‘ತಕ್ರಂ ಶಕ್ರಸ್ಯ ದುರ್ಲಭಂ’ ….

Share Button
Hemamala. B, DGM, Kluber Lubrication (I) Pvt.Ltd. Mysore

ಹೇಮಮಾಲಾ. ಬಿ

 

ಬೇಸಗೆ ಈಗಲೇ ಕಾಲಿಟ್ಟಿದೆ. ಬಿಸಿಲಿನಲ್ಲಿ ಹೋಗಿ ಬಂದವರ ಬಾಯಾರಿಕೆ ತಣಿಸಲು ಅತ್ಯತ್ತಮ ಪೇಯ ತಣ್ಣನೆಯ ಮಜ್ಜಿಗೆ. ಬೆಳಗ್ಗೆ ಒಂದು ದೊಡ್ಡ ತಪ್ಪಲೆಯಲ್ಲಿ ನೀರು ಮಜ್ಜಿಗೆ ಮಾಡಿ ಇಟ್ಟರೆ ಮಧ್ಯಾಹ್ನದ ಒಳಗೆ ಖರ್ಚಾಗುತ್ತದೆ. ಇದನ್ನು ತಯಾರಿಸುವ ಬಗೆಯೋ ಹಲವಾರು.

ಕಡೆದ ಮಜ್ಜಿಗೆಗೆ ಸಾಕಷ್ಟು ನೀರು ಬೆರೆಸಿ, ಅವರವರ ರುಚಿಗೆ ತಕ್ಕಂತೆ ಉಪ್ಪು ಹಾಕಿ, ಖಾರ-ಪರಿಮಳಕ್ಕೆ ತಕ್ಕಷ್ಟು ಹಸಿರುಮೆಣಸಿನಕಾಯಿ, ಶುಂಠಿಯನ್ನು ಜಜ್ಜಿ ಹಾಕಿ, ಮೇಲೊಂದು ಕರಿಬೇವಿನ ಒಗ್ಗರಣೆ ಕೊಟ್ಟು, ನಿಂಬೆ ಹಣ್ಣಿನ ರಸ ಸೇರಿಸಿದರಾಯಿತು. ರುಚಿ ಬದಲಾವಣೆ ಬಯಸುವವರು ಇಂಗು, ಈರುಳ್ಳಿ, ಬೆಳ್ಳುಳ್ಳಿ, ಪುದಿನಾ ಸೊಪ್ಪು, ಕೊತ್ತಂಬರಿ ಸೊಪ್ಪು…ಇತ್ಯಾದಿ ಅವರವರ ಆಯ್ಕೆಯ ಸಾಮಗ್ರಿಗಳನ್ನು ಸೇರಿಸುವುದಿದೆ. ಒಟ್ಟಿನ ಮೇಲೆ, ನೀರು ಮಜ್ಜಿಗೆ ಕುಡಿಯಲೂ ರುಚಿ, ದೇಹಕ್ಕೂ ತಂಪು.

 

ಇನ್ನು ಇದನ್ನು ಕುಡಿಯಲು  ಕ್ಯಾಲೊರಿ ಚಿಂತೆ ಬೇಕಾಗಿಲ್ಲ. ಮೇಲಾಗಿ ನೀರು ಮಜ್ಜಿಗೆಯನ್ನು ಕೊಡುವವರೂ, ಕುಡಿಯುವವರೂ ಎಷ್ಟು ಮಿ.ಲಿ. ಕುಡಿಯಬೇಕೆಂಬ ಲೆಕ್ಕ ಇಡುವುದಿಲ್ಲ. ಪುಟ್ಟ ಕಪ್ ನಲ್ಲಿರುವ ಹಬೆಯಾಡುವ ಕಾಫಿಯನ್ನು, ಲಿಪ್ ಸ್ಟಿಕ್ ಗೆ ತಗಲದಂತೆ, ಸೊರ-ಸೊರ ಸದ್ದಾಗದಂತೆ ಕೃತಕ ಶಿಷ್ಟಾಚಾರದಿಂದ ಕುಡಿಯಬೇಕಾದ ಕಷ್ಟ ಮಜ್ಜಿಗೆಗೆ ಬೇಕಾಗಿಲ್ಲ. ಒಂದು ದೊಡ್ಡ ಗ್ಲಾಸ್ ಅಥವಾ ಚಿಕ್ಕ ತಪ್ಪಲೆ ಅಥವಾ ಸಣ್ಣ ಚೊಂಬಿನಲ್ಲಿ ತುಂಬಿಸಿದ ಮಜ್ಜಿಗೆಯನ್ನು ಸೀದಾ ಗಂಟಲಿಗೇ ಸುರುವಿ ಗಟಗಟ ಸದ್ದು ಮಾಡಿ ಕುಡಿದರೇ ತೃಪ್ತಿ. ‘ಮಜ್ಜಿಗೆ ತುಂಬಾ ಚೆನ್ನಾಗಿತ್ತು’ ಎಂದು ಲೋಟಕ್ಕೆ ಇನ್ನೊಂದು ಬಾರಿ..ಮತ್ತೊಂದು ಬಾರಿ ತುಂಬಿಸಿ ಕುಡಿಯುವುದು ಮಜ್ಜಿಗೆ ಸವಿಯುವ ದೇಸಿ ಶೈಲಿ.

ಮಜ್ಜಿಗೆ ತಯಾರಿಸುವ ವಿಧಾನ ಬಹು ಪುರಾತನವಾದುದು. ಹಾಲನ್ನು ಹದವಾಗಿ ಕಾಯಿಸಿ, ಬಿಸಿ ಆರಿದ ಮೇಲೆ ಹೆಪ್ಪು ಹಾಕಿ ಮುಚ್ಚಿಟ್ಟರೆ, ಸುಮಾರು 5- 6  ಘಂಟೆಗಳ ನಂತರ ಗಟ್ಟಿ ಮೊಸರು ಸಿದ್ಧವಾಗುತ್ತದೆ. ಹೆಪ್ಪಿನ ಹದ ಹಾಗೂ ಹಾಲಿನ ಬಿಸಿ ಇಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಈ ಮೊಸರನ್ನು ಕಡೆದು ಬೆಣ್ಣೆ ಬೇರ್ಪಡಿಸಿದರೆ ಮಜ್ಜಿಗೆ ಸಿಗುತ್ತದೆ.

ಶ್ರೀ ಪುರಂದರ ದಾಸರ ‘ ಕಡೆಗೋಲ ತಾರೆನ್ನ ಚಿನ್ನವೇ..ಮೊಸರೆಡೆದರೆ ಬೆಣ್ಣೆ ಬಾರದು ರನ್ನವೇ..’  ಹಾಡಿನ ಜಾಡಿನಲ್ಲಿ ಅರಿಯುವುದಾದರೆ, ದ್ವಾಪರಯುಗದಲ್ಲಿಯೇ ಮಜ್ಜಿಗೆ ಇತ್ತು! ಯಾಕೆಂದರೆ, ಮೊಸರು ಕಡೆಯುವ ಯಶೋಧೆ ಮತ್ತು ತುಂಟ ಕೃಷ್ಣನ ವರ್ಣನೆ ಆ ಕೀರ್ತನೆಯಲ್ಲಿವೆ. ಈಗಲೂ ಸಾಂಪ್ರದಾಯಿಕ ಹಳ್ಳಿಮನೆಗಳಲ್ಲಿ, ದೊಡ್ಡ ಭರಣಿಯಲ್ಲಿರುವ ಮೊಸರಿಗೆ ಕಡೆಗೋಲನ್ನು ಹೊಂದಿಸಿ, ಅದಕ್ಕೊಂದು ಮರದ ಗೂಟ ಮತ್ತು ರಾಟೆ ಜೋಡಿಸಿ, ಕಡೆಗೋಲಿಗೆ ಹಗ್ಗ ಸುತ್ತಿ ಎರಡು ಕೈಯಿಂದ ಹಗ್ಗವನ್ನು ಪರ್ಯಾಯವಾಗಿ ಎಳೆಯುತ್ತಾ ಮೊಸರು ಕಡೆಯುವ ಅಜ್ಜಿಯರು ಇರಬಹುದು. ಆದರೆ ಬಲು ವಿರಳ. ಯಾಕೆಂದರೆ ಈಗ ಮೊಸರು ಕಡೆಯುವ ಮೆಶಿನ್ ಗಳಿವೆ.

ನಗರಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಜ್ಜಿಗೆ ತಯಾರಿಸಲು ಹಲವಾರು ಅಡ್ಡದಾರಿಗಳು. ಮೊಸರನ್ನು ‘ಎಗ್ ಬೀಟರ್’ ನಲ್ಲಿ ಕದಡುವುದು, ‘ಹ್ಯಾಂಡ್ ಮಿಕ್ಸರ್’ ನಲ್ಲಿ ಗೊಟಾಯಿಸಿವುದು, ಸುಮ್ಮನೆ ಸೌಟಿನಲ್ಲಿ ಕದಕಿ ಏಕರೂಪಕ್ಕೆ ತರುವುದು, ಬಾಟಲಿಯಲ್ಲಿ ಹಾಕಿ ಸ್ವಲ್ಪ ಸಮಯ ಕುಲುಕುವುದು….ಹೀಗೆ ಏನಾದರೊಂದು ಕಸರತ್ತು  ಮಾಡಿ,  ಬೆಣ್ಣೆ ತೆಗೆಯದಿದ್ದರೂ ಅದಕ್ಕೆ ‘ಮಜ್ಜಿಗೆ’ ಎಂದು ನಾಮಕರಣ ಮಾಡುವುದು. ಅದಕ್ಕೂ ಸೋಮಾರಿತನವಾದರೆ, ಅಂಗಡಿಯಲ್ಲಿ ಲಭ್ಯವಿರುವ ಪ್ಯಾಕೆಟ್ ಮಸಾಲಾ ಮಜ್ಜಿಗೆ ಖರೀದಿಸುವುದು ಅತ್ಯಂತ ಸುಲಭೋಪಾಯ.

  • ಹಾಲಿನಲ್ಲಿ ಇರುವ ಲ್ಯಾಕ್ಟೊಸ್  ನಿಂದಾಗಿ ಕೆಲವರಿಗೆ ಹೊಟ್ಟೆನೋವು ಬರುತ್ತದೆ. ಆದರೆ ಮಜ್ಜಿಗೆಯಲ್ಲಿ ಇದು ಲ್ಯಾಕ್ಟಿಕ್ ಆಮ್ಲ ಆಗಿ ಪರಿವರ್ತನೆ ಆಗಿರುವುದರಿಂದ ಈ ಸಮಸ್ಯೆ ಬರುವುದಿಲ್ಲ.
  • ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡುವುದರಿಂದ ಕೊಬ್ಬಿನ ಅಂಶ ತೀರಾ ಕಡಿಮೆಯಾಗುತ್ತದೆ.
  • ಮಜ್ಜಿಗೆ  ರೋಗ ನಿರೋಧಕ.
  • ಅಜೀರ್ಣ, ಹೊಟ್ಟೆನೋವು ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಉತ್ತಮ.
  • ಸಕ್ಕರೆ ಕಾಯಿಲೆಯವರಿಗೆ ಮಜ್ಜಿಗೆ ಉಪಯುಕ್ತ.
  • ತೂಕ ಇಳಿಸಲೂ ಮಜ್ಜಿಗೆ ಸಹಕಾರಿ.
  • ಮಜ್ಜಿಗೆ ನೀರಿನಲ್ಲಿ ಹೇರಳವಾಗಿ ಪೊಟಾಷಿಯಂ, ಕ್ಯಾಲ್ಸಿಯಂ  ಹಾಗೂ ವಿಟಮಿನ್ ಬಿ 12 ಇರುತ್ತದೆ.

ಮಜ್ಜಿಗೆ. ಮೊಸರಿನ ವರ್ಗಕ್ಕೆ ಸೇರುವ ಸಿಹಿ-ಖಾರ ಲಸ್ಸಿ ಗಳ ಪಾತ್ರವೂ ಕಮ್ಮಿಯದೇನಲ್ಲ. ಜೀರಾ ಲಸ್ಸಿ, ಪುದಿನಾ  ಲಸ್ಸಿ, ಸ್ಟ್ರೋಬೆರಿ ಲಸ್ಸಿ, ಕೇಸರ್ ಲಸ್ಸಿ ಇತ್ಯಾದಿ ವಿವಿಧ ಬಣ್ಣ, ರುಚಿ, ಸ್ವಾದಗಳ ಅವತರಣಿಕೆಗಳು ಲಭ್ಯ. ಉತ್ತರ ಭಾರತದಲ್ಲಿ ಲಸ್ಸಿಯ ಬಳಕೆ ಸ್ವಲ್ಪ ಜಾಸ್ತಿ.

 

 

ಇನ್ನು ವಿದೇಶಗಳಲ್ಲಿ ‘ಯೋಗರ್ಟ್’ ಎಂದು ಕರೆಯಲ್ಪಡುವ, ರುಚಿಯಲ್ಲಿ ಮೊಸರನ್ನು ಹೋಲುವ ವಿವಿಧ ಪ್ರಕಾರಗಳ ಡೈರಿ ಉತ್ಪನ್ನವನ್ನು ಧಾರಾಳವಾಗಿ ಬಳಸುತ್ತಾರೆ. ಮೊಸರನ್ನು ಹಾಲಿಗೆ ಹೆಪ್ಪು ಹಾಕಿ ತಯಾರಿಸಿದರೆ, ಯೋಗರ್ಟ್ ಅನ್ನು, ಸಂಬಂಧಿಸಿದ ಬ್ಯಾಕ್ಟೀರಿಯವನ್ನು ಬೆರೆಸಿ ತಯಾರಿಸುತ್ತಾರೆ. ಇದರಲ್ಲೂ ಹಲವಾರು ರುಚಿ, ಬಣ್ಣ, ಸ್ವಾದ ಲಭ್ಯ.

ಮಜ್ಜಿಗೆಗೆ ಆಯುರ್ವೇದದಲ್ಲಿ ‘ತಕ್ರಾರಿಷ್ಟ’ ಎಂಬ ಹೆಸರಿದೆ.  ಸಂಸ್ಕೃತದಲ್ಲಿ ‘ತಕ್ರಂ ಶಕ್ರಸ್ಯ ದುರ್ಲಭಂ’  ಎಂಬ ಸೂಕ್ತಿಯಿದೆ. ಇದರರ್ಥ. ಇಂದ್ರನಿಗೂ ಮಜ್ಜಿಗೆ ಸಿಗುವುದಿಲ್ಲ ಎಂದು. ಸದ್ಯ, ಮಜ್ಜಿಗೆಗೆ ಈವರೆಗೆ ಯಾರೂ ಪೇಟೆಂಟ್ ಗೆ ಅರ್ಜಿ ಹಾಕದಿರುವುದು ನಮ್ಮ ಪುಣ್ಯ.

 

-ಹೇಮಮಾಲಾ. ಬಿ. ಮೈಸೂರು.


26/03/2013

 

 

10 Responses

  1. Sangeeta Muraleedhar says:

    ತುಂಬಾ ಉತ್ತಮ ಬರಹ. ಬೇಸಿಗೆಯ ಧಗೆಗೆ ಮಜ್ಜಿಗೆಯಷ್ಟು ಉತ್ತಮ ಪಾನೀಯ ಬೇರೊಂದಿಲ್ಲ, ಮಜ್ಜಿಗೆಯಲ್ಲಿ ೬೪ ಬಗೆಯ ರೋಗಗಳನ್ನು ನಿವಾರಿಸುವ ಗುಣವಿದೆಯೆನ್ನುವುದು ಪ್ರಚಲಿತ. ಲೇಖನದ ಜೊತೆ “ಕಡೆಗೋಲ ತಾರೆನ್ನ ಚಿನ್ನವೇ..” ಎಂಬ ಅಪರೂಪದ ಹಾಡನ್ನು ನೆನಪಿಸಿದುದಕ್ಕೆ ಸಂಪಾದಕಿಗೆ ವಂದನೆಗಳು.. 🙂

  2. Sangeeta Muraleedhar says:

    Articles are being presented beautifully with related images.. Great work, Suragi Team!

  3. Purnima says:

    very attractive.

  4. jayashree says:

    good , well researched artricle

  5. ಲೇಖನ ಓದಿ ಮಜ್ಜಿಗೆ ಕುಡಿಯಬೇಕೆನ್ನಿಸುತ್ತದೆ

  6. Abhilash Sharma says:

    ನಾವೂ ಹೀಗೇ ಮಜ್ಜಿಗೆ ಮಾಡಿ ಕುಡಿಯುತ್ತೇವೆ. ಸುಸ್ತಾಗುವಾಗ ಮಜ್ಜಿಗೆ ಕುಡಿದರೆ ಅಮೃತ ಕುಡಿದಂತಹಾ ಅನುಭವವಾಗುತ್ತದೆ. 🙂

  7. ಮಜ್ಜಿಗೆಯ ಬಗ್ಗೆ ಲೇಖನ ಚೆನ್ನಾಗಿ ಬಂದಿದೆ.

    ಹಾಲಿನಲ್ಲಿ ಇರುವ ಲ್ಯಾಕ್ಟೊಸ್ ನಿಂದಾಗಿ ಕೆಲವರಿಗೆ ಹೊಟ್ಟೆನೋವು ಬರುತ್ತದೆ.ಇನ್ನು ಕೆಲವರಿಗೆ ಹಾಲು ಕರಗವುದಿಲ್ಲ. ಇದು ಹೊಟ್ಟೆಯಲ್ಲಿ ಪೆಪ್ಸಿನ್ ಅಂಶ ಕಡಿಮೆ ಉತ್ಪಾದನೆ ಆಗುವ ಕಾರಣ ಇರಬಹುದು . ನನ್ನ ವೈಯುಕ್ತಿಕ ಅನುಭವವೂ ಹೌದು.

    ಚಿಕ್ಕಂದಿನಲ್ಲಿ ನಾನು ಮಜ್ಜಿಗೆಯನ್ನೇ ಇಷ್ಟ ಪಡುತ್ತಿದ್ದೆ . ಇತ್ತೀಚ್ಗೆ ನನಗೆ ಮಜ್ಜಿಗೆ ಕುಡಿದರೆ ಗ್ಯಾಸ್ ಆಗುತ್ತದೆ. ಆದರೆ ನನಗೆ ಮಜ್ಜಿಗೆ ತುಂಬಾ ಪ್ರೀತಿ. ಲೇಖಕಿಯವರು ಪರಿಹಾರ ಹೇಳುವಿರಾ ?

    ಮಜ್ಜಿಗೆ ನೀರಿನಲ್ಲಿ ಹೇರಳವಾಗಿ ಪೊಟಾಷಿಯಂ, ಕ್ಯಾಲ್ಸಿಯಂ ಹಾಗೂ ವಿಟಮಿನ್ ಬಿ 12 ಇರುತ್ತದೆ. ಹಾಲಿನಿಂದ ಬಂದದ್ದು ತಾನೇ ?

    ನನ್ನ ತಂದೆಯವರು ಹೊಟ್ಟೆ ನೋವು ಇರುವ ಆದರೆ ಮಜ್ಜಿಗೆ ಕುಡಿಯಲು ಹಟಮಾದುವ ಮಕ್ಕಳಿಗೆ ಹೇಳುತ್ತಿದ್ದುದು ನೆನಪಿದೆ ” ಮಜ್ಜಿಗೆ ಬೇಡ , ಮಗುವಿಗೆ ಸ್ವಲ್ಪ ತಕ್ರಾರಿಷ್ಟ ಕೊಡು ಎನ್ನುವುದು.

    ಲೇಖನದಲ್ಲಿ ಉಲ್ಲೆಕಿಸಿದ ಯೋಗರ್ತ್ , ಲಸ್ಸಿಎನ್ನುವ ಪದಗಳು ಮತ್ತು ಚೆನ್ನಾಗಿರುವ ಫೋಟೋ ಕ್ಲಿಪ್ಪಿಂಗ್ಸ್ ಮೆರಗು ನೀಡಿದೆ

    ಇತ್ತೀಚಿಗೆ ಕೆಲವು ಹೋಟೆಲ್ ಗಳಲ್ಲಿ ಊಟದೊಂದಿಗೆ ಮಜ್ಜಿಗೆ ಕೊಡುವ ಸಂಪ್ರದಾಯ ನಿಲ್ಲಿಸಿದ್ದಾರೆ. ಬೇಕಿದ್ದರೆ ಮಸಾಲಾ ಮಜ್ಜಿಗೆ ಹೆಚ್ಹು ದುಡ್ಡು ನೀಡಿ ಪಡೆಯಬಹುದು.

    ಲೇಖಕಿಯವರು ಮಜ್ಜಿಗೆಯ ಬಗ್ಗೆ ಕೆಲವು ಗಾಧೆ ಮಾತುಗಳನ್ನು ಸೇರಿಸಿದ್ದಲ್ಲಿ , ಇನ್ನು ಮಜ್ಜಿಗೆಯ ರುಚಿ ಹೆಚ್ಚಿಸಬಹುದಿತು. ಮಜ್ಜಿಗೆಯ ಅಬಿಮಾನಿಗಳಿಗೆ , “ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ” ಎನಿಸಿರಬಹುದು !

    ಲಘು ಹಾಸ್ಯ ಮತ್ತು ಉತ್ತಮ ಶೈಲಿ ಒಂದಿಗೆ ಲೇಖನ ಓದುಗನನ್ನ್ಜು ಅಡಿಗೆ ಮನೆಗೆ ಮಜ್ಜಿಗೆ ಆಸ್ವಾದಿಸಲು ಆಹ್ವಾನಿಸುತ್ತದೆ . ಅಲ್ಲವೇ ?

    ( ಕನ್ನಡದಲ್ಲಿ ಇದು ನನ್ನ ಮೊದಲ ಟೈಪಿಂಗ್ ! )

  8. Hema says:

    ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಳು.ಹೊಟ್ಟೆ ತುಂಬಾ ರುಚಿಯಾದ ಒಗ್ಗರಣೆ ಮಜ್ಜಿಗೆ ಕುಡಿದಷ್ಟು ಖುಶಿಯಾಯಿತು! 🙂
    ಕೆಲವರಿಗೆ ಮಜ್ಜಿಗೆ ಅಲರ್ಜಿ ಆಗುವ ಬಗ್ಗೆ ಅಂತರ್ಜಾಲದಲ್ಲಿ ಲಭ್ಯವಾದ ಮಾಹಿತಿ ಹೀಗಿದೆ:
    “If you notice that you develop symptoms after drinking buttermilk, you can still enjoy it if you take a lactase supplement before your first sip of the beverage. Pharmacies carry lactase supplements. However, before taking them, first discuss using this medication with your doctor.”

  9. Rakesh says:

    Wow, very nice article……

  10. Shwetha g v says:

    ಕ್ಷಮಿಸಿ..ತಕ್ರಂ ಶಕ್ರಸ್ಯ ದುರ್ಲಭಂ ಅನ್ನೋದು ಒಂದು ಸಂಸ್ಕೃತ ಸಮಸ್ಯೆ. ಮೇಲ್ನೋಟಕ್ಕೆ ಅದರ ವಾಕ್ಯರ್ಥ ಹಾಗೇ ಇದ್ದರೂ, ಅದಕ್ಕೆ ಬೇರೆ ಉತ್ತರವಿದೆ.
    ಭೋಜನಾಂತೆ ಕಿಂ ನ ಪಥ್ಯಮ್? ತಕ್ರಂ
    ಜಯಂತಹ ಕಸ್ಯ ವೈ ಸುತಃ? ಶಕ್ರಸ್ಯ
    ಕಾ ವಿಷ್ಣುಪದವಿ? ದುರ್ಬಲ
    ಹೀಗೆ ಒಟ್ಟು ಸೇರಿದ ವಾಕ್ಯದ ಅರ್ಥ

Leave a Reply to Sangeeta Muraleedhar Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: