ತೂಗುವ ಸೇತುವೆಗಳೂ ಬಾಗುವ ಮನಗಳೂ
ಕರ್ನಾಟಕ ಹಾಗೂ ಭಾರತದ ಇತರ ರಾಜ್ಯಗಳಲ್ಲಿ ಈಗಲೂ, ನದಿದಂಡೆಗಳಲ್ಲಿರುವ ಹಳ್ಳಿಗಳು ಮಳೆಗಾಲದಲ್ಲಿ ಉಕ್ಕಿ ಹರಿವ ಪ್ರವಾಹದಿಂದಾಗಿ ಸುತ್ತುಮುತ್ತಲಿನ ಸಂಪರ್ಕ ಕಳೆದುಕೊಂಡು ಅಕ್ಷರಶ: ದ್ವೀಪಗಳಾಗುವುದಿದೆ. ಅರ್ಧ ಗಂಟೆ ವಿದ್ಯುತ್, ಇಂಟರ್ನೆಟ್ ಇಲ್ಲದಿದ್ದರೆ ಚಡಪಡಿಸುವ ಈಗಿನ ಕಾಲದಲ್ಲಿ ದಿನಗಟ್ಟಲೆ ಮುಖ್ಯವಾಹಿನಿಯಿಂದ ಸಂಪರ್ಕ ಕಳೆದುಕೊಂಡು ದ್ವೀಪದಲ್ಲಿರುವುದು ಎಷ್ಟು ಕಷ್ಟ!. ಊಹಿಸಿಕೊಳ್ಳಿ! ಮಕ್ಕಳು ಶಾಲೆಗೆ ಹೊರಟು ನಿಂತಿದ್ದರೂ, ನದಿಯಲ್ಲಿ ಪ್ರವಾಹ ಬಂದುದರಿಂದ ಇನ್ನೊಂದು ದಡದಲ್ಲಿರುವ ಶಾಲೆಗೆ ಕಳಿಸಲು ಸಾಧ್ಯವಿಲ್ಲ.ಮನೆಯಲ್ಲಿ ಅವಶ್ಯ ಸಾಮಗ್ರಿಗಳು ಮುಗಿದಿದ್ದರೂ ತರಲು ನದಿಯ ಇನ್ನೊಂದು ದಡಕ್ಕೆ ಹೋಗಿ, ಬಸ್ಸು ಹಿಡಿದು ನಗರಕ್ಕೆ ಹೋಗದೆ ಪರ್ಯಾಯ ದಾರಿಯಿಲ್ಲ. ದಿಢೀರ್ ಆಗಿ ಹುಷಾರು ತಪ್ಪಿದ ವಯಸ್ಕರಿಗೆ, ಗರ್ಭಿಣಿ ಮಹಿಳೆಯರಿಗೆ ಕೆಲವೇ ಕಿ.ಮೀ ದೂರದ ಆಸ್ಪತ್ರೆಗೆ ಹೋಗಬೇಕಾದರೂ, ನದಿ ದಾಟಲು ಸಾಧ್ಯವಿಲ್ಲದುದರಿಂದ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಸುತ್ತುದಾರಿಯಲ್ಲಿ ಪ್ರಯಾಣಿಸಬೇಕು…. ಹೀಗೆ ಕಷ್ಟಗಳ ಸರಮಾಲೆ ಮುಂದುವರಿಯುತ್ತದೆ .
ಈ ಸಮಸ್ಯೆಗೆ ಪರಿಹಾರವಾಗಿ ಇತ್ತೀಚೆಗೆ ಕೆಲವೆಡೆ ನದಿಗಳಿಗೆ ತೂಗುಸೇತುವೆಗಳನ್ನು ನಿರ್ಮಿಸಲಾಗಿದೆ. ತೂಗುಸೇತುವೆಯ ನಿರ್ಮಾಣ ಮಾಡಿದುದರಿಂದಾಗಿ ಸಮಯವೂ ಉಳಿತಾಯ, ಖರ್ಚೂ ಕಡಿಮೆಯಾಯಿತು, ಸುರಕ್ಷತೆಯಿದೆ, ಮನಸ್ಸಿಗೆ ನಿರಾಳವಾಯಿತು ಎಂಬುದು ಸ್ಥಳೀಯ ಫಲಾನುಭವಿಗಳ ಒಕ್ಕೊರಲಿನ ಅಭಿಪ್ರಾಯ. ಉತ್ತರ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಭಾರತದ ಹಲವಾರು ಕಡೆ ತೂಗು ಸೇತುವೆಗಳಿವೆ.
ಅಂದು ಮಾರ್ಚ್ 11, 2018. ಸುಳ್ಯ ತಾಲೂಕಿನಿಂದ ಆಗಮಿಸಿದ್ದ ತಂಡದೊಂದಿಗೆ ಜೊತೆಯಾಗಿ, ನಾವೆಲ್ಲರೂ ಮೆಟ್ಟಿಲುಗಳ ಮೂಲಕ ತಿರುಮಲೆ ಬೆಟ್ಟವನ್ನೇರಿ ವೆಂಕಟರಮಣನ ದರ್ಶನ ಮಾಡಬೇಕೆಂಬ ಆಕಾಂಕ್ಷೆಯಿಂದ ಬೆಟ್ಟದ ಪಾದದಲ್ಲಿರುವ ‘ಶ್ರೀವಾರಿ’ ಮೆಟ್ಟಿಲುಗಳನ್ನು ಒಂದೊಂದಾಗಿ ಏರಲಾರಂಭಿಸಿದ್ದೆವು. ಉತ್ಸಾಹದಿಂದ ಮೇಲೇರುತ್ತಾ, ಬಾಲಾಜಿಯನ್ನು ಸ್ಮರಿಸುತ್ತಾ, ಹರಿನಾಮಸ್ಮರಣೆ ಮಾಡುತ್ತಾ ಮುಂದೆ ಸಾಗುತ್ತಿದ್ದೆವು . ಆದರೆ, ಸರಳ ಉಡುಗೆಯ, ಹಸನ್ಮುಖ ವ್ಯಕ್ತಿಯೊಬ್ಬರು ಮಾತ್ರ ಮೆಟ್ಟಿಲುಗಳ ಆಸುಪಾಸಿನಲ್ಲಿ ಜನರು ಬಳಸಿ ಬಿಸಾಡಿದ್ದ ಪಾನೀಯದ ಕಪ್ , ಪ್ಲಾಸ್ಟಿಕ್ ಕವರ್ ಇತ್ಯಾದಿಗಳನ್ನು ಹೆಕ್ಕುತ್ತಾ ನಿಧಾನವಾಗಿ ಬರುವುದು ಕಾಣಿಸಿತು. ಈಗಾಗಲೇ ಅದೇ ಜಾಗವನ್ನು ಕ್ರಮಿಸಿ ಬಂದಿದ್ದೆನಾದರೂ, ಕಸವನ್ನು ಗಮನಿಸಿದ್ದೆನಾದರೂ, ಸ್ವಚ್ಚಭಾರತ ಅಭಿಯಾನವನ್ನು ಅನುಷ್ಠಾನಕ್ಕೆ ತರಬೇಕೆಂಬ ಮನಸ್ಸುಳ್ಳವಳಾಗಿದ್ದರೂ, ಅಲ್ಲಿದ್ದ ಕಸವನ್ನು ಹೆಕ್ಕುವ ಪ್ರಯತ್ನವನ್ನು ನಾನು ಮಾಡಲಿಲ್ಲ ಎಂದು ಮನಸ್ಸಿನಲ್ಲಿ ಒಪ್ಪಿಕೊಳ್ಳುತ್ತಾ, ಅವರನ್ನು ಮಾತನಾಡಿಸಿದೆ.
ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಭಾರದ್ವಾಜ್ . ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಿವಾಸಿ. ಮೆಕ್ಯಾನಿಕಲ್ ಇಂಜಿನಿಯರ್ ಆದ ಅವರು, ‘ಆಯಸ್ ಶಿಲ್ಪ’ ಎಂಬ ಫಾಬ್ರಿಕೇಶನ್ ಘಟಕವನ್ನು ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ. ಪ್ರವಾಹದಿಂದಾಗಿ ತೊಂದರೆಗೊಳಗಾಗುವ ಗ್ರಾಮಸ್ಥರು ಸೇತುವೆ ನಿರ್ಮಿಸಿ ಕೊಡಿ ಎಂದು ಕೇಳಿಕೊಂಡಾಗ, ಅವರ ಕೋರಿಕೆಯನ್ನು ಆರಂಭದಲ್ಲಿ ತಮಗೆ ಪರಿಣತಿ ಇಲ್ಲವೆಂದು ನಿರಾಕರಿಸಿದರೂ, ವಿಶೇಷ ಅಧ್ಯಯನ ಹಾಗೂ ಅವಿರತ ಶ್ರಮದಿಂದ ತೂಗುಸೇತುವೆಯ ವಿನ್ಯಾಸವನ್ನು ಸಿದ್ದಪಡಿಸಿದರು. 1989 ರಲ್ಲಿ, ಸುಳ್ಯದ ಸಮೀಪದ ‘ಅರಂಬೂರು’ ಎಂಬಲ್ಲಿ ಪಯಸ್ವಿನಿ ನದಿಗೆ ಅಡ್ಡವಾಗಿ ತೂಗುಸೇತುವೆಯು ಇವರ ಮೊದಲ ಪ್ರಯತ್ನ. ಈ ಯಶಸ್ವಿ ಪ್ರಯೋಗದ ನಂತರ, ತೂಗುಸೇತುವೆಗಳ ನಿರ್ಮಾಣವು ಗಿರೀಶ್ ಭಾರದ್ವಾಜ್ ಅವರ ವೃತ್ತಿ ಹಾಗೂ ಪ್ರವೃತ್ತಿಯೂ ಆಯಿತು. ಕಡಿಮೆ ವೆಚ್ಚದಲ್ಲಿ, ಅತ್ಯುತ್ತಮ ವಿನ್ಯಾಸವನ್ನು ಸಿದ್ಧಪಡಿಸಬೇಕೆಂಬ ಧ್ಯೇಯ, ನಿರಂತರ ಕಲಿಕೆಯ ತುಡಿತ ಹಾಗೂ ನದಿಗಳ ದಡಗಳನ್ನು ಜೋಡಿಸುವ ಜೊತೆಗೆ, ಜನರ ಮನಸ್ಸುಗಳನ್ನೂ ಜೋಡಿಸಬೇಕೆಂಬ ಸದಾಶಯ ಅವರದು.
ತಮ್ಮ ಕಾರ್ಯನಿರ್ವಹಣಾ ಸಂದರ್ಭದಲ್ಲಿ ಎದುರಾದ ವಿಭಿನ್ನ ಸಮಸ್ಯೆಗಳನ್ನು ಅವರು ಎದುರಿಸಿದ ರೀತಿ ಅನನ್ಯ. ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ ತೂಗುಸೇತುವೆ ನಿರ್ಮಾಣ ಮಾಡುತ್ತಿರುವ ಸಂದರ್ಭದಲ್ಲಿ. ಗಿರೀಶ್ ಅವರು ತಮ್ಮ ತಂಡದ ಹಾಗೂ ಸ್ಥಳೀಯರ ನಡುವೆ ಪ್ರೀತಿ-ವಿಶ್ವಾಸದಿಂದ ವ್ಯವಹರಿಸುತ್ತಿದ್ದ ರೀತಿಯಿಂದ ಜನಮನ್ನಣೆ ಗಳಿಸಿದುದಲ್ಲದೆ, ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಮಾಜಘಾತುಕ ವ್ಯಕ್ತಿಗಳಿಂದಲೂ ಪ್ರಶಂಸೆ ಗಳಿಸಿರುವುದು ಅವರ ವ್ಯಕ್ತಿತ್ವಕ್ಕೆ ಸಿಕ್ಕ ಗೌರವ ಹಾಗೂ ‘ಪ್ರೀತಿಯಿಂದ ಜನರನ್ನು ಗೆಲ್ಲಬೇಕು ‘ ಎಂಬುದರ ದ್ಯೋತಕ.
ಇದುವರೆಗೆ ಕರ್ನಾಟಕ, ಕೇರಳ, ಆಂಧ್ರಪದೇಶ ಹಾಗೂ ಒಡಿಶಾದ ವಿವಿಧ ಊರುಗಳಲ್ಲಿ ಒಟ್ಟು 129 ತೂಗು ಸೇತುವೆಗಳನ್ನು ನಿರ್ಮಿಸಿದ ಕೀರ್ತಿ ಇವರದು. ಈಗಲೂ ಕೆಲವು ಹಳ್ಳಿ ಪ್ರದೇಶಗಳಲ್ಲಿ, ಮಳೆಗಾಲದಲ್ಲಿ ಉಕ್ಕಿ ಹರಿಯುವ ಪ್ರವಾಹದಿಂದಾಗಿ, ನದಿದಡದಲ್ಲಿರುವ ಕೆಲವು ಹಳ್ಳಿಗಳು ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡು ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಇಂತಹ ಹಳ್ಳಿಗಳಲ್ಲಿ ಜನರು ಸುರಕ್ಷಿತವಾಗಿ ಓಡಾಡುವಂತೆ ತೂಗು ಸೇತುವೆಯನ್ನು ನಿರ್ಮಿಸಿ, ಜನಜೀವನವನ್ನು ಹಸನುಗೊಳಿಸಿ, ಸ್ಥಳೀಯ ಜನರ ಮೊಗದಲ್ಲಿ ನಗುವರಳಿಸುವ ಗಿರೀಶ್ ಭಾರದ್ವಾಜ್ ಅವರಿಗೆ 2017 ರಲ್ಲಿ ಕೇಂದ್ರ ಸರ್ಕಾರದ ‘ಪದ್ಮಶ್ರೀ’ ಪುರಸ್ಕಾರವು ಲಭಿಸಿರುವುದು ಕನ್ನಡಿಗರಿಗೆ ಹೆಮ್ಮೆ.
– ಹೇಮಮಾಲಾ.ಬಿ
ನಿಜಕ್ಕೂ ಹೆಮ್ಮೆಪಡುವ ವಿಚಾರ. ಎಷ್ಟೋ ಜನರ ಕಷ್ಟ ಪರಿಹರಿಸಿದ ಈ ಮಹಾನುಭಾವರು ನಿಜಕ್ಕೂ ತಂಪು ಹೊತ್ತಿನಲ್ಲಿ ನೆನೆಯುವ ವ್ಯಕ್ತಿ..ಲೇಖನ ಬರೆದ ಸಂಪಾದಕಿ ಯವರಿಗೆ ಧನ್ಯವಾದಗಳು..
ಲೇಖನ ಚೆನ್ನಾಗಿದೆ