ಸೂಪರ್ ಪಾಕ

ಹಲಸಿನ ಹಪ್ಪಳ ತಯಾರಿ

Share Button

ನಾವೆಲ್ಲಾ ಚಿಕ್ಕವರಿದ್ದಾಗ , ಬೇಸಗೆ ರಜೆಯಲ್ಲಿ, ಆಗ ಬೆಳೆಯುವ ಹಲಸಿನಕಾಯಿ ಹಪ್ಪಳ ಮಾಡಲು ಮನೆಯ ಹಿರಿಯರ ಜತೆಗೆ ಎಡತಾಕುತ್ತಿದ್ದೆವು. ಈಗಿನಂತೆ ಬೇಸಗೆ ಶಿಬಿರದ ಕಲ್ಪನೆಯೇ ಇಲ್ಲದ ಕಾಲವದು. ಹಾಗಾಗಿ ಹಪ್ಪಳ ತಯಾರಿ ನಮ್ಮ ದಿನವನ್ನು ಸಂಪನ್ನಗೊಳಿಸುತ್ತಿತ್ತು. ಹಲಸಿನ ಕಾಯಿಯ ಹಪ್ಪಳ ಮಾಡುವುದು ಒಂದು ರೀತಿಯ ‘ಲಾರ್ಜ್ ಸ್ಕೇಲ್ ಪ್ರಾಜೆಕ್ಟ್’. ಹಲಸಿನ ಕಾಯಿಗಳನ್ನು ಕೀಳಿಸಿ, ಸೊಳೆಗಳನ್ನು ಬಿಡಿಸಿ, ಬೀಜ ಬೇರ್ಪಡಿಸಿ ನೀರಿನಲ್ಲಿ ಅಥವಾ ಬಿದಿರಿನ ಬುಟ್ಟಿಯಲ್ಲಿ ಹಾಕಿಡುವುದು ಮೊದಲ ಹಂತ. ಸೊಳೆಗಳನ್ನು ಉಗಿಯಲ್ಲಿ ಬೇಯಿಸಿ, ಒನಕೆಯಿಂದ ಕುಟ್ಟಿ ಹದಮಾಡಿ, ಉಪ್ಪು ಹಾಕಿ ಹಿಟ್ಟನ್ನು ತಯಾರಿಸುವುದು ಎರಡನೆಯ ಹಂತ. ಕುರುಕಲು ತಿಂಡಿಯಂತೆ ತಿನ್ನಲು ಬಳಸಲು ಸಪ್ಪೆ ಹಪ್ಪಳ, ಊಟಕ್ಕೆ ನೆಂಚಿಕೊಳ್ಳಲು ಖಾರದ ಹಪ್ಪಳ ತಯಾರಿಸುವುದಾದರೆ ಇಂಗು, ಜೀರಿಗೆ, ಮೆಣಸಿನಪುಡಿ…ಇತ್ಯಾದಿ ಬೇಕಿದ್ದ ಮಸಾಲೆ ಸೇರಿಸುವುದು ವಾಡಿಕೆ.

ಹದವಾದ ಹಿಟ್ಟನ್ನು ಉಂಡೆ ಮಾಡಿ, ಎಣ್ಣೆ ಸವರಿದ  ಪ್ಲಾಸ್ಟಿಕ್ ಶೀಟ್ ಗಳ ಮಧ್ಯೆ ಇರಿಸಿ, ಮರದ ಮಣೆಯಲ್ಲೋ, ಪಾಪಡ್/ರೋಟಿ ಮೇಕರ್ ನಲ್ಲೋ ಒತ್ತಿ, ಶುಭ್ರ ಚಾಪೆಯ ಮೇಲೆ ಅಥವಾ ಬಟ್ಟೆಯ ಮೇಲೆ ಹಾಕಿ ಬಿಸಿಲಿನಲ್ಲಿ ಒಣಗಿಸಿಟ್ಟರೆ ಹಪ್ಪಳ ರೆಡಿ. ಈ ಹಂತಗಳು ಸರದಿಯಲ್ಲಿ ಮುಂದುವರಿಯುತ್ತಾ ಹೋಗಬೇಕು. ಹಪ್ಪಳ ತಯಾರಿಸುವ ಕೆಲಸದ ಮಧ್ಯೆ ಹಿಟ್ಟಿನ ಉಂಡೆಗಳನ್ನು ಎಣ್ಣೆಯಲ್ಲಿ ಹೊರಳಿಸಿ ತಿನ್ನಲು ಮಕ್ಕಳಿಗೆ ಕಾತರ. ‘ ‘ಹಪ್ಪಳದ ಹಿಟ್ಟನ್ನು ತಿನ್ನಬೇಡಿ….. ಅಜೀರ್ಣವಾದೀತು’ ಎಂಬ ಹಿರಿಯರ ಎಚ್ಚರಿಕೆ ಇದ್ದರೂ, ಪ್ರತಿಯೊಬ್ಬರೂ ಕನಿಷ್ಟ 4-5 ಹಿಟ್ಟಿನ ಉಂಡೆಗಳನ್ನಾದರೂ ತಿನ್ನುತ್ತಿದ್ದೆವು.

ಒಣಗಲು ಹಾಕಿದ ಹಪ್ಪಳಗಳನ್ನು ಎತ್ತಿಕೊಂಡು ಹೋಗಲು ಕಾಗೆಗಳು ಬರುತ್ತಿರುತ್ತವೆ, ಕಾಗೆಗಳನ್ನು ಓಡಿಸುವುದೂ ಹಪ್ಪಳ ತಯಾರಿಯ ಮುಂದುವರಿದ ಭಾಗದ ಕೆಲಸ. ಒಂದು ದಿನದ ಬಿಸಿಲಿಗೆ ಒಣಗಿದ ಹಪ್ಪಳಗಳ ಮೇಲೆ, ಪ್ಲಾಸ್ಟಿಕ್ ದಾರದ ಬಲೆಯನ್ನು ಹರವಿ, ಕಾಗೆಗಳ ಕಾಟವನ್ನು ತಪ್ಪಿಸಿಕೊಳ್ಳುವ ಪದ್ದತಿಯೂ ರೂಢಿಯಲ್ಲಿತ್ತು. ಚೆನ್ನಾಗಿ ಒಣಗಿದ ಹಪ್ಪಳಗಳನ್ನು 20-25 ರ ಕಟ್ಟುಗಳನ್ನಾಗಿ ಮಾಡಿ ಶೇಖರಿಸುವರು. ಸಾಯಂಕಾಲದ ತಿಂಡಿಯಾಗಿ ಅಥವಾ ಮನೆಗೆ ಯಾರಾದರೂ ಬಂದಾಗ ಸ್ವಲ್ಪ ಹಪ್ಪಳವನ್ನು ಎಣ್ಣೆಯಲ್ಲಿ ಕರಿದರಾಯಿತು. ಮಳೆಗಾಲಕ್ಕೆಂದು ಶೇಖರಿಸಿದರೂ ಸೈ.


ಹಪ್ಪಳ ತಿನ್ನುವ ಶೈಲಿಯಲ್ಲಿ ವಿಭಿನ್ನತೆ ಇದೆ. ನನ್ನ ಅಜ್ಜನವರು, ಕೆಂಡದಲ್ಲಿ ಸುಟ್ಟ ಹಪ್ಪಳಕ್ಕೆ ತೆಂಗಿನಕಾಯಿಯ ಹೋಳುಗಳನ್ನು ಸೇರಿಸಿ, ನಮಗೂ ಕೊಟ್ಟು, ತಿನ್ನುತ್ತಿದ್ದುದು ನೆನಪಿದೆ. ಇನ್ನು ಕೆಲವರು, ಸುಟ್ಟ ಹಪ್ಪಳಕ್ಕೆ ತೆಂಗಿನೆಣ್ಣೆ ಸವರಿ ತಿನ್ನುವರು. ಕೆಲವರಿಗೆ ಎಣ್ಣೆಯಲ್ಲಿ ಕರಿದ ಹಪ್ಪಳವೇ ಬೇಕು. ಹಪ್ಪಳ ತಿನ್ನುವ ಕರುಮ್-ಕುರುಮ್ ಸದ್ದಿನ ಜತೆಗೆ ವಿಮರ್ಶೆಯೂ ಧಾರಾಳವಾಗಿ ನಡೆಯುತ್ತದೆ. “ಹಪ್ಪಳ ತುಂಬಾ ಗರಿಗರಿಯಾಗಿದೆ…ಆ ಮರದ ಹಲಸಿನಕಾಯಿಯ ಹಪ್ಪಳ ತುಂಬಾ ರುಚಿ….ಇದು ದಪ್ಪ ಜಾಸ್ತಿಯಾಯಿತು..ಹಲಸಿನ ಕಾಯಿ ಸ್ವಲ್ಪ ಸಿಹಿಯಾಗಲು ಶುರುವಾಗಿತ್ತು…” .ಇತ್ಯಾದಿ.

ಮನೆಗೆ ಬಂದ ನೆಂಟರು ಹೊರಡುವಾಗ ಒಂದೆರಡು ಹಪ್ಪಳ ಕಟ್ಟುಗಳನ್ನು ಅವರಿಗೆ ಕೊಡುವುದರಲ್ಲಿ ಮನೆಯ ಗೃಹಿಣಿಗೆ ಬಲು ಸಂತೋಷ.ಇನ್ನು ಹಪ್ಪಳ ಪಡೆದುಕೊಳ್ಳುವವರು “ಅಯ್ಯೋ ಇದೆಲ್ಲಾ ಏನಕ್ಕೆ.. ಬೇಡಾಗಿತ್ತು… ಸ್ಸಲ್ಫ ಹಪ್ಪಳ ಮಾಡಿದ್ವೇವೆ…ಈ ಬಾರಿ ನಮ್ಮ ತೋಟದಲ್ಲಿ ಹಲಸಿನಕಾಯಿ ಬೆಳೆಯುವಷ್ಟರಲ್ಲಿ ಮಳೆ ಬಂತು, ಇನ್ನು ಹಪ್ಪಳ ಮಾಡಲಾಗದು….” ಹೀಗೆ ‘ಬೇಡ ಬೇಡ’ ಎನ್ನುತ್ತಲೇ ತಮ್ಮ ಬ್ಯಾಗ್ ಗೆ ಇಳಿಸುತ್ತಾರೆ. ತಮ್ಮ ಮನೆಗೆ ಹೋದ ಮೇಲೆ ‘ಇದು ಅಜ್ಜಿ ಕೊಟ್ಟ ಹಪ್ಪಳ…ಇದು ಚಿಕ್ಕಮ್ಮನ ಮನೆಯ ಹಪ್ಪಳ….ಇದು ಅತ್ತೆ ಮನೆಯ ಹಪ್ಪಳ ‘ ಎಂದು ವಿವರಿಸುತ್ತಾರೆ. ಹೀಗೆ ಹಪ್ಪಳ ತನ್ನ ರುಚಿಯ ಜತೆಗೆ ಬಾಂಧವ್ಯವನ್ನೂ ತಳಕು ಹಾಕಿಕೊಳ್ಳುತ್ತದೆ.

ಇವೆಲ್ಲಾ, ವೈಭವ, ಸಡಗರ ಹಳ್ಳಿಗಳಲ್ಲಿ ವಾಸವಾಗಿರುವವರಿಗೆ ಮಾತ್ರ ಸೀಮಿತವಾಗುತ್ತಿದೆ. ಇನ್ನು ನಗರಗಳಲ್ಲಿ ಪ್ಯಾಕೆಟ್ ನಲ್ಲಿ ಸಿಗುವ ರೆಡಿಮೇಡ್ ಹಪ್ಪಳ ಖರೀದಿಸಿವುದೊಂದೇ ದಾರಿ. ಹಲಸಿನ ಕಾಯಿಯೂ ಇಲ್ಲ, ಇದ್ದರೂ ಹಪ್ಪಳ ತಯಾರಿಸುವ ಹುಮ್ಮಸ್ಸು, ತಾಳ್ಮೆ ಬಹುಶ: ಯಾರಿಗೂ ಇರಲಾರದು.

(ಚಿತ್ರಕೃಪೆ : ಅಂತರ್ಜಾಲ)

.ಚಿತ್ರಕೃಪೆ; ಚಿತ್ರಕೃಪೆ; ಅಂತರ್ಜಾಲಅಂತರ್ಜಾಲ
.
– ಹೇಮಮಾಲಾ.ಬಿ.

3 Comments on “ಹಲಸಿನ ಹಪ್ಪಳ ತಯಾರಿ

  1. ಹಪ್ಪಳ ಮಾಡುವ ವಿಧಾನ ತಿಳಿದಿದ್ದು, ಅದರ ಹರವಿದ ಚಿತ್ರ,ಕಟ್ಟುಗಳನ್ನ ಕಂಡು ಕುಶಿಯಾಯ್ತು. ನನಗೋ ಹಲಸಿನ ಮರ ಹಿತ್ತಿಲಿನಲ್ಲಿ ಇದೆ.ಆದರೆ ಅದು ಬೆಳೆಯುವುದು ಜೂನಿನಲ್ಲಿ!.

Leave a Reply to ಕೆಂಪೇಗೌಡ Cancel reply

 Click this button or press Ctrl+G to toggle between Kannada and English

Your email address will not be published. Required fields are marked *