadಕಾಕತಾಳೀಯವೆಂಬಂತೆ ನಾನು ಮೈಸೂರಿಗೆ ತಲುಪಿದುದು ನಾಡಹಬ್ಬ ದಸರಾಕ್ಕೆ ಕೆಲವು ದಿನ ಮುಂಚಿತವಾಗಿ. ನಾಡು ಪೂರ್ತಿ ಸಂಭ್ರಮದಿಂದ ಪಾಲುಗೊಳ್ಳುವ ಹಬ್ಬವನ್ನು ನೋಡುವುದೇ ಒಂದು ಹಬ್ಬ! ದಸರಾ ಹಬ್ಬವಂತೂ ಪ್ರತಿ ಮನೆ ಮನೆಯ ಹಬ್ಬವೆಂಬಂತೆ ಆಚರಿಸುವ ಜನ, ಪ್ರತಿ ಬೀದಿಯಲ್ಲೂ, ಎಡ, ಬಲ, ಮೇಲಕ್ಕೆ, ಎಲ್ಲಿ ನೋಡಿದರೂ ಬೆಳಕಿನ ಚಿತ್ತಾರ, ದೀಪಗಳ ರಂಗವಲ್ಲಿ! ಬೆಳಕಿನ, ರಂಗಿನೋಕುಳಿಯ ಮಧ್ಯೆ ಪ್ರಮುಖ ಬೀದಿಗಳಾದ ದೇವರಾಜ ಅರಸ್ ರಸ್ತೆ ಹಾಗೊ ಸಯ್ಯಾಜಿ ರಾವ್ ರಸ್ತೆಗಳಲ್ಲಿ ಅತ್ತಿಗೆ, ಅಣ್ಣನ ಜೊತೆ ಪಯಣಿಸಿದಾಗ ಖುಶಿಯೆನಿಸಿತ್ತು 🙂

 

ದಸರಾ ರಾತ್ರಿಗಳಲ್ಲಿ ಅರಮನೆಯ ವೈಭವ, ನಾವೇನೂ ಅರಮನೆಗೆ ಕಮ್ಮಿಯಿಲ್ಲವೆಂಬಂತೆ ಕಳೆಗಟ್ಟುವ ಅಂಗಡಿಗಳು, ಮಾಲ್ ಗಳು, ಮನೆಗಳು ಎಲ್ಲವೂ ಒಂದಕ್ಕಿಂತ ಒಂದು ಮಿಗಿಲು! ಎತ್ತ ಕಣ್ಣು ಹಾಯಿಸಿದರೂ ಒಂದಲ್ಲ ಒಂದು ವಿಶೇಷವು ಇದ್ದೇ ಇರುತ್ತಿತ್ತು! ನೂರಾರು ಖ್ಯಾತನಾಮ ಕಲಾವಿದರು ಮೈಸೂರಿಗೆ ಆಗಮಿಸಿ ಸಂಗೀತ, ನೃತ್ಯಗಳಿಂದ ಮನಸೂರೆಗೊಳ್ಳುತ್ತಿದ್ದರೆ, ಅದನ್ನು ನೋಡಲು ವಯೋಭೇದವಿಲ್ಲದಂತೆ ಆಗಮಿಸುವ ಕಲಾರಾಧಕ ಮಂದಿ. ನಾಡಹಬ್ಬವನ್ನು ನಗರಿಯಿಡೀ ಜೊತೆ ಸೇರಿ, ಸಂಭ್ರಮಿಸಿ ಆಚರಿಸುವ ರೀತಿ ವಿಶೇಷ.

ಯುವ ದಸರಾ, ಮಕ್ಕಳ ದಸರಾ, ರೈತ ದಸರಾ, ಮಹಿಳೆಯರ ದಸರಾ, ಗ್ರಾಮ ದಸರಾ, ಯೋಗ ದಸರಾ, ಕ್ರೀಡಾ ದಸರಾ, ದಸರಾ ಕವಿಗೋಷ್ಠಿ, ದಸರಾ ಗಾಳಿಪಟ ಉತ್ಸವ, ಆಹಾರ ಮೇಳ, ಕರ್ಜನ್  ಪಾರ್ಕ್ ನಲ್ಲಿ ವಿವಿಧ ಮನಮೋಹಕ  ಹೂಗಳಿಂದ ಮಾಡಿದ ಆನೆ,ಸಿಂಹಾಸನ , ತರಾವರಿ ಆಲಂಕಾರಿಕೆ ಫಲ-ಪುಷ್ಪ ಜೋಡಣೆಗಳು, ಚಲನಚಿತ್ರೋತ್ಸವ , ವಸ್ತು ಪ್ರದರ್ಶನ, ಇತ್ಯಾದಿ ಇತ್ಯಾದಿ! ಪ್ರತಿ ವಯೋಮಾನದ ಜನರಿಗೂ ಆಕರ್ಷಣೀಯವಾಗುವಂತೆ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಸಂಘಟಿಸಿ ನಾಡನ್ನಿಡೀ ಹಬ್ಬದ ಉತ್ಸಾಹದಲ್ಲಿ ಮುಳುಗಿಸುವ ಪರಿ ಸುಂದರ. ಜಂಬೂ ಸವಾರಿ ಹಾಗೂ ಬನ್ನಿಮಂಟಪದಲ್ಲಿ ನಡೆವ ಪಂಜಿನ ಕವಾಯತು ಅವರ್ಣನೀಯ. ಮುಖ್ಯವಾಗಿ ವಯಸ್ಸು, ಜಾತಿ, ಮತ ಬೇಧವಿಲ್ಲದೆ ಊರೂರುಗಳಿಂದ ಬಂದು ಹಬ್ಬಕ್ಕೆ ಕಳೆಯನ್ನೀಯುವ ಮಂದಿ ಹೆಚ್ಚು ಆಕರ್ಷಣೀಯ ಎನಿಸುತ್ತಾರೆ.

 

flower simhasana

 

floral ambari

 

 

palace

 

jamboo savari

 

 

 

ಪರ ಊರುಗಳಿಂದ ದಸರಾ ವೈಭವವನ್ನು ವೀಕ್ಷಿಸಲು ಮೈಸೂರಿಗೆ ಆಗಮಿಸುವ ಜನರು ದೀಪವಾಳಿ ಆಚರಣೆ ಮುಗಿಸಿಕೊಂಡೇ ವಾಪಸಾಗುವರೆನ್ನುವುದು ಪ್ರತೀತಿ.ನಿಜಕ್ಕೂ ದಸರಾ ವೈಭವವು ವೀಕ್ಷಿಸಿದಷ್ಟೂ ಮುಗಿಯದು, ಮನದಣಿಯದು. ಒಕ್ಟೋಬರಿನಲ್ಲಿ ಆರಂಭಗೊಳ್ಳುವ ದಸರಾ ಹಬ್ಬ ಮುಗಿದರೂ ದಸರಾ ವಸ್ತು ಪ್ರದಶನವು ಡಿಸೆಂಬರ್ ಅಂತ್ಯದ ವರೆಗೂ ಇರುವುದು.

ದಸರಾ ಸಂದರ್ಭದಲ್ಲಿ ಮಾತ್ರವಲ್ಲ, ದಿನೇ ದಿನೇ ಕಲೆಯನ್ನು ಆರಾಧಿಸುವ, ಪೋಷಿಸುವ ಕಾರ್ಯಕ್ರಮಗಳು ಇಲ್ಲಿ ಸರ್ವೇಸಾಧಾರಣ ಎನಿಸುತ್ತದೆ. ಪ್ರತಿ ವಾರಾಂತ್ಯದಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮಗಳು, ಅವನ್ನು ನಡೆಸಿಕೊಡುವ ಹತ್ತು, ಹಲವು ಕಲಾ ಸಂಸ್ಥೆಗಳು, ಮುಖ್ಯವಾಗಿ ಕಲಾಸಕ್ತ ಜನ, ಇವರಿಗೆ ಸಾಥ್ ನೀಡುವ ಕಲಾವಿದರೂ ಸಾಕಷ್ಟು ಮಂದಿ. ಮೈಸೂರೊಂದರಲ್ಲೇ ನೂರಾರು ಮಂದಿ ಉತ್ತಮ ಕಲಾವಿದರಿರುವುದು ಇಲ್ಲಿಯ ಮಂದಿಯ ಕಲೆಯ ಬಗೆಗಿನ ಒಲವನ್ನು ಎತ್ತಿ ಹಿಡಿಯುತ್ತದೆ. ಲೋಕಕ್ಕೆ ಹಲವಾರು ಶ್ರೇಷ್ಟ ಕಲಾವರ್ಯರನ್ನು, ಸಾಹಿತಿಗಳನ್ನು ಬಹುಮಾನಿಸಿದ ಮೈಸೂರಿನಲ್ಲಿ ಹಿರಿ-ಕಿರಿಯ ಕಲಾವಿದರು ಬಹಳಷ್ಟು. ಸಾಂಸೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ, ಚಪ್ಪಾಳೆಗಳಿಂದ ಕಡೆಯತನಕ ಪ್ರೋತ್ಸಾಹಿಸಿ, ಕಡೆಯತನಕ ಆಸಕ್ತಿಯಿಂದ ಕೂರುವ ಸದಭಿರುಚಿಯ ಜನರನ್ನು, ತುಂಬಿದ ಸಭಾಂಗಣಗಳನ್ನು ಕಂಡಾಗ ನಮ್ಮಲ್ಲಿ ಕಲೆಯ, ಸಂಸೃತಿಯ ಬಗ್ಗೆ ಅಸಡ್ಡೆ ಇಲ್ಲ, ಬದಲಾಗಿ ಆಸಕ್ತರ, ಅರಿವುಳ್ಳವರ ದೊಡ್ಡದೊಂದು ಸಮೂಹವೇ ಇದೆಯೆನಿಸುವುದಂತೂ ಸತ್ಯ.

‘ಯೋಗ’- ಮೈಸೂರು ಪ್ರಸಿದ್ಧಿಯನ್ನು ಪದೆದಿರುವಂತಹ ಇನ್ನೊಂದು ಕ್ಷೇತ್ರ. ಮೈಸೂರು ಯೋಗ ಸಂಸ್ಕೃತಿ ಪ್ರಾಚೀನ ಕಾಲದಿಂದಲೂ ಆಧುನಿಕ ಯುಗದಲ್ಲಿ ನುಸುಳಿದೆ ಎಂದು ಸಮೃದ್ಧ ಸಂಪ್ರದಾಯವು ತಿಳಿಸುತ್ತದೆ. ಹಲವಾರು ಯೋಗ ತರಬೇತಿ ಶಾಲೆಗಳು ಇಲ್ಲಿನ ಹಾಗೂ ವಿದೇಶೀ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ಇಲ್ಲೂ ವಯೋಬೇಧವಿಲ್ಲದೆ ಆಗಮಿಸುವವರು ನೂರಾರು ಮಂದಿ.

ಕಲೆ, ಸಾಹಿತ್ಯದ ಬಗೆಗಿನ ಸದಭಿರುಚಿಯ, ಪ್ರಕೃತಿ-ಪ್ರಿಯರ, ವಿದ್ಯಾವಂತರ ದೊಡ್ಡದೊಂದು ಸಮೂಹವೇ ಇರುವಂಥಲ್ಲಿ ಇನ್ನೊಂದೆಡೆ ಈ ಎಲ್ಲಾ ವಿಚಾರಗಳಲ್ಲೂ ಹಿಂದುಳಿದ ಒಂದು ವರ್ಗದ ಜನರಿರುವುದೂ ನಿಜ. ಬಹುಶಃ ಸರಕಾರದ ಎಲ್ಲಾ ಯೋಜನೆಗಳು, ವಿದ್ಯಾಭ್ಯಾಸದ ಅವಕಾಶ, ಇವೆಲ್ಲವೂ ಅಡೆಚಣೆಗಳನ್ನೆದುರಿಸದೆ ಅರ್ಹರಿಗೆ ತಲುಪಿದರೆ ಸಮಾಜವು ಸುಧಾರಿಸಬಹುದೆನೋ!

ಮುಂದೆ ಮೈಸೂರು ಕನ್ನಡವನ್ನು ಉಚ್ಚರಿಸುವ ಶತಪ್ರಯತ್ನ ಮಾಡಿದ ನನಗೆ ಅದೊಂದು ಕ್ಲಿಷ್ಟಸಾಧ್ಯವಾದ ಕೆಲಸವೆನಿಸಿದ್ದು ಸುಳ್ಳಲ್ಲ!!! ಮೈಸೂರಿಗೆ ಬಂದು ಸ್ವಲ್ಪ ಸಮಯದಲ್ಲೇ ಬಹಳಷ್ಟು ಖ್ಯಾತ ಸಂಗೀತ ನೃತ್ಯ ಕಲಾವಿದರ ಕಾರ್ಯಕ್ರಮಗಳನ್ನೂ, ಮೇರು ಸಾಹಿತಿಗಳನ್ನೂ ಕಣ್ಣಾರೆ ನೋಡಿದ ಸಂತೋಷವಿದೆ. ಈ ಶಾಂತ, ಸುಂದರ, ಸಾಂಸ್ಕೃತಿಕ ನಗರಿ ಯಾವತ್ತಿಗೂ ಹೀಗೇ ಇರಲಿ!

 

– ಶ್ರುತಿ ಶರ್ಮಾ,
ಎಮ್. ಟೆಕ್ ವಿದ್ಯಾರ್ಥಿನಿ, ಮೈಸೂರು ವಿಶ್ವವಿದ್ಯಾನಿಲಯ.

7 Responses

  1. ವಿದ್ಯಾಬ್ಯಾಸದ ಜೊತೆಗೆ ಸೊಗಸಾದ ಲೇಖನ ವನ್ನು ಬರೆದಿದ್ದೀರಿ .ಮೈಸೂರಿನ ಅನುಭವವನ್ನು ನಮ್ಮಜೊತೆ ಹ೦ಚಿಕೊ೦ಡಿದೀರಿ ತುಂಬಾ ಚೆನ್ನಾಗಿತ್ತು.ಬಿಡುವಾದಾಗ ಲೇಖನವನ್ನು ಮು೦ದುವರಿಸಿರಿ .

  2. jayashree says:

    Nice article Shruthi. Good vocabulary and serious insights. keep it up!

  3. Chandravathi says:

    ಅಲ್ಪಾವಧಿಯಲ್ಲಿ ಮೈಸೂರಿನ ಬಗ್ಗೆ ಬಹಳಷ್ಟು ಅರಿತುಕೊಂಡು ತುಂಬಾ ಸೊಗಸಾಗಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದೀರಿ . ಮೈಸೂರಿನಲ್ಲಿ ಹಲವಾರು ವರ್ಷ ಕಳೆದ ನನಗೆ ದಸರಾ ವೈಭವ ಪುನ: ನೋಡಿದಂತಾಯಿತು.
    ನಿಮ್ಮ ವಿದ್ಯಾಭ್ಯಾಸಕ್ಕೂ, ಬರವಣಿಗೆಗೂ ಶುಭಾಶಯಗಳು.

  4. Ashok Mijar says:

    ಮೈಸೂರಿನ ಬಗ್ಗೆ ಎಷ್ಟು ಬರೆದರೂ ಮುಗಿಯುವುದಿಲ್ಲ. ತುಂಬಾ ಖುಷಿಯಾದ ಲೇಖನ. ಹಲವಾರು ಸ್ಥಳಗಳನ್ನು ವಿವರಿಸಿ ಸುಧೀರ್ಘ ಲೇಖನವೊಂದನ್ನು ಬರೆಯಿರಿ. ಓದಲು ಕಾಯುತಿರುತ್ತೇವೆ.

  5. Krishnaveni Kidoor says:

    ಸದಭಿರುಚಿಯ ಜನರಿಂದ ತುಂಬಿದ ಸಭಾಂಗಣ , ಆಸಕ್ತರ ಅರಿವುಳ್ಳವರ ಸಮೂಹವೇ ಇದೆ ಎನ್ನಿಸುವುದು ಸತ್ಯ .ತುಂಬ ಉತ್ತಮವಾದ ವಾಕ್ಯ ಮಾತು .ನಾಡು ನುಡಿ ಯನ್ನು ಮೆಚ್ಚಿ ಗೌರವಿಸಬೇಕು .ಶರ್ಮಾಜಿ ಇನ್ನೂನಿರೀಕ್ಷಿಸಬಹುದಾ??????????

  6. Shruthi Sharma says:

    ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು 🙂

  7. ಮಾಲಾ says:

    ಮೈಸೂರು ಚಂದದ ಊರು. ಈ ಊರ ಬಗ್ಗೆ ಬರೆದದ್ದು ಓದಿ ಮೆಚ್ಚುಗೆಯಾಯಿತು.

Leave a Reply to jayashree Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: