ಮದುವೆ ಒಂದು ಮದ್ದೆ?
ವ್ಯಕ್ತಿಯ ಅಸಹಜ ನಡವಳಿಕೆಗಳನ್ನು ಸುಧಾರಿಸಲು ಮದುವೆಯೊಂದೇ ಮದ್ದು ಎಂಬಂತೆ ನಮ್ಮ ಸಮಾಜ ಯೋಚಿಸುತ್ತದೆ. ಸರ್ವ ವ್ಯಾದಿಗಳಿಗೂ ರಾಮಬಾಣ ಮದುವೆ ಎಂಬ ತಪ್ಪು ತಿಳುವಳಿಕೆಯನ್ನು ಹೊಂದಿದ್ದಾರೆ. ವಂಶ ಪಾರಂಪರ್‍ಯವಾಗಿ ಬಂದಂತಹ ಕಾಯಿಲೆ, ಮಾನಸಿಕ ಅಸ್ವಸ್ಥತೆ, ಕುಡಿತದ ಗೀಳು, ಪೋಲಿತನ, ಜವಾಬ್ದಾರಿಯಿಂದ ನುಸುಳುಕೊಳ್ಳುವಿಕೆಯಂತಹ ನ್ಯೂನತೆಗಳನ್ನು ಸರಿಪಡಿಸಲು ಮದುವೆಯೊಂದನ್ನು ಮಾಡಿದರೆ ಸುಧಾರಿಸುತ್ತಾರೆ ಎಂಬ ಪರಿಕಲ್ಪನೆ ಈಗಲೂ ನಮ್ಮ ಸಮಾಜದಲ್ಲಿದೆ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಹಳೆಯ ಗಾದೆಯಂತೆ, ಇರುವ ನ್ಯೂನತೆಗಳನ್ನು ಮುಚ್ಚಿಟ್ಟು ಮದುವೆ ಮಾಡಿ ಕೈ ತೊಳೆದುಕೊಳ್ಳುತ್ತಾರೆ. ಇಲ್ಲಿ ಬಲಿಪಶುಗಳಾಗುವುದು ಅಂಥ ವ್ಯಕ್ತಿಯ ಕೈಹಿಡಿದವನು/ಳು ಅಥವಾ ಅವರ ಪಾಲಕರು. ಇಂಥ ಮದುವೆಗಳು ಮಧ್ಯದಲ್ಲೇ ಮುರಿದು ಬೀಳುವ ಸಾಧ್ಯತೆಗಳೇ ಹೆಚ್ಚು. ಜೊತೆಗೆ ಜನ್ಮ ಕೊಟ್ಟ ಮಕ್ಕಳೂ ಅನಾಥವಾಗುತ್ತವೆ.
ಪ್ರೀತಿಸಿದವನ ಜೊತೆ ಮಗಳು ಮದುವೆಯಾಗುತ್ತೇನೆಂದಾಗ ಬೇರೊಂದು ಸಂಬಂಧವನ್ನು ಹುಡುಕಿ ಮದುವೆ ಮಾಡುವುದು, ಮಗ ಕುಡುಕ, ಜವಾಬ್ದಾರಿ ಇಲ್ಲದವನು ಎಂಬುದು ಗೊತ್ತಿದ್ದೂ ಮದುವೆ ಮಾಡುವುದು, ಸೊಸೆಗೆ ಮಕ್ಕಳಾಗಲಿಲ್ಲವೆಂಬ ಕಾರಣದಿಂದ ಮಗನಿಗೆ ಮತ್ತೊಂದು ಮದುವೆ ಮಾಡುವಮತಹ ಮೂಢತನ ನಮ್ಮ ಜನರಲ್ಲಿ ಬೇರೂರಿದೆ.
ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಇಲ್ಲದವರು ಹಾಗೂ ಮುಂದೊದಗಬಹುದಾದ ಪರಿಣಾಮಗಳನ್ನು ಲೆಕ್ಕಿಸದೆ ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನೆರೆಹೊರೆಯವರೋ, ಸಂಬಂಧಿಗಳೋ ನೀಡಿದ ಸಲಹೆಗಳನ್ನು ಯೋಚಿಸದೇ ಕಾರ್ಯರೂಪಕ್ಕೆ ತರುತ್ತಾರೆ. ಮದುವೆಯ ನಂತರ ತಮ್ಮ ದುರ್ನಡತೆಗಳನ್ನು ತ್ಯಜಿಸಿ ಸಚ್ಚಾರಿತ್ರ್ಯವನ್ನು ಹೊಂದಿ ಬಾಳ್ವೆ ನಡೆಸುವವರು ಬೆರಳೆಣಿಕೆಯಷ್ಟು ಮಾತ್ರ. ಆದರೆ ಕೆಲವು ವಾಸಿಯಾಗದಂತಹ ಕಾಯಿಲೆಗಳು, ಮನೋ ಅಂಗವೈಕಲ್ಯವನ್ನು ಹೊಂದಿದ ವ್ಯಕ್ತಿಗಳ ಬದುಕು ಬದಲಾಗಲು ಹೇಗೆ ಸಾಧ್ಯ? ಇಂತಹ ತಪ್ಪು ನಿರ್ಧಾರಗಳಿಗೆ ಅನೇಕ ಹೆಣ್ಣು ಮಕ್ಕಳು ಬಲಿಪಶುಗಳಾಗುತ್ತಿದ್ದಾರೆ.
ಅನೇಕ ಸ್ವಯಂ ಸೇವಾ ಸಂಸ್ಥೆಗಳು, ಕುಡಿತವನ್ನು ಬಿಡಿಸುವ ಡಿ ಅಡಿಕ್ಷನ್ ಸೆಂಟರ್‌ಗಳು ವ್ಯಕ್ತಿಯನ್ನು ಸುಧಾರಿಸುವಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇಂಥ ಸಂಸ್ಥೆಗಳಿಗೆ ಭೇಟಿಕೊಟ್ಟು ಸಮಸ್ಯೆಯನ್ನು ಹೊಂದಿದ ವ್ಯಕ್ತಿಗಳನ್ನು ಸರಿ ದಾರಿಗೆ ತರಬಹುದು. ಕಾಯಿಲೆಗೆ ಚಿಕಿತ್ಸೆ ನೀಡುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಕೊರತೆ ಇಲ್ಲ. ವೈದ್ಯರ ಸಲಹೆಯಂತೆ ನಡೆದಲ್ಲಿ ಕೆಲ ಕಾಯಿಲೆಗಳಿಗೆ ಪರಿಹಾರವನ್ನು ಹೊಂದಬಹುದು. ಒಬ್ಬ ವ್ಯಕ್ತಿಯ ಜೀವನವನ್ನು ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ. ಈ ರೀತಿಯ ಮೋಸಕ್ಕೆ ಬಲಿಯಾದ ಅನೇಕ ಹೆಣ್ಣು ಮಕ್ಕಳು ಕೋರ್ಟಿನ ಮೆಟ್ಟಿಲು ಹತ್ತಿ ನ್ಯಾಯವನ್ನು ಪಡೆದಿದ್ದಾರೆ. ಅನ್ಯಾಯ ಮಾಡಿದವರು ಶಿಕ್ಷೆಗೆ ಒಳಗಾದ ಉದಾಹರಣೆಗಳೂ ಇವೆ. ಮದುವೆ ಎಂಬುದು ಮನಸು ಮನಸುಗಳನ್ನು ಬೆಸೆಯುವ ಮಧುರವಾದ ಬಾಂದವ್ಯವೇ ಹೊರತು ನ್ಯೂನತೆಗಳಿಗೆ ಮದ್ದಲ್ಲ.
-ಗೌರಿ ಚಂದ್ರಕೇಸರಿ, ಶಿವಮೊಗ್ಗ.