ಕ್ರೈಸ್ತರ ಪವಿತ್ರ ಹಬ್ಬ, ಗುಡ್ ಫ್ರೈಡೆ
ಗುಡ್ ಫ್ರೈಡೆ ದಿನ ಕ್ರಿಶ್ಚಿಯನ್ನರಿಗೆ ವಿಶೇಷ ದಿವಸವಲ್ಲವೇ? ಆ ದಿನ ಶುಭಾಶಯ ಹೇಳಲಿಕ್ಕಿಲ್ಲ ಎಂದು ಯಾರೋ ಅಂದರು. ಯಾಕೆ ಎಂದು ನನ್ನ ಮಿತ್ರರೊಬ್ಬರು ಕೇಳಿದರು. ಶುಭಾಶಯ ಹೇಳಿದರೆ ಅಪರಾಧವೇನೂ ಅಲ್ಲ. ಆದರೆ ಇದು ಸಂಭ್ರಮಿಸುವ ಹಬ್ಬವಲ್ಲ. ದುಃಖದಿಂದ, ಅತೀವ ಭಕ್ತಿಯಿಂದ ಆಚರಿಸುವ ಅತಿ ಮಹತ್ವದ ಹಬ್ಬ. ಈ ಕಾರಣಕ್ಕಾಗಿಯೇ ಸಾಮಾನ್ಯವಾಗಿ ಉಳಿದ ಹಬ್ಬಗಳಂತೆ ಈ ಹಬ್ಬಕ್ಕೆ ಯಾರೂ ಶುಭಾಶಯ ಹೇಳುವುದಿಲ್ಲ. ಈ ಹಬ್ಬದ ಕುರಿತ ಒಂದಿಷ್ಟು ಮಾಹಿತಿಗಳು ಇಲ್ಲಿವೆ. ಆಸಕ್ತರು ಓದಿ ತಿಳಿದುಕೊಳ್ಳಿ.
ಕ್ರೈಸ್ತರ ಅತಿದೊಡ್ಡ ಹಾಗೂ ಅತಿ ಮಹತ್ವದ ಹಬ್ಬವೇ ಗುಡ್ ಫ್ರೈಡೇ ಅಥವಾ ಶುಭ ಶುಕ್ರವಾರ. ಪಾಮ್ ಸಂಡೇ(ಗರಿಗಳ ಭಾನುವಾರ) ದಿಂದ ಈಸ್ಟರ್ ಸಂಡೇ ತನಕದ ಒಂದು ವಾರವನ್ನು ಕ್ರೈಸ್ತರು ಪವಿತ್ರ ವಾರ (Holy week) ಎಂದು ಪರಿಗಣಿಸುತ್ತಾರೆ. ಯೇಸುಕ್ರಿಸ್ತರು ದಿವ್ಯ ಬಲಿ ಪೂಜೆಯನ್ನು ಸ್ಥಾಪಿಸಿದ ಪವಿತ್ರ ಗುರುವಾರ, ಪವಿತ್ರ ಶುಕ್ರವಾರ, ಪವಿತ್ರ ಶನಿವಾರ ಹಾಗೂ ಈಸ್ಟರ್ ಭಾನುವಾರಗಳು ವಿವಿಧ ರೀತಿಯ ಆಚರಣೆಗಳಿಂದ ಕೂಡಿರುತ್ತವೆ. ಈ ಹಬ್ಬಕ್ಕೆ ಪೂರಕವಾಗಿ ಕ್ರೈಸ್ತರು 40 ದಿನಗಳ ಸಿದ್ಧತೆಯನ್ನು ಮಾಡಿರುತ್ತಾರೆ. ಈ ಅವಧಿಯಲ್ಲಿ ಕಥೋಲಿಕ ಕ್ರೈಸ್ತರೆಲ್ಲರೂ ಪಾಪನಿವೇದನೆ ಮಾಡಿಕೊಂಡು ಆಧ್ಯಾತ್ಮಿಕವಾಗಿಯೂ ತಯಾರಿ ನಡೆಸುತ್ತಾರೆ. ಪವಿತ್ರ ಗುರುವಾರದಂದು ಯೇಸುಕ್ರಿಸ್ತರು ತಮ್ಮ ಕೊನೆಯ ಭೋಜನದ ಸಂದರ್ಭದಲ್ಲಿ ಶಿಷ್ಯರ ಪಾದಗಳನ್ನು ತೊಳೆದು ಚುಂಬಿಸಿದ್ದರ ನೆನಪಿಗಾಗಿ ಚರ್ಚುಗಳಲ್ಲಿ ಗುರುಗಳು ಹನ್ನೆರಡು ಜನರ ಪಾದಗಳನ್ನು ತೊಳೆದು ಪಾದಕ್ಕೆ ಚುಂಬಿಸುತ್ತಾರೆ. ಈ ಎಲ್ಲಾ ದಿನಗಳಲ್ಲೂ ಬೈಬಲಿನ ಆಯ್ದ ಭಾಗಗಳನ್ನು ನಾಟಕ ರೂಪದಲ್ಲಿ ಪೂಜೆಯ ವೇಳೆಯಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಕ್ರೈಸ್ತರೆಲ್ಲರೂ ಕಡ್ಡಾಯವಾಗಿ ಈ ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.
ಪವಿತ್ರ ಗುರುವಾರದ ಕೊನೆಯ ಭೋಜನದ(ಲಾಸ್ಟ್ ಸಪ್ಪರ್) ಬಳಿಕ ಯೇಸುಕ್ರಿಸ್ತರು ಆ ರಾತ್ರಿ ಹೊತ್ತಲ್ಲಿ ತಮ್ಮ ಶಿಷ್ಯರನ್ನು ಕರೆದುಕೊಂಡು ಗತ್ಸಮನಿ ಎಂಬ ಒಲಿವ್ ತೋಟದಲ್ಲಿ ಪ್ರಾರ್ಥನೆಗಾಗಿ ಹೋದರು. ಶಿಷ್ಯರು ನಿದ್ರೆ ಹೋಗಿದ್ದರು. ಆಗ ಯೇಸುವಿನ ಶಿಷ್ಯರಲ್ಲೊಬ್ಬನಾದ ಇಸ್ಕರಿಯೋತ ಯೂದನು ಯೇಸುವನ್ನು ವಿರೋಧಿಸುವ ಯಹೂದ್ಯರೊಂದಿಗೆ ಬಂದು ಯೇಸುವನ್ನು ಹಿಡಿದುಕೊಡುತ್ತಾನೆ. ಯದೂದ್ಯರು ಯೇಸುವನ್ನು ಬಂಧಿಸಿ ಕರೆದೊಯ್ಯುತ್ತಾರೆ. ಅಲ್ಲಿ ಯೇಸುವನ್ನು ವಿಚಾರಣೆ ನಡೆಸಿ ಕಲ್ಲಿನ ಕಂಬಕ್ಕೆ ಕಟ್ಟಿ ಚೂಪಾದ ಮೊಳೆಗಳಿರುವ ಚಾಟಿಯಿಂದ ನಲುವತ್ತು ಏಟುಗಳನ್ನು ನೀಡುತ್ತಾರೆ. ನಂತರ ಹೆಚ್ಚಿನ ವಿಚಾರಣೆಗಾಗಿ ಪೊಂತಿಯಸ್ ಪಿಲಾತನ ಬಳಿಗೆ ತರುತ್ತಾರೆ. ಆದರೆ ಯೇಸುವಿನಲ್ಲಿ ಮರಣ ದಂಡನೆಗೆ ಅರ್ಹವಾದ ಯಾವ ಅಪರಾಧವೂ ಇಲ್ಲದ್ದರಿಂದ ಆತ ಯೇಸುವನ್ನು ಬಿಡುಗಡೆಗೊಳಿಸಲು ಇಚ್ಛಿಸುತ್ತಾನೆ. ಆದರೆ ಯಹೂದ್ಯರು “ಆತನನ್ನು ಶಿಲುಬೆಗೇರಿಸಿ” ಎಂದು ಬೊಬ್ಬೆ ಹಾಕತೊಡಗಿದಾಗ ಆತ ಒಂದು ಪಾತ್ರೆಯಲ್ಲಿ ನೀರು ತರಿಸಿ ಎಲ್ಲರೆದುರು ಕೈತೊಳೆದು “ಈ ನೀತಿವಂತನ ರಕ್ತದಲ್ಲಿ ನನ್ನ ಪಾಲಿಲ್ಲ” ಎನ್ನುತ್ತಾನೆ. ಯಹೂದ್ಯರು ಯೇಸುವಿನ ತಲೆಗೆ ಚೂಪಾದ ಮುಳ್ಳಿನ ಕಿರೀಟ ತೊಡಿಸುತ್ತಾರೆ. ಭಾರವಾದ ಶಿಲುಬೆ ಹೊರಿಸಿ ಕಲ್ವಾರಿ ಬೆಟ್ಟಕ್ಕೆ ಕರೆತಂದು ಅಲ್ಲಿ ಅವರ ಮೇಲಂಗಿ ಹಾಗೂ ನಿಲುವಂಗಿಗಳನ್ನು ಕಳಚಿ ಆ ಬಟ್ಟೆ ಯಾರಿಗೆ ಸೇರಬೇಕೆಂದು ಚೀಟಿ ಹಾಕಿ ಹಂಚಿಕೊಳ್ಳುತ್ತಾರೆ. ನಂತರ ಯೇಸುವಿನ ಅಂಗೈ ಹಾಗೂ ಕಾಲುಗಳಿಗೆ ಚೂಪಾದ ಮೊಳೆ ಹೊಡೆದು ಶಿಲುಬೆಗೆ ಜಡಿಯುತ್ತಾರೆ. ಇಬ್ಬರು ಕುಖ್ಯಾತ ಕಳ್ಳರ ನಡುವೆ ಇವರನ್ನು ಶಿಲುಬೆಗೇರಿಸುತ್ತಾರೆ.
.
ಸುಮಾರು ಮೂರುಗಂಟೆಯ ವೇಳೆಗೆ ಯೇಸು ಪ್ರಾಣ ಬಿಡುತ್ತಾರೆ.ಆಗ ಭೂಕಂಪವಾಗುತ್ತದೆ. ಸೂರ್ಯ ಮರೆಯಾಗಿ ಭೂಮಿಯಲ್ಲಿ ಕತ್ತಲೆ ಕವಿಯುತ್ತದೆ. ಜೆರುಸಲೇಂ ದೇವಾಲಯದ ಗರ್ಭಗುಡಿಯ ಪರದೆ ಇಬ್ಭಾಗವಾಗಿ ಹರಿದುಹೋಗುತ್ತದೆ. ಜನರೆಲ್ಲಾ ಭಯಪಟ್ಟು ಇವನು ಸತ್ಯವಾಗಿಯೂ ದೇವರ ಪುತ್ರನೇ ಆಗಿದ್ದನು ಎಂದು ಹೇಳುತ್ತಾರೆ. ಪವಿತ್ರ ಶುಕ್ರವಾರದಂದು ಯೇಸುವಿನ ಶಿಲುಬೆಯ ದಾರಿ(Way of the Cross)ಯನ್ನು ಸ್ಮರಿಸಿ ವಿಶೇಷ ಪ್ರಾರ್ಥನೆ ನಡೆಸಲಾಗುತ್ತದೆ. ಆದಿನ ಚರ್ಚ್ ಬೆಲ್ ಗಳನ್ನು ಮೊಳಗಿಸುವುದಿಲ್ಲ. ಯೇಸುವಿನ ಶಿಲುಬೆಯ ಪ್ರತಿಮೆಯನ್ನು ಬಿಳಿಬಟ್ಟೆಯಿಂದ ಮುಚ್ಚಲಾಗುತ್ತದೆ. ಯೇಸುವಿನ ಶವಶರೀರದ ಮೆರವಣಿಗೆಯನ್ನು ಕೂಡಾ ನಡೆಸಲಾಗುತ್ತದೆ. ಎಲ್ಲರೂ ತಪ್ಪದೇ ಈ ಕಾರ್ಯಕ್ರಮಗಳಲ್ಲಿ ಭಕ್ತಿಯಿಂದ ಭಾಗವಹಿಸಿ ಪುನೀತರಾಗುತ್ತಾರೆ. ಪಾಪದಿಂದ ಮನುಕುಲವನ್ನು ರಕ್ಷಿಸಲು ಮನುಷ್ಯನಾಗಿ ಅವತರಿಸಿದ ಯೇಸುಕ್ರಿಸ್ತರು ತಮ್ಮ ಶಿಲುಬೆ ಮರಣದ ಮೂಲಕ ತಮ್ಮನ್ನು ತಾವೇ ಬಲಿಯರ್ಪಿಸಿ ಮನುಷ್ಯರಿಗೆ ಪಾಪ ವಿಮೋಚನೆ ತಂದು ಕೊಟ್ಟಿದ್ದಾರೆ ಎಂದು ಕ್ರೈಸ್ತರು ನಂಬುತ್ತಾರೆ. ಯೇಸುವಿನ ದಿವ್ಯ ರಕ್ತದಿಂದ ನಮ್ಮ ಪಾಪಗಳು ತೊಳೆಯಲ್ಪಡಲಿ ಎಂದು ಮನಃಪೂರ್ವಕವಾಗಿ ಪ್ರಾರ್ಥಿಸುತ್ತಾರೆ.
– ಜೆಸ್ಸಿ ಪಿ.ವಿ
ಕ್ರೈಸ್ತಧರ್ಮದ ಬಗ್ಗೆ ತಿಳುವಳಿಕೆ ಕೊಡುವ ಲೇಖನ…ಚೆನ್ನಾಗಿದೆ..!