ಬಸ್ಸು ಬಂತು ಚುನಾವಣೆ ಬಸ್ಸು

Share Button

ಈಗ ಎಲ್ಲೆಲ್ಲೂ ಚುನಾವಣೆಯದ್ದೇ ಮಾತು.  ಚುನಾವಣೆಯೆಂದಾಗ  ಎಲ್ಲರ  ಮನಸ್ಸಲ್ಲೂ ಏನಾದರೊಂದು  ನೆನಪು  ಇಣುಕಬಹುದು.   ನಾನು ಸಣ್ಣವಳಿದ್ದಾಗ ಚುನಾವಣೆ ಬರಲೆಂದು ಹಂಬಲಿಸುತ್ತಿದ್ದೆ. ನಾನಷ್ಟೇ ಅಲ್ಲ ನನ್ನ ಒಡಹುಟ್ಟಿದವರಿಗೂ ಇದೇ ಆಸೆ ಇದ್ದಿರಬೇಕು. ಆಗ ನಮಗೆ ಚುನಾವಣೆಯ ಬಗ್ಗೆ ಸ್ಪಷ್ಟ ಕಲ್ಪನೆಯೇ ಇರಲಿಲ್ಲ.ನಾವು ವಯಸ್ಕರೂ ಆಗಿರಲಿಲ್ಲ. ಹಾಗಾಗಿ  ಮತದಾರರೂ ಆಗಿರಲಿಲ್ಲ. ಚುನಾವಣೆಯಿಂದಾಗುವ ಪರಿಣಾಮದ ಅರಿವೂ ಇರಲಿಲ್ಲ. ಚುನಾವಣೆಗಾಗಿ ನಾವು ಹಂಬಲಿಸಲು ಇದ್ದ ಏಕೈಕ ,ಆದರೆ ನಮ್ಮ ಪಾಲಿನ ಅತಿ ಮಹತ್ವದ ಕಾರಣ ನಮ್ಮೂರಿಗೆ ಬಸ್ಸು ಬರುತ್ತದೆಯೆಂಬುದು.
.
ನನ್ನ ಊರು ಆ ಕಾಲದಲ್ಲಿ ಒಂದು ಕುಗ್ರಾಮವಾಗಿತ್ತು. ಆ ನಮ್ಮ ಗ್ರಾಮಕ್ಕೆ ಬಸ್ ಸರ್ವಿಸ್ ಇರಲೇ ಇಲ್ಲ. ಜೀಪುಗಳೇ ನಮ್ಮೂರಿನ ಪ್ರಮುಖ ಸಾರಿಗೆ ವಾಹನಗಳಾಗಿದ್ದವು. ಅಪರೂಪಕ್ಕೆ ನೆಂಟರ ಮನೆಗೆ ಹೋಗುವಾಗ ಮಾತ್ರವೇ ಕೆಂಪು ಬಣ್ಣದ ಸರಕಾರಿ ಬಸ್ಸುಗಳನ್ನು ನೋಡುತ್ತಿದ್ದೆವು ಅಥವಾ ಪ್ರಯಾಣಿಸುತ್ತಿದ್ದೆವು.ಬಸ್ಸಿನಲ್ಲಿ ಕುಳಿತು ಕಿಟಕಿಯಿಂದ ಹೊರಗೆ ನೋಡುವಾಗ ಮರಗಳು, ಕಟ್ಟಡಗಳೆಲ್ಲಾ ಹಿಂದಕ್ಕೋಡುವ ಮ್ಯಾಜಿಕ್ ನಮ್ಮ ಕುತೂಹಲ ಕೆರಳಿಸುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗೆ ಹೋದನಂತರವೇ ಸುಖಾಸೀನ ಹಾಗೂ ಅರೆ ಸುಖಾಸೀನ ಬಸ್ಸುಗಳೆಂಬ ಬಸ್ಸುಗಳೂ ಇವೆ ಎಂದು .ನಮಗೆ ಗೊತ್ತಾಗಿದ್ದು. ದೂರದ ಊರುಗಳಿಗೆ ಪ್ರಯಾಣ ಮಾಡಿದ್ದ ನಮ್ಮ ಚಿಕ್ಕಪ್ಪನವರು ಬಾಂಬೇಯಲ್ಲಿ ಡಬಲ್ ಡೆಕ್ಕರ್ ಬಸ್ಸುಗಳು ಇವೆಯೆನ್ನುವಾಗ ನಮಗೆ ಆಶ್ಚರ್ಯವೋ ಆಶ್ಚರ್ಯ. ಖಾಸಗಿ ವಾಹನಗಳ ಸಂಖ್ಯೆ ಬಹಳ ಕಡಿಮೆಯಿದ್ದ ಆ ಕಾಲದಲ್ಲಿ ವಾಹನಗಳೆಂದರೆ ನಮಗೆ ಅದ್ಭುತ ವಸ್ತುಗಳಾಗಿದ್ದವು. ‘

ಅಂಥದ್ದರಲ್ಲಿ ಕೆಂಪು ಬಣ್ಣದ ಸರಕಾರಿ ಬಸ್ಸಿನ ಬಗ್ಗೆ ನಮ್ಮದು ಹುಚ್ಚು ವ್ಯಾಮೋಹ. ಟಿಕೆಟಿನ ಚೀಟಿ ಹರಿದು ಒಂದೆರಡು ತೂತು ಮಾಡಿ ಕೊಡುವ ಕಂಡಕ್ಟರ್, ಪೊಂಪೊಂ ಎಂದು ಹಾರನ್ ಹಾಕಿ ಬಸ್ಸು ಚಲಾಯಿಸುವ ಡ್ರೈವರ್ ನಮಗೆ ದೊಡ್ಡ ಮನುಷ್ಯರಂತೆ ಅನಿಸಿತ್ತಿದ್ದುದು ಸುಳ್ಳಲ್ಲ. ಎಲೆಯನ್ನು ಕಿತ್ತು ಟಿಕೆಟಾಗಿ ನೀಡಿ ರೈಟ್ ಎಂದು ಹೇಳಿ ಬಸ್ಸಿನ ಆಟ ಆಡುತ್ತಿದ್ದೆವು. ಅಂತೂ ನಮ್ಮ ಕುಗ್ರಾಮಕ್ಕೆ ಬಸ್ಸು ಇರಲಿಲ್ಲ. ನಮ್ಮ ಊರಿಗೆ ಬಸ್ಸು ಬರುವ ಏಕೈಕ ಸಂದರ್ಭವೆಂದರೆ ಚುನಾವಣೆಯ ಸಮಯ. ಚುನಾವಣೆಯ ಹಿಂದಿನ ದಿನ ಚುನಾವಣಾ ಸಿಬ್ಬಂದಿ ಹಾಗೂ ಸಾಮಗ್ರಿಗಳ ಜೊತೆ ನಮ್ಮೂರ ದಾರಿಯಲ್ಲಿ ಬಸ್ಸು ಬರುತ್ತಿತ್ತು. ಮಧ್ಯಾಹ್ನದ ವೇಳೆಗೆ ಬರುತ್ತದೆಂದು ಅಮ್ಮ ಅಂದಾಜು ಟೈಮ್ ಹೇಳುತ್ತಿದ್ದರು. ಬೇಗಬೇಗ ಊಟ ಮುಗಿಸಿ ನಾವು ಓಡಿ ರಸ್ತೆ ಬದಿಗೆ ಬರುತ್ತಿದ್ದೆವು. ನಮ್ಮ ಮನೆಯಿಂದ ರಸ್ತೆಗೆ ಸ್ವಲ್ಪ ದೂರವಿತ್ತು. ಒಂದು ಸಣ್ಣ ಏರನ್ನೇರಿ ಇಳಿದರೆ ರಸ್ತೆ. ಅದು ಡಾಮರು ರಸ್ತೆಯೇ. ಆದರೆ ಕಿರಿದಾಗಿತ್ತು. ಬಸ್ಸು ಬರುವ ಮೊರೆತ, ದಡಬಡ ಸದ್ದು ನಮ್ಮೂರಿನ ನಿಶ್ಶಬ್ದತೆಯಲ್ಲಿ ಬಹಳ ದೂರದಿಂದಲೇ ಕಿವಿಗೆ ಬೀಳುತ್ತಿತ್ತು. ಇನಿಯನಿಗಾಗಿ ಕಾಯುವ ಪ್ರೇಯಸಿಯಂತೆ ಅತ್ಯಂತ ಕಾತರದಿಂದ ಬಸ್ಸಿನ ದರ್ಶನಕ್ಕಾಗಿ ಕಾಯುತ್ತಿದ್ದೆವು. ಅದು ನಮ್ಮ ಮುಂದಿನಿಂದ ಹಾದು ಹೋದಾಗ ನಮಗೆ ಸ್ವರ್ಗ ಸಿಕ್ಕಿದಷ್ಟು ಸಂತೋಷವಾಗುತ್ತಿತ್ತು. ಮರುದಿನ ಸಂಜೆ ಓಟು ಮುಗಿಸಿ ಬಸ್ಸು ಮರಳಿ ಹೊರಟಾಗ ಮಗದೊಮ್ಮೆ ನಮ್ಮ ದಂಡು ಬಸ್ಸಿನ ದರ್ಶನ ಭಾಗ್ಯಕ್ಕಾಗಿ ನೆರೆಯುತ್ತಿತ್ತು.

 ,

ನಮ್ಮ ಊರಿನ ಜನರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಕರಾರಸಾಸಂ ನವರು ನಮ್ಮೂರಿಗೂ ಒಂದು ಬಸ್ಸು ಕಳಿಸಿದರು. ಮಧ್ಯಾಹ್ನ ಎರಡು ಗಂಟೆಗೆ ಬಂದು ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಆ ಬಸ್ಸು ಹಿಂತಿರುಗುತ್ತಿತ್ತು. ಈ ಸಮಯವಾದ್ದರಿಂದಲೋ ಅಥವಾ ನಮ್ಮೂರ ಜನರಿಗೆ ನಡಿಗೆಯೋ, ಜೀಪಿನ ಸವಾರಿಯೋ ಹೆಚ್ಚು ಪಥ್ಯ ಎನಿಸಿದ್ದರಿಂದಲೋ ಬಸ್ಸಿನ ಪ್ರಯಾಣಕ್ಕೆ ಜನರ ಸಂಖ್ಯೆ ಬಹಳ ಕಡಿಮೆಯಿತ್ತು. ಕೃಷಿಕರಾದ ನಮ್ಮ ಹಳ್ಳಿಯ ಜನರಿಗೂ ಶಾಲಾ ಮಕ್ಕಳಿಗೂ ಈ ಸಮಯದಿಂದ ಏನೂ ಪ್ರಯೋಜನವಾಗಲಿಲ್ಲ. ನಾವು ಶನಿವಾರ ಸಂಜೆ ನಾಲ್ಕು ಗಂಟೆಗೆ ಐದು ಕಿ. ಮೀ ದೂರದ ನಮ್ಮ ಚರ್ಚಿಗೆ ಹೋಗುತ್ತಿದ್ದೆವು. ಆಗ ಈ ಬಸ್ಸು ಉಪಯೋಗಕ್ಕೆ ಬರುತ್ತಿತ್ತು. ನಾವು ಚರ್ಚಿಗೆಂದು ಮನೆಯಿಂದ ಹೊರಟು ಐದು ನಿಮಿಷವೂ ಆಗಿರಲಿಲ್ಲ. ಮನೆಯಲ್ಲಿ ಅಮ್ಮನಿಗೆ ಭಾರೀ ಶಬ್ದ ಕೇಳಿಸಿತು. ಬಸ್ಸು ಅಪಘಾತಕ್ಕೀಡಾಗಿದೆ ಎಂಬುದು ಅವರಿಗೆ ಹೊಳೆದುಹೋಯಿತು.  “ಅಯ್ಯೋ ನನ್ನ ಮಕ್ಕಳು..” ಎನ್ನುತ್ತಾ ಎದೆ ಬಡಿದುಕೊಂಡು ಓಡಿಕೊಂಡು ಬಂದರು. ಬಸ್ಸು ಇಲ್ಲವೆಂದು ನಾವು ಇನ್ನೊಂದು ಕಾಲುದಾರಿಯಲ್ಲಿ ನಡೆಯಲಾರಂಭಿಸಿದ್ದೆವು. ಬಸ್ಸಿನ ಶಬ್ದ ಜೊತೆಗೆ ಜೋರಾದ ಢಿಕ್ಕಿಯ ಶಬ್ದ ಕೇಳಿ ನಾವೂ ಹಿಂತಿರುಗಿ ಓಡಿ ಬಂದೆವು. ನಮ್ಮನ್ನು ಕಂಡ ಅಮ್ಮನಿಗೆ ನೆಮ್ಮದಿ. ಬಸ್ಸು ರಸ್ತೆ ಬದಿಯ ಮಾವಿನಮರಕ್ಕೆ ಗುದ್ದಿತ್ತು. ನಮ್ಮ ನೆರೆಮನೆಯ ಕೆಲವೇ ಕೆಲವು ಪ್ರಯಾಣಿಕರಷ್ಟೇ ಅದರಲ್ಲಿದ್ದರು. ಒಬ್ಬ ಹೆಂಗಸಿನ ಮೂಗು ಜಜ್ಜಿ ರಕ್ತ ಬರುತ್ತಿತ್ತು. ಭಯದಿಂದಲೋ ಏನೋ ಅವರು ಮೂರ್ಛೆ ಹೋಗಿದ್ದರು. ಅಲ್ಲೇ ಸಮೀಪದಲ್ಲಿದ್ದ ಕೆರೆಯಿಂದ ನೀರು ತಂದು ಚಿಮುಕಿಸಿದಾಗ ಅವರು ಎಚ್ಚರಗೊಂಡರು. ಉಳಿದವರಿಗೂ ತಲೆ ಮೈ ಕೈ ಸೀಟಿನ ಮುಂದಿನ ಭಾಗಕ್ಕೆ  ತಾಗಿ ಸ್ವಲ್ಪ ನೋವಾಗಿದ್ದು ಬಿಟ್ಟರೆ ಹೆಚ್ಚಿನ ಸಮಸ್ಯೆಯೇನೂ ಆಗಲಿಲ್ಲ. ಬಹುಶಃ ಈ ಘಟನೆ ಒಂದು ನೆಪವಾಯಿತೋ ಏನೋ, ಪ್ರಯಾಣಿಕರಿಲ್ಲದೇ ನಷ್ಟಕ್ಕೊಳಗಾಗುತ್ತಿದೆಯೆಂದು ಆ ಬಸ್ ಸರ್ವಿಸ್ ಪೂರ್ಣವಾಗಿ ರದ್ದಾಯಿತು.
ಯಾಕೋ ನಮ್ಮೂರಿಗೆ ಬಸ್ಸಿನ ಭಾಗ್ಯ ಇಲ್ಲ ಅನಿಸ್ತದೆ. ನಮ್ಮ ಊರಿನ ಪರಿಸ್ಥಿತಿ ಬಹಳಷ್ಟು ಸುಧಾರಿಸಿದೆ.ಶಾಲೆಗಳಿಗೆ, ಕಛೇರಿಗಳಿಗೆ ನಿತ್ಯ ಹೋಗುವ ಸಾಕಷ್ಟು ಜನರಿದ್ದಾರೆ. ಆದರೆ ಬಸ್ ಸರ್ವಿಸ್ ಮಾತ್ರಾ ಇಲ್ಲ. ಪ್ರತಿಯೊಂದು ಮನೆಯಲ್ಲೂ ಸ್ವಂತ ವಾಹನವಿದೆ. ಇಲ್ಲದವರಿಗೆ ಬಾಡಿಗೆ ಆಟೋಗಳು ಸಿಗುತ್ತವೆ. ಶಾಲಾ ಮಕ್ಕಳಿಗೆ ಸ್ಕೂಲ್ ಬಸ್ಸುಗಳಿವೆ. ಹಿಂದಿನ ಜೀಪ್ ಸರ್ವಿಸ್ ಕೂಡಾ ವಿರಳವಾಗಿದೆ. ಇನ್ನು ಬಹುಶಃ ನಮ್ಮೂರಿನ ಜನ ಬಸ್ಸು ಬೇಕೆಂದು ಕೇಳಲಿಕ್ಕೇ ಇಲ್ಲ. ಆದರೆ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಮಕ್ಕಳಾಗಿದ್ದ ನಮ್ಮಂಥವರಿಗೆ ಆ ಕೆಂಪು ಬಸ್ಸಿನ ನೆನಪು ಯಾಕೋ ಮಧುರ ನೆನಪೇ ಆಗಿದೆ. ಈಗ ಕೆ ಎಸ್ ಆರ್ ಟಿ ಸಿಯವರು ಗ್ರಾಮೀಣ ಬಸ್ಸುಗಳಿಗೂ ವಿವಿಧ ಬಣ್ಣಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಹಳೆಯ ಮಾದರಿ ಕೆಂಪು ಬಸ್ಸುಗಳು ಈಗ ಇಲ್ಲ. ಈಗ ಕೆಂಪು ಬಸ್ಸುಗಳಿದ್ದರೂ ಅವುಗಳ ಸ್ವರೂಪ ಬದಲಾಗಿದೆ. ಆಗ ಚುನಾವಣೆಯ ಬಸ್ಸು ನೋಡಲು ಕಾದು ಕುಳಿತಿರುತ್ತಿದ್ದ ನಾನು ಈಗ ಮತಗಟ್ಟೆಯ ಸಿಬ್ಬಂದಿಗಳಲ್ಲಿ ಒಬ್ಬಳಾಗಿ ನಮ್ಮ ಚುನಾವಣಾ ಕರ್ತವ್ಯದ ಬಸ್ಸು ಈ ಬಿಸಿಲಿನಲ್ಲಿ ನಿಂತಿರದೇ ನಮ್ಮನ್ನು ಹೊತ್ತುಕೊಂಡು ಒಮ್ಮೆ ನಮ್ಮ ಮತಗಟ್ಟೆಗೆ ತಲುಪಲಿ, ಚುನಾವಣಾ ಕರ್ತವ್ಯ ಯಶಸ್ವಿಯಾಗಿ ಮುಗಿದು ನಮ್ಮನ್ನು ಮರಳಿ ಸುರಕ್ಷಿತವಾಗಿ ತಲುಪಿಸಲಿ ಎಂದು ಪ್ರಾರ್ಥಿಸುತ್ತೇನೆ. ಆವತ್ತು ನನ್ನಂತಹ ಮಕ್ಕಳು ಕುತೂಹಲದಿಂದ ನೋಡಿದಂತೆ ಯಾವುದಾದರೂ ಪುಟ್ಟ ಕಣ್ಣುಗಳು ನಮ್ಮ ಬಸ್ಸಿನತ್ತ  ನೋಡುತ್ತಿವೆಯೇ  ಎಂದು  ಇಣುಕುತ್ತೇನೆ.ಈಗಿನ ಮಕ್ಕಳಲ್ಲಿ ಆ ಕುತೂಹಲ  ಇದ್ದರೆ ತಾನೇ?
 .
 
-ಜೆಸ್ಸಿ ಪಿ ವಿ.
,

2 Responses

  1. Shankara Narayana Bhat says:

    ನೈಜ ಚಿತ್ರಣ.

  2. Hema says:

    ಚೆಂದದ ಬರಹ…ಮಕ್ಕಳ ಮುಗ್ಧತೆ ಇಷ್ಟವಾಯಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: