ಕಾಶಿಯಾತ್ರೆ.. ಗಂಗಾರತಿ.. ಭಾಗ – 3/3

Share Button

ತಂಡದ ಎಲ್ಲಾ ಸದಸ್ಯರು ಬಂದ ಮೇಲೆ ಹೋಟೆಲ್ ಗೆ ವಾಪಸ್ಸಾಗಿ ಊಟ ವಿಶ್ರಾಂತಿ ಮುಗಿಸಿದೆವು. ಅಂದಿಗೆ ನಮ್ಮ ಎರಡು ವಾರದ ಯಾತ್ರೆಯ ಕೊನೆಯ ದಿನವಾಗಿತ್ತು. ಹೆಚ್ಚಿನವರು ಅಂದೇ ರೈಲಿನಲ್ಲಿ ಹೊರಡಲಿದ್ದರು. ಮೈಸೂರಿನಿಂದ ಬಂದಿದ್ದ ಗೆಳತಿ ಭಾರತಿ, ಅಮ್ಮ ಮತ್ತು ನಾನು ಮರುದಿನ ಹೊರಡಲಿದ್ದುದರಿಂದ , ಆ ದಿನ ಸಂಜೆ ನಮಗೆ ಬಿಡುವಿತ್ತು. ಹಾಗಾಗಿ ವಾರಣಾಸಿಯ ‘ದಶಾಶ್ವಮೇಧ ಘಾಟ್’ ನಲ್ಲಿ ಜರಗುವ ಪ್ರಸಿದ್ಧ ಗಂಗಾರತಿಯನ್ನು ನೋಡಲು ಹೊರಟೆವು. ಸಂಜೆ 6 ಗಂಟೆಗೆ ಜರಗುವ ಗಂಗಾರತಿಯನ್ನು ವೀಕ್ಷಿಸಲು, ಬಹಳಷ್ಟು ಜನ ಸೇರುತ್ತಾರೆ. ನದಿಯ ಮೇಲೆ ದೋಣಿಯಲ್ಲಿ ಕುಳಿತು ನೋಡುವ ವ್ಯವಸ್ಥೆಯಿದೆ.

ದಶಾಶ್ವಮೇಧ ಘಾಟ್ ನ ಪಕ್ಕದ ಮುಖ್ಯರಸ್ತೆಯಲ್ಲಿ ನಾವು ನಡೆಯುತ್ತಿದ್ದಾಗ ಯುವಕನೊಬ್ಬ ನಿಮಗೆ ಮಾತ್ರವಾಗಿ ಸಿಂಗಲ್ ದೋಣಿ ಕೊಡಿಸುತ್ತೇನೆ, ಗಂಗಾರತಿಯನ್ನು ಹತ್ತಿರದಿಂದ ಅನುಕೂಲಕರವಾಗಿ ನೋಡಲು ಸಾಧ್ಯ, ದೋಣಿಗೆ 2000 ರೂ ಇತ್ಯಾದಿ ದುಂಬಾಲು ಬಿದ್ದ. ಏನೂ ಬೇಕಾಗಿಲ್ಲ, ಘಾಟ್ ನ ಮೆಟ್ಟಿಲುಗಳ ಮೇಲೆ ಕುಳಿತರಾಯಿತು ಎಂದು ನಾವು ನಿರ್ಧರಿಸಿದ್ದೆವು. ಕೊನೆಗೆ ದೊಡ್ಡ ದೋಣಿಯೊಂದರಲ್ಲಿ ಇತರ ಪ್ರಯಾಣಿಕರ ಜೊತೆಗೆ ಕುಳಿತು ನೋಡುವ ಅವಕಾಶಕ್ಕೆ ತಲಾ ರೂ.300/- ಕೊಟ್ಟು ಗಂಗಾರತಿಯನ್ನು ನೋಡಿ ಆನಂದಿಸಿದೆವು.

ದಶಾಶ್ವಮೇಧ ಘಾಟ್ ನ ಲ್ಲಿ ಅಲಂಕೃತವಾದ ಏಳು ಕಟ್ಟೆಗಳಿವೆ .ಆವುಗಳಲ್ಲಿ ಪೂಜಾ ಪರಿಕರಗಳನ್ನೂ, ಸುವಸ್ತುಗಳನ್ನೂ ಇರಿಸಿದ್ದರು. ಧ್ವನಿವರ್ಧಕದಲ್ಲಿ ಮೂಡಿ ಬಂದ ಮಂತ್ರಘೋಷಗಳ ಹಿನ್ನೆಲೆಯೊಂದಿಗೆ , ಒಂದೇ ರೀತಿಯ ಜುಬ್ಬಾ, ಶಲ್ಯ, ಕಚ್ಚೆ ಧರಿಸಿದ ಏಳು ಜನ ಎಳೆಯ ವಯಸ್ಸಿನ ಅರ್ಚಕರು ಏಕಕಾಲದಲ್ಲಿ ಸುಮಾರು 3-4 ನಿಮಿಷಗಳ ಕಾಲ ಲಯಬದ್ಧವಾಗಿ ಶಂಖ ಊದಿದರು. ಗಂಗೆಗೆ ಮುಖ ಮಾಡಿ, ವಿವಿಧ ಆಕಾರದ ದೊಡ್ಡ ದೊಡ್ಡ ಆರತಿಗಳನ್ನು ಒಂದೊಂದಾಗಿ ಬೆಳಗಿದರು.

ಮಂತ್ರಘೋಷದ ಹಿನ್ನೆಲೆಯಲ್ಲಿ ಏಳೂ ಅರ್ಚಕರು ಆರತಿಗಳನ್ನು ಎತ್ತುವ ವಿಧಿವಿಧಾನಗಳು ಮತ್ತು ಚಲನೆಗಳು ಏಕಕಾಲದಲ್ಲಿ ನಡೆಯುವ ಕವಾಯತಿನಂತೆ ಮನೋಹರವಾಗಿದ್ದುವು. ಘಾಟ್ ನ ವಿದ್ಯುದ್ದೀಪಾಲಂಕಾರವು ನದಿನೀರಿನಲ್ಲಿ ಪ್ರತಿಫಲಿತಗೊಂಡು ಬಲು ಸೊಗಸಾಗಿ ಕಾಣಿಸುತಿತ್ತು. ಈ ನಡುವೆ ಅಸಕ್ತ ಜನರು ಮುತ್ತುಗದ ಎಲೆಯಲ್ಲಿ ಹೂವು-ನಾಣ್ಯ-ಹಣತೆ ಹೊಂದಿದ್ದ ಪುಟ್ಟ ಆರತಿಗಳನ್ನು ನದಿಯಲ್ಲಿ ತೇಲಿ ಬಿಟ್ಟು ಭಕ್ತಿಭಾವ ಮೆರೆಯುತ್ತಿದ್ದರು. ಸುಮಾರು ಒಂದು ಗಂಟೆಯ ಕಾಲ ಜರಗುವ ಧ್ವನಿ, ಬೆಳಕು, ಭಕ್ತಿ ಮತ್ತು ಸಂಭ್ರಮದ ಈ ಗಂಗಾರತಿ ಕಾರ್ಯಕ್ರಮವನ್ನು ನೋಡಿದಾಗ ನಮ್ಮ ಕಾಶಿಯಾತ್ರೆ ಸಂಪನ್ನವಾಯಿತು.

ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಕಾಶಿ ವಿಶ್ವನಾಥನ ಬಗ್ಗೆ ಉಪನಿಷದ್ ಗಳಲ್ಲೂ ಉಲ್ಲೇಖವಿದೆ. ಕಾಶಿಯ ಮೂಲ ಮಂದಿರವನ್ನು ಕ್ರಿಸ್ತಶಕ 1490 ರಲ್ಲಿ ನಿರ್ಮಿಸಲಾಯಿತು. ಮೊಗಲ ದೊರೆ ಔರಂಗಜೇಬನು ಮಂದಿರವನ್ನು ಆಕ್ರಮಿಸಿ, ಪಕ್ಕದಲ್ಲಿಯೇ ಮಸೀದಿಯನ್ನು ನಿರ್ಮಿಸಿದ್ದನು. ಈಗಲೂ ದೇವಾಲಯದ ಪಶ್ಚಿಮ ಭಾಗದಲ್ಲಿ ಆ ಮಸೀದಿಯಿದೆ. ಈಗ ಇರುವ 18 ನೆ ಯ ಶತಮಾನದಲ್ಲಿ ಇಂದೋರ್ ನ ರಾಣಿಯಾಗಿದ್ದ ಅಹಲ್ಯಾ ಬಾಯಿ ಹೋಲ್ಕರ್ ನವೀಕರಿಸಿದಳು. ಪ್ರಾಚೀನ ನಗರಿಯಾದ ಕಾಶಿಯ ಕಿರಿದಾದ ಗಲ್ಲಿಗಳ ನಡುವೆ ಇರುವ ಈ ಮಂದಿರದ ವಾಸ್ತುವಿನ್ಯಾಸ ಸೊಗಸಾಗಿದೆ.

15 ಮೀ ಎತ್ತರದ ಗೋಪುರವು ಚಿನ್ನದ ತಗಡಿನ ಕವಚ ಹೊಂದಿದ್ದು ಇದಕ್ಕೆ ಉಪಯೋಗಿಸಲಾದ ಒಂದು ಟನ್ ಚಿನ್ನವನ್ನು ಮಹಾರಾಜಾ ರಂಜಿತ್ ಸಿಂಗ್ ಕೊಟ್ಟಿದ್ದನಂತೆ. ಗರ್ಭಗುಡಿಯ ಒಳಗೆ ಬೆಳ್ಳಿಯ ಪೀಠದ ಮೇಲೆ ಸುಮಾರು ಎರಡು ಅಡಿ ಎತ್ತರದ ಶಿವಲಿಂಗವಿದೆ. ಇಲ್ಲಿ ವಿಶ್ವನಾಥನನ್ನು ದರ್ಶನ ಮಾಡಿ, ಸ್ತುತಿಸಿ , ಹಾಲಿನ ಅಭಿಷೇಕ ಮಾಡಿ ಕೃತಾರ್ಥತೆ ಪಡೆಯಲು ಸಾಲುಗಟ್ಟಿ ಜನರು ಸಾಲುಗಟ್ಟಿ ಬರುತ್ತಾರೆ. ವಾರಣಾಸಿಯಲ್ಲಿ ಮರಣ ಹೊಂದಿದರೆ, ಶವಸಂಸ್ಕಾರ ಮಾಡಿದರೆ ಜನನ-ಮರಣಗಳ ವೃತ್ತದಿಂದ ಮೋಕ್ಷ ಎಂಬುದು ಹಿಂದುಗಳ ನಂಬಿಕೆ. ಹಾಗಾಗಿ, ತಮ್ಮ ಸಾವನ್ನು ಎದುರು ನೋಡುತ್ತಾ ಸಾಯಲೆಂದೇ ವಾರಣಾಸಿಗೆ ಬರುವವರಿದ್ದಾರೆ!

ಈ ಬರಹದ ಹಿಂದಿನ ಭಾಗ ಇಲ್ಲಿದೆ : ಕಾಶಿಯಾತ್ರೆ.. ಗಂಗಾರತಿ.. ಭಾಗ -2 http://surahonne.com/?p=15444

 

– ಹೇಮಮಾಲಾ.ಬಿ

(ಚಿತ್ರಕೃಪೆ :ಅಂತರ್ಜಾಲ)

2 Responses

  1. Pallavi Rao says:

    Wow ,am waiting to visit Kashi , want to stay there for few days , so have been postponing it. Thanks for write up images.

  2. Kantharaj Raj says:

    ಸರಳ ಸುಂದರ ಅತ್ಯುತ್ತಮ ನಿರೂಪಣೆ, ಮೋಹಕ ಚಿತ್ರಗಳು ಮನಕ್ಕೆ ಮುದ ನೀಡಿತು. ತುಂಬಾ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: