ಒಂದು ಸುಳ್ಳಿನ ಕಥೆ!
ಅದ್ಯಾವುದೋ ಕೆಲಸ ನಿಮಿತ್ತ ಎರಡು ದಿನಗಳು ಪ್ರವಾಸದಲ್ಲಿದ್ದು ಅಂದು ಬೆಳಗ್ಗೆಯಷ್ಟೇ ಮನೆ ತಲುಪಿದ್ದೆವು. ಮನೆಯಲ್ಲೇ ಇದ್ದೆ. ಮಟ ಮಟ ಮಧ್ಯಾಹ್ನ ಒಂದೂ ಮೂವತ್ತರ ಹೊತ್ತು. ಸೆಖೆಗಾಲ ಬೇರೆ, ಸೂರ್ಯ ನೆತ್ತಿಗೇರಿ ಉಗ್ರ ರೂಪ ತಾಳಿ ಉರಿದು ಬೀಳುತ್ತಿದ್ದ. ಮನೆಯೊಳಗಿದ್ದರೂ ತಡೆಯದ ಆಸರು, ಬಿಸಿಲಿಗೋ ಪ್ರಯಾಣದ ಆಯಸಕ್ಕೋ ಇನ್ನಿಲ್ಲದ ಸುಸ್ತಾಗುತ್ತಿತ್ತು.
ತಣ್ಣನೆಯ, ಕಡೆದ ನೀರು ಮಜ್ಜಿಗೆ ಮಾಡಿದ್ದೆ. ಇನ್ನೇನು ಉಣ್ಣಬೇಕು, ಗೇಟು ಸದ್ದಾಗಿತ್ತು. ನಮ್ಮ ಮನೆಯ ಗೇಟು ತೆರೆಯಲು ಹೊಸಬರಿಗೆ ಕಷ್ಟವಾಗುತ್ತದೆ. ಬಾಗಿಲು ತೆರೆದು ನೋಡಿದೆ. ಖಾಕಿ ಅಂಗಿ ಧರಿಸಿದ ನಲುವತ್ತೈದರ ಆಜೂಬಾಜಿನಲ್ಲಿದ್ದ ವ್ಯಕ್ತಿಯೊಬ್ಬರು ಗೇಟು ಎಳೆಯುತ್ತಿದ್ದರು. ಪಕ್ಕದಲ್ಲಿ ಮೊಪೆಡ್ ಒಂದರಲ್ಲಿ ಎಂಟು ಹತ್ತು ಗ್ಯಾಸ್ ಸಿಲಿಂಡರ್ ಗಳನ್ನು ಕಟ್ಟಿ ನೇತು ಹಾಕಿದ್ದನ್ನು ಕಂಡು ಆತ ಗ್ಯಾಸ್ ಸಿಲಿಂಡರ್ ವಿತರಿಸುವ ವ್ಯಕ್ತಿಯೆಂದು ಅರ್ಥಮಾಡಿಕೊಂಡೆ. ಮನೆಯೊಳಗಿದ್ದರೂ ಬಿಸಿಲಿನ ತಾಪ ಬಿಡದೆ ಸಾಕುಬೇಕಾಗಿಸಿದ್ದ ನನಗೆ ಆತನನ್ನು ನೋಡಿ ಒಮ್ಮೆಲೇ ಮರುಕವಾಗಿತ್ತು. ವಾರದ ಹಿಂದೆಯೇ ಗ್ಯಾಸ್ ಸಿಲಿಂಡರ್ ತಲುಪಬೇಕಿತ್ತೆಂದು ನೆನಪಿಸಿಕೊಂಡೆ. ಉರಿಬಿಸಿಲಿಗೆ ಆ ನರಪೇತಲನಂತಿದ್ದ ಮೊಪೇಡ್ ನಲ್ಲಿ ಅಷ್ಟೊಂದು ಭಾರದ ಸಿಲಿಂಡರ್ ಗಳನ್ನು ಎಳೆಯುತ್ತಿದ್ದಾತನ ಮುಖ, ಕತ್ತಿನಲ್ಲಿ ಧಾರಾಕಾರ ಬೆವರು ಸುರಿಯುತ್ತಿತ್ತು.
ನನ್ನನ್ನು ಕಂಡ ಕ್ಷಣವೇ “ಏನು ಮೇಡಮ್! ಏಷ್ಟೊಂದು ಕಾಲ್ ಮಾಡಿದೀನಿ! ಫೊನೇ ಎತ್ತಿಲ್ಲ ನೀವು. ಮನೇಗ್ ಬಂದ್ರೂ ಇರಲ್ಲ ಇಲ್ಲಿ. ನಮ್ಗೂ ಕಷ್ಟ ಆಗತ್ತೆ ಮೇಡಂ..” ಅದೂ ಇದೂ ಅನ್ನತೊಡಗಿದ್ದ. ಅಂದರೂ ಬೆಂಗಳೂರಿನ ಬೈಗುಳದ ಸ್ಥಾಯಿ ತಲುಪದ ಆತನ ಸ್ವರದಲ್ಲೂ ಕಣ್ಣಿನಲ್ಲೂ ಸುಸ್ತು ಮಾತ್ರ ಎದ್ದು ಕಾಣುತ್ತಿತ್ತು.
“ಗ್ಯಾಸ್ ಸಿಲಿಂಡರ್ ವಾರದ ಹಿಂದೆಯೇ ತಲುಪಬೇಕಾಗಿತ್ತು, ನಿನ್ನೆ – ಮೊನ್ನೆ ಎರಡು ದಿನ ನಾವೂ ಮನೆಯಲ್ಲಿರಲಿಲ್ಲ. ಕರೆ ಮಾಡಿದ್ದಲ್ಲಿ ಮಿಸ್ಡ್ ಕಾಲ್ ಆದರೂ ಕಾಣಿಸಬೇಕಿತಲ್ಲಾ, ನೀವು ಯಾವ ನಂಬರಿಗೆ ಕಾಲ್ ಮಾಡಿದ್ರಿ?” ಎಂದು ಕೇಳಿದ್ದೆ. ಪುಸ್ತಕದಲ್ಲಿದ್ದ ನನ್ನ ಪತಿಯ ನಂಬರ್ ತೋರಿಸಿದರಾತ. ನಂತರವೂ ಬಿಡದೆ ನಾವು ಫೋನ್ ಎತ್ತಿಲ್ಲವೆಂದು ನಮ್ಮ ಬೇಜಾವಾಬ್ದಾರಿಯನ್ನೇ ಬೈಯ್ಯತೊಡಗಿದ್ದ. ತೀರ ನೆಟ್ವರ್ಕ್ ಇಲ್ಲದ ಜಾಗಗಳಲ್ಲಿ ಹಗಲೊತ್ತಿನಲ್ಲಿ ಪ್ರಯಾಣ ಮಾಡಿದುದಾಗಿ ನೆನಪಾಗಲಿಲ್ಲ. ಗಂಡನಿಗೆ ಕರೆ ಮಾಡಿ ಕೇಳಿ ಫೋನ್ ಪರಿಶೀಲನೆ ಮಾಡಿಸಿ ಮಿಸ್ಡ್ ಕಾಲ್ ಇಲ್ಲವೆಂದು ಸಾಧಿಸುವ ಅವಶ್ಯಕತೆಯೂ ನನಗೆ ಕಾಣಲಿಲ್ಲ. ಇದರಿಂದ ನಮ್ಮ ಮೂರೂ ಮಂದಿಯ ಸಮಯವಂತೂ ಅಲ್ಲೇ ಪೋಲು. ಅವರ ಆಫ಼ೀಸ್ ಸಮಯದಲ್ಲಿ ಚಿಕ್ಕಪುಟ್ಟದೆನಿಸುವ ವಿಷಯಗಳಿಗೆ ಕರೆ ಮಾಡುವ ಅಭ್ಯಾಸವೂ ನನಗಿಲ್ಲ. ಬಂದಿದ್ದ ವ್ಯಕ್ತಿಯಂತೂ ತುಂಬಾ ಬಳಲಿದಂತೆ ಕಾಣಿಸುತ್ತಿದ್ದುದರಿಂದ ಆತನನ್ನು ಇನ್ನೂ ಕಾಯಿಸುವುದು ಒಳ್ಳೆಯದಲ್ಲವೆಂದು ಅನಿಸಿತ್ತು. ಮೇಲಾಗಿ ವಾದ-ವಿವಾದ-ವಾಗ್ಯುದ್ಧಗಳು ನನ್ನದೇ ಮನಸ್ಸಿನ ನೆಮ್ಮದಿ ಹಾಳು ಮಾಡುವ ಅಂಶಗಳೆಂದು ಬಲವಾಗಿ ನಂಬಿರುವ ನನ್ನ ಮನಸ್ಸು ಆತನಿಗೆ ತೊಂದರೆಯಾಗಿರುವ ಸಾಧ್ಯತೆಯೂ ಇರುವುದನ್ನೂ ಅಲ್ಲಗಳೆಯಲಿಲ್ಲ.
“ನಿಮಗೆ ತೊಂದರೆ ಆದುದು ನನಗೆ ಅರ್ಥವಾಗುತ್ತದೆ. ನಮ್ಮ ಮನೆ ಕಡೆ ಬಂದಿದ್ದಿರಿ ಎಂದು ಹೇಳಿದಿರಿ. ಮುಂದಿನ ಬಾರಿ ಬರುವಾಗ ನಾವು ಕರೆ ಎತ್ತಿ ಮನೆಯಲ್ಲಿದ್ದೇವೆಂದು ಹೇಳಿದರೆ ಮಾತ್ರ ಬನ್ನಿ. ಈಗ ಮತ್ತೆ ಈ ಉರಿ ಬಿಸಿಲಿಗೆ ಬಂದು ಸುಸ್ತಾಗಿದ್ದೀರಿ. ಒಂದು ಲೋಟ ಮಜ್ಜಿಗೆ ಕುಡಿಯುತ್ತೀರಾ?” ಎಂದು ಕೇಳಿದೆ.
ಒಂದು ಕ್ಷಣ ಅಪನಂಬಿಕೆಯಿಂದ ನೋಡಿದ ಆತ ಮೆತ್ತಗೆ “ಕೊಡಿ ಮೇಡಂ” ಎಂದಿದ್ದರು. ಬಾಗಿಲು ತೆಗೆಯುವಾಗ ಟೀಪಾಯ್ ಮೇಲೆ ಇಟ್ಟಿದ್ದ ಮಜ್ಜಿಗೆಯ ದೊಡ್ದ ಲೋಟವನ್ನು ಕೊಟ್ಟೆ. ಒಂದೇ ಸಲಕ್ಕೆ ಗಟಗಟನೆ ಕುಡಿದಾತನ ಕಣ್ಣಲ್ಲಿ ನೀರು. “ಮೇಡಂ.. ” ಒಂದು ಕ್ಷಣ ತಡವರಿಸಿದ ಆತ ಮುಂದುವರೆಸಿದರು. “ಇಲ್ಲಿ ಯಾರೂ ಹೀಗೆ ಕೇಳಿರಲಿಲ್ಲ. ನೀವು ಯಾವೂರವರು?” “ಸಧ್ಯಕ್ಕೆ ಇದೇ ನಮ್ಮೂರು” ಎಂದೆ. “ಬರ್ತೀನಿ ಮೇಡಂ” ಎಂದು ಹೊರಟಾತ ಗೇಟು ದಾಟುವುದಕ್ಕೆ ಮೊದಲು ಮತ್ತೆ ತಿರುಗಿ ನೋಡಿ ಹೇಳಿದ್ದರು “ಮೇಡಂ.. ನಾನು ಫೋನೂ ಮಾಡಿರಲಿಲ್ಲ ಇತ್ತ ಕಡೆ ಬಂದಿರಲೂ ಇಲ್ಲ. ಸುಳ್ಳು ಹೇಳಿದ್ದೆ. ಕ್ಷಮಿಸಿಬಿಡಿ. ಇನ್ಯಾವತ್ತೂ ಹೀಗೆ ಮಾಡೊದಿಲ್ಲ!”.
“ಪರವಾಗಿಲ್ಲ.. ಅರ್ಥವಾಗುತ್ತದೆ.. ಮುಂದಿನ ಸಲ ಕರೆ ಮಾಡಿಯೇ ಬನ್ನಿ” ಎಂದೆ.
ಎದುರಿಗಿದ್ದಾತನ ಸ್ಥಿತಿ ಏನೇ ಇರಲಿ ಒಂದು ತೊಟ್ಟು ನೀರೂ ಕೊಡದೆ ಇರಬೇಕಾಗುವುದು ಇಂದಿನ ಪ್ರಪಂಚದಲ್ಲಿ ನಮ್ಮ ಸುರಕ್ಷತೆಗಾಗಿ ನಾವು ಪರಿಸ್ಥಿತಿಗೆ ಹೊಂದಿಕೊಂಡು ತೆಗೆದುಕೊಳ್ಳಬೇಕಾದ ಆಯ್ಕೆಯಾಗುತ್ತದೆ.
ಎಷ್ಟೋ ಬಾರಿ “ಪರಿಸ್ಥಿತಿ” ಮನುಷ್ಯನ ನಡೆ ನುಡಿಯಲ್ಲಿ ಅಪಾರವಾದ ಪ್ರಭಾವವನ್ನು ಬೀರುತ್ತಿರುತ್ತದೆ. ಆತ ನನ್ನ ತಲೆ ಕಂಡೊಡನೆ ಒಂದು ವಾರ ತಡವಾಗಿ ಬಂದ ವಿಷಯವನ್ನು ಮುಚ್ಚಿ ಹಾಕಲೆಂಬಂತೆ ನನ್ನನ್ನೇ ಬೈಯ್ಯತೊಡಗಿದುದೂ ಆತನ ತಪ್ಪಿನಿಂದಾಗಿದ್ದಾದರೂ ಹಿಂದಿನ ಕಹಿ ಅನುಭವಗಳಿಂದಾಗಿಯೂ ಅಥವಾ ತನ್ನ ತಪ್ಪನ್ನು ಒಪ್ಪಿಕೊಂಡರೆ ಒಂದಿಲ್ಲೊಂದು ತೊಂದರೆ ತಪ್ಪಿದ್ದಲ್ಲ ಎನ್ನುವ ಮನೊಭಾವದಿಂದಲೋ ಅಥವಾ ಇನ್ನೇನಾದರೂ ಕಾರಣಕ್ಕೋ ಇರಬಹುದು. ನನಗಂತೂ ಅದು ಬೇಡ. ಆತನ ಮಾತು ನಿಜವೇ ಇರಲಿ, ಸುಳ್ಳೇ ಇರಲಿ, ಆತನ ಆ ಕ್ಷಣದ ಸುಸ್ತಿಗೂ ಕಷ್ಟಕ್ಕೂ ಧನಾತ್ಮಕವಾದ ಸ್ಪಂದನೆ ಮಾತ್ರ ನನ್ನ ಮನಸ್ಸಿಗೆ ಬಂದಿದ್ದು.
ಮುಂದೊಂದು ಬಾರಿ ಬಂದಾಗ ತನ್ನ ಮಗಳ ಮದುವೆಯಿದೆಯೆಂದೂ ಬರಬೇಕೆಂದೂ ಆಮಂತ್ರಿಸಿ ಹೊರಟ ಈ ವ್ಯಕ್ತಿಯನ್ನು ನೋಡಿದಾಗಲೆಲ್ಲಾ ಈ ಘಟನೆ ನೆನಪಾಗುತ್ತದೆ.
-ಶ್ರುತಿ ಶರ್ಮಾ, ಬೆಂಗಳೂರು.
ನೀವು ಮಾನವೀಯತೆಯನ್ನು ಮೆರೆದಿದ್ದೀರಿ. ಕಥೆ ಏನಿರಬಹುದೆಂದು ಕುತೂಹಲ ಮೂಡಿಸುತ್ತದೆ. ಒಳ್ಳೆಯ ಬರಹ
ಬಹಳ ಘನವಾಗಿ, ಮಾನವೀಯವಾಗಿ ನಡೆದುಕೊಂಡಿದ್ದೀರಿ. “ಆತನ ಮಾತು ನಿಜವೇ ಇರಲಿ, ಸುಳ್ಳೇ ಇರಲಿ, ಆತನ ಆ ಕ್ಷಣದ ಸುಸ್ತಿಗೂ ಕಷ್ಟಕ್ಕೂ ಧನಾತ್ಮಕವಾದ ಸ್ಪಂದನೆ ಮಾತ್ರ ನನ್ನ ಮನಸ್ಸಿಗೆ ಬಂದಿದ್ದು.”ಈ ಸಾಲಿಗೆ ಸಲಾಂ!