ಸೇತೂರಾಮ್ ಅವರ ಕೃತಿ: ‘ನಾವಲ್ಲ’
ದೂರದರ್ಶನದ ಪರದೆಯ ಮೇಲೆ ಆಗಾಗ ವಿಭಿನ್ನ ಪಾತ್ರ್ರಗಳಲ್ಲಿ ಕಾಣಿಸಿಕೊಂಡು, ವಿಶಿಷ್ಟ ಛಾಪನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಮೂಡಿಸಿರುವ ಕಲಾವಿದ ಶ್ರೀ ಸೇತುರಾಮ್ ಅವರು ಹೆಣೆದ ಆರು ಕಥೆಗಳ ಸಂಕಲನ “ನಾವಲ್ಲ” . ಮೋಕ್ಷ, ಮೌನಿ, ಸ್ಮಾರಕ, ಸಂಭವಾಮಿ, ಕಾತ್ಯಾಯಿನಿ ಹಾಗೂ ನಾವಲ್ಲ – ಎಂಬ ಶೀರ್ಷಿಕೆಗಳುಳ್ಳ ಆರು ಕಥೆಗಳ ಗುಚ್ಛವಿದು. ಪ್ರತಿ ಕಥೆಯಲ್ಲಿಯೂ ಪ್ರಮುಖ ಪಾತ್ರವು ತನ್ನಲ್ಲಿರುವ ಅದುಮಿಟ್ಟ ಆಕ್ರೋಶ, ಮಡುಗಟ್ಟಿದ ಹತಾಶೆ, ಕಪಟಬುದ್ಧಿ ಇತ್ಯಾದಿಗಳಿಗೆ ವ್ಯಾವಹಾರಿಕವಾದ ಭಾವವೊಂದರ ಕವಚ ಹೊದಿಸಿ ಮಾತನಾಡುತ್ತದೆ.
ಸ್ತ್ರ್ರೀ ಪ್ರಧಾನವಾದ ಕಥಾವಸ್ತುವನ್ನು ಹೊಂದಿದ ‘ಮೌನಿ’ ಕಥೆಯ ಮಂದಾಕಿನಿಯು ಅಸಹಾಯಕ ಮಹಿಳೆಯ ಸಾರ್ವಕಾಲಿಕ ಸಂಕೇತವಾಗಿ ಸದಾ ನೆನಪಿನಲ್ಲಿ ಉಳಿಯಬಲ್ಲಳು. ಆಕೆಯ ಮಾತುಗಳಲ್ಲಿ “ವಿದ್ಯೆಯ ಸರಸ್ವತಿಗೆ ಮಕ್ಳಿಲ್ಲ. ಸುಖದ ಲಕ್ಷ್ಮಿಗೆ ಮಕ್ಳಿಲ್ಲ. ಹಸಿವು ನೀಗುವ ಅನ್ನ ಪೂರ್ಣೇಶ್ವರಿಗೆ ಮಕ್ಕಳಿಲ್ಲ. ಕಾಯೋ ದೇವಿ ದುರ್ಗೆನೂ ಬಂಜೆನೇ. ಹೆರೋರು ತಾಯಿ ಆದ್ರು, ಹೆರದೋರು ದೇವರಾದ್ರು. ತಾಯಿಯಾಗ್ಲಿಲ್ಲ ಬಿಡು. ದೇವಿ ಆಗ್ತೀನಿ..” ಎಂದು ಸೇತೂರಾಮ್ ಅವರು ಸ್ತ್ರೀ ಶೋಷಣೆಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಸಹಾಯಕಳಾದರೂ, ಸೋತು ಗೆಲ್ಲುವ ‘ಕಾತ್ಯಾಯಿನಿ’ಯ ಮೂಲಕ ಮಹಿಳೆಯರನ್ನು ಗೌರವಿಸಿದ್ದಾರೆ. ‘ಸ್ಮಾರಕ’ ಕಥೆಯ ತ್ಯಾಗದ ಮೂರ್ತಿಯಾದ ತಾಯಿಯನ್ನೂ, ಅವಳನ್ನು ಅರ್ಥಮಾಡಿಕೊಳ್ಳದ ಮಗಳನ್ನೂ ಓದುಗರು ಮರೆಯಲಾರರು!
‘ಮೋಕ್ಷ’ ಕಥೆಯಲ್ಲಿ ಬರುವ ಮಠದೊಳಗಿನ ರಾಜಕೀಯ, ‘ಸಂಭವಾಮಿ’ ಮತ್ತು ‘ನಾವಲ್ಲ’ ಕಥೆಗಳಲ್ಲಿ ನಿಚ್ಚಳವಾಗಿ ಕಾಣುವ ವಿಡಂಬನೆ…..ಹೀಗೆ ಪ್ರತಿ ಕಥೆಯಲ್ಲಿಯೂ ಸೊಗಸಿದೆ, ವ್ಯಂಗ್ಯವಿದೆ, ನಿಗೂಢತೆಯಿದೆ ಹಾಗೂ ಸಾರ್ವಕಾಲಿಕ ಪ್ರಸ್ತುತತೆಯಿದೆ. 120 ಪುಟಗಳ ಪುಟ್ಟ ಪುಸ್ತಕವನ್ನು ಒಂದೇ ಬಾರಿ ಓದಿ ಮುಗಿಸಬಹುದಾದರೂ, ಪ್ರತಿ ಕಥೆಯಲ್ಲಿ ಅಂತರ್ಗತವಾದ ಆಶಯಗಳನ್ನು ಅರಿತುಕೊಳ್ಳಲು ಹೆಚ್ಚು ಬಾರಿ ಓದಿದರೆ ಉತ್ತಮ ಎಂದು ನನಗನಿಸಿತು. ಪ್ರತಿ ಓದಿನಲ್ಲಿಯೂ, ಹೊಸಹೊಳಹನ್ನು ದೊರಕಿಸಿಕೊಡುವ ಶಕ್ತಿ ಈ ಕಥೆಗಳಿವೆ.
2017 ರಲ್ಲಿ ಮುದ್ರಣವಾಗಿ, ಒಂದೇ ವರ್ಷದಲ್ಲಿ ಮೂರು ಮುದ್ರಣ ಕಂಡ ಕೃತಿಯಿದು. ಶ್ರೀ ಸೇತೂರಾಮ್ ಅವರಿಗೆ ಅಭಿನಂದನೆಗಳು.
– ಹೇಮಮಾಲಾ.ಬಿ