ಎಂಜಿನಿಯರ್ ದಿನ…
ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ,ಈ ಶತಮಾನ ಕಂಡ ಪ್ರಖಂಡ ಮೇಧಾವಿ ಹಾಗೂ ಅತ್ಯದ್ಧುತ ವಾಸ್ತುಶಿಲ್ಪಿ. ಕನ್ನಡದವರೇ ಆದ ಇವರು, ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1861 ಸೆಪ್ಟೆಂಬರ್ 15 ರಂದು ಜನಿಸಿದರು. ’ ನ ಭೂತೋ ನ ಭವಿಷ್ಯತಿ’ ಎಂಬಂತೆ, ಹಿಂದೆಯೂ ಹುಟ್ಟಿರದ, ಮುಂದೆಯೂ ಜನಿಸಲಾರದಂತಹ ಮೇರುವ್ಯಕ್ತಿಯು ಹುಟ್ಟಿದ ದಿನವನ್ನು “ಎಂಜಿನಿಯರ್ ದಿನ”ವನ್ನಾಗಿ ಆಚರಿಸುತ್ತೇವೆ. ಮೈಸೂರಿನ ನಾಲ್ಕನೇ ಕೃಷ್ಣರಾಜ ಒಡೆಯರ ಆಳ್ವಿಕೆಯ ಕಾಲದಲ್ಲಿ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ತಮ್ಮ ಕಾಲಾವಧಿಯಲ್ಲಿ ಸಾಕಷ್ಟು ಮಹಾಕಾರ್ಯಗಳನ್ನು ಮಾಡಿದ್ದರು. ಅವುಗಳಲ್ಲಿ, ಕಾವೇರಿ ನದಿಗೆ ಮಂಡ್ಯ ಜಿಲ್ಲೆಯಲ್ಲಿ ಕಟ್ಟಲಾದ ಕೃಷ್ಣರಾಜ ಸಾಗರ ಅಣೆಕಟ್ಟು ಬಹು ಮುಖ್ಯವಾದುದು. ಅದು ಅವರ ಧೀಶಕ್ತಿಯನ್ನು ಪ್ರತಿಬಿಂಬಿಸುವಂತಿದೆ. ಹರಿದು ಪೋಲಾಗುತ್ತಿದ್ದ ಅಗಾಧ ಜಲರಾಶಿಯ ಸದ್ಬಳಕೆಗೆ ದಾರಿ ಮಾಡಿಕೊಟ್ಟಿದೆ. ಹಾಗೆಯೇ, ಭದ್ರಾವತಿಯ ಉಕ್ಕಿನ ಕಾರ್ಖಾನೆ,ಜೋಗದ ಶರಾವತಿ ವಿದ್ಯುತ್ ಯೋಜನೆ, ಮೈಸೂರು ಸ್ಯಾಂಡಲ್ ಸಾಬೂನಿನ ಕಾರ್ಖಾನೆ ಇತ್ಯಾದಿಗಳು ಅವರ ಹೆಸರನ್ನು ಅಜರಾಮರವಾಗಿರುವಂತೆ ಮಾಡಿವೆ. ಬ್ರಿಟಿಷ್ ಸರಕಾರದಿಂದ “ನೈಟ್ ಹುಡ್” ಹಾಗೂ ೧೯೫೫ರಲ್ಲಿ “ಭಾರತರತ್ನ” ಗೌರವಕ್ಕೆ ಪಾತ್ರರಾಗಿ, ನಿಜವಾದ ಭಾರತದ ರತ್ನವೇ ಆದರು. ಶಿಸ್ತು, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ,ಸಮಯಪರಿಪಾಲನೆ, ಗುರುತರ ಹೊಣೆಗಳ ನಿಭಾಯಿಸುವಿಕೆ, ದೂರದರ್ಶಿತ್ವತೆ, ಇವರ ಜೇವನ ಭಾಗವೇ ಆಗಿದ್ದುದು ತುಂಬಾ ಹೆಮ್ಮೆಯ ವಿಷಯ. ತುಂಬು ಜೇವನ ನಡೆಸಿದ ಇವರು ಶತಾಯುಷಿಗಳಾಗಿ 1962 ನೇ ಎಪ್ರಿಲ್ 12 ಕ್ಕೆ ವಿಧಿವಶರಾದರು.
ಆಗಿನ ದಿನಗಳಲ್ಲಿ ಇಂಥಹ ನಿಸ್ವಾರ್ಥ ಸೇವಾಪರ ವ್ಯಕ್ತಿಗಳು ಸಾಕಷ್ಟು ಕಾಣಸಿಗುತ್ತಿದ್ದರು. ಈಗ..?? ಆ ಅದ್ಭುತ, ಮಹಾವ್ಯಕ್ತಿಯ ಹೆಸರಲ್ಲಿರುವ ಈ ದಿನದ ಔಚಿತ್ಯವಾದರೂ ಏನು ಎನ್ನಿಸುವುದಿಲ್ಲವೇ? ಕಳೆದ 10-15 ವರ್ಷಗಳಿಂದ, ನಮ್ಮ ದೇಶದಲ್ಲಿಯೇ ಅಣಬೆಗಳಂತೆ ಹುಟ್ಟಿಕೊಂಡಿರುವ ಕಾಲೇಜುಗಳಿಗೆ ಲೆಕ್ಕವಿಲ್ಲ. ಅವುಗಳಲ್ಲಿ ಎಷ್ಟೋ ವಿದ್ಯಾಲಯಗಳು ಸರಕಾರದ ಅನುಮತಿಯೇ ಇಲ್ಲದೆ ರಾಜಾರೋಷವಾಗಿ ಲಕ್ಷಗಟ್ಟಲೆ ಡೊನೇಷನ್ ಪಡೆದು ಮಿತಿಯಿಲ್ಲದಷ್ಟು ಸಂಪತ್ತನ್ನು ಕೊಳ್ಳೆ ಹೊಡೆದು, ಮಕ್ಕಳ ಭವಿಷ್ಯದೊಡನೆ ಆಟವಾಡಿವೆ. ಬದಲಾದ ವೈಜ್ಞಾನಿಕ ಬೆಳವಣಿಗೆಯಿಂದಾಗಿ ನೂರಾರು ದೇಶೀಯ ಹಾಗೂ ವಿದೇಶೀಯ ಕಂಪೆನಿಗಳು ಪ್ರಾರಂಭವಾದುವು. ಇದರಿಂದ ಉದ್ಯೋಗಾವಕಾಶಗಳು ತುಂಬಾ ಜಾಸ್ತಿಯಾಗುವುದರೊಂದಿಗೆ ಎಂಜಿನಿಯರುಗಳ ಬೇಡಿಕೆಯೂ ಮೇಲೇರಿತು. ಜಾತಿ ಮತ ಬೇಧವಿಲ್ಲದೆ, ಯಾವುದೇ ವರ್ಗಗಳ ತಾರತಮ್ಯವಿಲ್ಲದೆ, ಬರೇ..ಅಂದರೆ ಬರೇ..ವಿದ್ಯಾರ್ಥಿಗಳು ಗಳಿಸಿದ ಅಂಕ ಹಾಗೂ ಬುದ್ಧಿಮತ್ತೆಯನ್ನು ಗಣನೆಗೆ ತೆಗೆದುಕೊಂಡು ಎಲ್ಲಾ ಕಂಪೆನಿಗಳು ಕೆಲಸ ಕೊಡಲಾರಂಭಿಸಿದುವು. ಕೈ ತುಂಬಾ ಸಂಬಳ..!
ಸಾಧಾರಣವಾಗಿ ಮಧ್ಯಮ ವರ್ಗದವರು ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಜೀವನ ಮಟ್ಟವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿರುತ್ತಾರೆ. ಎಷ್ಟೇ ಕಲಿತರೂ, ಸರಕಾರೀ ಕೆಲಸ ಸಿಗುವುದು ಗಗನ ಕುಸುಮವಾಗಿರುವ ಕಾಲಘಟ್ಟದಲ್ಲಿ ಊದ್ಯೋಗದಲ್ಲಿ ಆದ ಈ ಬದಲಾವಣೆ ನಿಜಕ್ಕೂ ಶ್ಲಾಘನೀಯ.ಇದರಿಂದಾಗಿ, ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಗು ಕಲಿತು ಮುಂದೆ ಎಂಜಿನಿಯರೇ ಆಗಬೇಕೆಂಬ ಮಹದಾಸೆ ಪ್ರಾರಂಭವಾಯಿತು. ಪರಿಣಾಮವಾಗಿ, ಮಾತೃಭಾಷೆಯಲ್ಲಿ ಕಲಿಕೆ ಕಡಿಮೆಯಾಗಿ, ಇಂಗ್ಲಿಷ್ ವ್ಯಾಮೋಹ ಹೆಚ್ಚಿತು. ವರ್ಷ ವರ್ಷವೂ ಲಕ್ಷಾಂತರ ಎಂಜಿನಿಯರುಗಳನ್ನು ತಯಾರಿಸುವ ಕಾರ್ಖಾನೆಗಳಾದುವು ನಮ್ಮ ವಿದ್ಯಾಲಯಗಳು.ಸಾಮಾನ್ಯ ವರ್ಗದ ಜನರ ಜೀವನ ಮಟ್ಟವು ಅತೀ ವೇಗದಲ್ಲಿ ಮೇಲಕ್ಕೇರಿದ್ದು ಅಷ್ಟೇ ಸತ್ಯ. ಸಾಧಾರಣವಾಗಿ ಪ್ರತಿ ಮನೆಯಲ್ಲಿಯೂ ಒಬ್ಬಿಬ್ಬರು ಎಂಜಿನಿಯರುಗಳು ಸಾಮಾನ್ಯವಾಯಿತು. ಪ್ರತಿಭಾವಂತರು ಹೊರ ದೇಶಗಳಲ್ಲಿಯೂ ಉದ್ಯೋಗ ಹಿಡಿದು ಸಮರ್ಥವಾಗಿ ಕೆಲಸಗಳನ್ನು ನಿಭಾಯಿಸಿ, ಅತ್ಯುತ್ತಮ ಹೆಸರನ್ನು ಗಳಿಸಿದರು. ಹಾಗೆಯೇ, ಅಮೇರಿಕದಂಥಹ ಶ್ರೀಮಂತ ರಾಷ್ಟ್ರಗಳಲ್ಲಿ ಉತ್ತಮ ಕಂಪೆನಿಗಳಲ್ಲಿ ಉದ್ಯೋಗ ಹಿಡಿದು, ಅಲ್ಲಿಯ ಪ್ರಜೆಯೇ ಆಗಿ, ಅಲ್ಲೇ ನೆಲೆಯೂರಿದವರೂ ಇದ್ದಾರೆ. ಈ ಪ್ರತಿಭಾ ಪಲಾಯನವೂ, ದೇಶಕ್ಕೆ ದೊಡ್ಡ ನಷ್ಟವೆಂದೇ ಹೇಳಬಹುದು. ನಮ್ಮ ದೇಶದ ಎಂಜಿನಿಯರುಗಳು, ದೇಶದೊಳಗೆ ಮಾತ್ರವಲ್ಲದೆ, ಹೊರದೇಶಗಳಲ್ಲೂ, ಶಿಸ್ತು, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಮತ್ತು ತುಂಬಾ ಬುದ್ಧಿವಂತರೆಂದು ಹೆಸರು ಮಾಡಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯೇ ಹೌದು. ಆದರೂ, ರಾತ್ರಿ, ಹಗಲೆನ್ನದೆ ಎದೆಬಿಡದ ಕೆಲಸದಿಂದ, ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಉಂಟುಮಾಡಿರುವುದು ಆತಂಕಗೊಳ್ಳುವ ವಿಚಾರವೇ ಆಗಿದೆ.ಇತ್ತೀಚೆಗಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ ನಿಜಕ್ಕೂ ಗಾಬರಿಪಡುವಂತಿದೆ. ವರ್ಷ ವರ್ಷವೂ, ಅಗಾಧ ಸಂಖ್ಯೆಯಲ್ಲಿ ಹೊರಬರುತ್ತಿರುವ ಎಂಜಿನಿಯರುಗಳ ಉದ್ಯೋಗಾವಕಾಶ ಕಡಿಮೆಯಾಗುತ್ತಿದೆ. ಜಗತ್ತಿನ ವ್ಯಾಪಾರ,ವಹಿವಾಟುಗಳ ಏರುಪೇರುಗಳಿಂದಾಗಿ ಎಷ್ಟೋ ಕಂಪೆನಿಗಳು ಮುಚ್ಚಿ ಹೋಗುತ್ತಿವೆ,
ಇವುಗಳಿಗೆ ಪರಿಹಾರ ಇಲ್ಲವೇ?? ಇದೆ… ಹೌದು.. ನಮ್ಮ ದೇಶದಲ್ಲೇ ಇನ್ಫ಼ೋಸಿಸ್, ವಿಪ್ರೋಗಳಂತಹ ಇನ್ನೂ ಹಲವಾರು ಕಂಪೆನಿಗಳು ಪ್ರಾರಂಭವಾಗಬೇಕು. ಹೊರದೇಶಗಳಲ್ಲಿ ಸಿಗುವಂತಹ ಒಳ್ಳೆಯ ಸವಲತ್ತುಗಳು ಸಿಗುವಂತಾಗಬೇಕು. ಒಂದಿಗೇ ನಮ್ಮ ದೇಶಬಂಧುಗಳಲ್ಲಿ ದೇಶದ ಬಗ್ಗೆ ಭಕ್ತಿ,ಗೌರವ ಅಂತರಾಳದಿಂದಲೇ ಮೂಡಿಬರಬೇಕು. ದೇಶ ಸೇವೆ ಮಾಡುವ ಮನ ಜಾಗ್ರತವಾಗಬೇಕು. ನಮ್ಮ ನೆಚ್ಚಿನ ಪ್ರಧಾನಿ ಮೋದಿಯವರ ” ಮೇಕ್ ಇನ್ ಇಂಡಿಯ” ಯೋಜನೆಗೆ ಪೂರಕವಾಗಿ ನಮ್ಮ ಎಂಜಿನಿಯರ್ ಸನ್ಮಿತ್ರರು ಸ್ಪಂದಿಸಿ, ದೇಶದ ಉದ್ಧಾರಕ್ಕೆ ಕಾರಣರಾಗಬೇಕು. ಆಗಲೇ ಈ ’ಎಂಜಿನಿಯರ್ ದಿನ’ ಆಚರಣೆಗೂ ಒಂದು ಅರ್ಥ ದೊರಕಬಹುದು ಅಲ್ಲವೇ??
-ಶಂಕರಿ ಶರ್ಮ, ಪುತ್ತೂರು