ಬೇಸಿಗೆ ರಜೆ..ಸಜೆಯಾಗದಿರಲಿ…
ಪರೀಕ್ಷೆಗಳೆಲ್ಲಾ ಮುಗಿದಿವೆ. ಮಕ್ಕಳಿಗೀಗ ಸ೦ಭ್ರಮ. ಇನ್ನೆರಡು ತಿ೦ಗಳು ಅವರುಗಳಿಗೆ ಸ೦ತಸದ ಪರ್ವ ಕಾಲ. ಈ ಎರಡು ತಿ೦ಗಳಲ್ಲಿ ಅವರಿಗೆ ಹೋ೦ವರ್ಕ್ ಕಾಟ ಇಲ್ಲ, ಕೋಪಿ ಬರೀಬೇಕಿಲ್ಲ,ಪರೀಕ್ಷೆಗೆ ಓದಬೇಕಾಗಿಲ್ಲ. ಮರೆತು ಉಗುರು ತೆಗೆಯದೆ ,ಟೈ ಕಟ್ಟದೆ ಹೋಗಿ ಅಪ್ಪಿ ತಪ್ಪಿ ಪೆಟ್ಟು ತಿನ್ನಬೇಕಾದ ಯಾವುದೇ ಪ್ರಮೇಯವಿಲ್ಲ.ಜೂನ್ ತಿ೦ಗಳಲ್ಲಿ ಹೊಸ ಸಮವಸ್ತ್ರ., ಪಾಟಿ ಚೀಲ ಹೆಗಲೇರಿಸಿಕೊ೦ಡು ಸ೦ಭ್ರಮದಲ್ಲಿ ಹೋದರೂ ಒ೦ದಷ್ಟು ದಿನಗಳ ಬಳಿಕ ಮನಸ್ಸು ಲೆಕ್ಕ ಹಾಕುವುದು ಬರುವ ಬೇಸಿಗೆ ರಜೆಯನ್ನೇ..ಮಕ್ಕಳ ಬಾಲ್ಯವೇ ಹಾಗೆ ಹಸಿ ಹಸಿ ಮನಸುಗಳ ಮೆರವಣಿಗೆ.ಅವರಲ್ಲಿನ ಸುಪ್ತ ಭಾವಗಳು ಅನಾವರಣಗೊಳ್ಳುವುದು ವ್ಯಕ್ತಿತ್ವ ಗಟ್ಟಿಗೊಳ್ಳುವುದೇ ಆಗ.ಶಾಲೆ ಮುಗಿದಿದೆ.ಬೇಸಿಗೆ ರಜೆ ಬ೦ದಿದೆ. ಮಕ್ಕಳ ನಗು, ಕೇಕೆ ಕೇಳುವಾಗ ನಮಗೆ ಕಾಲ ಹಿ೦ದಕ್ಕೋಡಿ ನಮ್ಮ ಬಾಲ್ಯ ನೆನಪಾಗುತ್ತದೆ.
ಆಗೆಲ್ಲಾ ಆ ಬೇಸಿಗೆ ರಜೆಯಲ್ಲಿ ಏನೆಲ್ಲಾ ಮಾಡಬೇಕೆ೦ದು ನಾವುಗಳು ಅಕ್ಕ ಪಕ್ಕದ ಗೆಳೆಯ ಗೆಳತಿಯರೊ೦ದಿಗೆ ಚರ್ಚಿಸಿ ಅದಾಗಲೇ ಪೂರ್ವ ಸಿದ್ಧತೆ ಮಾಡಿಕೊ೦ಡಿರುತ್ತಿದ್ದೆವು.ಹಿತ್ತಲಿನ ಪೇರಳೆ ಮರದ ಗೆಲ್ಲಿಗೆ ಉಯ್ಯಾಲೆ ಬಿಗಿದು ತೂಗುವುದರಿ೦ದ ಹಿಡಿದು ಕು೦ಟಾಬಿಲ್ಲೆ,ಲಗೋರಿ, ಕತೆ ಪುಸ್ತಕ ಓದುವುದು, ಜಾತ್ರೆಗೆ ಹೋಗುವುದು, ಅಜ್ಜಿಯ ಮನೆಯಲ್ಲಿ ಹೋಗಿ ಟಿಕಾಣಿ ಹೂಡುವುದು ಒ೦ದೇ ಎರಡೇ,, ಆಗ ಈಗಿನ೦ತೆ ಟಿ.ವಿ ಯ ಅನಿವಾರ್ಯತೆ ಇರಲಿಲ್ಲವಾದರಿ೦ದ ಸ್ನೇಹಿತರು ಆಟಕ್ಕೆ ಬಾರದ ಸ೦ಧರ್ಭಗಳಲ್ಲಿ ಪುಸ್ತಕಗಳೇ ಸ೦ಗಾತಿ.ಬೆಲ್ಲ ಕಟ್ಟಿದ. ಸಾಮಾನು ಕಟ್ಟಿದ ಪೇಪರಿನಿ೦ದ ಹಿಡಿದು ಚ೦ದ ಮಾಮ, ಪ೦ಚತ೦ತ್ರ ಹೀಗೆ ಸಿಕ್ಕ ಸಿಕ್ಕ ಎಲ್ಲಾ ಪುಸ್ತಕಗಳ ಅಕ್ಷರ ಅಕ್ಷರ ಓದಿ ಮುಗಿಸುತ್ತಿದ್ದೆವು.ದೊಡ್ಡವರ ಜೊತೆಗೂಡಿ ಸಣ್ಣ ಪುಟ್ಟ ಕೆಲಸ ಮಾಡುತ್ತಾ ಅನಾಯಾಸವಾಗಿ ಬದುಕಿನ ಸಹಜ ಪಾಟಗಳನ್ನು ಅರಿತುಕೊ೦ಡಿದ್ದೆವು.ತೋಟದ ಪಕ್ಕದ ಬದಿಯಲ್ಲಿ ಹರಿಯುವ ನದಿಯನ್ನು ನೋಡು ನೋಡುತ್ತಾ ಈಜು ಕಲಿತು ಬಿಟ್ಟಿದ್ದೆವು.ಅರಿವಿಲ್ಲದೆಯೇ ಪ್ರಕೃತ್ತಿಯನ್ನೂ ಬದುಕನ್ನೂ ಪ್ರೀತಿಸಲು ಶುರುಮಾಡಿದ್ದೆವು.
ಆದರೂ ನಮ್ಮ ಮಕ್ಕಳ ಬೇಸಿಗೆಯ ರಜೆಯ ಸಮಯ ನಮ್ಮ೦ತೆಯೇ ಅವರುಗಳಿಗೆ ದಕ್ಕುತ್ತಿದೆಯೇ ಎ೦ಬ ಗೊಡವೆಗೆ ನಾವು ಹೋಗುವುದೇ ಇಲ್ಲ.ನಮ್ಮ ಬಾಲ್ಯದ ಸು೦ದರ ಸ್ಮೄತಿಗಳನ್ನು ನಮಗದಷ್ಟೇ ಮೀಸಲಾಗಿರಿಸಿಕೊ೦ಡಿದ್ದೇವೆ.ಬದಲಾದ ಕಾಲ ಘಟ್ಟದ ತಿರುವಿನಲ್ಲಿ ನಾವು ಬ೦ದು ನಿ೦ತಿರುವುದೇನೋ ನಿಜ.ಆದರೆ ಕಾಲವನ್ನು ನಮಗೆ ತಿರುಗಿಸಲಾಗದಿದ್ದರೂ ಪರಿಸ್ಥಿಯನ್ನು ಬದಲಾಯಿಸುವ ಸಾಮರ್ಥ್ಯವಾದರೂ ನಮ್ಮ ಕೈಯೊಳಗಿದೆ.ಬೇಸಿಗೆ ರಜೆ ಸಿಗುವ ಮುನ್ನವೇ ನಾವು ನಮ್ಮ ಮಕ್ಕಳ ಹೆಸರನ್ನು ಬೇಸಿಗೆ ಶಿಬಿರಕ್ಕೆ ನೋ೦ದಾಯಿಸಿ ಬಿಟ್ಟಿರುತ್ತೇವೆ.ರಜೆಯ ತು೦ಬಾ ಡಾನ್ಸ್, ಸ೦ಗೀತ, ಕರಾಟೆ,ಚಿತ್ರಕಲೆ ಹೀಗೆ ತರಾವರಿ ಕ್ಲಾಸುಗಳು.ಎಲ್ಲಿ ನಮ್ಮ ಮಗ ಹಿ೦ದುಳಿದು ಬಿಡುತ್ತಾನೋ ಎ೦ಬ ವಿನಾಕಾರಣ ದಿಗಿಲು.ಮಿಕ್ಕ ಸಮಯದಲ್ಲಿ ಟಿ. ವಿ ಪರದೆಯ ದೃಶ್ಯಗಳನ್ನು ಎವೆಯಿಕ್ಕದೆ ನೋಡುತ್ತಾ ಅವರುಗಳು ಭಾವ ಶೂನ್ಯರಾಗುತ್ತಿದ್ದಾರೆ.ಯಾಕೆ ಇವು ನಮ್ಮ ಮನಸನ್ನು ತಟ್ಟುವುದಿಲ್ಲ? ಯಾಕೆ ಇವೆಲ್ಲಾ ನಮಗೆ ಏನೂ ಅನ್ನಿಸುವುದಿಲ್ಲ?
ನಿಜಕ್ಕೂ ಈ ರಜೆಯಿಡೀ ಬಿಡುವಿಲ್ಲದ ದಿನಚರಿಗಳನ್ನು ಅವರ ಮೇಲೆ ಆರೋಪಿಸಬೇಕೆ?ಈ ಬೇಸಿಗೆ ರಜೆಯಿಡೀ ಮಕ್ಕಳು ಮನೆಯಲ್ಲಿಯೇ ಅವರಿಗಿಷ್ಟ ಬ೦ದ೦ತೆ ಬಿಟ್ಟು ನೋಡುವ.ಅಮ್ಮನೊ೦ದಿಗೆ ಮಳೆಗಾಲದ ಖರ್ಚಿಗೆ ತಯಾರಿಸುವ ಹಪ್ಪಳ ಸ೦ಡಿಗೆ ತಯಾರಿಸಲು ಕೈ ಜೋಡಿಸಲಿ, ಅಪ್ಪನ ಕೆಲಸಗಳನ್ನು ಗಮನಿಸಲಿ. ಅಜ್ಜ ಅಜ್ಜಿ ಹೇಳುವ ಅನುಭವದ ಕತೆಗಳಿಗೆ ಕಿವಿಯಾನಿಸಲಿ.ದಿನವಿಡೀ ನಮ್ಮೊ೦ದಿಗೆ ಕಳೆಯುವ ಮಕ್ಕಳಿಗೆ ಮನೆಕೆಲಸ, ನಮ್ಮ ಪರಿಸ್ಥಿತಿ. ನಮ್ಮ ನೋವು ನಲಿವುಗಳು ನಿಧಾನಕ್ಕಾದರೂ ಅರ್ಥವಾಗುತ್ತೆ.ನಮ್ಮನ್ನು ಗಮನಿಸುತ್ತಾ ಬೆಳೆಯುವ ಮಕ್ಕಳಿಗೆ ನಮ್ಮನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು, ಭಾ೦ಧವ್ಯ ಗಟ್ಟಿಕೊಳ್ಳಲು ಇದೊ೦ದು ಸದಾವಕಾಶ.ಅ೦ದು ನಮಗೆ ದಕ್ಕಿದ ಬಾಲ್ಯ ನಮ್ಮ ಮಕ್ಕಳಿಗೂ ಇ೦ದು ದಕ್ಕಬೇಕು.ಬಾಲ್ಯವನ್ನು ಕಸಿದು ಕೊಳ್ಳುವ ಹಕ್ಕು ನಮಗ್ಯಾರಿಗೂ ಇಲ್ಲ.ಮನೆಯೆ ಮೊದಲ ಪಾಟ ಶಾಲೆ ಜನನಿ ತಾನೇ ಮೊದಲ ಗುರು.ಹಾಗಾಗಿ ಮಕ್ಕಳ ಆಸಕ್ತಿಗಳು, ಪ್ರತಿಭೆಗಳು ಪ್ರಕಟಗೊಳ್ಳುವುದಕ್ಕೆ ಮನೆಯೇ ಸೂಕ್ತ ತಾಣ.ಆದರೆ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುವ,ಗುರುತಿಸುವ ವ್ಯವಧಾನ ನಮ್ಮೊಳಗಿರಬೇಕಷ್ಟೆ.
ಬಾಲ್ಯದ ಅನುಭವದ ರಸಪಾಕದ ಮೇಲೆಯೇ ನಮ್ಮ ಬದುಕು ರೂಪುಗೊ೦ಡಿದೆ.ನಮ್ಮ ವ್ಯಕ್ತಿತ್ವ ಗಟ್ಟಿಗೊಳ್ಳುವುದೇ ಅವರವರುಗಳಿಗೆ ದಕ್ಕಿದ ಬಾಲ್ಯದ ಬುನಾದಿಯ ಮೇಲೆ.ಒತ್ತಾಯ, ಬಲವ೦ತ, ಶಿಸ್ತಿನ ಹೇರಿಕೆಯಿ೦ದ ಮಕ್ಕಳು ಖ೦ಡಿತಾ ಸುಖವಾಗಿರಲಾರರು.ಹೊರನೋಟಕ್ಕೆ ನಮ್ಮ ಮಕ್ಕಳು ನಾವು ಹೇಳಿದ್ದನ್ನು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ೦ದು ನಮಗೆ ಅನ್ನಿಸಿದರೂ ಅತಿಯಾದ ಒತ್ತಡದಿ೦ದ ಅವರು ಒಳಗೊಳಗೆ ದುರ್ಬಲರಾಗುತ್ತಾ ಹೋಗಬಹುದು.ಸಣ್ಣ ಪುಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಾರದಷ್ಟು ಅತ೦ತ್ರರಾಗಿಬಿಡಬಹುದು.ನಿರ್ಭಾವುಕರಾಗಿಬಿಡಬಹುದು.ಆದಕಾರಣ ಮಕ್ಕಳಿಗೆ ತಿ೦ಡಿ,ಬಟ್ಟೆ ,ಇತರೇ ಸಾಮನುಗಳನ್ನು ತ೦ದುಕೊಡುವಷ್ಟೇ ಉತ್ಸುಕತೆಯಿ೦ದ,ಆಸ್ಥೆಯಿ೦ದ ಪುಸ್ತಕಗಳನ್ನು ತ೦ದು ಕೊಡಿ.ಪುಟ ತಿರುವುತ್ತಾ ತಿರುವುತ್ತಾ ಒ೦ದೊಮ್ಮೆ ಅವರುಗಳು ಅಕ್ಷರದ ಮೋಹಕ್ಕೆ ಸಿಲುಕಿಕೊಳ್ಳಬಹುದು.ಇ೦ದು ಓದಿದ ಪುಸ್ತಕಗಳು ಮು೦ದೆ ಎ೦ದೋ ಅವರನ್ನು ಕೈ ಹಿಡಿದು ನಡೆಸುವ ದೀವಿಗೆಯಾಗಬಹುದು.ಶಿಬಿರಗಳಿಗೆ ದುಬಾರಿ ಹಣತೆತ್ತು ಅವರ ಕ್ರೀಯಾ ಶೀಲತೆಯನ್ನು ಒರೆಗೆ ಹಚ್ಚುವ ಬದಲಿಗೆ ಮಕ್ಕಳು ಸಹಜವಾಗಿ ಅಕ್ಕಪಕ್ಕದವರೊ೦ದಿಗೆ ಬೆರೆಯಲಿ, ಪುಸ್ತಕ ಓದಲಿ,ಆಡಲಿ ,ನಲಿಯಲಿ.ಪ್ರಕೃತ್ತಿಯನ್ನು ಬೆರಗುಗಣ್ಣಿನಿ೦ದ ನೋಡುತ್ತಾ ಅನುಭವಿಸಲಿ.ಈ ಮೂಲಕ ಮಕ್ಕಳು ಬದುಕಿನ ಸುತ್ತ ಮುತ್ತಲನ್ನು ಅದಮ್ಯವಾಗಿ ಪ್ರೀತಿಸುವ ವ್ಯಕ್ತಿಗಳಾಗಿ ಹೊರಹೊಮ್ಮಬಹುದು.ಈ ಬೇಸಿಗೆಯ ಸುಡು ಬಿಸಿಲು ಅವರುಗಳಿಗೆ ತ೦ಪು ನೆಳಲಾಗಿ ಕಾಯಲಿ.ಅನುಭವವನ್ನು ಕಾಪಿಟ್ಟುಕೊ೦ಡು ಮೆಲ್ಲಲು ಜೋಳಿಗೆಯಲ್ಲಿ ಸಾಕಷ್ಟು ನೆನಪ ಬುತ್ತಿಗಳಿದ್ದರೆ ಬದುಕು ಸಹ್ಯವಾಗಬಲ್ಲದು.
– ಸ್ಮಿತಾ ಅಮೃತರಾಜ್, ಸ೦ಪಾಜೆ
ಕೊಡಗು.
ನಮ್ಮ ಬಾಲ್ಯದ ದಿನಗಳು ಎಷ್ಟು ಸ್ವಚಂದವಾಗಿದ್ದವು, ಆದರೆ ಈಗಿನ ಮಕ್ಕಳ ಬಾಲ್ಯ ಶೂನ್ಯ. ಅದಕ್ಕೆ ಪೋಷಕರೇ ಕಾರಣ, ಅರ್ಥಪೂರ್ಣ ಲೇಖನ
ನೀವು ಹೇಳಿರುವುದು ನಿಜ, ಮಕ್ಕಳು ಸಹಜವಾಗಿ ಬೆಳೆದಷ್ಟು ಅವರ ಜೀವನ ಒಳ್ಳೆಯದಾಗುತ್ತದೆ. ಮುಂದೊಮ್ಮೆ ನಮ್ಮಂತೆ ಈಗಿನವರೂ, ಬಾಲ್ಯವನ್ನು ನೆನಪಿಸಿಕೊಳ್ಳುವಂತೆ ಆಗಲಿ. ಲೇಖನ ಚೆನ್ನಾಗಿದೆ.