ರಂಗಮನೆಯ ಅಂಗಳದಲ್ಲಿ
ಪರೀಕ್ಷೆಗಳೆಲ್ಲಾ ಮುಗಿದು ಪಲಿತಾಂಶ ಬಂದು ಬೇಸಿಗೆ ರಜೆ ಸಿಕ್ಕ ತಕ್ಷಣ,ಈಗ ಮಕ್ಕಳಿಗೂ ಅವರ ಹೆತ್ತವರಿಗೂ ಬೇಸಿಗೆ ಶಿಬಿರಕ್ಕೆ ಮಕ್ಕಳನ್ನು ಸೇರಿಸುವ ತರಾತುರಿ. ಈಗ ಎರಡು ತಿಂಗಳ ರಜೆಯೊಳಗೆ ಒಂದು ಹತ್ತು ದಿನ ಬೇಸಿಗೆ ಶಿಬಿರಕ್ಕೆ ಪಾಲ್ಗೊಳ್ಳುವುದು ಒಂದು ಕಡ್ಡಾಯ ನಿಯಮದಂತೆ ಆಗಿ ಬಿಟ್ಟಿದೆ. ಮೊದಲೆಲ್ಲಾ ಕೆಲವೇ ಕೆಲವು ಶಿಬಿರಗಳು. ಎಲ್ಲಾ ಮಕ್ಕಳಿಗೆ ಇಂತಹ ಶಿಬಿರಗಳಲ್ಲಿ ಭಾಗವಹಿಸುವುದು ಸಾಧ್ಯವಾಗುತ್ತಿರಲಿಲ್ಲ.ಈಗ ಮಕ್ಕಳೆಲ್ಲರಿಗೂ ಸಮಾನ ಅವಕಾಶ ಸಿಗಬೇಕು,ಅವರೂ ಖುಷಿಯಾಗಿರಬೇಕು, ಅವರ ಪ್ರತಿಭೆಯೂ ಅನಾವರಣಗೊಳ್ಳಬೇಕು ಅನ್ನುವ ಉದ್ದೇಶದಿಂದ ಸರಕಾರವೂ ಕೂಡ ಶಾಲೆಗಳಲ್ಲಿ,ಶಿಶು ಮತ್ತು ಮಹಿಳಾಭಿವೃದ್ಧಿ ಇಲಾಖೆಯಲ್ಲಿ, ಹೀಗೆ ಎಲ್ಲಾ ವರ್ಗದ ಮಕ್ಕಳಿಗಾಗಿ ಈ ಶಿಭಿರವನ್ನು ನಿಯೋಜಿಸಿದ್ದಾರೆ. ಕೆಲವು ಮಕ್ಕಳು ಇಷ್ಟಪಟ್ಟು ಹೆತ್ತವರ ಜೊತೆ ಕಾಡಿ ಬೇಡಿ ಬೇಸಿಗೆ ಶಿಬಿರಕ್ಕೆ ಹೋದರೆ, ಇನ್ನೊಂದಷ್ಟು ಮಂದಿ ಹೆತ್ತವರ ಒತ್ತಾಯಕ್ಕೆ ಮಣಿದು ಹೋಗುತ್ತಾರೆ.
ಮಕ್ಕಳು ಮನೆಯಲ್ಲಿದ್ದರೆ ಮೂರು ಹೊತ್ತು ಮೊಬೈಲು,ಟಿ.ವಿ ಅಂತ ಅದರೊಳಗೆ ತಲೆ ತೂರಿಸಿಕೊಂಡು ಕಣ್ಣು ಬಾಪಿಸಿಕೊಂಡು ಇರುವುದನ್ನು ನೋಡಿ ಎಷ್ಟು ಬುದ್ಧಿ ಹೇಳಿದರೂ,ಗದರಿದರೂ,ನಮಗೂ ಉಪದೇಶಕ್ಕೂ ಯಾವುದೇ ಸಂಬಂಧವಿಲ್ಲವೆಂಬಂತೆ ಮಕ್ಕಳು ಟಿ.ವಿ,ಮೊಬೈಲ್‌ನೊಳಗೆ ಘನ ಕಾರ್ಯವಿದ್ದಂತೆ ಮುಳುಗಿ ಹೋಗಿಬಿಡುತ್ತಾರೆ. ಈ ಯಂತ್ರಗಳಿಗೆ ಮಕ್ಕಳನ್ನು ಮರಳು ಮಾಡುವ ಅದೆಂಥಾ ಮಾಂತ್ರಿಕ ಶಕ್ತಿಯಿದೆಯೋ ಆ ದೇವನೆ ಬಲ್ಲ.
ಈ ಹಿಂದೆ ಟಿ.ವಿ.ನಮ್ಮೆಲ್ಲರ ಮನೆಯ ಪಡಸಾಲೆಯಲ್ಲಿ ಕಾಲಿಟ್ಟ ಹೊಸತರಲ್ಲಿ,ಕಣ್ಣು ಹಾಳಾಗುತ್ತೆ ಅಂತ ಆದಷ್ಟೂ ದೂರದಿಂದ ನಿಗದಿತ ಸಮಯವಷ್ಟೇ ನೋಡಲು ಮಕ್ಕಳಿಗೆ ಪರವಾನಿಗೆ ಸಿಗುತ್ತಿತ್ತು. ಮಕ್ಕಳೂ ಅದರಂತೆ ನಡೆದುಕೊಳ್ಳುತ್ತಿದ್ದರು. ಉಳಿದಂತೆ ಮಕ್ಕಳು ಗೆಳೆಯರೊಂದಿಗೆ ಆಡುತ್ತಾ,ಹಾಡುತ್ತಾ,ನೆಂಟರ ಮನೆಗಳಲ್ಲಿ ಠಿಕಾಣಿ ಹೂಡುತ್ತಾ,ಅಜ್ಜ ಅಜ್ಜಿಯರೊಂದಿಗೆ ಕತೆ ಕೇಳುವುದರಲ್ಲಿ,ಊರೂರು ಸುತ್ತುವುದರಲ್ಲಿ,ಕಾಡು ಮೇಡು ಅಲಿಯುವುದರಲ್ಲಿ ಹೆಚ್ಚಿನ ಆಸ್ಥೆಯನ್ನು ತೋರಿಸುತ್ತಿದ್ದರು. ಬದಲಾದ ಕಾಲದಲ್ಲಿ ಈ ಯಂತ್ರಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವೇನೋ ಅನ್ನುವಷ್ಟರ ಮಟ್ಟಿಗೆ ಬೆಸೆದುಕೊಂಡು ಬಿಟ್ಟಿದೆ. ಮನೆ ಮಂದಿಯೆಲ್ಲರೂ ಪುಟ್ಟ ಯಂತ್ರಗಳ ಅಡಿಯಾಳಾಗಿರುವಾಗ ಮಕ್ಕಳಿಗೆ ಬುದ್ದಿ ಹೇಳೋದೇನು ಬಂತು? . ಅಂತೂ ತಮ್ಮ ಆರೋಗ್ಯದ ಬಗ್ಗೆ ನಿಗಾ ಇಲ್ಲದಿದ್ದರೂ,ಹೆತ್ತವರಿಗೆ ಮಕ್ಕಳ ಆರೋಗ್ಯ ಕ್ಷೇಮದ ಬಗ್ಗೆ ಚಿಂತೆ ಇದ್ದೇ ಇರುತ್ತದೆ. ಹೊರಗೆ ಹೋಗಿ ಆಡಿಕೊಳ್ಳಿ ಅಂದರೆ ಮಕ್ಕಳೆಲ್ಲಿ ಕೇಳ್ತಾರೆ?. ಎಲ್ಲರೂ ಟಿ.ವಿ. ಮುಂದೆ ಕುಕ್ಕರು ಬಡಿದಿರುವಾಗ ಆಡೋಕೆ ಯಾವ ಮಕ್ಕಳು ಸಿಗುತ್ತಾರೆ?. ಅದಕ್ಕಾಗಿಯೇ ದುಡ್ಡು ತೆತ್ತಾದರೂ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಸೇರಿಸಲು ಹಾತೊರೆಯುತ್ತಾರೆ ಹೆತ್ತವರು. ಈಗ ಬೇಸಿಗೆ ಶಿಬಿರಗಳು ಕೂಡ ಪೈಪೋಟಿಗಿಳಿದಿವೆ. ವ್ಯಾಪಾರೀಕರಣಗೊಳ್ಳುತ್ತಿವೆ. ಇವೆಲ್ಲದರ ನಡುವೆ ಕೆಲವೊಂದು ಶಿಬಿರಗಳು ಮಕ್ಕಳನ್ನು ಸಹಜವಾಗಿ ಕ್ರಿಯಾಶೀಲವಾಗಿಡಲು ಪ್ರಯತ್ನಿಸುತ್ತಿವೆ. ಅವರೊಳಗಿನ ನೈಜ್ಯ ಪ್ರತಿಭೆಯನ್ನು ಹೊರಕ್ಕೆ ತಂದು ಅರಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಪ್ರತೀ ವರ್ಷ ನಮ್ಮೂರಿನ ಸುಳ್ಯದ ರಂಗಮನೆಯಲ್ಲಿ ಜೀವನ್‌ರಾಂ ಸುಳ್ಯ ಅವರಿಂದ,ತಮ್ಮದೇ ಮನೆಯಲ್ಲಿ ಒಂದಷ್ಟು ಆಸಕ್ತಿಯಿರುವ ಮಕ್ಕಳನ್ನು ಕಲೆ ಹಾಕಿಕೊಂಡು ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬರುತ್ತಿದ್ದಾರೆ. ಈ ಶಿಬಿರ ಹತ್ತರಲ್ಲಿ ಹನ್ನೊಂದರಂತಾಗದೆ,ಪ್ರತಿಭೆಯ ವಿಕಸನಕ್ಕೊಂದು ವೇದಿಕೆಯಾಗುತ್ತಿದೆ. ಇಲ್ಲಿ ಬರೇ ಹತ್ತು ದಿನಗಳಲ್ಲಿ ಜೀವನಕ್ಕಾಗುವಷ್ಟು ಜೀವನೋತ್ಸಾಹ ತುಂಬುತ್ತಿದ್ದಾರೆ ಜೀವನ್ ರಾಂ ,ಮೌಲ್ಯ ದಂಪತಿಗಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುವ ಸುಳ್ಯ ತಾಲೂಕಿನ ಪೇಟೆಯಿಂದ ಅನತಿ ದೂರ ಸಾಗಿದರೆ,ಹಳೇಗೇಟಿನ ಹಸಿರು ಪರಿಸರದ ನಡುವೆ ರಂಗಮನೆ ನಮ್ಮನ್ನು ಕೈಬೀಸಿ ಕರೆಯುತ್ತದೆ. ಅದು ಜೀವನ್ ರಾಂ ಅವರ ಮನೆಯೂ ಹೌದು,ಕಲಾ ಆರಾಧನೆಯ ತಾಣವೂ ಹೌದು. ಹಲವಾರು ಯಶಸ್ವೀ ರಂಗ ನಿರ್ಧೇಶನಗಳನ್ನು ಮಾಡಿ ಅತ್ತ್ಯುನ್ನತ ಪ್ರಶಸ್ತಿಗಳನ್ನೆಲ್ಲಾ ಮುಡಿಗೇರಿಸಿಕೊಂಡವರು.
ರಂಗ ಮನೆಯ ಅಂಗಳಕ್ಕೆ ಬಂದು ನಿಂತೊಡನೇ ಮನೆಯೋ? ಅಥವಾ ಯಾವುದೋ ಕಲಾಕೇಂದ್ರವೋ ಅನ್ನುವ ಸಂಶಯ ನಮ್ಮನ್ನು ಕಾಡದೇ ಇರದು. ಮನೆಯ ಸುತ್ತಮುತ್ತಲಿನ ವಾತಾವರಣವೇ ಕಲೆಯಲ್ಲರಳಿ ನಿಂತಂತಿದೆ. ಹಜಾರದಲ್ಲಿ ಸ್ವಾಗತಿಸುವ ಯಕ್ಷಗಾನದ ಮುಖವರ್ಣಿಕೆಗಳು,ಮನೆಯ ಗೋಡೆಯ ಮೂಲೆ ಮೂಲೆಯಲ್ಲೂ ಕಲಾಪ್ರತಿಮೆಗಳು. ಅವರೇ ರೂಪು ಕೊಟ್ಟು ನಿರ್ಮಿಸಿದ ರಂಗಮನೆಯೆಂಬ ರಂಗವೇದಿಕೆ. ಸುಳ್ಯವೆಂಬ ಪುಟ್ಟ ಊರಿನಲ್ಲಿ ಕುಳಿತುಕೊಂಡು ಜೀವನ್ ರಾಂ ಲೋಕಕ್ಕೆ ತೆರೆದುಕೊಳ್ಳುತ್ತಿರುವುದ್ದಕ್ಕೆ ಸಾಕ್ಷಿಯೆಂದರೆ,ರಾಜ್ಯದ ಎಲ್ಲೆಡೆಯಿಂದ ಅಲ್ಲಿಗೆ ಬರುತ್ತಿರುವ ಮಕ್ಕಳು. ನೀನಾಸಂನ ಗರಡಿಯಲ್ಲಿ ಪಳಗಿ ಬಂದ ಜೀವನ್ ರಾಂ,ಸ್ವತ: ಪರಿಶ್ರಮದಿಂದ ಉನ್ನತ ಸ್ಥಾನಕ್ಕೇರಿದವರು. ನಾಟಕ,ಯಕ್ಷಗಾನಗಳ ಮೂಲಕ ಸುಳ್ಯದ ರಂಗಮನೆಯನ್ನು ನಿರಂತರ ಸಾಂಸ್ಕೃತಿಕ ತಾಣವನ್ನಾಗಿಡಲು ಪರಿಶ್ರಮಿಸುತ್ತಿರುವವರು. ಅವರಿಗೆ ಸಾಥಿ ನೀಡುತ್ತಿರುವವರು ಅದ್ಭುತ ಕಂಠದ ಗಾಯಕಿ,ಅವರ ಬಾಳ ಸಂಗಾತಿ ಮೌಲ್ಯ ಜೀವನ್ ರಾಂ.
ರಂಗಗೀತೆ,ಮುಖವರ್ಣಿಕೆ ಮಾಡುವುದು,ನಾಟಕ,ಕವಿತೆ ಕತೆ ಬರೆಯುವುದು..ಹೀಗೆ ಇನ್ನು ಅದೆಷ್ಟೋ ವಿಭಿನ್ನವಾದ ಕಲೆಯ ಆಯಾಮಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡುತ್ತಿದ್ದಾರೆ. ಮಕ್ಕಳಿಗೆ ಇವನ್ನೆಲ್ಲಾ ಹೇಳಿಕೊಡಲು ಅರ್ಹ ಸಂಪನ್ಮೂಲ ವ್ಯಕ್ತಿಗಳನ್ನು ರಂಗಮನೆಗೆ ಕರೆತರುತ್ತಿದ್ದಾರೆ. ಮಕ್ಕಳ ನೈಜ್ಯ ಪ್ರತಿಭೆಯನ್ನು ಒರೆಗೆ ಹಚ್ಚುವುದು ಅಷ್ಟೇ ಅಲ್ಲದೆ,ತಿಳಿದುಕೊಳ್ಳಲೇ ಬೇಕಾದ ಅನೇಕ ಬದುಕಿನ ಅರಿವುಗಳನ್ನ ಪ್ರಾತ್ಯಕ್ಷತೆಯ ಮೂಲಕ ಕಲಿಸಿಕೊಡುತ್ತಿದ್ದಾರೆ.
ಟಿ.ವಿ. ನೋಡುತ್ತಾ ಈ ಲೋಕಕ್ಕೂ ನನಗೂ ಏನು ಸಂಬಂಧವಿಲ್ಲವೆಂಬಂತೆ ಕುಳಿತ ಮಗುವಿನಲ್ಲಿ ಅಡಗಿರಬಹುದಾದ ಸೃಜನಶೀಲತೆಯನ್ನು ಹೆಕ್ಕಿ ತೋರಿಸಿಕೊಡುತ್ತಾರೆ. ದಿನವಿಡೀ ಮಕ್ಕಳೊಂದಿಗೆ ಮಕ್ಕಳಾಗಿ ನಲಿಯುವ ಜೀವರ್ ರಾಂ ದಂಪತಿಗಳಿಗೆ ದಣಿವು ಎಂಬುದೇ ಇಲ್ಲ. ಇಲ್ಲಿ ಶಿಸ್ತು ,ಸಂಯಮ,ಬದ್ಧತೆ ಎಲ್ಲವನ್ನೂ ಅಳವಡಿಸಿಕೊಳ್ಳುವಷ್ಟು ಮಕ್ಕಳು ಜೀವನ್ ರಾಂ ಗರಡಿಯಲ್ಲಿ ಪಳಗಿ ಬಿಡುತ್ತಾರೆ. ಸುಳ್ಯದ ರಂಗಮನೆಗೆ ಬೇಸಿಗೆ ಶಿಬಿರಕ್ಕೆ ಮಕ್ಕಳೊಂದಿಗೆ ಹೆತ್ತವರೂ ಕೂಡ ಯಾಕೆ ಅಷ್ಟು ಉತ್ಸಾಹದಿಂದ ವರುಷ ವರುಷವೂ ಪಾಲುಗೊಳ್ಳುತ್ತಾರೆ ಎಂಬುದು ನಾನು ಇತ್ತೀಚೆಗೆ ಅಲ್ಲಿಗೆ ಖುದ್ದಾಗಿ ಹೋಗಿ ಕಂಡು ಕೊಂಡ ಸತ್ಯ. ಜೀವನ್ ರಾಂ ದಂಪತಿಗಳು ಆ ಹತ್ತು ದಿನಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ವೇಗದಲ್ಲಿ ಮಕ್ಕಳನ್ನು ತಯಾರಿಗೊಳಿಸಿ ಬಿಡುತ್ತಾರೆ.
ಸಮಾರೋಪದ ದಿನ ಅಲ್ಲಿಗೆ ಬಂದ ಹೊಸ ಮಗು ಹೇಳುವುದಿಷ್ಟೇ..ಅಪ್ಪ-ಅಮ್ಮನ ಒತ್ತಾಯಕ್ಕೆ ಇಲ್ಲಿಗೆ ಬಂದೆ, ಈಗ ಹಠ ಮಾಡಿ ನನ್ನನ್ನು ಇಲ್ಲಿಗೆ ಕಳುಹಿಸಿದ್ದಕ್ಕೆ ಥ್ಯಾಂಕ್ಸ್ ಅಪ್ಪ-ಅಮ್ಮ ಅಂತ. ಮಗು ಅಲ್ಲಿಯ ಕ್ಷಣಗಳನ್ನು ಸಾಕಷ್ಟು ಮೊಗೆ ಮೊಗೆದು ಅನುಭವಿಸಿದೆ,ಮತ್ತು ಆ ಕ್ಷಣಗಳನ್ನು ಇನ್ನು ಯಾವೊತ್ತಿಗೂ ಅದು ತನ್ನ ಎದೆಯೊಳಗೆ ಕಟ್ಟಿಟ್ಟುಕೊಳ್ಳುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಧಾವಂತದ ಬದುಕಿನಲ್ಲಿ,ಬಸವಳಿಯುವ ಬೇಸಗೆಯಲ್ಲಿ ‘ರಂಗಮನೆಯೆಂಬ’ಚಿಣ್ಣರ ಮೇಳ ತಂಗಾಳಿಯಂತೆ ಬೀಸುತ್ತಿದೆ.ತಮ್ಮ ಪ್ರತಿಭೆಯನ್ನು ಸಮಾಜಕ್ಕೆ ಹೇಗೆ ಧಾರೆಯೆರೆದು ಕೊಡಬಹುದು ಎಂಬುದ್ದಕ್ಕೆ ಮಾದರಿಯಾಗಿ ನಿಂತಿದ್ದಾರೆ ರಂಗಮನೆಯ ಜೀವನ್ ರಾಂ ದಂಪತಿಗಳು.
ಜೀವನ್ ರಾಂ, ಮೊಬೈಲ್ ಸಂಖ್ಯೆ – 94482 15946
– ಸ್ಮಿತಾ ಅಮೃತರಾಜ್,ಸಂಪಾಜೆ
ಮಕ್ಕಳ ಬಹುಮುಖ ಪ್ರತಿಭೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡುವ ಜೀವನ್ ರಾಂ ,ಮೌಲ್ಯ ದಂಪತಿಗಳ ಶ್ರಮ ಪ್ರಯತ್ನ ಶ್ಲಾಘನೀಯ.
ಬದುಕನ್ನು ಸಹ್ಯವಾಗಿಸುವ ಕೆಲಸವನ್ನು ಜೀವನರಾಮ ದಂಪತಿಗಳು ಮಾಡುತ್ತಿದ್ದಾರೆ.ಮಕ್ಕಳಿಂದಲೇ ಪ್ರಾರಂಭಮಾಡಿದ್ದಾರೆ. ಅವರಿಗೆ ತಮ್ಮ ಕೆಲಸದಲ್ಲಿ ಪ್ರೀತಿಯಿದೆ. ಅಸಹನೆ ಹಬ್ಬುತ್ತಿರುವ ಈ ದಿನಗಳಲ್ಲಿ ಇದು ಸಣ್ಣ ಸಂಗತಿಯಲ್ಲ
ತುಂಬಾ ಚೆನ್ನಾಗಿ ಬರೆದಿದ್ದೀರಿ. Thank uu Smitha Madam
Dear Smitha Palangaya.
Well noted and identied with fabulous pen.
Everything has become so easy. It’s great that it’s at your fingertips, but really miss those good old days. And we’re connected, but it can be very alienating. There is this distance between all of us because we’re speaking to each other through cameras and monitors and icons.
These kinds of camps will remember us our olden days, old culture, old games, old attachment s.
My hearty congratulations to Smitha Palangaya,Jeevan Ram couples.
Good one
Fine programme.
ಸುಳ್ಯಕ್ಕೆ ಅಗತ್ಯ ಬೇಕಾಗಿದ್ದ ಚಟುವಟಿಕೆ. ಲೇಖನಕ್ಕೆ ಕೃತಜ್ಞತೆಗಳು
ಜೇವನ್ ರಾಂ ,ಸುಳ್ಯ… ದಕ್ಷಿಣಕನ್ನಡದ ಹೆಮ್ಮೆ..!! ಲೇಖನ ಚೆನ್ನಾಗಿದೆ
ಸ್ಮೀತಾ ಅವರೇ ನಿಮ್ಮ ಲೇಖನ ತುಂಬಾ ಚನ್ನಾಗಿ ಮೂಡಿಬಂದಿದೆ. ಅಭಿನಂದನೆ, ಜೀವನ ರಾಂ ರವರ ಸೃಜನಶೀಲತೆ ಅವರ ನಿರ್ದೇಶನದ ಪ್ರತಿ ನಾಟಕದಲ್ಲಿಯೂ ಭಿನ್ನವಾಗಿರುತ್ತದೆ. ೨೦೧೪ರ ನುಡಿಸಿರಿ ದಶಮಾನೋತ್ಸವದಲ್ಲಿ ಮಕ್ಕಳಿಂದ ಅಭಿನಯಿಸಲ್ಪಟ್ಟ ದೇವವೃದ್ದರು ಎನ್ನುವ ೧೨ ನಿಮಿಷದ ಮಕ್ಕಳ ನಾಟಕ ಅವರ ಧೀಮಂತಿಕೆಗೆ, ಅಲಾಸಕ್ತಿಗೆ ಒಂದು ನಿದರ್ಶನ. ಅವರ ಮಕ್ಕಳೋಂದಿಗಿನ ಈ ಪಯಣ ನಿರಂತರವಾಗಿರಲಿ.