ಅಮ್ಮನಪ್ಪುಗೆ
ಅಮ್ಮನ ತೋಳ ಬಿಸಿಯಪ್ಪುಗೆಯಲಿ
ಬೆಚ್ಚಗಿಹನೀ ಕಂದ,
ಪದಪುಂಜಗಳಾಡಂಬರದಲೂ ಬರೆಯಲಾಗದೀ ಬಂಧ.
ಹೊತ್ತು ಹೆತ್ತವಳವಳು ಕೆಳಗಿಳಸಲಿಚ್ಚಿಸಳು ಮಗುವ.
ಕೂಸ ಲಾಲನೆ ಪಾಲನೆಯಲೇ ಕಾಣುವಳೆಲ್ಲಾ ಸುಖವ.
ಎದೆಗಪ್ಪಿ ಸುಖಿಸುವ ಮುಗ್ದ ಮಗುವಿನ
ಅವ್ಯಕ್ತ ಮಾತುಗಳ ಮಧುರ ಆಲಿಕೆ ಅಲ್ಲಿ.
ಅಮ್ಮನಾದ ಸವಿ ಗಳಿಗೆ ಮತ್ತೆ ಮತ್ತೆ ಹರ್ಷ
ಉಕ್ಕಿಸೊ ಮೊಗವದವಳ ಚಿಲುಮೆ ಅಲ್ಲಿ.
ಅಮ್ಮನವಳುಎಂದೂ ತ್ಯಾಗಮಯಿ,ಪ್ರೇಮಮಯಿ
ನಿದ್ದೆಲಿದ್ರೂ ಏಳುತಾಳೆ ನಗುತಾಳೆ ,ಕೇಳಲ್ಲಿ ಶಬ್ದ ಆಯೀ.
ಮುದ್ದು ಮೊಗದ,ಸ್ವಚ್ಚ ಮನದ ಕಂದನವನು ಧರೆಗಿಳಿದ ಚಂದ್ರನಂತೆ.
ಮನೆ ಮನದ ತಮವ ಗುಡಿಸಿ ಸಂತಸದ
ಬೆಳಕ ಸ್ಪುರಿಸೊ ಲಾಂದ್ರದಂತೆ.
ರಾಗಬೇಡ, ತಾಳ ಬೇಡ ವಾತ್ಸಲ್ಯಭರಿತ ಪದಗಳ ಗುನುಗಲದೇ
ನಿದ್ರೆ ತರುವ ಜೋಗುಳ.
ನಿದ್ರೆ ತರುವ ಜೋಗುಳ.
ಕಂದ ಕೂಡ ಅಂದುಕೊಳುವ , ಏರಿ ಕುಳಿತ ಮಡಿಲದೇ ಆಡಿ
ಕುಣಿಯಲವನಿಗದೇ ಅಂಗಳ.
ಕುಣಿಯಲವನಿಗದೇ ಅಂಗಳ.
ಅಮ್ಮನಾದ ಸಿಹಿಗಳಿಗೆ,ಕಂದನಿತ್ತ ಸಿಹಿಮುತ್ತ ಕ್ಷಣ
ಅಪ್ಪಿ ನಲಿದ ಮಧುರ ಮನ,ಬಿಂಬದೊಳಗೆ
ಕಂಡ ಕ್ಷಣ,
ಮರೆಯಲೆಂತು ,ಬರೆಯಲೆಂತು ತಿಳಿಯದಾದೆ ಗೆಳೆಯರೇ,
ಎಣಿಕೆಗೆಟುಕದ ನೀಲ ನಭದ ತಾರೆಗಳಂತೆ
ಅಮ್ಮ ಎನ್ನುವ ಪದವದಲ್ವೆ ಮಿತ್ರರೇ?
.
– ಲತಾ(ವಿಶಾಲಿ ವಿಶ್ವನಾಥ್)
.
.