ಬೊಗಸೆಬಿಂಬ

ಮಕ್ಕಳನ್ನಾದರೂ ನೋಡಿ ಕಲಿಯಬೇಕು

Share Button

ಒಮ್ಮೆ ನನ್ನ ಗೆಳೆಯನೊಬ್ಬನ ಊರಿಗೆ ಹೋಗಿದ್ದೆ. ರಾತ್ರಿ ಅಲ್ಲಿಯೇ ಉಳಿದುಕೊಂಡ ನಾನು ಬೆಳಿಗ್ಗೆ ಎದ್ದು ವಾಕ್ ಹೊರಟೆ, ಗೆಳೆಯನ ಮನೆಯಿಂದ ಕೂಗಳತೆಯ ದೂರದಲ್ಲಿ ಸಾಕಷ್ಟು ಜನ ಜಮಾಯಿಸಿದ್ದನ್ನ ಕಂಡ ನನಗೆ ಯಾರಿಗಾದರೂ ಏನಾದರೂ ಆಗಿಬಿಟ್ಟಿದೆಯೋ ! ಅಥವಾ…… !? ಯಾರಾದರೂ ಹೋಗಿ ಬಿಟ್ಟರೋ…..!? ಎಂದುಕೊಂಡು ಅಲ್ಲಿಗೆ ಹೆಜ್ಜೆ ಹಾಕಿದೆ. ಅಲ್ಲಿ ಟಾಟಾ ಏಸ್ ವಾಹನವೊಂದು ನಿಂತಿತ್ತು. ಮನೆಯ ಯಜಮಾನ ತಮ್ಮ ಮನೆಯ ಸಾಮಾನುಗಳನ್ನು ಅದರಲ್ಲಿ ತುಂಬುತ್ತಿದ್ದ. ಎಲ್ಲರೂ ಅದನ್ನೇ ನೋಡುತ್ತಾ ನಿಂತಿದ್ದರು. ಯಾರೊಬ್ಬರಿಂದಲೂ ಮಾತಿಲ್ಲಾ ಕಥೆಯಿಲ್ಲಾ. ಭೂಕಂಪದಲ್ಲಿ ಮನೆ-ಮಠವನ್ನು ಕಳೆದುಕೊಂಡು ಮುಂದಿನ ಜೀವನದ ಬಗ್ಗೆ ಯೋಚಿಸುತ್ತಿರುವಂತಿತ್ತು ಅಲ್ಲಿದ್ದವರ ಮನಸ್ಥಿತಿ.

ನಾನು ಅಲ್ಲೊಬ್ಬರನ್ನು ಕೇಳಿದೆ ಏನಾಗಿದೆ ?, ಯಾಕೆ ಜನರೆಲ್ಲಾ ಒಂದೂ ಮಾತನಾಡದೆ ಲಗೇಜ್ ಪ್ಯಾಕ್ ಮಾಡುವುದನ್ನೇ ಮೂಕ ಪ್ರೇಕ್ಷಕರಾಗಿ ನಿಂತು ನೋಡುತ್ತಿದ್ದರಲ್ಲಾ ಎಂದೆ. ಪಕ್ಕದ ಮನೆಯ ಕಡೆಗೆ ಕೈ ತೋರಿಸುತ್ತಾ ಅವರು ಹೇಳಿದರೂ. ನೋಡಿ ಆ ಮನೆಯವರೂ ಮತ್ತು ಇವರು ನಮ್ಮೂರಿಗೆ ನೌಕರಿ ಮಾಡಲು ಬಂದು ಸುಮಾರು ಹತ್ತು ವರ್ಷಗಳಾದವು. ಆ ಎರಡೂ ಕುಟುಂಬದವರೂ ಬರೀ ಸ್ನೇಹಿತರಾಗಿರದೆ ಅಣ್ಣ-ತಮ್ಮಂದಿರಂತೆ ಇದ್ದವರು, ನಿನ್ನೆ ಮಕ್ಕಳ ವಿಷಯಕ್ಕೆ ಜಗಳವಾಡಿ ಇವರು ಈ ಊರನ್ನೇ ಬಿಟ್ಟು ಹೊರಟಿದ್ದಾರೆ . ಎಂದರು.


ಲಗೇಜ್ ಪ್ಯಾಕ್ ಮಾಡುವುದು ಮುಗಿದಿತ್ತು . ಊರಿಗೆ ಹೊರಡಲು ತನ್ನ ಮಗುವನ್ನು ನೋಡಿದರೆ. ಇದಕ್ಕೆಲ್ಲಾ ಕಾರಣವಾದ ಪಕ್ಕದ ಮನೆಯ ಹುಡುಗನ ಜೊತೆ ಆಟವಾಡುತ್ತಿದ್ದ. ಆ ಇಬ್ಬರು ಮಕ್ಕಳಿಗೆ ಸುಮಾರು ಆರೇಳು ವರ್ಷ ಇರಬಹುದು. ಆ ಹುಡುಗನ ತಾಯಿ ಹೋಗಿ ಮಗುವಿನ ಕೈ ಹಿಡಿದು ಊರಿಗೆ ಹೋಗೋಣ ಬಾ ಎಂದರು. ನಾನು ಬರುವುದಿಲ್ಲ, ನೀವು ಬೇಕಾದರೆ ಹೋಗಿ ನಾನು ಈ ಮನೆಯಲ್ಲಿ ಇರ್‍ತೀನಿ ಅಂತ ಪಕ್ಕದ ಮನೆಯ ಓಡಿ ಹೋಗಿ ಜೋರಾಗಿ ಅಳತೊಡಗಿದ.

ಅಲ್ಲಿಂದ ಅವನನ್ನು ಕರೆದುಕೊಂಡು ಬರುವುದು ಅವರಿಗೆ ಸಾಕಾಗಿ ಹೋಯಿತು ಮತ್ತು ಅಲ್ಲಿಂದ ಬಲವಂತವಾಗಿ ಅವನನ್ನು ಎಳೆದಕೊಂಡು ಹೋದರು. ಅವರು ಸ್ವಲ್ಪ ದೂರ ಹೋಗಿರಬಹುದು ಇತ್ತ ಈ ಹುಡುಗನೂ ಸಹ ನಾನು ಅವರ ಜೊತೆ ಹೋಗ್ತೀನಿ ಎಂದು ಹಠ ಹಿಡಿದು ಅವರ ಹಿಂದೆಯೇ ಓಡಲು ಶುರು ಮಾಡಿದ. ಈ ದೃಶ್ಯ ಅಲ್ಲಿದ್ದ ಎಲ್ಲರ ಮನಃ ಕಲಕುವಂತಿತ್ತು, ಕೆಲವರು ಅತ್ತೇಬಿಟ್ಟರು.

ಮಕ್ಕಳು ಇಷ್ಟೆಲ್ಲಾ ಹಠ ಹಿಡಿದರೂ ಆ ಎರಡೂ ಕುಟುಂಬದವರ ಮನಸ್ಸು ಮಾತ್ರ ಬದಲಾಗಲೇ ಇಲ್ಲ. ಸುಮಾರು ಹತ್ತು ವರ್ಷಗಳಿಂದ ಜತನವಾಗಿ ಕಾಪಾಡಿಕೊಂಡ ಬಂದ ಸ್ನೇಹವನ್ನು ಮುರಿದು ಮಕ್ಕಳ ವಿಷಯಕ್ಕೋಸ್ಕರ ಒಂದು ಕುಟುಂಬ ಊರನ್ನೇ ಬಿಟ್ಟು ಹೊರಟಿತು. ಇದನ್ನ ನೋಡಿದ ನನಗೆ ಮನುಷ್ಯ ಎಷ್ಟೊಂದು ಸ್ವಾರ್ಥಿ!. ತನ್ನ ಸ್ವ-ಪ್ರತಿಷ್ಠೆಗೋಸ್ಕರ ಏನನ್ನಾದರೂ ಬಲಿ ಕೊಡಬಲ್ಲ ಎಂದನಿಸಿತು ಆ ಮಕ್ಕಳ ಎದುರಲ್ಲಿ ಆ ಎರಡು ಕುಟುಂಬದವರು ತೀರಾ ಸಣ್ಣವರಾಗಿ ಕಂಡರು.

-ವೀರೇಶ್ ಮಾಡ್ಲಾಕನಹಳ್ಳಿ, ಕೂಡ್ಲಿಗಿ

8 Comments on “ಮಕ್ಕಳನ್ನಾದರೂ ನೋಡಿ ಕಲಿಯಬೇಕು

  1. ಇದು ವಾಸ್ತವಿಕವಾಗಿ ನೆಡೆದಿರುವ ನೇರ ಪ್ರಸಾರ.
    Keep it up Good Luk my friend.

  2. ಮಕ್ಕಳ ಮನಸ್ಸು ಹಾಲಿನಂತೆ, ದೊಡ್ಡವರ ಮನಸು ಹಾಲಾಹಲದಂತೆ…… ಚೆನ್ನಾಗಿದೆ

Leave a Reply to Vijay p Cancel reply

 Click this button or press Ctrl+G to toggle between Kannada and English

Your email address will not be published. Required fields are marked *