ದಟ್ಟ ಹಸಿರಿನ ಕಾಡಿನ ನಡುವೆ ಇರುವ ಆ ಪುಟ್ಟ ಹೆಂಚಿನ ಬಿಡಾರಗಳಲ್ಲಿ ತಂಗುವುದು ಅದೆಷ್ಟು ವಿಶಿಷ್ಟ ಅನುಭವ! ದೂರದಿಂದ ಕೇಳಿ ಬರುವ ನವಿಲು ಹಾಗೂ ಇತರ ಪಕ್ಷಿಗಳ ಕೂಜನಕ್ಕೆ ಕಡವೆ/ಸಾಂಬಾರ್ ಮೃಗದ ದ್ವನಿಯ ಹಿಮ್ಮೇಳ..ಯಾವುದೋ ಮರಕ್ಕೆ ಸುತ್ತಿಕೊಂಡ ಬೃಹದಾಕಾರದ ಬಳ್ಳಿ, ಬಿಡಾರದ ಮಾಡಿನ ಮೇಲೆ ತಟತಟನೆ ಬೀಳುವ ಯಾವುದೋ ಕಾಯಿಗಳು, ಇದ್ದಕ್ಕಿದ್ದಂತೆ ಬೀಸಿದ ಗಾಳಿಗೆ ಮರಗಳಿಂದ ಪಟಪಟನೆ ಉದುರುವ ಒಣಗಿದ ಎಲೆಗಳು, ಕುಡಿಯಲು ಅಮೃತದಂತಹ ಸಿಹಿನೀರು…… ಸಂಜೆಗತ್ತಲಾಗುವ ವರೆಗೆ ಎಲ್ಲವೂ ಬಲು ಸೊಗಸಾಗಿತ್ತು.
ಕತ್ತಲಾದ ಮೇಲೆ ಕಾಡಿನ ಬದುಕಿನ ಇನ್ನೊಂದು ಮಗ್ಗುಲು ಅನಾವರಣಗೊಂಡಿತು. ಮೊಬೈಲ್ ಚಾರ್ಜರ್ಅನ್ನು ಫೋನ್ ಗೆ ಸಿಕ್ಕಿಸಿ ಅರ್ಧ ಗಂಟೆಯ ಮೇಲೆ ಕಳೆದರೂ ಬಹಳ ಕಡಿಮೆ ಚಾರ್ಜ್ ಆಗಿತ್ತು. ರೂಮಿನಲ್ಲಿದ್ದ ಮಿಣುಕು ಬೆಳಕಿನ ಒಂದೇ ವಿದ್ಯುದ್ದೀಪವು ಕಣ್ಣುಮುಚ್ಚಾಲೆ ಅಡುತ್ತಿತ್ತು. ಇದು ಯಾಕೆ ಹೀಗೆ ಎಂದು ಸಂಬಂಧಿಸಿದವರನ್ನು ಕೇಳಿದಾಗ, ‘ಇಲ್ಲಿ ಹೈಡ್ರೋಪವರ್ ಇರುವುದು, ಅದನ್ನು ಸೀಮಿತವಾಗಿ ಬಳಸಲು ಮಾತ್ರ ಸಾಧ್ಯ, ಹಾಗಾಗಿ ಪ್ರತಿ ರೂಮಿಗೆ ಒಂದೇ ದೀಪ, ಒಂದೇ ಚಾರ್ಜಿಂಗ್ ಪಾಯಿಂಟ್ ಅಂದರು!’ ನಿಧಾನವಾಗಿ ಮಸುಕಾದ ಬೆಳಕಿಗೆ ಕಣ್ಣು ಒಗ್ಗಿಕೊಂಡಿತು.
ಮಸುಕುಬೆಳಕಿನಲ್ಲಿ ಅತ್ತಿಂದಿತ್ತ ಹೋಗುತ್ತಿದ್ದ ನಮ್ಮನ್ನು ಗಮನಿಸಿದ ಅರಣ್ಯ ಸಿಬ್ಬಂದಿಯವರು, ‘ಟಾರ್ಚ್ ಇಲ್ಲದೆ ಓಡಾಡಬೇಡಿ, ಇಲ್ಲಿ ಹಾವುಗಳಿರುತ್ತವೆ‘ ಎಂದರು. ಚಾರ್ಜ್ ಇಲ್ಲದ ಮೇಲೆ ಮೊಬೈಲ್ ಫೋನ್ ಗೆ ಕೆಲಸವಿಲ್ಲವಷ್ಟೆ. ತಂಡದವರೆಲ್ಲರೂ ವೃತ್ತಾಕಾರವಾಗಿ ಕುಳಿತು ಆತ್ಮೀಯವಾಗಿ ಹರಟಿದೆವು. ಈ ನಡುವೆ, ಸೌದೆ ಒಲೆಯಲ್ಲಿ ಅಡುಗೆ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು. ನಮ್ಮ ಊಟೋಪಚಾರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಸುಸಜ್ಜಿತವಾದ ಶೌಚಾಲಯವಿತ್ತಾದರೂ, ಬೆಳಗಿನ ಜಾವ ನಲ್ಲಿಗಳಲ್ಲಿ ಬರುತ್ತಿದ್ದ ನೀರು ನಿಂತುಹೋಗಿತ್ತು. ಪುನ: ಅರಣ್ಯ ಸಿಬ್ಬಂದಿಗಳ ಬಳಿ ಅಹವಾಲು ತೋಡಿಕೊಂಡೆವು. ರಾತ್ರಿ ಯಾವುದೋ ಸಮಯದಲ್ಲಿ ಕಾಡಾನೆ ಬಂದು ನೀರನ್ನು ಹಾಯಿಸುವ ಪೈಪ್ ಅನ್ನು ಒದ್ದು ಹೋಗಿದೆಯೆಂದೂ, ಅದನ್ನು ಸರಿಪಡಿಸಲು ಹೋಗಿದ್ದಾರೆಂದೂ, ಹೀಗೆ ಪೈಪ್ ಒಡೆದು ಹೋಗುವುದು ಮಾಮೂಲಿ ಸಮಸ್ಯೆಯೆಂದೂ ಗೊತ್ತಾಯಿತು.
ಆನೆಗಳ ಜಾಗದಲ್ಲಿ ಮನೆ ಮಾಡಿ ಆನೆಗಳಿಗಂಜಿದೊಡೆಂತಯ್ಯ! ಪಂಚಭೂತಗಳನ್ನು ನಿಯಂತ್ರಿಸಬಲ್ಲೆ ಎಂಬ ಮಾನವನ ಜಾಣ್ಮೆಗೆ ಪ್ರಕೃತಿ ಸೆಡ್ಡು ಹೊಡೆಯುವ ಪರಿ ಇದು!
(ಚಿತ್ರ: ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿಯಲ್ಲಿರುವ ಅರಣ್ಯ ಪ್ರದೇಶ)
– ಹೇಮಮಾಲಾ.ಬಿ