ಕಥೆ ಹೇಳುವುದು ಸುಲಭವಲ್ಲ
ಮೊನ್ನೆ ಚಿಕ್ಕ ಮಗಳು ಎಷ್ಟು ದಿನವಾಯ್ತು ಕಥೆ ಹೇಳಿ ಇವತ್ತು ಹೇಳಲೇಬೇಕು ಎಂದು ದುಬಾಲು ಬಿದ್ದಳು. ಯಾವ ಕಥೆ ಹೇಳಬೇಕೆಂದು ಯೋಚಿಸುವಂತಾಯ್ತು. ಚಿಕ್ಕವರಿದ್ದಾಗ ಹೇಗೆ ಕಥೆ ಹೇಳಿದರೂ ನಡೆಯುತ್ತಿತ್ತು. ಆದರೆ ಈಗ ತಿಳುವಳಿಕೆ ಬಂದಾಗಿನಿಂದ ಪ್ರತಿಯೊಂದನ್ನೂ ಪ್ರಶ್ನಿಸಿ, ಅದಕ್ಕೆ ಸಮಾಧಾನಕರ ಉತ್ತರ ಸಿಕ್ಕರೆ ಮಾತ್ರ ಒಪ್ಪುವ ಇಂದಿನ ಪೀಳಿಗೆಯ ಪ್ರಾಕ್ಟಿಕಲ್ ಮನೋಭಾವದ ಮಕ್ಕಳು ನೋಡಿ, ಹಾಗಾಗಿ ಸ್ವಲ್ಪ ಅಳುಕು ಇದ್ದೇ ಇರುತ್ತದೆ.
ಸರಿ. ಗಣಪ ಹುಟ್ಟಿದ ಕಥೆಹೇಳಲು ಶುರು ಮಾಡಿದೆ. ಗೌರಿ ಸ್ನಾನಕ್ಕೆ ಹೋಗುವ ಮೊದಲು ತನ್ನ ಮೈಮಣ್ಣಿನಿಂದ ಗೊಂಬೆಯನ್ನು ಮಾಡಿ ಅದಕ್ಕೆ ಜೀವ ತುಂಬಿದಳು ಎನ್ನುತ್ತಿದ್ದಂತೆ ಮಗಳ ಪ್ರಶ್ನೆ ತೂರಿ ಬಂತು. ಯಾಕೆ ಗೌರಿ ಅಷ್ಟು ಗಲೀಜಿದ್ದಳಾ?,ಪ್ರತಿದಿನ ಸ್ನಾನ ಮಾಡ್ತಿರಲಿಲ್ವಾ? ಅದ್ಯಾಕೆ ಅಷ್ಟು ಮಣ್ಣು ಅವಳ ಮೈಮೇಲೆ?. ಏನೆಂದು ಉತ್ತರಿಸುವುದು ನಾನೂ ಆಲೋಚನೆಗೊಳಗಾದೆ. ಸುಮ್ಮನೆ ಏನೇನೋ ಹೇಳುವುದಕ್ಕಿಂತ ಗೊತ್ತಿಲ್ಲವೆಂದು ಹೇಳಿ ಕಥೆ ಮುಂದುವರಿಸಿದೆ. ಮುಂದೆ ಗಣಪ ಮಹಾಭಾರತ ಬರೆಯುವಾಗ ಬರೆಯುತ್ತಿದ್ದ ಲೇಖನಿ ಮುರಿದು ತನ್ನ ಕೋರೆಹಲ್ಲನ್ನು ಮುರಿದು ಲೇಖನಿಯನ್ನಾಗಿ ಬಳಸಿದ, ಅದಕ್ಕೇ ಗಣಪನ ಒಂದು ಕೋರೆ ಹಲ್ಲು ಅರ್ಧಮಾತ್ರ ಇದೆ ಎಂದೆ. ಅದನ್ಯಾಕೆ ಮತ್ತೆ ಅಂಟಿಸಿಕೊಳ್ಳಲಿಲ್ಲ? ಮತ್ತೊಂದು ಪ್ರಶ್ನೆ ಅವಳಿಂದ ಬಂತು. ಆಗಿನ ಕಾಲದಲ್ಲಿ ಡೆಂಟಲ್ ಸೈನ್ಸ್ ಇಷ್ಟೋಂದು ಮುಂದುವರಿದಿರಲಿಲ್ಲ ಎಂದೆ. ಗಣಪನ ಕತ್ತರಿಸಿದ ತಲೆಗೆ ಆನೆಯ ಮುಖ ಸೇರಿಸುವಷ್ಟು ಕಷ್ಟವೇನಿರಲಿಲ್ಲವಲ್ಲ ಹಲ್ಲು ಸೇರಿಸುವುದು? ಎಂದಾಗ ಅರೆರೆ ಹೌದಲ! ಇದು ನಮಗೆ ಇಷ್ಟು ವರ್ಷ ಯಾಕೆ ಹೊಳೆದೇ ಇರಲಿಲ್ಲವಲ್ಲ ಎಂದು ಯೋಚಿಸತೊಡಗಿದೆ. ಸದ್ಯಕ್ಕೆ ನನಗೂ ಅದರ ಬಗ್ಗೆ ಗೊತ್ತಿಲ್ಲ ಎಂದು ಹೇಳಿ ಜಾರಿಕೊಂಡೆ.
ಮತ್ತೊಮ್ಮೆ ಅಮೇರಿಕಾದಿಂದ ಬಂದ ಗೆಳತಿಯ ಮಕ್ಕಳು ಕಿವಿಗೆ ದೊಡ್ಡ ದೊಡ್ಡ ಕಿವಿಯೋಲೆಗಳನ್ನು ಹಾಗೂ ಡಿಸೈನರ್ ಸರಗಳನ್ನೂ, ಬೇಕಾದ ಬಣ್ಣದ ಉಡುಪುಗಳನ್ನು ಅಮೇರಿಕಾದಲ್ಲಿ ಶಾಲೆಗೆ ಹಾಕಿಕೊಂಡು ಹೋಗಬಹುದು ಎಂದಾಗ ನನ್ನ ಮಗಳಿಗೆ ಅಚ್ಚರಿ. ನಮ್ಮ ದೇಶದ ಸ್ಕೂಲುಗಳಲ್ಲಿ ನರ್ಸರಿಯಿಂದಲೇ ಯೂನಿಫಾರಂ, ಟೈ, ಶೂಸು, ಸಾಕ್ಸ್, ರಿಬ್ಬನ್, ಎರಡು ಜಡೆ ಹಾಕಿಕೊಂಡು ಹೋಗುವುದು ಇದೆ. ಶಿಸ್ತು ಕಲಿಯಲು ಇದೆಲ್ಲಾ ಅವಶ್ಯಕ ಎನ್ನುವರು, ಆದರೆ ದೊಡ್ಡವರಾದ ಬಳಿಕ ನಮ್ಮ ದೇಶದಲ್ಲಿ ಯಾರಲ್ಲೂ ಶಿಸ್ತು ಕಾಣುವುದಿಲ್ಲ, ಅದೇ ಅಮೇರಿಕಾದಲ್ಲಿ ಮಕ್ಕಳಿಗೆ ಯಾವ ಕಟ್ಟಳೆಗಳಿಲ್ಲದಿದ್ದರೂ ಅವರು ಹೇಗೆ ಶಿಸ್ತಿನ ಜೀವನ ನಡೆಸುತ್ತಾರೆ ಎಂದು ಪ್ರಶ್ನಿಸಿದಾಗ ನನ್ನ ಬಾಯಿಗೆ ಬೀಗ ಹಾಕಿದಂತಾಯಿತು. ಆ ದೇಶದ ಕಟ್ಟುನಿಟ್ಟಾದ ಕಾನೂನುಗಳ ಬಗ್ಗೆ ತಿಳಿಹೇಳಿದಾಗ ಆಶ್ಚರ್ಯದಿಂದ ಗೋಣುಹಾಕಿದಳು.
ಹಾಗಾಗಿ ಈಗೀಗ ಮಕ್ಕಳ ಜೊತೆ ಸಂಭಾಷಣೆ ನಡೆಸುವಾಗ ತುಂಬಾ ಹುಷಾರಾಗಿರುತ್ತೇನೆ. ಉತ್ತರ ಗೊತ್ತಿದ್ದರೆ ಹೇಳುತ್ತೇನೆ, ಗೊತ್ತಿಲ್ಲದಿದ್ದರೆ ಗೊತ್ತಿಲ್ಲವೆನ್ನುತ್ತೇನೆ, ಇಲ್ಲವಾದರೆ ತಿಳಿದುಕೊಂಡು ಹೇಳುವೆ ಎಂದು ತಿಳಿಯಲು ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ. ಬೇಜವಾಬ್ದಾರಿ ಉತ್ತರಗಳನ್ನು ನೀಡುವುದನ್ನು ಮಕ್ಕಳು ಎಂದೂ ಇಷ್ಟ ಪಡುವುದಿಲ್ಲ ನೋಡಿ!
– ನಳಿನಿ. ಟಿ. ಭೀಮಪ್ಪ, ಧಾರವಾಡ