ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 7
ಬೆಳಗ್ಗೆ 0915 ಗಂಟೆಗೆ ಮುಕ್ತಿನಾಥ ತಲಪಿದೆವು (22/02/2017). ಜೀಪಿನಿಂದ ಇಳಿದ ತಕ್ಷಣ, ಕಡಿಮೆ ಆಮ್ಲಜನಕದ ಅನುಭವವಾಯಿತು. ಹಿಮ ಹೊದ್ದ ಬೆಟ್ಟಗಳ ನಡುವೆ ಸ್ವಲ್ಪ ಸಮತಟ್ಟಾದ ದಾರಿ ಮತ್ತು ಕೆಲವು ಮೆಟ್ಟಿಲುಗಳುಳ್ಳ ಕಾಲುದಾರಿಯಲ್ಲಿ ಹೆಜ್ಜೆ ಹಾಕಿದೆವು. ನಾಲ್ಕು ಹೆಜ್ಜೆ ಸಡೆಯುವಷ್ಟರಲ್ಲಿ ಸುಸ್ತಾಯಿತು. ಸುಮಾರು 100 ಅಡಿ ನಡೆಯುವಷ್ಟರಲ್ಲಿ ಶರೀರ ಅಲ್ಲಿನ ಹವೆಗೆ ಹೊಂದಿಕೊಂಡಿತು.
ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ಧಾರ್ಮಿಕ ಕ್ಷೇತ್ರಗಳಿಗೆ ತೀರ್ಥಯಾತ್ರೆ ಎಂಬ ಧಾರ್ಮಿಕ ಭಾವನೆಯಿಂದ, ತೀರಾ ಚಳಿಯಲ್ಲೂ ತಣ್ಣೀರಿನಲ್ಲಿ ತಲೆಗೆ ಸ್ನಾನ ಮಾಡಿ, ಉಪವಾಸವಿದ್ದು ದೇವರ ದರ್ಶನ ಮಾಡುವಷ್ಟು ಆಸ್ತಿಕಳಲ್ಲ. ಆದರೆ ‘ನೀರು ಗೆಸ್ಟ್ ಹೌಸ್ ‘ನ ಸ್ನಾನಗೃಹದಲ್ಲಿದ್ದ 2-3 ನಲ್ಲಿಗಳನ್ನು ತಿರುಗಿಸುತ್ತಿರುವಾಗ ಅಚಾನಕ್ ಆಗಿ ಶವರ್ ನಿಂದ ಜೋರಾಗಿ ಮಳೆಯಂತೆ ತಣ್ಣಗೆ ಕೊರೆಯುವ ನೀರು ಸುರಿದು, ಅನಿವಾರ್ಯವಾಗಿ ತಲೆಗೆ ಸ್ನಾನ ಆಗಿತ್ತು! ಬೆಳಗ್ಗೆ ಬೇಗನೆ ಹೊರಟ ಕಾರಣ ಬೆಳಗಿನ ತಿಂಡಿಯೂ ಇಲ್ಲ. ಹಾಗಾಗಿ, ದೇವಸ್ಥಾನಕ್ಕೆ ‘ಉಪವಾಸವಿದ್ದು’ ಹೋದಂತಾಯಿತು! ಬಹುಶ: ಧಾರ್ಮಿಕ ಸ್ವಯಂಶಿಸ್ತು ಇಲ್ಲದ ನನ್ನಂತವರಿಗೆ, ದೇವರೇ ಶಿಸ್ತು ಕಲಿಸುವ ಪರಿ ಇದಾಗಿರಬೇಕು ಅಂದುಕೊಂಡೆ.
ಮುಕ್ತಿನಾಥ ಸಣ್ಣ ಪೇಟೆಯಂತಿತ್ತು. ಈ ದಾರಿಯಲ್ಲಿ 30-40 ಮನೆಗಳು, ಕೆಲವು ಹೋಟೆಲ್ ಗಳು, ಪೂಜಾ ಸಂಬಂಧಿ ಸಾಲಿಗ್ರಾಮ, ಪ್ರಸಾದ, ಕೈಗೆ ಕಟ್ಟುವ ದಾರ ಇತ್ಯಾದಿ ಮಾರುವ ಬೌದ್ಧ ಮಹಿಳೆಯರು ಕಾಣಸಿಕ್ಕಿದರು. ಮುಕ್ತಿನಾಥದ ದೇವಾಲಯದ ಆವರಣವನ್ನು ಪ್ರವೇಶಿಸುವ ಮೊದಲು, ಚೆಕ್ ಪೋಸ್ಟ್ ಸಿಗುತ್ತದೆ. ಅಲ್ಲಿ ನಮ್ಮ ಪ್ರವೇಶಕ್ಕೆ ಮುಂಗಡವಾಗಿ ಪರವಾನಗಿ ಪಡೆದುಕೊಂಡು, ಅಧಿಕೃತವಾದ ಗುರುತಿನ ಚೀಟಿ ತೋರಿಸಿ ಮುಂದುವರಿಯಬೇಕು.
ದೇವಸ್ಥಾನದ ಪಕ್ಕದಲ್ಲಿದ್ದ ಅಂಗಡಿಯೊಂದರಿಂದ ಪ್ರಸಾದವಾಗಿ ಮಾರುವ ಒಣ ಸೇಬು, ಒಣ ಹಣ್ಣುಗಳು, ಸಕ್ಕರೆ ಮಿಠಾಯಿ, ಕೈಗೆ ಕಟ್ಟುವ ದಾರಗಳನ್ನು ನೇಪಾಳಿ ಹಣ ಕೊಟ್ಟು ಕೊಂಡುಕೊಂಡೆ. ದೇವಾಲಯದ ಮುಖ್ಯದ್ವಾರದ ಪಕ್ಕ ಎಡಭಾಗದಲ್ಲಿ ಬೌದ್ಧರ ಮಠವೊಂದಿತ್ತು .
ಮಂತ್ರಗಳನ್ನು ಬರೆದಿದ್ದ ಸಿಲಿಂಡರಿನಾಕಾರದ ಪ್ರಾರ್ಥನಾ ಕಂಭಗಳನ್ನು ತಿರುಗಿಸುವುದು ಬೌದ್ಧರ ಪದ್ದತಿ. ನಾವೂ ಆ ಪ್ರಾರ್ಥನಾ ಕಂಭಗಳನ್ನು ತಿರುಗಿಸಿ ನಮಿಸಿ ಮುಂದುವರಿದೆವು. ಒಂದು ಕಡೆ ನೀರಿನ ಪ್ರವಾಹದ ಮೂಲಕ ಪ್ರಾರ್ಥನಾ ಕಂಭವನ್ನು ತಿರುಗಿಸುವ ಸ್ವಯಂಚಾಲಿತ ವ್ಯವಸ್ಥೆ ಮಾಡಿದ್ದರು.
ಅಲ್ಲಿಂದ ಸುಮಾರು ಇಪ್ಪತ್ತು ಮೆಟ್ಟಿಲುಗಳನ್ನು ಹತ್ತಿ ಹೋದಾಗ ಮುಕ್ತಿನಾಥನ ಅಂಗಳ ತಲಪಿದ್ದೆವು. ಚಿಕ್ಕದಾದ , ಪಗೋಡ ಶೈಲಿಯ ಮಂದಿರವದು. ದೇವಾಲಯದ ಮುಂದೆ ಎರಡು ನೀರಿನ ಕುಂಡಗಳಿದ್ದುವು. ದೇವಾಲಯದ ಸುತ್ತಲೂ 108 ಕಲ್ಲಿನ ‘ಗೋಮುಖ’ಗಳ ಮೂಲಕ ನೀರ ಧಾರೆ ನಿರಂತರವಾಗಿ ಹರಿಯುತ್ತಿದ್ದುವು. ಈ ಧಾರೆಗಳು ಗಂಡಕೀ ನದಿಯನ್ನು ಸೇರುತ್ತವೆ. ಆ ನೀರು ಬಹಳ ತಣ್ಣಗೆ ಇದ್ದುದರಿಂದ ತಲೆಗೆ ಪ್ರೋಕ್ಷಣೆ ಮಾತ್ರ ಮಾಡಿಕೊಂಡೆವು. ತಂಡದ ಒಂದಿಬ್ಬರು ಆ ಧಾರೆಗಳಿಗೂ ತಲೆಯೊಡ್ದಿ, ಕುಂಡದಲ್ಲಿಯೂ ಮುಳುಗಿ ತೀರ್ಥಸ್ನಾನದ ಸಾರ್ಥಕತೆ ಪಡೆದಿದ್ದರು!
ಗರ್ಭಗುಡಿಯ ಒಳಗೆ ಸುಂದರವಾದ ಪಂಚಲೋಹದ ನಾರಾಯಣನ ಮೂರ್ತಿಯಿತ್ತು . ಎಡಬಲದಲ್ಲಿರುವ ಲಕ್ಷ್ಮಿ, ಸತಿ, ಬುದ್ಧ ಮತ್ತು ಗಣೇಶ ಎಂದು ಅಲ್ಲಿದ್ದ ಲಾಮಾ ತಿಳಿಸಿದರು. ನಾವು ಹೋಗಿದ್ದ ಸಮಯ ಅಲ್ಲಿ ಪೂಜೆ ನಡೆಯುತ್ತಿರಲಿಲ್ಲ. ನಮ್ಮ ಕೈಯಲ್ಲಿದ್ದ ಪ್ರಸಾದದ ಪೊಟ್ಟಣವನ್ನು ಮೂರ್ತಿಯ ಪದತಲದಲ್ಲಿ ಇಟ್ಟು ನಮ್ಮ ಕೈಗೆ ಕೊಟ್ಟರು. ಗರ್ಭಗುಡಿಗೆ ಪ್ರದಕ್ಷಿಣೆ ಬಂದು, ಕಾಣಿಕೆ ಹಾಕಿ ಹೊರಬಂದಾಗ ಧನ್ಯತಾ ಭಾವ ಸಿದ್ಧಿಸಿತ್ತು.
(ಮುಂದುವರಿಯುವುದು)
ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು ….ಭಾಗ 6 : http://surahonne.com/?p=17638
– ಹೇಮಮಾಲಾ.ಬಿ