ಕೃಷಿಯ ಬದುಕಿಗೆ ಹಳ್ಳಿಗರು ವಿದಾಯ ಕೋರಿದರೋ ಎಂಬ ಚಿಂತೆ ಮನಸ್ಸಿನಲ್ಲಿದೆ.
ಮೊದಲು ನಿಲ್ಲಿಸಿದಲ್ಲಿಂದ ಪ್ರಾರಂಭಿಸುತ್ತೇನೆ. ಆ ಕೊಕ್ಕರೆಗಳ ಸಾಲು .. ಆ ಭತ್ತದ ಸಸಿ ನೆಡುವ ಮಹಿಳೆಯರ ವೇಷ ಗೊತ್ತಲ್ಲಾ …
ಕೈಯ್ಯಲ್ಲೊಂದು ಕೊರಂಬೆ (ತುಳು ) .. (ತಾಳೆ ಮರದ ಎಲೆಯಿಂದ ಮಾಡಿದ ಈ ಕೊರಂಬೆಯನ್ನು ಕನ್ನಡದಲ್ಲಿ ನೀಲ್ಗೊಡೆ ಎಂದು ಭಾಷಾಂತರಿಸಬಹುದೇನೋ .. )ತಲೆಯಲ್ಲಿ ಮುಟ್ಟಳೆ(ತುಳು) .. ಮುಟ್ಟಳೆ/ಮುಟ್ಟಪ್ಪಾಳೆ ಎಂದರೆ ಕಂಗಿನ ಹಾಳೆಯಲ್ಲಿ ಮಾಡಿದ (ಕುಸಿರಿ ಕೆಲಸವೂ ಇದೆ ಅನ್ನಿ) ಶಿರಸ್ತ್ರಾಣ.ಮಳೆ ಬಂದರೂ ಯಾವುದೇ ಚಿಂತೆಯಿಲ್ಲ .. ತಲೆಮೇಲೆ ಹಾಕಿ ನಡೆದರೆ ಸಾಕು .. ಕಾಯಕಗೂ ತಡೆಯಿಲ್ಲ …ಆ ಗದ್ದೆಯಲ್ಲಿ ಸಾಲಾಗಿ ಬಗ್ಗಿ ಸಸಿ ನೆಡುವ ಸಂಭ್ರಮ . ಅದನ್ನು ನೋಡಿದವರಿಗೇ ಗೊತ್ತು .. ನಮ್ಮ ಕರಾವಳಿಯ ಜನರಿಗೆ ಇದರ ಬಗ್ಗೆ ವಿವರವಾಗಿ ಹೇಳಬೇಕೆಂದಿಲ್ಲ. ಓಬೇಲೆ ಹಾಡು ಕೂಡಾ ಇರುತ್ತಿತ್ತು ..
ತೆನ್ಕಾಯಿಡ್ ಬರೊಂದುಲ್ಲೆಗೆ
ಊರುಗು ಮದ್ಮಾಯೆ ..
ದೆತ್ತಿನ ಇಲ್ಲಾಲ್ ಕೋರಿದ ಕಜಿಪು
ಓಬೇಲೆ .. ಓಬೇಲೆ ..
ತರೆಟ್ಟ್ ಉಂಡುಗೆ ಬಣ್ಣದ ಮುಂಡಾಸ್ ..
ಕೆಕ್ಕುಲ್ ನಿಲೀಕೆ ಬಂಗಾರ್ದ ಮಾಲೆಗೆ ..
ಓಬೇಲೆ .. ಓಬೇಲೆ ..
ಗುತ್ತುದ ಪೊಣ್ಣನ ಪೊರ್ಲುನು ತೂಲೆ ..
ಮೋನೆಡ್ ನಿಲೀಕೆ ತೆಲಿಕೆಗೆ ನಲಿಕೆಗೆ ..
ಓಬೇಲೆ .. ಓಬೇಲೆ ..
ನಮ್ಮೂರ್ದ ಪೊಣ್ಣನ ಭಾಗ್ಯನ್ ತೂಲೆ ..
ಬಂಗಾರ್ದ ಪೊಣ್ಣು . ಸಿಂಗಾರದ ಪೊಣ್ಣು ..
ಓಬೇಲೆ .. ಓಬೇಲೆ ..
ಈ ಓಬೇಲೆ ಹಾಡುಗಳು ಮನಸ್ಸಿನಲ್ಲಿ ನರ್ತಿಸತೊಡಗಿದುವು. ಕ್ಷಣಮಾತ್ರದಲ್ಲಿ ಕಣ್ತೆರೆದು ವಾಸ್ತವದತ್ತ ದೃಷ್ಟಿ ಹಾಯಿಸಿದಾಗ ಕಂಡಿದ್ದು ಪಾಳು ಬಿದ್ದ ಗದ್ದೆಗಳು.ಒಂದು ನಿಮಿಷ ಮೌನವಾದೆ.ಕಣ್ಣೆದುರಿಗೆ ಹಳ್ಳಿ ಜೀವನ ಕಾಣಿಸುತ್ತಿತ್ತು . ಭತ್ತದ ಹುಲ್ಲನ್ನು ತಲೆಯಲ್ಲಿ ಹೊತ್ತು ಸಾಲು ಸಾಲಾಗಿ ಕಟ್ಟೆ ಹುಣಿ /ಕಟ್ಟೆಪ್ಪುಣಿ ಯಲ್ಲಿ ನಡೆವ ರೈತ ಜನರು . ನಂತರ ಆ ಹುಲ್ಲನ್ನು ಬಡಿಯಲೆಂದೇ ನಿರ್ಮಿಸಿದ ಟೇಬಲ್ ನಲ್ಲಿ ಹೊಯ್ ಕೊಯ್ ಎಂದು ಬಡಿದು ಭತ್ತವನ್ನು ಹುಲ್ಲಿನಿಂದ ಬೇರ್ಪಡಿಸುವ ದೃಶ್ಯ .ಸಂಗ್ರಹವಾದ ಭತ್ತವನ್ನು ಸಂರಕ್ಷಣೆ ಮಾಡಲು ಮನೆ ಹಿತ್ತಿಲಿನಲ್ಲಿಯೇ ನಿರ್ಮಾಣವಾಗುತ್ತಿದ್ದ ತಾಲ್ಕಾಲಿಕ ಗುದಾಮು.ಮುಂದಿನ ಕೃಷಿಗಾಗಿ ಭತ್ತವನ್ನು ಹುಲ್ಲಿನ ಚೀಲದಲ್ಲಿ ಸಂರಕ್ಷಣೆ ಮಾಡುವುದು .ಒಂದೇ ಎರಡೇ .. ನೂರೆಂಟು ನೆನಪುಗಳು ಗರಿಬಿಚ್ಚತೊಡಗಿದುವು .
ಸಂಪೂರ್ಣವಾಗಿ ಇಂದು ಕೃಷಿ ಸ್ತಬ್ಧವಾಗಿದೆ ಎಂದೂ ಹೇಳುವಂತಿಲ್ಲ.ಮುಟ್ಟಾಳೆ/ಮುಟ್ಟಪ್ಪಾಳೆ ಧರಿಸುವ, ಗೊರಬೆ ಮತ್ತು ಕತ್ತಿ ಹಿಡಿದು ನಡೆವ ಆ ಹೆಂಗಸರು ಕಣ್ಮರೆಯಾಗುತ್ತಲಿದ್ದಾರೆ. ಓಬೇಲೆ ಸದ್ದಿನ ಬದಲಾಗಿ ಟ್ರಾಕ್ಟರ್ ನ ಗುರ್ ಗುರ್ ಸದ್ದು ಕೇಳಿಸುತ್ತಿದೆ.
ಧಾವಂತದ ಬದುಕಿನಲ್ಲಿ ನಾವು ಕಳೆದುಕೊಂಡದ್ದು ಏನೆಲ್ಲಾ ಎಂದು ಕೇಳಿದರೆ ಲೆಕ್ಕವಿಲ್ಲದಷ್ಟು ಉತ್ತರಗಳಿವೆ.
ನಾವು ಯಾಂತ್ರಿಕ ಬದುನಲ್ಲಿದ್ದೇವೆ. ಹಳ್ಳಿಯ ಆ ಸೊಡರು ಮನಸ್ಸಿನಿಂದ ಮಾಯವಾಗುತ್ತಿದೆಯೋ ಎಂಬ ಚಿಂತೆ.
ಇಂದು ಅಳಿದುಳಿದ ಕೃಷಿಕರ ಬದುಕು ಬವಣೆಯ ಕುರಿತು ಅಂದೊಮ್ಮೆ ಈ ರೀತಿ ಬರೆದಿದ್ದೆ ..
ಉತ್ತು ಬಿತ್ತಿ
ಬೆಳೆ ಬೆಳೆದಾಯ್ತು ..
ಹಸಿರ ಪೈರು ..
ಮೊಗ ತುಂಬಾ ನಗು ..
ಎತ್ತುಗಳ ಕಟ್ಟಿ ಹೊರಟ
ಪೇಟೆಯತ್ತ ..
ಮನದಲ್ಲಿ ನೂರು ಕನಸುಗಳು ..
ಮನೆ ಸಾಮಾನು ..
ಮಕ್ಕಳಿಗೆ ಹೊಸ ಉಡುಪು …
ಮಗಳೆಂದಿದ್ದಳು
ಅಪ್ಪಾ ..
ಪುಸ್ತಕ ಹೊರಲು ಚೀಲ ..
ಹೊರಟ ಎತ್ತಿನ ಗಾಡಿಯ ಗಾಲಿಗಳ
ಜೊತೆ
ಕನಸುಗಳೂ ತಿರುಗುತಿತ್ತು ..
ಪಟ್ಟಣ ಸೇರಿದೊಡೆ ನಿಶ್ಯಬ್ದ ..
ಇಲ್ಲಿ
ಬೆಳೆಗೆ ಬೆಲೆಯಿಲ್ಲ ..
ಹಸಿದ ಎತ್ತುಗಳ ನೆನಪಾಯ್ತು ..
ಹಿಂಡಿಗೋ ಬಾನೆತ್ತರದ ಬೆಲೆ .
ಎತ್ತಿನ ಗಾಡಿಯಲಿದ್ದ
ಪೈರು ..ಕೇಳುವವರಿಲ್ಲ ..
ಇಲ್ಲಿ ಎಲ್ಲವೂ ಅಗ್ಗ ..
ಸಿಕ್ಕ ಬೆಲೆಗೆ ಕೊಟ್ಟು ಹಿಂತಿರುಗಬೇಕು ..
ಕನಸು ಎಲ್ಲವೂ ಭಗ್ನ .
ಮಕ್ಕಳು ದಾರಿ ಕಾಯುತಿಹರು
ಏನೆಂದು ಉತ್ತರಿಸಲಿ ..
ವಿವರಿಸಲು ಶಬ್ದಗಳಿಲ್ಲ ..
ಅಲ್ಲಿ ಮನೆಯಲ್ಲಿ ದೂರ ದರ್ಶನದಲ್ಲಿ
ನೂರೆಂಟು ಜಾಹಿರಾತು .
ಮಣ್ಣಿನ ಮಗ ..
ಸಾಲ ಮನ್ನಾ .. ಉಚಿತ ಗೊಬ್ಬರ
ಏನಿದ್ದರೇನು .
ಹಳೆಯ ಪಠ್ಯ ಪುಸ್ತಕದ ಪಾಠ
ನೆನಪಾಯ್ತು ..
ಬೇಸಾಯಗಾರ ಬೇಗ ಸಾಯ ..
ನಾಣ್ಮುಡಿ ಹಂಗಿಸುವಂತಿತ್ತು ..
ಮನೆ ಸೇರಿದಾಗ ರಾತ್ರಿಯಾಗಿತ್ತ್ತು ..
ಮಡದಿ ಮಕ್ಕಳು ಕನಸು ಕಾಣುತ
ನಿದ್ರಿಸುತ್ತಿರಬಹುದು ..
ಜೇಬಿನಲಿ ಕಾಸಿಲ್ಲ
ಸಾಯನೇ ಬೇಸಾಯಗಾರ ಬೇಗ ..
ಮನದಲ್ಲೇ ಕಾಡುವ ಪ್ರಶ್ನೆ ..
ಎತ್ತುಗಳು ಹಸಿದಿತ್ತು ..
ಅವುಗಳೂ
ಮೈಲು ಸವೆಸಿತ್ತು ..
ಇನ್ನು ನಾ ಇದನ್ನ ಸಾಕಲಾಗದು
ಮೊನ್ನೆ ಬಂದಿದ್ದ ಮಾಂಸಿಕನ
ಮೊಗ
ಕಣ್ಣೆದುರಿಗೆ ಕಾಣುತಿತ್ತು ..
ಇರುಳ ಮೌನದಲಿ ಚಿಂತಿಸುತಿರೆ
ಕಾಲಿಗೆ ಏನೋ ತಗುಲಿದ
ಅನುಭವ ..
ಹೌದು .. ಹುಡುಕುತಿದ್ದುದು
ಕಾಲಿಗೆ ಸಿಕ್ಕಿತ್ತು ..
ಇನ್ನು ನಾನೇ ನಿನಗೆ ಗತಿ
ಎತ್ತಿ ನೋಡಿದ ರೈತ ..
ಅದು ನಗುತಿತ್ತು .. ಸುರುಟಿ ಇಟ್ಟಿದ್ದ ಹಗ್ಗ .. !!!
ಇದು ಕೃಷಿಕನ ಇಂದಿನ ಅವಸ್ಥೆ.ಈ ಎತ್ತಿನ ಗಾಡಿ, ರಾಗಿ ರೊಟ್ಟಿ ಎಂದೆಲ್ಲಾ ಗೀಚಿದ್ದು .. ಕರ್ನಾಟಕದ ಹಳ್ಳಿಗಳಲ್ಲಿ ಕಾಣುವ ದೃಶ್ಯ. ನಮ್ಮ ಕರಾವಳಿ ಜನರಿಗೆ ಈ ರಾಗಿ, ಗೋದಿ , ಎತ್ತಿನ ಗಾಡಿ ಎಲ್ಲವೂ ಅಪರಿಚಿತ.ಅದೇನೇ ಇರಲಿ .ಮೊನ್ನೆ ನಮ್ಮ ಸಂಬಂದಿಕರ ಮನೆಯಿಂದ ಕೃಷಿ ಸಾಮಗ್ರಿಗಳನ್ನು ಹೊತ್ತು ತಂದು ನನ್ನ ಹಳೆ ಸಾಮಗ್ರಿ ಸಂಗ್ರಹದಲ್ಲಿ ಇಟ್ಟೆ.ಸೇರು, ಕಳಸೆ , ನೇಗಿಲು, ನೊಗ .. ಮಕ್ಕಳನ್ನು ನನ್ನತ್ತ ಕರೆದು ಇದರ ಬಗ್ಗೆ ಕಿರು ಭಾಷಣವೂ ಕೊಟ್ಟೆ ..
ಕೃಷಿಯನ್ನು ಅಷ್ಟೇನೂ ಹಚ್ಚಿಕೊಂಡಿರದ ಇಂದಿನ ಜನಾಂಗಕ್ಕೆ ಈ ಹಳೆಯ ಕೃಷಿಕರ ಒಂದು ಸಣ್ಣ ಲೆಕ್ಕ ಹೇಳಿ ಕೊಡುತ್ತೇನೆ ಕೇಳಿ …
ನಾಲ್ಕು ಪಾವು = ಒಂದು ಸೇರು ಅಥವಾ
ಆರು ಕೊಂಡೆ = ಒಂದು ಸೇರು.
(ಈ ಕೊಂಡೆ ಎಂದರೆ ಬಿದಿರಿನಲ್ಲಿ ಮಾಡಿದ ಅಳತೆ ಸಾಮಗ್ರಿ. ಇದು ಪಾವು ಗಿಂತ ಸ್ವಲ್ಪ ಚಿಕ್ಕದು)
ಹದಿನಾಲ್ಕು ಸೇರು = ಒಂದು ಕಳಸಿಗೆ
ಮೂರು ಕಳಸಿಗೆ = ಒಂದು ಮುಡಿ (ಒಂದು ಮುಡಿ ಅಂದರೆ ಸುಮಾರು ೩೬ ಕಿಲೋ ಭಾರ).
ಈಗ ಹೇಳಿ .ನೀವು ಸ್ವಲ್ಪ ಹಳಬರಾಗಿದ್ದರೆ ಇದು ಓದಿ ನಗುತ್ತಿರಬಹುದು .. ಕಿರಿಯರಾಗಿದ್ದರೆ ದಯವಿಟ್ಟು ಹುಬ್ಬೇರಿಸಬೇಡಿ.
ಕೊನೆಗೊಂದು ಕಿವಿಮಾತು .ನಾನೊಬ್ಬ ರೈತನ ಮಗ ಅಲ್ಲದಿದ್ದರೂ ಆ ಮಣ್ಣಿನ ವಾಸನೆ, ಆ ಜೀವನ ನನಗೆ ಇಷ್ಟ.. ಇದೇ ಕಾರಣದಿಂದ ನಾನು ಮುಂದಿನ ತಲೆಮಾರಿಗೆ ಪರಿಚಯಿಸಲು ಈ ನೊಗ, ನೇಗಿಲು, ಸೇರು, ಕಳಸೆ ಮುಂತಾದ ಸಾಮಗ್ರಿಗಳನ್ನು ಸಂಗ್ರಹಿಸಿ ಇಟ್ಟಿದ್ದೇನೆ.
-ಕೆ. ಎ. ಎಂ. ಅನ್ಸಾರಿ ಮೂಡಂಬೈಲ್
ನೇಗಿಲಯೋಗಿಯ ಬಗ್ಗೆ ಬರಹ ಚೆನ್ನಾಗಿದೆ.