ಪವಿತ್ರ ಸಂಬಂಧವ ಸಂಶಯಗಳಿಂದ ಅಪವಿತ್ರಗೊಳಿಸದಿರಿ
ದಾಂಪತ್ಯ ಜೀವನವನ್ನು ಸರಿದೂಗಿಸಿ ಕೊಂಡು ಹೋಗಲು ಗಂಡು ಹಾಗೂ ಹೆಣ್ಣಿನ ಸಮಾನ ಅವಶ್ಯಕತೆ ಇದೆ. ಇವರಿಬ್ಬರ ಮನದ ಭಾವನೆಗಳು ಒಂದೇ ಆದಾಗಲೇ ಸಂಸಾರವು ಉತ್ತಮ ರೀತಿಯಲ್ಲಿ ಮುಂದುವರೆಯಲು ಸಾಧ್ಯ. ಮುಖ್ಯವಾಗಿ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು, ಪರಸ್ಪರ ಪ್ರೀತಿ, ಗೌರವ ಕೊಟ್ಟು ಕೊಳ್ಳುವಿಕೆಯಿಂದ ವೈವಾಹಿಕ ಜೀವನವನ್ನು ಮಧುರವಾಗಿಸ ಬಹುದು. ಒಂದು ವೇಳೆ ಇವರಿಬ್ಬರ ಮಧ್ಯೆ ಸಂಶಯ ಮನೆ ಮಾಡಿತೆಂದರೆ ಸಂಬಂಧದಲ್ಲಿ ಬಿರುಕು ಉಂಟಾಗಿ ದಾಂಪತ್ಯ ಜೀವನದಲ್ಲಿ ವಿರಸ ಖಂಡಿತ. ಜೊತೆಯಲ್ಲಿ ಬಾಳ ಬೇಕಾದ ಇಬ್ಬರೂ ಮಾನಸಿಕವಾಗಿ ಬೇರೆಯಾಗುವ ಸಂದರ್ಭಗಳನ್ನು ಸಮಾಜದಲ್ಲಿ ನಾವಿಂದು ಕಾಣುತ್ತಿದ್ದೇವೆ.
ಮೊನ್ನೆ ನಮ್ಮ ಮನೆಯಿಂದ ಸ್ವಲ್ಪ ದೂರದ ಔಷಧಿ ಅಂಗಡಿಗೆ ಹೋಗುತಿದ್ದ ಸಂದರ್ಭ, ಅನತಿ ದೂರದಲ್ಲಿ ಪತಿ-ಪತ್ನಿ ಜಗಳವಾಡುತ್ತಿರುವುದು ನನ್ನ ಗಮನಕ್ಕೆ ಬಂತು. ನನ್ನಷ್ಟಕ್ಕೆ ನಾನು ಅಂಗಡಿಗೆ ಬಂದು ಔಷಧಿಗೆ ಆರ್ಡರ್ ಮಾಡಿದೆ. ಅಲ್ಲಿಗೂ ಬಂದ ಆ ಜೋಡಿಗಳ ಜಗಳದ ಮಾತುಗಳು ನನಗೆ ಸ್ಪಷ್ಟವಾಗಿ ಕೇಳಿಸುತಿತ್ತು. “ನೀನು ಉಳಿದೆಲ್ಲಾ ಗಂಡಸರ ಜೊತೆ ಹಲ್ಲು ಬಿಟ್ಟು ಕೊಂಡು ನಗ್ತಾ ಮಾತನಾಡಿಸುತ್ತಿ ನನ್ನ ಕಂಡ್ರೆ ಉರಿದು ಬೀಳ್ತಿಯಲ್ಲಾ, ನಿನ್ಗೊಂದು ಗತಿ ಕಾಣಿಸ್ಲೇ ಬೇಕು ಎಂಬ ಅವನ ಮಾತು. ‘ಇಲ್ಲಿ ಎಲ್ಲರೂ ನೋಡುತ್ತದ್ದಾರೆ ಸ್ವಲ್ಪ ಸುಮ್ಮನಿರಿ ಎಂದ ಅವನ ಪತ್ನಿ ಕಣ್ಣು ತುಂಬಾ ನೀರು ತುಂಬಿ ಕೊಂಡು ಯಾರಾದರೂ ತಮ್ಮನ್ನು ಗಮನಿಸುತ್ತಿದ್ದಾರೋ ಎಂದು ನೋಡುತ್ತಿದ್ದಳು.
ಮತ್ತೊಂದಡೆ, ತನ್ನ ಗಂಡ ಆಫೀಸ್ ನಲ್ಲಿ ರೂಪವತಿ ಲೇಡಿ ಜೊತೆ ಹೆಚ್ಚಾಗಿ ಮಾತನಾಡುತ್ತಿದ್ದಾನೆ ಎಂದರೆ ಅವಳ ಜೊತೆ ಸಂಬಂಧವಿದ್ದು ತನ್ನನ್ನು ಕೀಳಾಗಿ ಕಾಣುತ್ತಿದ್ದಾನೆಂಬ ಸಂಶಯ. ಇದರಿಂದ ಇಬ್ಬರಲ್ಲೂ ವಿನಾ ಕಾರಣ ಜಗಳ ಚುಚ್ಚು, ಮಾತು ಇದರಿಂದ ವೈಮನಸ್ಸು ಜೊತೆಗೆ ಮನಸ್ಸು ಕದಡುವ ವಾತಾವರಣ ಸೃಷ್ಟಿ ಯಾಗುತ್ತದೆ. ಪತ್ನಿಯಾದವಳು ನೋಡಲು ಚಂದವಿದ್ದರೆ ಸಮಾಜದಲ್ಲಿ ತನಗಿಂತ ಪ್ರತಿಷ್ಟಿತ ಸ್ಥಾನಮಾನ, ಕೀರ್ತಿಗಳಿಸುತ್ತಿದ್ದರೆ, ಹೆಚ್ಚು ಸಂಬಳ ಪಡೆಯುವವಳಾದರೆ ಇದನ್ನು ಅನೇಕ ಮಂದಿ ಸಹಿಸಲಾರರು. ಇಂತಹ ಸಂದರ್ಭಗಳಲ್ಲಿ ಪತಿ ಆಕೆಯನ್ನು ತನ್ನ ಅಂಕೆಯಲ್ಲಿರಿಸುವುದನ್ನು ಅಲ್ಲಲ್ಲಿ ಕಾಣುತ್ತೇವೆ. ಒಂದೊಂದು ಸಲ ಹೆಣ್ಣಿಗೆ ಪ್ರತಿಭೆಯಿದ್ದರೂ ಮದುವೆ ನಂತರ ಗಂಡನ ಕೆಲವು ಕಡಿವಾಣಗಳಿಂದಾಗಿ ಅಭಿವ್ಯಕ್ತ ಗೊಳಿಸಲು ಸಾಧ್ಯವಾಗದೆ ಇರುವ ಪರಿಸ್ಥಿತಿ.ಹಿಂದಿನ ಕಾಲದಲ್ಲಿ ಹೆಂಡತಿಯಾದವಳು ಬಲು ಸುಂದರಿಯಾಗಿದ್ದರೆ ಗಂಡ ತಾನು ಕೆಲಸಕ್ಕೆ ಹೋಗುವ ಮುಂಚೆ ಅವಳನ್ನು ಹೊರಗೆ ಹೋಗದ ಹಾಗೆ ಮನೆಗೆ ಬೀಗ ಹಾಕಿ ಹೋಗುವ ಪದ್ಧತಿಯೂ ಇತ್ತೆಂದು ಹಿರಿಯರಿಂದ ತಿಳಿದು ಕೊಂಡಿದ್ದೇವೆ. ಒಂದು ರೀತಿಯಲ್ಲಿ ಗಂಡಸರಿಗೆ ಸಂಶಯ ಸ್ವಭಾವ ಹೆಚ್ಚೆಂದೇ ಹೇಳ ಬಹುದು. ಸಮಾಜದಲ್ಲಿ ಎಲ್ಲರೂ ಹೀಗೆ ಇರುತ್ತಾರೆಂದೂ ಅಲ್ಲ. ಆದರೂ ಹೆಚ್ಚಾಗಿ ಇಂತಹ ಉದಾಹರಣೆಗಳನ್ನು ಕೊಡ ಬಹುದು.
ಬಹು ಹಿಂದೆ ಅಪರೂಪವಾಗಿ ಪತಿ-ಪತ್ನಿ ಮದುವೆಗೋ ಅಥವಾ ಸಭೆ ಸಮಾರಂಭಗಳಿಗೆ ಹೊರಟಾಗ ಪತಿ ಮುಂದೆ, ಮುಂದೆ ಹೆಜ್ಜೆ ಹಾಕುತ್ತಿದ್ದರೆ ಪತ್ನಿ ಹಿಂದೆ ಹಿಂಬಾಲಿಸುವ ದೃಶ್ಯ ಕಂಡು ಬರುತ್ತಿತ್ತು. ನೋಡುಗರ ಕಣ್ಣಿಗೆ ಮಾಸಿದ ಸಂಬಂಧವೆಂಬ ಕಲ್ಪನೆ ಮೂಡುವುದು ಸಹಜ. ಇಂದಿನ ಆಧುನಿಕ ಯುಗದಲ್ಲಿ ಪತಿ, ಪತ್ನಿಯರು ಕೈ ಕೈ ಹಿಡಿದು ಕೊಂಡು ಭುಜಕ್ಕೆ ಆತು ಕೊಂಡು ನಡೆಯುವ ದೃಶ್ಯ ಎದುರಾದಾಗ ಬರಿಗಣ್ಣಿಗೆ ಅನ್ಯೋನ್ಯತೆಯ ದಾಂಪತ್ಯದಂತೆ ಗೋಚರಿಸುವುದರಲ್ಲಿ ಆಶ್ಚರ್ಯವಿಲ್ಲ. ಅಂದರೆ ಜೊತೆಯಲ್ಲಿ ಕೈ ಹಿಡಿದು ಕೊಂಡು ನಡೆದಾಡಿದ ಮಾತ್ರಕ್ಕೆ ಜೋಡಿ ಎಂದರೆ ಹೀಗಿರ ಬೇಕೆಂದು ಭಾವಿಸುವುದು ಸರಿಯಲ್ಲ. ಹಾಗೆ ಎಲ್ಲವೂ ಚೆನ್ನಾಗಿದೆ ಎಂದು ಹೇಳುವುದು ಎಷ್ಟು ಕಷ್ಟವೋ ಜೊತೆಯಲ್ಲಿ ಹೆಜ್ಜೆ ಹಾಕದೆ ಇದ್ದಲ್ಲಿ ಎಲ್ಲೋ ಏನೋ ತಪ್ಪು ನಡೆದಿರ ಬಹುದು ಎಂದು ತಿಳಿದು ಕೊಳ್ಳುವುದು ಅಷ್ಟೇ ಕಷ್ಟ.
ಮದುವೆ ಇದು ಅನುದಿನ ನಿರಂತರದ ಬಾಂಧವ್ಯ, ಇವೆಲ್ಲವನ್ನು ಮೀರಿದ ಆತ್ಮೀಯತೆ ಹಾಗೂ ನಿತ್ಯ ಸಂವೇದನೆ ಎನ್ನುವುದಂತೂ ನಿಜ. ಅವಿಲ್ಲದೆ ಇರುತ್ತಿದ್ದರೆ ಧರ್ಮದ, ಅರ್ಥದ, ಕಾಮದ ಜೊತೆ ನಿರ್ಲಿಪ್ತತೆಯಿಂದ ಹೆಜ್ಜೆಯನ್ನಿಡುವುದು ಸಾಧ್ಯವಿಲ್ಲದ ಮಾತು. ಸತಿ-ಪತಿ ಎಂದ ಮೇಲೆ ವಿರಸ, ಕೋಪತಾಪ, ಜಗಳ, ಮನಸ್ಥಾಪಗಳು ಇರುವುದು ಸಹಜವೇ. ಒಂದರ್ಥದಲ್ಲಿ ಒಂದೊಂದು ವಿರಸ, ಜಗಳಗಳೂ ಇಬ್ಬರನ್ನು ಬುದ್ಧಿವಂತರನ್ನಾಗಿಸುವುದಲ್ಲದೆ, ಇನ್ನೊಂದರ್ಥದಲ್ಲಿ ಇಬ್ಬರ ಮನಸ್ಸನ್ನು ಪರಿವರ್ತನೆ ಮಾಡಿ ಸಂಬಂಧಗಳ ಜವಾಬ್ದಾರಿಯನ್ನೂ ಹೆಚ್ಚಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಧೀರ್ಘ ಕಾಲದ ಸಿಟ್ಟು, ಮುನಿಸು ವೈವಾಹಿಕ ಜೀವನವನ್ನೇ ಹಾಳು ಮಾಡ ಬಹುದು. ಚಿಕ್ಕ ಪುಟ್ಟ ಸಂಗತಿಗಳಿಗೆಲ್ಲಾ ವಿನಾ ಕಾರಣ ಸಂಶಯ ಪಡುತ್ತಾ ಹೋದಲ್ಲಿ ಬಾಂಧವ್ಯವು ಗಟ್ಟಿಯಾಗಿ ಉಳಿಯದೆ ಬಂಧನವಾಗಿ ಮಾರ್ಪಾಟಾಗ ಬಹುದು. ಮದುವೆಯ ಪ್ರಾರಂಭದಲ್ಲಿದ್ದ ಉತ್ತಮ ಭವಿಷ್ಯದ ಕನಸು ನನಸಾಗದೆ ಕನಸಾಗಿ ಉಳಿಯ ಬಹುದು. ದಾಂಪತ್ಯ ಜೀವನ ಸುಖಮಯವಾಗಿರ ಬೇಕೆನ್ನುವುದು ಪ್ರತಿಯೊಬ್ಬರ ಆಶಯ. ಇದು ಪತಿ-ಪತ್ನಿ ಇಬ್ಬರಲ್ಲೂ ಇರ ಬೇಕಾಗುತ್ತದೆ. ಆವಾಗಲೇ ಬದುಕು ಬಲು ಸುಂದರ.
* ಮುಕ್ತ ಮಾತುಕತೆ: ಪತಿ-ಪತ್ನಿ ಪರಸ್ಪರ ತಮ್ಮ ಭವಿಷ್ಯ, ಕನಸುಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿ. ದಿನದಲ್ಲಿ ಸ್ವಲ್ಪ ಸಮಯವನ್ನು ನಿಮ್ಮ ಭಾವನೆಗಳನ್ನು, ಅಭಿಪ್ರಾಯಗಳನ್ನು ಹಂಚಿ ಕೊಳ್ಳಲು ಮೀಸಲಿಡಿ. ಇದರಿಂದ ನಿಮ್ಮಲ್ಲಿ ಆತ್ಮೀಯತೆ ಹೆಚ್ಚುವುದಲ್ಲದೆ ವಿಶ್ವಾಸ ಹುಟ್ಟಿಸುತ್ತದೆ.ಉತ್ತಮ ಗುಣಗಳನ್ನು ಪ್ರಶಂಸಿಸಿ. ಹೊಗಳಿಕೆಯು ಬಾಂಧವ್ಯವನ್ನು ಗಟ್ಟಿಗೊಳಿಸುವುದಲ್ಲದೆ ತಪ್ಪುಗಳನ್ನು ತಿದ್ದಿ ಕೊಳ್ಳಲು ಸಹಾಯಕ.
* ಪರಸ್ಪರ ಹೊಂದಾಣಿಕೆ: ಪತಿ-ಪತ್ನಿ ಜೀವನ ಪೂರ್ತಿ ಕೂಡಿ ಬಾಳುವ ಭರವಸೆಗಾಗಿ ಸಂಸಾರ ರಥವನ್ನು ಸಾಗಿಸ ಬೇಕಾಗುತ್ತದೆ. ಇಬ್ಬರೂ ಒಂದೇ ದೋಣಿಯ ಪಯಣಿಗರು ಎಂದಾದಾಗ ಇಬ್ಬರಲ್ಲೂ ಹೊಂದಾಣಿಕೆ ಬಹು ಮುಖ್ಯ ಪಾತ್ರ ವಹಿಸುತ್ತದೆ.
* ನಿಂದನೆಗೆ ಅವಕಾಶ ನೀಡದಿರಿ: ನಿಮ್ಮ ಸಂಗಾತಿಯ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿ ಕೊಳ್ಳಲು ಪ್ರಯತ್ನಿಸಿ. ವಿವಾಹದ ಜೀವನಾರಂಭದಲ್ಲಿದ್ದ ಹುರುಪು, ಉತ್ಸಾಹ, ಪ್ರೀತಿ ಕೊನೆಯ ತನಕವೂ ಮುಂದುವರಿಯುತೆ ನೋಡಿ ಕೊಳ್ಳಿ.
* ಪರಸ್ಪರ ಗೌರವಿಸುವುದನ್ನು ರೂಢಿ ಮಾಡಿ: ವೈವಾಹಿಕ ಜೀವನದಲ್ಲಿ ಪತಿ-ಪತ್ನಿ ಇಬ್ಬರೂ ವ್ಯಕ್ತಿತ್ವಕ್ಕೆ ಮನ್ನಣೆ ನೀಡಿ ಗೌರವಿಸಿದರೆ ಇಬ್ಬರಲ್ಲೂ ಪ್ರೀತಿ, ವಿಶ್ವಾಸ ಮನೆ ಮಾಡುತ್ತದೆ.
‘
.
People have to break the psychological barrier & to think and act like normal human beings. Don’t be ” Koopa Mandukas”, and follow the old adage” Desha sutthu, Kosha odhu”. Very nice presentation of the present scenario.
It’s Dr. Da ra Bendre not Daa Ra Bendre.
ಉತ್ತಮ ಬರಹ..
ಇಂದಿರಾ ಕುಮಟಾ ಅವರ ಲೇಖನ ಚೆನ್ನಾಗಿದೆ. ಕೊನೆಯಲ್ಲಿ ದಂಪತಿಗಳಿಗೆ ಉತ್ತಮ ಸಲಹೆಯನ್ನು ಕೊಟ್ಟಿದ್ದಾರೆ
ಉತ್ತಮ ಲೇಖನ ಮೇಡಂ.
Very good article..
ನಿಮ್ಮ ಬರೆಹ ತುಂಬಾ ಹಿಡಿಸಿತು
ನಿವು ಬರೆದ ಲೇಖನದಲ್ಲಿ ಗಂಡ ಹೆಂಡತಿಯರ ಸಂಬಂಧವನ್ನು ಕುರಿತು ತುಂಬಾ ಚೆನ್ನಾಗಿ ಬರೆದಿದ್ದೀರಾ ಮೇಡಂ