ರಾಮನ್ ಪರಿಣಾಮ ಮತ್ತು ರಾಷ್ಟ್ರೀಯ ವಿಜ್ಞಾನ ದಿನ
ವೈಜ್ಞಾನಿಕ ಆವಿಷ್ಕಾರಗಳು ‘ಆಕಸ್ಮಿಕ’ವೇ, ಅಥವಾ ಹಲವಾರು ವರ್ಷಗಳ ಸತತ ಪ್ರಯತ್ನದ ಪ್ರತಿಫಲವೇ? ಥಾಮಸ್ ಆಲ್ವಾ ಎಡಿಸನ್ ಅನ್ನುತ್ತಾರೆ, “Genius is one percent inspiration and ninety-nine percent perspiration!” ಸದಾ ಕಾಲ ತಮ್ಮ ತೋಟದಲ್ಲಿ ಆಳವಾದ ಚಿಂತನೆಯಲ್ಲಿ ತೊಡಗಿದ ನ್ಯೂಟನ್ ಅವರ ತಲೆ ಮೇಲೆ ಬಿದ್ದ ಸೇಬುಹಣ್ಣು “ಗುರುತ್ವಾಕರ್ಷಣದ ತತ್ವ”ದ ಹೊಳಹು ನೀಡಿದ್ದು ಆಕಸ್ಮಿಕವೇ? ಅದಕ್ಕೆ ಮೊದಲು ಯಾ ನಂತರವೂ ಹಣ್ಣುಗಳು ತಲೆಗಳಮೇಲೆ ಬಿದ್ದಿಲ್ಲವೇ? ರಜೆ ಕಳೆದು ಪ್ರಯೋಗಾಲಯಕ್ಕೆ ಬಂದಾಗ ಒಂದು ತಟ್ಟೆಯ ಮೇಲೆ ಬೂಸ್ಟಿನಿಂದ ಬಾಕ್ಟೀರಿಯಗಳ ನಾಶ ಗಮನಿಸಿದ ಫ್ಲೆಮಿಂಗಿನ ‘ಪೆನಿಸಿಲಿನ್’ ಆವಿಷ್ಕಾರವನ್ನು ಒಂದು ‘ಫ್ಲೂಕ್’ ಅನ್ನಬಹುದೇ? ಅಂತೆಯೇ, ಸಿ.ವಿ.ರಾಮನ್ ಅವರಿಗೂ ಹಲವು ವರ್ಷಗಳ ಸತತ ಪ್ರಯೋಗಗಳ ಅನಂತರ ದೊರೆತ ಹೊಳಹು “ರಾಮನ್ ಪರಿಣಾಮ”! ನೋಬೆಲ್ ಪ್ರಶಸ್ತಿ ವಿಜೇತರಲ್ಲಿ ಮೊದಲ ಭಾರತೀಯ ವಿಜ್ಞಾನಿ ಎಂಬ ಖ್ಯಾತಿವೆತ್ತವರು ಚಂದ್ರಶೇಖರ್ ವೆಂಕಟರಾಮನ್. ಈ ಪ್ರಶಸ್ತಿಯನ್ನು ಅವರು 1930 ರಲ್ಲಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಅವರದೇ ಹೆಸರಿನಿಂದ ಗುರುತಿಸಲ್ಪಡುವ, “ರಾಮನ್ ಪರಿಣಾಮ” (Raman Effect) ಎಂಬ ಸಂಶೋಧನೆಗೆ ಪಡೆದರು.
ರಾಮನ್ ಅವರು ನವೆಂಬರ್ 7, 1888 ರಂದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಜನಿಸಿದರು. ಭೌತಶಾಸ್ತ್ರದಲ್ಲೇ ಪ್ರಾಧ್ಯಾಪಕರಾಗಿದ್ದ ಅವರ ತಂದೆಯವರು, ದೊಡ್ಡ ಕುಟುಂಬದ ನಿರ್ವಹಣೆಯ ಜವಾಬ್ದಾರಿಯಲ್ಲಿ ಸಿಲುಕಿದ್ದರು. ಆರ್ಥಿಕವಾಗಿ ಹೆಚ್ಚು ಸೌಕರ್ಯವನ್ನು ಮಗನಿಗೆ ನೀಡಲಾಗದಿದ್ದರೂ, ನಿರಂತರ ಪ್ರೋತ್ಸಾಹವೊಂದೇ ಮೇಧಾವಿ ರಾಮನ್ ಗೆ ಪ್ರೇರಣೆಯಾಗಿತ್ತು. ತಮ್ಮ 12 ನೇ ಪ್ರಾಯದಲ್ಲಿ ಮೆಟ್ರಿಕ್ಯುಲಶನ್, 16 ರಲ್ಲಿ ಪದವಿ, 19 ರಲ್ಲಿ ಎಂ.ಎಸ್ಸಿ. ಪದವಿ ಗಳಿಸಿ, ಅದೇ ವರ್ಷ ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣಹೊಂದಿ, “ಡೆಪ್ಯುಟಿ ಅಕೌಂಟನ್ಟರಾಗಿ” ಕಲ್ಕತ್ತೆಯಲ್ಲಿ ಸೇರಿಕೊಂಡರು.
ಆದರೆ, ಒಂದು ಕಛೇರಿಯ ಕೆಲಸಕ್ಕೆ ತೃಪ್ತಿ ಪಡುವ ಜಾಯಮಾನ ರಾಮನ್ ಅವರದ್ದಾಗಿರಲಿಲ್ಲ. ಕಲ್ಕತ್ತೆಯ ವಿಜ್ಞಾನದ ಬೆಳವಣಿಗೆಗೆ ಇದ್ದ ಪ್ರಯೋಗಾಲಯಕ್ಕೆ ಭೇಟಿ ನೀಡಿ, ಆ ಸಂಸ್ಥೆಯ ನಿರ್ದೇಶಕರಾಗಿದ್ದ ಅಮೃತಲಾಲ್ ಸರಕಾರ್ ಅವರ ಪರಿಚಯ ಮಾಡಿಕೊಂಡರು. ರಾಮನರ ಆಸಕ್ತಿಯನ್ನು ನೋಡಿ ಮನಸೋತ ನಿರ್ದೇಶಕರು, ಸಂಶೋಧನೆಗಳನ್ನು ಮಾಡಲು ಅವರ ಸಂಸ್ಥೆಯಲ್ಲಿ ಅವಕಾಶ ನೀಡಿದರು. ವೃತ್ತಿ ಜೀವನದೊಂದಿಗೆ ತಾವು ಆಸಕ್ತಿಯಿಂದ ಮಾಡುತ್ತಿದ್ದ ವೈಜ್ಞಾನಿಕ ಪ್ರಯೋಗಗಳನ್ನು ಸಮಯಾವಕಾಶ ಮಾಡಿಕೊಂಡು ಮುಂದುವರಿಸಿದರು. ಸಂಶೋಧನಾಸಕ್ತ ರಾಮನ್, ಹೆಚ್ಚು ವೇತನ ದೊರೆಯುತ್ತಿದ್ದ ಅಕೌಂಟೆಂಟ್ ಹುದ್ದೆಯನ್ನು ತ್ಯಜಿಸಿ, ಕಲ್ಕತ್ತಾ ವಿಶ್ವ ವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇರಿಕೊಂಡರು. 1924 ರಲ್ಲಿ ಲಂಡನ್ ನ “ಫೆಲೋ ಆಫ್ ರೋಯಲ್ ಸೊಸೈಟಿ” ಗೆ ಆಯ್ಕೆ, ಕಲ್ಕತ್ತಾದಲ್ಲೇ ವೈಜ್ಞಾನಿಕ ಅನ್ವೇಷಣೆ ಮತ್ತು ಫೆಬ್ರವರಿ 1928 ರಲ್ಲಿ ಬೆಳಕಿನ ಚದುರುವಿಕೆಗೆ ಸಂಬಂಧಪಟ್ಟಂತೆ “ರಾಮನ್ ಪರಿಣಾಮ” ಅನ್ನುವ ಅದ್ಭುತ ಸಂಶೋಧನೆ ಇವರು ಏರಿದ ಒಂದೊಂದು ದೊಡ್ಡ ಮೆಟ್ಟಲುಗಳು. “ರಾಮನ್ ಪರಿಣಾಮ” ವಿಜ್ಞಾನ ಕ್ಷೇತ್ರದಲ್ಲಿ ಭಾರೀ ಸಂಚಲನ ಮಾಡಿತು ಮತ್ತು ರಾಮನ್ ಅವರು ‘ನೋಬೆಲ್ ಪ್ರಶಸ್ತಿ’ಯಿಂದ 1930 ರಲ್ಲಿ ಪುರಸ್ಕೃತಗೊಂಡರು. 1929 ರಲ್ಲಿ ಇಂಗ್ಲೆಂಡಿನ ರೋಯಲ್ ಸೊಸೈಟಿ ಅದಾಗಲೇ ಅವರನ್ನು “ಸರ್” ಉಪಾದಿಯ “ನೈಟ್ ಹುಡ್“ ಪ್ರಶಸ್ತಿಯನ್ನೂ ನೀಡಿತ್ತು. ಭಾರತ ಸರಕಾರ 1954 ರಲ್ಲಿ ರಾಮನ್ ಅವರಿಗೆ ಪರಮೋಚ್ಚ ಪೌರ ಸನ್ಮಾನವಾದ “ಭಾರತ ರತ್ನ” ದಿಂದ ಗೌರವಿಸಿತು.
1920 ರ ದಶಕದಲ್ಲಿ ಲಂಡನ್ ಪ್ರಯಾಣವೆಂದರೆ, ಗಾಂಧೀಜಿಯವರೂ ಸೇರಿದಂತೆ, ರಾಮನ್ ರಂತಹ ವಿಜ್ಞಾನಿಗಳಿಗೆ ಸಮುದ್ರದಲ್ಲಿ ಹಡಗಿನ ಪಯಣ. ಆಕಾಶದ ನೀಲಿ ಮತ್ತು ಕಡಲಿನ ನೀಲಿ ರಾಮನ್ ಅವರನ್ನು ಯಾವಾಗಲೂ ಕುತೂಹಲ ಮತ್ತು ಚಕಿತಗೊಳಿಸುತ್ತಿತ್ತು. ಇದೇ ಕುತೂಹಲ ಅವರನ್ನು ಕೆರಳಿಸಿ ಬೆಳಕಿನ ಗುಣಗಳ ಪ್ರಯೋಗಗಳಿಗೆ ತೊಡಗಿಸಿತ್ತು. ವಾತಾವರಣದಲ್ಲಿಯ ಗಾಳಿಯ ಕಣಗಳು ಬೆಳಕನ್ನು ಭಾಗಶಃ ಚದುರಿಸಿ, ನೀಲಿ ಬಣ್ಣಕ್ಕೆ ತಿರುಗಿಸಿದರೆ (ರಾಲಿ ಚದುರುವಿಕೆ, Rayleigh scattering), ಸಮುದ್ರದಲ್ಲಿಯ ನೀರಿನ ಕಣಗಳು ಇನ್ನೊಂದು ರೀತಿಯಲ್ಲಿ ಬೆಳಕನ್ನು ಚದುರಿಸಿ, ನೀರನ್ನು ನೀಲಿಯಾಗಿ ಕಾಣಿಸುತ್ತದೆ. ಸಮುದ್ರದ ನೀಲವೆಂದರೆ ಆಕಾಶದ ನೀಲಿಯ ಪ್ರತಿಫಲನವೆಂದೇ ವಿಜ್ಞಾನಿ ರಾಲಿಯವರು ನಂಬಿದ್ದರು. ರಾಮನ್ ಯೋಚನೆ ಇನ್ನೊದು ರೀತಿಯಲ್ಲಿತ್ತು. ಆಕಾಶದಲ್ಲಿ ಗಾಳಿಯ ಕಣಗಳು ಬೆಳಕಿನ ಏಳು ಬಣ್ಣಗಳಲ್ಲಿ ನೀಲಿ ತರಂಗಾಂತರಂಗವನ್ನು ಮಾತ್ರ ಚದುರಿಸುತ್ತವೆ. ಆದರೆ, ಆಕಾಶ ನೀಲಿ ಮತ್ತು ಸಾಗರದ ನೀಲಿಯಲ್ಲಿ ವ್ಯತ್ಯಾಸವಿದೆಯಲ್ಲಾ? ಮುಂದೆ ಏಳು ವರ್ಷಗಳ ದೀರ್ಘ ಕಾಲ, ತಮ್ಮ ಸಹಸಂಶೋಧಕ ಕೆ.ಎಸ್. ಕೃಷ್ಣನ್ ಅವರೊಂದಿಗೆ, ಪ್ರಯೋಗಗಳನ್ನು ಮಾಡುತ್ತಾ ರಾಮನ್ ಕಂಡುಕೊಂಡ ವಿಚಾರವೆಂದರೆ, ಸಮುದ್ರದ ನೀರಿನ ಮೇಲೆ ಬಿದ್ದ ಬೆಳಕಿನಿಂದ ನೀರಿನ ಕಣಗಳು ಅಲ್ಲಿಯ ಅಣುಗಳಿಗೆ ಚೈತನ್ಯ ನೀಡಿ, ಚದುರಲ್ಪಟ್ಟ ಬೆಳಕು ಪತನ ಬೆಳಕಿನಿಂದ ವಿಭಿನ್ನ ತರಂಗಾಂತರವನ್ನು ಹೊಂದಬಹುದು. ಆ ಕಾರಣಕ್ಕೇ ಆಕಾಶದ ನೀಲಿಗೂ, ಸಮುದ್ರದ ನೀಲಿಗೂ ವ್ಯತ್ಯಾಸವಿದೆ. ಇದೇ ಪ್ರಯೋಗವನ್ನು ರಾಮನ್, ನೀರು, ಮಂಜುಗಡ್ಡೆ ಮತ್ತು ಬೆನ್ಜೀನ್ ನಂತಹ ಇತರ ಹಲವು ಪಾರದರ್ಶಕ ದ್ರವಗಳ ಮೇಲೆ ಬೆಳಕನ್ನು ಹಾಯಿಸಿ, ಬೆಳಕಿನ ಚದುರುವಿಕೆಯ ಅದ್ಭುತ ಆವಿಷ್ಕಾರ ಮಾಡಿದರು. ಇದುವೇ ‘ರಾಮನ್ ಪರಿಣಾಮ’.
ರಾಮನ್ ಪರಿಣಾಮದ ಮುಖ್ಯ ಅನ್ವಯಿಕ ಪ್ರಯೋಜನವೆಂದರೆ, ಅಣುಗಳ ಒಳರಚನೆಗಳ ಅನ್ವೇಷಣೆ. ಬೆಳಕು ಯಾವುದೇ ಪಾರದರ್ಶಕ ವಸ್ತುವಾದ, ಘನ, ದ್ರವ ಅಥವಾ ಅನಿಲಗಳ ಒಳಗೆ ಹಾದು ಹೋಗುವ ಸಂದರ್ಭ, ಒಂದಿಷ್ಟು ಬೆಳಕು ಚದುರಿ ಹೋಗುತ್ತದೆ. ಈ ಚದುರಿದ ಬೆಳಕನ್ನು ವಿಶ್ಲೇಷಿಸಿದಾಗ ಬೆಳಕು ಹಾದುಬಂದ ವಸ್ತುಗಳ ಒಳ ರಚನೆಯ ಗುಟ್ಟು ಗೊತ್ತಾಗುತ್ತದೆ. ಒಂದೇ ದಶಕದಲ್ಲಿ 2000 ಕ್ಕೂ ಹೆಚ್ಚು ರಾಸಾಯನಿಕ ವಸ್ತುಗಳ ಅಣು ಸ್ವರೂಪ ಮತ್ತು ಅವುಗಳ ಒಳ ರಚನೆ ಏನಿದೆಯೆಂದು ಸ್ಪಷ್ಟವಾಯಿತು. ಆ ಕಾರಣಕ್ಕೇ, ರಾಮನ್ ಪರಿಣಾಮದ ಉಪಯೋಗ ವಿಜ್ಞಾನದ ಎಲ್ಲಾ ಕ್ಷೇತ್ರಗಳಲ್ಲಿಯೂ ಹರಡಿಕೊಂಡಿವೆ. ರಸಾಯನಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ, ವೈದ್ಯಶಾಸ್ತ್ರ ಅಲ್ಲದೇ ಇತ್ತೀಚೆಗಿನ ನ್ಯಾನೋತಂತ್ರಜ್ಞಾನಕ್ಕೂ ಈ ಪರಿಣಾಮ ವಿಸ್ತರಿಸಿದೆ.
ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಜೊತೆ (1960) ಪ್ರಯೋಗಾಲಯದಲ್ಲಿ ..
ರಾಮನ್ ಅವರು ತನ್ನ ಎಳೆಯ ಪ್ರಾಯದಲ್ಲೇ (19) ಲೋಕಸುಂದರಿ ಅಮ್ಮಾಳ್ ಅವರನ್ನು ಮದುವೆಯಾಗಿ ಎರಡು ಮಕ್ಕಳನ್ನು ಪಡೆದರು. ರಾಮನ್ ಒಬ್ಬ ಸಸ್ಯಾಹಾರಿ, ಮದ್ಯಪರಿತ್ಯಾಗಿ, ಪ್ರಕೃತಿ ಪ್ರೇಮಿ ಹಾಗೂ ಸಂಗೀತ ಪ್ರಿಯ. ಪಿಟೀಲಿನಂತಹ ತಂತಿ ವಾದ್ಯಗಳ ನಾದಗಳ ಮತ್ತು ಮೃದಂಗದಂತಹ ತಾಳ ವಾದ್ಯಗಳ ಲಯಗಳ ಮೇಲೆ ವೈಜ್ಞಾನಿಕ ಅಧ್ಯಯನ ಮಾಡಿರುತ್ತಾರೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ನಲ್ಲಿ ಮತ್ತು ಅವರದೇ ಹೆಸರಿನ ರಾಮನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ನಲ್ಲೂ ಡೈರೆಕ್ಟರ್ ಆಗಿ ಕೊಡುಗೆಯನ್ನು ಇತ್ತರು. ಕೆಲವೊಂದು ವಿವಾದಗಳನ್ನು ಸಹೋದ್ಯೋಗಿಗಳೊಂದಿಗೆ ಮತ್ತು ವಿಜ್ಞಾನಿಗಳೊಂದಿಗೆ ಎಳೆದುಕೊಂಡ ರಾಮನ್ ಮಹಾನ್ ವಿಜ್ಞಾನಿ ಅನ್ನುವುದರಲ್ಲಿ ಸಂದೇಹವಿಲ್ಲ. ತನ್ನ 82 ಪ್ರಾಯದಲ್ಲಿ (1970, ನವಂಬರ್) ಪ್ರಯೋಗಾಲಯದಲ್ಲೇ ಕುಸಿದರು. ಅವರು ಬಯಸಿದಂತೆ, ರಾಮನ್ ರೀಸರ್ಚ್ ಸಂಸ್ಥೆಯ ಉದ್ಯಾನವನದಲ್ಲೇ ಶವ ಸಂಸ್ಕಾರವನ್ನು ಮಾಡಲಾಯಿತು. ಅವರ ಹೆಸರಿನ ಸಂಸ್ಥೆಯಲ್ಲಿಯೇ ಕುಸಿದು, ಅಲ್ಲಿಯೇ ಪಂಚಭೂತಗಳಲ್ಲಿ ಲೀನವಾಗಿ ಧನ್ಯರಾದರು.
ರಾಮನ್ ಅವರ ಹವ್ಯಾಸಗಳೂ ವಿಶೇಷವೇ. ಅವರದ್ದೇ ಒಂದು ವಸ್ತು ಸಂಗ್ರಹಾಲಯವಿದೆ. ಅಲ್ಲಿ ಬೇರೆ ಬೇರೆ ತರಹದ ವಾದ್ಯಗಳು, ವಜ್ರಗಳು, ಕಲ್ಲುಗಳನ್ನು ಜೋಡಿಸಿಡಲಾಗಿವೆ. ರಾಮನ್ ಈ ವಸ್ತುಗಳನ್ನೂ ತಮ್ಮ ವೈಜ್ಞಾನಿಕ ಸಂಶೋಧನೆಗೆ ಒಳಪಡಿಸುತ್ತಿದ್ದರು. ರಾಮನ್ ತಂದೆ ಚಂದ್ರಶೇಖರ ಅಯ್ಯರ್ ವಿದ್ವಾಂಸರಲ್ಲದೆ, ಮನೆಯಲ್ಲಿ ಸದಾ ಸಂಗೀತದ ವಾತಾವರಣವನ್ನು ಸೃಷ್ಟಿಮಾಡಿದವರು. ರಾಮನ್ ಅವರ ಧರ್ಮ, ದೇವರು ಎಲ್ಲಾ ವಿಜ್ಞಾನವೇ. ‘ನನ್ನ ಬದುಕಿಡೀ ವಿಜ್ಞಾನಕ್ಕಾಗಿ ಮುಡಿಪು’ ಅಂದುಕೊಂಡವರು ಈ ಮಹಾನುಬಾವ. ರಾಮನ್ ರೀಸರ್ಚ್ ಸಂಸ್ಥೆಯನ್ನು ಕಟ್ಟಲು, ತಮಗೆ ದೊರಕಿದ ನೋಬೆಲ್ ಪಾರಿತೊಷಕದ ಹಣವನ್ನೆಲ್ಲ ಅಲ್ಲಿಯೇ ತೊಡಗಿಸಿದರು. ಯುವ ವಿಜ್ಞಾನಿಗಳಿಗೆ ರಾಮನ್ ಸಂದೇಶವಿಷ್ಟೇ, “ಸಂಶೋಧನೆಗಳ ಸಫಲತೆಗೆ ಕಾರಣ ಅತ್ಯಾಧುನಿಕ ಉಪಕರಣಗಳಾಗಬೇಕಿಲ್ಲ. ಆದರೆ, ಸ್ವತಂತ್ರವಾದ ಆಲೋಚನೆ ಮತ್ತು ನಿರಂತರ ದುಡಿಮೆ”
ಸರ್ ಸಿ.ವಿ.ರಾಮನ್ ತಮ್ಮ ಆವಿಷ್ಕಾರವನ್ನು ಘೋಷಿಸಿದ ದಿನ, “ರಾಷ್ಟ್ರೀಯ ವಿಜ್ಞಾನ ದಿನ”ವೆಂದು ಫೆಬ್ರವರಿ 28 ರಂದು ಇಂತಹ ಸಾಧನೆಯ ಗೌರವಾರ್ಥವಾಗಿ ದೇಶಾದ್ಯಂತ ಆಚರಿಸಲಾಗುತ್ತದೆ. ಶಾಲಾ, ಕಾಲೇಜು, ವಿಶ್ವ್ವವಿದ್ಯಾಲಯದ ವಿಜ್ಞಾನ ವಿಭಾಗಗಳಲ್ಲಿ ವಿಜ್ಞಾನದ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ವಿಜ್ಞಾನ ದಿನದ ಮುಖ್ಯ ಉದ್ಧೇಶ: ದೈನಂದಿನ ಜೀವನದಲ್ಲಿ ವಿಜ್ಞಾನದ ಮಹತ್ವ ತಿಳಿಸುವುದಲ್ಲದೇ, ವಿಜ್ಞಾನದ ಮುನ್ನಡೆಯನ್ನು ಜನರಿಗೆ ತಲುಪಿಸುವುದು. 2016ರ ವಿಜ್ಞಾನ ದಿನದ ಘೋಷವಾಕ್ಯ “ಮೇಕ್ ಇನ್ ಇಂಡಿಯಾ” ಆಗಿದ್ದರೆ, 2017 ನೇ ವರ್ಷದ ಥೀಮ್ “ವಿಶೇಷ ಚೇತನರಿಗಾಗಿ (specially abled) ವಿಜ್ಞಾನ ಮತ್ತು ತಂತ್ರ ಜ್ಞಾನ”.
ಇಂದು ಫೆಬ್ರವರಿ 28, 2018. ಮತ್ತೆ ಮರಳಿ ಬಂದಿದೆ ರಾಷ್ಟ್ರೀಯ ವಿಜ್ಞಾನ ದಿನ. ಈ ವರ್ಷದ ವಿಜ್ಞಾನ ದಿನದ ಘೋಷವಾಕ್ಯ ‘ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ’ (Science and Technology for a sustainable future).
ಅಳಿಯಲಿ ಅಜ್ಞಾನ, ಉಳಿಯಲಿ ಸುಜ್ಞಾನ, ಬೆಳೆಯಲಿ ವಿಜ್ಞಾನ!
– ಡಾ. ಬಡೆಕ್ಕಿಲ ಶ್ರೀಧರ ಭಟ್ , ಪುತ್ತೂರು.
ಅತ್ಯಂತ ಉತ್ತಮ ಹಾಗೂ ಸಮಯೋಚಿತ ಲೇಖನ !
ರಾಮನ್ ಕುರಿತ ಸಕಾಲಿಕ ಹಾಗೂ ಮಾಹಿತಿಪೂರ್ಣ ಲೇಖನಕ್ಕಾಗಿ ಧನ್ಯವಾದಗಳು. ಈ ಮಹಾ ವಿಜ್ಞಾನಿಯ ಬದುಕು, ಬರಹಗಳು ನಮ್ಮ ಯುವ ಜನಾಂಗಕ್ಕೆ ಸ್ಫೂರ್ತಿ ನೀಡಲಿ.
ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಯ ಪರಿಚಯ ಎಳೆಯರನ್ನೂ ತಲುಪುವಂತಿದೆ. ವಿಜ್ಞಾನ ಮತ್ತು ಕಲೆಗಳ ಸಮನ್ವಯತೆ ಬದುಕನ್ನು ಎಷ್ಟು ಸುಂದರವಾಗಿಸಬಹುದು ಎನ್ನುವ ರಾಮನ್ ಅವರ ಉದಾಹರಣೆ ಯುವಮನಸ್ಸುಗಳಿಗೆ ಪ್ರೇರಣೆಯಾಗಲಿ. ಸ್ಫೂರ್ತಿತುಂಬುವ ಲೇಖನಕ್ಕೆ ಧನ್ಯವಾದಗಳು.
ಬಹಳ ಮಾಹಿತಿಪೂರ್ಣವಾದ ಸಕಾಲಿಕ ಬರಹ. ಕಾಲೇಜಿನ ದಿನಗಳಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ‘ಸ್ಪೆಕ್ಟ್ರೋಮೀಟರ್ , ಪ್ರಿಸಮ್’ ಇತ್ಯಾದಿಗಳ ಕಾರ್ಯವಿಧಾನವನ್ನು ಅಭ್ಯಾಸ ಮಾಡಲು ಕಷ್ಟಪಟ್ಟಿದ್ದನ್ನು ಬಹುತೇಕ ಮರೆತಿದ್ದೆ. 🙂 ನೆನಪಿಸಿದಿರಿ!
ಪ್ರಿಯ ಓದುಗರಾದ ಪುಷ್ಪಲತಾ, ಚನ್ನವೀರಯ್ಯ, ಸಿಂಧು ಮತ್ತು ಸಂಪಾದಕಿ ಹೇಮಾಮಾಲ, ನಿಮ್ಮಗಳ ಪ್ರತಿಕ್ರಿಯೆಗೆ ಧನ್ಯವಾದಗಳು. ಓದುಗರಿದ್ದರೆ, ಬರಹಗಾರರಿಗೆ ಉತ್ತೇಜನ ಎನ್ನುವುದು ನಿಮಗೆಲ್ಲಾ ತಿಳಿದಿರುವ ಮಾತೇ ಅಲ್ಲವೇ? ಲೇಖನ ಮೆಚ್ಚಿದ ಎಲ್ಲರಿಗೂ ನಮನ.
ಉಪಯುಕ್ತ ಮಾಹಿತಿಗೆ ಧನ್ಯವಾದಗಳು.
ನಮ್ಮ ಯುವ ಮನಸ್ಸಿನ ಮನಗಳಲ್ಲಿ ಮುಟ್ಟುವಂತೆ ರಚಿಸಿರುವ Thank you sir