ಲಹರಿ

ಪಾಡಿ ತೂಗುವೆನು ಜೋ ಜೋ..

Share Button


ಜೋ ..ಜೋ ..ಜೋ .. ಎಂದು ಲಾಲಿ ಹಾಡು ಕೇಳದವರು ಯಾರಿದ್ದಾರೆ ಹೇಳಿ? ಪ್ರತಿಯೊಬ್ಬ ತಾಯಿಯೂ ಮಗುವನ್ನು ಮಲಗಿಸುವಾಗ ಗಾಯಕಿಯಾಗುತ್ತಾಳೆ. ಪ್ರಸಿದ್ಧ ಲಾಲಿ ಹಾಡುಗಳಿಂದ ಹಿಡಿದು, ಭಜನೆ, ಚಿತ್ರಗೀತೆ, ಜಾನಪದ ಗೀತೆ.. ಹೀಗೆ ಮಧುರವಾದ ಶೃತಿ ಇರುವ ಪ್ರತಿ ಹಾಡೂ ಅಮ್ಮಂದಿರ ಬಾಯಲ್ಲಿ ಜೋಗುಳವಾಗುತ್ತದೆ. ಕೆಲವೊಮ್ಮೆ ತಮ್ಮದೇ ಜೋಗುಳದ ರಚನೆ ಆಗುವುದೂ ಉಂಟು. ಮಕ್ಕಳ ಹೆಸರುಗಳು, ಅವರನ್ನು ಪ್ರೀತಿಯಿಂದ ಕರೆಯುವ ಅಡ್ಡ ಹೆಸರುಗಳು, ಆಟಗಳು… ಇವೆಲ್ಲವನ್ನೂ ಸೇರಿಸಿ ತನ್ನದೇ ಆದ ಜೋಗುಳವನ್ನು ರಚಿಸುತ್ತಾ ತಾಯಿ ಅಲ್ಲಿ ತನಗರಿವಿಲ್ಲದೆ ಕವಯಿತ್ರಿಯಾಗುತ್ತಾಳೆ. ಜೋಗುಳದ ಹಿಂದಿನ ಮಮತೆಯನ್ನು ಮುದ್ದು ಕಂದಮ್ಮಗಳೂ ಗುರುತಿಸಿ ತಣ್ಣಗೆ ನಿದ್ದೆಗೆ ಜಾರಿ ತಲೆದೂಗಿದುದಾಗಿ ತಿಳಿಸುತ್ತವೆ.

ತುಂಬಾ ರಚ್ಚೆ ಹಿಡಿವ ಮಕ್ಕಳ ಗಮನವನ್ನು ಸೆಳೆಯಲು ಜೋಗುಳ ಹಾಡುವ ಜಾಣ ಹಾದಿ ಹಿಡಿವ ಅಮ್ಮಂದಿರೂ ಅನೇಕ. ಇಲ್ಲಿ ಜೋಗುಳವು ಮಗುವಿನ ಮನಸ್ಸನ್ನು ಹಿಡಿದಿಡುವ ಪರಿ ಚೆಂದ. ಲಾಲಿ ಹಾಡನ್ನು ಹಾಡುತ್ತಿರುವ ತಾಯಿ ಪರಿಣಿತ ಹಾಡುಗಾತಿಯಲ್ಲದಿದ್ದರೂ ಮಗುವಿನ ಮನವನ್ನು ಮಮತೆಯ ಎಳೆಯೊಂದರಲ್ಲಿ ಹಿಡಿದಿಟ್ಟು ಸಾಂತ್ವನಗೊಳಿಸುತ್ತದೆ ಜೋಗುಳ! ಯಾರು ಎಷ್ಟೇ ಮಮತೆಯಿಂದ ಹಾಡಿದರೂ, ಬೆಣ್ಣೆ ಕಂದಮ್ಮಗಳೂ ಸಹ ತಮ್ಮ ತಾಯಿಯ ಹಾಡನ್ನು ಗುರುತಿಸುತ್ತವೆ!

ನನ್ನ ಮಗು ಸುಮಾರು 8-9  ತಿಂಗಳು ಇರುವಾಗ ನನ್ನ ಗೆಳತಿಯೊಬ್ಬರು, ’ಅತ್ತಿತ್ತ ನೋಡದಿರು.. ಅತ್ತು ಹೊರಳಾಡದಿರು…’ ಹಾಡನ್ನು ರೆಕಾರ್ಡ್ ಮಾಡಿ ಕಳುಹಿಸಿದ್ದರು. ಆ ಹಾಡು ಅದೆಷ್ಟು ವರ್ಷಗಳಿಂದ ನನ್ನನ್ನೂ ಸೇರಿದಂತೆ ಅದೆಷ್ಟು ಮಕ್ಕಳನ್ನು ಎಷ್ಟು ಬಾರಿ ನಿದ್ರೆಯ ಮಡಿಲಿಗೆ ಜಾರಿಸಿತ್ತೋ! ನನ್ನ ಮಗು ಕೂಡಾ ಆ ಸಾಲಿಗೆ ಸದ್ದಿಲ್ಲದೆ ಸೇರಿತ್ತು. ಹಠ ಹೂಡಿ ನಿದ್ದೆ ಮಾಡಲು ಮುಷ್ಕರ ಮಾಡುತ್ತಿದ್ದ ಮಗಳು ಪ್ರತಿಬಾರಿ ಆ ಹಾಡು ಕೇಳಿದಾಗಲೆಲ್ಲಾ ನಿದ್ದೆಯ ಮಡಿಲಿಗೆ ಜಾರುತ್ತಿದ್ದಳು.

ಇತ್ತೀಚೆಗೆ ಸಿಂಗಪುರಕ್ಕೆ ಭೇಟಿ ಕೊಟ್ಟಿದ್ದೆ. ಅಲ್ಲೊಂದು ಪ್ರವಾಸೀ ತಾಣಕ್ಕೆ ಮಕ್ಕಳ ಜೊತೆ ಭೇಟಿ ಕೊಟ್ಟಿದ್ದೆವು. ಜನರಿಂದ ಗಿಜಿಗುಡುತ್ತಿದ್ದ ಅಲ್ಲಿ ಸಣ್ಣದು ಅದಾಗಲೇ ಕಸಿವಿಸಿಗೊಂಡು ರಚ್ಚೆ ಹಿಡಿದಿತ್ತು. ಕ್ರಮೇಣ ತಾರಕಕ್ಕೇರಿದ ಸ್ವರ ಜಪ್ಪಯ್ಯ ಅಂದರೂ ತಗ್ಗಲಿಲ್ಲ. ಹಾಗೇ ಸುಮ್ಮನೆ ಕಲ್ಲು ಬೆಂಚಿನ ಮೇಲೆ ಅವಳನ್ನು ಸಮಾಧಾನಿಸುವ ಸರ್ವ ಅಸ್ತ್ರಗಳನ್ನೂ ಪ್ರಯೋಗಿಸುತ್ತಾ ಕೂತಿದ್ದೆವು.

ನಮ್ಮಂತೆಯೇ ತನ್ನ ಮಗುವಿನೊಂದಿಗೆ ಬಂದಿದ್ದ ಒಬ್ಬ ಕೊರಿಯನ್ ಮಹಿಳೆ ಸಮೀಪದಲ್ಲಿದ್ದಳು. ಆಕೆಯ ಮಗುವೂ ಅಳಹತ್ತಿತ್ತು. ಗೌಜು ಗದ್ದಲ ನೋಡಿ ಅಳುತ್ತಾ ಅದು ತನ್ನ ಇರುಸುಮುರುಸು ವ್ಯಕ್ತಪಡಿಸುತ್ತಿತ್ತು. ಆಕೆಯೂ ಒಂದಷ್ಟು ಹೊತ್ತು ಪೆಚ್ಚು ಮುಖ ಮಾಡಿ ಮಗುವನ್ನು ಸಮಾಧಾನಿಸಲು ಯತ್ನಿಸುತ್ತಿದ್ದಳು. ಕೆಲಹೊತ್ತಿನ ಬಳಿಕ ಆಕೆಗದೇನನಿಸಿತೋ! ಆಕೆ ತನ್ನ ಭಾಷೆಯಲ್ಲಿ ಲಾಲಿ ಹಾಡನ್ನು ಹಾಡಲು ಶುರು ಮಾಡಿದಳು. ಹಾಡು ಕೇಳುತ್ತಿದ್ದಂತೆಯೇ ಆಕೆಯ ಮಗು ನಿಧಾನಕ್ಕೆ ಸ್ವರ ತಗ್ಗಿಸುತ್ತಾ ಕಡೆಗೆ ಹಠ ನಿಲ್ಲಿಸಿತ್ತು. ಏನಾಶ್ಚರ್ಯ! ಆ ಕಂದನ ಜೊತೆ ನನ್ನ ಮಗಳೂ ಅಳು ನಿಲ್ಲಿಸಿ ಮೌನದಿಂದ ಆಲಿಸತೊಡಗಿದಳು. ಅಪ್ಪಟ ಕನ್ನಡಿಗರಾದ ನಮಗೆ ಆ ಹಾಡಿನ ಒಂದಕ್ಷರ ಅರ್ಥವಾಗದಿದ್ದರೂ ಕೂಡಾ ನಮ್ಮ ಮಗುವಿಗೆ ಅದರಲ್ಲಿನ ಲಾಲಿತ್ಯ ಹಿಡಿಸಿದ್ದು ಅರ್ಥವಾಯಿತು. ಅದು ತನಗೆ ಹಿಡಿಸದ ಗದ್ದಲಗಳ ನಡುವೆ ಕೂಡಾ ಜೋಗುಳದ ಮೇಲೆ ಗಮನವೀಯುವಂತೆ ಮಾಡಿತ್ತು.

ಭಾಷೆಯ, ಧರ್ಮದ ಅರಿವಿಲ್ಲದ ಎಳೆ ಕಂದಮ್ಮಗಳು ಲಾಲಿ ಹಾಡಿನ ಲಾಲಿತ್ಯಕ್ಕೆ ತಲೆದೂಗುವ ಪರಿ ಅವರ್ಣನೀಯ. ದೇಶ, ಭಾಷೆ, ಜಾತಿ, ಮತ, ವಯಸ್ಸು ಎಲ್ಲವನ್ನೂ ಮೀರಿ ಮಮತೆಯೇ ಮಾಧುರ್ಯವಾಗಿರುವ ಈ ಹಾಡಿಗೆ ಬಹುಶಃ ಬೇರೆ ಸಾಟಿಯಿಲ್ಲ.

ಜೋಗುಳವು ಬಹಳಷ್ಟು ತಾಯಂದಿರಿಗೆ ಮಕ್ಕಳನ್ನು ಮಲಗಿಸುವ ಪ್ರಬಲ ವಿದ್ಯೆಯೋ ಅಸ್ತ್ರವೋ ಆಗಿರಬಹುದು. ಇದೆಲ್ಲದರ ಜತೆ ಅದು ತಾಯಿ- ಮಗುವಿನ ಕರುಳ ಭಾಂಧವ್ಯವನ್ನು ಮತ್ತಷ್ಟು ಬಿಗಿಗೊಳಿಸುತ್ತಾ ಬರುತ್ತದೆ. ಏನೇ ಚಿಂತೆಗಳಿದ್ದರೂ ತಾಯಿ ಮಡಿಲಿನಲ್ಲಿ ಮಲಗಿ ಲಾಲಿ ಹಾಡು ಕೇಳಲು ಯಾರಿಗೆ ತಾನೆ ಇಷ್ಟವಾಗುವುದಿಲ್ಲ? ವಯೋಮಿತಿಯಿಲ್ಲದೆ ಪ್ರತಿಯೊಬ್ಬರೂ ಇಷ್ಟಪಡುವ ಹಾಡೆಂದರೆ ಅದು ಬಹುಶಃ “ಜೋಗುಳ” ಮಾತ್ರ. ಜೋಗುಳವು ಮಗುವನ್ನು ಶಾಂತಗೊಳಿಸುವುದಷ್ಟೇ ಅಲ್ಲದೆ, ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವಲ್ಲಿಯೂ ಸಹಕಾರಿ.

 

– ಸರಸ್ವತಿ ಸಾಮಗ, ಬೆಂಗಳೂರು.

8 Comments on “ಪಾಡಿ ತೂಗುವೆನು ಜೋ ಜೋ..

  1. ಚೆಂದದ ಬರಹ. ಸಂಗೀತದ ಆಳ ಅರಿಯದೇ ಹೋದರೂ ಅದು ಹೇಗೆ ಮನ ಮುಟ್ಟುವುದೋ ಹಾಗೆಯೇ ಜೋಗುಳದ ಒಳಗಿನ ‘ಅದೇನೋ’ ಮಗುವಿಗೆ ಹಿತ ನೀಡುತ್ತದೆ.

  2. ಕೊರಿಯನ್ ಜೋಗುಳಕ್ಕೆ ತಲೆದೂಗಿದ ಕನ್ನಡದ ಕಂದಮ್ಮ! ಅದೆಷ್ಟು ಚೆನ್ನ.. ಬರಹ ಇಷ್ಟವಾಯಿತು..

  3. ಅರ್ಥವೇನೇ ಆದರೂ ಅಥವಾ ಅರ್ಥವಿಲ್ಲವಾದರೂ ಹಾಡಿನ ಮಾಧುರ್ಯವು ಮಗುವನ್ನು ನಿದ್ರೆ ಗೆ ಜಾರಿಸುತ್ತದೆ

  4. ಪುಟ್ಟಮಗುವನ್ನು ನೋಡಿದರೆ, ನಾದದಷ್ಟು ಸೆಳೆಯುವ ಇನ್ನೊಂದು ಈ ಸೃಷ್ಟಿಯಲ್ಲಿಲ್ಲವೇನೋ ಅನಿಸುತ್ತದೆ. ಅದಕ್ಕೇ ಇರಬೇಕು, ತಿಳಿದವರು ‘ನಾದಮಯಂ ಜಗತ್’ ಎಂದಿರುವುದು! ‘ಅರೇ! ಇದು ನಮ್ಮದೇ ಅನುಭವ ಅಲ್ಲವೇ!’ ಅನಿಸುವಷ್ಟು ಆಪ್ತವಾದ, ನೆನಪುಗಳನ್ನು ಹೊತ್ತು ತರುವ ಬರಹ. ಕೊರಿಯನ್ ಜೋಗುಳ ಪ್ರ,ಸಂಗ ಅಚ್ಚರಿ ಮೂಡಿಸಿತು.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *