ಶ್ರೀನಿವಾಸ ರಾಮಾನುಜಂ – ಗಣಿತದಲ್ಲೂ ದೇವರ ಸಾನಿಧ್ಯವೇ…?
“ಗಣಿತದ ಒಂದು ಸಮೀಕರಣದಲ್ಲಿ ದೇವರ ಕಲ್ಪನೆ ಬರದಿದ್ದರೆ, ಅದಕ್ಕೆ ಅರ್ಥವೇ ಇಲ್ಲ ಎಂದು ನನಗನಿಸುತ್ತದೆ”. ಈ ಮಾತುಗಳನ್ನು ಹೇಳಿದವರು ಗಣಿತ ವಿಜ್ಞಾನಲೋಕಕ್ಕೇ ಶ್ರೇಷ್ಠ ಕೊಡುಗೆಗಳನ್ನಿತ್ತ ಭಾರತೀಯ ಪ್ರತಿಭೆ ಶ್ರೀನಿವಾಸ ರಾಮಾನುಜಂ. ತನ್ನ 32 ರ ಎಳೆಯ ಪ್ರಾಯದಲ್ಲಿ ಇಹಲೋಕದ ಯಾತ್ರೆಯನ್ನು ಮುಗಿಸಿದ ರಾಮಾನುಜಂ, ಜೀವಿತಾವಧಿಯಲ್ಲಿ ಪೂರ್ತಿಯಾಗಿ ಅಂಕೆಗಳು, ಸಂಖ್ಯೆಗಳು, ಸಮೀಕರಣಗಳು, ಶೂನ್ಯ, ಅನಂತ, ಬೀಜಗಣಿತ, ಅನಂತಶ್ರೇಣಿಯ ಪರಿವರ್ತನೆಗಳು, ಭಿನ್ನರಾಶಿಗಳು, ಅವಿಭಾಜ್ಯ ಹಾಗೂ ಸಂಯುಕ್ತ ಸಂಖ್ಯೆಗಳು ಮತ್ತು ಇನ್ನೂ ಏನೇನೋ ನಮಗರಿಯದ ಗಣಿತ ಸಾಮ್ರಾಜ್ಯದ ನಿಗೂಢ ಪರಿಕಲ್ಪನೆಗಳ ಲೋಕದಲ್ಲಿ ವಿಹರಿಸುತ್ತಿದ್ದರು. ಉಳಿದ ಹುಲುಮಾನವರಿಗೆ ತಿಳಿಯದಂತಹ ರಹಸ್ಯ ವಿಧಾನವಾಗಲಿ, ವರವಾಗಲಿ, ಪವಾಡ ಸಾಮರ್ಥ್ಯವಾಗಲಿ ಅವರಿಗೆ ಇತ್ತೇ ಅನ್ನುವ ಸಂಶಯ ಅವರಕಾಲದ ಶಾಸ್ತ್ರಜ್ಞರಿಗೆ ಮತ್ತು ವಿಜ್ಞಾನಿಗಳಿಗೆ ಬಂದಿದ್ದರೆ ಆಶ್ಚರ್ಯವಿಲ್ಲ. ಅಂತಹ ಎತ್ತರಕ್ಕೆ ಸಾಮಾನ್ಯನೋರ್ವನಿಗೆ ಏರಲು ನಿಜಕ್ಕೂ ಕಷ್ಟ. ಪ್ರಾಯಶಃ ಗಣಿತಶಾಸ್ತ್ರಕ್ಕೆ ನೋಬೆಲ್ ಪಾರಿತೋಷಕ ನೀಡುವ ಅವಕಾಶವಿದ್ದರೆ, ಮೇಡಂ ಕ್ಯೂರಿಯಂತೆ ಅವರು ಕೂಡಾ ಒಂದಕ್ಕಿಂತ ಹೆಚ್ಚುಬಾರಿ ಆ ಗೌರವಕ್ಕೆ ಪಾತ್ರರಾಗುತ್ತಿದ್ದರು.
ರಾಮಾನುಜಂ ಅವರ ಜನನ 1887 ನೇ ಇಸವಿ ತಮಿಳುನಾಡಿನ ಈರೋಡಿನಲ್ಲಿ ಶುದ್ಧ ಸಂಪ್ರದಾಯ ಬ್ರಾಹ್ಮಣ ಕುಟುಂಬದಲ್ಲಿ ಆಯಿತು. ತಂದೆ ಶ್ರೀನಿವಾಸ ಅಯ್ಯಂಗಾರ್ ಒಂದು ಬಟ್ಟೆ ಅಂಗಡಿಯಲ್ಲಿ ಗುಮಾಸ್ತರಾಗಿದ್ದರು. ತಾಯಿ ಕೊಮಲತಮ್ಮಾಳ್ ಮನೆವಾರ್ತೆಯೊಂದಿಗೆ ಸ್ಥಳೀಯ ದೇವಸ್ಥಾನದಲ್ಲಿ ಹಾಡು ಹೇಳುತ್ತಿದ್ದರು. ಅವರ ಆಗಿನ ಕುಂಬಕೋಣಂ ಮನೆ ಈಗ ‘ರಾಮಾನುಜಂ ಮ್ಯೂಸಿಯಂ’ ಆಗಿದೆ. ರಾಮಾನುಜಂ ಒಂದೂವರೆ ವರ್ಷದ ಬಾಲಕನಿದ್ದಾಗ ಊರಿನಲ್ಲಿ ಸಿಡುಬು ರೋಗಕ್ಕೆ ಹಲವರು ತುತ್ತಾದರು. ರೋಗ ರಾಮಾನುಜಂಗೆ ಹೊಡೆದರೂ ಅವರು ಅದರಿಂದ ಬಚಾವಾಗಿದ್ದರು.
ಪ್ರಾಥಮಿಕ ಶಾಲೆಯಲ್ಲಿ ಕಲಿತು ಮೇಲಿನ ತರಗತಿಗಳಿಗೆ ಬಂದಾಗ ರಾಮಾನುಜಂಗೆ ಗಣಿತದಲ್ಲಿ ಸಂದೇಹಗಳು ನಿರಂತರವಾಗಿ ಬರಲಾರಂಭಿಸಿದವು. ತನ್ನ 16 ರ ಹರಯದಲ್ಲಿ ಒಬ್ಬ ಮೇಲಿನ ಕ್ಲಾಸಿನ ಸ್ನೇಹಿತನ ಸಹಾಯದಿಂದ ಕಾಲೇಜ್ ಗ್ರಂಥಾಲಯದಿಂದ ಪಡೆದ, “ A Synopsis of Elementary results in Pure and Applied Mathematics”, by C.S.Carr, ಎನ್ನುವ ಪುಸ್ತಕ ರಾಮಾನುಜಂ ಜೀವನದ ದಿಕ್ಕನ್ನೇ ಬದಲಾಯಿಸಲು ಒಂದು ನಿಮಿತ್ತವಾಯಿತು. ಮುಂದಿನ ವರ್ಷ ಅವರು ಸ್ವತಂತ್ರವಾಗಿ ‘ಬರ್ನೌಲಿ ಸಂಖ್ಯೆಗಳು’ ಮತ್ತು ‘ಯೂಲರ್ ಮೆಷರೋನಿ ಕಾಂಸ್ತಂಟ್” ಬಗ್ಗೆ ಹೊಸ ರೀತಿಯ ಟಿಪ್ಪಣಿಗಳನ್ನು ಬರೆದರು. ರಾಮಾನುಜಂ ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಬಂದಾಗ(1904) ಅವರಿಗೆ ಗಣಿತದ ಪ್ರತಿಭೆಯ ಹಿನ್ನೆಲೆಯಲ್ಲಿ ಕುಂಬಕೋಣಂನ ಸರಕಾರೀ ಕಾಲೇಜಿನಲ್ಲಿ ವಿಶೇಷ ವಿದ್ಯಾರ್ಥಿವೇತನದೊಂದಿಗೆ ಪ್ರವೇಶ ಸುಲಭವಾಯಿತು. ಆದರೆ ವಿದ್ಯಾಭ್ಯಾಸವೆಂದರೆ ಗಣಿತ ಮಾತ್ರವಲ್ಲ ತಾನೇ? ಜೊತೆಗೆ ಇಂಗ್ಲಿಷ್, ರೋಮ್, ಇತಿಹಾಸ, ದೇಹವಿಜ್ಞಾನ ಮುಂತಾದ ವಿಷಯಗಳನ್ನೂ ಕಲಿಯಬೇಕಿತ್ತು. ದುರಾದೃಷ್ಟ! ಪ್ರಥಮ ವರ್ಷದ ಪರೀಕ್ಷೆಯಲ್ಲಿ ರಾಮಾನುಜಂ ಅನುತ್ತೀರ್ಣರಾದರು. ವಿದ್ಯಾರ್ಥಿವೇತನ ರದ್ದಾಯಿತು. ಒಬ್ಬ ಅಸಾಮಾನ್ಯ ಪ್ರತಿಭಾವಂತ ಅನಾಥವಾಗಿ ಅಲೆಯಬೇಕಾದ್ದು ವಿಧಿಯ ಲೀಲೆಯೇ. ಮುಂದೆ ಖಾಸಗಿಯಾಗಿ ಕಾಲೇಜಿನ ಎಫ್.ಎ. ಪರೀಕ್ಷೆಗೆ ಕುಳಿತರೂ, ಅವರು ಗಣಿತದಲ್ಲಿ ಮಾತ್ರ ಪಾಸಾಗಿದ್ದರು. ಪ್ರತಿದಿನ ತಾನು ಕಂಡುಕೊಂಡ ಗಣಿತದ ಸೂತ್ರಗಳನ್ನು ಮತ್ತು ಫಲಿತಾಂಶಗಳನ್ನು ಟಿಪ್ಪಣಿ ಮಾಡಿ ಕಾಪಾಡುವುದು ಅವರ ನಿತ್ಯ ಜೀವನದ ಅಂಗವಾಗಿ ಮಾರ್ಪಾಟಾಯಿತು.
ತನ್ನ 22 ರ ಪ್ರಾಯದಲ್ಲಿ ಹೊಟ್ಟೆಹೊರೆಗಾಗಿಯಾದರೂ ಒಂದು ಉಪಜೀವನದ ಅಗತ್ಯ ರಾಮಾನುಜಂಗೆ ಕಂಡು, ಉದ್ಯೋಗಾಕಾಂಕ್ಷಿ ಆದರು. ಗಣಿತದ ಅನರ್ಘ್ಯ ರತ್ನಗಳ ಮೂಟೆ ಹೊತ್ತು ಮರುಭೂಮಿಯಲ್ಲಿ ಹೋಗುತ್ತಿದ್ದವರಿಗೆ ಒಂದು ‘ಓಯಸಿಸ್’ ದೊರಗಿತು. ಕೆಲಸಕ್ಕಾಗಿ ಕಂದಾಯ ಇಲಾಖೆಯಲ್ಲಿ ಅರ್ಜಿಕೊಡುತ್ತಿರುವ ಸಂಧರ್ಭ, ದಕ್ಷಿಣ ಆರ್ಕಾಟ್ ಜಿಲ್ಲೆಯ ಡೆಪ್ಯುಟಿ ಕಲೆಕ್ಟರ್ ಪ್ರೊ. ವಿ. ರಾಮಸ್ವಾಮಿ ಅಯ್ಯರ್ ಅವರನ್ನು ಭೇಟಿಯಾದರು. ವೃತ್ತಿಯಿಂದ ಅವರು ಪ್ರೊಫೆಸರ್ ಅಲ್ಲದಿದ್ದರೂ, ಪ್ರವೃತ್ತಿಯಿಂದ ಗಣಿತ ಶಾತ್ರಜ್ಞರು. ರಾಮಾನುಜಂನಲ್ಲಿ ಅವರ ‘ಬಯೋಡೇಟಾ’ ಇಲ್ಲದಿದ್ದರೂ, ತಾನು ರಚಿಸಿದ ಗಣಿತದ ನೋಟ್ ಬುಕ್ ಇತ್ತು. ಅದನ್ನೇ ನೋಡಲು ಕೊಟ್ಟರು. ಅದನ್ನು ಅವಲೋಕಿಸಿದ ರಾಮಸ್ವಾಮಿ ಅಯ್ಯರ್ ದಂಗಾಗಿ ಹೋದರು. ಅವರ ಮಾತಿನಲ್ಲಿ, “ I was struck by the extraordinary mathematical results contained in it(note book). I had no mind to smother his genius by an appointment in the lowest rungs of the revenue department”.
ರಾಮಸ್ವಾಮಿ ಅಯ್ಯರ್ ಆಗಷ್ಟೇ “ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿ” ಸ್ಥಾಪಿಸಿದ್ದರು. ಅವರು ರಾಮಾನುಜಂ ಬರಹಗಳನ್ನು ಸೊಸೈಟಿ ಪತ್ರಿಕೆಯಲ್ಲಿ ಪ್ರಕಟಿಸಲಾರಂಭಿಸಿದರು. 1912 ರ ಮಾರ್ಚಿನಲ್ಲಿ ರಾಮಾನುಜಂಗೆ ಮದ್ರಾಸು ಪೋರ್ಟ್ ಟ್ರಸ್ಟ್ ನಲ್ಲಿ ಲೆಕ್ಕಪತ್ರದ ಗುಮಾಸ್ತನಾಗಿ ಕೆಲಸ ದೊರೆತಮೇಲೆ ಆರ್ಥಿಕ ಸ್ಥಿತಿ ಸುಧಾರಿಸಿತು. ಈ ಮಧ್ಯೆ 1909 ರಲ್ಲಿ ಜಾನಕಿ ಅಮ್ಮಾಳ್ ಎಂಬ 10 ವರ್ಷದ ಹುಡುಗಿಯೊಡನೆ ಮದುವೆ ಆಯಿತು. ರಾಮಸ್ವಾಮಿ ಅಯ್ಯರ್, ರಾಮಾನುಜಂಗೆ ಹೆಚ್ಚಿನ ಧನಸಹಾಯಕ್ಕೆ ಮ್ಯಾಥಮೆಟಿಕಲ್ ಸೊಸೈಟಿಯ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಭಾವಿ ರಾಮಚಂದ್ರ ರಾವ್ ಅವರಿಗೆ ಶಿಫಾರಸ್ಸು ಮಾಡಿದರೂ, ರಾವ್ ಅವರು ಪ್ರಾರಂಭದಲ್ಲಿ ಈ ಹುಡುಗ ‘ಯಾರದೋ ಗಣಿತದ ಸೂತ್ರಗಳನ್ನು ನಕಲು ಮಾಡಿರಬಹುದೆಂದು’ ಒಪ್ಪುವುದಿಲ್ಲ. ಕೊನೆಗೆ ರಾಮಾನುಜಂನ್ನು ಭೇಟಿಯಾದ ಬಳಿಕ ಅವರ ಅಭಿಪ್ರಾಯ ಬದಲಿತು. ಮದ್ರಾಸು ಪೋರ್ಟ್ ಅಧ್ಯಕ್ಷ ಸರ್. ಫ್ರಾನ್ಸಿಸ್ ಸ್ಪ್ರಿಂಗ್, ರಾಮಚಂದ್ರ ರಾವ್, ರಾಮಸ್ವಾಮಿ ಅಯ್ಯರ್ ಮತ್ತಿರರ ಶಿಫಾರಸ್ಸಿನಂತೆ ರಾಮಾನುಜಂರನ್ನು ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗಾಗಿ, ಅನುಕೂಲ ವಾತಾವರಣ ಹೊಂದಿಸಲು ಸರಕಾರದ ಧನಸಹಾಯದಿಂದ ಲಂಡನ್ ಗೆ ಕಳುಹಿಸ ಬಹುದೆಂದು ಅವರೆಲ್ಲ ಕಾರ್ಯಪ್ರವೃತ್ತರಾದರು.
ರಾಮಾನುಜಂ ಬರಹಗಳನ್ನು ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರಖ್ಯಾತ ಗಣಿತಶಾಸ್ತ್ರಜ್ಞ, ಜಿ.ಎಚ್. ಹಾರ್ಡಿ ಓದಿದೊಡನೆಯೇ ಮೂಕವಿಸ್ಮಿತರಾದರು. ತಕ್ಷಣ ರಾಮಾನುಜಂರನ್ನು ಲಂಡನ್ ಗೆ ಕರೆಯಿಸುವುದೆಂದು ನಿರ್ಧರಿಸಿ, ಗಣಿತದ ಈ ಅನರ್ಘ್ಯ ಗಣಿಗಾಗಿ ಕಾದರು. ಆದರೆ, ಕಟ್ಟಾ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ರಾಮಾನುಜಂ ಸಮುದ್ರ ಪ್ರಯಾಣ ಮಾಡುವುದೆಂತು! ಶುದ್ಧ ಸಸ್ಯಾಹಾರಿ ಆ ಕಾಲದಲ್ಲಿ ಲಂಡನ್ ನಲ್ಲಿ ಬದುಕುವುದೆಂತು! ರಾಮಾನುಜಂ ತಾಯಿ ಸುತರಾಂ ಒಪ್ಪಲಿಲ್ಲ. ಕೊನೆಗೂ ತಾಯಿಯವರಿಗೆ, ‘ಮನೆ ದೇವತೆ ನಾಮಗಿರಿಯ ಇಚ್ಛೆಯಂತೆ, ದೇವಿ ಸ್ವಪ್ನದಲ್ಲಿ ಪದೇ ಪದೇ ಬಂದ ದರ್ಶನದ ಆದೇಶದಂತೆ’ಅನಿಸಿ, ಲಂಡನಿಗೆ ಹೋಗಲು ಅನುಮತಿ ಇತ್ತರು. ಸ್ನೇಹಿತರ ಒತ್ತಾಯಕ್ಕೆ ಮಣಿದು ರಾಮಾನುಜಂ ತಲೆಯಿಂದ ಜುಟ್ಟು ತೆಗೆದು ಕ್ರಾಪು ಬಾಚಿದರು, ಸೊಂಟದಿಂದ ಅಡ್ಡ ಬೈರಾಸಿನ ಧೋತಿ ಹೋಗಿ ಉದ್ದಕಾಲಿನ ಪೇಂಟುಗಳು ಬಂದವು, ಬರಿಗಾಲಿನಲ್ಲಿ ನಡೆಯುತ್ತಿದ್ದ ಪಾದಗಳನ್ನು ಕಾಲುಚೀಲ ಬೂಟುಗಳು ಹಿಡಿದು ಕೊಂಡವು. ಸಸ್ಯಾಹಾರವನ್ನು ಬಿಡಲು ಮಾತ್ರ ಅವರು ಅಸಾಧ್ಯವೆಂದರು. ಮೊದಲ ಜಾಗತಿಕ ಯುದ್ಧ ಪ್ರಾರಂಭವಾದ ದಿನಗಳಲ್ಲಿ ಏಪ್ರಿಲ್ 1914 ರಂದು ಲಂಡನಿಗೆ ಹಡಗು ಪ್ರಯಾಣ ಮಾಡಿ ಬಂದಿಳಿದರು. ಇಂಗ್ಲೆಂಡ್ ನಲ್ಲಿ ಅವರನ್ನು ನೆವಿಲ್ ಬರಮಾಡಿಕೊಂಡರು. ಜಿ.ಎಚ್. ಹಾರ್ಡಿಯವರು ಸಕಲ ವ್ಯವಸ್ಥೆಗಳನ್ನು ಮಾಡಿದ್ದರು.
ಲಂಡನಿನಲ್ಲಿ ರಾಮಾನುಜಂ ವಿದ್ಯಾಭ್ಯಾಸ ಮತ್ತು ಸಂಶೋಧನೆಗಳು ಸಾಂಪ್ರದಾಯಿಕ ಅಧ್ಯಯನಗಳಿಂದ ಭಿನ್ನವಾಗಿತ್ತು. ಅವರು ಗಣಿತವನ್ನು ಯಾರಿಂದಲೂ ಕಲಿಯಬೇಕಿರಲಿಲ್ಲ, ಅವರ ಬುದ್ಧಿಮತ್ತೆಗೆ ಹೊಳೆಯುತ್ತಿತ್ತು. ಈವರೆಗೆ ಗಣಿತದಲ್ಲಿ ಯಾವ ತತ್ವಗಳನ್ನು ಆವಿಷ್ಕರಿಸಿ ಆಗಿದೆ ಎನ್ನುವ ಮಾಹಿತಿಗೆ ಗ್ರಂಥಾಲಯಗಳ ಅವಶ್ಯಕತೆ ಇತ್ತು. ಐದು ವರ್ಷಗಳ ಕೇಂಬ್ರಿಜ್ ವಾಸದಲ್ಲಿ ಅವರಿಗೆ ಹತ್ತಿರವಿದ್ದವರು ಹಾರ್ಡಿಯವರು. ಅದೆಂತಹ ಒಂದು ಸಮಾಗಮ! ಅವರೀರ್ವರ ವ್ಯಕ್ತಿತ್ವ ಅದೆಷ್ಟು ವ್ಯತಿರಿಕ್ತವಾಗಿದ್ದವು. ಎರಡು ಪೂರ್ಣ ವ್ಯತ್ಯಾಸಗಳಿರುವ ಸಂಸ್ಕೃತಿ, ನಂಬಿಕೆ ಮತ್ತು ಜೀವನಶೈಲಿಗಳ ಮಿಲನ. ಹಾರ್ಡಿಯವರು ನಿರೀಶ್ವರವಾದಿ, ಗಣಿತದ ಕಟು ಹೆಜ್ಜೆಗಳ ಪುರಾವೆ ನಿರೀಕ್ಷಿಸುವ ಆಂಗ್ಲರಾದರೆ, ರಾಮಾನುಜಂ ಒಬ್ಬ ಧಾರ್ಮಿಕ, ಸರಳ, ಆಸ್ತಿಕ ಹಾಗೂ ಒಂದು ಇನ್ಟ್ಯೂಶನ್ ಮೂಲಕ ಕೆಲಸ ಮಾಡುವ ಗಣಿತಜ್ಞ. ರಾಮಾನುಜಂ ಅವರ ಮಾತಿನಲ್ಲಿ ಹೇಳುವುದಾದರೆ, “ ನಾನು ನಿದ್ದೆಯಲ್ಲಿದ್ದಾಗ ರಕ್ತದಿಂದ ಸುರಿದ ಒಂದು ಕೆಂಪು ಬಣ್ಣದ ಪರದೆಯನ್ನು ಕಾಣುತ್ತಿದ್ದೆ. ನೋಡುತ್ತಿದ್ದಂತೆಯೇ ಒಂದು ಕೈ ಅದರಲ್ಲಿ ಅಂಡಾಕಾರದ ಅನುಕಲನಗಳನ್ನು (elliptic integrals) ಬರೆಯಲು ತೊಡಗುತ್ತದೆ. ಎಚ್ಚರವಾದಮೇಲೆ ನಾನು ಅದನ್ನೇ ಬರೆಯಲು ತೊಡಗುತ್ತೇನೆ”. ಹಾರ್ಡಿಯವರನ್ನು ಹಲವರು ಕೇಳುತ್ತಿದ್ದ ಪ್ರಶ್ನೆಯೆಂದರೆ, “ರಾಮಾನುಜಂಗೆ ಪವಾಡ ಸಾಮರ್ಥ್ಯವಿತ್ತೇ?”. ಇದಕ್ಕೆ ಹಾರ್ಡಿಯವರು ಅವರ ವ್ಯಕ್ತಿತ್ವಕ್ಕೆ ತಕ್ಕಂತೆ ವಸ್ತುನಿಷ್ಠ ಉತ್ತರ ಮಾತ್ರ ನೀಡುತ್ತಿದ್ದರು.
ಚಿತ್ರ: “The Man who Knew Infinity” (2016) ಸಿನೆಮಾದಲ್ಲಿ ಜಿ.ಎಚ್.ಹಾರ್ಡಿ ಮತ್ತು ರಾಮಾನುಜಂ ಅವರ ಪಾತ್ರಗಳು
ಲಂಡನಿನ ರೋಯಲ್ ಸೊಸೈಟಿ, ರಾಮಾನುಜಂ ಅವರಿಗೆ “ಫೆಲೋ ಆಫ್ ರೋಯಲ್ ಸೊಸೈಟಿ” ಉಪಾದಿಯನ್ನು ನೀಡಿ ಗೌರವಿಸಿತು. ಆದರೆ ಅವರಿಗೆ ಲಂಡನ್ ಜೀವನ ಮಾತ್ರ ಒಗ್ಗಲಿಲ್ಲ, ಕ್ಷಯರೋಗದಿ೦ದ ಬಳಲಾರಂಭಿಸಿದರು. ಔಷದೋಪಚಾರಗಳಲ್ಲಿ ಅತಿ ಬಿಗಿಯಿರುವ ಅವರು ಸಾಮಾನ್ಯ ಯಾವ ಚಿಕಿತ್ಸೆಗೂ ಒಪ್ಪುತ್ತಿರಲಿಲ್ಲ. ಅವರು ಕೃಶ ದೇಹವನ್ನು ಹೊತ್ತು ಮರಳಿ ತಾಯ್ನಾಡಿಗೆ 1919 ಏಪ್ರಿಲ್ ನಲ್ಲಿ ಮದ್ರಾಸಿಗೆ ಬಂದರು. ಮುಂದೆ ಒಂದೇ ವರ್ಷದಲ್ಲಿ 1920, ಏಪ್ರಿಲ್ 25 ರಂದು ಅಸ್ತಂಗತರಾದರು. ಆಗ ಅವರಿಗೆ ಪ್ರಾಯ 32. ಜೀವನದಲ್ಲಿ ಅವರಿಗೆ ಅತ್ಯಂತ ನಿಕಟವಾಗಿದ್ದುದು ಗಣಿತ ಮತ್ತು ಅನಾರೋಗ್ಯ. ಅವರು ಕಂಡುಕೊಂಡ ಇನ್ಫೈನೈಟ್ ಸೀರೀಸ್ ಮತ್ತು 3900 ಐಡೆನ್ಟೀಟೀಸ್ ಮತ್ತು ಸಮೀಕರಣಗಳೇ ಅವರ ಅಸಾಮಾನ್ಯ ಸಾಧನೆಗಳು. “The Man who Knew Infinity” ಎನ್ನುವ ಸಿನೆಮಾ (U.K.) ಅವರ ಬದುಕಿನ ಚಿತ್ರಣವನ್ನೋಳಗೊಂಡ, ಅದೇ ಹೆಸರಿನ ಪುಸ್ತಕವನ್ನಾಧರಿಸಿ, 2016 ರಲ್ಲಿ ಬಿಡುಗಡೆ ಆಗಿದೆ. ಅವರು ಇಂಗ್ಲೆಂಡ್ ನಲ್ಲಿ ಬರೆದಿದ್ದ ಆದರೆ ಕಳೆದುಹೋದ ಹಾಳೆಗಳಿಗೆ ‘ಲೋಸ್ಟ್ ನೋಟ್ ಬುಕ್’ (Lost Note Book) ಎಂದೇ ಹೆಸರು. 1976 ರಲ್ಲಿ ಜೋರ್ಜ್ ಏನ್ಡ್ರೂಸ್ ಎನ್ನುವ ಗಣಿತಶಾಸ್ತ್ರಜ್ಞ ಟ್ರಿನಿಟಿ ಕಾಲೇಜ್ ನಲ್ಲಿ ಮತ್ತೆ ಅದನ್ನು ಕಂಡುಕೊಂಡರು ಮತ್ತು ಪ್ರಕಟಿಸಿದರು.
ಪ್ರತಿ ವರ್ಷ ರಾಮಾನುಜಂ ಅವರ ಜನ್ಮ ದಿನ, ದಶಂಬರ 22, “ರಾಷ್ಟ್ರೀಯ ಗಣಿತಶಾಸ್ತ್ರದ ದಿವಸ”ವೆಂದು ದೇಶಾದ್ಯಂತ ಆಚರಿಸಲಾಗುತ್ತದೆ.
-ಡಾ. ಬಡೆಕ್ಕಿಲ ಶ್ರೀಧರ ಭಟ್.ಪುತ್ತೂರು.
ಮಾಹಿತಿಪೂರ್ಣ ಬರಹ.. 🙂
ಅತ್ಯದ್ಭುತ ವ್ಯಕ್ತಿಯೊಬ್ಬನ ಬಗ್ಗೆ ರೋಮಾಂಚಕಾರಿ ಪರಿಚಯ. ಓದುತ್ತ ಮೈನವಿರೆದ್ದಿತು!
ಅತ್ಯುತ್ತಮ ಪರಿಚಯಾತ್ಮಕ ಲೇಖನ. ಲೇಖಕರಿಗೆ ಧನ್ಯವಾದಗಳು.
‘ಎಸ್.ರಾಮಾನುಜಂ’ ಲೇಖನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಶ್ರುತಿ ಶರ್ಮ, ಸಿಂಧು ದೇವಿ, ಅನಂತ ರಮೇಶ್ ಇವರಿಗೆ, ಅಲ್ಲದೆ ಇಷ್ಟ ಪಟ್ಟು ಓದಿದವರೆಲ್ಲರಿಗೂ ಋಣಿ.